Tag: government school

  • ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’ – ಶಿಕ್ಷಕನನ್ನು ಬಿಗಿದಪ್ಪಿ ಅತ್ತ ವಿದ್ಯಾರ್ಥಿಗಳು

    ಬೀದರ್: ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಹಚ್ಚಿಕೊಂಡಿರುತ್ತಾರೆ. ಅದರಲ್ಲೂ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಶಾಲೆ ಬಿಟ್ಟುಹೋಗುತ್ತಾರೆ ಎಂದರೆ ಮಕ್ಕಳಿಗೆ ಬೇಸರವಾಗುತ್ತೆ. ಆದರೆ ಬೀದರ್‌ನಲ್ಲಿ ವರ್ಗಾವಣೆಯಾಗಿ ಶಾಲೆ ಬಿಟ್ಟು ಹೋಗುತ್ತಿದ್ದ ಶಿಕ್ಷಕರಿಗಾಗಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಟ್ಟು ಹೋಗ್ಬೇಡಿ ಸಾರ್ ಎಂದು ಶಿಕ್ಷಕನನ್ನು ಬಿಗಿದಪ್ಪಿ ಮಕ್ಕಳು ಕಣ್ಣೀರಿಟ್ಟಿದ್ದಾರೆ.

    ಹೌದು. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಅತ್ತಿದ್ದಾರೆ. ಈ ಶಾಲೆಯ ಕನ್ನಡ ಮಾಧ್ಯಮ ಶಿಕ್ಷಕ ಅನಿಲ್ ರಾಠೋಡ್ ಅವರ ಮೇಲೆ ಮಕ್ಕಳು ತೋರಿದ ಪ್ರೀತಿ ನೋಡಿ ಇತರೆ ಶಿಕ್ಷಕರೂ ಕೂಡ ಭಾವುಕರಾಗಿದ್ದಾರೆ. ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿದ್ದ ಅನಿಲ್ ಅವರಿಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬಿಕ್ಕಿ, ಬಿಕ್ಕಿ ಅಳುವ ದೃಶ್ಯ ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಲ್ಲಳ್ಳಿ ತಾಂಡಾದವರಾದ ಶಿಕ್ಷಕ ಅನಿಲ್ ರಾಠೋಡ್ ಕಳೆದ 9 ವರ್ಷದಿಂದ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಇಲ್ಲಿನ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಆದರೆ ಈಗ ತಮ್ಮೂರಿನ ಸಮೀಪವೇ ಇರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಅನಿಲ್ ಅವರು ವರ್ಗಾವಣೆಗೊಂಡಿದ್ದು, ಕುಮಾರ ಚಿಂಚೊಳಿ ಗ್ರಾಮದ ಶಾಲೆಯಿಂದ ತೆರಳುತ್ತಿದ್ದ ಶಿಕ್ಷಕರಿಗಾಗಿ ವಿದ್ಯಾರ್ಥಿಗಳೆಲ್ಲರೂ ಗೊಳೋ ಎಂದು ಅತ್ತಿದ್ದಾರೆ. ನಮ್ಮನ್ನು ಬಿಟ್ಟು ಹೊಗಬೇಡಿ ಸಾರ್ ಎಂದು ಅಂಗಲಾಚಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ನೋಡಿದರೆ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ.

  • ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    ಶಾಲೆ ಉಳಿಸಲು ವಿದ್ಯಾರ್ಥಿ, ಪೋಷಕರಿಂದ ಉಪವಾಸ ಸತ್ಯಾಗ್ರಹ

    -ಚಳಿಯನ್ನೂ ಲೆಕ್ಕಿಸದೆ ಆಹೋರಾತ್ರಿ ಧರಣಿ

    ತುಮಕೂರು: ಸರ್ಕಾರಿ ಶಾಲೆಯನ್ನು ಉಳಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ತುಮಕೂರಿನ ಬಡ್ಡಿಹಳ್ಳಿ ಶಾಲೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹದ ಜೊತೆಗೆ ಆಹೋರಾತ್ರಿ ಧರಣಿ ಮಾಡಿದ್ದಾರೆ.

    ಬಡ್ಡಿಹಳ್ಳಿ ಸರ್ಕಾರಿ ಶಾಲೆಯ ಸಮಸ್ಯೆ ಒಂದೆರೆಡಲ್ಲ. ಈ ಶಾಲೆ ಸುಮಾರು 50 ವರ್ಷಗಳ ಹಳೆಯದಾಗಿದ್ದು, ಸದ್ಯ ಇಲ್ಲಿ 150ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸಿಲ್ಲ. ಮಳೆಗಾಲ ಬಂತೆಂದರೆ ಈ ಶಾಲೆಗೆ ನೀರು ನುಗ್ಗುತ್ತದೆ. ನೀರಿನಿಂದ ಏನಾದರೂ ಕಟ್ಟಡ ಕುಸಿದರೆ ಏನು ಗತಿಯೆಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಶಿಕ್ಷಕರು ವಿಧಿಯಿಲ್ಲದೆ ಇಲ್ಲಿಯೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ಅದೇ ಕಟ್ಟಡದಲ್ಲೇ ಭಯದಿಂದ ಮಕ್ಕಳು ಪಾಠ ಕಲಿಯಬೇಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ಹೀಗಾಗಿ ಶಾಲೆಯ ದುಸ್ಥಿತಿ ನೋಡಿ ಬೇಸತ್ತಿರುವ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಶಾಲೆ ರಿಪೇರಿ ಮಾಡುವವರೆಗೂ ಹೋರಾಟ ಮುಂದುವರೆಸೋದಾಗಿ ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ. ಇಡೀ ರಾತ್ರಿ ಚಳಿಯನ್ನೂ ಲೆಕ್ಕಿಸದೇ ಧರಣಿ ನಡೆಸಿದ್ದಾರೆ. ಪೋಷಕರ ಹೋರಾಟಕ್ಕೆ ವಿವಿಧ ಸಂಘಟನೆಗಳು ಕೂಡ ಸಾಥ್ ಕೊಟ್ಟಿವೆ.

    ಮಕ್ಕಳು ಇಲ್ಲ ಎಂದು ಹಲವು ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚುತ್ತಿದೆ. ಆದರೆ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಕೂಡ ಶಾಲೆಗಳ ಅಭಿವೃದ್ಧಿ ಮಾಡದೆ, ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸ. ಹೀಗಾದರೆ ಪೋಷಕರು ಹೇಗೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ? ತಮ್ಮ ಮಕ್ಕಳು ಸುರಕ್ಷಿತವಾಗಿ ವಾಪಸ್ಸು ಬರುತ್ತಾರೆ ಎಂದು ಹೇಗೆ ನಂಬಿ ಮಕ್ಕಳನ್ನು ಶಾಲೆಗೆ ಕಳಿಸೋದು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

  • ಕುಸಿದುಬೀಳುವ ಹಂತದಲ್ಲಿರೋ ಶಾಲೆಯಲ್ಲೇ ಮಕ್ಕಳಿಗೆ ಪಾಠ

    ಕುಸಿದುಬೀಳುವ ಹಂತದಲ್ಲಿರೋ ಶಾಲೆಯಲ್ಲೇ ಮಕ್ಕಳಿಗೆ ಪಾಠ

    ರಾಮನಗರ: ಒಂದೆಡೆ ಸೋರುತ್ತಿರುವ ಶಾಲೆ ಛಾವಣಿ, ಇನ್ನೊಂದೆಡೆ ಕುಸಿದುಬೀಳೊ ಹಂತದಲ್ಲಿರೋ ಸರ್ಕಾರಿ ಶಾಲೆ ಕಟ್ಟಡದಲ್ಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ ತಾಲೂಕಿನ ಶ್ಯಾನಭೋಗನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಎಲ್ಲಾ ದೃಶ್ಯ ಕಂಡು ಬಂದಿದೆ.

    ನಾವು ಸರ್ಕಾರಿ ಶಾಲೆಗಳನ್ನ ಉಳಿಸೋಕೆ, ಅವುಗಳ ಅಭಿವೃದ್ಧಿಗೆ ಬದ್ಧವಾಗಿದ್ದೇವೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಲು ಹಲವು ಯೋಜನೆಗಳನ್ನ ತಂದಿದ್ದೀವೆ ಆದರೂ ಜನ ಖಾಸಗಿ ಶಾಲೆಗಳಿಗೆ ಹೋಗ್ತಾರೆ ಅಂತ ಬೊಬ್ಬೆ ಹೊಡಿಯೋ ಸರ್ಕಾರ, ಶಿಕ್ಷಣ ಮಂತ್ರಿಗಳು ಒಮ್ಮೆ ಇತ್ತ ಕಣ್ಣಾಡಿಸಿ, ಸರ್ಕಾರಿ ಶಾಲೆ ಯಾವ ದುಸ್ಥಿತಿಗೆ ತಲುಪಿದೆ ಎನ್ನುವ ಬಗ್ಗೆ ಗಮನಕೊಟ್ಟು, ಕ್ರಮ ತೆಗೆದುಕೊಳ್ಳಬೇಕಿದೆ.

    ಹೌದು ಶ್ಯಾನಭೋಗನಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಯಾವ ಸಂದರ್ಭದಲ್ಲಾದರು ಕೂಡ ಕುಸಿದು ಬೀಳುವಂತಹ ಸ್ಥಿತಿಯಲ್ಲಿದೆ. ಹೆಂಚುಗಳು ಒಡೆದು ಶಾಲೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾಳಾಗಿದೆ. ಮಳೆ ಬಂದರೆ ಸಾಕು ನೀರೆಲ್ಲಾ ಕೊಠಡಿಗೆ ಹರಿದುಬರುತ್ತಿದೆ. ಮಕ್ಕಳು ಜೀವವನ್ನ ಕೈಯಲ್ಲಿಡಿದು ಪಾಠ ಆಲಿಸುವಂತಾಗಿದೆ.

    ಒಂದೆಡೆ ಮಳೆಯಿಂದಾಗಿ ಸೋರುತ್ತಿರುವ ಶಾಲೆಯ ಕಟ್ಟಡ, ಮತ್ತೊಂದೆಡೆ ಮಕ್ಕಳ ವಿದ್ಯಾಭ್ಯಾಸ ಆತಂಕದಲ್ಲೇ ನಡೆಯುತ್ತಿದೆ. ಇದರ ಮಧ್ಯೆ ಪಾತ್ರೆಯಲ್ಲಿ ತುಂಬುವ ನೀರನ್ನು ಹೊರ ಚೆಲ್ಲುವ ಕೆಲಸ ಬೇರೆ. ಪಾಠದ ಕಡೆ ಗಮನ ಕೊಡಬೇಕೊ ಇಲ್ಲ ನೀರು ತುಂಬಿರುವ ಪಾತ್ರೆಗಳ ಬಗ್ಗೆ ಗಮನ ಕೊಡಬೇಕೋ ಅನ್ನೋ ಸಂದಿಗ್ಧತೆಯಲ್ಲಿ ಮಕ್ಕಳಿದ್ದಾರೆ. ಈ ಸರ್ಕಾರಿ ಶಾಲೆಯ ದುಸ್ಥಿತಿ ಯಾವ ಮಟ್ಟದಲ್ಲಿದೆ ಅನ್ನೋದನ್ನ ನೋಡಿದರೆ, ಸರ್ಕಾರಿ ಶಾಲೆ ಬಿಟ್ಟು ಮಕ್ಕಳು ಯಾಕೆ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಅನ್ನೋದನ್ನ ಎತ್ತಿ ತೋರಿಸುತ್ತದೆ.

    ಈ ಶಾಲೆಯಲ್ಲಿ ಕಳೆದ ವರ್ಷ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆ ದುಸ್ಥಿತಿ ಕಂಡು ಹೆದರಿದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಹತ್ತಿರದ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಹೀಗಾಗಿ ಈ ಶಾಲೆಯಲ್ಲಿ ಸದ್ಯ 12 ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಜೂನ್‍ನಲ್ಲಿ ಕುಮಾರಸ್ವಾಮಿ ಅವರು ಜನತಾದರ್ಶನ ನಡೆಸಿದಾಗ ಶಾಲೆಯ ದುಸ್ಥಿತಿ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೂ ಯಾವುದೇ ಪ್ರಯೋಜನವಾಗಿಲ್ಲ.

    ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳ ಜ್ಞಾನಮಟ್ಟ ಪರೀಕ್ಷೆ ಮಾಡೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇತ್ತ ಗಮನಹರಿಸಿದರೆ ಒಳಿತು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಂತಹ ಶಾಲೆಗಳಿಗೆ ಭೇಟಿ ಕೊಟ್ಟರೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಆಗೋದು ನಿಶ್ಚಿತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ‘ಡಿ ಕಂಪನಿ’ಯ ಉತ್ತಮ ಕೆಲಸಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ

    ‘ಡಿ ಕಂಪನಿ’ಯ ಉತ್ತಮ ಕೆಲಸಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಕಲೇಶಪುರ ತಾಲೂಕಿನ ಸರ್ಕಾರಿ ಶಾಲೆಯನ್ನು ಡಿ ಕಂಪನಿ ದತ್ತು ಪಡೆದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ನೋಡಿದ ಸುರೇಶ್ ಕುಮಾರ್ ಅವರು ದರ್ಶನ್ ಅಭಿಮಾನಿಗಳ ಈ ಉತ್ತಮ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ‘ಡಿ ಕಂಪನಿ’ಗೆ ಅಭಿನಂದನೆ ತಿಳಿಸಿದ್ದಾರೆ. ಈ ಅನುಕರಣೀಯ ಕಾರ್ಯ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (ಡಿ ಬಾಸ್) ಅಭಿಮಾನಿಗಳಿಗೆ ರಾಜ್ಯದ ಶಿಕ್ಷಣ ಸಚಿವನಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದು ಪಬ್ಲಿಕ್ ಟಿವಿಯ ವರದಿಯನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಸುರೇಶ್ ಕುಮಾರ್ ಅವರು ತಮ್ಮ ಕಾರ್ಯವನ್ನು ಶ್ಲಾಘಿಸಿದಕ್ಕೆ ಇತ್ತ ‘ಡಿ ಕಂಪನಿ’ಯ ಟ್ವಿಟ್ಟರ್ ಖಾತೆಯಿಂದ ಅಭಿಮಾನಿಗಳು ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ. ರಾಜ್ಯದ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ನಮ್ಮ ಡಿ ಕಂಪನಿಯ ಸದಸ್ಯರಿಗೆ ಮತ್ತು ಡಿ ಬಾಸ್ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ ಎಂದು ಟ್ವೀಟ್ ಮಾಡಿ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ `ಡಿ ಕಂಪನಿ’ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಗ್ರಾಮ ರಾಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದು ಶಾಲಾ ಅಭಿವೃದ್ಧಿಗೆ ಮುಂದಾಗಿದೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದರು.

    ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದು, ರಾಮೇನಹಳ್ಳಿ ಸರ್ಕಾರಿ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಇದರಿಂದಾಗಿ ಶಾಲಾ ಮಕ್ಕಳೂ ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಶಿಕ್ಷಕಿ ಕೃಪಾ ಅವರು, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶಾಲೆಗೆ ಭೇಟಿ ನೀಡಿ, ಅಗತ್ಯಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಪೂರ್ವಭಾವಿಯಾಗಿ ಸೆಪ್ಟೆಂಬರ್ 22ರಂದು ದಿನಕರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಶಾಲೆಗೆ ಗ್ಲೋಬ್, ಗ್ರೀನ್ ಬೋರ್ಡ್ ಸೇರಿದಂತೆ ಅನೇಕ ಉಡುಗೊರೆ ನೀಡಿದ್ದಾರೆ ಎಂದು ತಿಳಿಸಿದರು.

    ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವುದು, ಚಿತ್ರಗಳನ್ನು ಬಿಡಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲು ದರ್ಶನ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ವಿಚಾರ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಖುಷಿ ತಂದಿದೆ ಎಂದಿದ್ದರು.

