ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಕ್ಕಸಾಲಿಗರೊಬ್ಬರು ಬಂಗಾರದಲ್ಲಿ ಹಂಪಿಯ ಕಲ್ಲಿನ ರಥದ ಪ್ರತಿರೂಪ ಕೆತ್ತುವ ಮೂಲಕ ದಾಖಲೆ ಬರೆಯಲು ಮುಂದಾಗಿದ್ದಾರೆ.
ಕಾರವಾರ ನಗರದ ಕಡವಾಡದ ನಿವಾಸಿಯಾಗಿರುವ ಮಿಲಿಂದ್ ಅಣ್ವೇಕರ್ ಅವರು 12 ಗ್ರಾಂ ಬಂಗಾರದಲ್ಲಿ ವಿಶ್ವ ಪ್ರಸಿದ್ಧ ಹಂಪಿ ರಥವನ್ನು ರಚನೆ ಮಾಡಿದ್ದಾರೆ. 17 ವರ್ಷಗಳಿಂದ ಆಭರಣ ತಯಾರಿಕೆಯಲ್ಲಿ ಪಳಗಿರುವ ಇವರು, ಬಂಗಾರದ ರಥ ನಿರ್ಮಾಣಕ್ಕಾಗಿ ಒಂದು ತಿಂಗಳು ಸಮಯ ತೆಗೆದುಕೊಂಡಿದ್ದಾರೆ.
ಒಂದು ಇಂಚು ಉದ್ದ ಒಂದೂವರೆ ಇಂಚು ಅಗಲ ಸುತ್ತಳತೆಯ ಈ ಬಂಗಾರದ ರಥ ಅತಿ ಅದ್ಭುತವಾಗಿದ್ದು ಆನೆಗಳು, ರಥ, ರಥದ ಚಕ್ರಗಳು ಅತ್ಯಂತ ನಾಜೂಕಾಗಿ ಮೂಡಿಬಂದಿದೆ. ಇನ್ನು ಇದರ ಒಳಭಾಗದಲ್ಲಿ ಚಿಕ್ಕ ದೀಪವನ್ನು ಅಳವಡಿಸಿದ್ದು ಆಕರ್ಷಕವಾಗಿ ಕಾಣಿಸಿದೆ.
2013ರಲ್ಲಿ 0.980 ಮಿಲಿಗ್ರಾಂನಲ್ಲಿ ಬಂಗಾರದ ಚೈನ್ ತಯಾರಿಸಿ ಮಿಲಿಂದ್ ಲಿಮ್ಕಾ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೇ ಈಗ ವಿಶ್ವ ದಾಖಲೆ ನಿರ್ಮಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಹಾಡಹಗಲೇ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ನೆಲಮಂಗಲದ ಮಾದನಾಯಕನಹಳ್ಳಿಯ ರಾಜೇಶ್ವರಿ ಬಡಾವಣೆಯ ನಿವಾಸಿ ಕಾಳಮ್ಮ ಚಿನ್ನ ಕಳೆದುಕೊಂಡ ವೃದ್ಧೆ. ಕಾಳಮ್ಮ ಅವರ ಕೊರಳಲ್ಲಿ ಇದ್ದ 28 ಗ್ರಾಂ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿಯೇ ಕಿತ್ತುಕೊಂಡ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ಆಗಿದ್ದೇನು?:
ವಿಳಾಸ ಕೇಳಿದ ಹಿನ್ನೆಲೆಯಲ್ಲಿ ವೃದ್ಧೆ ಕಾಳಮ್ಮ ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಮಹಿಳೆಯರು ಕಾಳಮ್ಮ ಅವರನ್ನು ಮಾತನಾಡಿಸಿ, ವಿಳಾಸ ಕೇಳಿದ್ದಾರೆ. ಮೂವರು ಇರುವ ಜಾಗಕ್ಕೆ ಬಂದ ವ್ಯಕ್ತಿಯೊಬ್ಬ, ನನ್ನ ಪರ್ಸ್ ಇಲ್ಲಿ ಎಲ್ಲಿಯೋ ಬಿದ್ದಿದೆ. ಅದನ್ನು ನೀವು ತೆಗೆದುಕೊಂಡಿದ್ದೀರಾ ಕೊಡಿ ಎಂದು ಕೇಳಿದ್ದಾನೆ. ತಕ್ಷಣವೇ ಜಗಳಕ್ಕೆ ಇಳಿದಂತೆ ವರ್ತಿಸಿ ಕಾಳಮ್ಮ ಅವರ ಬಾಯಿ ಮುಚ್ಚಿ, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆದರೆ ಅವರ ಹಿಡಿಯಲು, ಜನರನ್ನು ಕೂಗಿ ಕರೆಯಲು ಕಾಳಮ್ಮ ಅವರಿಗೆ ಆಗಿಲ್ಲ.
ಚಿನ್ನ ಹಿಡಿದು ಓಡಿದ ಕಳ್ಳರು ದೂರದಲ್ಲಿ ನಿಲ್ಲಿಸಿದ್ದ ಕಾರು ಹತ್ತಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ದುರ್ಗಾ ಪರಮೇಶ್ವರಿಯಲ್ಲಿ ದೇಗುಲದಲ್ಲಿ ಧರೆಗಿಳಿದ ಧನಲಕ್ಷ್ಮಿ, ಖಾಸಗಿ ದೇಗುಲ ಕೈವಶವಾದ ಒಂದೇ ತಿಂಗಳಲ್ಲಿ ಮುಜರಾಯಿ ಇಲಾಖೆಗೆ ಬಂಪರ್ ಆಫರ್ ಹೊಡೆದಿದೆ.
ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇಗುಲದ ಹುಂಡಿ ಎಣಿಕೆ ಮಾಡಲಾಗಿದ್ದು, ಅಪಾರ ಪ್ರಮಾಣದ ಕಂತೆ ಕಂತೆ ನೋಟು, ಚಿನ್ನಾಭರಣ ಮತ್ತು ಬೆಳ್ಳಿ ಸಂಗ್ರಹವಾಗಿದೆ. ದೇಗುಲದಲ್ಲಿ ಅವ್ಯವಹಾರ ನಡೆಯುತ್ತಿದ್ದರಿಂದ 1 ತಿಂಗಳ ಹಿಂದೆ ಈ ದೇಗುಲ ಮುಜರಾಯಿ ವಶವಾಗಿತ್ತು. ಬಳಿಕ ದೇಗುಲ ಹಾಗೂ ಟ್ರಸ್ಟಿ ಮಧ್ಯೆ ಕಿತ್ತಾಟ ನಡೆಯುತ್ತಿತ್ತು. ಹೀಗಾಗಿ ಶುಕ್ರವಾರ ಕೋರ್ಟ್ ಮಧ್ಯಪ್ರವೇಶಿಸಿ ಹುಂಡಿ ಎಣಿಕಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿತ್ತು.
ಒಂದು ತಿಂಗಳ ಅಂತರದಲ್ಲಿ 12 ಹುಂಡಿಯೂ ಭರ್ತಿಯಾಗಿದ್ದು, ಮುಜರಾಯಿ ದೇಗುಲಗಳ ಲಿಸ್ಟ್ ಗೆ ಇನ್ನೊಂದು ಶ್ರೀಮಂತ ದೇಗುಲ ಸೇರಿದಂತಾಗಿದೆ ಎಂದು ಇಲಾಖೆ ಅಧಿಕಾರಿ ಶ್ರೀಧರ್ ಹೇಳಿದ್ದಾರೆ.
ಹುಂಡಿ ದುಡ್ಡು ಎಣಿಕೆ ವೇಳೆ ಕಿರಿಕ್ ಆಗಬಹುದು ಅಂತ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಕೂಡ ನಿಯೋಜನೆ ಮಾಡಲಾಗಿತ್ತು. ಒಟ್ಟು ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಲೆಕ್ಕಪತ್ರ ನಿರ್ವಹಣೆ ಸಮಸ್ಯೆಯಿಂದಾಗಿ ಮುಜರಾಯಿ ವಶಕ್ಕೆ ಪಡೆದುಕೊಂಡಿತ್ತು.
ಬೆಳಗಾವಿ: ಬೆಳ್ಳಂಬೆಳಗ್ಗೆ ಎಸಿಬಿ ಸರ್ಜಿಕಲ್ ಸ್ಟ್ರೈಕ್ ಆರಂಭ ಮಾಡಿದ್ದು, ಬೆಂಗಳೂರಿನಿಂದ ಈಗ ಬೆಳಗಾವಿಯ ಜಿಲ್ಲೆಯ ಖಾನಾಪುರ ತಾಲೂಕಿನ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಎಸಿಪ್ ಅಧಿಕಾರಿ ಚಂದ್ರಕಾತ ಪಾಟೀಲ್ ಅವರ ಮನೆ, ಖಾನಾಪುರದಲ್ಲಿರುವ ಕಚೇರಿ ಹಾಗೂ ಬೈಲಹೊಂಗಲದಲ್ಲಿರುವ ಸಹೋದರನ ಮನೆ ಸೇರಿದಂತೆ ಮೂರು ಕಡೆ ದಾಳಿ ನಡೆಸುತ್ತಿದ್ದಾರೆ. ಎಸಿಬಿ ಎಸ್.ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಮಾಡಲಾಗುತ್ತಿದೆ.
ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸದ ಮೇಲೆ ದಾಳಿ ಮಾಡಿದ ವೇಳೆ 10 ಲಕ್ಷಕ್ಕೂ ಅಧಿಕ ನಗದು, 500 ಗ್ರಾಂ ಅಧಿಕ ಚಿನ್ನ, 3 ಕೆ.ಜಿ ಗೂ ಅಧಿಕ ಬೆಳ್ಳಿ, ಚಿನ್ನದ ವಿಗ್ರಹ ಸಿಕ್ಕಿದೆ. ಇತ್ತ ಬೈಲಹೊಂಗಲದಲ್ಲಿ ಎರಡು ಜೆಸಿಬಿ, ಆಸ್ತಿ ಪತ್ರ ಹಾಗೂ ಬೆಳಗಾವಿ ಹನುಮಾನ್ ನಗರದ ಹಿಂಡಲಗಾ ಜೈಲ್ ಬಳಿ ಸೈಟ್ ಖರೀದಿ ಮಾಡಿರುವ ಪತ್ರ, ನಗದು ಹಾಗೂ ಚಿನ್ನಾಭರಣ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.
ಎಸಿಎಫ್ ಚಂದ್ರಗೌಡ ಪಾಟೀಲ್ ನಿವಾಸ, ಬೈಲಹೊಂಗಲದಲ್ಲಿರುವ ಸಹೋದರನ ಮನೆಯಲ್ಲೂ ದಾಳಿ ಮುಂದುವರಿದಿದ್ದು, ಹತ್ತು ಜನರ ತಂಡದಿಂದ ಮನೆಯಲ್ಲಿ ಪರಿಶೀಲನೆಯನ್ನು ಮುಂದುವರಿಸಿದ್ದಾರೆ. ಎಸಿಬಿ ಅಧಿಕಾರಿಗಳು ಮಧ್ಯಾಹ್ನ 2 ಗಂಟೆವರೆಗೂ ಶೋಧಕಾರ್ಯ ಮಾಡಲಾಗುತ್ತದೆ. ನಂತರ ದಾಳಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸೋದಾಗಿ ಹೇಳಿದ್ದಾರೆ.
ಬೆಂಗಳೂರು: ಬಿಡಿಎ ಎಂಜಿನಿಯರ್ ಗೌಡಯ್ಯ ಮನೆಮೇಲೆ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ದಾಳಿ ಅಂತ್ಯವಾಗಿದೆ. ಮಧ್ಯರಾತ್ರಿ 1.30ರವರೆಗೆ ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ಹಿಂದಿರುಗಿದ್ದಾರೆ.
ದಾಳಿ ವೇಳೆ 10 ಕೆ.ಜಿ ಚಿನ್ನ, ಕೋಟಿ ಕೋಟಿ ನಗದು ಪತ್ತೆಯಾಗಿದೆ. ಅಲ್ಲದೇ 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ. ನಿನ್ನೆಯ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಆದ್ರೆ ಗೌಡಯ್ಯನ ಬ್ಯಾಂಕ್ ಇನ್ವೆಸ್ಟ್ ಮೆಂಟ್‍ನ್ನು ಇನ್ನೂ ಪರಿಶೀಲನೆ ನಡೆಸಿಲ್ಲ. ಇದನ್ನೂ ಓದಿ: ಇಬ್ಬರು ಭ್ರಷ್ಟ ಅಧಿಕಾರಿಗಳ ಬಳಿಯಿದೆ ಕೋಟ್ಯಂತರ ಆಸ್ತಿ: ಯಾರ ಬಳಿ ಎಷ್ಟು ಆಸ್ತಿ?
ಇತ್ತ ಜಯನಗರದಲ್ಲಿರೋ ಅತ್ತೆಯ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಇಟ್ಟಿದ್ದು ದಾಳಿ ವೇಳೆ ಬಹಿರಂಗವಾಗಿದೆ. ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ 80 ಬಳೆ, ವಜ್ರದ ಸರ ಒಟ್ಟು 4.5 ಕೆ.ಜಿ ಚಿನ್ನದ ಆಭರಣ ಬಚ್ಚಿಟ್ಟಿದ್ದರು. ಆದ್ರೆ ಇದು ಅತ್ತೆಗೇ ಗೊತ್ತಿರಲಿಲ್ಲವಂತೆ. ಎಸಿಬಿ ರೈಡ್ ಮಾಡಿ ಬಾಚಿಕೊಂಡ ಬಳಿಕ ಅತ್ತೆಗೆ ಚಿನ್ನ ಎಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.
ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ ಕೋಣೆಯೊಂದನ್ನ ಇಟ್ಟಿಕೊಂಡಿದ್ದರು. ಅತ್ತೆ ಮನೆಗೆ ಗೌಡಯ್ಯ ದಂಪತಿ ಹೋದಾಗಲೆಲ್ಲ ರೂಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರಂತೆ. ಮನೆಯಲ್ಲಿದ್ದ ಚಿನ್ನಾಭರಣ ಎಸಿಬಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಾಗ ಗೌಡಯ್ಯನ ಅತ್ತೆ ಕಕ್ಕಾಬಿಕ್ಕಿ ಆದರು. ಸದ್ಯ ಅತ್ತೆ ಮನೆಯಿಂದ 80 ಬಳೆ, 15 ಕ್ಯಾರೆಟ್ ವಜ್ರದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ:ಟಿಆರ್ ಸ್ವಾಮಿಯ ಗಾರ್ಡನ್‍ನಲ್ಲಿ ಕಂತೆ ಕಂತೆ ನೋಟು- ಮನೆಯ ಸೋಫಾ, ಬಕೆಟ್‍ನಲ್ಲಿ ನೋಟು!
ಎಸಿಬಿ ಅಧಿಕಾರಿಗಳು ಇದುವರೆಗೂ ಎಂಜಿನಿಯರ್‍ಗಳ ಬ್ಯಾಂಕ್ ಠೇವಣಿಗಳನ್ನು ಪರಿಶೀಲಿಸಿಲ್ಲ. ಶನಿವಾರದಿಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರೀ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ. ಶುಕ್ರವಾರ ನಡೆದ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಎಸಿಬಿ ಅಧಿಕಾರಿಗಳು ಮನೆಗೆ ಬಂತ ತಕ್ಷಣ ಸ್ವಾಮಿ, 14ನೇ ಮಹಡಿಯಲ್ಲಿರುವ ಮನೆಯಿಂದ ಬ್ಯಾಗ್ ಬಿಸಾಡಿದ್ದರು. ಆ ಬ್ಯಾಗಿನಲ್ಲಿ 500 ಮತ್ತು 2000 ರೂ. ಮುಖಬೆಲೆಯ 10 ಲಕ್ಷ ರೂ. ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಮಂತ್ರಿ ಗ್ರೀನ್ಸ್ ಅಪಾರ್ಟ್ ಮೆಂಟ್‍ನಲ್ಲಿರುವ ಫ್ಲ್ಯಾಟ್ ನ ಬೇಸ್ ಮೆಂಟ್ ನಲ್ಲಿ ಎರಡು ಕಾರುಗಳನ್ನು ನಿಲ್ಲಿಸಲಾಗಿತ್ತು. ಆ ಕಾರಿನಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿಯೂ ಹಣ ಮತ್ತು ದಾಖಲಾತಿಗಳು ಪತ್ತೆಯಾಗಿವೆ. ಇದುವರೆಗೂ ಒಟ್ಟು 4.75 ಕೋಟಿ ನಗದು ಮತ್ತು 1.5 ಕೆಜಿಗೂ ಹೆಚ್ಚಿ ಚಿನ್ನಾಭರಣ ಹಾಗೂ ಬೆಳ್ಳಿ ಪತ್ತೆಯಾಗಿದೆ.
ಎಸಿಬಿ ಐಜಿಪಿ ಚಂದ್ರಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, ಬಸವೇಶ್ವರನಗರದಲ್ಲಿ ಗೌಡಯ್ಯ ಮನೆ ಮತ್ತು ಮಲ್ಲೇಶ್ವರಂನ ಟಿ.ಆರ್.ಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳ ಎರಡು ತಂಡದಿಂದ ಏಕಕಾಲಕ್ಕೆ ದಾಳಿ ನಡೆಸಲಾಗುತ್ತಿದ್ದು, ಅತ್ಯಾಪ್ತರ ಮನೆಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ದಾಳಿ ವೇಳೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡಲಾಗುವುದಿಲ್ಲ. ಸಂಜೆ ವೇಳೆಗೆ ಸಂಪೂರ್ಣ ಪರಿಶೀಲನೆ ನಂತರ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬೆಳಗಾವಿ: ಮಾಲೀಕನ ಗಮನ ಬೇರೆಡೆ ಸೆಳೆದು ಹಾಡಹಗಲೇ ಚಿನ್ನದಂಗಡಿಗೆ ಕನ್ನ ಹಾಕಿರುವ ಘಟನೆ ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.
ಮಾಲೀಕ ಆನಂದಪಟ್ಟಣ ಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಗಂಡಿಗೆ ಎರಡು ಬಾಗಿಲುಗಳಿದ್ದು, ಆನಂದ ಅಂಗಡಿಯ ಮುಖ್ಯ ಬಾಗಿಲನ್ನು ತೆರೆದಿದ್ದಾರೆ. ಬಳಿಕ ಇನ್ನೊಂದು ಬಾಗಿಲ ಬೀಗ ತೆಗೆಯಲು ಕೀಲಿ ಕೈಯನ್ನು ತೆಗೆದುಕೊಂಡು ಹೋದ ವೇಳೆ ಅಂಗಡಿ ಒಳಗೆ ಬಂದ ಕಳ್ಳ ಚೇರ್ ಮೇಲೆ ಇಟ್ಟಿದ್ದ 25 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಬ್ಯಾಗ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಹಣ ದೋಚುವ ಮುನ್ನ ಕಳ್ಳ ಇನ್ನೊಂದು ಬಾಗಿಲ ಬೀಗ ಬೇಗ ಓಪನ್ ಆಗಬಾರದೆಂದು ಫೆವಿಕ್ವಿಕ್ ಹಾಕಿದ್ದನು. ಕಳ್ಳನ ಕೈಚಳಕದ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಈ ಘಟನೆ ಸಂಬಂಧಪಟ್ಟಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ಯುವತಿಯರಿಗಾಗಿ ಡೈಸನ್ ಸೂಪರ್ ಸೋನಿಕ್ ಕಂಪೆನಿಯವರು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಡೈಸನ್ ಸೂಪರ್ ಸೋನಿಕ್ ಕಂಪೆನಿಯು 23.75 ಕ್ಯಾರೆಟ್ ಚಿನ್ನವನ್ನು ಬಳಸಿ ವಿನ್ಯಾಸಗೊಳಿಸಿದ್ದು, ಈ ಹೇರ್ ಡ್ರೈಯರ್ ಗೆ 37,900 ರೂ. ದರವನ್ನು ನಿಗದಿ ಮಾಡಿದೆ.
ಚಿನ್ನ ಎಂಬುದು ವಿಶ್ವದ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದು. ಶತಮಾನಗಳಿಂದ ಶಿಲ್ಪ, ಹಲವು ವಿನ್ಯಾಸಗಳಿಗೆ ಚಿನ್ನವನ್ನು ಬಳಸಲಾಗುತ್ತದೆ. ಇದರ ಬಣ್ಣದಿಂದಲೇ ಹೆಚ್ಚಿನವರು ಆಕರ್ಷಿಸಲ್ಪಡುತ್ತಾರೆ. ಇದೀಗ ಚಿನ್ನದಿಂದ ಹೇರ್ ಡ್ರೈಯರ್ ಅನ್ನು ವಿನ್ಯಾಸಗೊಳಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದನ್ನು ವಿನ್ಯಾಸಗೊಳಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದು ಚಿನ್ನದ ಹೇರ್ ಡ್ರೈಯರ್ ವಿನ್ಯಾಸಗೊಳಿಸಿದ ಜೇಮ್ಸ್ ಹೇಳಿದ್ದಾರೆ.
ಹೇರ್ ಡೈಯರ್ ಅನ್ನು ವಿನ್ಯಾಸಗೊಳಿಸಲು ವಿನ್ಯಾಸ ಎಂಜಿನಿಯರ್ ಗಳು ಮೊದಲಿಗೆ ಚಿನ್ನವನ್ನು ಲೇಪಿಸುವುದು ಹೇಗೆ ಎನ್ನುವುದನ್ನು ಕಲಿತುಕೊಂಡೆವು. ಬಳಿಕ ನಮ್ಮ ತಂಡ ಹೇರ್ ಡ್ರೈಯರ್ ಕೆಲಸವನ್ನು ಪೂರ್ಣಗೊಳಿಸಿತು. ಕೂದಲಿಗೆ ಯಾವುದೇ ಅಪಾಯವಾಗಬಾರದ ಕಾರಣ ಬಹಳ ಎಚ್ಚರಿಕೆಯಿಂದ ಈ ಸವಾಲನ್ನು ಪೂರ್ಣಗೊಳಿಸಿದೆವು ಎಂದು ತಿಳಿಸಿದ್ದಾರೆ.
ಹೇರ್ ಡ್ರೈಯರ್ ನೀಲಿ ಬಣ್ಣ ಮತ್ತು ಚಿನ್ನದ ಬಣ್ಣವನ್ನು ಒಳಗೊಂಡಿದ್ದು ಹೊಸ ವಿನ್ಯಾಸವಾದ್ದರಿಂದ ಜೇಮ್ಸ್ ಡೈಸನ್ ಆನ್ ಲೈನ್‍ಲ್ಲಿ ಬುಕ್ ಮಾಡಿ ಖರೀದಿಸಬಹುದು.
ಬೆಂಗಳೂರು: ಬಸ್ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧನದ ನಂತರ ಆರೋಪಿಗಳ ಮೇಲೆ ಇದ್ದ 27 ಪ್ರಕರಣಗಳು ಬೆಳಕಿಗೆ ಬಂದಿವೆ.
ಇಬ್ಬರು ಕಳ್ಳಿಯರು ಸೇರಿ ಆರು ಮಂದಿ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್, ವರಲಕ್ಷ್ಮಿ ಅಲಿಯಾಸ್ ಲಕ್ಷ್ಮಿ, ಮನುಕುಮಾರ್, ಭಾಗ್ಯ ಅಲಿಯಾಸ್ ಸುನಾಮಿ, ಮಂಜ ಅಲಿಯಾಸ್ ಪಾನಿಪುರಿ ಮಂಜ ಮತ್ತು ಅಮ್ಜದ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಮೂಲತ: ಆಂಧ್ರ ಪ್ರದೇಶದವರಾಗಿದ್ದು, ಬೆಂಗಳೂರಿನಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದರು. ಆರೋಪಿಗಳ ಬಂಧನದಿಂದ ಬರೋಬ್ಬರಿ 27 ಪ್ರಕರಣಗಳು ಪತ್ತೆಯಾಗಿದ್ದು, ಉಪ್ಪಾರಪೇಟೆ, ಕಲಾಸಿಪಾಳ್ಯ, ಕಾಟನ್ ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ 11 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ವೆಂಕಟೇಶ್ ಹಾಗೂ ವರಲಕ್ಷ್ಮಿ ದಂಪತಿಯೇ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್ ಆಗಿದ್ದು, ಒಂದೇ ಕುಟುಂಬದ ಐವರ ಖತರ್ನಾಕ್ ಗ್ಯಾಂಗ್ ಈ ಕೃತ್ಯವನ್ನು ಮಾಡುತ್ತಿದ್ದರು. ಇವರು ಬಸ್ಸುಗಳನ್ನು ಹತ್ತಿ ಅಮಾಯಕರಂತೆ ವರ್ತಿಸಿ ಕ್ಷಣಾರ್ಧದಲ್ಲಿ ಬ್ಯಾಗ್ ಗಳನ್ನು ಎಗರಿಸುತ್ತಿದ್ದರು. ಈಗ ಉಪ್ಪಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ಸುಮಾರು 37 ಲಕ್ಷ ರೂ ಹಣಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ವಶವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ: ಒಬ್ಬಂಟಿ ಮಹಿಳೆಯರ ಸರಗಳ್ಳತನ ಹಾಗೂ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರನಾಕ್ ಕಳ್ಳರನ್ನು ನಗರದ ಕೌಲಬಜಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಬಂಧಿತರಿಂದ ಬೆಳ್ಳಿ ಹಾಗೂ ಬಂಗಾರ ಸೇರಿದಂತೆ 17 ಲಕ್ಷ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಳ್ಳಾರಿ ತಾಲೂಕಿನ ಜಾನೆಕುಂಟೆ ತಾಂಡಾದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿನಾಯಕ್ (38) ಹಾಗೂ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದ ವೆಂಕಟೇಶ್ ನಾಯ್ಕ್ (43) ಬಂಧಿತ ಕಳ್ಳರು. ಆರೋಪಿಗಳ ವಿರುದ್ಧ ಬಳ್ಳಾರಿಯ ಕೌಲಬಜಾರ, ಕೊಪ್ಪಳದ ಕುಷ್ಟಗಿ, ಆಂಧ್ರಪ್ರದೇಶದ ಗುಂತಕಲ್ಲು, ಚಿಪ್ಪಗಿರಿ, ಹಿರೇಹಾಳ್ ಠಾಣೆಯಲ್ಲಿ ಒಟ್ಟು 17 ಕಳ್ಳತನ ದೂರುಗಳು ದಾಖಲಾಗಿವೆ.
ಸೋಮವಾರ ಸಂಜೆ ಇಬ್ಬರೂ ಆರೋಪಿಗಳು ಕಳ್ಳತನ ಮಾಡಿದ ಆಭರಣಗಳನ್ನು ಮಾರಾಟ ಮಾಟಲು ನಗರಕ್ಕೆ ಬಂದಿದ್ದರು. ಖಚಿತ ಮಾಹಿತಿ ಆಧಾರ ಮೇಲೆ ಅವರನ್ನು ಬಳ್ಳಾರಿ ಹಳೇ ಬೈಪಾಸ್ ರಸ್ತೆಯ ಈದ್ಗಾ ಮೈದಾನದ ಬಳಿ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಂಧಿತರಿಂದ 486 ಗ್ರಾಂ ಬಂಗಾರ, 2.6 ಕೆ.ಜಿ ಬೆಳ್ಳಿ, ವಿವಿಧ ಕಂಪೆನಿಯ 3 ಲ್ಯಾಪ್‍ಟಾಪ್, ಎರಡು ಮೊಬೈಲ್, ಬೈಕ್ ಸೇರಿದಂತೆ ಒಟ್ಟು 17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.