Tag: gold

  • ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ

    ಬೆಂಗಳೂರು: ನಗರದ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಕ್ಲಾಬ್ ಒಳಗೆ ಕೋಟಿ ಕೋಟಿ ನಿಧಿ ಸಿಕ್ಕಿದೆ.

    ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದನು. ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ ಆತ ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. ಆಗ 2 ಲಾಕರ್ ಓಪನ್ ಮಾಡಿದಾಗ ಅದರಲ್ಲಿ 2 ಬ್ಯಾಗ್ ಪತ್ತೆಯಾಗಿದೆ. 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿದೆ.

    ಬೌರಿಂಗ್ ಆಡಳಿತ ಮಂಡಳಿ ಲಾಕರ್ ಓಪನ್ ಮಾಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬೌರಿಂಗ್ ಕ್ಲಬ್ ಸೆಕ್ರೆಟರಿ ಶ್ರೀಕಾಂತ್ ಮತ್ತು ಬ್ಯಾಡ್ಮಿಂಟನ್ ಕಮಿಟಿಯ ಸಂದೀಪ್‍ಗೆ ಉದ್ಯಮಿ ಆಮಿಷ ಒಡ್ಡಿದ್ದಾನೆ. ಹಣ ಮತ್ತು ವಜ್ರಾಭರಣ ನೀವೆ ಇಟ್ಟುಕೊಳ್ಳಿ. ಆದರೆ ಆಸ್ತಿ ಪತ್ರ ಮಾತ್ರ ಕೊಡಿ ಎಂದು ಆಮಿಷ ಒಡ್ಡಿದ್ದಾನೆ. ಆದರೆ ಉದ್ಯಮಿಯ ಆಮಿಷಕ್ಕೆ ಒಳಗಾಗದ ಬೌರಿಂಗ್ ಆಡಳಿತ ಮಂಡಳಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಗುರುವಾರ ರಾತ್ರಿ 12 ಗಂಟೆವರೆಗೂ ಐಟಿ ಇಲಾಖೆ ಪರೀಶಿಲನೆ ನಡೆಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?
    ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಆಡಳಿತ ಮಂಡಳಿ 15 ದಿನಗಳ ಹಿಂದೆ, ನೀವು ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಒಂದು ವೇಳೆ ಲಾಕರ್ ನಲ್ಲಿರುವ ವಸ್ತುವನ್ನು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ಉದ್ಯಮಿಗೆ ನೋಟಿಸ್ ಕಳುಹಿಸಿದ್ದಾರೆ. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ತಿಳಿಸಿದೆ. ಆದರೆ ಉದ್ಯಮಿ ನೋಟಿಸ್ ಬಗ್ಗೆ ತಲೆ ತಲೆಕೆಸಿಕೊಂಡಿಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಹೊಡೆದಿದೆ. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ.

    ಅವಿನಾಶ್ ಅಮರ್ ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಮೂಲತಃ ರಾಜಸ್ಥಾನದವನು ಎಂದು ತಿಳಿದು ಬಂದಿದೆ. ಜೊತೆಗೆ ಬೆಂಗಳೂರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದು, 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದನು. ಸಾಲ ಕೊಟ್ಟು ಆಸ್ತಿ ಪತ್ರಗಳನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಬಗ್ಗೆ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

  • ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬರುತ್ತಿದ್ದ ಖದೀಮರ ಬಂಧನ

    ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬರುತ್ತಿದ್ದ ಖದೀಮರ ಬಂಧನ

    ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಒಂಟಿ ಮಹಿಳೆಯರ ಮನೆ ದೋಚುತ್ತಿದ್ದ ಕಳ್ಳರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

    ಗಣೇಶ್, ರಾಮಚಂದ್ರ ಹಾಗೂ ಫರಿದುಲ್ ಇಂತಿಯಾಸ್ ಬಂಧಿತ ಆರೋಪಿಗಳು. ಈ ಖದೀಮರು ಜೂನ್ 16 ರಂದು ನಗರದ ಸಿ.ಎಸ್.ಐ ಲೇಔಟನ್ ಮನೋರಮಾ ಒಂಟಿ ಮಹಿಳೆಯ ಮನೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಹೋಗಿದ್ದಾರೆ. ಬಳಿಕ ಚಿನ್ನಾಭರಣ ಸೇರಿದಂತೆ ಸುಮಾರು 10 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.

    ಬಂಧಿತರು ಶಿವಮೊಗ್ಗ ಹಾಗೂ ತಮಿಳುನಾಡಿನವರಾಗಿದ್ದು, ಮೈಸೂರು ಹಾಗೂ ಬೆಂಗಳೂರಿನಲ್ಲೂ ತಲಾ ಎರಡು ಮನೆಯಲ್ಲಿ ಇದೇ ಕಳ್ಳರು ದೋಚಿದ್ದಾರೆ. ಸದ್ಯಕ್ಕೆ ತುಮಕೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಕದ್ದಿದ್ದ ಹಣ ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.  ಇದನ್ನು ಓದಿ: ಸ್ಮಾರ್ಟ್ ಸಿಟಿ ಅಧಿಕಾರಿಗಳಂತೆ ಬಂದು ವೃದ್ಧೆಗೆ ವಂಚಿಸಿ 20 ಲಕ್ಷ ರೂ. ಚಿನ್ನಾಭರಣ ದೋಚಿದ್ರು!

  • ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ- ಒರಿಜಿನಲ್ ಗೋಲ್ಡ್ ಕೊಟ್ಟು ಯಾಮಾರಿಸುತ್ತೆ ಗ್ಯಾಂಗ್!

    ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ- ಒರಿಜಿನಲ್ ಗೋಲ್ಡ್ ಕೊಟ್ಟು ಯಾಮಾರಿಸುತ್ತೆ ಗ್ಯಾಂಗ್!

    ಬೆಂಗಳೂರು: ಹೊಳೆಯಲ್ಲಿ ನಿಧಿ ಸಿಕ್ಕಿದೆ, 5 ಕೆಜಿ ಚಿನ್ನ ಇದೆ ಅಂತ ಬಂದು ಸ್ಯಾಂಪಲ್‍ಗೆ ಅಂತ ಒರಿಜಿನಲ್ ಗೋಲ್ಡ್ ಕೊಡ್ತಾರೆ. ಆಮೇಲೆ ನಕಲಿ ಚಿನ್ನ ಕೊಟ್ಟು ನಿಮ್ಮನ್ನ ಯಾಮಾರಿಸೋ ಗ್ಯಾಂಗ್ ಒಂದು ಇದೀಗ ಸಿಕ್ಕಿಬಿದ್ದಿದೆ.

    ಹೌದು. ಪಬ್ಲಿಕ್ ಟಿವಿಯ ‘ಆಪರೇಷನ್ ಗೋಲ್ಡ್’ ಕಾರ್ಯಾಚರಣೆಯ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಇವರಿಗೆ ಕನ್ನಡ ಬರಲ್ಲ, ಕೇವಲ ಹಿಂದಿ ಮಾತ್ರ ಮಾತಾಡ್ತಾರೆ. ವಸ್ತುಗಳನ್ನು ಖರೀದಿಸುವ ನೆಪದಲ್ಲಿ ಮೊದಲು ಪರಿಚಯ ಮಾಡಿಕೊಳ್ಳುತ್ತಾರೆ.

    ಕುರುಬರಹಳ್ಳಿ ನಿವಾಸಿ, ವರ್ತಕ ಪರಮೇಶ್ ಅನ್ನೋರಿಗೆ ಚಿನ್ನದ ದೋಖಾ ಗ್ಯಾಂಗ್ ಪರಿಚಯವಾಗಿತ್ತು. ಬಳಿಕ ಕಳೆದ ಹದಿನೈದು ದಿನಗಳಿಂದಲೂ ಕಿಲಾಡಿಗಳು ವ್ಯಾಪಾರ ಕುದುರಿಸುತಿದ್ದರು. ಮೊದಲು 5 ಕೆಜಿ ಚಿನ್ನ ಇದೆ. 30 ಲಕ್ಷ ಕೊಡಿ ಎಂದು ಬೇಡಿಕೆಯಿಟ್ಟಿದ್ದರು. ಅಂತ ಪರಮೇಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಕುರುಬರ ಹಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಇದೇ ರೀತಿ ನಕಲಿ ಚಿನ್ನ ನೀಡಿ 3 ಲಕ್ಷ ರೂ. ದೋಖಾ ಮಾಡಿತ್ತು ಗ್ಯಾಂಗ್.

