Tag: Government honor

  • ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಹುಬ್ಬಳ್ಳಿ: ಸೋಮವಾರ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಜರುಗಿತು.

    ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16ರ ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದರು.

    ಕಡಿಮೆ ರಕ್ತದೊತ್ತಡ, ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದಿದ್ದಾರೆ.

    ಹುಬ್ಬಳ್ಳಿಯ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ನಂತರ ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

  • ನಿಗೂಢವಾಗಿ ಮೃತಪಟ್ಟಿದ್ದ ಮಾಗಡಿ ಯೋಧನಿಗೆ ಸರ್ಕಾರಿ ಗೌರವವಿಲ್ಲದ ಅಂತ್ಯಕ್ರಿಯೆ

    ನಿಗೂಢವಾಗಿ ಮೃತಪಟ್ಟಿದ್ದ ಮಾಗಡಿ ಯೋಧನಿಗೆ ಸರ್ಕಾರಿ ಗೌರವವಿಲ್ಲದ ಅಂತ್ಯಕ್ರಿಯೆ

    ರಾಮನಗರ: ಜಮ್ಮುವಿನ ಉಧಂಪುರದ ತಾರಪುರ ಕ್ಯಾಂಪ್‍ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯೋಧ ವೆಂಕಟ ನರಸಿಂಹಮೂರ್ತಿ ಅಂತ್ಯಕ್ರಿಯೆಯು ಅವರ ಹುಟ್ಟೂರು ಮಾಗಡಿಯಲ್ಲಿ ಶುಕ್ರವಾರ ಯಾವುದೇ ಸರ್ಕಾರಿ ಗೌರವವಿಲ್ಲದೇ ನೆರವೇರಿತು.

    ವೆಂಕಟ ನರಸಿಂಹಮೂರ್ತಿ ಅವರ ಪೋಷಕರು ಮಗನ ಮೃತ ದೇಹಕ್ಕಾಗಿ ಮೂರು ದಿನಗಳಿಂದ ಕಾಯುತ್ತಿದ್ದರು. ಸೇನೆಯ ಸಿಬ್ಬಂದಿ ವೆಂಕಟ ಅವರ ಮೃತ ದೇಹವನ್ನು ಗುರುವಾರ ರಾತ್ರಿ ಯೋಧನ ಹುಟ್ಟೂರು ಮಾಗಡಿಯ ಹೊಂಬಾಳಮ್ಮಪೇಟೆಯಲ್ಲಿ ಹಸ್ತಾಂತರಿಸಿದ್ದರು.

    ಹೊಂಬಾಳಮ್ಮನ ಪೇಟೆಯಲ್ಲಿ ರಾತ್ರಿ ಹಾಗೂ ಇಂದು ಯೋಧ ವೆಂಕಟ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಯೋಧನ ಅಂತಿಮ ದರ್ಶನ ಪಡೆದರು. ನಂತರ ವೆಂಕಟ ನರಸಿಂಹಮೂರ್ತಿ ಅವರ ಕುಟುಂಬಸ್ಥರು ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಯೋಧ ವೆಂಕಟ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಆತ್ಮಹತ್ಯೆಯೋ, ಕೊಲೆಯೋ?
    ಯೋಧ ವೆಂಕಟ ನರಸಿಂಹಮೂರ್ತಿ ಜಮ್ಮುವಿನಲ್ಲಿ ಕರ್ತವ್ಯದಲ್ಲಿ ಇದ್ದ ಸಮಯದಲ್ಲಿ ತನ್ನ ಇಬ್ಬರು ಸಹೋದ್ಯೋಗಿಗಳಾದ ಮಹಮ್ಮದ್ ತಸ್ಲೀಮ್ ಮತ್ತು ಸಂಜಯ್ ಠಾಕ್ರೆ ಜೊತೆಗೆ ಜಗಳ ಮಾಡಿಕೊಂಡಿದ್ದರು. ಆದರೆ ಮಾತಿಗೆ ಮಾತು ಬೆಳೆದು, ಅದು ವಿಕೋಪಕ್ಕೆ ತಿರುಗಿ ವೆಂಕಟ ಅವರು ತಮ್ಮ ಸರ್ವೀಸ್ ರಿವಾಲ್ವರ್ ನಿಂದ ಇಬ್ಬರಿಗೂ ಗುಂಡಿಕ್ಕಿದ್ದರು. ಬಳಿಕ ತಾವು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯೋಧ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಗೌರವ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದ್ದಾರೆ.

    ಈ ಘಟನೆ ನಡೆಯುವ ಎರಡು ದಿನಗಳ ಮೊದಲು ತಂದೆಗೆ ಕರೆ ಮಾಡಿದ್ದ ಯೋಧ ವೆಂಕಟ ಅವರು, ನನಗೆ ಇಲ್ಲಿ ತುಂಬಾ ಒತ್ತಡವಿದೆ. ಸಾಕಷ್ಟು ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಅಳಲು ತೊಡಿಕೊಂಡಿದ್ದರು. ಅದಾದ ಬಳಿಕ ವೆಂಕಟ ಅವರ ಮೊಬೈಲ್ ಸ್ವಿಚ್‍ಆಫ್ ಆಗಿತ್ತು. ನಮ್ಮ ಮಗ ಸಹೋದ್ಯೋಗಿಗಳ ಕಿರುಕುಳದಿಂದ ಸಾವನ್ನಪ್ಪಿದಾನೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ವೆಂಕಟ ಅವರ ತಂದೆ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.