Tag: Gopilal Jatava

  • ಮೇಲ್ಜಾತಿಯ ನಾಯಕರು ತಟ್ಟೆಯಲ್ಲಿ, ದಲಿತ ಬಿಜೆಪಿ ಎಂಎಲ್‍ಎ ಎಲೆಯಲ್ಲಿ ಊಟ- ಫೋಟೋ ವೈರಲ್

    ಮೇಲ್ಜಾತಿಯ ನಾಯಕರು ತಟ್ಟೆಯಲ್ಲಿ, ದಲಿತ ಬಿಜೆಪಿ ಎಂಎಲ್‍ಎ ಎಲೆಯಲ್ಲಿ ಊಟ- ಫೋಟೋ ವೈರಲ್

    ಭೋಪಾಲ್: ಮಧ್ಯಪ್ರದೇಶದಲ್ಲಿ ರವಿವಾರ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಂವಲನವನ್ನೇ ಉಂಟು ಮಾಡಿದೆ. ಕಾರ್ಯಕ್ರಮದಲ್ಲಿ ಮೇಲು ಜಾತಿಯ ನಾಯಕರು ಸ್ಟೀಲ್ ತಟ್ಟೆಯಲ್ಲಿ ಊಟ ಮಾಡುತ್ತಿದ್ದರೆ, ಪಕ್ಕದಲ್ಲಿಯೇ ಬಿಜೆಪಿಯ ದಲಿತ ಶಾಸಕರೊಬ್ಬರು ಎಲೆಯಲ್ಲಿ ಊಟ ಮಾಡುತ್ತಿದ್ದಾರೆ.

    ಫೋಟೋದಲ್ಲಿ ಏನಿದೆ?: ವೈರಲ್ ಫೋಟೋದಲ್ಲಿ ಮಧ್ಯಪ್ರದೇಶ ಸಾರಿಗೆ ಸಚಿವ ಭೂಪೇಂದ್ರ ಸಿಂಗ್ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ತೋರಣ್ ಸಿಂಗ್ ಇಬ್ಬರೂ ಸ್ಟೀಲ್ ತಟ್ಟೆಯಲ್ಲಿ ಭೋಜನ ಸೇವಿಸುತ್ತಿದ್ದಾರೆ. ಇತ್ತ ಇವರ ಪಕ್ಕವೇ ಕುಳಿತ ಶಾಸಕ ಗೋಪಿಲಾಲ್ ಎಲೆಯಲ್ಲಿ ಊಟ ಮಾಡುತ್ತಿದ್ದಾರೆ.

    ಎಲೆಯಲ್ಲಿ ಊಟ ಮಾಡಿದ ಬಿಜೆಪಿ ದಲಿತ ಶಾಸಕ ಗೋಪಿಲಾಲ್ ಜಟವಾ, ಫೋಟೋ ವೈರಲ್ ಆಗಿರುವುದು ‘ರಾಜಕೀಯ ಕುತಂತ್ರ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಕಾರ್ಯಕರ್ತರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ದಿಢೀರ್ ಅಂತಾ ತೋರಣ್ ಸಿಂಗ್ ಆಗಮಿಸಿದರು. ಊಟಕ್ಕೆ ಕುಳಿತಾಗ ಆಯೋಜಕರು ಕೇವಲ ಎರಡು ತಟ್ಟೆಗಳನ್ನು ಇರಿಸಿದ್ರು. ತೋರಣ್ ಸಿಂಗ್ ನಮಗೆ ಅತಿಥಿಯಾಗಿದ್ದರಿಂದ ನನ್ನ ತಟ್ಟೆಯನ್ನು ಅವರಿಗೆ ನೀಡಿ, ನಾನು ಎಲೆಯಲ್ಲಿ ಊಟ ಮಾಡಿದೆ. ಎಲೆಯಲ್ಲಿ ಕೇವಲ ನಾನೊಬ್ಬನೇ ಅಲ್ಲ, ಎಲ್ಲ ಕಾರ್ಯಕರ್ತರು ಮತ್ತು ಅಧಿಕಾರಿಗಳು ಊಟ ಮಾಡಿದ್ದಾರೆ ಎಂದು ಗೋಪಿಲಾಲ್ ಸ್ಪಷ್ಟನೆ ನೀಡಿದ್ದಾರೆ.

    ನಮ್ಮ ಪಕ್ಷ ಮತ್ತು ಆರ್‍ಎಸ್‍ಎಸ್ ಸಂಘಟನೆ ನಮಗೆ ‘ಅತಿಥಿ ದೇವೋ ಭವಃ’ ಎಂದು ಕಲಿಸಿದೆ. ಹಾಗಾಗಿ ಅತಿಥಿಯಾಗಿ ಬಂದ ತೋರಣ್ ಸಿಂಗ್ ಅವರಿಗೆ ತಟ್ಟೆ ನೀಡಬೇಕಾಯಿತು ಎಂದು ಗೋಪಿಲಾಲ್ ಹೇಳಿದ್ದಾರೆ.