    ಬಳಿಕ ನಕಲಿ ಚಿನ್ನ ಕೊಟ್ಟು ದುಡ್ಡು ಪಡೆಯಲು ಇಬ್ಬರು ಖದೀಮರು ಬಂದಿದ್ದರು. ಈ ವೇಳೆ ಪರಮೇಶ್, ವಿನೋದ್ ಹಾಗೂ ಲಕ್ಷ್ಮಮ್ಮ ಸೇರಿ ಅವರನ್ನು ಸಿನಿಮಾ ಸ್ಟೈಲಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ. ಬಳಿಕ ಇಬ್ಬರು ಆರೋಪಿಗಳನ್ನು ಸ್ಥಳೀಯರು ಸೇರಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಸದ್ಯ ಪೊಲೀಸರು ಚಿನ್ನದ ದೋಖಾ ಮಾಡುವ ಗ್ಯಾಂಗ್‍ಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಪ್ರತ್ಯೇಕ ಎರಡು ಕಡೆ ಐಟಿ ದಾಳಿ – 10 ಕೋಟಿ ನಗದು, 50ಕೆಜಿ ಚಿನ್ನ ವಶ

    ಲಕ್ನೋ: ಆದಾಯ ತೆರಿಗೆ ಇಲಾಖೆ ನಗರದಲ್ಲಿ ಎರಡು ಕಡೆ ದಾಳಿ ಮಾಡಿದ್ದು, ಬರೋಬ್ಬರಿ 50 ಕೆಜಿ ಚಿನ್ನ ಮತ್ತು 10 ಕೋಟಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಉತ್ತರಪ್ರದೇಶದ ಲಕ್ನೋದಲ್ಲಿ ಐಟಿ ದಾಳಿ ನಡೆದಿದೆ. ಕನ್ಹೈಯ್ ಲಾಲ್ ರಸ್ತೋಗಿ ಮತ್ತು ಸಂಜಯ್ ರಸ್ತೋಗಿ ಅವರ ಆಸ್ತಿ ಮತ್ತು ರಾಜ ಬಜಾರ್ ಮೇಲೆ ಐಟಿ ಅಧಿಕಾರಿಗಳು ಸತತ 36 ಗಂಟೆಗಳ ಕಾಲ ತನಿಖೆ ಮಾಡಿದ್ದಾರೆ. ಐಟಿ ದಾಳಿಗೆ ಒಳಗಾದ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಚಿನ್ನದ ವ್ಯಾಪಾರಿಯಾಗಿದ್ದು, ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಬೆಲೆ ಸುಮಾರು 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ ರಸ್ತೋಗಿ ಕುಟುಂಬದವರು ಹೆಸರಿನಲ್ಲಿರುವ 98 ಕೋಟಿ ಆಸ್ತಿಯ ದಾಖಲೆಗಳನ್ನು ವಶಪಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

