Tag: Governing Council

  • ಗೋಕರ್ಣ ವಿವಾದ: ಪೂಜೆಗೆ ಅವಕಾಶ ಕೋರಿ ಅನುವಂಶೀಯ ಅರ್ಚಕರಿಂದ ಪ್ರತಿಭಟನೆ

    ಗೋಕರ್ಣ ವಿವಾದ: ಪೂಜೆಗೆ ಅವಕಾಶ ಕೋರಿ ಅನುವಂಶೀಯ ಅರ್ಚಕರಿಂದ ಪ್ರತಿಭಟನೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ದೇವಸ್ಥಾನವನ್ನ ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ಮಹಾಬಲೇಶ್ವರನ ದರ್ಶನಕ್ಕಾಗಿ ಪ್ರತಿನಿತ್ಯ ದೇಶ ವಿದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಗೋಕರ್ಣ ದೇವಸ್ಥಾನ ಇತ್ತೀಚಿನ ದಿನದಲ್ಲಿ ವಿವಾದಗಳಿಂದಲೇ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಬಾರಿ ದೇವಸ್ಥಾನದ ಅನುವಂಶೀಯ ಅರ್ಚಕರು ತಮಗೆ ಪೂಜೆಗೆ ಅವಕಾಶ ಕೊಡಿ ಎಂದು ದೇವಸ್ಥಾನಕ್ಕೆ ಆಗಮಿಸಿದ್ದು, ಆಡಳಿತ ಮಂಡಳಿ ಅವಕಾಶ ನೀಡದೇ ಇರುವುದು ಅನುವಂಶೀಯ ಅರ್ಚಕರು ಪ್ರತಿಭಟನೆಗೆ ಇಳಿದಿದ್ದಾರೆ.

    ದೇವಸ್ಥಾನದಲ್ಲಿ ತಮಗೆ ಪೂಜೆಗೆ ಅವಕಾಶ ನೀಡಿ ಎಂದು ಗೋಕರ್ಣದ ಸುಮಾರು 32 ಅನುವಂಶೀಯ ಅರ್ಚಕರು ಇಂದು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನದ ನಿಯಮದ ಪ್ರಕಾರ ಆಡಳಿತ ಮಂಡಳಿಯವರ ಅನುಮತಿ ಪಡೆದು ಮಹಾಬಲೇಶ್ವರನ ಪೂಜೆಯನ್ನು ಮಾಡಬಹುದು. ನ್ಯಾಯಾಲಯ ಕೂಡ ಅನುವಂಶೀಯ ಅರ್ಚಕರಿಗೆ ಪೂಜೆ ಮಾಡಲು ಅವಕಾಶ ನೀಡಿದೆ ಎಂದು ಅರ್ಚಕರು ನ್ಯಾಯಾಲಯದ ಆದೇಶವನ್ನು ನೀಡಿದ್ದಾರೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಮಾತ್ರ ಪೂಜೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಅನುವಂಶೀಯ ಅರ್ಚಕರು ದೇವಾಲಯದ ಆಡಳಿತ ಮಂಡಳಿ ಕಚೇರಿಯಲ್ಲಿ ಕುಳಿತು ಮೌನ ಪ್ರತಿಭಟನೆ ನಡೆಸುತ್ತಿದ್ದು, ಪರಿಣಾಮ ದೇವಸ್ಥಾನದಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

    ಆಡಳಿತ ಮಂಡಳಿಯ ಈ ನಡೆ ಅರ್ಚಕರ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದು, ಪೂಜೆಗೆ ಅವಕಾಶ ಕೊಡುವವರೆಗೂ ತಾವು ಎಲ್ಲಿಯೂ ಹೋಗುವುದಿಲ್ಲ ಎಂದು ದೇವಸ್ಥಾನದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಇತ್ತ ನ್ಯಾಯಾಲಯ ತಮಗೆ ಪೂಜೆಗೆ ಅವಕಾಶ ನೀಡಿದ್ದು, ಆಡಳಿತ ಮಂಡಳಿ ಸದಸ್ಯರು ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದು ಅರ್ಚಕರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವಸ್ಥಾನದ ಆಡಳಿತಾಧಿಕಾರಿ ಜಿಕೆ ಹೆಗಡೆ, ಪೂಜೆಗೆ ಸಂಬಂಧಿಸಿದಂತೆ ಈ ವಿಚಾರ ನ್ಯಾಯಾಲಯದಲ್ಲಿದ್ದು, ವಿಚಾರಣೆ ಹಂತದಲ್ಲಿ ಯಾವ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಲಯದ ಕ್ರಮವನ್ನ ತಾವು ಅನುಸರಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

    ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಹೊಸನಗರ ರಾಮಚಂದ್ರಾಪುರ ಮಠಕ್ಕೆ ನೀಡಿದ ಪರಿಣಾಮ ಅನುವಂಶೀಯ ಅರ್ಚಕರು ಹಾಗೂ ಆಡಳಿತ ಮಂಡಳಿ ನಡುವೆ ವಿವಾದಕ್ಕೆ ಕಾರಣವಾಗಿತ್ತು. ಆಡಳಿತ ಮಂಡಳಿಯವರು ತಮ್ಮ ಉಪಾದಿವಂತ ಮಂಡಳಕ್ಕೆ ಸೇರ್ಪಡೆಯಾಗಿ ಪೂಜೆ ಸಲ್ಲಿಸಬೇಕು ಇಲ್ಲದಿದ್ದರೆ ಅವಕಾಶ ಕೊಡುವುದಿಲ್ಲ ಎನ್ನುವ ಆದೇಶ ಹೊರಡಿಸಿದ್ದರು. ಅನುವಂಶೀಯ ಅರ್ಚಕರಿಗೆ ಪೂಜೆಯ ಹಕ್ಕು ಇದ್ದು ತಮಗೂ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು ಕಳೆದ ಏಳೆಂಟು ವರ್ಷದಿಂದ ವಿವಾದ ನಡೆಯುತ್ತಲೇ ಬಂದಿದೆ.

    ಸದ್ಯ ತಮಗೆ ಪೂಜೆಯ ಹಕ್ಕನ್ನ ನ್ಯಾಯಾಲಯ ನೀಡಿದ್ದು ಅವಕಾಶ ಕೊಡುವಂತೆ ಅನುವಂಶೀಯ ಅರ್ಚಕರು ಪಟ್ಟು ಹಿಡಿದಿದ್ದರೆ ಇತ್ತ ಪ್ರಕರಣ ನ್ಯಾಯಾಲಯದಲ್ಲಿದ್ದು ತಾವು ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ. ಈ ಸಂಬಂಧ ಅನುವಂಶೀಯ ಅರ್ಚಕರು ಮತ್ತೇ ನ್ಯಾಯಾಲಯದ ಮೆಟ್ಟಿಲೇರಲು ಮುಂದಾಗಿದ್ದಾರೆ.

  • ಭಕ್ತರಿಂದ ಹಣ ಸುಲಿಗೆ ಮಾಡ್ತಿದ್ಯಾ ಕುಕ್ಕೆ ದೇಗುಲ ಸಮಿತಿ?

    ಭಕ್ತರಿಂದ ಹಣ ಸುಲಿಗೆ ಮಾಡ್ತಿದ್ಯಾ ಕುಕ್ಕೆ ದೇಗುಲ ಸಮಿತಿ?

    ಮಂಗಳೂರು: ರಾಜ್ಯದ ಹೆಸರಾಂತ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸರ್ಪ ಸಂಸ್ಕಾರ ಸೇವೆಗೆ ಭಕ್ತರಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ಈ ಕುರಿತು ಬಿಜೆಪಿ ಹಾಗೂ ಭಜರಂಗ ದಳ ಸಂಘಟನೆ ಪ್ರತಿಭಟನೆ ನಡೆಸಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ಕೃಷ್ಣಮೂರ್ತಿ ಭಟ್ ಅವರ ರಾಜೀನಾಮೆಗೆ ಆಗ್ರಹಿಸಿದೆ.

    ಏನಿದು ಆರೋಪ?
    ಹಾಸನ ಮೂಲದ ಭಕ್ತರ ಗುಂಪು ಡಿಸೆಂಬರ್ 20 ರಂದು ಸರ್ಪ ಸಂಸ್ಕಾರ ಸೇವೆ ಮಾಡಿಸಿದ್ದರು. ಇವರಿಗೆ ಆನ್ ಲೈನ್ ನಲ್ಲಿ ಅವಕಾಶ ಸಿಗದ ಕಾರಣ, ದೇವಸ್ಥಾನದಲ್ಲಿ ಉದ್ಯೋಗದಲ್ಲಿರುವ ಹಾಸನ ಮೂಲದ ವ್ಯಕ್ತಿಯ ಹೆಸರಿನಲ್ಲಿ ಸೇವೆಯನ್ನು ಬುಕಿಂಗ್ ಮಾಡಲಾಗಿತ್ತು. ಹೆಸರಿನ ಮುಂಭಾಗ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್ ಹೆಸರನ್ನು ಶಿಫಾರಸು ಆಗಿ ನಮೂದಿಸಲಾಗಿತ್ತು. ಆದರೆ ಸೇವೆಯಾದ ಬಳಿಕ ಆ ಗುಂಪಿನಿಂದ ಕೃಷ್ಣಮೂರ್ತಿ ಭಟ್ ನಿಗದಿಗಿಂತ ಅಧಿಕ ಮೊತ್ತವನ್ನು ವಸೂಲು ಮಾಡಿದೆ ಎಂದು ಆರೋಪಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರ ಆರೋಪ ಪ್ರಸ್ತುತ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಕಾಂಗ್ರೆಸ್, ಬಿಜೆಪಿ ವಾಕ್ಸಮರಕ್ಕೆ ವೇದಿಕೆಯಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೃಷ್ಣಮೂರ್ತಿ ಅವರ ರಾಜೀನಾಮೆ ಪಡೆಯದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಾಯಕರು ಎಚ್ಚರಿಕೆ ನೀಡಿದ್ದಾರೆ.

     

  • ಪವರ್ ಕಟ್ ಭಾಗ್ಯ: ಕತ್ತಲೆಯಲ್ಲಿ ಮುಳುಗಿದ ಗದಗ ಜಿಲ್ಲಾಸ್ಪತ್ರೆ

    ಪವರ್ ಕಟ್ ಭಾಗ್ಯ: ಕತ್ತಲೆಯಲ್ಲಿ ಮುಳುಗಿದ ಗದಗ ಜಿಲ್ಲಾಸ್ಪತ್ರೆ

    ಗದಗ: ಜಿಲ್ಲೆಯ ಪ್ರಮುಖ ಕೇಂದ್ರ ಸ್ಥಾನದಲ್ಲಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಇಂದು ಮೂರು ಗಂಟೆಗಳ ಕಾಲ ಪವರ್ ಕಟ್ ಆಗಿದ್ದರಿಂದ ರೋಗಿಗಳು ನರಳಾಡಿದ್ದಾರೆ. ಕಳೆದೆರೆಡು ದಿನಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಪವರ್ ಕಟ್ ಸಮಸ್ಯೆ ಉಂಟಾಗುತ್ತಿದ್ದು, ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಪರಿಹಾರ ಕ್ರಮವನ್ನು ಕೈಗೊಂಡಿಲ್ಲ.

    ಆಸ್ಪತ್ರೆಯ ಎಲ್ಲಾ ವಾರ್ಡ್‍ಗಳಲ್ಲಿರುವ ರೋಗಿಗಳು ಕತ್ತಲಲ್ಲೇ ಪರದಾಡುತ್ತಾ ಚಿಕಿತ್ಸೆಗಾಗಿ ಕಾದುಕುಳಿತ್ತಿದ್ದಾರೆ. ಸೋಮವಾರವೂ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ರಿಂದ 1 ಗಂಟೆ ವರೆಗೆ ಸತತವಾಗಿ ಮೂರು ಗಂಟೆಗಳ ಕಾಲ ಪವರ್ ಕಟ್ ಮಾಡಲಾಗಿದೆ.

    ಹುಬ್ಬಳ್ಳಿ ಯಿಂದ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ಹೆಸ್ಕಾಂ ನಿಂದ ಪವರ್ ಕಟ್ ಮಾಡಲಾಗಿದೆ. ಎರಡು ದಿನಗಳಿಂದ ವಿದ್ಯುತ್ ಕೈಕೊಡುತ್ತಿದ್ದರೂ ಜಿಲ್ಲಾ ಆಸ್ಪತ್ರೆಯ ಆಡಳಿತ ಮಂಡಳಿ ಪರ್ಯಾಯವಾಗಿ ಯಾವ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ.

    ದಿನನಿತ್ಯ ಸಾವಿರಾರು ರೋಗಿಗಳು ಭೇಟಿ ನೀಡುವ ಈ ಆಸ್ಪತ್ರೆಯಲ್ಲಿ ಇದ್ದ ಮೂರು ಜನರೇಟರ್ ಕೈಕೊಟ್ಟಿದ್ದು ಸಮಸ್ಯೆ ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯಲ್ಲಿರುವ 60, 70 ಮತ್ತು 120 ಕೆವಿ ಜನರೇಟರ್‍ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. 120 ಕೆವಿ ಜನರೇಟರ್ ಇತ್ತೀಚೆಗೆ ಖರೀದಿಸಿದ್ದರೂ ಅದು ಏಕಾಏಕಿ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಾಣಂತಿಯರ ವಾರ್ಡ್, ನವಜಾತು ಶಿಶು ಕೇಂದ್ರ, ಐಸಿಯು ವಾರ್ಡ್‍ಗಲ್ಲಿನ ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಇದರಿಂದ ರೋಗಿಗಳಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

    ಜಿಲ್ಲೆಯ ಹಲವು ಪ್ರದೇಶಗಳಿಂದ ಪ್ರತಿನಿತ್ಯ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಅಲ್ಲದೇ ರಕ್ತ ತಪಾಸಣೆಗಾಗಿ ಬೆಳಗ್ಗೆಯಿಂದಲೇ ನೂರಾರು ಜನರು ಸಾಲು ಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂರುತ್ತದೆ. ಬಡ ಜನರು ಆನಾರೋಗ್ಯ ಸಮಸ್ಯೆಯಿಂದ ಜೀವ ರಕ್ಷಣೆಗೆ ಆಸ್ಪತ್ರೆ ಬಂದರೆ ಆಸ್ಪತೆಯಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಜೀವ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆಸ್ಪತ್ರೆಯ ಸಿಬ್ಬಂದಿಯು ಮಾನವೀಯತೆ ದೃಷ್ಟಿಯಿಂದಲೂ ರೋಗಿಗಳನ್ನು ಸಮಸ್ಯೆ ಬಗ್ಗೆ ಕೇಳುವುದಕ್ಕೆ ಹೋಗಿಲ್ಲ. ಜಿಲ್ಲಾ ಆಸ್ಪತ್ರೆಯ ಆಡಳಿತ ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶಗೊಂಡ ರೋಗಿಗಳು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು, ಸರ್ಕಾರ ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ.

    https://www.youtube.com/watch?v=dOiemSbAkj0