Tag: gold

  • ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ್ದಕ್ಕೆ ಚಾಲಕರಿಗೆ ಸನ್ಮಾನ

    ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹಿಂದಿರುಗಿಸಿದ್ದಕ್ಕೆ ಚಾಲಕರಿಗೆ ಸನ್ಮಾನ

    ಹೈದರಾಬಾದ್: ತಮ್ಮ ವಾಹನದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕೆ ಹೈದರಾಬಾದ್ ಇಬ್ಬರು ಚಾಲಕರಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ

    ಚಾಲಕ ಮಿರ್ಜಾ ಮೊಹಮ್ಮದ್ ಅವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಂದಿನ ಸೀಟಿನಲ್ಲಿ 6.5 ತೊಲೆ ಬಂಗಾರದ ಚಿನ್ನಾಭರಣವನ್ನು ಬಿಟ್ಟು ಹೋಗಿದ್ದನ್ನು ನೋಡಿದ್ದರು. ಚಿನ್ನಾಭಾರಣವನ್ನು ನೋಡಿದ ತಕ್ಷಣ ಅದನ್ನು ಎಸ್‍ಆರ್ ನಗರ ಪೊಲೀಸ್ ಠಾಣೆಗೆ ಹಿಂತಿರುಗಿಸಿದ್ದರು.

    ಮೊಹಮ್ಮದ್ ಅವರ ಪ್ರಾಮಾಣಿಕತೆಯನ್ನು ನೋಡಿ ಸರ್ಕಲ್ ಇನ್ಸ್ ಪೆಕ್ಟರ್ ವಹೀದುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

    ಇದೇ ರೀತಿ ಮತ್ತೊಬ್ಬ ಕ್ಯಾಬ್ ಚಾಲಕ 3 ತೊಲೆ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ಬ್ಯಾಗನ್ನು ಪೊಲೀಸರಿಗೆ ಹಿಂದಿರುಗಿಸಿದ್ದರು. ಇವರ ಪ್ರಾಮಾಣಿಕತೆಯನ್ನು ನೋಡಿ ಜೀದಿಮಟ್ಲಾ ಪೊಲೀಸರು ಸನ್ಮಾನಿಸಿದ್ದಾರೆ.

  • ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

    ಗದಗ: ಗದಗ ಜಿಲ್ಲಾಡಳಿತ ಏಕಾಏಕಿ ಕಪ್ಪತ್ತಗುಡ್ಡದ ಗುಹೆಗಳನ್ನು ಮುಚ್ಚಲು ಮುಂದಾಗಿದ್ದು, ಈ ವೇಳೆ ಜಿಲ್ಲಾಡಳಿತದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸವನ್ನು ಇಲ್ಲಿನ ಜನರು ಜೀವದ ಹಂಗು ತೊರೆದು ಮಾಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವಿಶೇಷ ವರದಿ ಪ್ರಸಾರ ಮಾಡಿದ್ದು, ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಅಧಿಕಾರಿಗಳು ಏಕಾಏಕಿ ಜೆಸಿಬಿ ಮೂಲಕ ಗುಹೆ ಮುಚ್ಚಲು ಮುಂದಾಗಿದ್ದರು. ಆದರೆ ಈ ವೇಳೆ ಗುಹೆಯಲ್ಲಿ ಮೂವರು ಬಂಗಾರದ ಅದಿರು ತರಲು ಹೋಗಿರವ ಶಂಕೆ ವ್ಯಕ್ತವಾಗಿದ್ದು, ಗುಹೆ ಮುಚ್ಚದಂತೇ ಅಧಿಕಾರಿಗಳಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ. 

