Tag: Government Bus

  • ಸರ್ಕಾರಿ ಬಸ್ಸಿಗೆ ಶಾಸಕ ವಿರೂಪಾಕ್ಷಪ್ಪ ಪುತ್ರನ ಕಾರು ಡಿಕ್ಕಿ

    ಸರ್ಕಾರಿ ಬಸ್ಸಿಗೆ ಶಾಸಕ ವಿರೂಪಾಕ್ಷಪ್ಪ ಪುತ್ರನ ಕಾರು ಡಿಕ್ಕಿ

    ಹಾವೇರಿ: ಜಿಲ್ಲೆ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪನವರ ಪುತ್ರ ಯುವರಾಜ ಬಳ್ಳಾರಿ ಚಲಾಯಿಸುತ್ತಿದ್ದ ಕಾರ್ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಆದರೆ ಕಾರಿನ ಮುಂಭಾಗ ಹಾಗೂ ಬಸ್ಸಿನ ಹಿಂಭಾಗ ಜಖಂ ಆಗಿದೆ.

    ವಿರೂಪಾಕ್ಷಪ್ಪನವರ ಪುತ್ರ ಯುವರಾಜ, ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಕಾರಿನಿಂದ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆಯಲಾಗಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಬೀದರ್: ಕಾರಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ಘಟನೆ ಬೀದರಿನ ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ನಡೆದಿದೆ.

    ಸುಮಾರು 27 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ದುಬಲಗುಂಡಿ ಕ್ರಾಸಿನ ಬಳಿ ಕಾರೊಂದು ಅಡ್ಡ ಬಂದಿದೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾರೆ. ಈ ಕಾರಣದಿಂದ ಬಸ್ ರಸ್ತೆಯ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿಗೆ ಸಣ್ಣ ಪುಟ್ಟಗಾಯಗಳು ಆಗಿವೆ. ಆದರೆ ಅದೃಷ್ಟವಾಶತ್ ಯಾವುದೇ ಸಾವು ಸಂಭವಿಸಿಲ್ಲ. ಗಾಯಗೊಂಡ ಎಲ್ಲರನ್ನು ಹುಮನಾಬಾದ್ ಹಾಗೂ ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಾಜಶೇಖರ್ ಪಾಟೀಲ್ ಬಂದು ಗಾಯಗೊಂಡವರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರುಳಿದ ಬಸ್ – ವಿದ್ಯಾರ್ಥಿನಿ ತಲೆ ಅಪ್ಪಚ್ಚಿ

    ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರುಳಿದ ಬಸ್ – ವಿದ್ಯಾರ್ಥಿನಿ ತಲೆ ಅಪ್ಪಚ್ಚಿ

    – 25ಕ್ಕೂ ಅಧಿಕ ಜನರಿಗೆ ಗಾಯ

    ಗದಗ: ಸ್ಟೇರಿಂಗ್ ಕಟ್ ಆಗಿ ಸಾರಿಗೆ ಬಸ್ ಕಂದಕಕ್ಕೆ ಉರುಳಿದ್ದು, ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಕ್ರಾಸ್ ಬಳಿ ನಡೆದಿದೆ.

    ಈ ದುರ್ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿದೆ. ಶಾಲೆ ಮುಗಿಸಿಕೊಂಡು ಊರಿಗೆ ಹೊರಟಿದ್ದ 15 ವರ್ಷದ ಜಲ್ಲಿಗೇರಿ ಗ್ರಾಮದ ವಿದ್ಯಾರ್ಥಿನಿ ವಿದ್ಯಾ ಡೊಂಕಬಳ್ಳಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 25ಕ್ಕೂ ಅಧಿಕ ಗಾಯಾಳುಗಳನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿರಹಟ್ಟಿಯಿಂದ ಮುಂಡರಗಿ ಹೊರಟಿದ್ದ ಬಸ್ ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಆಗ ರಸ್ತೆಯಿಂದ ಕಂದಕಕ್ಕೆ ಬಸ್ ನುಗಿದ್ದು, ಈ ಅಪಘಾತದಲ್ಲಿ ಚಾಲಕ ಶಿವಾನಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿತ್ರದುರ್ಗ ಡಿಸಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ

    ಚಿತ್ರದುರ್ಗ ಡಿಸಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ

    ಚಿತ್ರದುರ್ಗ: ಸಭೆಯೊಂದರಲ್ಲಿ ಭಾಗಿಯಾಗಲು ಚಿತ್ರದುರ್ಗದಿಂದ ಹೊಳಲ್ಕೆರೆಗೆ ತೆರಳುತ್ತಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕಾರಿಗೆ ಹಸುವೊಂದು ಅಡ್ಡ ಬಂದ ಪರಿಣಾಮ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಡಿಸಿ ವಿನೋತ್ ಪ್ರಿಯಾ, ಚಾಲಕ ಮನ್ಸೂರ್ ಹಾಗೂ ಗನ್ ಮ್ಯಾನ್ ನವೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯ ಬಳಿಕ ಬಸ್ ಚಾಲಕ ಪೊಲೀಸರ ವಶದಲ್ಲಿದ್ದು, ಕಾರಿನ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕೈ ಬೆರಳಿಗೂ ಚಿಕ್ಕ ಗಾಯವಾಗಿದ್ದು, ಚಿಕಿತ್ಸೆ ಬಳಿಕ ಬೇರೆ ಕಾರಿನಲ್ಲಿ ಡಿಸಿ ಚಿತ್ರದುರ್ಗಕ್ಕೆ ವಾಪಾಸ್ ತೆರಳಿದ್ದಾರೆ.

    ಈ ಘಟನೆ ಚಿತ್ರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ಚಿಕ್ಕಮಗಳೂರು: ದತ್ತಪೀಠಕ್ಕೆ ಸರ್ಕಾರಿ ಬಸ್ ಬಿಡಬೇಕೆಂಬ ಸ್ಥಳೀಯರು ಹಾಗೂ ಪ್ರವಾಸಿಗರ ಬಹುದಿನದ ಬೇಡಿಕೆ ಕೊನೆಗೂ ಈಡೇರಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ ಚಿಕ್ಕಮಗಳೂರಿನಿಂದ ದತ್ತಪೀಠ ಬಸ್ ಸೌಲಭ್ಯ ಇರಲಿಲ್ಲ. ಈ ಭಾಗದ ಜನ ಹಾಗೂ ಪ್ರವಾಸಿಗರು ಈ ಭಾಗಕ್ಕೆ ಬಸ್ ಬಿಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕಿರಿದಾದ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಸರ್ಕಾರ ಬಸ್ ಸೌಲಭ್ಯ ಕಲ್ಪಿಸಿರಲಿಲ್ಲ.

    ಗಿರಿ ಭಾಗದ ಅತ್ತಿಗುಂಡಿ, ಪಂಡರವಳ್ಳಿ, ಎನ್‍ಎಂಡಿಸಿ, ಬ್ಯಾಗದಹಳ್ಳಿ, ಮಹಲ್, ತಿಪ್ಪನಹಳ್ಳಿ ಎಸ್ಟೇಟ್ ಸೇರಿದಂತೆ ಹಲವು ಗ್ರಾಮದ ಜನ ಆಗೊಮ್ಮೆ-ಈಗೊಮ್ಮೆ ಬರುವ ಖಾಸಗಿ ಬಸ್ ಹಾಗೂ ಆಟೋ, ಜೀಪ್ ಗಳನ್ನೇ ಆಶ್ರಯಿಸಿದ್ದರು. ದೈನಂದಿನ ಕೆಲಸಕ್ಕೆ ನಗರ ಪ್ರದೇಶಗಳಿಗೆ ಬರುವ ಈ ಭಾಗದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜಿಗೆ ಬರುವ ಮಕ್ಕಳು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದರು. ಆದ್ದರಿಂದ ಈ ಭಾಗದ ಜನ ಬಸ್‍ಗಾಗಿ ಸರ್ಕಾರಕ್ಕೆ ಹತ್ತಾರು ಮನವಿ ಸಲ್ಲಿಸಿದ್ದರು. ದತ್ತಪೀಠದ ಮಾರ್ಗದಲ್ಲಿ ಕಿರಿದಾಗಿದ್ದ ರಸ್ತೆಯನ್ನು ಸರ್ಕಾರ ಅಗಲೀಕರಣ ಮಾಡಿದ್ದು, ಈಗ ದತ್ತಪೀಠಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದು ಸ್ಥಳೀಯರಲ್ಲಿ ಸಂತಸ ಮೂಡಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸಂಚರಿಸುವ ಬಸ್ಸಿಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದ್ದಾರೆ.

    ತಮ್ಮ ಮಾರ್ಗಕ್ಕೆ ಬಸ್ ಬಂದ ಖುಷಿಗೆ ಈ ಮಾರ್ಗದ ಗ್ರಾಮಸ್ಥರೆಲ್ಲಾ ಬಸ್ಸಿಗೆ ಪೂಜೆ ಮಾಡಿ ಸ್ವಾಗತಿಸಿಕೊಂಡಿದ್ದು, ಬಳಿಕ ದತ್ತಪೀಠದಲ್ಲೂ ಪೂಜೆ ಸಲ್ಲಿಸಲಾಗಿದೆ. ತಮ್ಮ ಮಾರ್ಗಕ್ಕೆ ಬಸ್ ಬಂದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೇ ಹೆಚ್ಚಿದ್ದರು. ಅವರ ನಗರ ಪ್ರದೇಶಕ್ಕೆ ಬರಬೇಕಂದರೆ ಖಾಸಗಿ ಜೀಪ್, ಆಟೋಗಳಿಗೆ ಅವರು ಕೇಳಿದಷ್ಟು ಹಣವನ್ನು ನೀಡಬೇಕಿತ್ತು. ಈಗ ಸರ್ಕಾರ ಬಸ್ ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.

  • ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮೈಸೂರು: ಸರ್ಕಾರಿ ಬಸ್ ಚಾಲಕನ ಬೇಜವಾಬ್ದಾರಿತನದಿಂದ ಮಗಳನ್ನು ನೋಡಲು ಹಾಸ್ಟೆಲ್‍ಗೆ ಹೋಗುತ್ತಿದ್ದ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮುದ್ದಹಳ್ಳಿ ಸಮೀಪದ ಕಡುಬಿನ ಕಟ್ಟೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಚನ್ನಪಟ್ಟಣ ಗ್ರಾಮದ ಮಹಿಳೆ ಭಾಗ್ಯಮ್ಮ (30) ಮೃತ ದುರ್ದೈವಿ. ಕಡುಬಿನ ಕಟ್ಟೆ ಗೇಟ್ ಬಳಿಯಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳನ್ನು ಭೇಟಿ ಮಾಡಲು ಮೊರಾರ್ಜಿ ವಸತಿ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಭಾಗ್ಯಮ್ಮ ಸಂಪೂರ್ಣವಾಗಿ ಇಳಿಯುವ ಮುನ್ನವೇ ಚಾಲಕ ಬಸ್ ಚಲಾಯಿಸಿದ್ದಾನೆ. ಇದರಿಂದ ಭಾಗ್ಯಮ್ಮ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದ ಪರಿಣಾಮ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡಿನ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.

  • ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಿರುವನಂತಪುರಂ: ತಡರಾತ್ರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿಕೊಂಡು ಕಾದು ಕುಳಿತ ಬಸ್ ಕಂಡಕ್ಟರ್ ಮತ್ತು ಡ್ರೈವರ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಇತ್ತೀಚಿಗೆ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಇದರ ಬೆನ್ನಲ್ಲೇ ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ಓರ್ವ ವಿದ್ಯಾರ್ಥಿನಿಗೆ ಮಾಡಿರುವ ಸಹಾಯಕ್ಕೆ ಎಲ್ಲರೂ ಮೆಚ್ಚಿಕೊಂಡಾಡಿದ್ದಾರೆ.

    ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ಕೆಲಸದ ನಿಮಿತ್ತ ಕಳೆದ ಮಂಗಳವಾರ ಸರ್ಕಾರಿ ಬಸ್ ನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ. ಈ ವೇಳೆ ಅವಳು ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ಬರುವುದರೊಳಗೆ ರಾತ್ರಿ 11 ಗಂಟೆಯಾಗಿದೆ. ಆ ದಿನ ಅಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಬಳಿಯಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

    ಈ ವೇಳೆ ಅಲ್ಲಿ ಎಲ್ಸಿನಾ ಒಬ್ಬಳೇ ಆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಜನರೇ ಇಲ್ಲದ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್ ಮತ್ತು ಕಂಡಕ್ಟರ್ ಅದೇ ನಿಲ್ದಾಣದಲ್ಲಿ ಬಸ್ ಸಿಲ್ಲಿಸಿಕೊಂಡು ಎಲ್ಸಿನಾಳನ್ನು ಕರೆದುಕೊಂಡು ಹೋಗಲು ಅವಳ ಸಂಬಂಧಿ ಬರುವವರೆಗೂ ಕಾಯ್ದಿದ್ದಾರೆ. ಇದಕ್ಕೆ ಬಸ್‍ನಲ್ಲಿ ಇದ್ದ ಸಹ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಕೆಲ ಸಮಯದ ನಂತರ ಎಲ್ಸಿನಾ ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು ಅವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡೆನ್ನಿಸ್ ಕ್ಸೇವಿಯರ್ ಅವರು ರಾತ್ರಿ ವೇಳೆ ವಿದ್ಯಾರ್ಥಿನಿಯ ಭದ್ರತೆಯ ಬಗ್ಗೆ ತೋರಿದ ಕಾಳಜಿಗೆ ಮತ್ತು ಸಹ ಪ್ರಯಾಣಿಕರ ತಾಳ್ಮೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಟ್ಟಾಯಂ ಜಿಲ್ಲೆಯ ಪುಂಜಾರ್ ತಾಲೂಕಿನ ಶಾಸಕರಾದ ಪಿ.ಸಿ. ಜಾರ್ಜ್ ಅವರು ಶಜುದ್ದೀನ್ ಮತ್ತು ಕ್ಸೇವಿಯರ್ ಅವರನ್ನು ಅಭಿನಂದಿಸಿದ್ದಾರೆ.

  • ಕನಸುಗಳನ್ನು ಹೊತ್ತು ಬೆಂಗ್ಳೂರಿಗೆ ಬರ್ತಿದ್ದವ ಶವವಾದ

    ಕನಸುಗಳನ್ನು ಹೊತ್ತು ಬೆಂಗ್ಳೂರಿಗೆ ಬರ್ತಿದ್ದವ ಶವವಾದ

    ಹಾಸನ: ಕನಸುಗಳನ್ನು ಹೊತ್ತು ಹೊಸ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಿದ್ದ ಬಂಟ್ವಾಳದ ಯುವಕ ತಡರಾತ್ರಿ ಹಾಸನದ ಬಳಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯಾವಳಿಗಳು ಬೆಚ್ಚಿಬೀಳಿಸುವಂತಿದೆ.

    ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಭಿಷೇಕ್(29) ಅವರಿಗೆ ಬೆಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಅವರು ಭಾನುವಾರ ರಾತ್ರಿ ಮಾಣಿಯಿಂದ ಸಾರಿಗೆ ಬಸ್ ಹತ್ತಿದ್ದರು. ಬೆಳಗ್ಗೆ ಹೊಸ ಕೆಲಸಕ್ಕೆ ಹೋಗುವ ಖುಷಿಯಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ದುರಾದೃಷ್ಟವಶಾತ್ ತಡರಾತ್ರಿ ಅವರು ಜಿಲ್ಲೆಯ ಚನ್ನರಾಯಪಟ್ಟಣದ ಹಿರೀಸಾವೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಬೆಂಗಳೂರಿನಲ್ಲಿಯೇ ಅಭಿಷೇಕ್ ಕುಟುಂಬ ನೆಲೆಸಿತ್ತು. ಆದರೆ ಸಂಬಂಧಿಯ ಮದುವೆಗೆಂದು ಅಭಿಷೇಕ್ ಹಾಗೂ ಅವರ ಕುಟುಂಬ ಮಾಣಿಗೆ ತೆರೆಳಿತ್ತು. ಹೀಗೆ ಮದುವೆ ಮುಗಿಸಿಕೊಂಡು ಅಭಿಷೇಕ್ ಹಾಗೂ ಅವರ ತಮ್ಮ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಬಸ್ ಅಪಘಾತಕ್ಕೀಡಾಗಿ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ತಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಮಂಗಳೂರು ಕಡೆಯಿಂದ ಬೆಂಗಳೂರಿನ ಕಡೆಗೆ ಸಾರಿಗೆ ಬಸ್ಸು ವೇಗದಿಂದ ಬರುತ್ತಿತ್ತು. ಈ ವೇಳೆ ಹಿರಿಸಾವೆ ಗ್ರಾಮದ ಬಸ್ ನಿಲ್ದಾಣದ ಬಳಿ ಇನ್ನೋವಾ ಕಾರು, ಬಸ್ ಎದುರು ಬಂದು ನಿಂತಿರುವುದನ್ನು ಕಂಡ ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಆದರೆ ಸಾಕಷ್ಟು ವೇಗದಲ್ಲಿ ಬರುತ್ತಿದ್ದ ಬಸ್ ಬ್ರೇಕ್ ಹಾಕಿದ ರಭಸಕ್ಕೆ ಒಮ್ಮೆಲೆ ಪಲ್ಟಿಯಾಗಿದೆ. ಅಪಘಾತದ ಭೀಕರತೆಯ ಸಿಸಿಟಿವಿ ದೃಶ್ಯಾವಳಿಗಳು ಭಯಹುಟ್ಟಿಸುವಂತಿದೆ.

    ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಒಟ್ಟು 46 ಮಂದಿ ಪ್ರಯಾಣಿಕರು ಬಸ್ಸಿನಲ್ಲಿ ಇದ್ದರು. ಸದ್ಯ ಗಾಯಾಳುಗಳನ್ನು ಚಿಕಿತ್ಸೆ ನೀಡಿ ಪರ್ಯಾಯ ವ್ಯವಸ್ಥೆಯೊಂದಿಗೆ ಕಳಹಿಸಿಕೊಡಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬೈಕಿನಲ್ಲಿದ್ದ ಬಾಲಕರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ – ಓರ್ವ ಸಾವು, 20 ಮಂದಿಗೆ ಗಾಯ

    ಬೈಕಿನಲ್ಲಿದ್ದ ಬಾಲಕರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ – ಓರ್ವ ಸಾವು, 20 ಮಂದಿಗೆ ಗಾಯ

    ವಿಜಯಪುರ: ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಹತ್ತಿರ ನಡೆದಿದೆ. ಈ ಘಟನೆಯಲ್ಲಿ ಬೈಕಿನಲ್ಲಿದ್ದ ಬಾಲಕ ಸಾವನ್ನಪ್ಪಿದ್ದು, ಬಸಿನಲ್ಲಿದ್ದ 20 ಜನರಿಗೆ ಗಾಯಗಳಾಗಿವೆ.

    ವಿಜಯಪುರದಿಂದ ತಾಳಿಕೋಟೆಗೆ ಆಗಮಿಸುತ್ತಿದ್ದ ಕೆಎ 28 ಎಫ್ 2087 ಬಸ್, ರಸ್ತೆ ಮಧ್ಯೆ ಬೈಕಿನಲ್ಲಿ ಬಂದ ಇಬ್ಬರು ಬಾಲಕರನ್ನು ತಪ್ಪಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಬಸ್ಸಿನ ಚಕ್ರದೊಳಗೆ ಬೈಕ್ ಸಿಲುಕಿಕೊಂಡ ಕಾರಣ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಮೃತ ಬಾಲಕನನ್ನು ಬೀರಣ್ಣ ಪರದಾನಿ ಬೀರಗುಂಡ(15) ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ಸಹೋದರರಾಗಿದ್ದು, ಡವಳಗಿ ಗ್ರಾಮದಿಂದ ಕೊಣ್ಣೂರ ಗ್ರಾಮದಲ್ಲಿರುವ ತಮ್ಮ ಸಹೋದರಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

    ಸದ್ಯ ಗಾಯಾಳುಗಳನ್ನು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಅಪ್ರಾಪ್ತರು ಚಲಾಯಿಸಿದ್ದರೆ 25,000 ದಂಡ ಹಾಗೂ ಪೋಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ.

  • ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಗದಗ: ಸರ್ಕಾರಿ ರಾಜಹಂಸ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 5 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ನಡೆದಿದೆ.

    ರಾಜಹಂಸ ಬಸ್ ಯಾದಗಿರಿಯಿಂದ ಗದಗ ಮಾರ್ಗವಾಗಿ ಧಾರವಾಡಕ್ಕೆ ತೆರಳುತ್ತಿತ್ತು. ಆದರೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ಬರುತ್ತಿದ್ದಂತೆ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳು ನರಳಾಡುತ್ತಿರುವುದನ್ನ ಕಂಡ ಸ್ಥಳೀಯರು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಚಾಲಕನ ಅಜಾಗರೂಕತೆಯಿಂದ ಬಸ್ ರಸ್ತೆ ಬದಿ ಉರುಳಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.