Tag: Gopalaiah

  • ಧೈರ್ಯವಾಗಿ ಕಾಲೇಜಿಗೆ ಆಗಮಿಸಿ ಕಲಿಕೆಗೆ ಗಮನಹರಿಸಿ: ಕೆ. ಗೋಪಾಲಯ್ಯ

    ಧೈರ್ಯವಾಗಿ ಕಾಲೇಜಿಗೆ ಆಗಮಿಸಿ ಕಲಿಕೆಗೆ ಗಮನಹರಿಸಿ: ಕೆ. ಗೋಪಾಲಯ್ಯ

    ಬೆಂಗಳೂರು: ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಇಂದು ಜಿಲ್ಲೆಯ ಶಾಂತಿಗ್ರಾಮ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಕೋವಿಡ್ ಸುರಕ್ಷತಾ ಕ್ರಮಗಳು ಮತ್ತು ಬೋಧನಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.

    ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಧೈರ್ಯವಾಗಿ ಕಾಲೇಜಿಗೆ ಆಗಮಿಸಿ ಕಲಿಕೆ ಬಗ್ಗೆ ಗಮನ ಹರಿಸಿ, ಜಿಲ್ಲಾಡಳಿತ ಹಾಗೂ ಸರ್ಕಾರ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲಿದೆ. ಜ್ವರ ಅಥವಾ ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಉಪನ್ಯಾಸಕರ ಗಮನಕ್ಕೆ ತರುವಂತೆ ಅವರು ಹೇಳಿದರು.

    ಕಾಲೇಜಿನಲ್ಲಿ ಪ್ರತಿ ದಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಸ್ಕ್ರೀನಿಂಗ್ ಮಾಡಿ, ಸೋಂಕು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ, ಅನಾರೋಗ್ಯ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಎಂದು ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಪಾನಿಪುರಿ ಪ್ರಿಯರಿಗೆ ಶಾಕಿಂಗ್ ನ್ಯೂಸ್- ನೀರಿಗೆ ಮೂತ್ರ ಬೆರೆಸಿದ ವೀಡಿಯೋ ವೈರಲ್

    ಶಾಸಕರಾದ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ ಸಚಿವರ ಆಪ್ತ ಕಾರ್ಯದರ್ಶಿ ಕಾಂತರಾಜ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಗೆ ದೂರು

    ಸಚಿವ ಗೋಪಾಲಯ್ಯ ವಿರುದ್ಧ ಎಸಿಬಿಗೆ ದೂರು

    ಬೆಂಗಳೂರು: ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಸಿಬಿಗೆ ದೂರು ನೀಡಿದೆ.

    ಇತ್ತೀಚೆಗೆ ಕೊಪ್ಪಳ ಅಬಕಾರಿ ಉಪ ಆಯುಕ್ತೆ ಸೆಲೆನಾ, ಮತ್ತು ಅಬಕಾರಿ ನಿರೀಕ್ಷಕ ಅಜಯ್ ಮಧ್ಯೆ ನಡೆದ ಫೋನ್  ಸಂಭಾಷಣೆ ವೈರಲ್ ಆಗಿತ್ತು. ಪ್ರತೀ ಜಿಲ್ಲೆಯಿಂದ 5 ಲಕ್ಷ ಹಣ ಸಂಗ್ರಹಿಸಿ ಸಚಿವರಿಗೆ ಕೊಡಬೇಕು. ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಹಣ ಸಂಗ್ರಹಿಸಿ ಅಂತಾ ಸೆಲೆನಾ ಫೋನಿನಲ್ಲಿ ಮಾತನಾಡಿದ್ದರು. ಇದನ್ನೂ ಓದಿ: ಲಾಕ್‍ಡೌನ್‍ನಲ್ಲಿ ಅಬಕಾರಿ ಇಲಾಖೆಗೆ ಶೇ.10 ಲಾಭ ಹೆಚ್ಚಳ – ಗೋಪಾಲಯ್ಯ

    ಆಡಿಯೋ ವೈರಲ್ ಆದ ನಂತರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಮಂತ್ರಿಗಳು ಕೂಡಿ ಮಾಡುತ್ತಿರುವ ಭ್ರಷ್ಟಾಚಾರ ಇದಾಗಿದೆ. ಇಲಾಖೆಯಲ್ಲಿ ಅಕ್ರಮವಾಗಿ ಹಣ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.

