Tag: Golden Chariot

  • ಮಂತ್ರಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಚಿನ್ನದ ರಥೋತ್ಸವ

    ಮಂತ್ರಾಲಯದಲ್ಲಿ ಅದ್ದೂರಿಯಾಗಿ ಜರುಗಿದ ಚಿನ್ನದ ರಥೋತ್ಸವ

    -ರಾಯರ ವೃಂದಾವನಕ್ಕೆ ಶ್ರೀಗಳಿಂದ ಮಹಾಪಂಚಾಮೃತ ಅಭಿಷೇಕ

    ರಾಯಚೂರು: ಮಂತ್ರಾಲಯ (Mantralaya) ರಾಯರ ಮಠದಲ್ಲಿ ಆರಾಧನಾ ಮಹೋತ್ಸವದ ಮುಖ್ಯ ಘಟ್ಟವಾದ ಮಧ್ಯಾರಾಧನೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ಚಿನ್ನದ ರಥೋತ್ಸವ ಜರುಗಿತು.

    ತುಂಗಾ ತೀರನಿವಾಸಿ, ಭಕ್ತರ ಪಾಲಿನ ಕಲ್ಪತರು ಕಾಮಧೇನು, ಮಂತ್ರಾಕ್ಷತೆ ಮಹಿಮೆಯ ಮಹಾಪುರುಷ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಮಂತ್ರಾಲಯದಲ್ಲಿ ಕಳೆಗಟ್ಟಿದೆ. ಗುರುರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 353 ವರ್ಷಗಳು ಸಂದಿವೆ. ಶ್ರಾವಣ ಶುಕ್ಲ ಪಕ್ಷದ ಬಿದಿಗೆಯ ಮಂಗಳಕರವಾದ ಈ ದಿನವನ್ನ ಮಧ್ಯಾರಾಧನೆಯಾಗಿ ಆಚರಿಸಲಾಗುತ್ತಿದೆ.ಇದನ್ನೂ ಓದಿ: ರಾಯರು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 354 ವರ್ಷ: ಮಂತ್ರಾಲಯದಲ್ಲಿ ಮಧ್ಯಾರಾಧನೆ ಸಂಭ್ರಮ

    ಮಧ್ಯಾರಾಧನೆಯ ಅಂಗವಾಗಿ ಮಠದ ಪ್ರಾಕಾರದಲ್ಲಿ ಚಿನ್ನದ ರಥೋತ್ಸವ ಅದ್ದೂರಿಯಾಗಿ ಜರುಗಿದೆ. ರಾಯರು ರಚಿಸಿದ ಪರಿಮಳ ಗ್ರಂಥ ಹಾಗೂ ಮೃತ್ತಿಕಾ ಬೃಂದಾವನವನ್ನಿಟ್ಟು ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ಚಿನ್ನದ ರಥೋತ್ಸವದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಈ ದಿನ ವಿಶೇಷವಾಗಿ ಸ್ವತಃ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರಾಯರ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕವನ್ನ ನೆರವೇರಿಸಿದರು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಶ್ರೀಗಳು ವೃಂದಾವನದ ನಾಲ್ಕು ದಿಕ್ಕಿಗೂ ಅಭಿಷೇಕ ಮಾಡಿದರು. ಬಳಿಕ ಚಿನ್ನದ ಕವಚದೊಂದಿಗೆ ಅಲಂಕಾರ ಪೂಜೆ ನಡೆಯಿತು.

    ಇಂದಿಗೂ ರಾಯರು ವೃಂದಾವನದಲ್ಲಿ ತಮ್ಮ ಯೋಗ ಸಾಮರ್ಥ್ಯದಿಂದ ಸಶರೀರರಾಗಿದ್ದು, ಇಂದು ವಿಶೇಷವಾಗಿ ಭಕ್ತರನ್ನ ಅನುಗ್ರಹಿಸುತ್ತಾರೆ ಅನ್ನೋ ಪ್ರತೀತಿಯಿದೆ. ಈ ಹಿನ್ನೆಲೆ ಮಧ್ಯಾರಾಧನೆ ಎನ್ನುವುದು ಆರಾಧನಾ ಮಹೋತ್ಸವದಲ್ಲಿ ವಿಶೇಷವಾದದ್ದು. ಇನ್ನೂ ನೂತನವಾಗಿ ನಿರ್ಮಾಣವಾದ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ರಾತ್ರಿ ವೇಳೆ ತೆಪ್ಪೋತ್ಸವ ಜರುಗಲಿದೆ.

    ಇನ್ನೂ ನಾಳೆ ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ. ಉತ್ತರಾರಾಧನೆಯೊಂದಿಗೆ ರಾಯರ ಆರಾಧನಾ ಮಹೋತ್ಸವದ ಮೂರು ದಿನಗಳ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.ಇದನ್ನೂ ಓದಿ: ಮಂತ್ರಾಲಯದಲ್ಲಿ ಪೂರ್ವಾರಾಧನೆ ಸಂಭ್ರಮ – ಸಂಜೆ ಗುರು ಅನುಗ್ರಹ ಪ್ರಶಸ್ತಿ ಪ್ರದಾನ

  • 12 ಗ್ರಾಂ ಚಿನ್ನದಲ್ಲಿ ಮೂಡಿಬಂತು ಹಂಪಿಯ ಕಲ್ಲಿನ ರಥ!

    12 ಗ್ರಾಂ ಚಿನ್ನದಲ್ಲಿ ಮೂಡಿಬಂತು ಹಂಪಿಯ ಕಲ್ಲಿನ ರಥ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು ಬಂಗಾರದಲ್ಲಿ ಹಂಪಿಯ ಕಲ್ಲಿನ ರಥದ ಪ್ರತಿರೂಪ ಕೆತ್ತುವ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ.

    ಕಾರವಾರ ನಗರದ ಕಡವಾಡದ ನಿವಾಸಿಯಾಗಿರುವ ಮಿಲಿಂದ್ ಅಣ್ವೇಕರ್ ಅವರು 12 ಗ್ರಾಂ ಬಂಗಾರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ರಥವನ್ನು ರಚನೆ ಮಾಡಿದ್ದಾರೆ. 17 ವರ್ಷಗಳಿಂದ ಆಭರಣ ತಯಾರಿಕೆಯಲ್ಲಿ ಪಳಗಿರುವ ಇವರು, ಬಂಗಾರದ ರಥ ನಿರ್ಮಾಣಕ್ಕಾಗಿ ಒಂದು ತಿಂಗಳು ಸಮಯ ತೆಗೆದುಕೊಂಡಿದ್ದಾರೆ.

    ಒಂದು ಇಂಚು ಉದ್ದ ಒಂದೂವರೆ ಇಂಚು ಅಗಲ ಸುತ್ತಳತೆಯ ಈ ಬಂಗಾರದ ರಥ ಅತಿ ಅದ್ಭುತವಾಗಿದ್ದು ಆನೆಗಳು, ರಥ, ರಥದ ಚಕ್ರಗಳು ಅತ್ಯಂತ ನಾಜೂಕಾಗಿ ಮೂಡಿಬಂದಿದೆ. ಇನ್ನು ಇದರ ಒಳಭಾಗದಲ್ಲಿ ಚಿಕ್ಕ ದೀಪವನ್ನು ಅಳವಡಿಸಿದ್ದು ಆಕರ್ಷಕವಾಗಿ ಕಾಣಿಸಿದೆ.

    2013ರಲ್ಲಿ 0.980 ಮಿಲಿಗ್ರಾಂನಲ್ಲಿ ಬಂಗಾರದ ಚೈನ್ ತಯಾರಿಸಿ ಮಿಲಿಂದ್ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೇ ಈಗ ವಿಶ್ವ ದಾಖಲೆ ನಿರ್ಮಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ

    ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ

    ಬೆಂಗಳೂರು: ಸುವರ್ಣ ರಥ(ಗೋಲ್ಡನ್ ಚಾರಿಯಟ್) ಆದಾಯ ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೇ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‍ಟಿಡಿಸಿ)ನಡುವೆ ಇದ್ದ ಗೊಂದಲ ಬಗೆಹರಿದಿದೆ.

    ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಕೆಎಸ್‍ಟಿಡಿಸಿ ವ್ಯವಸ್ಥಾಪಕ ನಿರ್ದೆಶಕರ ಮಾತುಕತೆ ಫಲವಾಗಿ ಇನ್ನು ಮುಂದೆ ಸುವರ್ಣ ರಥದ ಆದಾಯ ರೈಲ್ವೆ ಮಂಡಳಿಗೆ 56%, ಹಾಗೂ ಕೆಎಸ್‍ಟಿಡಿಗೆ 44% ರಷ್ಟು ಸಂದಾಯವಾಗಲಿದೆ. ಈ ಮಾತುಕತೆಯ ಫಲವಾಗಿ ವರ್ಷಕ್ಕೆ 10 ಬಾರಿ ಪ್ರವಾಸ ಕೈಗೊಳ್ಳುತ್ತಿದ್ದ ಗೋಲ್ಡನ್ ಚಾರಿಯಟ್, ಮುಂದಿನ ದಿನಗಳಲ್ಲಿ ಕನಿಷ್ಠ 20 ಬಾರಿ ಪ್ರಯಾಣಕ್ಕೆ ಅಣಿಯಾಗಬಹುದು ಅಂತ ಅಂದಾಜಿಸಲಾಗಿದೆ.

    ಪ್ರಸ್ತುತ ಒಂದು ವಾರದ ಪ್ರಯಾಣ ಪ್ಯಾಕೇಜ್ ಹೊಂದಿರುವ ಗೋಲ್ಡನ್ ಚಾರಿಯಟ್, ಭವಿಷ್ಯದಲ್ಲಿ 2-3 ದಿನಗಳ ಪ್ರಯಾಣದ ವೇಳಾಪಟ್ಟಿ ಸಿದ್ಧಪಡಿಸಲು ಆಲೋಚಿಸಿದೆ. ಸ್ಥಳೀಯ ಪ್ರವಾಸಿಗರನ್ನು ಹಂಪಿ, ಬಾದಾಮಿ, ಮೈಸೂರು ಮಾರ್ಗಗಳಲ್ಲಿ ಕರೆದೊಯ್ಯಲು ಉದ್ದೇಶಿಸಿದೆ.