Tag: gold

  • ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಅಕ್ರಮವಾಗಿ ಸಾಗಿಸುತ್ತಿದ್ದ 43 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನ ವಶ

    ಗುವಾಹಟಿ: ಅಕ್ರಮವಾಗಿ 43 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    ಕೇರಳದ ಕಣ್ಣೂರಿನ ಮೂಲದ ಮೊಹಮ್ಮದ್ ಹ್ಯಾರಿಸ್ (51) ಬಂಧಿತ ಆರೋಪಿ. ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಮೊಹಮ್ಮದ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಮೊಹಮ್ಮದ್ ಕಾಮ್ರಪ್ ಏಕ್ಸ್‌ಪ್ರೆಸ್ ರೈಲಿನ ಬೋಗಿ ಸಂಖ್ಯೆ ಬಿ-3ರ 11ನೇ ಸೀಟ್‍ನಲ್ಲಿ ಪ್ರಯಾಣಿಸುತ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಆತನ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ರೈಲು ಇಂದು ಬೆಳಗ್ಗೆ 7.45 ಗಂಟೆಗೆ ಗುವಾಹಟಿ ರೈಲು ನಿಲ್ದಾಣದ ಪ್ಲ್ಯಾಟ್‍ಫಾರಂ ನಂಬರ್ 1ರಲ್ಲಿ ಬಂದು ನಿಂತಿತ್ತು. ತಕ್ಷಣವೇ ರೈಲು ಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

    ಬಂಧಿತ ಮೊಹಮ್ಮದ್ ಬಳಿ 8 ಚಿನ್ನದ ಬಿಸ್ಕೆಟ್‍ಗಳು ಸಿಕ್ಕಿದ್ದು, ಅವುಗಳ ಒಟ್ಟು ತೂಕ 1.3 ಕೆಜಿ ಆಗಿದೆ. ಸುಮಾರು 43 ಲಕ್ಷ ರೂ. ಮೌಲ್ಯದ ಚಿನ್ನ ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಗುವಾಹಟಿ ರೈಲ್ವೇ ನಿಲ್ದಾಣದಲ್ಲಿ ಏಪ್ರಿಲ್ 13ರಂದು 12 ಚಿನ್ನದ ಬಿಸ್ಕೆಟ್‍ಗಳನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದರು. ಅದರ ಮೌಲ್ಯವು 60 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಅಷ್ಟೇ ಅಲ್ಲದೆ 2018 ಮಾರ್ಚ್ 23ರಲ್ಲಿ 12 ಚಿನ್ನದ ಬಿಸ್ಕೆಟ್, ಅದೇ ತಿಂಗಳ 15ರಂದು 1.5 ಕೆಜಿ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    ಬೆಂಗಳೂರು: ಮದುವೆ ಸೀಜನ್ ಆರಂಭವಾಗುತ್ತಿದೆ. ಆದ್ರೆ ಮದುವೆಗೆ ಈ ಕಾಸ್ಟ್ಲೀ ದುನಿಯಾದಲ್ಲಿ ಹೇಂಗಪ್ಪಾ ಚಿನ್ನ ತಗೊಳ್ಳೋದು ಎಂದು ಯೋಚನೆ ಮಾಡ್ತಿದ್ದೀರಾ. ಡೋಂಟ್ ವರಿ, ನಿಮಗಾಗಿಯೇ ಸಿಹಿ ಸುದ್ದಿಯೊಂದು ಇಲ್ಲಿದೆ.

    ಹೌದು. ಈ ಬಾರಿ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆ ಕುಸಿಯುತ್ತಾ ಬಂದಿದೆ. ಬರೋಬ್ಬರಿ ಒಂದೇ ತಿಂಗಳಲ್ಲಿ 1 ರಿಂದ ಒಂದೂವರೆ ಸಾವಿರದಷ್ಟು ಬೆಲೆ ಇಳಿಕೆ ಕಂಡಿದೆ.

    ಒಂದು ತಿಂಗಳ ಬೆಲೆಯ ವ್ಯತ್ಯಾಸ?:
    ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 31 ಸಾವಿರ ರೂ. ಇದ್ರೆ. 24 ಕ್ಯಾರೆಟ್ ಚಿನ್ನದ ಬೆಲೆ 33, 336 ರೂ ಇತ್ತು. ಆದ್ರೆ ಇಂದು  22 ಕ್ಯಾರೆಟ್ ಚಿನ್ನದ ಬೆಲೆ 29,560 ರೂ ಆಗಿದ್ರೆ, 24 ಕ್ಯಾರೆಟ್ ಚಿನ್ನದ ಬೆಲೆ 32,459 ರೂಗೆ ಇಳಿದಿದೆ.

    ಅಂತರಾಷ್ಟೀಯ ಮಟ್ಟದಲ್ಲಿ ಚಿನ್ನದ ದರ ಕಡಿಮೆ ಆಗಿರೋದೇ ಚಿನ್ನದ ಬೆಲೆ ಇಳಿಕೆಗೆ ಕಾರಣ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ತಗೊಳ್ಳೋರು ಈಗ್ಲೇ ಬುಕ್ ಮಾಡೋದು ಬೆಸ್ಟ್ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಿದ್ದಾರೆ.

    ಚಿನ್ನ ಅಂದ್ರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಮದುವೆಯಲ್ಲಂತೂ ಚಿನ್ನದ್ದೇ ಕಾರುಬಾರು. ಇದೀಗ ಬಂಗಾರದ ಬೆಲೆ ಕಡಿಮೆಯಾಗಿರೋದ್ರಿಂದ ಮದುವೆಗೆ ಹಾಗೂ ಅಕ್ಷಯ ತೃತೀಯಕ್ಕೆ ಜನ ಚಿನ್ನವನ್ನು ಮುಗಿಬಿದ್ದು ಬುಕ್ ಮಾಡುತ್ತಿದ್ದಾರೆ ಎಂದು ಗ್ರಾಹಕಿ ಶಕುಂತಲಾ ಹೇಳಿದ್ದಾರೆ.

    ಒಟ್ಟಿನಲ್ಲಿ ವೆಡ್ಡಿಂಗ್ ಸೀಜನ್ ಹಾಗೂ ಅಕ್ಷಯ ತೃತೀಯ ಸಮಯದಲ್ಲೇ ಚಿನ್ನದ ಬೆಲೆ ಕಡಿಮೆ ಆಗಿರೋದರಿಂದ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ.

  • ಸಾವಿನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್

    ಸಾವಿನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್

    ಬೆಂಗಳೂರು: ಸಾವಿನ ಮನೆಯವರು ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲು ತೆರಳಿದ್ದಾಗ ಕಳ್ಳನೊಬ್ಬ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಆ ಖದೀಮನನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಆವಲಹಳ್ಳಿ ಪೋಲಿಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯನ್ನು ಶ್ರೀರಾಮಪುರ ಮೂಲದ ಮುನಿರಾಜು ಎಂದು ತಿಳಿದು ಬಂದಿದೆ. ಕುಟುಂಬ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಹೊಂಚು ಹಾಕಿದ್ದ ಕಳ್ಳ ಚಟ್ಟ ಕಟ್ಟುವ ಅಂಗಡಿಯವನ ಜೊತೆ ಲಿಂಕ್ ಇಟ್ಟುಕೊಂಡಿದ್ದು, ಆತನಿಂದ ಮಾಹಿತಿ ಪಡೆದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.

    ಈ ಕುರಿತು ಆವಲಹಳ್ಳಿ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇದೀಗ ವಿಶೇಷ ತಂಡವನ್ನು ರಚನೆ ಮಾಡಿ ಆರೋಪಿ ಮುನಿರಾಜುನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತ ಆರೋಪಿಯಿಂದ 25 ಲಕ್ಷ ಬೆಲೆ ಬಾಳುವ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.

  • ಚಿನ್ನ, ಬೈಕ್ ಖದೀಮರು ಅಂದರ್

    ಚಿನ್ನ, ಬೈಕ್ ಖದೀಮರು ಅಂದರ್

    ಬೆಂಗಳೂರು: ಮನೆ ಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ವಿಜಯ್, ಮಂಜುನಾಥ್, ರಜೀಯಾ ಮತ್ತು ಬಾಬಾಜಾನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2.50 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ಏಳು ಲಕ್ಷ ಬೆಲೆ ಬಾಳುವ 7 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ.

    ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಡಿವೈಎಸ್‍ಪಿ ನಜುಂಡೇಗೌಡ ಹಾಗೂ ಹೆಬ್ಬಗೋಡಿ ಪೊಲೀಸ್ ಠಾಣೆಯ ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಖತರ್ನಾಕ್ ಖದೀಮರನ್ನು ಬಂಧಿಸಲಾಗಿದೆ. ಇನ್ನು ಬಂಧಿತರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

    ಬಂಧಿತ ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೆಳ್ಳಂದೂರು, ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು.

  • ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಕೆಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಕುಖ್ಯಾತ ಮನೆಗಳ್ಳ ಅಂದರ್

    ಬೆಂಗಳೂರು: ನಕಲಿ ಕೀಗಳನ್ನ ಮಾಡಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಾಲಾಜಿ ಪ್ರಕಾಶ್ ಬಂಧಿತ ಮನೆಗಳ್ಳ. ಈತ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದಾನೆ. ಡೌಟ್ ಬರದ ರೀತಿಯಲ್ಲಿ ತನ್ನ ಕೈಚಳ ತೋರಿ ಪರಾರಿಯಾಗುತ್ತಿದ್ದನು. ಈತನು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕಳ್ಳತನ ಕೇಸ್‍ನಲ್ಲಿ ಒಂದು ಬಾರಿ ಜೈಲಿಗೂ ಹೋಗಿದ್ದನು. ಅಲ್ಲಿಂದ ಬಂದ ಮೇಲೆ ಮತ್ತೆ ಕೆಜಿ, ಕೆಜಿ ಚಿನ್ನಾಭರಣ ದೋಚಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಕಳ್ಳತನ ಹೇಗೆ ಮಾಡುತ್ತಿದ್ದ:
    ಬಾಡಿಗೆ ಪಡೆಯುವ ರೀತಿಯಲ್ಲಿ ಅಪಾರ್ಟ್ ಮೆಂಟ್‍ಗೆ ಹೋಗುತ್ತಿದ್ದನು. ಆಗ ಅಲ್ಲಿನ ಮನೆಯ ಕೀ ಫೋಟೋ ಕ್ಲಿಕ್ಕಿಸಿಕೊಂಡು ಬಂದು ನಕಲಿ ಕೀ ತಯಾರು ಮಾಡಿಕೊಳ್ಳುತ್ತಿದ್ದನು. ನಂತರ ಅಪಾರ್ಟ್ ಮೆಂಟ್‍ನ ಅದೇ ಮನೆಗೆ ಹೋಗಿ ಯಾರೂ ಇಲ್ಲದ ವೇಳೆ ನೋಡಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಿಕೊಂಡು ಬರುತ್ತಿದ್ದನು.

    ನಕಲಿ ಕೀ ಬಳಸಿ ಈತ ಆಗ್ನೇಯ ವಿಭಾಗದ ಕೋರಮಂಗಲ, ಮೈಕೋಲೇಔಟ್, ಸುದ್ಗಂಟೆ ಪಾಳ್ಯ, ಸೇರಿ ಹಲವೆಡೆ ತಮ್ಮ ಕೈಚಳಕ ತೋರಿದ್ದಾನೆ. ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ಲಕ್ಷ ಬೆಲೆಬಾಳುವ ಬರೋಬ್ಬರಿ 1 ಕೆ.ಜಿ 260 ಗ್ರಾಂ ಚಿನ್ನಾಭರಣ ಕದ್ದಿದ್ದನು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಹೇಳಿದ್ದಾರೆ.

    ಸದ್ಯ ಆರೋಪಿಯಿಂದ ಪೊಲೀಸರು ಬರೋಬ್ಬರಿ ಒಂದು ಕಾಲು ಕೆ.ಜಿ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಸಾವಿರಕ್ಕೂ ಹೆಚ್ಚು ನಕಲಿ ಕೀಗಳು ಮತ್ತು ಕೀ ಮೆಕರ್ ವಶಪಡಿಕೊಂಡಿದ್ದಾರೆ. ಆರೋಪಿ ಪ್ರಕಾಶ್ ಬಂಧನದ ಬಳಿಕ ಎಂಟು ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.

  • ಮಗನ ಕ್ಯಾನ್ಸರ್ ಗುಣಮಾಡ್ತೀನೆಂದು ಬಾಬಾನಿಂದ ಅತ್ಯಾಚಾರ

    ಮಗನ ಕ್ಯಾನ್ಸರ್ ಗುಣಮಾಡ್ತೀನೆಂದು ಬಾಬಾನಿಂದ ಅತ್ಯಾಚಾರ

    – ಆಚರಣೆಯ ಒಂದು ಭಾಗ ಎಂದ
    – ಬಾಬಾನ ಮಾತಿಗೆ ಮೋಸ ಹೋದ ಮಹಿಳೆ

    ಮುಂಬೈ: ಮಗನ ಕ್ಯಾನ್ಸರ್ ಗುಣಪಡಿಸುತ್ತೇನೆ ಎಂದು ಹೇಳಿ 41 ವರ್ಷದ ಮಹಿಳೆ ಮೇಲೆ ಉಜ್ಜಯಿನಿ ಮೂಲದ ಡೋಂಗಿ ಬಾಬಾನೊಬ್ಬ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

    ಡೋಂಗಿ ಬಾಬಾನ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಟ್ರಾಂಬೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅತ್ಯಾಚಾರ ಎಸಗಿದ್ದಲ್ಲದೆ ಬಾಬಾ ಮಗನ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಪೂಜೆ ಮಾಡಬೇಕೆಂದು ಸಂತ್ರಸ್ತೆಯಿಂದ ಬರೋಬ್ಬರಿ 3.5ಲಕ್ಷ ರೂ. ಹಣವನ್ನು ದೋಚಿದ್ದಾನೆ ಎಂದು ಪತಿ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದಗೇ ಮಗ ಮೃತಪಟ್ಟಿದ್ದಾನೆ.

    ಏನಿದು ಪ್ರಕರಣ?
    ಈ ದಂಪತಿಗೆ ಒಬ್ಬನೇ ಮಗನಿದ್ದನು. ಆದರೆ 2017ರಿಂದ ಮಗ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದನು. ನಂತರ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಯಾವುದೇ ಚಿಕಿತ್ಸೆ ನೀಡಿದರೂ ಕ್ಯಾನ್ಸರ್ ಗುಣವಾಗಿರಲಿಲ್ಲ. ಬಳಿಕ ಅದೇ ವರ್ಷದ ಮೇ ತಿಂಗಳಲ್ಲಿ ಸಂತ್ರಸ್ತೆ ದೇವಸ್ಥಾನದಲ್ಲಿ ಡೋಂಗಿ ಬಾಬಾನನ್ನು ಭೇಟಿಯಾಗಿದ್ದು, ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾರೆ. ಆಗ ಬಾಬಾ ಕೆಲವೊಂದು ಆಚರಣೆ-ಪೂಜೆ ಮಾಡಿದರೆ ಮಗನಿಗಿರುವ ಕಾಯಿಲೆ ವಾಸಿಯಾಗುವುದು ಎಂದು ಭರವಸೆ ನೀಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಬಾಬಾ ಸಂತ್ರಸ್ತೆಯ ಜೊತೆ ಮನೆಗೆ ಬಂದು ಕೆಲವೊಂದು ಯಜ್ಞ ನಡೆಸಿದ್ದಾನೆ. ಈ ವೇಳೆ ಬಾಬಾ ಮಹಿಳೆ ಮತ್ತು ಬರುವ ಯಜ್ಞದ ಭಸ್ಮವನ್ನು ಕೊಟ್ಟಿದ್ದಾನೆ. ಅದನ್ನು ಸೇವಿಸಿದ ತಕ್ಷಣ ಸಂತ್ರಸ್ತೆ ಪ್ರಜ್ಞೆಹೀನರಾಗಿ ಬಿದ್ದಿದ್ದಾರೆ. ತಕ್ಷಣ ಬಾಬಾ ಮನೆಯಲ್ಲಿದ್ದ 60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಇದಾದ ಬಳಿಕ ಬಾಬಾ ಸಂತ್ರಸ್ತೆಯನ್ನು ತನ್ನ ಫ್ಲ್ಯಾಟ್ ಗೆ ಬರುವಂತೆ ಹೇಳಿ ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡಿದ್ದು, ಇದು ಪೂಜೆಯ ಒಂದು ವಿಧಾನ ಎಂದು ಸಂತ್ರಸ್ತೆಯನ್ನು ನಂಬಿಸಿದ್ದಾನೆ. ಅಷ್ಟೇ ಅಲ್ಲದೇ ಅತ್ಯಾಚಾರದ ಫೋಟೋವನ್ನು ತನ್ನ ಮೊಬೈಲಿನಲ್ಲಿ ತೆಗೆದುಕೊಂಡಿದ್ದಾನೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

    ಡೋಂಗಿ ಬಾಬಾ ಆ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಸಂತ್ರಸ್ತೆಯನ್ನು ಬ್ಲ್ಯಾಕ್‍ಮೇಲ್ ಮಾಡಲು ಶುರು ಮಾಡಿದ್ದಾನೆ. ಒಂದು ವೇಳೆ ಹಣ ಕೊಡಲಿಲ್ಲ ಎಂದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಪತ್ನಿ ನನಗೆ ತಿಳಿಸಿರಲಿಲ್ಲ. ಮಗನ ಕಾಯಿಲೆ ವಾಸಿ ಮಾಡುವುದಾಗಿ ಬಾಬಾ ಪೂಜೆಗಾಗಿ ಸುಮಾರು 2.98 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಬಾಬಾ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ತಿಳಿಸಿದ್ದಾರೆ.

    ಈಗ ಡೋಂಗಿಬಾಬಾನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಪಿಸಿ ಸೆಕ್ಷನ್ 374 (ಅತ್ಯಾಚಾರ), 354 (ಎ) (ಲೈಂಗಿಕ ಕಿರುಕುಳ), 384 (ಸುಲಿಗೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ವಿಭಾಗಗಳಲ್ಲಿ ಮತ್ತು ಮೂಢ ನಂಬಿಕೆ ಕಾಯ್ದೆಯಡಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ಪಿ. ಸಾಲ್ವಿ ತಿಳಿಸಿದ್ದಾರೆ.

  • ಬಗೆದಷ್ಟೂ ಬಂಗಾರ, ಹಣ, ಒಬ್ಬೊಬ್ಬರ ಬಳಿಯೂ ಭವ್ಯ ಬಂಗಲೆ – ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲು.!

