Tag: gold

  • ಕಳ್ಳತನ ಆರೋಪದ ಮೇಲೆ ಬಂಧನ – ಬಯಲಾಯ್ತು ಮೂರು ಕೊಲೆ ಪ್ರಕರಣ

    ಕಳ್ಳತನ ಆರೋಪದ ಮೇಲೆ ಬಂಧನ – ಬಯಲಾಯ್ತು ಮೂರು ಕೊಲೆ ಪ್ರಕರಣ

    – ಗುರಾಯಿಸಿದ್ದಕ್ಕೆ ಯುವಕನ ಕೊಲೆ
    – ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ, ಮಾಹಿತಿ ನೀಡಲು ಪೊಲೀಸ್ ಹಿಂದೇಟು

    ಕಲಬುರಗಿ: ಜಿಲ್ಲೆಯ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ವಿಚಾರಣೆ ನಡೆಸಿದಾಗ ಮೂರು ಕೊಲೆ ಪ್ರಕರಣಗಳು ಬೆಳಕಿಗೆ ಬಂದಿದೆ.

    ಕಳೆದ ಕೆಲ ತಿಂಗಳ ಹಿಂದೆ ಕಲಬುರಗಿಯ ಗ್ರಾಮೀಣ ಹಾಗೂ ಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆ ಹಾಗೂ ದಾಲ್ ಮಿಲ್ ಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ತನಿಖೆಗಿಳಿದ ಚೌಕ ಪೊಲೀಸರು ಪ್ರಕರಣ ಸಂಬಂಧ ಕಪನೂರ ಗ್ರಾಮದ ನಿಂಗಪ್ಪ, ಶಹಾಬುದ್ದಿನ್ ಮತ್ತು ಶಿವಕುಮಾರ್ ನನ್ನ ಬಂಧಿಸಿದ್ದಾರೆ.

    ಕಳ್ಳತನ ಹೇಗೆ ಮಾಡುತ್ತಿದ್ದರು?
    ಬಂಧಿತ ಆರೋಪಿಗಳು ಹಾಲು ಮಾರಾಟಗಾರರಾಗಿದ್ದು, ಕಲಬುರಗಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮನೆಗೆ ಹಾಲು ಹಾಕುತ್ತಿದ್ದರು. ಈ ವೇಳೆಯಲ್ಲಿ ಯಾವ ಮನೆಯವರು ಎರಡು ದಿನಗಳ ಮಟ್ಟಿಗೆ ಹಾಲು ಬೇಡ ಅಂತ ಹೇಳುತ್ತಿದ್ದರೋ ಅಂತಹ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕೆ ಮುಂದಾಗಿದ್ದರು. ಇದರಲ್ಲಿ ಪ್ರಮುಖವಾಗಿ ಕಲಬುರಗಿಯ ಮಠಾಧೀಶರೊಬ್ಬರು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಯಲ್ಲಿ 3 ಕೆ.ಜಿ ಬಂಗಾರ ಹಾಗೂ ಇತರೆ ಐದಾರು ಮನೆಗಳಲ್ಲಿ ಅರ್ಧ ಕೆ.ಜಿ ಗೂ ಅಧಿಕ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದಾರೆ ಎಂದು ಪ್ರಕರಣದ ತನಿಖೆ ವೇಳೆ ತಿಳಿದು ಬಂದಿದೆ.

    ಮೊದಲನೆ ಕೊಲೆ?
    ಪ್ರಕರಣ ಬಗ್ಗೆ ತೀವ್ರ ವಿಚಾರಣೆ ನಡೆಸಿದ ಪೊಲೀಸರಿಗೆ ಶಿವಾಜಿನಗರ ನಿವಾಸಿ ಯಶ್‍ರಾಜ್ ಅಳಗೇರಾ ಯುವಕ ಬಂಧಿತ ಆರೋಪಿಗಳನ್ನು ಗುರಾಯಿಸಿ ನೋಡಿದ್ದಕ್ಕೆ ಕಪನೂರಿನ ಎಮ್ಮೆ ಕಟ್ಟುವ ಶೇಡ್‍ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಬಳಿಕ ನಾಡ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಬಳಿಕ ಆತನ ಶವವನ್ನು ಒಂದು ದಿನದ ಮಟ್ಟಿಗೆ ಅದೇ ಶೆಡ್‍ನಲ್ಲಿಟ್ಟು ನಂತರ ಕಪನೂರ ಪ್ರದೇಶ ಖಬರ್ ಸ್ತಾನದಲ್ಲಿ ಮೊದಲೇ ಹೂತಿಟ್ಟ ಶವದ ಮೇಲೆ ಯಶರಾಜ್ ಶವವನ್ನು ಹೂತಿದ್ದರು.

    ಕೊಲೆಯಾದ ಯುವಕ ಹಿಂದೂ ಆಗಿರುವ ಕಾರಣ ಇದು ಕೋಮು ಗಲಭೆ ಆಗಬಹುದು ಅಂತ ಅನುಮಾನದಿಂದ ಆ ಶವವನ್ನು ಬೇರೆಡೆ ಸ್ಥಳಾಂತರಕ್ಕೆ ಮುಂದಾಗಿದ್ದರು. ಯಾಕೆಂದರೆ ಕೊಲೆ ಆರೋಪಿಗಳಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಹಿನ್ನೆಲೆಯಲ್ಲಿ ಯಶರಾಜ್ ನ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋಗಿ ಕಲಬುರಗಿಯ ಹಾಗರಗಾ ಗ್ರಾಮದ ಖಬರಸ್ತಾನ್ ನ ಮರದ ಕೆಳಗಡೆ ಹೂತಿಟ್ಟು ಅಲ್ಲಿಯೇ ನಾಡಪಿಸ್ತೂಲ್ ಬಚ್ಚಿಟ್ಟಿದ್ದಾರೆ. ಕಾನೂನು ಸಲಹೆ ಪಡೆದು ಪೊಲೀಸರು ಈ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

    ಎರಡನೇ ಮತ್ತು ಮೂರನೆ ಕೋಲೆ:
    ಬಿಹಾರ ಮೂಲದ ಯುವಕ ಪ್ರಕಾಶ್(20) ಹಾಗೂ ಸುಭಾಷ್ ಚಂದ್ರ ಎಂಬವರನ್ನು ದಾಲ್ ಮಿಲ್ ಕಳ್ಳತನ ಸಂದರ್ಭದಲ್ಲಿ ಅಡ್ಡ ಬಂದರು ಎಂದು ಈ ಮೂರು ಜನ ಆರೋಪಿಗಳ ಜೊತೆ ಮತ್ತೊಬ್ಬ ಪ್ರಮುಖ ಆರೋಪಿ ಸೇರಿ ಕೊಲೆ ಮಾಡಿದ್ದರು.

    ಮೂರು ಕೊಲೆಗಳನ್ನು ಮಾಡಿ 3.5 ಕೆ.ಜಿ ಗೂ ಅಧಿಕ ಚಿನ್ನ ಕಳ್ಳತನ ಮಾಡಿದ ಆರೋಪಿಗಳು ಸರ್ಫ ಬಜಾರ್ ನ ವಿರೇಶ್ ಎಂಬ ಚಿನ್ನದ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿರೋದಾಗಿ ತನಿಖೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಈ ಪ್ರಕಣದಲ್ಲಿ ಓರ್ವ ಜಿಲ್ಲಾ ಪಂಚಾಯ್ತಿ ಸದಸ್ಯ ಮಧ್ಯಸ್ಥಿಕೆ ವಹಿಸಿ ಅಂಗಡಿ ಮಾಲೀಕನ ಪರ ಲಾಬಿ ನಡೆಸಿ ಆತನನ್ನ ಬಚಾವ್ ಮಾಡಿದ್ದಾರೆ. ಅಲ್ಲದೆ ತನಿಖೆ ವೇಳೆಯಲ್ಲಿ ಪೊಲೀಸರು 35 ಸಾವಿರ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ತೋರಿಸಿ ಪೊಲೀಸರು ಕೈ ತೊಳೆದುಕೊಂಡಿದ್ದಾರೆ.

    ಇದೀಗ ತ್ರಿವಳಿ ಕೊಲೆ ಪ್ರಕರಣ ಮತ್ತು ಕಳ್ಳತನ ಪ್ರಕರಣದ ಬಗ್ಗೆ ಪೊಲೀಸರ ತನಿಖೆ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾ ಪಂಚಾಯ್ತಿ ಸದಸ್ಯನ ಮಾತಿಗೆ ಪೊಲೀಸರು ತಲೆಬಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ ಪ್ರಕರಣದ ಕುರಿತು ಉನ್ನತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬಯಲಿಗೆಳೆದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ಕೋಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಮಶಾನದಲ್ಲಿ ಪತ್ತೆ ಆಯ್ತು ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರ

    ಸ್ಮಶಾನದಲ್ಲಿ ಪತ್ತೆ ಆಯ್ತು ಕೋಟಿ ಕೋಟಿ ಮೌಲ್ಯದ ಚಿನ್ನ, ವಜ್ರ

    – ಅಗೆದಷ್ಟು ಸಿಕ್ತು ನಗದು, ದಾಖಲೆ

    ಚೆನ್ನೈ: ತಮಿಳುನಾಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರತಿಷ್ಠಿತ ಆಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಚೆನ್ನೈ ಹಾಗೂ ಕೊಯಮತ್ತೂರಿಲ್ಲಿ ಶರವಣ ಗ್ರೂಪ್ ಮಳಿಗೆಗಳು ಮತ್ತು ರಿಯಾಲ್ಟಿ ಕಂಪನಿಗಳಾದ ಲೋಟಸ್ ಗ್ರೂಪ್ ಹಾಗೂ ಜಿಸ್ಕ್ವೇರ್ ಗಳ ಮಳಿಗೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಒಂದು ವಾರಕ್ಕೂ ಹೆಚ್ಚು ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ವಿವಿಧ ಸ್ಥಳಗಳಲ್ಲಿ ಬಚ್ಚಿಟ್ಟಿದ್ದ ಅಪಾರ ಪ್ರಮಾಣದ ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

    ಸಂಸ್ಥೆಗಳಿಗೆ ಸೇರಿದ ಸಂಪತ್ತನ್ನು ತಮಿಳುನಾಡಿನ ವಿವಿಧ ಪ್ರದೇಶಗಳ ಸಮಾಧಿಗಳಲ್ಲಿ ಬಚ್ಚಿಡಲಾಗಿದ್ದು, ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ಸುಮಾರು 433 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸೀಜ್ ಮಾಡಿದ್ದಾರೆ. ಅಲ್ಲದೇ ಸ್ಮಶಾನದಲ್ಲಿ ಅಗೆದು ಅವುಗಳಲ್ಲಿ ಬಚ್ಚಿಟ್ಟಿದ್ದ ನಗದು, ದಾಖಲೆಗಳು, ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಒಟ್ಟಾರೆ 25 ಕೋಟಿ ರೂ. ನಗದು ಹಣ, 12 ಕೆ.ಜಿ ಚಿನ್ನ ಮತ್ತು 626 ಕ್ಯಾರೆಟ್ ವಜ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಶರವಣ ಸ್ಟೋರ್ಸ್ ಮಾಲೀಕ ಯೋಗರತ್ನಂ ಪಾಂಡುರಾಯ್, ಅವರ ಸಹವರ್ತಿ ಹಾಗೂ ಲೋಟಸ್ ಮತ್ತು ಜಿಸ್ಕ್ವೇರ್ ಗ್ರೂಪ್‍ಗಳ ಮಾಲೀಕ ರಾಮಜಯಂ ಅಲಿಯಾಸ್ ಬಾಲ ಮತ್ತು ಅವರ ಸಹವರ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15 ಲಕ್ಷ ನಗದು, 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ನವವಿವಾಹಿತೆ!

