Tag: government primary school

  • ಸರ್ಕಾರಿ ಶಾಲೆ ದತ್ತು ಪಡೆದುಕೊಂಡ ಡಿಬಾಸ್ ಫ್ಯಾನ್ಸ್

    ಸರ್ಕಾರಿ ಶಾಲೆ ದತ್ತು ಪಡೆದುಕೊಂಡ ಡಿಬಾಸ್ ಫ್ಯಾನ್ಸ್

    ಹಾಸನ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

    ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಇದನ್ನೂ ಓದಿ: ‘ಡಿ’ ಕಂಪನಿಯ ‘ದಿನಕರೋತ್ಸವ’ದಲ್ಲಿ ಟಕ್ಕರ್!

    ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದಿದ್ದು, ರಾಮೇನಹಳ್ಳಿ ಸರ್ಕಾರಿ ಶಾಲೆಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳೂ ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲೆಯ ಶಿಕ್ಷಕಿ ಕೃಪಾ ಅವರು, ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಶಾಲೆಗೆ ಭೇಟಿ ನೀಡಿ, ಅಗತ್ಯಗಳನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಪೂರ್ವಭಾವಿಯಾಗಿ ಸೆಪ್ಟೆಂಬರ್ 22ರಂದು ದಿನಕರೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಶಾಲೆಗೆ ಗ್ಲೋಬ್, ಗ್ರೀನ್ ಬೋರ್ಡ್ ಸೇರಿದಂತೆ ಅನೇಕ ಉಡುಗೊರೆ ನೀಡಿದ್ದಾರೆ ಎಂದು ತಿಳಿಸಿದರು.

    ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚುವುದು, ಚಿತ್ರಗಳನ್ನು ಬಿಡಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಲು ದರ್ಶನ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಮೂಲಕ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ಮುಂದಾಗಿದ್ದಾರೆ. ಈ ವಿಚಾರ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಗ್ರಾಮಸ್ಥರಿಗೆ ಖುಷಿಯನ್ನು ತಂದಿದೆ ಎಂದರು.

  • ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಹೇಳಿದ ರವಿ ಚನ್ನಣ್ಣನವರ್

    ಸರ್ಕಾರಿ ಶಾಲಾ ಮಕ್ಕಳಿಗೆ ಪಾಠ ಹೇಳಿದ ರವಿ ಚನ್ನಣ್ಣನವರ್

    ಬೆಂಗಳೂರು: ನೆಲಮಂಗಲ ತಾಲೂಕಿನ ಕಾಚನಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಡಿ.ಚನ್ನಣ್ಣನವರ್ ಪಾಠ ಹೇಳಿದ್ದಾರೆ.

    ಪ್ರಕರಣವೊಂದರ ವಿಚಾರಣೆ ನಿಮಿತ್ತ ರವಿ ಚನ್ನಣ್ಣನವರ್ ಅವರು ಕಾಚನಹಳ್ಳಿ ಗ್ರಾಮಕ್ಕೆ ಬಂದಿದ್ದರು. ಈ ಮಧ್ಯೆ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಜೊತೆಗೆ ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಕೇಳಿ ಮಕ್ಕಳನ್ನು ಪ್ರೋತ್ಸಾಹಿಸಿದ್ದಾರೆ.

    ನಾನು ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‍ಪಿ ಆಗಿರುವೆ. ವಿದ್ಯೆ ಮನುಷ್ಯನ ಆಸ್ತಿ. ನಿಮ್ಮಲ್ಲಿರುವ ವಸ್ತುಗಳನ್ನು ಯಾರಾದರು ಕದಿಯಬಹುದು. ಆದರೆ ನಿಮ್ಮಲ್ಲಿರುವ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ? ಕರ್ನಾಟಕದ ಮುಖ್ಯಮಂತ್ರಿ ಯಾರು? ಈಗಿನ ಪ್ರಧಾನಿ ಯಾರು? ಸೈನ್ಸ್ ಸ್ಪೆಲ್ಲಿಂಗ್ ಹೇಳಿ. ಸಂವಿಧಾನದ ಶಿಲ್ಪಿ ಯಾರು? ಎಂದು ಏಳನೇ ತರಗತಿ ಮಕ್ಕಳಿಗೆ ಚನ್ನಣ್ಣನವರ್ ಪ್ರಶ್ನೆ ಕೇಳಿದರು. ವಿದ್ಯಾರ್ಥಿಗಳು ಸರಿಯಾದ ಉತ್ತರ ನೀಡಿದಾಗ ಗುಡ್ ಎಂದು ಪ್ರೋತ್ಸಾಹಿಸಿದರು.

    ಶಾಲಾ ಆವರಣದಲ್ಲಿ ಯಾರಾದರೂ ಮದ್ಯ ಸೇವಿಸುತ್ತಾರಾ? ಜೂಜು ಆಡುತ್ತಾರಾ? ಯಾರಾದರೂ ಅಸಭ್ಯವಾಗಿ ನಡೆದುಕೊಳ್ಳುತ್ತಾರಾ ಎಂದು ಮಕ್ಕಳನ್ನು ಪ್ರಶ್ನಿಸಿದರು. ಆಗ ಮಕ್ಕಳು ಇಲ್ಲ ಸರ್ ಎಂದು ಪ್ರತಿಕ್ರಿಯೆ ನೀಡಿದರು. ಮಕ್ಕಳೊಂದಿಗೆ ಮಾತು ಮುಂದುವರಿಸಿದ ಅವರು, ಒಂದು ವೇಳೆ ಅಂತವರು ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ತಮ್ಮ ಮೊಬೈಲ್ ನಂಬರ್ ಅನ್ನು ವಿದ್ಯಾರ್ಥಿಗಳಿಗೆ ಕೊಟ್ಟರು.

