ಬೆಂಗಳೂರು: ಸಿಲಿಕಾನ್ ಸಿಟಿಯ ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಸಕ್ರಮಕ್ಕೆ ಸರ್ಕಾರ ಚಾಲನೆ ಕೊಡಲು ರೆಡಿಯಾಗಿದೆ. ಜನವರಿ 28 ರಂದು ಸಿಎಂ ಯಡಿಯೂರಪ್ಪ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಹಾಗಾದ್ರೆ ಏನಿದು ಭರ್ಜರಿ ಗಿಫ್ಟ್ ಎನ್ನುವ ಕುತೂಹಲ ನಿಮಗಿರಬಹುದು. ನಮ್ಗೂ ಗಿಫ್ಟ್ ಸಿಗಬಹುದಾ ಅಂದ್ಕೊಂಡವರು ಈ ಸುದ್ದಿಯನ್ನು ಪೂರ್ಣವಾಗಿ ಓದಿ.
ಇದು ಬೆಂಗಳೂರು ಅಷ್ಟೇ ಅಲ್ಲ, ರಾಜ್ಯದ ಎಲ್ಲ ಕಡೆಗಳಲ್ಲೂ ಯೋಜನೆ ಜಾರಿಗೆ ತಂದಿದೆ ಸರ್ಕಾರ. ಆದ್ರೆ ಮೊದಲ ಹಂತವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 10 ಸಾವಿರ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ ಅಂತಾ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಬಡವರ ಹೆಸರಿಗೆ ಸೈಟು ನೋಂದಣಿ ಮಾಡಿಸಿಕೊಡೋದು ಸರ್ಕಾರದ ನಿರ್ಧಾರವಾಗಿದೆ, ಹಾಗಾಗಿ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 28ರಂದು ಮುಖ್ಯಮಂತ್ರಿ ಯಡಿಯೂರಪ್ಪ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ ಅಂತಾ ಹೇಳಿದ್ರು.

ಏನಿದು ಯೋಜನೆ..? ಯಾರಿಗೆ ಉಪಯೋಗ..?
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನಲ್ಲಿ ಮನೆ ಕಟ್ಟಿಕೊಂಡಿರುವ ಕೆಲವರಿಗೆ ಮಾತ್ರ ಅನುಕೂಲ. 2012 ಜನವರಿ 1ರೊಳಗೆ ಕಟ್ಟಿರುವ 20*30, 30*40 ಅಳತೆಯಲ್ಲಿ ಕಟ್ಟಿರುವ ಮನೆಗಳಿಗೆ ಮಾತ್ರ ನಿವೇಶನ ಹಕ್ಕುಪತ್ರ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳಿಂದ ಪರಿಶೀಲನೆಗೆ ಒಳಪಟ್ಟವರಿಗೆ ಮಾತ್ರ ಲಾಭ.
ರಾಜ್ಯದಲ್ಲಿ ಸಕ್ರಮಕ್ಕೆ 2.53 ಲಕ್ಷ ಅರ್ಜಿ ಬಂದಿದ್ದು, 6,0061 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲೇ 10 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ. ಅಲ್ಲದೆ 1,47,465 ಅರ್ಜಿಗಳು ತಿರಸ್ಕೃತವಾಗಿದ್ದು, 45,546 ಅರ್ಜಿಗಳು ಇನ್ನೂ ಬಾಕಿ ಇವೆ. ಬೆಂಗಳೂರು ನಗರದಲ್ಲಿ 20*30 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗಕ್ಕೆ 2,500 ರೂಪಾಯಿ, ಸಾಮಾನ್ಯ ವರ್ಗಕ್ಕೆ 5 ಸಾವಿರ ರೂಪಾಯಿ, 30*40 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗಕ್ಕೆ 5 ಸಾವಿರ ರೂಪಾಯಿ ಸಾಮಾನ್ಯ ವರ್ಗಕ್ಕೆ 10 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು.