    15 ಲಕ್ಷ ನಗದು, 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ನವವಿವಾಹಿತೆ!

    ಚಂಡೀಗಢ: ಮನೆಯಲ್ಲಿಯ 15 ಲಕ್ಷ ನಗದು ಮತ್ತು 250 ಗ್ರಾಂ ಚಿನ್ನ ಕದ್ದು ಇನಿಯನಿಗೆ ಕೊಟ್ಟ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಪಂಜಾಬ್ ರಾಜ್ಯದ ಹಿಮಾಚಲ ಫಿಲ್ಲೌರ್ ನಗರದಲ್ಲಿ ನಡೆದಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ರಿಂಪಲ್ ಎಂಬಾಕೆ ತನ್ನ ಪ್ರಿಯಕರನಿಗೆ ಹಣ ಮತ್ತು ಚಿನ್ನ ನೀಡಿದ ನವ ವಿವಾಹಿತೆ. ನಾಲ್ಕು ತಿಂಗಳ ಹಿಂದೆ ರಿಂಪಲ್ ಮದುವೆ ಫಿಲ್ಲೌರ್ ನಗರದ ದೊಡ್ಡ ವ್ಯಾಪಾರಸ್ಥ ಇಂದ್ರಜಿತ್ ಶರ್ಮಾ ಎಂಬವರ ಪುತ್ರನೊಂದಿಗೆ ಅದ್ಧೂರಿಯಾಗಿ ನಡೆದಿತ್ತು. ರಿಂಪಲ್ ಮದುವೆಗೂ ಮುನ್ನ ಲೂಧಿಯಾನದ ಲಖ್ಬೀರ್ ಸಿಂಗ್ ಎಂಬಾತನೊಂದಿಗೆ ಪ್ರೇಮ ಪಾಶದಲ್ಲಿ ಸಿಲುಕಿದ್ದಳು. ಮದುವೆ ಬಳಿಕವೂ ಇಬ್ಬರ ಪ್ರೀತಿ ಮುಂದುವರಿದಿತ್ತು. ಆರ್ಥಿಕವಾಗಿ ಸಬಲರಾಗಿದ್ದ ಪತಿ ಮನೆಯಲ್ಲಿ ಹಣದೊಂದಿಗೆ ಪರಾರಿಯಾಗಿ ಲಖ್ಬೀರ್ ಜೊತೆ ಐಷಾರಾಮಿ ಜೀವನ ನಡೆಸಲು ರಿಂಪಲ್ ಪ್ಲಾನ್ ಮಾಡಿಕೊಂಡಿದ್ದಳು.

    ಏನಿದು ಘಟನೆ?
    ರಿಂಪಲ್ ಮಾವ ಇಂದ್ರಜಿತ್ ಶರ್ಮಾ ತಮ್ಮ ಮನೆಯಲ್ಲಿ ನಗದು ಮತ್ತು ಚಿನ್ನ ಕಳ್ಳತನವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಮನೆಗೆ ಬಂದು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಹೊರಗಿನವರಿಂದ ಈ ಕಳ್ಳತನ ನಡೆದಿಲ್ಲ ಎನ್ನುವುದು ಖಚಿತವಾಗಿತ್ತು. ನೆರೆಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ರಿಂಪಲ್ ಬ್ಯಾಗ್ ತೆಗೆದುಕೊಂಡು ಹೋಗಿ ಯುವಕನೊಬ್ಬನಿಗೆ ನೀಡುವುದು ಖಾತರಿಯಾಗಿದೆ.

    ರಿಂಪಲ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರು ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    ಫೇಸ್‍ಬುಕ್ ಲವ್: ರಿಂಪಲ್ ಮತ್ತು ಲಖ್ಬೀರ್ ಸಿಂಗ್ ಇಬ್ಬರು ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದರು. ಕೆಲವೇ ದಿನಗಳಲ್ಲಿ ಫೇಸ್‍ಬುಕ್ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಮದುವೆಯ ಬಳಿಕವೂ ಇಬ್ಬರು ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಮದುವೆಗೂ ಮುನ್ನವೇ ಇಬ್ಬರು ಕಳ್ಳತನ ಮಾಡಿ ಎಸ್ಕೇಪ್ ಆಗಬೇಕೆಂದು ಪ್ಲಾನ್ ಮಾಡಿದ್ದರು. ಲೂಧಿಯಾನದ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದ ಲಖ್ಬೀರ್ ಗೆಳತಿ ತರುವ ಹಣದಲ್ಲಿ ವಿಲಾಸಿಮಯ ಜೀವನ ನಡೆಸುವ ಪ್ಲಾನ್ ಮಾಡಿಕೊಂಡಿದ್ದನು.

    ಮನೆಯಿಂದ ಎರಡು ಬಾರಿ ಬ್ಯಾಗ್ ರವಾನೆ:
    ರಿಂಪಲ್ ಮನೆಯಿಂದ ಒಟ್ಟು ಎರಡು ಬಾರಿ ಬ್ಯಾಗ್ ತೆಗೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಿಂಪಲ್ ಬರುವುದನ್ನು ಕಾಯುತ್ತ ನಿಂತಿದ್ದ ಯುವಕನಿಗೆ ಬ್ಯಾಗ್ ನೀಡಿ ಮನೆಗೆ ಹಿಂದಿರುಗಿದ್ದಾಳೆ. ಮನೆಗೆ ಬಂದ ರಿಂಪಲ್ ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಅಡುಗೆ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಹಣ ಪಡೆದ ಲಖ್ಬೀರ್ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆತನನ್ನು ಬಂಧಿಸಲಾಗಿದೆ ಎಂದು ಮಾತ್ರ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರ ಪತ್ತೆ – ಭೂ ವಿಜ್ಞಾನಿಗಳ ತಂಡ ಸ್ಪಷ್ಟನೆ

    ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರ ಪತ್ತೆ – ಭೂ ವಿಜ್ಞಾನಿಗಳ ತಂಡ ಸ್ಪಷ್ಟನೆ

    ಕೋಲಾರ: ನಗರದ ಕೆಜಿಎಫ್‍ನಲ್ಲಿ ಚಿನ್ನದ ಜೊತೆಗೆ ವಜ್ರವೂ ಇದೆ ಎಂಬ ವಂದತಿಗಳಿಗೆ ಶುಕ್ರವಾರ ಹಿರಿಯ ಭೂ ವಿಜ್ಞಾನಿಗಳ ತಂಡ ಹಾಗೂ ಅಧಿಕಾರಿಗಳ ತಂಡ ತೆರೆ ಎಳೆದಿದ್ದಾರೆ.

    ಇತ್ತೀಚೆಗೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮದ ಬಳಿಯ ಸರ್ವೆ ನಂ. 15 ಹಾಗೂ 17 ರಲ್ಲಿ, ಸುಮಾರು ಎರಡೂವರೆ ಎಕರೆಯಲ್ಲಿ ಬೆಲೆ ಬಾಳುವ ಖನಿಜ ಸಂಪತ್ತಿನೊಂದಿಗೆ ವಜ್ರ ಇದೆ ಎಂಬ ವದಂತಿಗಳು ಎಲ್ಲಡೆ ಹಬ್ಬಿತ್ತು. ಅದರಂತೆ ಕಳೆದ ದಿನ ಸ್ಥಳಕ್ಕೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ ನೀಡಿದ್ದರು. ಗ್ರಾಮದಲ್ಲಿರುವ ಬಂಡೆಯನ್ನ ಪರಿಶೀನೆಯನ್ನ ನಡೆಸಿ, ಇಲ್ಲಿ ಯಾವುದೇ ಖನಿಜ ಸಂಪತ್ತು ಇಲ್ಲವೆಂದು ಸ್ಪಷ್ಟ ಪಡಿಸಿದರು.

    ಹೀಗಾಗಿ ಈ ಬಂಡೆಯನ್ನ ಪೈರೋಕ್ಲಾಸಿಕ್ ರಾಕ್ ಎಂದು ಗುರುತಿಸಿ ಪ್ರವಾಸಿ ತಾಣ ಮಾಡಲು ಕೋಲಾರ ಜಿಲ್ಲಾಡಳಿತ ಮುಂದಾಗಿದೆ. ಅಲ್ಲದೆ ಇದೇ ವೇಳೆ ಪೆದ್ದಪಲ್ಲಿ ಗ್ರಾಮದ ಗಂಗಮ್ಮ ದೇವಾಲಯದ ಹಿಂಭಾಗದಲ್ಲಿ ವಿಶೇಷವಾದ ಹಾಗೂ ಅಪರೂಪವಾದ ಶಿಲಾನ್ಯಾಸಗಳ ಜೊತೆಗೆ ಭೂಸ್ಮಾರಕಗಳು ಪತ್ತೆಯಾಗಿವೆ.

    ಈ ಸ್ಮಾರಕಗಳನ್ನ ರಕ್ಷಣೆ ಮಾಡಿ ಪ್ರವಾಸೋದ್ಯಮ ಸ್ಥಳವನ್ನಾಗಿ ಮಾರ್ಪಡಿಸಿ, ಭೂಗೋಳ ಶಾಸ್ತ್ರ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನಿಗಳಿಗೆ ತರಬೇತಿ ನೀಡಲು ಈ ಸ್ಥಳ ಪ್ರಸಿದ್ಧಿ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಭೂವೈಜ್ಞಾನಿಕ ಸರ್ವೇಕ್ಷಣೆ ಅಧಿಕಾರಿಗಳು, ಕರ್ನಾಟಕ ಗಣಿ ವೈಜ್ಞಾನಿಕ ಇಲಾಖೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಗಿಗಳಂತೆ ಬಂದು 40 ಸಾವಿರ, ಚಿನ್ನಾಭರಣ ದೋಚಿದ್ರು..!

    ರೋಗಿಗಳಂತೆ ಬಂದು 40 ಸಾವಿರ, ಚಿನ್ನಾಭರಣ ದೋಚಿದ್ರು..!

    ಭುವನೇಶ್ವರ್: ರೋಗಿಗಂತೆ ನಟಿಸಿ ಆಸ್ಪತ್ರೆಗೆ ಬಂದು ವೈದ್ಯರ ಬಳಿಯಿಂದ ಹಣ, ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ದೋಚಿದ ಪ್ರಕರಣವೊಂದು ಒಡಿಶಾದಲ್ಲಿ ನಡೆದಿದೆ.

    ಈ ಘಟೆನೆ ಜಿಲ್ಲೆಯ ಇಂದ್ರಾವತಿ ನಗರದಲ್ಲಿ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ನಡೆದಿದೆ.

    ದುಷ್ಕರ್ಮಿಗಳಿಬ್ಬರು ತಮಗೆ ಹುಷಾರಿಲ್ಲವೆಂದು ಹೇಳಿ ರಾತ್ರೋ ರಾತ್ರಿ ಇಂದ್ರಾವತಿಯಲ್ಲಿರುವ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಡಾ. ಪ್ರದಿಪ್ತಾ ಕುಮಾರ್ ಪ್ರಹರಾಜ್ ಅವರ ಮನೆಗೆ ಬಂದಿದ್ದಾರೆ. ಈ ಇಬ್ಬರು ಕುಳಿತ ಕೆಲ ಹೊತ್ತಿನಲ್ಲೇ ಮತ್ತಿಬ್ಬರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಏಕಾಏಕಿ ಮನೆಗೆ ನುಗಿದ್ದಾರೆ. ಅಲ್ಲದೇ ವೈದ್ಯರಿಗೆ ಪಿಸ್ತೂಲ್ ತೋರಿಸುವ ಮೂಲಕ ಬೆದರಿಸಿ ಮನೆಯೆಲ್ಲಾ ಹುಡುಕಾಡಿ 40 ಸಾವಿರ ನಗದು, 55 ಗ್ರಾಂ ತೂಕದ ಚಿನ್ನಾಭರಣ ಹಾಗೂ 4 ಮೊಬೈಲ್ ಗಳನ್ನು ದೋಚಿದ್ದಾರೆ.

    ಪ್ರಕರಣ ಸಂಬಂಧ ಇಂದು ಬೆಳಗ್ಗೆ ಇಂದ್ರಾವತಿ ಪೊಲೀಸ್ ಠಾಣೆಗೆ ತೆರಳಿ ವೈದ್ಯರು ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಿರುಪತಿ ಚಿನ್ನ ಕೊಡಸ್ತೀನಿ ಅಂತ 50 ಲಕ್ಷ ರೂ. ನಾಮ ಹಾಕ್ದ..!

    ತಿರುಪತಿ ಚಿನ್ನ ಕೊಡಸ್ತೀನಿ ಅಂತ 50 ಲಕ್ಷ ರೂ. ನಾಮ ಹಾಕ್ದ..!

    ಧಾರವಾಡ: ವಂಚಕನೊಬ್ಬ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ಕೊಡುವುದಾಗಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬನನ್ನು ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡದಿಂದ ಗಡಿಪಾರಾಗಿರುವ ಚೀಟರ್ ಮೋನ್ಯಾ ಅಲಿಯಾಸ್ ಮೋಹನ್ ವಾಳ್ವೇಕರ್ ಎಂಬ ವ್ಯಕ್ತಿ ಮೋಸ ಮಾಡಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ನಿವಾಸಿ ಅಶ್ವಿನ್ ಪಾಟೀಲ ಎಂಬವರಿಗೆ ತಿರುಪತಿಯ ಚಿನ್ನ ಕೊಡುವುದಾಗಿ ಹೇಳಿ ಅವರಿಂದ 50 ಲಕ್ಷ ರೂ. ಪಡೆದು ಆರೋಪಿ ಪರಾರಿಯಾಗಿದ್ದಾನೆ. ಅಶ್ವಿನ್ ಬಳಿ ಮೊದಲು ಹಣ ಕೊಡಿ ನಂತರ ತಿರುಪತಿ ತಿಮ್ಮಪ್ಪನ ಚಿನ್ನಾಭರಣ ತಂದು ಕೊಡುತ್ತೇನೆ ಅಂತ ಹಣ ಪಡೆದು ಚಿನ್ನ ನೀಡದೆ ನಾಮ ಹಾಕಿದ್ದಾನೆ.

    ಈ ಹಿಂದೆ ನಕಲಿ ನೋಟು ಹಾಗೂ ಜನರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಚೀಟರ್ ಮೋನ್ಯಾ ಭಾಗಿಯಾಗಿದ್ದನು. ಆದರಿಂದ ಜಿಲ್ಲೆಯ ಪೊಲೀಸ್ ಆಯುಕ್ತರು ಮೋನ್ಯಾನನ್ನು ಗಡಿಪಾರು ಮಾಡಿ ಎಂದು ಆದೇಶ ಮಾಡಿದ್ದರು. ಆದ್ರೆ ಪೊಲೀಸ್ ಆಯುಕ್ತರ ಆದೇಶವನ್ನು ಮೀರಿ ನಗರದಲ್ಲೇ ಬಿಡು ಬಿಟ್ಟಿದ್ದ ಚೀಟರ್ ಮೋನ್ಯಾ ಜನರಿಗೆ ವಂಚನೆ ಮಾಡುವ ಕೆಲಸವನ್ನು ಮುಂದುವರಿಸಿದ್ದಾನೆ.

    ಸದ್ಯ ಘಟನೆ ಕುರಿತು ಅಶ್ವಿನ್ ಆರೋಪಿ ಮೋನ್ಯಾ ಹಾಗೂ ಅವನ ಕುಟುಂಬದ ಮೇಲೆ ದೂರು ನೀಡಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    109 ಕೋಟಿ ಅಘೋಷಿತ ಆಸ್ತಿ ಪತ್ತೆ – ಇಡಿ ಎಂಟ್ರಿಯಾದ್ರೆ ನಟರಿಗೆ ಸಂಕಷ್ಟ ಗ್ಯಾರಂಟಿ!

    ಬೆಂಗಳೂರು: ಸ್ಟಾರ್ ನಟರು ಮತ್ತು ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ವೇಳೆ 109 ಕೋಟಿಯಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದ್ದು, 2.85 ಕೋಟಿ ನಗದು ಸೇರಿದಂತೆ 11 ಕೋಟಿಯಷ್ಟು ಚಿನ್ನಾಭರಣ ಸೀಜ್ ಮಾಡಿದ್ದಾರೆ. ಈಗ ಈ ಐಟಿ ದಾಳಿಗೆ ಇಡಿ ಎಂಟ್ರಿಯಾದರೆ ನಟರಿಗೆ ಸಂಕಷ್ಟ ಗ್ಯಾರಂಟಿಯಾಗಿದೆ.

    ಐಟಿ ಅಧಿಕಾರಿಗಳು ಸತತ ಮೂರು ದಿನಗಳ ಕಾಲ ಸ್ಟಾರ್ ನಟರು ಮತ್ತು ನಿರ್ಮಾಪಕರು ಟ್ಯಾಕ್ಸ್ ಹೋಲ್ಡರ್ ಗಳಾದರೂ ತೆರಿಗೆ ವಂಚಿಸಿ ಆಸ್ತಿ ಮತ್ತು ಆದಾಯವನ್ನ ಮುಚ್ಚಿಟ್ಟಿರೋದನ್ನ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯುಸಿನೆಸ್‍ನಲ್ಲಿ ಬಂದ ಆದಾಯ, ಥಿಯೇಟರ್ ಟಿಕೆಟ್‍ ನಲ್ಲಿ ವಂಚನೆ, ಆಡಿಯೊ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಸ್ಯಾಟಲೈಟ್ ರೈಟ್ಸ್ ಗಳ ಅಕೌಂಟ್ಯಾಬಿಲಿಟಿ ಇಲ್ಲ ಅನ್ನೋದನ್ನ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

    ಈಗಾಗಲೇ ನೋಟಿಸ್ ಸಿದ್ಧ ಮಾಡಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಟರು ಮತ್ತು ನಿರ್ಮಾಪರಕರನ್ನ ವಿಚಾರಣೆಗೆ ಕರೆಯಲಿದೆ. ಇವತ್ತಿನಿಂದ ನಾಲ್ವರು ಸ್ಟಾರ್ ನಟರು ಮತ್ತು ನಿರ್ಮಾಪರಕು ಐಟಿ ಬಾಗಿಲು ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲವೊಂದಿಷ್ಟು ಪ್ರಶ್ನೋತ್ತರಗಳನ್ನ ರೆಡಿ ಮಾಡಿಟ್ಟುಕೊಂಡಿರುವ ಅಧಿಕಾರಿಗಳು ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆಯಲಿದ್ದಾರೆ. ಉತ್ತರ ಸಮಂಜಸವಾಗಿಲ್ಲದಿದ್ದರೆ, ದಾಖಲಾತಿಗಳನ್ನ ಹಾಜರು ಪಡಿಸಬೇಕಾಗುತ್ತದೆ. 109 ಕೋಟಿಯ ಆದಾಯದ ಮೂಲ ಯಾವುದು, ತೆರಿಗೆಯಿಂದ ಈ ಆಸ್ತಿಯನ್ನ ಮುಚ್ಚಿಟ್ಟಿದ್ದೇಕೆ, ಥಿಯೇಟರ್ ಟಿಕೆಟ್‍ನಿಂದ ಹಿಡಿದು ಸ್ಯಾಟಲೈಟ್ ರೈಟ್ಸ್‍ವರೆಗೂ ಲೆಕ್ಕಪತ್ರಗಳು ಯಾಕಿಲ್ಲ? ತೆರಿಗೆ ವಂಚನೆ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದೀರಿ ತಾನೆ? ಇದಕ್ಕಾಗಿ ಪೆನಾಲ್ಟಿ ಎಷ್ಟಿದೆ ಗೊತ್ತಾ.? ಹೀಗೆ ಪ್ರಶ್ನೆಗಳ ಸುರಿಮಳೆಗೈದು ನಟರು ಮತ್ತು ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.

    ಬರೀ ಐಟಿ ವಿಚಾರಣೆಯಾದರೆ ಪರವಾಗಿಲ್ಲ. ತೆರಿಗೆ ಕಟ್ಟದಿದ್ದರೆ ಶೇ.100 ರಿಂದ 300ರಷ್ಟು ದಂಡ ಹಾಕಿ ಬಿಟ್ಟು ಕಳಿಸುತ್ತಾರೆ. 10 ಲಕ್ಷಕ್ಕಿಂತ ಹೆಚ್ಚಿನ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದರೆ ಅಂಥಾ ಪ್ರಕರಣಗಳನ್ನ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡಬೇಕು. ಸ್ಟಾರ್ ನಟರ ಐಟಿ ದಾಳಿ ವೇಳೆ 109 ಕೋಟಿ ಅಘೋಷಿತ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನ ಇಡಿಗೆ ವರ್ಗಾಯಿಸಲು ಐಟಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ಒಮ್ಮೆ ಇಡಿ ಎಂಟ್ರಿಯಾದರೆ ನಟರು ಮತ್ತು ನಿರ್ಮಾಪಕರಿಗೆ ಸಂಕಷ್ಟ ಗ್ಯಾರಂಟಿಯಾಗಿದ್ದು, ವಿದೇಶಿ ವ್ಯವಹಾರ ಮತ್ತು ಮನಿ ಲಾಂಡ್ರಿಗ್ ಅಡಿ ಪ್ರಕರಣ ಕೈಗೆತ್ತಿಕೊಳ್ಳವ ಇಡಿ ಅಧಿಕಾರಿಗಳು ಎಫ್‍ಐಆರ್ ದಾಖಲು ಮಾಡಿಕೊಳ್ಳುತ್ತಾರೆ. ನಂತರ ಪ್ರತಿಯೊಬ್ಬರ ವಿಚಾರಣೆ ಮಾಡುತ್ತಾರೆ. ಹೀಗಾಗಿ ಐಟಿ ಮತ್ತು ಇಡಿ ಬಾಗಿಲುಗಳಿಗೆ ಪ್ರತಿ ದಿನ ಅಲೆಯಬೇಕಾದ ಪರಿಸ್ಥಿತಿ ನಟರು ಮತ್ತು ನಿರ್ಮಾಪಕರಿಗೆ ಬಂದೊದಗಿದೆ. ಅಗತ್ಯ ಬಿದ್ದರೆ ಅರೆಸ್ಟ್ ಮಾಡುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ.

    ಸ್ಟಾರ್ ನಟರ ಆದಾಯ ಮತ್ತು ತೆರಿಗೆ ನಡುವಿನ ವ್ಯತ್ಯಾಸವನ್ನ ಐಟಿ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈಗ ಮುಂದೆ ತನಿಖೆ ಯಾವ ರೀತಿ ಸವಾಲೊಡ್ಡುತ್ತದೆ ಅನ್ನೋದು ಸ್ವಲ್ಪ ದಿನಗಳಲ್ಲೇ ಗೊತ್ತಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ

    – ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 4.4 ಕೆಜಿ ಬಂಗಾರ ವಶ

    ಚಿಕ್ಕಬಳ್ಳಾಪುರ: ಏರ್ ಇಂಟಲಿಜೆನ್ಸಿ ಕಸ್ಟಮ್ಸ್ ಆಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 4.4 ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಒಟ್ಟು 1.45 ಕೋಟಿ ರೂ. ಮೌಲ್ಯದ 4.4 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ಏರ್ ಪೋರ್ಟ್ ನಲ್ಲಿ ಶೋಧಕಾರ್ಯ ಮಾಡುವಾಗ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆಯಾಗಿದೆ. ಈಕೆ ಸುಡಾನ್ ದೇಶದವಳಾಗಿದ್ದು, ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಇತ್ತ ಜರ್ಮನ್ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತಿಯ ಶಾರ್ಟ್ಸ್ ನಲ್ಲಿ 1.4 ಕೆ.ಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದೆ. ಇನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದ ವಿಮಾನದ ಸೀಟಿನ ಕೆಳಗೆ 1.2 ಕೆ.ಜಿ. ಚಿನ್ನ ಪತ್ತೆಯಾಗಿದೆ.

    ಗುದದ್ವಾರದದಲ್ಲಿ ಚಿನ್ನ ಸಾಗಿಸಿದ್ದ ಕೇರಳ ಮೂಲದ ವ್ಯಕ್ತಿಯಿಂದ 500 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮೂವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1.25 ಕೋಟಿ ಬೆಲೆಬಾಳುವ ಮಾಲ್ ವಾಪಸ್ – ಕೆಪಿ ಅಗ್ರಹಾರ ಪೊಲೀಸರಿಂದ ಮಹತ್ವದ ಕಾರ್ಯ

    1.25 ಕೋಟಿ ಬೆಲೆಬಾಳುವ ಮಾಲ್ ವಾಪಸ್ – ಕೆಪಿ ಅಗ್ರಹಾರ ಪೊಲೀಸರಿಂದ ಮಹತ್ವದ ಕಾರ್ಯ

    ಬೆಂಗಳೂರು: ಕೆ.ಪಿ. ಅಗ್ರಹಾರ ಪೊಲೀಸರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದು, ಅವರಿಂದ ವಶಪಡಿಸಿಕೊಂಡಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಾರಸುದಾರರಿಗೆ ವಾಪಸ್ ಹಿಂದಿರುಗಿಸಿದ್ದಾರೆ. ಈ ಮೂಲಕ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಕುಖ್ಯಾತ ಆರೋಪಿಗಳಿಂದ ಬರೋಬ್ಬರಿ 4 ಕೆಜಿ ಚಿನ್ನಾಭರಣಗಳು, 1.3 ಕೆಜಿ ಬೆಳ್ಳಿಯ ಸಾಮಾಗ್ರಿಗಳು ಸೇರಿದಂತೆ ಒಟ್ಟು 1.25 ಕೋಟಿ ಬೆಲೆ ಬಾಳವ ಮಾಲುಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಕೆ.ಪಿ ಅಗ್ರಹಾರ ಪೊಲೀಸರು ಅವುಗಳ ವಾರಿಸುದಾರರನ್ನು ಪೊಲೀಸ್ ಠಾಣೆಗೆ ಕರೆಸಿ ವಾಪಸ್ ನೀಡಿದ್ದಾರೆ.

    ಕೆಪಿ ಅಗ್ರಹಾರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಡಿಸಿಪಿ ರವಿ ಡಿ ಚನ್ನಣ್ಣನವರ್ ಕೂಡ ಪೊಲೀಸರು ವಾರಸುದಾರರಿಗೆ ವಾಪಸ್ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.

    ಎರಡು ದಿನಗಳ ಹಿಂದೆ ಕೆಪಿ ಅಗ್ರಹಾರ ಪೊಲೀಸರು ರಾಜಾ ಅಲಿಯಾಸ್ ಜಪಾನ್ ರಾಜಾ, ಕಿರಣ್ ಕುಮಾರ್ ಹಾಗೂ ನಾಗರಾಜ್ ಅಲಿಯಾಸ್ ಮತ್ತಿನಾಗರನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಕೆ.ಪಿ.ಅಗ್ರಹಾರ ಸೇರಿದಂತೆ ವಿಜಯನಗರ, ಎಚ್‍ಎಸ್‍ಆರ್ ಲೇಔಟ್ ಹಾಗೂ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಕಳ್ಳತನ ಹೇಗೆ ಮಾಡ್ತಿದ್ರು?
    ಬಂಧಿತ ಆರೋಪಿಗಳು ಮೊದಲು ಬೈಕಿನಲ್ಲೇ ಮನೆಯನ್ನು ಗಮನಿಸುತ್ತಿದ್ದರು. ಮುಖ್ಯವಾಗಿ ಹಾಲಿನ ಪ್ಯಾಕ್, ರಂಗೋಲಿ, ಪೇಪರ್ ಗಳನ್ನು ನೋಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಯಾವ ಮನೆಯಲ್ಲಿ ರಂಗೋಲಿ ಇರುತ್ತಿರಲಿಲ್ಲವೋ ಅಥವಾ ಯಾವ ಮನೆಯಲ್ಲಿ ಹಾಲಿನ ಪ್ಯಾಕ್ ಹಾಗೂ ಪೇಪರ್ ಗಳನ್ನು ತೆಗೆದುಕೊಳ್ಳದೇ ಇರುತ್ತಿದ್ದರೋ ಅಂತಹ ಮನೆಗಳನ್ನೇ ಇವರು ಟಾರ್ಗೆಟ್ ಮಾಡಿಕೊಂಡು ಕ್ಷಣಮಾತ್ರದಲ್ಲಿ ಮನೆಯನ್ನು ದೋಚುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರು-ಮೈಸೂರು ರೈಲು ಪ್ರಯಾಣ ಸೇಫ್ ಅಲ್ಲ..!

    ಬೆಂಗಳೂರು-ಮೈಸೂರು ರೈಲು ಪ್ರಯಾಣ ಸೇಫ್ ಅಲ್ಲ..!

    ಬೆಂಗಳೂರು: ಮೈಸೂರು-ಬೆಂಗಳೂರು ರೈಲು ಪ್ರಯಾಣ ಸೇಫ್ ಇಲ್ಲ. ಯಾಕೆಂದರೆ ಕೇವಲ ಒಂದು ವಾರದ ಅಂತರದಲ್ಲಿ 2 ಬಾರಿ ದರೋಡೆಯಾಗಿದೆ.

    ಚನ್ನಪಟ್ಟಣ – ಕೆಂಗೇರಿ ಮಾರ್ಗದ ನಡುವೆ ರೈಲಿನಲ್ಲಿ ಸುಲಿಗೆ ಮಾಡುತ್ತಿದ್ದು, ಪಯಾಣಿಕರ ಮೇಲೆ ಹಲ್ಲೆ ಮಾಡಿ ಸಿಕ್ಕಿದ್ದನ್ನು ದೋಚುತ್ತಿದ್ದಾರೆ. ಮೊಬೈಲ್, ನಗದು, ಚಿನ್ನ ಹೀಗೆ ಏನೇ ಸಿಕ್ಕಿದರೂ ಬಿಡದೆ ದೋಚಿ ಬಳಿಕ ಟ್ರೈನ್ ಚೈನ್ ಎಳೆದು ಮಾರ್ಗ ಮಧ್ಯೆಯೇ ಜಿಗಿದು ಪರಾರಿಯಾಗಿತ್ತಿದ್ದಾರೆ. ಇದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.

    ದರೋಡೆ-1
    ರೈಲು ಚನ್ನಪಟ್ಟಣ-ರಾಮನಗರ ನಡುವೆ ಇರುವಾಗ ಜನನಿಬಿಡ ಜನರಲ್ ಕಂಪಾರ್ಟ್ ಮೆಂಟ್‍ನಲ್ಲೇ ದರೋಡೆ ಮಾಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣಿಕರಿಂದ ಲೂಟಿ ಮಾಡಿದ್ದು, ಪ್ರಯಾಣಿಕರು ಬಾಗಿಲ ಬಳಿ ನಿಂತಿದ್ದ ವೇಳೆ ನಾಲ್ಕೈದು ಮಂದಿ ದರೋಡೆಕೋರರು ಅಟ್ಯಾಕ್ ಮಾಡಿದ್ದಾರೆ. ಬಳಿಕ ರೈಲಿನ ಬಾಗಿಲ ಬಳಿ ನಿಂತಿದ್ದವರನ್ನ ಟಾಯ್ಲೆಟ್‍ಗೆ ಎಳೆದುಕೊಂಡು ಹೋಗಿದ್ದಾರೆ.

    ಪ್ರಯಾಣಿಕರನ್ನು ಕೋಲಾರದ ಕೃಷಿಕ ನಾಗರಾಜು ಮತ್ತು ಹೆಚ್‍ಡಿ ಕೋಟೆಯ ರಾಮೇಗೌಡ ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ನಗ-ನಗದು, ಮೊಬೈಲ್ ಲೂಟಿ ಮಾಡಿದ್ದಾರೆ. ಬಳಿಕ ರೈಲಿನ ಚೈನ್ ಎಳೆದು ನಿಧಾನವಾಗುತ್ತಿದ್ದಂತೆ ಕೆಳಗಿ ಧುಮುಕಿ ಕತ್ತಲಲ್ಲಿ ಕಣ್ಮರೆಯಾಗಿದ್ದಾರೆ.

    ದರೋಡೆ 2
    ಡಿಸೆಂಬರ್ 20 ರಂದು ರಾತ್ರಿ ಸುಮಾರು 10 ಗಂಟೆಯಲ್ಲಿ ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ ಮಾಡಿದ್ದಾರೆ. ರೈಲು ಹೆಜ್ಜಾಲ-ನಾಯಂಡಹಳ್ಳಿ ನಡುವೆ ದರೋಡೆ ಮಾಡಿದ್ದು, ಎಸ್2-ಎಸ್3 ಬೋಗಿಯಲ್ಲಿ ನಾಲ್ವರು ದರೋಡೆಕೋರರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ಲೂಟಿ ಮಾಡಿದ್ದಾರೆ.

    ಹೀಗಾಗಿ ಈ ಮಾರ್ಗದಲ್ಲಿ ರೈಲು ಪ್ರಯಾಣಿಕರು ಪ್ರತಿದಿನ ಆತಂಕ, ಭಯದಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಆದ್ದರಿಂದ ಈ ಮಾರ್ಗದ ರೈಲುಗಳಿಗೆ ಹೆಚ್ಚಿನ ಭದ್ರತೆ ಸೌಲಭ್ಯವನ್ನು ಒದಗಿಸಬೇಕಿದೆ ಎಂದು ಪ್ರಯಾಣಿಕರು ಮನವಿ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv