Tag: Government Employees

  • ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು

    ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ ರಿಯಾಯಿತಿ ಬಸ್ ಪಾಸ್ ರದ್ದಾಗಿದೆ.

    ಆರ್ಥಿಕ ಹೊರೆಯಿಂದ ಕಂಗಾಲಾಗಿರುವ ಬಿಎಂಟಿಸಿಯಿಂದ ನಷ್ಟ ಕಡಿಮೆ ಮಾಡಲು ರಿಯಾಯಿತಿ ಪಾಸ್ ಅನ್ನು ರದ್ದುಗೊಳಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿರುವ ಬಿಬಿಎಂಪಿ ಸಾರ್ವಜನಿಕರಿಗೆ ನೀಡುವ ಮಾಸಿಕ ಪಾಸ್ ಗಳನ್ನು ಪಡೆಯುವಂತೆ ನೌಕರರಿಗೆ ಸೂಚಿಸಿದೆ. ಬಿಎಂಟಿಸಿಯಿಂದ ಎಲ್ಲಾ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಈ ಸಂಬಂಧ ಪತ್ರ ರವಾನೆಯಾಗಿದೆ.

    2011-2012 ರಿಂದ 2016-17ರವರೆಗಿನ ಅವಧಿಯಲ್ಲಿ ಬಿಎಂಟಿಸಿಗೆ 608 ಕೋಟಿ ರೂ. ನಷ್ಟವಾಗಿದೆ. ಒಟ್ಟು ಆದಾಯದಲ್ಲಿ 27.27% ಹಣ ಡೀಸೆಲ್ ಖರೀದಿಗೆ ಖರ್ಚಾದರೆ 53% ಹಣ ಸಿಬ್ಬಂದಿ ಸಂಬಳಕ್ಕೆ ಹೋಗುತ್ತದೆ. ಬಿಎಂಟಿಸಿಗೆ ವಿಶೇಷವಾಗಿ ಮೆಟ್ರೋ ಸಂಚರಿಸುವ ಮಾರ್ಗಗಳಲ್ಲಿ ಕಡಿಮೆ ಆದಾಯ ಬರುತ್ತಿದೆ.

  • ಕಡ್ಡಾಯ ನಿವೃತ್ತಿ ಘೋಷಣೆ -ಸರ್ಕಾರಿ ನೌಕರರಿಗೆ ಯೋಗಿ ಸರ್ಕಾರದಿಂದ ಶಾಕ್!

    ಕಡ್ಡಾಯ ನಿವೃತ್ತಿ ಘೋಷಣೆ -ಸರ್ಕಾರಿ ನೌಕರರಿಗೆ ಯೋಗಿ ಸರ್ಕಾರದಿಂದ ಶಾಕ್!

    ಲಕ್ನೋ: ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಂಡು ನಿಶ್ಚಿಂತೆಯಾಗಿ ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶ ಸರ್ಕಾರಿ ನೌಕರರಿಗೆ ಸಿಎಂ ಯೋಗಿ ಆದಿತ್ಯನಾಥ್ ಬಹುದೊಡ್ಡ ಶಾಕ್ ನೀಡಿದ್ದಾರೆ.

    ಸಿಎಂ ಯೋಗಿ ಆದಿತ್ಯನಾಥ್‍ರವರು `ಕಡ್ಡಾಯ ನಿವೃತ್ತಿ ಘೋಷಣೆ’ ಆದೇಶವನ್ನು ಜಾರಿಗೊಳಿಸಿದ್ದು, ಈ ಸಂಬಂಧ 50 ವರ್ಷ ದಾಟಿದ ಮತ್ತು ಕಾರ್ಯದಕ್ಷತೆ ತೋರದ ನೌಕರರಿಗೆ ಬಲವಂತದ ನಿವೃತ್ತಿ ನೀಡಲು ಮುಂದಾಗಿದೆ. ಅಲ್ಲದೇ ರಾಜ್ಯದ ಒಟ್ಟು 16 ಲಕ್ಷ ನೌಕರರ ಪೈಕಿ 4 ಲಕ್ಷಕ್ಕೂ ಅಧಿಕ ನೌಕರರ ವೃತ್ತಿ ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತಿದ್ದು, ಈ ಸಂಬಂಧ ಜುಲೈ 31ರ ಒಳಗಾಗಿ ಅಂತಿಮ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮುಕುಲ್ ಸಿಂಘಾಲ್ ರವರು, ಮಾರ್ಚ್ 31, 2018ಕ್ಕೆ 50 ವರ್ಷ ತುಂಬಿದ ನೌಕರರನ್ನು `ಕಾರ್ಯಕ್ಷಮತೆ ಪರೀಕ್ಷೆ’ಗೆ ಒಳಪಡಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಮ್ಮ ಸರ್ಕಾರದಲ್ಲಿ ಭ್ರಷ್ಟ ಹಾಗೂ ಬೇಜವಬ್ದಾರಿಯುತ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇರುವಂತಿಲ್ಲ. ನೌಕರರು ಕಡ್ಡಾಯವಾಗಿ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು, ಸಾರ್ವಜನಿಕರ ಸೇವೆಯಲ್ಲಿ ಯಾವುದೇ ಲೋಪ-ದೋಷ ಕಂಡುಬರಬಾರದು ಹೀಗಾಗಿ ಕಡ್ಡಾಯ ನಿವೃತ್ತಿ ಘೋಷಣೆಗೆ ಆದೇಶ ನೀಡಿದ್ದೇವೆ ಎಂದು ಹೇಳಿದ್ದಾರೆ.

    ಯೋಗಿ ಸರ್ಕಾರದ ನಡೆಯನ್ನು ಖಂಡಿಸಿರುವ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಯಾದವೇಂದ್ರ ಮಿಶ್ರಾರವರು, “ಇದು ನೌಕರರಿಗೆ ಕಿರುಕುಳ ನೀಡುವ ಕ್ರಮವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಸರ್ಕಾರದ ಈ ಕ್ರಮದ ಬಗ್ಗೆ ಚರ್ಚಿಸಲು ಸೋಮವಾರ ಸಭೆ ಕರೆದಿದ್ದೇವೆ. ಸಭೆಯಲ್ಲಿ ಮುಷ್ಕರ, ಪ್ರತಿಭಟನೆ ಸೇರಿದಂತೆ ಹೋರಾಟದ ಹಾದಿಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಶೌಚಾಲಯ ನಿರ್ಮಿಸಿಕೊಳ್ಳದ ಸರ್ಕಾರಿ ನೌಕರರ ಸಂಬಳ ತಡೆಗೆ ಆದೇಶ

    ಶೌಚಾಲಯ ನಿರ್ಮಿಸಿಕೊಳ್ಳದ ಸರ್ಕಾರಿ ನೌಕರರ ಸಂಬಳ ತಡೆಗೆ ಆದೇಶ

    ಶ್ರೀನಗರ: ಬಹಿರ್ದೆಸೆಯ ವಿರುದ್ಧ ಸಮರ ಸಾರಿರುವ ಜಮ್ಮು ಕಾಶ್ಮೀರ ಸರ್ಕಾರ ಕಿಶ್ತ್ವಾರ್ ಜಿಲ್ಲೆಯ ಸುಮಾರು 600 ಸರ್ಕಾರಿ ನೌಕರರು ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡಿಲ್ಲ ಎಂದು ಎಲ್ಲರ ಸಂಬಳವನ್ನು ತಡೆಹಿಡಿಯಲಾಗಿದೆ.

    ಸಹಾಯಕ ಕಮಿಷನರ್ ಅನಿಲ್ ಕುಮಾರ್ ಚಂದೈಲ್ ಅವರ ವರದಿಯಾನುಸಾರ ಪಡ್ಡರ್ ಬ್ಲಾಕ್ ನ 616 ಸರ್ಕಾರಿ ನೌಕರರ ಮನೆಯಲ್ಲಿ ಶೌಚಾಲಯವಿಲ್ಲ. ವರದಿಯಾನುಸಾರ ಜಿಲ್ಲಾ ಅಭಿವೃದ್ಧಿ ಆಯುಕ್ತರಾದ ಅಂಗ್ರೇಜ್ ಸಿಂಗ್ ರಾಣಾ ಅವರು ಸಂಬಳವನ್ನು ತಡೆಯುವಂತೆ ಆದೇಶವನ್ನು ನೀಡಿದ್ದಾರೆ.

    ಚಂದೈಲ್ ಅವರ ವರದಿ ಬಳಿಕ ಬಹಳ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ 71.95% ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ ಎಂದು ರಾಣಾ ತಿಳಿಸಿದರು.

     

    ಕಿಶ್ತ್ವಾರ್ ಜಿಲ್ಲೆಯಲ್ಲಿ 57.23%, ಲದಾಖ್ ನ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆ, ದಕ್ಷಿಣ ಕಾಶ್ಮೀರದ ಶೋಪಿಯನ್ ಮತ್ತು ಶ್ರೀನಗರವನ್ನು ಬಯಲು ಮುಕ್ತ ನಗರಗಳಾಗಿ ಘೋಷಿಸಲಾಗಿದೆ. ಆದರೆ ದಕ್ಷಿಣ ಕಾಶ್ಮೀರದಲ್ಲಿ ಅನಂತ್ ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಏಪ್ರಿಲ್ ಅಂತ್ಯದ ವೇಳೆಗೆ ಬಯಲು ಮುಕ್ತ ನಗರಗಳಾಗಿ ಘೋಷಿಸುವ ಸಾಧ್ಯತೆಗಳಿವೆ.

    ಶೌಚಾಲಯ ನಿರ್ಮಾಣದಲ್ಲಿ ಪುಲ್ವಾಮಾ 98.64%, ಅನಂತ್ ನಾಗ್ 98.43%, ಕುಪ್ವಾರಾ 91.92%, ರಾಜೌರಿ 84.53% ಮತ್ತು 72.95% ಕುಲ್ಗಮ್, ದೋಡಾ 68.26%, ಬರಾಮುಲ್ಲಾ 67.59%, ಬಂಡಿಪೊರಾ 67.44%, ರಂಬನ್ 66.74%, ಸಾಂಬಾ 64.21%, ಜಮ್ಮು 63.93%, ಬಡ್ಗಮ್ 62.99%, ಗಂಡರ್ಬಲ್ 62.20%, ಪೂಂಚ್ 61.45%, ರಿಯಾಸಿ 56.09%, ಉಧಮ್ಪುರ್ 48.41%, ಕಥುವಾ ಜಿಲ್ಲೆಯಲ್ಲಿ 45.69% ರಷ್ಟು ಗುರಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ.

  • ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.

    ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಈ ಕುರಿತು ಇಂದೇ ಆದೇಶ ಹೊರಬೀಳಲಿದೆ. 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೌಕರರ ವೇತನ ಶೇಕಡಾ 30ರಷ್ಟು ಹೆಚ್ಚಳವಾಗಲಿದೆ. ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ಸಿಗಲಿದೆ.

    ವರದಿಯಲ್ಲಿ ಏನು ಇರಬಹುದು?
    1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.

    2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.

    3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಫ್‍ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  • ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ಚಿಕ್ಕಬಳ್ಳಾಪುರ: ಜಿಲ್ಲೆಗೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ದಶಮಾನೋತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ವೇತನದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಲು ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿದೆ.

    ಫೆಬ್ರವರಿ 2, 3 ಹಾಗೂ 4 ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್.ಎಂ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ದಶಮಾನೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಆದರೆ ಈ ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಿಕೊಳ್ಳುತ್ತಿರುವುದರಿಂದ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಕಾರ್ಯಕ್ರಮ ಮಾಡೋಕೆ ಹಣದ ಕೊರತೆ ಇದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ.

    ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷಗಳಾಗಿವೆ. ದಶಮಾನೋತ್ಸವ ಆಚರಣೆಗೆ ಸ್ವತಃ ರಾಜ್ಯ ಸರ್ಕಾರ ಸೂಕ್ತ ಅನುದಾನ ನೀಡಬೇಕಿತ್ತು. ಆದರೆ ಜಿಲ್ಲೆಯಲ್ಲಿ ಪ್ರಭಾವಿ ಮೂರು ಜನ ಕಾಂಗ್ರೆಸ್ ಶಾಸಕರಿದ್ದರೂ ಅನುದಾನ ತರಲು ಸಾಧ್ಯವಾಗಿಲ್ಲ. ಹೀಗಾಗಿ ದಶಮಾನೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ, ಎಲ್ಲಾ ರೀತಿಯ ಸರ್ಕಾರಿ ನೌಕರರ ವೇತನದಲ್ಲಿ ತಲಾ 1000-2000 ರೂ. ಕೊಡಿ ಎಂದು ನೌಕರರ ಸಂಘಗಳ ಜೊತೆ ಸಭೆಗಳನ್ನು ನಡೆಸಿದ್ದಾರೆ.

    ಜಿಲ್ಲೆಯ ಸರ್ಕಾರಿ ನೌಕರರು ಮೊದಲೇ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಇಂಥದೊಂದು ವಿವಾದಾತ್ಮಕ ನಿರ್ಧಾರವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾಧಿಕಾರಿಯ ಒತ್ತಡಕ್ಕೆ ಮಣಿದ ನೌಕರರು ಕೊನೆಗೆ ಒಲ್ಲದ ಮನಸ್ಸಿನಿಂದಲೇ 500 ರೂಪಾಯಿ ನೀಡಲು ಒಪ್ಪಿದ್ದಾರೆ.

    ದಶಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅನುದಾನ ಮಂಜೂರು ಮಾಡಿಸಿಕೊಳ್ಳೊದನ್ನು ಬಿಟ್ಟು ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಿಕೊಳ್ಳಲು ಮುಂದಾಗಿದೆ.

  • ನಮಗೆ 20 ದಿನ ರಜೆ ಬೇಡ, 10 ರಜೆ ಸಾಕು-ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಮನವಿ

    ನಮಗೆ 20 ದಿನ ರಜೆ ಬೇಡ, 10 ರಜೆ ಸಾಕು-ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಮನವಿ

    -ಸಂಜೆ 6 ಗಂಟೆಯವರೆಗೆ ಕೆಲ್ಸ ಮಾಡ್ತೀವಿ

    ಬೆಂಗಳೂರು: ತಮಗೆ ಲಭ್ಯವಿರುವ 20 ದಿನಗಳು ಇರುವ ಸಾರ್ವತ್ರಿಕ ರಜೆಯನ್ನು 10 ದಿನಗಳಿಗೆ ಇಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಘ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.

    ರಜೆ ಬೇಡ ಓಟಿ (ಓವರ್ ಟೈಮ್) ನೀಡಿ ಮತ್ತು ಹೆಚ್ಚಿನ ಅವಧಿ ದುಡಿತಕ್ಕೆ ಹೆಚ್ಚಿನ ಸೌಲಭ್ಯ ನೀಡಿ ಸರ್ಕಾರಿ ನೌಕರರು ಹೇಳಿಕೊಂಡಿದ್ದಾರೆ. 10 ದಿನಗಳು ಇರುವ ಸಾಂದರ್ಭಿಕ ರಜೆಯನ್ನು 5 ದಿನಗಳಿಗೆ ಇಳಿಸಿ, ಜಯಂತಿಗಳ ಆಚರಣೆಗೆ ರಜೆ ಬೇಡ ಬದಲಾಗಿ ಕಚೇರಿಯಲ್ಲಿ ಅವರ ಭಾವಚಿತ್ರ ಇಟ್ಟು ಅವರ ಸ್ಮರಣಾರ್ಥ ಕಾರ್ಯಕ್ರಮ ಮಾಡಿ ಕಚೇರಿ ಕೆಲಸ ಮುಂದುವರೆಸುತ್ತೇವೆ. ಉಳಿದಂತೆ ಬೇರೆ ರಜೆಗಳಿಗೆ ಯಥಾಸ್ಥಿತಿ ಕಾಪಾಡುವಂತೆ 6ನೇ ವೇತನ ಆಯೋಗಕ್ಕೆ ಸಲಹೆ ನೀಡಿದ್ದಾರೆ.

    ಸರ್ಕಾರಿ ಎಲ್ಲಾ ನೌಕರರಿಗೂ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಎಲ್ಲಾ ಕಚೇರಿಗಳಿಗೂ ರಿಯಾಯಿತಿ ದರದ ಕ್ಯಾಂಟೀನ್ ಆರಂಭಿಸಬೇಕು. ಕಚೇರಿಯ ಸಮಯವನ್ನು 9.30 ರಿಂದ 6 ಗಂಟೆಯವರೆಗೆ ವಿಸ್ತರಿಸಿ, ವಾರಕ್ಕೆ ಎರಡು ದಿನ ರಜೆ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.