Tag: Government Bungalow

  • ತಿಂಗಳೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಲು ಪ್ರಿಯಾಂಕಾ ಗಾಂಧಿಗೆ ಸೂಚನೆ

    ತಿಂಗಳೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡಲು ಪ್ರಿಯಾಂಕಾ ಗಾಂಧಿಗೆ ಸೂಚನೆ

    ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭದ್ರತೆಯನ್ನು ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ದೆಹಲಿಯ ಲೋಧಿ ರೋಡ್‍ನಲ್ಲಿ  ಪ್ರಿಯಾಂಕಾ ವಾಸ ಮಾಡುತ್ತಿರುವ ನಂ.35 ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.

    ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಿಯಾಂಕಾ ಗಾಂಧಿ ಅವರಿಗೆ ಜುಲೈ 1ರಂದು ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಎಸ್‍ಪಿಜಿ ಭದ್ರತೆ ಇಲ್ಲದ ಕಾರಣ ಮನೆ ಖಾಲಿ ಮಾಡುವಂತೆ ಪತ್ರದಲ್ಲಿ ಸೂಚಿಸಿದೆ. ಆಗಸ್ಟ್ 1ರ ವೇಳೆಗೆ ಬಂಗಲೆಯನ್ನು ಖಾಲಿ ಮಾಡಲು ಹೇಳಿದ್ದು, ಅದಕ್ಕೂ ಮುನ್ನವೇ ನಿವಾಸಕ್ಕೆ ಸಂಬಂಧಿಸಿದ ಬಿಲ್‍ಗಳನ್ನು ಪಾವತಿ ಮಾಡಲು ಹೇಳಿದೆ.

    2020ರ ಜೂನ್ 30ರ ವೇಳೆಗೆ ಪ್ರಿಯಾಂಕಾ ಗಾಂಧಿ 3.46,677 ರೂ. ಮೊತ್ತದ ಬಾಕಿ ಬಿಲ್‍ಗಳನ್ನು ಪಾವತಿ ಮಾಡಬೇಕಿದೆ. ಸೂಚಿಸಿದ ಅವಧಿ ವೇಳೆಗೆ ನಿವಾಸ ಖಾಲಿ ಮಾಡದಿದ್ದರೆ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

    ಕೇಂದ್ರ ಸರ್ಕಾರ ಎಸ್‍ಪಿಜಿ ಭದ್ರತೆಯಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕೈಬಿಟ್ಟ ಬಳಿಕ ಮತ್ತೊಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಸದ್ಯ ಪ್ರಿಯಾಂಕಾ ಗಾಂಧಿ ಅವರಿಗೆ ಜಡ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತಿದೆ. ನಿವಾಸ ಖಾಲಿ ಮಾಡಲು ಸೂಚಿಸುತ್ತಿದಂತೆ ಅಗತ್ಯ ಬಿಲ್ ಬಾಕಿ ಪಾವತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಆನ್‍ಲೈನ್ ಪಾವತಿಯನ್ನು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದಹಾಗೇ 1977ರಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಈ ನಿವಾಸವನ್ನು ಹಂಚಿಕೆ ಮಾಡಲಾಗಿತ್ತು.

    ಕಾಂಗ್ರೆಸ್ ಮುಖಂಡರ ಆಪ್ತ ಮೂಲಗಳ ಮಾಹಿತಿ ಅನ್ವಯ ಪ್ರಿಯಾಂಕಾ ಗಾಂಧಿ ಮೊದಲು ಸರ್ಕಾರಿ ಬಂಗಲೆಯನ್ನು ತೆಗೆದುಕೊಳ್ಳಲು ಹಿಂಜರಿದ್ದರು. ಆದರೆ ಎಸ್‍ಪಿಜಿ ಭದ್ರತೆಯ ಕಾರಣ ಅವರಿಗೆ ನಿವಾಸ ಹಂಚಿಕೆ ಮಾಡಲಾಗಿತ್ತು. ಮದುವೆಯಾದ ಬಳಿಕವೂ ಅವರನ್ನು ಭದ್ರತೆಯ ದೃಷ್ಟಿಯಿಂದ ದಕ್ಷಿಣ ದೆಹಲಿಯಲ್ಲಿರುವ ಸೈನಿಕ್ ಫಾರ್ಮ್ ಹೌಸ್‍ಗೆ ತೆರಳಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಲೈಟ್ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು. ಕಳೆದ ವರ್ಷ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ಎಸ್‍ಪಿಜಿ ಭದ್ರತೆಯನ್ನು ವಾಪಸ್ ಪಡೆದಿತ್ತು. ಈ ವೇಳೆ ಕಾಂಗ್ರೆಸ್ ನಾಯಕರು ಕೇಂದ್ರದ ಕ್ರಮದ ಕುರಿತು ವ್ಯಾಪಕ ಟೀಕೆ ಮಾಡಿದ್ದರು.

  • ಸರ್ಕಾರಿ ಬಂಗ್ಲೆಗಾಗಿ ಸಾಹುಕಾರನ ಹುಡುಕಾಟ

    ಸರ್ಕಾರಿ ಬಂಗ್ಲೆಗಾಗಿ ಸಾಹುಕಾರನ ಹುಡುಕಾಟ

    ಬೆಂಗಳೂರು: ಸರ್ಕಾರಿ ಬಂಗಲೆಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹುಡುಕಾಟ ನಡೆಸತೊಡಗಿದ್ದಾರೆ. ಕ್ಷೇತ್ರದ ಜನರು ಮತ್ತು ಅಧಿಕಾರಿಗಳ ಭೇಟಿಗೆ ಮನೆ ಇಲ್ಲದೆ ಸಮಸ್ಯೆ ಆಗಿದೆ. ಹೀಗಾಗಿ ಆದಷ್ಟು ಬೇಗ ಸರ್ಕಾರಿ ನಿವಾಸ ನೀಡಿ ಎಂದು ಸಾಹುಕಾರ ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ.

    ಹಿಂದಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಿರುವುದರಿಂದ ಸಚಿವ ರಮೇಶ್ ಜಾರಕಿಹೊಳಿಗೆ ಈ ಸಮಸ್ಯೆ ಎದುರಾಗಿದೆ. ಪ್ರಸ್ತುತ ಮಂತ್ರಿಗ್ರೀನ್ಸ್ ನ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿರುವ ರಮೇಶ್ ಜಾರಕಿಹೊಳಿಗೆ ಖಾಸಗಿ ನಿವಾಸಕ್ಕೆ ಜನ, ಅಧಿಕಾರಿಗಳನ್ನು ಕರೆಸಿ ಮಾತನಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಹಾಗೂ ಅಧಿಕಾರಿಗಳ ಭೇಟಿಗೆ ರಮೇಶ್ ಜಾರಕಿಹೊಳಿಗೆ ಸಮಸ್ಯೆ ಆಗಿದೆ.

    ಸದಾಶಿವನಗರದ ಬಿಡಿಎ ಕ್ವಾಟ್ರಸ್‍ಗಾಗಿ ರಮೇಶ್ ಜಾರಕಿಹೊಳಿ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಹಿಂದಿದ್ದ ಸವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸಕ್ಕೂ ಗೋಕಾಕ್ ಸಾಹುಕಾರ ಬೇಡಿಕೆ ಇಟ್ಟಿದ್ದರು. ಆದರೆ ಪ್ರಸ್ತುತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಗೆ ಸವೆನ್ ಮಿನಿಸ್ಟರ್ ನಿವಾಸ ಹಂಚಿಕೆಯಾಗಿದೆ.

    ಜಯಮಹಲ್ ಬಳಿ ಎರಡು ಸರ್ಕಾರಿ ಬಂಗ್ಲೆಗಳು ಖಾಲಿ ಇವೆ ಆದರೆ ಜಾಗ ಜಾಸ್ತಿ ಇಲ್ಲ ಎನ್ನುವ ಕಾರಣಕ್ಕೆ ಅದನ್ನು ರಮೇಶ್ ಜಾರಕಿಹೊಳಿ ನಿರಾಕರಿಸಿದ್ದಾರೆ. 9 ಸಚಿವರುಗಳಿಗೆ ಸರ್ಕಾರಿ ನಿವಾಸ ಕೊಡಬೇಕಿದೆ. ಆದರೆ ಸೂಕ್ತ ಬಂಗಲೆ ಸಿಗದೆ ಸಚಿವ ರಮೇಶ್ ಜಾರಕಿಹೊಳಿ ಏನಾದರು ಮಾಡಿ ಆದಷ್ಟು ಬೇಗ ಒಳ್ಳೆ ಸರ್ಕಾರಿ ಬಂಗಲೆ ಕೊಡಿ ಎಂದು ಅಧಿಕಾರಿಗಳ ಬೆನ್ನು ಬಿದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್

    ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್

    ನವದೆಹಲಿ: ಹೊಸ ಸರ್ಕಾರ ರಚನೆಯಾಗಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಒಂದು ತಿಂಗಳ ಒಳಗಡೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸರ್ಕಾರದ ಬಂಗಲೆಯನ್ನು ಖಾಲಿ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸುಷ್ಮಾ ಸ್ವರಾಜ್ ಅವರು ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅಲ್ಲದೆ, ಪ್ರಸ್ತುತ ಎನ್‍ಡಿಎ 2.0 ಸರ್ಕಾರದಲ್ಲಿ ಅವರು ಯಾವುದೇ ಸ್ಥಾನವನ್ನು ಹೊಂದಿಲ್ಲ. ಹೀಗಾಗಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು ಸ್ಪಷ್ಟಪಡಿಸಿದ್ದು, ನಾನೀಗ ನಂ.8 ಸಫ್ದಾರ್‍ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

    ಇದಕ್ಕೆ ಟ್ವಿಟ್ಟರ್‍ನಲ್ಲಿನ ಸುಷ್ಮಾ ಸ್ವರಾಜ್ ಅವರ ಹಿಂಬಾಲಕರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವದಿ ಮುಗಿದ ತಕ್ಷಣ ಸರ್ಕಾರಿ ಬಂಗಲೆ ಖಾಲಿ ಮಾಡುವ ಮೂಲಕ ಯುವ ರಾಜಕಾರಣಿಗಳಿಗೆ ಹಾಗೂ ಇತರರಿಗೆ ನೀವು ಮಾದರಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯಂತ ಕ್ರಿಯಾಶೀಲ ಮಹಿಳಾ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಲವರು ಸರ್ಕಾರದಲ್ಲಿ ನಿಮ್ಮ ವರ್ಚಸ್ಸಿನ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತೇವೆ. ದೇಶದ ಅತ್ಯಂತ ಕ್ರೀಯಾಶೀಲ ಮಹಿಳಾ ರಾಜಕಾರಣಿಯಾದ ನಿಮಗೆ ಆರೋಗ್ಯ, ಐಶ್ವರ್ಯವನ್ನು ದೇವರು ಕರುಣಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ.

    https://twitter.com/JBMIS/status/1144839301156368384?

    ಪ್ರಥಮ ಬಾರಿ ಆಯ್ಕೆಯಾದ 267 ಸಂಸದರಿಗೆ ಮನೆ ಮನೆಗಳನ್ನು ನೀಡಬೇಕಿರುವುದರಿಂದ ಎಲ್ಲ ಮಾಜಿ ಸಂಸದರಿಗೆ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಮೋದಿ ನೇತೃತ್ವದ ಸರ್ಕಾರ ಕಳೆದ ತಿಂಗಳು ಮನವಿ ಮಾಡಿತ್ತು.

    ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆಗೆ ಜೂನ್ 12 ರಂದು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗಲಿದೆ.

    ಈ ಮಸೂದೆಯ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಮಸೂದೆಯಲ್ಲಿದೆ.

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.

  • ಸರ್ಕಾರಿ ಬಂಗಲೆಗೆ ಹೋಗಲು ಬಿಎಸ್ ಯಡಿಯೂರಪ್ಪ ಹಿಂದೇಟು?

    ಸರ್ಕಾರಿ ಬಂಗಲೆಗೆ ಹೋಗಲು ಬಿಎಸ್ ಯಡಿಯೂರಪ್ಪ ಹಿಂದೇಟು?

    ಬೆಂಗಳೂರು: ಲೋಕೋಪಯೋಗಿ ಸಚಿವ ರೇವಣ್ಣ, ಮುಖ್ಯಮಂತ್ರಿ ಕುಮಾರಸ್ವಾಮಿ ಆಯಿತು, ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರಿ ಬಂಗಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ನಂಬರ್ 3 ಸರ್ಕಾರಿ ಬಂಗಲೆಗೆ ಹೋಗಲು ಬಿಎಸ್ ವೈ ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ನಿವಾಸಕ್ಕೆ ಹೋಗದಿರಲು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಮಾಡಿದ್ದು, ಈ ಬಂಗಲೆಗೆ ಹೋದರೆ ಸಿಎಂ ಪಟ್ಟ ಕಳೆದುಕೊಳ್ಳುವ ಭಯದಿಂದ ವಾಸ್ತುಸರಿ ಇಲ್ಲ ಎಂದು ಸರ್ಕಾರಿ ನಿವಾಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಸರ್ಕಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸರ್ಕಾರಿ ಬಂಗಲೆ ಕೊಟ್ಟಿತ್ತು. ಆದರೆ ಅದು ವಾಸ್ತು ಪ್ರಕಾರ ಸರಿಯಿಲ್ಲ ಎಂದು ಬಂಗಲೆಯನ್ನು ತ್ಯಜಿಸಿ ತಮ್ಮ ನಿವಾಸದಲ್ಲಿಯೇ ಇದ್ದಾರೆ. ಈವರೆಗೆ ಈ ಬಂಗಲೆಯಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಾಸ್ತವ್ಯ ಇದ್ದರು. ಇದೀಗ ಶಂಕರಮೂರ್ತಿ ಅವರು ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ.

    ಈ ಹಿಂದೆ ಯಡಿಯೂರಪ್ಪ ಮೊದಲ ಬಾರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ ನಿವಾಸಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಆದರೆ ಆ ನಿವಾಸ ಸಚಿವ ಸಾ.ರಾ. ಮಹೇಶ್ ಪಾಲಾಗಿತ್ತು. ಆದ್ದರಿಂದ ರೇಸ್ ವ್ಯೂ ಕಾಟೇಜ್ ನಲ್ಲೇ ಮತ್ತೊಂದು ಬಂಗಲೆಯನ್ನು ಸರ್ಕಾರ ಹಂಚಿಕೆ ಮಾಡಿತ್ತು. ಅಂದು ಕೇಳಿದ್ದ ಮನೆ ಸಿಗಲಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಂಗಲೆ ತಿರಸ್ಕರಿಸಿದ್ದರು. ಬಳಿಕ ಸರ್ಕಾರ ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸ ಹಂಚಿಕೆ ಮಾಡಿತ್ತು. ಈಗ ಈ ಸರ್ಕಾರಿ ಬಂಗಲೆ ಸುಸ್ಥಿತಿಯಲ್ಲಿ ಇಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಬಂಗಲೆಗೆ ಹೋಗದಿರಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಬಂಗಲೆಗಳಲ್ಲಿ ಇರಲೇಬೇಡಿ- ಮಕ್ಕಳಿಬ್ಬರಿಗೆ ದೇವೇಗೌಡರ ಸಲಹೆ

    ಸರ್ಕಾರಿ ಬಂಗಲೆಗಳಲ್ಲಿ ಇರಲೇಬೇಡಿ- ಮಕ್ಕಳಿಬ್ಬರಿಗೆ ದೇವೇಗೌಡರ ಸಲಹೆ

    ಬೆಂಗಳೂರು: ಯಾವುದೇ ಕಾರಣಕ್ಕೂ ಸರ್ಕಾರಿ ಬಂಗಲೆಗಳು ಬೇಡವೇ ಬೇಡ. ಸರ್ಕಾರಿ ಬಂಗಲೆಗಳ ವಾಸ್ತು ಸರಿ ಇಲ್ಲ, ಅಲ್ಲಿ ವಾಸ್ತವ್ಯ ಮಾಡೋದು ಬೇಡ ಅಂತಾ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಕ್ಕಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಅವರಿಗೆ ಸಲಹೆ ನೀಡಿದಾರಂತೆ.

    ನಮ್ಮ ಮನೆಗಳಲ್ಲಿ ವಾಸ್ತು ಚೆನ್ನಾಗಿದೆ ಅಲ್ಲೇ ಇರಿ ಅಂತಾ ಮಕ್ಕಳಿಗೆ ಗೌಡರು ಸಲಹೆ ನೀಡಿದ್ದು, ಆದರೆ ಹಾಲಿ ಇರುವ ಖಾಸಗಿ ನಿವಾಸಗಳಲ್ಲಿ ಜನರು, ಕಾರ್ಯಕರ್ತರನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ವಾಸ್ತು ಸರಿ ಇರುವಂತಹ ದೊಡ್ಡ ಬಂಗಲೆಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಈ ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ ಸರ್ಕಾರಿ ಬಂಗಲೆ ಅನುಗ್ರಹದಲ್ಲಿದ್ದರು. ಬಳಿಕ ಅದೇ ಅನುಗ್ರಹ ನಿವಾಸದಲ್ಲಿ ವಸತಿ ಸಚಿವರಾಗಿದ್ದಾಗ ರೇವಣ್ಣ ಸಹ ವಾಸವಿದ್ದರು. ಇನ್ನು 2006ರಲ್ಲಿ ಸಿಎಂ ಆದಾಗ ಹೆಚ್.ಡಿ.ಕುಮಾರಸ್ವಾಮಿ ಕೂಡ ಅನುಗ್ರಹದಲ್ಲಿ ನಿವಾಸದಲ್ಲಿಯೇ ವಾಸವಾಗಿದ್ದರು. ಇದನ್ನೂ ಓದಿ: ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!

    ಸರ್ಕಾರಿ ಬಂಗಲೆಗೆ ಬೇಡಿಕೆ : ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ವಾಸ್ತವ್ಯಕ್ಕೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ಹಂಚಿಕೆ ಮಾಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಮಾಜಿ ಸಚಿವ ರಮಾನಾಥ್ ರೈ ಇದೇ ನಿವಾಸದಲ್ಲಿ ವಾಸವಾಗಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಮಾನಾಥ ರೈ ಸೋತಿರುವ ಕಾರಣ ಆರು ತಿಂಗಳಲ್ಲಿ ರೇಸ್ ವ್ಯೂ ಕಾಟೇಜ್ ಖಾಲಿ ಮಾಡಬೇಕಿದೆ.

    2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ ‘ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

  • ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!

    ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!

    ಬೆಂಗಳೂರು: ಮಾಜಿ ಮುಖ್ಯಮಂಂತ್ರಿ ಸಿದ್ದರಾಮಯ್ಯ ತಮ್ಮ ಅದೃಷ್ಟದ ಮನೆಯಾದ ಕಾವೇರಿ ನಿವಾಸವನ್ನು ಬಿಟ್ಟು ಬೇರೆಡೆ ಹೋಗಲು ಸಿದ್ಧರಾಗಿದ್ದಾರೆ.

    ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಕಾವೇರಿ ಬಂಗಲೆ ಇತ್ತು. ಇದು ಸರ್ಕಾರದ ಅಧಿಕೃತ ಬಂಗಲೆಯಾಗಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಕಾವೇರಿ ಬಂಗಲೆಯಲ್ಲಿ ವಾಸ ಮಾಡಲು ಶುರು ಮಾಡಿದ್ದರು. ಸಿಎಂ ಗೃಹ ಕಚೇರಿ ಕೃಷ್ಣಾಗೆ ಕಾವೇರಿ ಬಂಗಲೆ ಹೊಂದಿಕೊಂಡಿದೆ. ಯಾವುದೇ ಅಡೆತಡೆಗಳು ಬಂದಿದ್ದರೂ 5 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಾವೇರಿ ಲಕ್ಕಿ ಬಂಗಲೆ ಎಂದು ಎನಿಸಿಕೊಂಡಿತ್ತು.

    ಸಿಎಂ ಆಗಿದ್ದಾಗ ಹಾಗೂ ಡಿಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿಯೇ ಇದ್ದರು. ಅಂತಹ ಅದೃಷ್ಟದ ಮನೆ `ಕಾವೇರಿ’ ಯನ್ನು ತೊರೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಐದು ವರ್ಷದಿಂದ ಸರ್ಕಾರಿ ಬಂಗಲೆಯಲ್ಲಿದ್ದ ಸಿದ್ದರಾಮಯ್ಯ, ಇದೀಗ ಖಾಸಗಿ ನಿವಾಸಕ್ಕೆ ತೆರಳಲು ನಿರ್ಧಾರ ಮಾಡಿದ್ದಾರೆ.

    ಸಿದ್ದರಾಮಯ್ಯ ಮುಂದಿನ ತಿಂಗಳು ಕಾವೇರಿ ನಿವಾಸವನ್ನು ಖಾಲಿ ಮಾಡಿ ವಿಜಯನಗರದ `ಪ್ರಸಿದ್ಧ’ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಒಂದು ವೇಳೆ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿದರೆ ಸಿದ್ದರಾಮಯ್ಯ ಕಾವೇರಿಯಲ್ಲೇ ಉಳಿಯಲಿ ಆಪ್ತರು ಸಲಹೆ ನೀಡಿದ್ದಾರೆ.

    https://www.youtube.com/watch?v=WqHWLJNQrBo