  • ಜೂನ್ 14ರ ನಂತ್ರವೂ ಒಂದು ವಾರ ಹಾಸನದಲ್ಲಿ ಲಾಕ್‍ಡೌನ್ ಮುಂದುವರಿಕೆ: ಗೋಪಾಲಯ್ಯ

    ಜೂನ್ 14ರ ನಂತ್ರವೂ ಒಂದು ವಾರ ಹಾಸನದಲ್ಲಿ ಲಾಕ್‍ಡೌನ್ ಮುಂದುವರಿಕೆ: ಗೋಪಾಲಯ್ಯ

    ಹಾಸನ: ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೊಂದು ವಾರ ಲಾಕ್‍ಡೌನ್ ಮುಂದುವಡಿiಸುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ.

    ಹಾಸನದಲ್ಲಿ ಸಿಎಂ ವಿಸಿ ಬಳಿಕ ಮಾತನಾಡಿದ ಅವರು, ಪ್ರತಿವಾರ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ, ಮುಂದಿನ ವಾರದೊಳಗೆ ಬಹಳಷ್ಟು ಕಡಿಮೆಯಾಗಲಿದೆ. 23 ಹಳ್ಳಿಗಳಲ್ಲಿ ಪಾಸಿಟಿವ್ ಗಳ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ನಡೆ ಹಳ್ಳಿಯ ಕಡೆ ಎರಡನೇ ಸುತ್ತು ಆರಂಭ ಮಾಡಿದ್ದೇವೆ. ಸೋಂಕಿತರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಚಿಕಿತ್ಸೆ ಪಡೆಯಬೇಕೆಂದರು.

    ನಾಳೆ ಸಿಎಂ ಯಡಿಯೂರಪ್ಪ ಹಾಸನ ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ವಿವರಿಸುತ್ತೇವೆ. ಈಗ ಇರುವ ಲಾಕ್ ಡೌನ್ ನನ್ನು ಜೂ. 14 ರ ಬಳಿಕವೂ ಒಂದು ವಾರ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದ್ರು. ಇದನ್ನೂ ಓದಿ: 8 ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಭೆ – ಏನು ಚರ್ಚೆ ನಡೆಯಿತು?

    ಹಾಸನದಲ್ಲಿ ಈ ಹಿಂದೆ ವಾರದಲ್ಲಿ ಮೂರು ದಿನ, ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯವಸ್ತು ಖರೀದಿಸಲು ಅವಕಾಶ ನೀಡಲಾಗಿದ್ದು, ಉಳಿದ ನಾಲ್ಕುದಿನ ಸಂಪೂರ್ಣ ಲಾಕ್‍ಡೌನ್ ಘೋಷಿಸಲಾಗಿತ್ತು.

  • ನನ್ನ ಮಾತಿಗೆ ಬೆಲೆ ಕೊಡದಿದ್ರೆ ಸಭೆ ನೀವೇ ನೆಡಸಿ: ಸಚಿವರ ವಿರುದ್ಧ ಶಿವಲಿಂಗೇಗೌಡ ಗರಂ

    ನನ್ನ ಮಾತಿಗೆ ಬೆಲೆ ಕೊಡದಿದ್ರೆ ಸಭೆ ನೀವೇ ನೆಡಸಿ: ಸಚಿವರ ವಿರುದ್ಧ ಶಿವಲಿಂಗೇಗೌಡ ಗರಂ

    ಹಾಸನ: ನಾನು ಮೊದಲಿಂದಲೂ ಹೋಂ ಐಸೋಲೇಶನ್ ರದ್ದುಗೊಳಿಸಬೇಕೆಂದು ಹೇಳುತ್ತಲಿದ್ದೇನೆ. ಆದರೆ ನನ್ನ ಮಾತನ್ನು ಕೇಳುವುದಿಲ್ಲ. ನನ್ನ 20 ವರ್ಷ ಅನುಭವದ ಮಾತನ್ನು ಹೇಳುತ್ತಿದ್ದೇನೆ. ಅದಕ್ಕೆ ಬೆಲೆ ಕೊಡದಿದ್ದರೆ ಸಭೆಯನ್ನು ನೀವೇ ಮುಂದುವರಿಸಿಕೊಂಡು ಹೋಗಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ವೇದಿಕೆಯ ಮೇಲಿದ್ದ ಸಚಿವದ್ವಯರ ಮೇಲೆ ಕೆಂಡಾಮಂಡಲವಾದರು.