    ಐಟಿ ಇಲಾಖೆಗೆ ರಸ್ತೋಗಿ ಕುಟುಂಬ ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭಿಸಿತ್ತು. ಮಾಹಿತಿ ಆಧಾರದ ಮೇರೆಗೆ ಲಕ್ನೋ ಮತ್ತು ಅಲಹಬಾದ್ ನ ಐಟಿ ಇಲಾಖೆ ಆಡಿಟ್ ರವಿ ಮಲ್ಹೋತ್ರ ಅವರ ನೇತೃತ್ವದಲ್ಲಿ ದಾಳಿ ಮಾಡಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಮತ್ತು ಆತನ ಪುತ್ರನ ಮನೆಯಲ್ಲಿ 8.08 ಕೋಟಿ ನಗದು ಹಾಗೂ 50 ಕೆಜಿ ಚಿನ್ನದ ಬಿಸ್ಕೆಟ್ ಮತ್ತು 2 ಕೆಜಿ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಜಯ್ ರಸ್ತೋಗಿ ಮನೆಯಲ್ಲಿ 1.13 ಕೋಟಿ ಹಣ ಮತ್ತು 11.64 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಕನ್ಹೈಯಾ ಲಾಲ್ ರಸ್ತೋಗಿ ಪತ್ನಿ ಅನಿತಾ ರಸ್ತೋಗಿ, ಮಕ್ಕಳಾದ ಉಮಾಂಗ್ ಮತ್ತು ತಾರಾಂಗ್ ರಸ್ತೋಗಿ ಹಾಗೂ ಇತರೆ ಸಂಬಂಧಿಕರನ್ನು ಒಳಗೊಂಡಂತೆ ಅನೇಕ ರಿಯಲ್ ಎಸ್ಟೆಟ್ ಕಂಪೆನಿಗಳು, ಫೈನಾನ್ಸ್ ಮತ್ತು ಚಿನ್ನದ ವ್ಯಾಪಾರ ಮಾಡುತ್ತಿದ್ದರು ಎಂದು ಐಟಿ ಇಲಾಖೆಯ ವಕ್ತಾರ ಜಯಂತ್ ವರ್ಮಾ ತಿಳಿಸಿದ್ದಾರೆ.

  • ಕಾಂಟ್ರ್ಯಾಕ್ಟರ್ ಕಂಪೆನಿ ಮೇಲೆ ಐಟಿ ದಾಳಿ – 160 ಕೋಟಿ ನಗದು, 100 ಕೆಜಿ ಚಿನ್ನ ಪತ್ತೆ

    ಕಾಂಟ್ರ್ಯಾಕ್ಟರ್ ಕಂಪೆನಿ ಮೇಲೆ ಐಟಿ ದಾಳಿ – 160 ಕೋಟಿ ನಗದು, 100 ಕೆಜಿ ಚಿನ್ನ ಪತ್ತೆ

    ಚೆನ್ನೈ: ತಮಿಳುನಾಡಿನ ರಸ್ತೆ ಗುತ್ತಿಗೆದಾರರೊಬ್ಬರ ಕಂಪೆನಿ ಸೇರಿದಂತೆ ಅನೇಕ ಭಾಗಗಳಲ್ಲಿ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿದ್ದು, ಬರೋಬ್ಬರಿ 160 ಕೋಟಿ ರೂ. ನಗದು ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

    ಈ ಮೊತ್ತ ಆದಾಯ ತೆರಿಗೆ ಇಲಾಖೆ ಇದುವರೆಗೂ ನಡೆಸಲಾಗಿದ್ದ ದಾಳಿಯಲ್ಲಿ ಅತ್ಯಂತ ದೊಡ್ಡ ಮೊತ್ತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಒಪ್ಪಂದ ಮೇರೆಗೆ ರಸ್ತೆಗಳ ಮತ್ತು ಹೆದ್ದಾರಿಯ ನಿರ್ಮಾಣ ಮಾಡುತ್ತಿದ್ದ ಪಾಲುದಾರಿಕೆಯ ಸಂಸ್ಥೆ ಎಸ್‍ಪಿಕೆ ಮತ್ತು ಕಂಪೆನಿಗೆ ಸೇರಿದ ವಿವಿಧ ಭಾಗಗಳಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

    ದಾಳಿಯಲ್ಲಿ ಸುಮಾರು 160 ಕೋಟಿ ರೂ. ನಗದು ಮತ್ತು ಯಾವುದೇ ದಾಖಲೆಗಳಿಲ್ಲದ 100 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ. ಸದ್ಯಕ್ಕೆ ಸೋಮವಾರ ಆರಂಭವಾದ ದಾಳಿ ಇದೂವರೆಗೂ ನಡೆಯುತ್ತಿದೆ. ವಶಪಡಿಸಿಕೊಂಡಿದ್ದ ಹಣ ಮತ್ತು ಚಿನ್ನಕ್ಕೆ ಯಾವುದೇ ಸೂಕ್ತ ದಾಖಲೆ ಇಲ್ಲ ಎಂದು ಹೇಳಲಾಗುತ್ತಿದೆ.

    2016ರಲ್ಲಿ ಚೆನ್ನೈನಲ್ಲಿ ಗಣಿಗಾರಿಕೆ ಬ್ಯಾರನ್ ಇಲಾಖೆ ದಾಳಿ ನಡೆಸಿತ್ತು. ಆಗ 110 ಕೋಟಿ ಹಣವನ್ನು ವಶಪಡಿಕೊಳ್ಳಲಾಗಿತ್ತು. ಆದ್ದರಿಂದ ಇದು ಅತಿದೊಡ್ಡ ಮೊತ್ತದ ದಾಳಿಯಾಗಿದೆ. ಚೆನ್ನೈನ ಆದಾಯ ಇಲಾಖೆಯ ತನಿಖೆ ವಿಭಾಗವು ಕಾರ್ಯಾಚರಣೆಯನ್ನು ನಡೆಸುತ್ತಿದೆ. ಎಸ್‍ಪಿಕೆ ಸಂಸ್ಥೆ ಮತ್ತು ಅದರ ಇತರೆ ಕಂಪೆನಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

    ಒಟ್ಟಾರೆ ಕಂಪೆನಿಯ 22 ಜಾಗಗಳಲ್ಲಿ ದಾಳಿ ನಡೆಸಲಾಗಿದೆ. ಇವುಗಳಲ್ಲಿ 17 ಚೆನ್ನೈ, 4 ಅರುಪ್ಪುಕೊಟ್ಟಾಯ್(ವಿರುಧುನಗರ) ಮತ್ತು 1 ವೆಲ್ಲೂರಿನ ಕಟಪಾಡಿಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಾರ್ಕ್ ಮಾಡಿದ್ದ ಕಾರುಗಳಲ್ಲಿ ಟ್ರ್ಯಾವೆಲ್ ಬ್ಯಾಗ್ ಗಳಲ್ಲಿ ಹಣ ಪತ್ತೆಯಾಗಿದೆ. ಜೊತೆಗೆ ಚಿನ್ನದ ಬಿಸ್ಕತ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಇನ್ನು ಆದಾಯ ಇಲಾಖೆ ಶೋಧ ಕಾರ್ಯವನ್ನು ಮುಂದುವರೆಸಿದೆ.

  • ಮನೆಗಳ್ಳರಿಂದ 4.15 ಲಕ್ಷ ರೂ.ನಗದು, 18.5 ಗ್ರಾಂ ಚಿನ್ನ, 65 ಸಾವಿರ ರೂ. ಮೌಲ್ಯದ ಮೊಬೈಲ್ ವಶ

    ಮನೆಗಳ್ಳರಿಂದ 4.15 ಲಕ್ಷ ರೂ.ನಗದು, 18.5 ಗ್ರಾಂ ಚಿನ್ನ, 65 ಸಾವಿರ ರೂ. ಮೌಲ್ಯದ ಮೊಬೈಲ್ ವಶ

    ಮೈಸೂರು: ಮನೆಗಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಂಗಸಮುದ್ರ ಗ್ರಾಮದ ಮನು, ಗವಿ, ಯೋಗೇಶ್, ಹಾಗೂ ಬೆಂಗಳೂರು ಕುಂಬಳಗೋಡು ನಿವಾಸಿ ಶಶಿಕುಮಾರ್ ಬಂಧಿತ ಆರೋಪಿಗಳು. ಜುಲೈ 7ರಂದು ರಂಗಸಮುದ್ರ ಗ್ರಾಮದ ವೀಣಾ ಅವರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದರು.

    ಖಚಿತ ಮಾಹಿತಿ ಮೇರೆಗೆ ರಂಗಸಮುದ್ರ ಗೇಟ್ ಬಳಿ ಟಿ.ನರಸೀಪುರ ತಾಲೂಕಿನ ಬನ್ನೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 4.15 ಲಕ್ಷ ರೂ. ನಗದು, 18.5 ಗ್ರಾಂ ಚಿನ್ನಾಭರಣ ಹಾಗೂ 65 ಸಾವಿರ ರೂ. ಬೆಲೆಯ ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

  • 1 ಕೋಟಿ ದಾಟಿತು ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿ ಆದಾಯ!

    1 ಕೋಟಿ ದಾಟಿತು ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿ ಆದಾಯ!

    ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಕಾಣಿಕೆಯ ಆದಾಯ ಕೋಟಿ ದಾಟಿದೆ.

    1 ತಿಂಗಳ ಅವಧಿಯ ಹುಂಡಿ ಏಣಿಕೆಯಲ್ಲಿ ಒಂದು ಕೋಟಿ ಹಣ ಸಂಗ್ರಹವಾಗಿದೆ. ಇದರ ಜೊತೆಗೆ 94 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಸೇರಿ 42 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

    ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ 200 ಸಿಬ್ಬಂದಿಗಳು ಹುಂಡಿ ಏಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಕಳೆದ ತಿಂಗಳು ಒಂದು ಕೋಟಿ ರೂ. ಹೆಚ್ಚು ಹಣ ಆದಾಯವಾಗಿ ಹರಿದುಬಂದಿತ್ತು. ಈ ತಿಂಗಳು ಮತ್ತೆ ಕೋಟಿ ಆದಾಯ ಬಂದಿದೆ.

    ನಿತ್ಯವೂ ನಂಜನಗೂಡಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರತಿ ತಿಂಗಳು ಹುಂಡಿ ಹಣ ಹೆಚ್ಚಾಗುತ್ತಲೇ ಇದೆ ಎಂದು ನಂಜನಗೂಡು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಹೇಳಿದ್ದಾರೆ.

  • ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ಜಿಮ್ನಾಸ್ಟಿಕ್‍ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ದೀಪಾ ಕರ್ಮಾಕರ್

    ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆದ ಜಿಮ್ನಾಸ್ಟಿಕ್ ವರ್ಲ್ಡ್  ಚಾಲೆಂಜ್ ಕಪ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.  ಬಹಳ ಕಷ್ಟದ ವಾಲ್ಟ್ ವಿಭಾಗದಲ್ಲಿ  14.150 ಅಂಕಗಳಿಸುವ ಮೂಲಕ 24 ವರ್ಷದ ದೀಪಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ರಿಯೋ ಒಲಿಂಪಿಕ್ಸ್ ನಲ್ಲಿ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿರಲಿಲ್ಲ. ಆದರೆ ಈಗ ಎರಡೂವರೆ ವರ್ಷದ ಬಳಿಕ ಟೂರ್ನಿಯಲ್ಲಿ ಭಾಗವಹಿಸಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಜಿಮ್ನಾಸ್ಟಿಕ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ರಿಯೋ ಒಲಿಂಪಿಕ್ ಪದಕ ವಿಜೇತರಾಗಿದ್ದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಜಿಮ್ನಾಸ್ಟಿಕ್ಸ್ ಇತಿಹಾಸದಲ್ಲಿ ಭಾರತದ ಪರ ವಿಶೇಷ ಸಾಧನೆ ಮಾಡಿದ್ದ ದೀಪಾ ಕರ್ಮಕರ್ ಅವರಿಗೆ 2016ರ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಗೌರವಿಸಿತ್ತು.

    ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೀಪಾ ಕರ್ಮಾಕರ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

    https://twitter.com/TheBridge_IN/status/1015946961206239232

  • KSRTC ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 2.50 ಲಕ್ಷ ರೂ. ಮೌಲ್ಯದ ಬಂಗಾರವನ್ನ ಮರಳಿಸಿದ ಅಧಿಕಾರಿ

    KSRTC ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 2.50 ಲಕ್ಷ ರೂ. ಮೌಲ್ಯದ ಬಂಗಾರವನ್ನ ಮರಳಿಸಿದ ಅಧಿಕಾರಿ

    ಹುಬ್ಬಳ್ಳಿ: ಬಸ್ ನಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಬಂಗಾರದ ಆಭರಣವನ್ನು ಮಹಿಳೆಗೆ ಮರಳಿಸುವ ಮೂಲಕ ಹುಬ್ಬಳ್ಳಿಯ ಕೆಎಸ್‍ಆರ್ ಟಿಸಿ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ಕಲಘಟಗಿ ಮೂಲದ ಅನಸೂಯಮ್ಮ ಕಲಘಟಗಿಯಿಂದ ವಿಜಯಪುರಕ್ಕೆ ಹೊರಟ್ಟಿದ್ದರು. ಹುಬ್ಬಳ್ಳಿಯಲ್ಲಿ ಬಸ್ ಇಳಿದು ವಿಜಯಪುರ ಬಸ್ ಹತ್ತಿದ್ದರು. ಆದರೆ ಈ ವೇಳೆ ತಾವು ತಂದಿದ್ದ ಚೀಲವನ್ನು ವಿಜಯಪುರ ಬಸ್ ನಲ್ಲಿ ಇಟ್ಟು ನೀರು ತರಲು ಹೋಗಿದ್ದಾರೆ. ಆದರೆ ಅವರು ಹಿಂದಿರುಗಿ ಬರುವಷ್ಟರಲ್ಲಿ ಬಸ್ ವಿಜಯಪುರದತ್ತ ಹೊರಟ್ಟಿತ್ತು. ಇದರಿಂದ ಮಹಿಳೆ ಕಂಗಾಲಾಗಿದ್ದಾರೆ.

    ಮಹಿಳೆ ನಗರದ ಹಳೇ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಲಕ್ಷ್ಮಣ ಡೋಂಗರೆ ಅವರಿಗೆ ದೂರು ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು, ಒಂದು ಗಂಟೆಯೊಳಗೆ ಸುಮಾರು 2.50 ಲಕ್ಷ ಮೌಲ್ಯದ ಆಭರಣ ಹಾಗೂ ದಾಖಲೆಗಳಿದ್ದ ಲಗೇಜ್ ನ್ನು ಅನುಸೂಯಮ್ಮ ಅವರಿಗೆ ಮರಳಿ ತಲುಪಿಸಿದ್ದಾರೆ.

  • ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕುವ ಮೊದ್ಲು ಈ ಸ್ಟೋರಿ ಓದಿ!

    ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕುವ ಮೊದ್ಲು ಈ ಸ್ಟೋರಿ ಓದಿ!

    ಬೆಂಗಳೂರು: ಫೇಸ್ ಬುಕ್ ಎಷ್ಟು ಸಹಾಯವೋ ಅಷ್ಟೇ ಮಾರಕ ಕೂಡ ಆಗಿದೆ. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹೇಗೆ ಕಳ್ಳತನ ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ಸ್ಟೋರಿ.

    ನಗರದಲ್ಲಿ ಫೇಸ್ ಬುಕ್ ಸ್ಟೇಟಸ್ ನೋಡಿ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಪ್ರೇಮಾ ಎಂಬವರ ಮನೆಯಲ್ಲಿ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಾನು ಫೇಸ್‍ ಬುಕ್ ಅಲ್ಲಿ ಊರಿಗೆ ಹೋಗುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದೆ. ಆ ಪೋಸ್ಟ್ ಅನ್ನು ನೋಡಿಕೊಂಡು ಬಂದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆಂದು ಮನೆಯೊಡತಿ ಆರೋಪಿಸುತ್ತಿದ್ದಾರೆ.

    ಮನೆಯ ಮಾಲೀಕರಾದ ಪ್ರೇಮ ಗೊತ್ತಿರುವವರೇ ಈ ಫೇಸ್ ಬುಕ್ ಪೋಸ್ಟ್ ನೋಡಿ ಕಳ್ಳತನ ಮಾಡಿದ್ದಾರೆ. ಕಳ್ಳರು ಮನೆಯವರೆಲ್ಲಾ ಊರಿಗೆ ಹೋದ ಬಳಿಕ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.