    ಗುಹೆಗಳ ಹಿಂದಿನ ರಹಸ್ಯ ಏನು?:
    ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಸಾಂಗ್ಲಿ ಮೈನಿಂಗ್ ಹೆಸರಿನಲ್ಲಿ ಅದಿರು ಮೂಲಕ ಚಿನ್ನ ತೆಗೆಯುತ್ತಿದ್ದರು. ನಂತರದಲ್ಲಿ ಕಾರಣಾಂತರಗಳಿಂದ ಸಾಂಗ್ಲಿ ಮೈನಿಂಗ್ ಸ್ಥಗಿತಗೊಂಡಿತ್ತು. ಬಳಿಕ 1980ರ ದಶಕದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎಂಬ ಕಂಪನಿ ಕೇಂದ್ರ ಸರ್ಕಾರದ ಅಧೀನದಲ್ಲಿ ನಿಕ್ಷೇಪಗಳನ್ನ ತೆಗೆಯುತ್ತಿದ್ರು. ಈ ವೇಳೆ ತೋಡಿರುವ ಸುರಂಗ ಗುಹೆಗಳು ಹಾಗೆ ಉಳಿದುಕೊಂಡಿವೆ. ಹೀಗಾಗಿ ಈ ಗುಹೆಗಳ ಮೂಲಕ ಈಗಲೂ ಅದಿರು ತರುವ ಜನರು ಇದನ್ನ ಬಂಗಾರದ ಗುಂಡಿ ಅಂತಾನೇ ಕರೆಯುತ್ತಾರೆ.

    500 ಮೀಟರ್ ಆಳಕ್ಕೆ ಹೋದಂತೆ ಕಡಿದಾಗೋ ಈ ಗುಹೆ ಕವಲೊಡೆದು ನಾಲ್ಕೈದು ಕಿಲೋಮೀಟರ್ ವರೆಗೆ ಕ್ರಮಿಸಿವೆ. ಇಲ್ಲಿ ಅನೇಕ ಬಾರಿ ಗುಹೆಗಳು ಕುಸಿದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಒಂದು ಟನ್ ಮಣ್ಣಿನಿಂದ 2 ರಿಂದ 4 ಗ್ರಾಂ ಚಿನ್ನ ತೆಗೆಯಬಹುದಾಗಿದೆ. ಚಿನ್ನ ಸಂಸ್ಕರಣೆಗೆ ಸೈನೇಡ್ ಬಳಕೆಯಿಂದ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ.

     

  • ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಕೋಟಿ ರೂ. ಮೌಲ್ಯದ ಚಿನ್ನಾಭರಣಕ್ಕಾಗಿ ಕೊಳಚೆ ನೀರಿನಲ್ಲಿ ಮುಳುಗಿ ಹುಡುಕಾಡಿದ ಜನ!

    ಮೈಸೂರು: ಅಪ್ಪ-ಮಗ ಕದ್ದಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾಲನ್ನು ಕೆರೆಯಲ್ಲಿ ಅಡಗಿಸಿಟ್ಟಿದ್ದಾರೆಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಕೆರೆಯಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರಿನಲ್ಲಿ ಮುಳುಗೇಳುವ ಮೂಲಕ ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯಲ್ಲಿ ಈ ಹುಡುಕಾಟ ನಡೆದಿದೆ. ಕೊಳಚೆ ನೀರು ತುಂಬಿದ್ದ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕೆರೆಯ ಬಳಿ ಜಮಾವಣೆಯಾದ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.

    ಪೊಲೀಸರು ಬರುತ್ತಿದ್ದಂತೆ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಕಳ್ಳ ಮಾಲಿನ ಹುಡುಕಾಟದ ವಿಚಾರ ತಿಳಿದು ಬೇಸ್ತು ಬಿದ್ದ ಪೊಲೀಸರು, ಕೆರೆಯಲ್ಲಿ ಯಾರೂ ಕೂಡ ಕದ್ದ ಮಾಲನ್ನು ಅಡಗಿಸಿಟ್ಟಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.

  • ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಗ್ರಾಹಕನಿಂದ ಹಲ್ಲೆ

    ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಗ್ರಾಹಕನಿಂದ ಹಲ್ಲೆ

    ಉಡುಪಿ: ಬ್ಯಾಂಕಿನಲ್ಲಿ ಚಿನ್ನದ ಸರ ಅಡವಿಟ್ಟು ಪಡೆದ ಸಾಲದ ಹಣ ವಾಪಾಸ್ ನೀಡದ್ದಕ್ಕೆ ಸರವನ್ನು ಹರಾಜು ಹಾಕಿದ್ದರಿಂದ ಗ್ರಾಹಕನೊಬ್ಬ ಮಹಿಳಾ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾಸರಗೋಡು ಸಮೀಪದ ಕುಂಬ್ಳೆಯಲ್ಲಿ ನಡೆದಿದೆ.

    ಸಾಲ ಮರುಪಾವತಿಸದಿದ್ದಕ್ಕೆ ಚಿನ್ನದ ಸರವನ್ನು ಹರಾಜು ಹಾಕಿದ ಫೈನಾನ್ಸ್ ನವರ ಕ್ರಮವನ್ನು ವಿರೋಧಿಸಿ ಗ್ರಾಹಕನೋರ್ವ ಬ್ಯಾಂಕ್ ನೊಳಗೆ ನುಗ್ಗಿ ಬ್ಯಾಂಕ್ ಮ್ಯಾನೇಜರ್ ಗೆ ಥಳಿಸಿದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ನಡೆದಿದೆ. ಇಮ್ತೀಯಾಝ್ ಹಲ್ಲೆ ಮಾಡಿದ ಆರೋಪಿ. 2016ರಲ್ಲಿ ಇಮ್ತೀಯಾಝ್ 10 ಗ್ರಾಂ ಚಿನ್ನವನ್ನು ಮುತ್ತೂಟ್ ಫೈನಾನ್ಸ್ ಬ್ಯಾಂಕ್‍ನಲ್ಲಿ ಅಡವಿಟ್ಟು 20 ಸಾವಿರ ರೂ. ಸಾಲ ಪಡೆದಿದ್ದ.

    ಒಂದು ವರ್ಷಗಳಿಂದ ನೋಟಿಸ್ ನೀಡಿದ್ರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಚಿನ್ನದ ಸರವನ್ನು ಬ್ಯಾಂಕ್ ನವರು ಹರಾಜು ಹಾಕಿದ್ರು. ಇಂದು ಬೆಳಗ್ಗೆ 10 ಗಂಟೆಗೆ ಬ್ಯಾಂಕ್ ಗೆ ಬಂದ ಇಮ್ತೀಯಾಝ್ ಬ್ಯಾಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಲ್ಯಾಪ್ ಟಾಪ್ ಗಳನ್ನು ಬಿಸಾಡಿ ಬ್ಯಾಂಕ್ ಮ್ಯಾನೇಜರ್ ಅಶ್ವಿನಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಅಶ್ವಿನಿಯನ್ನು ಕುಂಬ್ಳೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹಲ್ಲೆ ಮಾಡಿದ ಇಮ್ತಿಯಾಝ್ ವಿರುದ್ಧ ಕುಂಬ್ಳೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

  • ಬೆಳ್ಳಿ ಆಭರಣ ತೋರಿಸಲು ಕೇಳಿ ಚಿನ್ನದ ಗುಂಡುಗಳನ್ನ ಎಗರಿಸಿದ್ರು- ಕೆಲವೇ ನಿಮಿಷದಲ್ಲಿ ಸಿಕ್ಕಿಬಿದ್ದ ಕಳ್ಳಿಯರು

    ಬೆಳ್ಳಿ ಆಭರಣ ತೋರಿಸಲು ಕೇಳಿ ಚಿನ್ನದ ಗುಂಡುಗಳನ್ನ ಎಗರಿಸಿದ್ರು- ಕೆಲವೇ ನಿಮಿಷದಲ್ಲಿ ಸಿಕ್ಕಿಬಿದ್ದ ಕಳ್ಳಿಯರು

    ಹಾಸನ: ಗ್ರಾಹಕರ ಸೋಗಿನಲ್ಲಿ ಬಂದ ಖತಾರ್ನಾಕ್ ಕಳ್ಳಿಯರು ಜ್ಯುವೆಲ್ಲರಿ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನ ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಮಾಲೀಕನ ಸಮಯ ಪ್ರಜ್ಞೆಯಿಂದಾಗಿ ಕೆಲವೇ ನಿಮಿಷಗಳಲ್ಲಿ ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ.

    ಬೇಲೂರು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಪ್ರತಿಭಾ ಜ್ಯುವೆಲ್ಲರ್ಸ್ ಅಂಗಡಿಗೆ ಶುಕ್ರವಾರ ವಯಸ್ಸಾದ ನಾಲ್ವರು ಮಹಿಳೆಯರು ಬಂದಿದ್ದರು. ಜೊತೆಯಲ್ಲಿ ಒಂದು ಮಗು ಕೂಡ ಇತ್ತು. ಅಂಗಡಿಗೆ ಬಂದವರೇ ಬೆಳ್ಳಿ ಆಭರಣ ಖರೀದಿ ಮಾಡಬೇಕಿದೆ ತೋರಿಸಿ ಎಂದಿದ್ದಾರೆ. ಅಂಗಡಿಯಲ್ಲಿ ಮಾಲೀಕ ವೀರೇಂದ್ರ ಒಬ್ಬರೇ ಇದ್ದರು. ಕಳ್ಳಿಯರು ಬೆಳ್ಳಿ ಆಭರಣ ತೋರಿಸಿ ಎಂದು ಕೇಳಿದ್ದರಿಂದ ಮಾಲೀಕ ಬೆಳ್ಳಿ ಆಭರಣ ಕೊಡಲು ಹೋದಾಗ ಚಾಲಾಕಿ ಮಹಿಳೆಯೊಬ್ಬಳು ಡ್ರಾನಲ್ಲಿದ್ದ ಚಿನ್ನದ ಗುಂಡುಗಳ ಬಾಕ್ಸ್ ಎಗರಿಸುತ್ತಾಳೆ. ಬಳಿಕ ಅದನ್ನು ಇನ್ನೊಬ್ಬ ವೃದ್ಧೆ ಕೈಯಲ್ಲಿ ಕೊಡುತ್ತಾಳೆ. ನಂತರ ಅದನ್ನು ವೃದ್ಧೆ ಬಚ್ಚಿಟ್ಟುಕೊಳ್ಳುತ್ತಾಳೆ. ಕಳ್ಳಿಯರು ಬಂದ ಕೆಲಸ ಮುಗಿದ ಕೂಡಲೇ ಕೆಲವೇ ನಿಮಿಷಗಳಲ್ಲಿ ಅಂಗಡಿಯಿಂದ ಹೊರಡುತ್ತಾರೆ. ಈ ಎಲ್ಲಾ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಹಿಳೆಯರ ಬಗ್ಗೆ ಅನುಮಾನಗೊಂಡ ಮಾಲೀಕ ಕೂಡಲೇ ಡ್ರಾ ಚೆಕ್ ಮಾಡಿದಾಗ ಚಿನ್ನದ ಗುಂಡಿದ್ದ 1 ಬಾಕ್ಸ್ ಇಲ್ಲವಾಗಿರುವುದು ಗೊತ್ತಾಗಿದೆ. ತಕ್ಷಣವೇ ನಾಲ್ವರ ಪೈಕಿ ಇಬ್ಬರನ್ನು ಹಿಡಿದು ಕೇಳಿದಾಗ ಅವರು ನಮಗೆ ಗೊತ್ತಿಲ್ಲ ಎಂದು ನಾಟಕ ಆಡಲು ಶುರು ಮಾಡಿದ್ದಾರೆ. ನಂತರ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಅಂಗಡಿಗೆ ಬಂದು ಕಳ್ಳಿಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

    ಇಷ್ಟಾದರೂ ಕಳ್ಳಿಯರು ತಪ್ಪು ಒಪ್ಪಿಕೊಂಡಿರಲಿಲ್ಲ. ನಂತರ ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಚಾಲಾಕಿ ತಂಡದ ನಿಜಬಣ್ಣ ಬಯಲಾಗಿದೆ. ಮಾಡಿದ ತಪ್ಪಿಗೆ ಎಲ್ಲರೂ ಈಗ ಅಂದರ್ ಆಗಿದ್ದಾರೆ. ಇವರೆಲ್ಲರೂ ಮೈಸೂರು ಮೂಲದವರು ಎನ್ನಲಾಗಿದ್ದು, ತಮ್ಮದೇ ತಂಡ ಕಟ್ಟಿಕೊಂಡು ಕಳ್ಳತನದಲ್ಲಿ ನಿರತರಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

  • ಕಪ್ಪತ್ತಗುಡ್ಡದಲ್ಲಿ ಜೀವದ ಹಂಗು ತೊರೆದು ಚಿನ್ನದ ಬೇಟೆ- ಸಾವು, ನೋವು ಸಂಭವಿಸಿದ್ರೂ ಬಂದಿಲ್ಲ ಬುದ್ಧಿ

    ಕಪ್ಪತ್ತಗುಡ್ಡದಲ್ಲಿ ಜೀವದ ಹಂಗು ತೊರೆದು ಚಿನ್ನದ ಬೇಟೆ- ಸಾವು, ನೋವು ಸಂಭವಿಸಿದ್ರೂ ಬಂದಿಲ್ಲ ಬುದ್ಧಿ

    ಗದಗ: ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸ ನಡೀತಿದೆ. ಈ ಗುಡ್ಡದಲ್ಲಿ ಚಿನ್ನ ಸಿಗುವ ಹತ್ತಾರು ಗುಹೆಗಳಿದ್ದು, ಜನರು ಜೀವದ ಹಂಗು ತೊರೆದು ಅದಿರು ತಂದು ಚಿನ್ನ ತೆಗೆಯುತ್ತಿದ್ದಾರೆ.

    ನೂರಾರು ವರ್ಷಗಳ ಹಿಂದೆ ಬ್ರಿಟಿಷರು ಸಾಂಗ್ಲಿ ಮೈನಿಂಗ್ ಹೆಸರಿನಲ್ಲಿ ಅದಿರು ಮೂಲಕ ಚಿನ್ನ ತೆಗೆಯುತ್ತಿದ್ದರು. ನಂತರದಲ್ಲಿ ಕಾರಣಾಂತರಗಳಿಂದ ಸಾಂಗ್ಲಿ ಮೈನಿಂಗ್ ಸ್ಥಗಿತಗೊಂಡಿತ್ತು. ಬಳಿಕ 1980ರ ದಶಕದಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಎಂಬ ಕಂಪನಿ ಕೇಂದ್ರ ಸರ್ಕಾರದ ಅಧೀನದಲ್ಲಿ ನಿಕ್ಷೇಪಗಳನ್ನ ತೆಗೆಯುತ್ತಿದ್ರು. ಈ ವೇಳೆ ತೋಡಿರುವ ಸುರಂಗ ಗುಹೆಗಳು ಹಾಗೆ ಇವೆ. ಹೀಗಾಗಿ ಈ ಗುಹೆಗಳ ಮೂಲಕ ಈಗಲೂ ಅದಿರು ತರುವ ಜನರು ಇದನ್ನ ಬಂಗಾರದ ಗುಂಡಿ ಅಂತಾನೇ ಕರೆಯುತ್ತಾರೆ.

    500 ಮೀಟರ್ ಆಳಕ್ಕೆ ಹೋದಂತೆ ಕಡಿದಾಗೋ ಈ ಗುಹೆ ಕವಲೊಡೆದು ನಾಲ್ಕೈದು ಕಿಲೋಮೀಟರ್‍ವರೆಗೆ ಕ್ರಮಿಸಿದೆ. ಇಲ್ಲಿ ಅನೇಕ ಬಾರಿ ಗುಹೆಗಳು ಕುಸಿದು ಸಾವುನೋವುಗಳು ಸಂಭವಿಸಿದೆ. ಇಲ್ಲಿನ ಒಂದು ಟನ್ ಮಣ್ಣಿನಿಂದ 2 ರಿಂದ 4 ಗ್ರಾಂ ಚಿನ್ನ ತೆಗೆಯಬಹುದಾಗಿದೆ.

    ಚಿನ್ನ ಸಂಸ್ಕರಣೆಗೆ ಸೈನೇಡ್ ಬಳಕೆಯಿಂದ ಗ್ರಾಮದ ಜನರಿಗೆ ಅನೇಕ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರೋದು ಅನುಮಾನಕ್ಕೆ ಕಾರಣವಾಗಿದೆ.

  • ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ.

    ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ ಆಟೋ ಹತ್ತಿ ಕುಳಿತ್ತಿದ್ದಾರೆ. ಆದರೆ ಪತ್ನಿಯನ್ನ ತಡೆಯಲು ರಾಜು ಮುಂದಾಗಿದ್ದು, ತಾನು ಆಟೋ ಹತ್ತಿ ಕುಳಿತ್ತಿದ್ದಾರೆ.

    ಈ ವೇಳೆ ರಾಜು ವಿನೋದಾ ಧರಿಸಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿ ಕೊಡುವಂತೆ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ವಿನೋದಾ ನಡು ಬೀದಿ ಎಂದು ನೋಡದೇ ಪತಿಗೆ ಮನಸೋ ಇಚ್ಛೆ ಬೈದು, ಥಳಿಸಿದ್ದಾರೆ. ಕೊನೆಗೆ ತಾನೇ ಆಟೋದಿಂದ ಇಳಿದು ವಿನೋದಾ ಹೊರಟಿದ್ದಾರೆ. ಅದೇ ಆಟೋ ಹತ್ತಿ ಪತಿ ಅಲ್ಲಿಂದ ಹೋಗಿದ್ದಾರೆ. ಈ ಗಂಡ ಹೆಂಡತಿ ಜಗಳವನ್ನು ಸುತ್ತಾಮುತ್ತಾ ಜನ ನೋಡಿಕೊಂಡು ಸುಮ್ಮನಾಗಿದ್ದಾರೆ.

  • ಗೋಲ್ಡ್ ಖರೀದಿಗೆ ಇದೇ ಗೋಲ್ಡನ್ ಟೈಂ- ಚಿನ್ನದ ದರದಲ್ಲಿ ಭಾರೀ ಇಳಿಕೆ

    ಗೋಲ್ಡ್ ಖರೀದಿಗೆ ಇದೇ ಗೋಲ್ಡನ್ ಟೈಂ- ಚಿನ್ನದ ದರದಲ್ಲಿ ಭಾರೀ ಇಳಿಕೆ

    ಬೆಂಗಳೂರು: ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದೇ ಸೂಕ್ತ ಸಮಯ. ಯಾಕಂದ್ರೆ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ.

    ಹತ್ತು ಗ್ರಾಂ ಚಿನ್ನಕ್ಕೆ ಒಂದು ಸಾವಿರ ರೂ. ಇಳಿಕೆಯಾಗಿದೆ. ಕಳೆದ ಹತ್ತು ದಿನದಲ್ಲಿ ಚಿನ್ನದ ದರ ಹತ್ತು ಸಾವಿರ ರೂ. ಇಳಿಕೆ ಕಂಡಿದೆ.

     

    ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವಿನ ಯುದ್ಧ ಭೀತಿಯಿಂದ ದರ ಇಳಿಕೆಯಾಗಿದೆ. ಜಾಗತಿಕ ಪರಿಣಾಮಗಳಿಂದಾಗಿ ಮಾರುಕಟ್ಟೆಯಲ್ಲಿ ಉಂಟಾದ ನೀರಸ ಪ್ರಕ್ರಿಯೆಯಿಂದ ಉದ್ಯಮದಾರರು ಚಿನ್ನ ಖರೀದಿಯಲ್ಲಿ ನಿರಾಸಕ್ತಿ ತೋರಿದ್ದಾರೆ. ಇದು ಚಿನ್ನದ ದರ ಇಳಿಕೆಯಾಗಲು ಕಾರಣ ಎನ್ನಲಾಗಿದೆ.

    24 ಕ್ಯಾರೆಟ್ ಚಿನ್ನದ ದರ ಮುವತ್ತು ಸಾವಿರದಿಂದ 29 ಸಾವಿರಕ್ಕೆ ಇಳಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 26250 ರೂ ಆಗಿದೆ. ಡಿಸೆಂಬರ್ ಪ್ರಾರಂಭದಲ್ಲಿ 27,369 ರೂ. ಇತ್ತು.

  • ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

    ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ತಂದೆಯ ಸಾಗಿದ ರೀತಿಯಲ್ಲೇ ಬೆಳೆಯಲು ಆರಂಭಿಸಿದ್ದು, ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.