    ಹಾಸನದ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯನವರಿಗೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಲಹೆ ನೀಡಲು ಮುಂದಾದರು. ಆದರೆ ಇದನ್ನ ಕೇಳುವಂತಹ ಪರಿಸ್ಥಿತಿಯಲ್ಲಿ ವೇದಿಕೆ ಮೇಲಿದ್ದ ಸಚಿವದ್ವಯರು ಹಾಗೂ ಸಂಸದರು ಸೇರಿದಂತೆ ಜಿಲ್ಲಾಡಳಿತ ಸರಿಯಾಗಿ ಗಮನಹರಿಸದ ಹಿನ್ನೆಲೆಯಲ್ಲಿ ಶಾಸಕ ಶಿವಲಿಂಗೇಗೌಡ ಮಾತಿನ ಮೂಲಕವೇ ಏರುಧ್ವನಿಯಲ್ಲಿ ಕೂಗಾಡಿದರು. ಇದನ್ನೂ ಓದಿ: ಸಚಿವ ಸುಧಾಕರ್ ಎದುರೇ ಪತ್ರ ಹರಿದು ಹಾಕಿ ರೇವಣ್ಣ ಆಕ್ರೋಶ

    ನನ್ನ ಹೆಂಡತಿ ಕೋವಿಡ್-19 ರ ಸೋಂಕಿಗೆ ಒಳಗಾಗಿದ್ದರು. ಇಂತಹ ಸಮಯದಲ್ಲಿ ನಾನು ಪ್ರಥಮ ಸಂಪರ್ಕದಲ್ಲಿದ್ದ ಕಾರಣಕ್ಕಾಗಿ ನನಗೂ ಕೂಡ ನಿರ್ಬಂಧ ಹೇರಿ ಸುಮಾರು ಹದಿನಾಲ್ಕು ದಿನಗಳ ಕಾಲ ಹೋಗದಂತೆ ತಂತಿ ಬೆಲೆ ಹಾಕುವ ರೀತಿ ನನ್ನ ಮನೆಯ ಸುತ್ತಲೂ ಹಾಕಿದ್ರು. ಆದರೆ ಈ ಬಾರಿ ಆ ರೀತಿಯ ಕಠಿಣ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಕಳೆದ ಬಾರಿ ಸೋಂಕು ತಗಲಿದ ವ್ಯಕ್ತಿಗೆ ತಹಶೀಲ್ದಾರ್ ಆರೋಪಿಯಂತೆ ಹಿಡಿದು ಕೈಗೆ ಸೀಲ್ ಹಾಕುತ್ತಿದ್ದರು. ಈ ಬಾರಿ ಆ ರೀತಿ ಮಾಡುತ್ತಿಲ್ಲ ಎಂದು ಕೆಂಡಾಮಂಡಲವಾಗಿ ಸಭೆಯಲ್ಲಿ ಕೆಲಕಾಲ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

  • ವಾರದಲ್ಲಿ ನಾಲ್ಕು ದಿನ ಹಾಸನ ಜಿಲ್ಲೆ ಸಂಪೂರ್ಣ ಲಾಕ್‍ಡೌನ್

    ವಾರದಲ್ಲಿ ನಾಲ್ಕು ದಿನ ಹಾಸನ ಜಿಲ್ಲೆ ಸಂಪೂರ್ಣ ಲಾಕ್‍ಡೌನ್

    – ಇಂದಿನಿಂದಲೇ ಟಫ್ ರೂಲ್ಸ್ ಜಾರಿ

    ಹಾಸನ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಇಂದಿನಿಂದಲೇ ಟಫ್‍ರೂಲ್ಸ್ ಜಾರಿ ಮಾಡಲಾಗಿದೆ. ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್‍ಡೌನ್ ಮಾಡಲು ಜಿಲ್ಲಾಉಸ್ತುವಾರಿ ಸಚಿವ ಗೋಪಾಲಯ್ಯ ಆದೇಶ ಹೊರಡಿಸಿದ್ದಾರೆ.

    ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಶಾಸಕರು, ಸಂಸದರು, ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಪ್ರಸ್ತುತ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚಿಸಿದ್ರು. ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಜನಪ್ರತಿನಿಧಿಗಳು ಕೊರೊನ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿದರು.

    ಈ ಹಿನ್ನೆಲೆಯಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾತ್ರ ಬೆ.6 ರಿಂದ 10 ರವರೆಗೆ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ. ಬಾರ್ ಗಳಿಗೂ ಅದೇ ದಿನಗಳು ಮಾತ್ರ ನಿಗದಿತ ಸಮಯ ತೆರೆಯಬೇಕು. ಆನಂತರ ಸಂಪೂರ್ಣ ಲಾಕ್ ಡೌನ್ ಮಾಡಲು ಸೂಚಿಸಲಾಗಿದೆ.

    ಉಳಿದ ನಾಲ್ಕು ದಿನಗಳು ಹಾಲಿನ ಡೈರಿ, ಆಸ್ಪತ್ರೆಗಳು, ನರ್ಸಿಂಗ್ ಹೋಂ, ಮೆಡಿಕಲ್ ಶಾಪ್ ಗಳನ್ನು ಬಿಟ್ಟು ಉಳಿದೆಲ್ಲವೂ ಸಂಪೂರ್ಣ ಬಂದ್ ಮಾಡುವಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಆದೇಶ ನೀಡಿದ್ದಾರೆ.

  • ಕಾಡಾನೆ ಹಾವಳಿ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಗೋಪಾಲಯ್ಯ ಭರವಸೆ

    ಕಾಡಾನೆ ಹಾವಳಿ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ: ಗೋಪಾಲಯ್ಯ ಭರವಸೆ

    – ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 10 ಸಾವಿರ ಕೋಟಿ ಮೀಸಲು

    ಹಾಸನ: ಜಿಲ್ಲೆಯಲ್ಲಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆಗೆ ಪರಿಹಾರ ಒದಗಿಸಲು ಫೆ.16 ರಂದು ಸಕಲೇಶಪುರ ಪಟ್ಟಣದಲ್ಲಿ ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಸಭೆಗೆ ಆನೆ ಹಾವಳಿಗೆ ತುತ್ತಾದ ಬೆಳೆಗಾರರನ್ನು ಹಾಗೂ ಗ್ರಾಮಸ್ಥರನ್ನು ಆಹ್ವಾನಿಸಲಾಗಿದೆ. ಇಲ್ಲಿ ಅವರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

    ಆನೆ ಕಾರಿಡಾರ್ ನಿರ್ಮಾಣ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈಗಾಗಲೇ ಪುಂಡಾನೆ ಸೆರೆ ಸೇರಿದಂತೆ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಕಾರಿಡಾರ್ ನಿರ್ಮಾಣಕ್ಕೆ ಸಭೆಯಲ್ಲಿ ಜನರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಈ ಬಾರಿಯ ಕೇಂದ್ರ ಬಜೆಟ್ ಅಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಪ್ರಮುಖವಾಗಿ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೆದ್ದಾರಿ ರಸ್ತೆ ಸುಧಾರಣೆ ಯೋಜನೆಯಾಗಿ ಹತ್ತು ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ಹಾಗೂ ರಸ್ತೆ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಸಚಿವರು ತಿಳಿಸಿದರು.

    ತಾತ್ಕಾಲಿಕ ರಸ್ತೆ ದುರಸ್ತಿಗೆ ಕಠಿಣ ಸೂಚನೆ:
    ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮಾರ್ಹದ ಸಕಲೇಶಪುರ ಹೊರಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಈ ನಡುವೆ ಸಂಚಾರಿ ಯೊಗ್ಯವಾಗಿ ಮಾಡಲು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯಕ್ಕೆ ಈ ತಿಂಗಳು 28ರವರೆಗೆ ಕಾಲಾವಕಾಶ ನೀಡಲಾಗಿದೆ. ಹದಿನೈದು ದಿನಗಳ ಬಳಿಕ ಸ್ಥಳ ಪರಿಶೀಲನೆ ನಡೆಸಿ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಹೆದ್ದಾರಿ ಮಾರ್ಗದಲ್ಲಿ ಬರುವಂತಹ ಸೇತುವೆ ಕಾಮಗಾರಿಯನ್ನು ಸಹ ಪೂರ್ಣ ಪ್ರಮಾಣದಲ್ಲಿ ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಲಾಗುವುದು ಎಂದು ಸಚಿವರು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರೀತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್ ಕೆ ಸುರೇಶ್, ಮಾಜಿ ಶಾಸಕ ಬಿ.ಆರ್. ಗುರುದೇವ್, ನಿಜಗುಣ ರಾಜ್, ವಿಜಯ್ ಇದ್ದರು.