  • ಶಾಲಾ ಗೋಡೆ ಕುಸಿತ – ಪ್ರಾರ್ಥನೆಯಿಂದ ತಪ್ಪಿತು ಭಾರೀ ಅನಾಹುತ

    ಶಾಲಾ ಗೋಡೆ ಕುಸಿತ – ಪ್ರಾರ್ಥನೆಯಿಂದ ತಪ್ಪಿತು ಭಾರೀ ಅನಾಹುತ

    ಹಾಸನ: ಶಾಲಾ ಕಟ್ಟಡದ ಬೃಹತ್ ಗಾತ್ರದ ಗೋಡೆ ಕುಸಿದು ಭಾರೀ ಅನಾಹುತವೊಂದು ತಪ್ಪಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೆನ್ನೇನಹಳ್ಳಿಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ವಿದ್ಯಾರ್ಥಿಗಳು ಪ್ರಾರ್ಥನೆಗೆ ಸೇರಿದ ಸಮಯದಲ್ಲಿ ಶಿಥಿಲವಾದ ಕಟ್ಟಡದ ಹತ್ತು ಅಡಿಗಿಂತಲೂ ಉದ್ದದ ಬೃಹತ್ ಗೋಡೆ ನೋಡನೋಡುತಿದ್ದಂತೆ ಕುಸಿದು ಬಿದ್ದಿದೆ. ಬೆಳಗ್ಗೆ ಸರಿಯಾಗಿ ಶಾಲಾ ಪ್ರಾರ್ಥನೆ ನಡೆಸುವ ಸಂದರ್ಭದಲ್ಲಿ ಗೋಡೆ ಕುಸಿದಿರುವುದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

    ಸದ್ಯ ವಿದ್ಯಾರ್ಥಿಗಳು ಇನ್ನೂ ಕಟ್ಟಡದ ಒಳಕ್ಕೆ ಹೋಗಿರದ ಕಾರಣ ಅನಾಹುತವೊಂದು ತಪ್ಪಿದಂತಾಗಿದೆ. ಶಿಥಿಲಗೊಂಡಿರುವ ಕೊಠಡಿಯಲ್ಲೇ ವಿದ್ಯಾರ್ಥಿಗಳು ಅನಿವಾರ್ಯ ವಾಗಿ ಪಾಠ ಕೇಳುವ ಪರಿಸ್ಥಿತಿ ಇದೆ. ಈ ಹಿಂದೆ ಹಿರಿಯ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಹಲವು ಬಾರಿ ವಿಷಯ ತಿಳಿಸಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಇದಾಗಿದ್ದು ಒಟ್ಟು ಇಪ್ಪತ್ತೈದು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕಟ್ಟಡ ಮಾಡಿಕೊಡುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ ಮುಖ್ಯ ಶಿಕ್ಷಕ

    ಕಡ್ಡಾಯ ವರ್ಗಾವಣೆಗೆ ಹೆದರಿ ಕೋಮಾಗೆ ಜಾರಿದ ಮುಖ್ಯ ಶಿಕ್ಷಕ

    ಹುಬ್ಬಳ್ಳಿ: ರಾಜ್ಯ ಸರ್ಕಾರದ ಕಡ್ಡಾಯ ವರ್ಗಾವಣೆಗೆ ಹೆದರಿ ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಕೋಮಾ ಸ್ಥಿತಿಯಲ್ಲಿದ್ದಾರೆ.

    ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಕಲಿಕಾ ಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸದ್ಯ ಕಡ್ಡಾಯ ವರ್ಗಾವಣೆ ನೀತಿಯನ್ನ ಜಾರಿಗೆ ತಂದಿದೆ. ಆದರೆ ಹುಬ್ಬಳ್ಳಿಯ ಆನಂದ ನಗರದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಸುಭಾಷ್ ತರ್ಲಘಟ್ಟ ಕಡ್ಡಾಯ ವರ್ಗವಣೆಗೆ ಹೆದರಿ ಕೋಮಾ ಸ್ಥಿತಿಯಲ್ಲಿದ್ದಾರೆ. ಸದ್ಯ ಕೋಮಾ ಸ್ಥಿತಿ ತಲುಪಿರುವ ಸುಭಾಷ್ ಅವರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರಾಮಗಿರಿಗೆ ಸುಭಾಷ್ ಅವರು ವರ್ಗಾವಣೆಗೊಂಡಿದ್ದರು. ಇದರಿಂದ ಮನನೊಂದು ಶಿಕ್ಷಕ ಕೋಮಾ ಸ್ಥಿತಿಗೆ ಜಾರಿದ್ದಾರೆ ಎಂದು ಅವರ ಪತ್ನಿ ಹಾಗೂ ಸಂಬಂಧಿಕರು ಹೇಳುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಮುಂದೆ ಜಮಾಯಿಸಿರೋ ಶಿಕ್ಷಕರು ಹಾಗೂ ಸಂಬಂಧಿಕರು ಹಾಗೂ ಸುಭಾಷ್ ಪತ್ನಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸುಭಾಷ್ ಅವರನ್ನು ವರ್ಗಾವಣೆ ಮಾಡಿದ್ದೇ ಅವರ ಈ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ.

  • ಸರ್ಕಾರಿ ಶಾಲೆಯಲ್ಲಿ ಸಚಿವ ಸುರೇಶ್ ಕುಮಾರ್ ವಾಸ್ತವ್ಯ

    ಸರ್ಕಾರಿ ಶಾಲೆಯಲ್ಲಿ ಸಚಿವ ಸುರೇಶ್ ಕುಮಾರ್ ವಾಸ್ತವ್ಯ

    ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎನ್ ಅಚ್ಚಮನಹಳ್ಳಿಯಲ್ಲಿ ಸರ್ಕಾರಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ.

    ಅಚ್ಚಮನಹಳ್ಳಿಯ ಶಾಲೆಯಲ್ಲಿಯೇ ಇಡೀ ರಾತ್ರಿ ಕಳೆದ ಸಚಿವರು, ಅಲ್ಲಿನ ಮಕ್ಕಳ ಹಾಗೂ ಶಿಕ್ಷಕರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ. ತಿರುಮಣಿಯಲ್ಲಿ ಸೋಲಾರ್ ಪ್ಲಾಂಟ್‍ಗೆ ಜಾಗ ಕೊಟ್ಟರೂ ಅಚ್ಚಮನಹಳ್ಳಿಯ ಗ್ರಾಮದಲ್ಲಿ ವಿದ್ಯುತ್ ಕೊರತೆ ಇದೆ. ಅಲ್ಲದೆ ಲೋಡ್ ಶೆಡ್ಡಿಂಗ್‍ನಿಂದಾಗಿ ನಮಗೆ ಇಲ್ಲಿ ಓದೋಕೆ ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಕೂಡ ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

    ಇದರ ಜೊತೆಗೆ ಗ್ರಾಮಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೇ ಈ ಭಾಗದ ಜನ ಕಷ್ಟಪಡುತ್ತಿದ್ದಾರೆ. ರಸ್ತೆ ಮತ್ತು ಬಸ್ ವ್ಯವಸ್ಥೆ ಕೂಡ ಇಲ್ಲದ ಕಾರಣಕ್ಕೆ ಶಾಲೆಗೆ ಹೋಗಲು ಕಷ್ಟವಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ಕೊರತೆ ಕೂಡ ಇದೆ ಎಂದು ವಿದ್ಯಾರ್ಥಿಗಳು ಸಚಿವರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಸಮಸ್ಯೆಗಳನ್ನು ಆಲಿಸಿದ ಸಚಿವ ಸುರೇಶ್ ಕುಮಾರ್ ಅದನ್ನೆಲ್ಲ ಬಗೆಹರಿಸುವ ಭರವಸೆ ನೀಡಿದರು.

  • ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಸುರೇಶ್ ಕುಮಾರ್

    ತುಮಕೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದು ಸರ್ಕಾರಿ ಶಾಲೆಯಲ್ಲೇ ಒಂದು ದಿನ ವಾಸ್ತವ್ಯ ಹೂಡಿ ಸ್ಥಿತಿಗತಿಗಳ ಬಗ್ಗೆ ಅರಿಯಲು ಮುಂದಾಗಿದ್ದಾರೆ.

    ತುಮಕೂರು ಜಿಲ್ಲೆಯ ಗಡಿ ಪ್ರದೇಶವಾದ ಪಾವಗಡ ತಾಲೂಕಿನ ಎನ್.ಅಚ್ಚಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ. ಸಂಜೆ 6 ಗಂಟೆಗೆ ಗ್ರಾಮದ ಶಾಲೆಗೆ ಆಗಮಿಸಲಿರುವ ಸಚಿವರು, ರಾತ್ರಿ ಇದೇ ಶಾಲೆಯಲ್ಲಿ ತಂಗಲಿದ್ದಾರೆ.

    ಈ ನಡುವೆ ಆರಂಭದಲ್ಲಿ ಗಡಿನಾಡ ಶಾಲೆಗಳ ಪ್ರಚಲಿತ ಸಮಸ್ಯೆಗಳು, ತಾಲೂಕು ಮತ್ತು ಜಿಲ್ಲೆಯ ಶೈಕ್ಷಣಿಕ ವಿಚಾರಗಳ ಕುರಿತ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30 ಗಂಟೆಗೆ ಸದರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿ ರಾತ್ರಿ 10 ಗಂಟೆಗೆ ವಿದ್ಯಾರ್ಥಿಗಳು ನಡೆಸಿಕೊಡುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ.

    ಬಳಿಕ ನಾಳೆ ಬೆಳಗ್ಗೆ 8 ಗಂಟೆಗೆ ಪಾವಗಡ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳೊಂದಿಗೆ ಗಡಿನಾಡು ಶಾಲೆಗಳ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು, ವಳ್ಳೂರು ಹಾಗೂ ತಿರುಮಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನದ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಸ್ತವ್ಯ ಹೂಡಲಿರುವ ಶಾಲೆಯಲ್ಲಿ ಸರ್ವ ತಯಾರಿ ನಡೆದಿದೆ.

  • ಹಾವೇರಿಯಲ್ಲಿ ಇನ್ನೂ ವಿತರಣೆಯಾಗಿಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ

    ಹಾವೇರಿಯಲ್ಲಿ ಇನ್ನೂ ವಿತರಣೆಯಾಗಿಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ

    ಹಾವೇರಿ: ಶೈಕ್ಷಣಿಕ ವರ್ಷದ ಆರಂಭಕ್ಕೆ ಸರಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂ, ಸಾಕ್ಸ್ ವಿತರಣೆ ಮಾಡಬೇಕು. ಆದರೆ ಇನ್ನೇನು ಕೆಲವೇ ದಿನಗಳು ಕಳೆದರೆ ಅರ್ಧ ಶೈಕ್ಷಣಿಕ ವರ್ಷವೇ ಮುಗಿಯುತ್ತಾ ಬಂದರೂ ಹಾವೇರಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಆಗಿಲ್ಲ. ಕೆಲವು ಕಡೆಗಳಲ್ಲಿ ಪಠ್ಯ ಪುಸ್ತಕ, ಶೂ, ಸಾಕ್ಸ್ ಗಳೂ ಸಿಕ್ಕಿಲ್ಲ.

    ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಸಿಗದೆ, ಮಕ್ಕಳು ಕಳೆದ ವರ್ಷ ನೀಡಿರುವ ಹರಿದಿರುವ ಬಟ್ಟೆಗಳನ್ನೇ ಹೊಲಿದು ಹಾಕಿಕೊಂಡು ಶಾಲೆಗೆ ಬರುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶಾಲೆ ಆರಂಭದಿಂದಲೂ ಸಮವಸ್ತ್ರ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಇದನ್ನು ಓದಿ: ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

    ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಅರ್ಧ ಕಳೆಯುತ್ತ ಬಂದರೂ ಈವರೆಗೆ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಸೇರಿದಂತೆ ಯಾವುದೇ ಸರಕಾರಿ ಸೌಲಭ್ಯಗಳು ದೊರೆತಿಲ್ಲ.

    ಕಳೆದ ಒಂದು ವಾರದಲ್ಲಿ ಕೆಲವು ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಕೆಲವು ಸಲಕರಣೆಗಳು ವಿತರಣೆ ಆಗಿವೆ. ಮತ್ತೆ ಕೆಲವು ಕಡೆಗಳಲ್ಲಿ ಸಮವಸ್ತ್ರ ಶಾಲೆಗಳಿಗೆ ತಲುಪಿದರೂ ಇನ್ನೂ ಮಕ್ಕಳ ಕೈಸೇರಿಲ್ಲ. ಸಮವಸ್ತ್ರ ವಿತರಣೆಗೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳಿಗೆ ಸಮಯ ಸಿಗುತ್ತಿಲ್ಲ. ಅವರನ್ನೇ ಕರೆಸಿ ಸಮವಸ್ತ್ರ ವಿತರಿಸಬೇಕು ಎಂದು ಕೆಲವು ಶಾಲೆಗಳ ನಿಲುವಿನಿಂದಾಗಿ ಇನ್ನೂ ಸಮವಸ್ತ್ರಗಳನ್ನು ವಿತರಿಸಿಲ್ಲ.

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆಗೆ ಸರ್ಕಾರದ ನಿರ್ಲಕ್ಷವೂ ಪ್ರಮುಖ ಕಾರಣವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಪದೆ ಪದೇ ಸರಕಾರಿ ಶಾಲೆಗಳ ಉಳಿವು, ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಸರಕಾರಿ ಶಾಲೆ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದು ಪೋಷಕರು ಆಗ್ರಹಿಸಿದ್ದಾರೆ.

  • ಕಣ್ಣೀರಿಟ್ಟ ಬಾಲೆಗೆ ಮರುಗಿದ `ಪಬ್ಲಿಕ್’- ಪ್ರವಾಹ ಸಂತ್ರಸ್ತರಿಗೆ ನೆರವು

    ಕಣ್ಣೀರಿಟ್ಟ ಬಾಲೆಗೆ ಮರುಗಿದ `ಪಬ್ಲಿಕ್’- ಪ್ರವಾಹ ಸಂತ್ರಸ್ತರಿಗೆ ನೆರವು

    ಬೆಳಗಾವಿ: ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳಿಗೆ ಪಬ್ಲಿಕ್ ಟಿವಿ ವತಿಯಿಂದ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ.

    ಜಿಲ್ಲೆಯ ರಾಮದುರ್ಗ ತಾಲೂಕು ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿ ಜಲಸಮಾಧಿಯಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ಪ್ರವಾಹ ಬಂದ ಬಳಿಕದ ಜನರ ಜೀವನದ ಬಗ್ಗೆ ಬುಲೆಟ್ ರಿಪೋರ್ಟರ್ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು.

    ಪ್ರವಾಹಕ್ಕೆ ಸಿಲುಕಿದ್ದ ರಾಮದುರ್ಗದ ವಿಠ್ಠಲಪೇಟೆಯ ಸರ್ಕಾರಿ ಶಾಲಾ ಮಕ್ಕಳ ದಯನೀಯ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಅದರಲ್ಲಿ ಸ್ವಾತಿ ಎಂಬ ಬಾಲೆ ತನ್ನ ಸ್ಥಿತಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಆ ಬಾಲೆಯ ಮೊಗದಲ್ಲಿ ಇಂದು ನಗುವಿದೆ.

    ಕಾರಣ ಪಬ್ಲಿಕ್ ಟಿವಿ ವತಿಯಿಂದ ಮಕ್ಕಳಿಗೆ ಶಾಲಾ ಬ್ಯಾಗ್ ಜೊತೆಯಲ್ಲಿ ಅವಶ್ಯಕ ವಸ್ತುಗಳನ್ನು ವಿತರಿಸಲಾಗಿದೆ. ಈ ಮೂಲಕ ಅಂದು ಅತ್ತಿದ್ದ ಪುಟಾಣಿ ಹುಡುಗಿ ಇಂದು ಧನ್ಯತಾ ಭಾವದಿಂದ ನಗುತ್ತಿದ್ದಾಳೆ.