    ಬಗೆದಷ್ಟೂ ಬಂಗಾರ, ಹಣ, ಒಬ್ಬೊಬ್ಬರ ಬಳಿಯೂ ಭವ್ಯ ಬಂಗಲೆ – ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲು.!

    ಬೆಂಗಳೂರು: ಎಸಿಬಿ ದಾಳಿಯಿಂದ ನಾಲ್ವರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲಾಗಿದೆ.

    ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ ಸತೀಶ್, ಕಂದಾಯ ಅಧಿಕಾರಿ ಎಸ್.ಬಿ ಮಂಜುನಾಥ್, ರೈತ ಸಂಪರ್ಕ ಕೇಂದ್ರದ ಭ್ರಷ್ಟ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ ಮತ್ತು ವಿಜಯಪುರದ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಭ್ರಷ್ಟ ಅಧಿಕಾರಿ ಶರದ್ ಗಂಗಪ್ಪ ಈ ನಾಲ್ವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಮಂಗಳವಾರ ಬೆಳ್ಳಂಬೆಳಗ್ಗೆ ಕಣ್ಣುಜ್ಜಿಕೊಂಡು ಹಾಸಿಗೆಯಿಂದ ಏಳೋ ಮೊದಲೇ ಮನೆಗೆ ಎಸಿಬಿ ಅಧಿಕಾರಿಗಳು ಬಂದಿದ್ದು, ತಮ್ಮ ಸಿಬ್ಬಂದಿ ಜೊತೆ ಬಂದು ಇಡೀ ಮನೆ ಪರಿಶೀಲನೆ ನಡೆಸಿದ್ದಾರೆ. ದಾಳಿಯಲ್ಲಿ ಪತ್ತೆಯಾದ ಅಕ್ರಮ ಆಸ್ತಿ-ಪಾಸ್ತಿ ಹಾಗೂ ದಾಳಿಯ ಕುರಿತಾಗಿ ಖುದ್ದು ಎಸಿಬಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

    ಸತೀಶ್ ಬಿ.ಸಿ-ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ
    * ಭವ್ಯವಾದ ಬಂಗಲೆ, ಕೋಟಿ ಬೆಲೆಬಾಳುವ 2 ನಿವೇಶನ
    * 1.3 ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ ಆಭರಣ
    * 1 ಕಾರ್, 1 ಲಾಕರ್, ಮಡದಿ ಹೆಸರಿನಲ್ಲಿ 3.84 ಲಕ್ಷ
    * 34.16 ಲಕ್ಷದ ಗೃಹೋಪಯೋಗಿ ವಸ್ತು..

    ಎಸ್.ಬಿ ಮಂಜುನಾಥ್-ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ, ಜೆ.ಬಿ.ನಗರ
    * ಮಡದಿ ಹೆಸರಲ್ಲಿ 2 ಮನೆ, 4 ನಿವೇಶನ
    * 1 ವಾಣಿಜ್ಯ ಸಂಕೀರ್ಣ, 13 ಗುಂಟೆ ಜಮೀನು
    * 453 ಗ್ರಾಂ ಚಿನ್ನ, 1 ಕೆಜಿ 230 ಗ್ರಾಂ ಬೆಳ್ಳಿ
    * 1 ಕಾರ್,19 ಲಕ್ಷ ಗೃಹ ಉಪಯೋಗಿ ವಸ್ತು,
    * 2 ಲಾಕರ್ ಪತ್ತೆ

                 ಪ್ರಕಾಶ್ ಗೌಡ                    ಶರದ್ ಗಂಗಪ್ಪ                ಸತೀಶ್                         ಮಂಜುನಾಥ್ 

    ವಿಜಯಪುರದ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಭ್ರಷ್ಟ ಅಧಿಕಾರಿ ಶರದ್ ಗಂಗಪ್ಪ ಬಳಿ, 2 ಮನೆ, 1 ಫ್ಲಾಟ್, 32 ಎಕರೆ 24 ಗುಂಟೆ ಜಮೀನು ಪತ್ತೆಯಾಗಿದೆ. ಅಷ್ಟೇ ಅಲ್ಲ, 675 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ. 3 ಕಾರ್, 3 ದ್ವಿಚಕ್ರ ವಾಹನ, 42.66 ಲಕ್ಷ ನಗದು ಮತ್ತು ಹೆಂಡತಿ ಖಾತೆಯಲ್ಲಿ 2.6 ಲಕ್ಷ ಸಿಕ್ಕಿದೆ.

    ಇನ್ನು ಗದಗ ಜಿಲ್ಲೆ ಮುಂಡರಗಿಯ ರೈತ ಸಂಪರ್ಕ ಕೇಂದ್ರದ ಭ್ರಷ್ಟ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ ಸಹ ಮುಂಡರಗಿಯಲ್ಲಿ 2 ಮನೆ, 3 ನಿವೇಶನ, 16 ಎಕರೆ ಜಮೀನು, 570 ಗ್ರಾಂ ಚಿನ್ನ, 2 ಕೆಜಿ 290 ಗ್ರಾಂ ಬೆಳ್ಳಿ, 1 ಕಾರ್, 2 ದ್ವಿಚಕ್ರ ವಾಹನ ಪತ್ತೆಯಾಗಿದೆ.

    ಸದ್ಯಕ್ಕೆ ಈ ನಾಲ್ವರು ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ತನಿಖೆ ಇನ್ನೂ ಮುಂದುವರಿದಿದೆ.

  • ಉಡುಪಿಯಲ್ಲೊಂದು ದುಬಾರಿ ಚಿನ್ನದ ಮನೆ ನಿರ್ಮಾಣ

    ಉಡುಪಿಯಲ್ಲೊಂದು ದುಬಾರಿ ಚಿನ್ನದ ಮನೆ ನಿರ್ಮಾಣ

    -100 ಕೆಜಿ ಬಂಗಾರದಲ್ಲಿ, 40 ಕೋಟಿ ರೂ.ಯಲ್ಲಿ ಕೃಷ್ಣ ಗರ್ಭಗುಡಿ ನಿರ್ಮಾಣ

    ಉಡುಪಿ: ದೇವಾಲಯಗಳ ನಗರಿ ಉಡುಪಿಯಲ್ಲೊಂದು ದುಬಾರಿ ಮನೆ ಸಿದ್ಧಗೊಳ್ಳುತ್ತಿದೆ. ಈ ಮನೆಯ ಮಹಡಿ ಚಿನ್ನದಿಂದಲೇ ಎರಡು ಅಂತಸ್ತು ನಿರ್ಮಾಣ ಆಗುತ್ತಿದೆ. 100 ಕೆಜಿ ಬಂಗಾರವನ್ನು ಛಾವಣಿ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಮನೆ ಸಿದ್ಧಗೊಳ್ಳಲಿದೆ.

    ಉಡುಪಿ ಕೃಷ್ಣಮಠದ ಕಡೆಗೋಲು ಕೃಷ್ಣ ಇಷ್ಟು ವರ್ಷ ತಾಮ್ರದ ಗರ್ಭಗುಡಿಯೊಳಗೆ ನಿಂತು ಬರುವ ಭಕ್ತರಿಗೆ ದರ್ಶನ ಕೊಡುತ್ತಿದ್ದ. ಆದರೆ ಈಗ 40 ಕೋಟಿ ವೆಚ್ಚದಲ್ಲಿ ಕೃಷ್ಣಮಠದ ಗರ್ಭಗುಡಿಯ ಕೆಲಸವನ್ನು ಈಗಿನ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾಡಿಸುತ್ತಿದ್ದಾರೆ. 20 ಗ್ರಾಂ ಚಿನ್ನದ ತಗಡಿನ 5,000 ಹಲಗೆ, 100 ಕೆಜಿ ಬಂಗಾರ ಹಾಗೂ 40 ಕೋಟಿ ರುಪಾಯಿಯಲ್ಲಿ ಚಿನ್ನದ ಮನೆ ನಿರ್ಮಾಣವಾಗುತ್ತಿದೆ.

    ಈಗಾಗಲೇ ತಾಮ್ರ, ಬೆಳ್ಳಿ ಚಿನ್ನದ ಹಾಳೆಯನ್ನು ತಯಾರು ಮಾಡುವ ಕೆಲಸ ಶುರುವಾಗಿದೆ. ಗರ್ಭಗುಡಿಯ ಕಲಶ ಸಂಕೋಚ ವಿಧಿವಿಧಾನ ನೆರವೇರಿತು. ಹೋರಿಯ ಕತ್ತಿಗೆ ಹಗ್ಗ ಹಾಕಿ, ಮತ್ತೊಂದು ತುದಿಯನ್ನು ಕಲಶಕ್ಕೆ ಕಟ್ಟಿ ಎಳೆಯುವ ಪ್ರಕ್ರಿಯೆ ನಡೆಯಿತು. ಎರಡೂವರೆ ತಿಂಗಳಲ್ಲಿ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದ್ದು, ಮಠಕ್ಕೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಶ್ರೀ ವಿದ್ಯಾಧೀಶ ಸ್ವಾಮೀಜಿ ಪಲಿಮಾರು ಹೇಳಿದ್ದಾರೆ.

    ಗರ್ಭಗುಡಿಯ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಗಣಹೋಮ, ಪ್ರಾಯಶ್ಚಿತ್ತ ಹೋಮ, ವಾಸ್ತು ಪೂಜೆ, ಕೃಷ್ಣ ಗಾಯತ್ರಿ ಮಂತ್ರ ಪಠಣ, ಮೃತ್ಯುಂಜಯ ಹೋಮ ಊರಿನ ದೋಷ ಪರಿಹಾರಕ್ಕೆ ಮುಷ್ಟಿ ಕಾಣಿಕೆ ಸೇವೆ ನೆರವೇರಿದೆ. ಮರದ ಮೇಲೆ ತಾಮ್ರದ ಹಾಳೆಯಲ್ಲಿ ಮಂತ್ರಗಳನ್ನು ಬರೆಯಲಾಗುತ್ತದೆ. ಅದರ ಮೇಲೆ ಬೆಳ್ಳಿಯ ತಗಡು ಮುಚ್ಚಿ, ಮೇಲ್ಬಾಗಕ್ಕೆ ಚಿನ್ನದ ಹೊದಿಕೆ ಹಾಸಲಾಗುತ್ತದೆ. ಸಂಕೋಚ ವಿಧಿಯಲ್ಲಿ ಕೃಷ್ಣಾಪುರ, ಕಾಣಿಯೂರು, ಅದಮಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು. 800 ವರ್ಷದ ಹಳೆಯ ತಾಮ್ರದ ತಗಡನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ ಎಂದು ಕೃಷ್ಣಭಕ್ತ ವೆಂಕಟೇಶ್ ಆಚಾರ್ಯ ತಿಳಿಸಿದ್ದಾರೆ.

    ಗರ್ಭಗುಡಿಗೆ ಚಿನ್ನದ ಅಂತಸ್ತು ಹೊದಿಸಿದರೆ ಆ ಭಾಗದಲ್ಲಿ ಹೆಚ್ಚು ಶಕ್ತಿ ಕ್ರೋಡೀಕರಣವಾಗುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ 50 ಕೆಜಿಗೂ ಹೆಚ್ಚು ಚಿನ್ನದ ಸಂಗ್ರಹ ಭಕ್ತರಿಂದ ಆಗಿದೆ. ಪ್ರತಿನಿತ್ಯ ಮಠಕ್ಕೆ ಬರುವ ಭಕ್ತರಿಂದ ದೇಣಿಗೆ ರೂಪದಲ್ಲಿ ಚಿನ್ನ, ಹಣ ಸಂಗ್ರಹವಾಗುತ್ತಿದೆ. ಮೇ ಮೊದಲ ವಾರದಲ್ಲಿ ಬಂಗಾರದ ಮೇಲ್ಛಾವಣಿ ಕಾರ್ಯ ಪೂರ್ಣಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೊಲೀಸರ ಕಾರ್ಯಾಚರಣೆ – ಅಂತರಾಜ್ಯ ಸರ, ಬೈಕ್ ಕಳ್ಳರು ಅಂದರ್

    ಪೊಲೀಸರ ಕಾರ್ಯಾಚರಣೆ – ಅಂತರಾಜ್ಯ ಸರ, ಬೈಕ್ ಕಳ್ಳರು ಅಂದರ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಸರಗಳ್ಳರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಒಂಟಿ ಮಹಿಳೆಯರು ಹಾಗೂ ವೃದ್ಧೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಮೂವರು ಅಂತರಾಜ್ಯ ಸರಗಳ್ಳರನ್ನ ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕಾರ್ತಿಕ್ ಹಾಗೂ ಜಯಕುಮಾರ್ ಬಂಧಿತ ಆರೋಪಿಗಳು. ಇನ್ನೂ ಸರಿಯಾಗಿ ಮೀಸೆಯೂ ಮೂಡದ ಆರೋಪಿಗಳು ಸಲೀಸಾಗಿ ಹಣ ಮಾಡಬೇಕು ಎಂದು ಚೈನ್ ಸ್ನಾಚಿಂಗ್ ಮಾಡುತ್ತಿದ್ದರು ಎಂದು ಸರ ಕಳೆದುಕೊಂಡವರು ಹೇಳಿದ್ದಾರೆ.


    ಆರೋಪಿಗಳು ಸರಗಳವು ಮಾಡೋ ಮುನ್ನ ಕೃತ್ಯಕ್ಕೆ ಬಳಸಲು ಬೈಕ್‍ಗಳನ್ನ ಕದಿಯುತ್ತಿದ್ದರು. ನಂತರ ಕದ್ದ ಬೈಕಿನಲ್ಲಿ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದರು. ಸದ್ಯ ಬಂಧಿತ ಆರೋಪಿಗಳಿಂದ ಹನುಮಂತನಗರ, ಕೆ.ಎಸ್.ಲೇಔಟ್, ಪುಟ್ಟೆನಹಳ್ಳಿ ಸೇರಿದಂತೆ ನಗರದ 12 ಠಾಣೆಯಲ್ಲಿ ಕಳುವಾಗಿದ್ದ 1 ಕೆಜಿ 220 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದು, ಆರೋಪಿಗಳ ಬಂಧನದಿಂದಾಗಿ 35 ಸರಗಳವು ಪ್ರಕರಣಗಳು ಪತ್ತೆಯಾಗಿವೆ.

    ಬೈಕ್ ಎಗರಿಸ್ತಿದ್ದ ಅಂತರಾಜ್ಯ ಕಳ್ಳರ ಬಂಧನ:
    ತಡರಾತ್ರಿ ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ ಗಳನ್ನ ಎಗರಿಸಿ ಪರಾರಿಯಾಗುತ್ತಿದ್ದ ಮೂವರು ಅಂತರಾಜ್ಯ ಸರಗಳ್ಳರನ್ನ ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಮುನೀರ್ ಬಾಷ, ಮೊಹಮ್ಮದ್ ಮುಜಾಹಿದ್ ಹಾಗೂ ಮೋಗನ್ ಬಂಧಿತ ಆರೋಪಿಗಳು.

    ಪಲ್ಸರ್ ಹಾಗೂ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ನಂತರ ನಂಬರ್ ಪ್ಲೇಟ್ ಚೇಂಜ್ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನ ಅಶೋಕ್‍ನಗರ ಜಯನಗರ ವಿಲ್ಸನ್ ಗಾರ್ಡನ್ ಜಯನಗರ ಸೇರಿದಂತೆ ನಗರದಲ್ಲಿ ಸುಮಾರು 20 ಲಕ್ಷ ಬೆಲೆಬಾಳುವ ಸುಮಾರು 17 ಬೈಕ್ ಗಳನ್ನ ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಸೌದಿ ಯುವ ರಾಜನಿಗೆ ಚಿನ್ನ ಲೇಪಿತ ರೈಫಲ್ ಗಿಫ್ಟ್ ಕೊಟ್ಟ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನ ಭೇಟಿ ನೀಡಿದ್ದ ಸೌದಿ ಯುವರಾಜ್ ಮೊಹ್ಮದ್ ಬಿನ್ ಸುಲ್ತಾನ್ ಅವರಿಗೆ ಪಾಕಿಸ್ತಾನ ಚಿನ್ನ ಲೇಪಿತ ರೈಫಲನ್ನು ಉಡುಗೊರೆಯಾಗಿ ನೀಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಮೇಲೆ ಮೊದಲ ಬಾರಿಗೆ ವಿಶ್ವದ ಬಹುತೇಕ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸುತ್ತಿದ್ದು, ಇದೇ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಸೌದಿ ಯುವರಾಜ್ 20 ಶತಕೋಟಿ ಡಾಲರ್ ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಿದ್ದರು.

    ಇದೇ ವೇಳೆ ಪಾಕಿಸ್ತಾನ ಸೆನೆಟ್ ಮೊಹ್ಮದ್ ಬಿನ್ ಸುಲ್ತಾನ್ ರನ್ನು ಭೇಟಿ ಮಾಡಿದ ವೇಳೆ ಈ ಕೊಡುಗೆಯನ್ನು ನೀಡಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ ಭಾರತ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ವಸ್ತುಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಹೆಚ್ಚಳ ಮಾಡಿತ್ತು. ಆ ಬಳಿಕ ವಿಶ್ವದ 40 ರಾಷ್ಟ್ರಗಳು ಭಾರತ ಪರ ಹೇಳಿಕೆ ನೀಡಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಡ ಹಾಕಿದೆ.

    ಪಾಕಿಸ್ತಾನದ ಬಳಿಕ ಭಾರತಕ್ಕೆ ಭೇಟಿ ನೀಡಿದ್ದ ಸೌದಿ ಯುವರಾಜ ಭಾರತದೊಂದಿಗೆ 100 ಶತಕೋಟಿ ಡಾಲರ್ ಹೂಡಿಕೆ ಹಾಗೂ ಸೌದಿ ರಾಷ್ಟ್ರದಲ್ಲಿ ವಿವಿಧ ಕಾರಣಗಳಿಂದ ಶಿಕ್ಷೆ ಅನುಭವಿಸುತ್ತಿರುವ 2 ಸಾವಿರ ಮಂದಿಯನ್ನು ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಇತ್ತ ಸೌದಿ ರಾಜಕುಮಾರನನ್ನು ಪ್ರಧಾನಿ ಮೋದಿ ಅವರು ಸ್ವಾಗತ ಕೋರಿರುವ ಕುರಿತು ದೇಶದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಕ್ಷವೂ ಕೂಡ ಮೋದಿ ಅವರು ಸೌದಿ ರಾಜಕುಮಾರರನ್ನು ಅಪ್ಪಿ ಸ್ವಾಗತಿಸಿರುವುದನ್ನು ಟೀಕಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv