Tag: government job

  • ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಸರ್ಕಾರಿ ಹುದ್ದೆಗೆ ಗುಡ್‍ಬೈ, ಪ್ರಕೃತಿ ಮಾತೆಗೆ ಜೈ ಅಂದ್ರು ಕೋಲಾರದ ರಾಜಶೇಖರ್

    ಕೋಲಾರ: ಕೈ ಕೆಸರಾದರೆ ಬಾಯಿ ಮೊಸರು. ಈ ಗಾದೆಗೆ ಇಂದಿನ ಪಬ್ಲಿಕ್ ಹೀರೋ ಕೋಲಾರದ ರಾಜಶೇಖರ್ ಅವರು ನಿದರ್ಶನವಾಗಿದ್ದಾರೆ. ರ‍್ಯಾಂಕ್ ಪಡೆದ ಎಂಜಿನಿಯರ್ ಪದವೀಧರರಾಗಿದ್ದರೂ, ಆರೋಗ್ಯ ಕೈಕೊಟ್ಟಿತ್ತು. ಆದರೆ, ಭೂಮಾತೆಯನ್ನು ನಂಬಿದ ರಾಜಶೇಖರ್‍ಗೆ ಆರೋಗ್ಯ-ಐಶ್ವರ್ಯ ಎಲ್ಲವೂ ಸಿಕ್ಕಿದೆ.

    ಹೌದು. ಕೋಲಾರದ ಚಾಮರಹಳ್ಳಿಯ ರಾಜಶೇಖರ್ ಅವರು ತಮ್ಮ 40 ಎಕರೆಯಲ್ಲಿ ಮರಗಳನ್ನು ಬೆಳೆದಿದ್ದಾರೆ. ಸಾರಿಗೆ ಇಲಾಖೆಯಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ರಾಜಶೇಖರ್ ಅವರಿಗೆ ಹಲವು ಬಗೆಯ ಕಾಯಿಲೆಗಳು ಬಾಧಿಸುತ್ತಿದ್ದವು. ಇದರಿಂದ ನೊಂದು ಜೀವನವೇ ಬೇಡ ಅಂತಿದ್ದವರು, ಸ್ನೇಹಿತರ ಮಾತಿನಂತೆ ನಿಸರ್ಗ ಜೀವನ ನಡೆಸಿ ಈಗ ಆರೋಗ್ಯಯುತರಾಗಿದ್ದಾರೆ. ತಮ್ಮ ಜಮೀನಿನಲ್ಲಿ ಮಾವು, ಬೇವು, ಹಲಸು, ಸೀತಾಫಲ, ಸಪೋಟ, ಸೀಬೆ, ನೇರಳೆ, ನೆಲ್ಲಿಕಾಯಿ ಸೇರಿದಂತೆ ಅರಳಿ ಹೀಗೆ ಹತ್ತಾರು ಬಗೆಯ ಔಷಧೀಯ ಹಾಗೂ ಅಪರೂಪದ ಸುಮಾರು 4,500ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.

    ಜಿಲ್ಲೆಯಲ್ಲಿ ಸಾವಿರ ಅಡಿಗೂ ನೀರು ಸಿಗದ ಹೊತ್ತಲ್ಲಿ ತಮ್ಮ ಜಮೀನಿನಲ್ಲಿ ಮಳೆ ಕೊಯ್ಲು, ಹಿಂಗುಗುಂಡಿ, ಕೃಷಿ ಹೊಂಡಗಳ ಮೂಲಕ ಕೇವಲ 350 ಅಡಿಗೇ ನೀರು ಸಿಗುವಂತೆ ಅಂತರ್ಜಲ ಮಟ್ಟ ಏರಿಸಿದ್ದಾರೆ. ಹನಿ ನೀರಾವರಿ, ಇಂಗು-ಗುಂಡಿಗಳ ಮೂಲಕ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಿ, ಸಾವಿರಾರು ಸಸಿಗಳನ್ನು ಕಾಪಾಡಿಕೊಂಡಿದ್ದಾರೆ. ಜೈವಿಕ ಆಹಾರ ಮತ್ತು ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ ಎಂದು ರಾಜಶೇಖರ್ ಸ್ನೇಹಿತ ಪದ್ಮನಾಭ್ ಹೇಳುತ್ತಾರೆ.

    ಒಳ್ಳೆಯ ಗಾಳಿ, ನೀರು, ಸೇರಿದಂತೆ ಔಷಧೀಯ ಗಿಡಗಳಿಂದ ಆರೋಗ್ಯದ ಜೊತೆಗೆ ಲಕ್ಷಾಂತರ ರೂಪಾಯಿ ಲಾಭವನ್ನೂ ಪಡೆಯುತ್ತಿದ್ದಾರೆ.

  • ಯೋಧ ಗುರು ಕುಟುಂಬಕ್ಕೆ 25 ಲಕ್ಷ, ಪತ್ನಿಗೆ ಸರ್ಕಾರಿ ಉದ್ಯೋಗ: ಸಿಎಂ ಎಚ್‍ಡಿಕೆ

    ಯೋಧ ಗುರು ಕುಟುಂಬಕ್ಕೆ 25 ಲಕ್ಷ, ಪತ್ನಿಗೆ ಸರ್ಕಾರಿ ಉದ್ಯೋಗ: ಸಿಎಂ ಎಚ್‍ಡಿಕೆ

    ಬೆಂಗಳೂರು: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಅವರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಎಚ್‍ಡಿಕೆ ಘೋಷಣೆ ಮಾಡಿದ್ದಾರೆ.

    ನಗರದ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರ ಬಂದಿದ್ದಾಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗುರು ಅವರಿಗೆ ಹೂಗುಚ್ಛವನ್ನಿಟ್ಟು ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಹುತಾತ್ಮ ಗುರು ಕುಟುಂಬಕ್ಕೆ ಪರಿಹಾರ ಧನವನ್ನು ಫೋಷಿಸಿದರು. ಹುತಾತ್ಮ ಗುರು ಕುಟುಂಬದ ಸಂಪೂರ್ಣ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಹುತಾತ್ಮ ಗುರು ಅವರ ಪಾರ್ಥೀವ ಶರೀರ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಸಿಎಂ ಕುಮಾರಸ್ವಾಮಿ, ಎಂ.ಬಿ ಪಾಟೀಲ್, ಶೋಭಾ ಕರಂದ್ಲಾಜೆ ಸೇರಿದಂತೆ ಗಣ್ಯರು ಹುತಾತ್ಮ ಗುರು ಅವರಿಗೆ ಹೂಮಾಲೆ ಅರ್ಪಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.

    ಸರ್ಕಾರ ಗುರು ಶವವವನ್ನು ಸಾಗಿಸಲು ಸೇನಾ ಹೆಲಿಕಾಪ್ಟರ್ ಕೇಳಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರದಿಂದ ಈ ಮನವಿ ಬಂದಿದ್ದರಿಂದ ಹೆಲಿಕಾಪ್ಟರ್ ನೀಡಲು ಸಾಧ್ಯವಿಲ್ಲ ಎಂದು ಸೇನೆ ತಿಳಿಸಿತ್ತು. ಹೀಗಾಗಿ ಗುರು ಪಾರ್ಥೀವ ಶರೀರ ಸೇನಾ ವಾಹನದಲ್ಲಿ ರಸ್ತೆ ಮೂಲಕ ಸಾಗುತ್ತಿದ್ದು, ಜನರು ರಸ್ತೆ ಇಕ್ಕೆಲದಲ್ಲಿ ನಿಲ್ಲುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.

    ಇದಕ್ಕೂ ಮೊದಲು ಮಾತನಾಡಿದ ಸಿಎಂ, ಹುತಾತ್ಮ ಯೋಧನ ಶರೀರ ಬರುವುದು ತಡವಾಗಿದೆ. ಆದಷ್ಟು ಬೇಗ ಪಾರ್ಥೀವ ಶರೀರ ಸ್ವಗ್ರಾಮಕ್ಕೆ ತೆರಳುವ ವ್ಯವಸ್ಥೆ ಮಾಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯೋಧ ಗುರು ಅವರ ಮುಖ ದರ್ಶನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆದಷ್ಟು ಬೇಗ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಈಗಾಗಲೇ ಸರ್ಕಾರ, ಜಿಲ್ಲಾಡಳಿತ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ನಾನು ಸಂಜೆ ಸುಮಾರು 4.30ಕ್ಕೆ ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಸಿಎಂ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸರ್ಕಾರಿ ಕೆಲ್ಸ ಕೊಡಿಸ್ತೀನಿಯೆಂದು 40 ಮಹಿಳೆಯರಿಗೆ ಅಂಗನವಾಡಿ ಶಿಕ್ಷಕಿ ಪಂಗನಾಮ

    ಸರ್ಕಾರಿ ಕೆಲ್ಸ ಕೊಡಿಸ್ತೀನಿಯೆಂದು 40 ಮಹಿಳೆಯರಿಗೆ ಅಂಗನವಾಡಿ ಶಿಕ್ಷಕಿ ಪಂಗನಾಮ

    ರಾಯಚೂರು: ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಅದ್ಯಾರು ಬೇಡ ಅಂತಾರೆ. ಎಷ್ಟು ಜನ ಬೇಕಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಇದೇ ಆಸೆಯನ್ನು ಬಂಡವಾಳ ಇಟ್ಕೊಂಡು ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40 ಜನ ಮಹಿಳೆಯರಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ ಹೇಳಿ ನಕಲಿ ಆದೇಶ ಪ್ರತಿ ನೀಡಿ ಟೋಪಿ ಹಾಕಿದ್ದಾಳೆ.

    ರಾಯಚೂರಿನ ಮಂಗಳವಾರಪೇಟೆ ನಿವಾಸಿ ಈರಮ್ಮ ಕೆಲ್ಸ ಕೊಡಿಸೋದಾಗಿ ಹೇಳಿ ಮೋಸ ಮಾಡಿದ ಅಂಗನವಾಡಿ ಶಿಕ್ಷಕಿ. ಈಕೆ ಸುಮಾರು 40 ಜನರಿಗೆ ಪಂಗನಾಮ ಹಾಕಿದ್ದಾಳೆ. ಜೊತೆಗೆ ಸರ್ಕಾರಿ ಉದ್ಯೋಗದ ಆದೇಶ ಪತ್ರವನ್ನೂ ನಕಲಿ ಮಾಡಿ ಯಾಮಾರಿಸಿದ್ದಾಳೆ.

    47 ಲಕ್ಷ ರೂಪಾಯಿ ಜಮಾ ಮಾಡಿಕೊಂಡ ಈರಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಹೆಸರಲ್ಲಿ, ನಕಲಿ ಆದೇಶ ಪತ್ರವನ್ನ ನೀಡಿ ಯಾಮಾರಿಸಿದ್ದಾಳೆ. ಇನ್ನೂ ಕೆಲವರಿಗೆ ಉದ್ಯೋಗ ಕೊಡಿಸ್ತೀನಿ ಅಂತ ಸತಾಯಿಸ್ತಾನೇ ಬಂದಿದ್ದಾಳೆ. ಇದೀಗ ನಕಲಿ ಆದೇಶ ಪತ್ರದ ಅಸಲಿಯತ್ತು ಬಯಲಾಗಿದ್ದು, ವಂಚನೆಗೊಳಗಾದ ಮಹಿಳೆಯರು ಈರಮ್ಮಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಹಣ ಕೇಳಿದ್ರೆ ಈಗಲೂ ದಬಾಯಿಸಿ ಮಾತನಾಡುವ ಈರಮ್ಮ, ಸಿರವಾರ ಪೊಲೀಸ್ ಠಾಣೆಯ ಎಎಸ್‍ಐ ಬಿ.ಡಿ ಖಾದ್ರಿ ನನಗೆ ಮೋಸ ಮಾಡಿದ್ದಾನೆ. ಆತನಿಂದ ನನಗೆ ನ್ಯಾಯ ಕೊಡಿಸಿ ಅಂತ ಉಲ್ಟಾ ಹೊಡೀತಿದ್ದಾಳೆ. ಒಟ್ಟಿನಲ್ಲಿ ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಮೋಸ ಮಾಡುವವರು ಅಲ್ಲಿಯವರೆಗೂ ಇದ್ದೇ ಇರುತ್ತಾರೆ ಅನ್ನೋ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv