Tag: government agencies

  • ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    ನಾನೂ ಪರೋಕ್ಷವಾಗಿ ಸಿದ್ಧಾರ್ಥ್ ಸಾಲಿಗೆ ಸೇರುತ್ತೇನೆ: ವಿಜಯ್ ಮಲ್ಯ

    – ಕಾಫಿ ಸಾಮ್ರಾಟ ನಾಪತ್ತೆಯಾಗಿದ್ದ ಕುರಿತು ಮಲ್ಯ ಟ್ವೀಟ್‍

    ನವದೆಹಲಿ: ನಾನೂ ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವೀಟ್‍ನಲ್ಲಿ ಹೇಳಿಕೊಂಡಿದ್ದಾರೆ.

    ಭಾರತೀಯ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಸದ್ಯ ಮಲ್ಯ ಇಂಗ್ಲೆಂಡಿನಲ್ಲಿದ್ದಾರೆ. ಆದರೆ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ್ ಅವರ ನಾಪತ್ತೆ ಸುದ್ದಿ ತಿಳಿದ ಕೂಡಲೇ ಟ್ವೀಟ್ ಮಾಡಿದ ಮಲ್ಯ, ತನಿಖಾ ಸಂಸ್ಥೆ ಹಾಗೂ ಬ್ಯಾಂಕುಗಳನ್ನು ದೂರಿದ್ದಾರೆ. ನಾನು ಕೂಡ ಪರೋಕ್ಷವಾಗಿ ಸಿದ್ಧಾರ್ಥ್ ಅವರ ಸಾಲಿಗೆ ಸೇರುತ್ತೇನೆ. ನನ್ನ ಪರಿಸ್ಥಿತಿ ಕೂಡ ಅವರಂತೆ ಆಗಿದೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ವಿ.ಜಿ. ಸಿದ್ಧಾರ್ಥ ಒಳ್ಳೆಯ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರು ಬರೆದಿರುವ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಎಂಥವರನ್ನಾದರೂ ಹತಾಶೆಗೆ ದೂಡಬಹುದು. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದರೂ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಬರೆದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್‍ಗಳ ವಿರುದ್ಧ ವಿಜಯ್ ಮಲ್ಯ ಕಿಡಿಕಾರಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ, ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ಕಾರ ಹಾಗೂ ಬ್ಯಾಂಕುಗಳು ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಆಸ್ತಿಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ಕಾಣುವ ಪ್ರಕರಣ ಮೇಲ್ಮನವಿಗಾಗಿ ಕಾಯುತ್ತಿದೆ ಎಂದು ಬರೆದಿದ್ದಾರೆ.

    ಸೋಮವಾರ ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರ ಮೃತದೇಹ ಇಂದು ಪತ್ತೆಯಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ತಡರಾತ್ರಿಯವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ರಾತ್ರಿ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

    ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಶವವಾಗಿ ಪತ್ತೆಯಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಹೊಯಿಗೆ ಬಜಾರ್‍ನಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

    https://www.youtube.com/watch?v=i3MTQLbm1KE