Tag: Government Bus

  • ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ಪಲ್ಟಿ- 3 ಸಾವು, 20 ಪ್ರಯಾಣಿಕರು ಗಂಭೀರ

    ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ಪಲ್ಟಿ- 3 ಸಾವು, 20 ಪ್ರಯಾಣಿಕರು ಗಂಭೀರ

    ಯಾದಗಿರಿ: ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ನಡಿಹಾಳ ಬಳಿ ನಡೆದಿದೆ.

    ಘಟನೆಯಲ್ಲಿ 20 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕನ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡವರನ್ನು ಶಹಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಹಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಇಂದು ಮಧ್ಯಾಹ್ನ ಶಹಪುರದಿಂದ ಕೆಂಭಾವಿಗೆ ಕಡೆಗೆ ಹೋಗುತಿತ್ತು. ಮಾರ್ಗ ಮಧ್ಯೆ ಏಕಾಏಕಿ ಬಸ್ಸಿನ ಆಕ್ಸಲ್ ಕಟ್ ಆದ ಪರಿಣಾಮ, ಪಲ್ಟಿ ಹೊಡೆದು ಅಪಘಾತಕ್ಕೊಳಗಾಗಿದೆ.

    ಬಸ್ ಪಲ್ಟಿಯಾದ ಪರಿಣಾಮ ಹೊರ ಬರಲಾಗದೇ ಮೂವರು ಪ್ರಯಾಣಿಕರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಹೊರ ಕರೆತಂದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಎಸ್‍ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಸದ್ಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಲ್ಲೇ ಓಡಾಡಿ – ಉಡುಪಿ ಡಿಸಿ ಹೆಪ್ಸಿಬಾ ರಾಣಿ ಆದೇಶ

    ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಲ್ಲೇ ಓಡಾಡಿ – ಉಡುಪಿ ಡಿಸಿ ಹೆಪ್ಸಿಬಾ ರಾಣಿ ಆದೇಶ

    ಉಡುಪಿ: ಪರಿಸರ ಪ್ರೇಮಿಯಾದ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಿನಲ್ಲಿ ಓಡಾಡಬೇಕು ಎಂದು ಹೊಸ ಆದೇಶವನ್ನು ನೀಡಿದ್ದಾರೆ.

    ವರ್ಷದಿಂದ ವರ್ಷಕ್ಕೆ ಜನರಲ್ಲಿ ಪರಿಸರದ ಕಾಳಜಿ ಜಾಸ್ತಿಯಾಗುತ್ತಿದೆ. ಆದರೆ ಪರಿಸರ ಮಾಲಿನ್ಯ ಮಾತ್ರ ಕಮ್ಮಿ ಆಗುತ್ತಿಲ್ಲ. ನಗರಗಳಲ್ಲಿ ವಾಹನ ದಟ್ಟಣೆಯೇ ಇದಕ್ಕೆ ನೇರ ಕಾರಣ, ಹೇಗಾದರೂ ಮಾಡಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಉಡುಪಿ ಡಿಸಿ ಪಣ ತೊಟ್ಟಿದ್ದಾರೆ.

     

    ಪ್ರತಿ ಗುರುವಾರ ಅಧಿಕಾರಿಗಳು ಸರ್ಕಾರಿ ವಾಹನ ಉಪಯೋಗಿಸದೆ, ಬಸ್‍ನಲ್ಲಿ ಓಡಾಡೋ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇದನ್ನು ಪಾಲಿಸುತ್ತಿದ್ದಾರೆ. ಪ್ರತೀ ಗುರುವಾರ ಬಸ್ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತದೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಸರ್ಕಾರಿ ನೌಕರರರು ಈ ಬಸ್ಸಿಗಾಗಿ ಕಾಯುತ್ತಿರಬೇಕು. ಬಸ್ ಬಂದ ಕೂಡಲೇ ಹತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಸೇರಬೇಕು ಎಂದು ಆದೇಶ ನೀಡಿದ್ದಾರೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಅಟೋಮ್ಯಾಟಿಕ್ ಆಗಿ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದನೇ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಒಂದೇ ಸಂಸ್ಥೆಗಳಲ್ಲಿ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಜನ ಒಂದು ವಾಹನದಲ್ಲಿ ಹೋದರೆ ಅಷ್ಟೂ ವಾಹನ ಓಡಾಟ ಇರಲ್ಲ ಮತ್ತು ಇಂಧನ ಕೂಡಾ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಡಿಸಿ ಸದ್ಯ ವಾರ್ತಾ ಇಲಾಖೆಯ ಬಸ್ಸನ್ನು ಗುರುವಾರ ಎರಡು ಟ್ರಿಪ್ ಓಡಿಸೋಕೆ ಆದೇಶ ಮಾಡಿದ್ದಾರೆ. ಮುಂದೆ ಸರ್ಕಾರಿ ಬಸ್ಸು ಓಡಾಡಲಿದೆಯಂತೆ. ಪ್ರತಿಯೊಬ್ಬರು ಈ ರೀತಿಯ ನಿರ್ಧಾರ ಮಾಡಿದರೆ ನಿಜವಾದ ಪರಿಸರ ರಕ್ಷಣೆ ಮಾಡಬಹುದು. ಪರಿಸರ ನಾಶ ಕಡಿಮೆ ಮಾಡಿ ಪರಿಸರ ರಕ್ಷಣೆ ಮಾಡುವ ಈ ಯೋಜನೆಯ ರಿಸಲ್ಟ್ ಪಾಸಿಟಿವ್ ಆಗಿ ಇರಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.

  • ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

    ಬೇರೆ ರೂಟ್‍ಗೆ ಹೋಗು ಅಂದಿದ್ದಕ್ಕೆ ಬಡಿದಾಡಿದ ಸಾರಿಗೆ ಸಿಬ್ಬಂದಿ!

    ಹಾವೇರಿ: ವಾಯುವ್ಯ ಸಾರಿಗೆ ಬಸ್ ಕಂಟ್ರೋಲರ್ ಮತ್ತು ಕಂಡಕ್ಟರ್ ನಡುವೆ ಮಾತಿಗೆ ಮಾತು ಬೆಳೆದು ಬಸ್ ನಿಲ್ದಾಣದಲ್ಲಿಯೇ ಇಬ್ಬರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

    ಶಿಗ್ಗಾಂವಿ ಬಸ್ ನಿಲ್ದಾಣದ ಕಂಟ್ರೋಲರ್ ಎಂ.ಎನ್.ಶಿರಗುಪ್ಪಿ ಮತ್ತು ಕಂಡಕ್ಟರ್ ಶಂಕರಪ್ಪ ನಡುವೆ ಗಲಾಟೆ ನಡೆದಿದೆ. ಅಲ್ಲದೆ ಇಬ್ಬರು ಹೊಡೆದಾಡುವುದನ್ನ ಬಿಡಿಸಲು ಜನರು ಹರಸಾಹಸವನ್ನೇ ಪಟ್ಟಿದ್ದಾರೆ. ಬೇರೆ ರೂಟ್‍ಗೆ ಡ್ಯೂಟಿಗೆ ಹೋಗುವಂತೆ ಕಂಟ್ರೋಲರ್ ನಿರ್ವಾಹಕನಿಗೆ ಹೇಳಿದ್ದಕ್ಕೆ ಈ ಹೊಡೆದಾಟ ನಡೆದಿದೆ. ಮೊದಲು ಬರೀ ಮಾತಿನಿಂದ ಶುರುವಾದ ಜಗಳ ಕೊನೆಗೆ ಇಬ್ಬರೂ ಕೈ ಕೈ ಹಿಡಿದುಕೊಂಡು ಹೊಡೆದಾಡುವ ಮಟ್ಟಿಗೆ ತಲುಪಿದೆ.

    ನಿರ್ವಾಹಕನಿಗೆ ಹುಲಗೂರು ಕಡೆ ಭಾಗದಲ್ಲಿ ಜನರು ಹೆಚ್ಚಾಗಿದ್ದಾರೆ, ಆ ರೂಟ್‍ಗೆ ಹೋಗು ಎಂದು ಕಂಟ್ರೋಲರ್ ಹೇಳಿದ್ದಾರೆ. ಆದರೆ ನಿರ್ವಾಹಕ ಈ ಮಾತಿಗೆ ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೊನೆಗೆ ಸ್ಥಳೀಯರು ಹಾಗೂ ಪೊಲೀಸರ ಗಲಾಟೆಯನ್ನು ಶಾಂತಗೊಳಿಸಿದ್ದಾರೆ. ಅಲ್ಲದೆ ಡಿಪೋ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಲು ಕಂಟ್ರೋಲರ್ ಮುಂದಾಗಿದ್ದಾರೆ ಎನ್ನಲಾಗಿದೆ.

  • ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವ ಮೆಕ್ಯಾನಿಕಲ್ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಮಾಡುವ ಶಿಕ್ಷೆ ಕೊಟ್ಟ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೌದು. ಸಾರಿಗೆ ಇಲಾಖೆ ಅಧಿಕಾರಿಗಳ ಅಮಾನುಷ ವರ್ತನೆಯಿಂದ ಮೆಕ್ಯಾನಿಕಲ್ ಸಿಬ್ಬಂದಿ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ ಅನುಭವಿಸಿದ ಘಟನೆ ಗುರುವಾರ ನಡೆದಿದೆ. ಬಳ್ಳಾರಿಯ 2ಡಿಪೋ ಘಟಕದಲ್ಲಿ ನಿನ್ನೆ 10 ಕ್ಕೂ ಹೆಚ್ಚು ಸಾರಿಗೆ ಮೆಕ್ಯಾನಿಕಲ್ ಸಿಬ್ಬಂದಿ ಡಿಪೋದಲ್ಲಿನ ಡ್ರೈನೇಜ್ ಕ್ಲೀನ್ ಮಾಡಿದ್ದಾರೆ.

    ಸ್ವತಃ ಸಾರಿಗೆ ಡಿಸಿ ಆದೇಶದ ಮೇರೆಗೆ ಡಿಎಂಇ ಅಧಿಕಾರಿಯೇ ಮೆಕ್ಯಾನಿಕಲ್ ಗಳನ್ನು ಮುಂದಿರಿಸಿಕೊಂಡು ಡ್ರೈನೇಜ್ ಅನ್ನು ಕ್ಲೀನ್ ಮಾಡಿಸಿದ್ದಾರೆ. ಡ್ರೈನೇಜ್ ಕ್ಲೀನ್ ಮಾಡಲು ನಿರಾಕರಿಸಿದಸಿಬ್ಬಂದಿಗೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅನಿವಾರ್ಯವಾಗಿ ಕ್ಲೀನಿಂಗ್ ಮಾಡಿದ್ದಾರೆ.

    ಸಾರಿಗೆ ಸಿಬ್ಬಂದಿಗೆ ಡ್ರೈನೇಜ್ ಕ್ಲೀನ್ ಮಾಡೋ ಕೆಲಸ ಮಾಡಿಸಿದ್ದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಡ್ರೈನೇಜ್ ಕ್ಲೀನಿಂಗ್ ನ್ನು ಹೊರಗಿನವರಿಗೆ ವಹಿಸಿದ್ರೆ 25 ಸಾವಿರ ರೂಪಾಯಿ ಖರ್ಚಾಗುತ್ತೆ ಅನ್ನೋ ಕಾರಣದಿಂದ ಈ ರೀತಿಯಾಗಿ ಸಿಬ್ಬಂದಿಗೆ ಶಿಕ್ಷೆ ನೀಡಿರುವುದಾಗಿ ತಿಳಿದುಬಂದಿದೆ.

  • ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ: 30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಹಾಗೆಯೆ ಗ್ರಾಮಸ್ಥರು ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೆ ಅಲ್ಲದೆ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚಾರ ನಡೆಸುತ್ತಿದೆ.

    ಈ ನಡುವೆ ಗ್ರಾಮಸ್ಥರಲ್ಲಿ ಇನ್ನೂ ದುರಂತದ ಭಯದ ಛಾಯೆ ಹಾಗೆ ಉಳಿದಿದೆ. ಆದರಿಂದ ಇದೇ ತಿಂಗಳ 21ಕ್ಕೆ ದುರಂತ ನಡೆದ ನಾಲೆಯ ಬಳಿ ಶಾಂತಿ ಹೋಮ ನಡೆಸಲು ಕನಗನಮರಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು  ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಗರ ಸಾರಿಗೆಯ ಇಬ್ಬರು ನಿರ್ವಾಹಕಿಯರು ಪಾಳಿಯ ವಿಷಯಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿಕೊಂಡ ಮಹಿಳಾ ಕಂಡಕ್ಟರ್‌ಗಳ ಈ ಬೀದಿ ರಂಪಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ಎರಡು ಬಸ್ಸುಗಳಲ್ಲಿ ಇದ್ದ ಪ್ರಯಾಣಿಕರು ಯಾಕಾದರೂ ಈ ಸರ್ಕಾರಿ ಬಸ್ ಏರಿದೆ ಅಂತ ಕಿಡಿಕಾರಿದ್ದಾರೆ. ನಿರ್ವಾಹಕಿಯರ ಹಾದಿ ರಂಪಾಟ ನೋಡಿದ ಮೇಲಾಧಿಕಾರಿಗಳು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=efo0zDEVT-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರೈಲ್ವೇ ಹಳಿ ಮೇಲೆ ನಿಂತಿದ್ದು, ಈ ವೇಳೆ ಗೇಟ್‍ಮನ್ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈಲು ಬರುವ ವೇಳೆ ಮುಚ್ಚಲಾಗಿತ್ತು. ಇದೇ ಮಾರ್ಗದಲ್ಲಿ ಬಂದ 40 ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಬಸ್ಸು ಬ್ರೇಕ್ ಫೇಲ್ ಆಗಿ ರೈಲ್ವೇ ಗೇಟಿಗೆ ಡಿಕ್ಕಿ ಹೊಡೆದು ಬಳಿಕ ಹಳಿ ಮೇಲೆ ನಿಂತಿದೆ. ಇದೇ ವೇಳೆ ರೈಲು ಬರುತ್ತಿರುವುದನ್ನು ಕಂಡ ಗೇಟ್‍ಮನ್ ತಕ್ಷಣ ರೈಲ್ವೇ ಪೈಲಟ್‍ಗೆ ಕೆಂಪು ಬಾವುಟ ತೋರಿಸಿ ತಡೆದಿದ್ದಾರೆ. ಇದರಿಂದ ಬಸ್ಸಿನಲ್ಲಿದ್ದ ಅಷ್ಟು ಪ್ರಯಾಣಿಕರ ಜೀವ ಉಳಿದಿದೆ.

    ರೈಲು ಬರುವುದನ್ನು ಕಂಡು ಕರ್ತವ್ಯ ಪ್ರಜ್ಞೆಯನ್ನು ತೋರಿದ ರೈಲ್ವೇ ಗೇಟ್‍ಮನ್ ಕಾರ್ಯಕ್ಕೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸರಿಯಾಗಿ ಬಸ್ ನಿರ್ವಹಣೆ ಮಾಡದೇ ಅವಘಡಕ್ಕೆ ಕಾರಣವಾಗುತ್ತಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಸರ್ಕಾರಿ ಬಸ್ ಡ್ರೈವರ್ ಮೇಲೆ ಆಟೋ ಚಾಲಕರಿಂದ ಹಲ್ಲೆ

    ಸರ್ಕಾರಿ ಬಸ್ ಡ್ರೈವರ್ ಮೇಲೆ ಆಟೋ ಚಾಲಕರಿಂದ ಹಲ್ಲೆ

    ಚಿತ್ರದುರ್ಗ: ಆಟೋ ಚಾಲಕರಿಬ್ಬರು ಆಟೋ ಅಡ್ಡ ನಿಲ್ಲಿಸಿ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಐಯುಡಿಪಿ ಬಡಾವಣೆಯ 10ನೇ ಅಡ್ಡರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುತ್ತಿದ್ದ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿದರೆಂದು ಆಕ್ರೋಶಗೊಂಡ ರಾಜು ಹಾಗು ರವಿ ಎಂಬ ಆಟೋ ಚಾಲಕರು ಆಟೋವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ ಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ನಗರ ಸಾರಿಗೆ ಬಸ್ ಚಾಲಕ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಪರಸ್ಪರ ಮಾತು ಬೆಳೆದು ರಸ್ತೆ ಮಧ್ಯದಲ್ಲಿಯೇ ಒಬ್ಬರ ಕುತ್ತಿಗೆ ಒಬ್ಬರು ಹಿಡಿದು ಕುಸ್ತಿಯಾಡಿದ್ದಾರೆ. ಆಗ ಖಾಕಿಗಳ ಜಗಳ ಬಿಡಿಸಲು ಘಟನಾ ಸ್ಥಳದಲ್ಲಿದ್ದ ಹಿರಿಯ ನಾಗರಿಕರು ಮುಂದಾದರು ಕೂಡ ಪ್ರಯೋಜನವಾಗಲಿಲ್ಲ. ಹೀಗಾಗಿ ಉಳಿದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.

    ಕಳೆದ ಒಂದು ವರ್ಷದ ಹಿಂದೆಯಷ್ಟೇ ನಗರ ಸಾರಿಗೆ ಚಿತ್ರದುರ್ಗದಲ್ಲಿ ಸಂಚಾರ ಆರಂಭಿಸಿರುವುದು ಆಟೋ ಚಾಲಕರಿಗೆ ಇದು ನುಂಗಲಾರದ ತುತ್ತಾಗಿದೆ. ಹೀಗಾಗಿ ಚಿತ್ರದುರ್ಗದ ಹೊರ ವಲಯದಲ್ಲಿರೋ ಐಯುಡಿಪಿ ಬಡಾವಣೆಯಲ್ಲಿ ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದೆ ಅಂತ ನಗರ ಸಾರಿಗೆ ಚಾಲಕ ಲಕ್ಷ್ಮಣ್ ಆರೋಪಿಸಿದ್ದಾರೆ. ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿರೋ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

  • ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಿತ್ರದುರ್ಗ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿಯೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಕುಷ್ಟಗಿಗೆ ಹೋಗುವ ಕೆಎ28ಈ2194 ಬಸ್ಸಿನಲ್ಲಿ ತೆರಳುತ್ತಿದ್ದ ಹನುಮವ್ವ (21) ಎಂಬವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿ ಸಮೇತ ಸರ್ಕಾರಿ ಬಸ್‍ನಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಗರಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಪ್ರಯಾಣ ಮಾಡುತ್ತಿದ್ದಾಗ ಚಿತ್ರದುರ್ಗದಲ್ಲಿ ಹನುಮವ್ವ ಅವರಿಗೆ ಹೆರಿಗೆನೋವು ಕಾಣಿಸಿಕೊಂಡಿದೆ. ತಕ್ಷಣ ಸಹಪ್ರಯಾಣಿಕರು ಚಾಲಕನಿಗೆ ವಿಷಯ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ ಹನುಮವ್ವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅವಧಿಗೂ ಮುನ್ನವೇ ಅಂದರೆ 7 ತಿಂಗಳಿಗೆ ಮಗು ಜನಿಸಿದ್ದು, ಮಗು ಸುಮಾರು 759 ಗ್ರಾಂ ತೂಕವಿದೆ. ಆದ್ದರಿಂದ ಮಗು ಸ್ಥಿತಿ ಚಿಂತಾಜನಕವಾಗಿದೆ.

    ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಎನ್‍ಐಸಿಯು ವಾರ್ಡನಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದ್ದು, ತಾಯಿ ಹನುಮವ್ವ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.