    ದರ್ಶನ್ ಹಾಗೂ ವಿಜಯಲಕ್ಷ್ಮೀ ರವರ ಏಕೈಕ ಪುತ್ರ ವಿನೀಶ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾನೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂವ್ ಸ್ಕೂಲ್ ನಲ್ಲಿ ವಿನೀಶ್ ದರ್ಶನ್ ವ್ಯಾಸಂಗ ಮಾಡುತ್ತಿದ್ದು, ಓದುವುದರಲ್ಲೂ ಮುಂಚೂಣಿಯಲ್ಲಿದ್ದಾನೆ.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವನ್ನು ಹಾಕಿ ಅಭಿನಂದಿಸಿದ್ದಾರೆ. ತಂದೆಯಂತೆ ಮಗ ವಿನೀಶ್ ಇದೇ ರೀತಿ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸುತ್ತಿದ್ದಾರೆ.

    ದರ್ಶನ್ ಪುತ್ರನನ್ನು ಸಿನಿ ರಂಗಕ್ಕೆ ಈಗಾಗಲೇ ಪರಿಚಯಿಸಿದ್ದಾರೆ. ಐರಾವತ ಚಿತ್ರದಲ್ಲಿ ಮಗ ವಿನೀಶ್ ಬಣ್ಣ ಹಚ್ಚಿದ್ದ. ಈ ಮೂಲಕ ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿಯಾಗಿ ವಿನೀಶ್ ಸಿನಿ ಲೋಕಕ್ಕೆ ಕಾಲಿಟ್ಟಿದ್ದ.

     

     

     

     

  • ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿ ಸೋಲ್ ನಲ್ಲಿ ಚಿನ್ನ ಸಾಗಾಟ: ಚಿನ್ನದ ಮೌಲ್ಯ ಎಷ್ಟು ಗೊತ್ತಾ?

    ಮಂಗ್ಳೂರು ವಿಮಾನ ನಿಲ್ದಾಣದಲ್ಲಿ ಚಪ್ಪಲಿ ಸೋಲ್ ನಲ್ಲಿ ಚಿನ್ನ ಸಾಗಾಟ: ಚಿನ್ನದ ಮೌಲ್ಯ ಎಷ್ಟು ಗೊತ್ತಾ?

    ಮಂಗಳೂರು: ದುಬೈಯಿಂದ ಅಕ್ರಮ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತನನ್ನು ಕೇರಳದ ಕಾಸರಗೋಡು ನಿವಾಸಿ ಅಹಮದ್ ತಾಹೀರ್(35) ಎಂದು ಗುರುತಿಸಲಾಗಿದೆ. ಈತ ತನ್ನ ಚಪ್ಪಲಿಯ ಸೋಲ್ ನಲ್ಲಿ ಚಿನ್ನವನ್ನು ಅಕ್ರಮವಾಗಿ ಅಡಗಿಸಿಟ್ಟಿದ್ದನು.

    ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಬಳಿಕ ಅಧಿಕಾರಿಗಳು ತಾಹೀರ್ ಧರಿಸಿದ್ದ ಚಪ್ಪಲಿಯಲ್ಲಿ ಅಡಗಿಸಿಟ್ಟಿದ್ದ 804 ಗ್ರಾಂ ಚಿನ್ನ ವಶಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 24 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

    ಇದೇ ತಿಂಗಳ 4ನೇ ತಾರೀಖಿನಿಂದ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಚಿನ್ನ ಪತ್ತೆಯಾಗಿತ್ತು. ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಟಾಯ್ಲೆಟ್‍ನಲ್ಲಿ ಚಿನ್ನದ ಬಿಸ್ಕಟ್ ಇರುವ ಪ್ಯಾಕೆಟ್ ಎಸೆದುಹೋಗಿದ್ದನು. ಟಾಯ್ಲೆಟ್ ಕ್ಲೀನಿಂಗ್ ವೇಳೆ ಸಂಶಯದಲ್ಲಿ ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿತ್ತು. ಬಳಿಕ ಕಸ್ಟಮ್ ಅಧಿಕಾರಿಗಳು 34 ಲಕ್ಷ ಮೌಲ್ಯದ 1 ಕೆಜಿ 100 ಗ್ರಾಮ್ ತೂಕದ 10 ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದಿದ್ದರು.

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ದೂರದ ಊರಿಂದ ಬರುವ ಪ್ರಯಾಣಿಕರು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದಿರುವ ಅನೇಕ ಘಟನೆಗಳು ಈ ಹಿಂದೆಯೂ ನಡೆದಿದೆ.