Tag: Gonibidu

  • ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – PSIಗೆ 14 ದಿನ ನ್ಯಾಯಾಂಗ ಬಂಧನ

    ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – PSIಗೆ 14 ದಿನ ನ್ಯಾಯಾಂಗ ಬಂಧನ

    ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ ಪ್ರಕರಣದ ಬಂಧಿತ ಆರೋಪಿ ಹಾಗೂ ಸಬ್ ಇನ್‍ಸ್ಪೆಕ್ಟರ್ ಅರ್ಜುನ್ ಗೆ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಅರ್ಜುನ್ ವಿಚಾರಣೆಗೆಂದು ಕರೆತಂದು ಮೇ.10ರಂದು ಯುವಕನಿಗೆ ಮೂತ್ರ ಕುಡಿಸಿ ನೆಲದ ಮೇಲೆ ಬಿದ್ದ ಮೂತ್ರ ನೆಕ್ಕಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಪ್ರಕರಣ ಸಂಬಂಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಮೂತ್ರ ಕುಡಿಸಿದ ಆರೋಪದಡಿ ಪಿ.ಎಸ್.ಐ. ಅರ್ಜುನ್ ಮೇಲೂ ಕೇಸ್ ದಾಖಲಾಗಿತ್ತು. ಸರ್ಕಾರ ಪ್ರಕರಣದ ತನಿಖೆಯನ್ನ ಸಿಐಡಿ ಹೆಗಲಿಗೆ ಹಾಕಿತ್ತು. ಅಕ್ಟೋಬರ್ 1ರಂದು ಬೆಂಗಳೂರಿನಲ್ಲಿ ಪಿಎಸ್‍ಐ. ಅರ್ಜುನ್ ನನ್ನ ಬಂಧಿಸಿದ ಸಿ.ಐ.ಡಿ. ಪೊಲೀಸರು ಇಂದು ಚಿಕ್ಕಮಗಳೂರು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ ಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

    ಗೋಣಿಬೀಡು ಠಾಣೆಯಲ್ಲಿ ಪಿ.ಎಸ್.ಐ. ಆಗಿದ್ದ ಅರ್ಜುನ್ ಮೇ 10ರಂದು ಮಹಿಳೆಗೆ ಕರೆ ಮಾಡಿದ ವಿಚಾರ ಸಂಬಂಧ ಪುನೀತ್ ಯುವಕನನ್ನ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ನನಗೆ ಬಾಯಾರಿಕೆ ಎಂದು ನೀರು ಕೇಳಿದಾಗ ಮತ್ತೊಬ್ಬ ಆರೋಪಿಯ ಮೂತ್ರ ಕುಡಿಸಿ, ನೆಲಕ್ಕೆ ಬಿದ್ದ ಮೂತ್ರವನ್ನ ನೆಕ್ಕಿಸಿದ್ದರು ಎಂದು ಪುನೀತ್ ಆರೋಪಿಸಿದ್ದರು. ಇದನ್ನೂ ಓದಿ: PSI ಮೂತ್ರ ಕುಡಿಸಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದೇವೆ: ಐಜಿಪಿ ದೇವ್ ಜ್ಯೋತಿ ರೇ

    ಘಟನೆ ಸಂಬಂಧ ನೊಂದ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ. ಬಳಿಕ ಅರ್ಜುನ್ ವಿರುದ್ಧವೂ ಗೋಣಿಬೀಡು ಠಾಣೆಯಲ್ಲಿ ಕೇಸ್ ದಾಖಲಾಗಿ, ಸರ್ಕಾರ ಅರ್ಜುನ್ ರನ್ನ ಅಮಾನತು ಮಾಡಿ ಪ್ರಕರಣವನ್ನ ಸಿಐಡಿಗೆ ವಹಿಸಿತ್ತು. ಬಂಧನಕ್ಕೊಳಗಾಗುವ ಆತಂಕದಿಂದ ಅರ್ಜುನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಅಕ್ಟೋಬರ್ 1ರ ಬುಧವಾರ ರಾತ್ರಿ ಸಿಐಡಿ ಪೊಲೀಸರು ಅರ್ಜುನ್ ರನ್ನ ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದನ್ನೂ ಓದಿ: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್‍ಐ ವಿರುದ್ದ ಎಫ್‍ಐಆರ್ ದಾಖಲು

  • ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್‍ಐ ವಿರುದ್ದ ಎಫ್‍ಐಆರ್ ದಾಖಲು

    ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್‍ಐ ವಿರುದ್ದ ಎಫ್‍ಐಆರ್ ದಾಖಲು

    ಚಿಕ್ಕಮಗಳೂರು: ವಿಚಾರಣೆಗೆ ಕರೆತಂದ ದಲಿತ ಯುವಕನಿಗೆ ಠಾಣೆಯಲ್ಲೇ ಬೇರೊಬ್ಬ ಆರೋಪಿಯ ಮೂತ್ರ ಕುಡಿಸಿದ್ದ ಆರೋಪದಡಿ ತಾಲೂಕಿನಲ್ಲಿ ಪಿಎಸ್‍ಐ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್‍ಐ ಅರ್ಜುನ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಗೋಣಿಬೀಡು ಠಾಣಾ ವ್ಯಾಪ್ತಿಯ ಕಿರಗುಂದ ಗ್ರಾಮದ ಯುವಕ ಪುನೀತ್ ವಿವಾಹಿತ ಹಿಳೆ ಜೊತೆ ಮಾತನಾಡುತ್ತಿದ್ದು, ಇದರಿಂದ ಸಂಸಾರದಲ್ಲಿ ಗಲಾಟೆ ನಡೆಯುತ್ತಿದೆ ಎಂದು ವಿವಾಹಿತ ಮಹಿಳೆಯ ಪತಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಪಿಎಸ್‍ಐ ಅರ್ಜುನ್ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ.

    ಆರೋಪ ಏನು?
    ಠಾಣೆಯಲ್ಲಿ ಪಿಎಸ್‍ಐ ನನ್ನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನನಗೆ ತುಂಬಾ ದಣಿವಾಗಿತ್ತು. ಆಗ ನಾನು ನೀರು ಕೇಳಿದ್ದಕ್ಕೆ ಅರ್ಜುನ್ ಅವರು ಕಳ್ಳತನ ಆರೋಪದಡಿ ಠಾಣೆಗೆ ಕರೆತಂದಿದ್ದ ಬೇರೊಬ್ಬ ಆರೋಪಿ ಚೇತನ್‍ನಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿ ಯಾರಿಗಾದರೂ ಹೇಳಿದರೆ ಚೆನ್ನಾಗಿ ಇರುವುದಿಲ್ಲ ಎಂದು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.

    ಠಾಣೆಯಲ್ಲಿ ಪೊಲೀಸರು ನನ್ನನ್ನ ತುಂಬಾ ವಿಚಿತ್ರವಾಗಿ ನಡೆಸಿಕೊಂಡಿದ್ದಾರೆ. ಲಾಕ್‍ಡೌನ್ ಇದ್ದ ಕಾರಣ ನಮ್ಮ ಮನೆಯವರು ಯಾರೂ ಬರಲು ಆಗಲಿಲ್ಲ. ಹೀಗೆ ಮಾಡಿದರೆ ನಿನ್ನನ್ನ ಬಿಡುತ್ತೇನೆ ಎಂದರು. ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನು ನಾಲಿಗೆಯಲ್ಲಿ ನೆಕ್ಕಿಸಿದರು. ಅವರು ಹೇಳಿದ ಎಲ್ಲಾ ಕೆಲಸ ಮಾಡಿದರೂ ನನ್ನನ್ನ ಮನೆಗೆ ಬಿಡಲಿಲ್ಲ. ರಾತ್ರಿ 10 ಗಂಟೆಯವರೆಗೆ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಮನೆಯವರು ಕೂಲಿಗೆ ಹೋಗಿದ್ದರು. ರಾತ್ರಿ 10 ಗಂಟೆಗೆ ನನ್ನ ಮಾವ ಬಂದು ಕರೆದುಕೊಂಡು ಹೋದರು. ನನ್ನ ಮೇಲೆ ಈವರೆಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆ ಮಹಿಳೆ ಕೂಡ ನನ್ನ ವಿರುದ್ಧ ದೂರು ನೀಡಿಲ್ಲ. ಸಬ್ ಇನ್ಸ್‍ಪೆಕ್ಟರ್ ಯಾರೋ ಒಂದು ಗುಂಪಿನ ಮಾತು ಕೇಳಿ ಈ ರೀತಿ ವರ್ತಿಸಿದ್ದಾರೆ. ಕೈಕಾಲು ಕಟ್ಟಿ ಅಂಗೈ ಹಾಗೂ ಮುಂಗಾಲಿಗೆ ಹೊಡೆದಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ.

    ಪೊಲೀಸರ ವರ್ತನೆಯಿಂದ ಮನನೊಂದು ಪುನೀತ್ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪಿಎಸ್‍ಐ ವಿರುದ್ಧ ಕ್ರಮಕ್ಕೆ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಅರ್ಜುನ್ ಅವರನ್ನು ವರ್ಗಾವಣೆ ಮಾಡಿರುವ ಎಸ್‍ಪಿ ಅಕ್ಷಯ್ ಡಿವೈಎಸ್ಪಿ ಪ್ರಭು ನೇತೃತ್ವದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪಿಸ್‍ಐ ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342, 323, 504, 506, 330, 348 ರ ಅಡಿ ಪ್ರಕರಣ ದಾಖಲಾಗಿದೆ.