  • ಕೊಟ್ಟ ಖಾತೆಗೆ ಜೀವ ತುಂಬಬೇಕು: ಗೋಪಾಲಯ್ಯ ಸಲಹೆ

    ಕೊಟ್ಟ ಖಾತೆಗೆ ಜೀವ ತುಂಬಬೇಕು: ಗೋಪಾಲಯ್ಯ ಸಲಹೆ

    ಹಾಸನ: ಕೆಲವರಿಗೆ ಇದೇ ಖಾತೆ ಬೇಕು ಎಂಬ ಆಸೆ ಇರಬಹುದು. ಆದರೆ ಎಲ್ಲರಿಗೂ ಒಂದೇ ಖಾತೆ ಕೊಡಲು ಆಗುತ್ತಾ? ಕೊಟ್ಟ ಖಾತೆಗೆ ಜೀವ ತುಂಬಬೇಕು ಎಂದು ಹಾಸನದಲ್ಲಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.

    ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಸಚಿವರು, ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಕೆಲ ಸಚಿವರಿಗೆ ಕೊಟ್ಟಿರುವ ಖಾತೆಗೆ ಜೀವ ತುಂಬುವಂತೆ ಕಿವಿಮಾತು ಹೇಳಿದ್ದಾರೆ. ತಮ್ಮ ಖಾತೆ ಬದಲಾವಣೆ ವಿಷ್ಯಕ್ಕೆ ಪ್ರತಿಕ್ರಿಸಿದ ಅವರು, ಯಾವ ಖಾತೆ ಕೊಟ್ಟರು ಅದಕ್ಕೆ ಜೀವತುಂಬುವ ಶಕ್ತಿ ನನ್ನಲ್ಲಿದೆ ಎಂದರು.

    ಯುವ ಪೀಳಿಗೆ ಹಫೀಮು, ಗಾಂಜಾ, ಡ್ರಗ್ಸ್ ನಿಂದ ಹಾಳಾಗುತ್ತಿದ್ದಾರೆ. ಪೊಲೀಸರಿಂದ ತನಿಖೆ ಮಾಡಿಸಿ ಅವರನ್ನು ಬಲಿ ಹಾಕುವ ಕೆಲಸ ಮಾಡುತ್ತೇವೆ. ಎಲ್ಲಾ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದೇನೆ. ಏನು ಬದಲಾವಣೆ ತರಲು ಯೋಚನೆ ಮಾಡಿದ್ದೇನೆ. ನಾಳೆ ಸಭೆ ನಂತರ ಘೋಷಣೆ ಮಾಡುತ್ತೇನೆ. ಸರ್ಕಾರಕ್ಕೆ ಆದಾಯ ಹೇಗೆ ತರಬೇಕು ಎನ್ನುವುದರ ಜೊತೆಗೆ ಜೊತೆಗೆ ಉತ್ತಮ ಮದ್ಯ ದೊರೆಯುವಂತೆ ಮಾಡುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಅವರು, ಖಾತೆ ಬದಲಾವಣೆಯಿಂದ ವ್ಯತ್ಯಾಸವೇನಿಲ್ಲ. ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುತ್ತೇನೆ. ಆಹಾರ ಖಾತೆಯನ್ನು ಕೋವಿಡ್ ಸಂದರ್ಭದಲ್ಲಿ ವಹಿಸಿದರು. ನಾನು ಹೆದರಲಿಲ್ಲ, ಎಲ್ಲಿ ಸಮಸ್ಯೆ ಇದೆ ಫೋನ್ ಬಂದ ಕೂಡಲೇ ಹೋಗಿ ಸ್ಪಂದಿಸಿದ್ದೇನೆ. ನನಗೆ ತೃಪ್ತಿ ಇದೆ. ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿಯಿದೆ ಎಂದು ಹೇಳಿದರು.

  • ಸಚಿವ ಗೋಪಾಲಯ್ಯಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ಸಚಿವ ಗೋಪಾಲಯ್ಯಗೆ ಕೊರೊನಾ ಪಾಸಿಟಿವ್ – ಆಸ್ಪತ್ರೆಗೆ ದಾಖಲು

    ಹಾಸನ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವರಾದ ಗೋಪಾಲಯ್ಯ ಅವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.

    ಇತ್ತೀಚೆಗಷ್ಟೇ ಜೆಡಿಎಸ್ ಶಾಸಕ ಹೆಚ್‍ಡಿ ರೇವಣ್ಣ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈಗ ಗೋಪಾಲಯ್ಯ ಅವರಿಗೆ ಸೋಂಕು ತಗುಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಗೋಪಾಲಯ್ಯ, ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ ಅಂತಾ ಹೇಳಿದ್ದಾರೆ.

    ನನಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಮನವಿ ಮಾಡಿದ್ದಾರೆ.

  • ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ತರಬೇತಿ ನೀಡಿ: ಕೆ.ಗೋಪಾಲಯ್ಯ

    ರೈತರಿಗೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ತರಬೇತಿ ನೀಡಿ: ಕೆ.ಗೋಪಾಲಯ್ಯ

    ಹಾಸನ: ರೈತರಿಗೆ ಸಹಾಯವಾಗುವಂತೆ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಜಾರಿ ಮಾಡಿದ್ದು, ಇದರ ಬಳಕೆ ಬಗ್ಗೆ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ರೈತರಿಗೆ ತರಬೇತಿ ನೀಡಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ತಿಳಿಸಿದ್ದಾರೆ.

    ಹಾಸನ ತಾಲೂಕಿನ ಹೂವಿನ ಹಳ್ಳಿ ಕಾವಲಿನ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಆ್ಯಪ್ ಮೂಲಕ ಯಾವ ಬೆಳೆ ಬೆಳೆದಿದ್ದಾರೆ ಎಷ್ಟು ಎಕರೆ ಎಷ್ಟು ಕುಂಟೆ ಎಂಬ ಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದರು.

    ಮೊಬೈಲ್ ಇಲ್ಲದ ರೈತರ ಹತ್ತಿರ ಆಗಸ್ಟ್ 24ರ ನಂತರ ಅಧಿಕಾರಿಗಳು ಭೇಟಿ ನೀಡಿ ಆ್ಯಪ್ ಮೂಲಕ ಸಮೀಕ್ಷೆ ನಡೆಸಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಪ್ರಕಟಿಸಲಾಗುತ್ತದೆ. ರೈತರು ಮುಂದಿನ ದಿನಗಳಲ್ಲಿ ಮಳೆ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ಮತ್ತು ಕಾಲ ಕಾಲಕ್ಕೆ ಬೆಳೆಯುವ ಬೆಳೆಗಳ ಕುರಿತ ಮಾಹಿತಿ ಸಂಗ್ರಹವಿರುತ್ತದೆ. ಇದರಿಂದ ಸರ್ಕಾರಕ್ಕೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದರು.

    ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಮಾತನಾಡಿ, ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ತಮ್ಮ ಜಮೀನಿನ ಮತ್ತು ಬೆಳೆಗಳ ಫೋಟೋವನ್ನು ರೈತರೇ ಅಪ್ಲೋಡ್ ಮಾಡಬಹುದಾಗಿದೆ. ಆಪ್ ಮೂಲಕ ಸರ್ವೆ ನಂಬರ್ ಖಾತರಿ ಪಡಿಸಿಕೊಂಡು ಎರಡು ರೀತಿಯ ಬೆಳೆ ಬೆಳೆದಿದ್ದಲ್ಲಿ ಅದರ ಪೂರ್ಣ ವಿವರ ದಾಖಲಿಸಿ ಅದಕ್ಕೆ ತಕ್ಕಂತೆ ಫೋಟೋ ಅಪ್ಲೋಡ್ ಮಾಡಬಹುದಾಗಿದೆ ಎಂದರು.

    ಸರ್ಕಾರದ ಮುಖ್ಯ ಉದ್ದೇಶವೇನೆಂದರೆ ಜಮೀನಿನ ವಿವರಗಳನ್ನು ರೈತರೇ ದಾಖಲಿಸುವ ಮೂಲಕ ಯಾವುದೇ ತಪ್ಪಾಗದಂತೆ ನಿಗಾವಹಿಸುವುದಾಗಿದೆ. ಈ ಹಿಂದೆ ಇಸ್ಸಾಗಳಲ್ಲಿ ಗೊಂದಲಗಳು ಉಂಟಾಗುತ್ತಿದ್ದು, ಇನ್ನು ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸ್ವಯಂ ಪ್ರೇರಿತರಾಗಿ ಬಂದು ತಮ್ಮ ಜಮೀನಿನ ಬೆಳೆಗಳ ವಿವರಗಳನ್ನು ದಾಖಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್, ತಿಳಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಾಧಿಕಾರಿ ಡಾ. ನವೀನ್ ಭಟ್, ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಕಾಂತರಾಜು, ಜಂಟಿ ಕೃಷಿ ನಿರ್ದೇಶಕರಾದ ರವಿ ಮತ್ತಿತರರು ಹಾಜರಿದ್ದರು.

  • ಹೇಮಾವತಿ, ಕಾವೇರಿ ನದಿಗೆ ತಡೆಗೊಡೆ- ಸಚಿವ ಗೋಪಾಲಯ್ಯ ಭರವಸೆ

    ಹೇಮಾವತಿ, ಕಾವೇರಿ ನದಿಗೆ ತಡೆಗೊಡೆ- ಸಚಿವ ಗೋಪಾಲಯ್ಯ ಭರವಸೆ

    ಹಾಸನ: ರಾಮನಾಥಪುರ ಪಟ್ಟಣದಿಂದ ಹಾದು ಹೋಗಿರುವ ಹೇಮಾವತಿ, ಕಾವೇರಿ ನದಿಯಿಂದ ಹಾನಿಯಾಗದಂತೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಭರವಸೆ ನೀಡಿದರು.

    ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸೂಚನೆಯಂತೆ ರಾಮನಾಥಪುರ ನೆರೆ ಹಾವಳಿ ಪ್ರದೇಶದ ಪರಿಶೀಲನೆಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೇಮಾವತಿ, ಕಾವೇರಿ ನದಿಯಿಂದ ಆಗಿರುವಂತಹ ಹಾನಿಯನ್ನು ಕಂಡಿದ್ದು ಮುಂದಿನ ಕೆಲ ದಿನಗಳಲ್ಲಿ ತಡೆಗೋಡೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

    ಪ್ರತಿವರ್ಷ ಮಳೆಯ ಅವಾಂತರ ಹೆಚ್ಚುತ್ತಿದ್ದು ಸಕಲೇಶಪುರ ಮಡಿಕೇರಿ ಹಾಗೂ ಇತರ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ಸಂಭವಿಸುತ್ತಿದೆ. ಇದಕ್ಕೆ ಅರಣ್ಯನಾಶವು ಒಂದು ಕಾರಣವಾಗಿದೆ. ಮೂರ್ನಾಲ್ಕು ತಿಂಗಳು ಬರಬೇಕಾದ ಮಳೆ 8-10 ದಿನದಲ್ಲಿ ಸುರಿಯುತ್ತಿರುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂದು ಹೇಳಿದರು.

    ಜಿಲ್ಲೆಯ ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನೀರಿನ ಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಹಾಗೂ ಇತರ ಜಿಲ್ಲೆಗಳಿಗೆ ನಾಲೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ನೀರನ್ನು ಹರಿ ಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.

    ರಾಮನಾಥಪುರ ಪಟ್ಟಣಕ್ಕೆ ಹೇಮಾವತಿ, ಕಾವೇರಿ ನೀರು ಉಕ್ಕಿ ಹರಿಯದಂತೆ ತಡೆಗೋಡೆ ನಿರ್ಮಾಣ ನಮ್ಮ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸುವುದು ನಿಶ್ಚಿತ. ಸರ್ಕಾರ ಜನರ ಸಂಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರಕಲಗೂಡು ಕ್ಷೇತ್ರದ ಶಾಸಕ ಎ ಟಿ ರಾಮಸ್ವಾಮಿ ಮಾಜಿ ಸಚಿವ ಮಂಜು ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.