Tag: Goutham Adani

  • ಮಂಗ್ಳೂರು ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ!

    ಮಂಗ್ಳೂರು ವಿಮಾನ ನಿಲ್ದಾಣ ಅದಾನಿ ತೆಕ್ಕೆಗೆ!

    – ಎಎಐಯಿಂದ 6 ವಿಮಾನ ನಿಲ್ದಾಣ ಹರಾಜು
    – 6ರ ಪೈಕಿ 5 ಗೆದ್ದುಕೊಂಡ ಅದಾನಿ ಗ್ರೂಪ್

    ನವದೆಹಲಿ: ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪನಿ ಪಡೆದುಕೊಂಡಿದೆ. ಈ ಮೂಲಕ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಈಗ ಅಧಿಕೃತವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದೆ.

    ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ವ್ಯಾಪ್ತಿಯಲ್ಲಿ ಬರುವ ಒಟ್ಟು 6 ವಿಮಾನ ನಿಲ್ದಾಣಗಳನ್ನು ಖಾಸಗಿಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸೋಮವಾರ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಕಂಪನಿ ಮಂಗಳೂರು, ಅಹಮದಾಬಾದ್, ಜೈಪುರ, ತಿರುವನಂತಪುರಂ, ಲಕ್ನೋ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ.

    ಕೇಂದ್ರ ಸರ್ಕಾರ 50 ವರ್ಷಗಳ ಕಾಲ ವಿಮಾನ ನಿಲ್ದಾಣದ ನಿರ್ವಹಣೆಯನ್ನು, ಟರ್ಮಿನಲ್ ಅಭಿವೃದ್ಧಿ ಇತ್ಯಾದಿ ಜವಾಬ್ದಾರಿಯನ್ನು ನೋಡಿಕೊಳ್ಳಲು ಖಾಸಗಿ ಕಂಪನಿಗಳಿಂದ ಅರ್ಜಿ ಆಹ್ವಾನಿಸಿತ್ತು. ಒಟ್ಟು 10 ಕಂಪನಿಗಳಿಂದ 32 ತಾಂತ್ರಿಕ ಬಿಡ್‍ಗಳು ಸಲ್ಲಿಕೆಯಾಗಿತ್ತು.

    ಅದಾನಿ ಕಂಪನಿಗೆ ಬೆಂಗಳೂರು ಮೂಲದ ಜಿಎಂಆರ್ ಗ್ರೂಪ್ ಪ್ರಬಲ ಪೈಪೋಟಿಯನ್ನು ನೀಡಿತ್ತು. ಆದರೆ ಅದಾನಿ ಕಂಪನಿ ಅತಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಕಾರಣ 6ರ ಪೈಕಿ 5 ನಿಲ್ದಾಣವನ್ನು ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಗುವಾಹಾಟಿ ವಿಮಾನ ನಿಲ್ದಾಣವನ್ನು ಖಾಸಗಿಕರಣಗೊಳಿಸುವುದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿ ತಡೆ ನೀಡಬೇಕೆಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ಮಂಗಳವಾರ ನಡೆಯಲಿದೆ.

    ಮಾಸಿಕವಾಗಿ ಪ್ರಯಾಣಿಕನೊಬ್ಬನಿಗೆ ವಿಧಿಸುವ ಶುಲ್ಕದ ಮಾನದಂಡವನ್ನು ಪರಿಗಣಿಸಿ ಹರಾಜು ನಡೆದಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಕಂಪನಿಗಳಿಗೆ ಅನುಭವದ ಅಗತ್ಯ ಕಡ್ಡಾಯವಿರಲಿಲ್ಲ. ಹೀಗಾಗಿ ಹಲವು ಕಂಪನಿಗಳು ಬಿಡ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಅಹಮದಾಬಾದ್ ಮತ್ತು ಜೈಪುರಗಳಿಗೆ 7, ಲಕ್ನೋ ಮತ್ತು ಗುವಾಹಾಟಿಗೆ 6, ಮಂಗಳೂರು ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಿಗೆ 3 ಕಂಪನಿಗಳು ಬಿಡ್ ಸಲ್ಲಿಸಿತ್ತು.

    ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಸಂಬಂಧ 2018ರ ನವೆಂಬರ್ ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆಧಾರದ ಮೇಲೆ ಆರು ಎಎಐ ವ್ಯಾಪ್ತಿಯ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಪ್ರಸ್ತಾಪವನ್ನು ಸರ್ಕಾರ ಅಂತಿಮಗೊಳಿಸಿ ಇಂದು ಬಿಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಕೆಲವೇ ದಿನಗಳಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಈ ವಿಮಾನ ನಿಲ್ದಾಣಗಳ ಉಸ್ತುವಾರಿಯನ್ನು ಅದಾನಿ ಕಂಪನಿ ನೋಡಿಕೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv