Tag: Government of Kerala

  • ಆನೆದಂತ ದಾಸ್ತಾನು ಕೇಸ್ : ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಸಂಕಷ್ಟ

    ಆನೆದಂತ ದಾಸ್ತಾನು ಕೇಸ್ : ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಸಂಕಷ್ಟ

    ಹಿಂದೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದಾಗ ಅವರ ಮನೆಯಲ್ಲಿ ಎರಡು ಜೊತೆ ಆನೆದಂತ ಮತ್ತು ಆನೆದಂತದಿಂದ ಮಾಡಿದ ವಸ್ತುಗಳು ಪತ್ತೆ ಆಗಿದ್ದವು. ಹಾಗಾಗಿ ಅರಣ್ಯ ಇಲಾಖೆಯು ಮೋಹನ್ ಲಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ಅವರಿಗೆ ಇಲಾಖೆಯು ಮಾಲೀಕತ್ವ ದಾಖಲೆ ನೀಡಿದ್ದರಿಂದ ಪ್ರಕರಣ ಕೈ ಬಿಡಬೇಕೆಂದು ಸರಕಾರವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

    ಆನೆ ದಂತಗಳಿಗೆ ನೀಡಿರುವ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಮಾನ್ಯತೆ ಇಲ್ಲ ಎಂದು ವಾದಿಸಿದ ಅರ್ಜಿ ವಿರುದ್ಧದ ವಕೀಲರು, ಎರಡು ಆನೆದಂತ ಮತ್ತು ಆನೆದಂತದಿಂದ ಮಾಡಿದ 13 ಕಲಾಕೃತಿಗಳ ಕುರಿತು ಯಾವುದೇ ಕ್ರಮ ತಗೆದುಕೊಂಡಿಲ್ಲವೆಂದು ವಾದಿಸಿತು. ಹಾಗಾಗಿ ರಾಜ್ಯ ಸರಕಾರ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಮೋಹನ್ ಲಾಲ್ ವಿರುದ್ಧದ ಪ್ರಕರಣ ಈ ಮೂಲಕ ಮುಂದುವರೆದಿದೆ. ಇದನ್ನೂ ಓದಿ: ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಕೇಸು ಮುಂದುವರೆದು, ಒಂದು ವೇಳೆ ಆರೋಪ ಸಾಬೀತಾದರೆ, ಅರಣ್ಯ ಕಾಯ್ದೆಯಡಿ ಏಳು ವರ್ಷಗಳು ಮೀರದಂತೆ ಜೈಲು ಶಿಕ್ಷೆಯಿದೆ. ಹಾಗಾಗಿ ಮೋಹನ್ ಲಾಲ್ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಅವರು ಈ ಪ್ರಕರಣವನ್ನು ಎದುರಿಸಲೇಬೇಕಾಗಿದೆ. ಮತ್ತೆ ಮೋಹನ್ ಲಾಲ್ ವಿಚಾರಣೆಗೆ ಸಹಕರಿಸಬೇಕಾಗಿದೆ. ಸಿನಿಮಾ ಮತ್ತು ಉದ್ಯಮ ಎರಡೂ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿರುವ ಮೋಹನ್ ಲಾಲ್ ಈ ವಿಷಯದಲ್ಲಿ ಗೆಲ್ಲಲಿದ್ದಾರೆ ಎನ್ನುವುದು ಅವರ ಅಭಿಮಾನಿಗಳ ನಿರೀಕ್ಷೆ.

  • ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ

    ಓಮಿಕ್ರಾನ್ ಭೀತಿ – ಡಿ.30ರಿಂದ ಕೇರಳದಲ್ಲಿ ನೈಟ್ ಕರ್ಫ್ಯೂ

    ತಿರುವನಂತಪುರಂ: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಭೀತಿಯಿಂದಾಗಿ ಕೇರಳದಲ್ಲಿ ಡಿಸೆಂಬರ್ 30 ರಿಂದ ಜನವರಿ 2ರವರೆಗೂ ನೈಟ್ ಕರ್ಫ್ಯೂ ವಿಧಿಸಲಾಗಿದೆ.

    ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಭೆ ನಡೆಸಿ ಈ ಕುರಿತಂತೆ ಕೇರಳ ಸರ್ಕಾರ ನೈಟ್ ಕರ್ಫ್ಯೂಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಅದರಂತೆ ಡಿಸೆಂಬರ್ 31ರಿಂದ ಬಾರ್‌ಗಳು, ಹೋಟೆಲ್‍ಗಳು, ಕ್ಲಬ್‍ಗಳು ಮತ್ತು ರೆಸ್ಟೋರೆಂಟ್ ಸೇರಿದಂತೆ ಯಾವುದೇ ಅಂಗಡಿಗಳು ರಾತ್ರಿ 10 ಗಂಟೆಯ ಬಳಿಕ ಕಾರ್ಯನಿರ್ವಹಿಸುವಂತಿಲ್ಲ. ಇದನ್ನೂ ಓದಿ: ಸ್ಥಳೀಯಾಡಳಿತಗಳ ಚುನಾವಣೆ ಯಶಸ್ವಿ – ಡಿ.30ಕ್ಕೆ ಫಲಿತಾಂಶ

    ಸಮುದ್ರ, ಶಾಪಿಂಗ್ ಮಾಲ್, ಸಾರ್ವಜನಿಕ ಉದ್ಯಾನವನ ಸೇರಿದಂತೆ ಇತರ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.  ಇದನ್ನೂ ಓದಿ: ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ವೈದ್ಯ ಆತ್ಮಹತ್ಯೆ

    ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಓಮಿಕ್ರಾನ್ ಭೀತಿಯಿಂದ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಭಾನುವಾರ ಕೇರಳದಲ್ಲಿ 57 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು 1,636 ಕೋವಿಡ್ ಸಕ್ರಿಯ ಪ್ರಕರಣಗಳು ಮತ್ತು 256 ಸಾವು ವರದಿಯಾಗಿದೆ.

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    ‘ಬಿಎಸ್‍ವೈಗೆ ಅವಮಾನ, ಕೇರಳ ಸಿಎಂ ಕನ್ನಡಿಗರ ಕ್ಷಮೆಯಾಚಿಸಬೇಕು’

    – ಹಾವೇರಿಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ

    ಹಾವೇರಿ: ಕೇರಳ ಸರ್ಕಾರ ಉದ್ದೇಶಪೂರ್ವಕವಾಗಿ ಅಲ್ಲಿನ ಪಟ್ಟಭದ್ರ ನಾಡದ್ರೋಹಿ ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಯಡಿಯೂರಪ್ಪನವರ ವಿರುದ್ಧ ಹೋರಾಟ ಮಾಡಿಸಿ ರಾಜ್ಯಕ್ಕೆ ಅವಮಾನ ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಆಕ್ರೋಶ ವ್ಯಕ್ತಪಡಿಸಿದರು.

    ಕೇರಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರು ತಡೆದು ಪ್ರತಿಭಟನೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಯಡಿಯೂರಪ್ಪನವರ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಾಜ್ಯದ 6 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಇದನ್ನು ಕನ್ನಡಿಗರು ಯಾವತ್ತೂ ಸಹಿಸುವುದಿಲ್ಲ. ಕೂಡಲೇ ಕೇರಳ ಸರ್ಕಾರ ಕರ್ನಾಟಕದ ಮುಖ್ಯಮಂತ್ರಿಗಳ ಹಾಗೂ ಕನ್ನಡಿಗರಿಗೆ ಕ್ಷಮೆಯಾಚಿಸಬೇಕು. ಅಲ್ಲದೆ ಇತ್ತೀಚೆಗೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದ ಕರ್ನಾಟಕದ ಭಕ್ತರ ಮೇಲೆ ಪೊಲೀಸರ ಕಣ್ಣೆದುರಿನಲ್ಲಿಯೇ ಹಲ್ಲೆ ಮಾಡಲಾಗಿದೆ. ಇದು ಕೇರಳ ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ ಕೂಡಲೇ ಕೇರಳ ಸರ್ಕಾರ ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಂಡು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಮಂಜುನಾಥ ಓಲೇಕಾರ ಒತ್ತಾಯಿಸಿದರು.

    ಸಿಎಂ ಯಡಿಯೂರಪ್ಪನವರು ಕೇರಳ ಪ್ರವಾಸ ಕೈಗೊಂಡಾಗ ಅಲ್ಲಿನ ಸರ್ಕಾರ ಸೂಕ್ತ ಭದ್ರತೆ ಒದಗಿಸದೇ ವ್ಯವಸ್ಥಿತವಾಗಿ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದೆ ಎಂದು ಮಂಜುನಾಥ್ ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ನೂರಅಹ್ಮದ್ ಲಕ್ಷ್ಮೇಶ್ವರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲ್ತಾಫ ನದಾಫ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಸಿ.ಬಿ. ದೊಡ್ಡಗೌಡರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾದೇವಪ್ಪ ಹೆಡಿಗ್ಗೊಂಡ, ಜಿಲ್ಲಾ ಕರವೇ ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಹಾವೇರಿ ತಾಲೂಕು ಅಧ್ಯಕ್ಷ ಫಕ್ಕೀರೇಶ ಕಟ್ಟಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.