    https://www.youtube.com/watch?v=qf4tToZBvws

  • ವಡೋದರಾದಲ್ಲಿ ‘ಬ್ಯಾಗ್ ಫ್ರೀ’ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಖುಷ್

    ವಡೋದರಾದಲ್ಲಿ ‘ಬ್ಯಾಗ್ ಫ್ರೀ’ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಖುಷ್

    ಗಾಂಧಿನಗರ: ವಡೋದರಾದ ಸರ್ಕಾರಿ ಶಾಲೆಗಳಲ್ಲಿ “ಬ್ಯಾಗ್ ಫ್ರೀ” ಶಿಕ್ಷಣ ನೀಡುವ ವಿಶಿಷ್ಟ ವಿಧಾನಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದು, ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಗುಜರಾತಿನ ವಡೋದರಾದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಬ್ಯಾಗ್ ಹೊರೆ ಹೊತ್ತು ಶಾಲೆಗೆ ಹೋಗುವುದಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಅಧ್ಯಯನ ಕಿಟ್‍ಗಳನ್ನು ನೀಡಲಾಗುತ್ತಿದೆ. ಅಲ್ಲದೆ ಶಾಲೆಯಲ್ಲಿ ಮಕ್ಕಳು ಇದನ್ನು ಬಳಸಿ ಕೊನೆಗೆ ಮನೆಗೆ ಮರಳುವಾಗ ಶಿಕ್ಷಕರು ಕಿಟ್‍ಗಳನ್ನು ಶಾಲೆಯಲ್ಲಿಯೇ ಇರಿಸಿಕೊಳ್ಳುತ್ತಾರೆ. ಹೀಗಾಗಿ ಖಾಲಿ ಕೈಯಲ್ಲಿ ಆಟವಾಡುತ್ತಾ ಮಕ್ಕಳು ಶಾಲೆಗೆ ಬರುತ್ತಾರೆ.

    ಸ್ಟಡಿ ಕಿಟ್‍ಗಳ ಸಹಾಯದಿಂದ ಪಾಠ ಕಲಿತು, ಬಳಿಕ ಸ್ಟಡಿ ಕಿಟ್‍ಗಳನ್ನು ಶಾಲೆಯಲ್ಲಿಯೇ ಬಿಟ್ಟು ಮನೆಗೆ ತೆರಳುತ್ತಾರೆ. ಅಲ್ಲದೆ ಮಕ್ಕಳಿಗೆ ಯಾವುದೇ ಹೋಮ್‍ವರ್ಕ್ ಕೂಡ ಇಲ್ಲಿ ನೀಡಲಾಗುವುದಿಲ್ಲ. ಕೇವಲ ಓದು ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಇಲ್ಲಿ ಇಲ್ಲಿ ಶಾಲೆಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಕಥೆ ಹೇಳುವುದು, ಹಾಡುಗಳು ಮತ್ತು ನಟನೆ ಹೀಗೆ ಪ್ರಾಯೋಗಿಕ ವಿಧಾನಗಳನ್ನು ಬಳಸಿ ಮಕ್ಕಳಿಗೆ ಕಲಿಸಲಾಗುತ್ತದೆ ಎಂದು ಶಾಲೆಯೊಂದರ ಮುಖ್ಯೋಪಾಧ್ಯಾಯರಾದ ಜಿಗರ್ ಠಾಕೂರ್ ತಿಳಿಸಿದರು.

    ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ಪ್ರಜ್ಞಾ ಉಪಕ್ರಮದ ಯೋಜನೆ ಆರಂಭಿಸಿದೆ. ಬ್ಯಾಗ್ ಫ್ರೀ ಶಿಕ್ಷಣ, ಸ್ಟಡಿ ಕಿಟ್ ಈ ಯೋಜನೆಯ ಒಂದು ಭಾಗವಾಗಿದೆ. ಮಕ್ಕಳೂ ಕೂಡ ಈ ವ್ಯವಸ್ಥೆಯಿಂದ ಖುಷಿ ಖುಷಿಯಾಗಿ ಶಾಲೆಗೆ ಬರುತ್ತಿದ್ದು, ಶಿಕ್ಷಣ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯರು ಹೇಳಿದ್ದಾರೆ.

    ಈ ನೂತನ ವಿಧಾನದ ಬಗ್ಗೆ ವಿದ್ಯಾರ್ಥಿಯೋರ್ವ ಪ್ರತಿಕ್ರಿಯೆ ನೀಡಿ, ನಾವು ಪಾಠ ಕಲಿಯಲು ಶಾಲೆಯಲ್ಲಿಯೇ ನೋಟ್ ಬುಕ್‍ಗಳನ್ನು ಕೊಡುತ್ತಾರೆ. ಪ್ರತಿದಿನ ಹಲವು ಹೊಸ ಚಟುವಟಿಕೆಗಳನ್ನು ಶಾಲೆಯಲ್ಲಿ ನಾವು ಕಲಿಯುತ್ತೇವೆ. ಬಳಿಕ ಮನೆಗೆ ವಾಪಸ್ ಹೋಗುವಾಗ ನಮ್ಮ ಪುಸ್ತಕಗಳನ್ನು ನಾವು ಶಾಲೆಯಲ್ಲಿಯೇ ಇಟ್ಟು ಹೋಗುತ್ತೇವೆ. ಆದ್ದರಿಂದ ನಾವು ಬ್ಯಾಗ್‍ಗಳನ್ನು ಶಾಲೆಗೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾನೆ.