Tag: gold

  • ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಕರಾವಳಿಯ 3ನೇ ಚಿನ್ನದ ದೇಗುಲ ಶ್ರೀಕೃಷ್ಣಮಠ

    ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಗರ್ಭಗುಡಿಯನ್ನು ಚಿನ್ನದ ಗೋಪುರ ಮಾಡುವ ಮೂಲಕ ಕರಾವಳಿಯ ಮೂರನೇ ಚಿನ್ನದ ದೇಗುಲ ಎಂಬ ಕೀರ್ತಿಗೆ ಪಾತ್ರವಾಗಿದೆ.

    40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿನ್ನದ ಗೋಪುರದಲ್ಲಿ ಅಷ್ಟಮಠಾಧೀಶರ ಸಮ್ಮುಖದಲ್ಲಿ ಶಿಖರ ಪ್ರತಿಷ್ಠೆ ಮಾಡಿ ಅಭಿಷೇಕ ಮಾಡಲಾಯಿತು. ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಪರ್ಯಾಯ ಮಹೋತ್ಸವದ ಕೀರ್ತಿ ಶಾಶ್ವತಗೊಳಿಸಲು ಈ ಮಹತ್ವದ ಯೋಜನೆ ಪೂರೈಸಿದ್ದಾರೆ. ಈ ಮೂಲಕ ಪಲಿಮಾರು ಶ್ರೀಗಳ ಆ ಮಹತ್ವಾಕಾಂಕ್ಷಿ ಯೋಜನೆ ಈಡೇರಿದೆ. ಶ್ರೀ ಕೃಷ್ಣನಿಗೆ ಚಿನ್ನದ ಗೋಪುರ ಸಮರ್ಪಣೆಯಾಗಿದೆ.

    ಕಳೆದ 10 ದಿನಗಳಿಂದ ಸುವರ್ಣ ಗೋಪುರ ಸಮರ್ಪಣೆ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಬಂದಿದ್ದವು. ಚಿನ್ನದ ಶಿಖರ ಪ್ರತಿಷ್ಠೆ ಮಾಡಲಾಯಿತು. ಒಂದು ಸಾವಿರ ಬೆಳ್ಳಿ ಕಲಶಗಳಿಂದ ಗಂಗಾಧಿತೀರ್ಥದ ಅಭಿಷೇಕ ಸಲ್ಲಿಸಲಾಯಿತು. ಪುತ್ತಿಗೆ ಶ್ರೀಗಳು ಹೊರತು ಪಡಿಸಿದಂತೆ ಪೇಜಾವರ ಶ್ರೀಗಳ ಸಹಿತ ಅಷ್ಠಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಚಿನ್ನದ ಕಲಶದಿಂದ ಶಿಖರಕ್ಕೆ ಅಭಿಷೇಕ ಮಾಡಿದರು. ಪಲಿಮಾರು ಶ್ರೀಗಳು ಕೃಷ್ಣನ ಗೋಪುರ ಸುವರ್ಣಮಯವಾಗಿ ಇರಬೇಕೆಂದು ಈ ಯೋಜನೆ ಮಾಡಿದರು. 2500 ಚದರಡಿ ಸುವರ್ಣ ಗೋಪುರಕ್ಕೆ 200 ಕೆ.ಜಿ ತಾಮ್ರ, 800 ಕೆ.ಜಿ ಬೆಳ್ಳಿ, 100 ಕೆ.ಜಿ ಚಿನ್ನವನ್ನು ಬಳಕೆ ಮಾಡಲಾಗಿದೆ. ಸುಮಾರು 40 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಶ್ರೀ ಕೃಷ್ಣನಿಗೆ ಸುವರ್ಣ ತೊಟ್ಟಿಲು, ವಜ್ರ ಕಿರೀಟ, ಸುವರ್ಣ ರಥ ಸಮರ್ಪಿಸಿದರು. ಈಗಿನ ಪರ್ಯಾಯ ಪಲಿಮಾರು ಶ್ರೀಗಳು ತಮ್ಮ ಮೊದಲ ಪರ್ಯಾಯದಲ್ಲಿ ವಜ್ರ ಕವಚ ಅರ್ಪಿಸಿದ್ದರು.

  • ಮೂವರು ಖತರ್ನಾಕ್ ಕಳ್ಳರು ಅಂದರ್ – 30 ಗ್ರಾಂ ಚಿನ್ನ, 12 ಮೊಬೈಲ್, ಬೈಕ್ ವಶ

    ಮೂವರು ಖತರ್ನಾಕ್ ಕಳ್ಳರು ಅಂದರ್ – 30 ಗ್ರಾಂ ಚಿನ್ನ, 12 ಮೊಬೈಲ್, ಬೈಕ್ ವಶ

    ಬಾಗಲಕೋಟೆ: ಮೂವರು ಖತರ್ನಾಕ್ ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದು, 30 ಗ್ರಾಂ ಚಿನ್ನ, 67,700 ರೂ. ನಗದು, 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

    ಮುಧೋಳ, ಬೆಳಗಾವಿ ಭಾಗದ ಸುನೀಲ್ ರಜಪೂತ್, ತುಕಾರಾಮ್ ರಜಪೂತ್ ಹಾಗೂ ಮಂಜುನಾಥ್ ಲಮಾಣಿ ಬಂಧಿತ ಆರೋಪಿಗಳು. ಎಸ್‍ಪಿ ಅಭಿನವ್ ಖರೇ ಅವರ ಮಾರ್ಗದರ್ಶ ಹಾಗೂ ಮುಧೋಳ ಸಿಪಿಐ ಕೆ.ಬಿ ಲಿಬನ್ನೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಆರೋಪಿಗಳನ್ನು ಬಂಧಿಸಿದೆ.

    ಆರೋಪಿಗಳು ಬೈಕ್‍ನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದೇವು. ಆದರೆ ಆರೋಪಿಗಳು ಮೊದಲಿಗೆ ಯಾವುದೇ ಮಾಹಿತಿ ನೀಡಲಿಲ್ಲ. ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾರೆ. ಅವರ ಬಳಿಯಿದ್ದ 30 ಗ್ರಾಂ ಚಿನ್ನ, 67,700 ರೂ. ನಗದು, ಕೃತ್ಯಕ್ಕೆ ಬಳಸುತ್ತಿದ್ದ 12 ಮೊಬೈಲ್ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಆರೋಪಿಗಳು ಇತ್ತೀಚೆಗೆ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಬಂಧಿತರ ವಿರುದ್ಧ ಕಳ್ಳತನ ಹಾಗೂ ಸುಲಿಗೆ ಆರೋಪದ ಅಡಿ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಕ್ರಮವಾಗಿ 11.1 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಅಂದರ್

    ಅಕ್ರಮವಾಗಿ 11.1 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಅಂದರ್

    – 4.25 ರೂ ಮೌಲ್ಯದ ವಿದೇಶ ಕರೆನ್ಸಿ ವಶ

    ಹೈದರಾಬಾದ್: ಅಕ್ರಮವಾಗಿ 11.1 ಕೆಜಿ ಚಿನ್ನ, ಯುಎಇ ಮತ್ತು ಸಿಂಗಾಪುರ ದೇಶಗಳ ಕರೆನ್ಸಿ ಸಾಗಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ ಘಟನೆ ಹೈದರಾಬಾದ್‍ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಬಂಧಿತ ಮಹಿಳೆ ದುಬೈ ಮೂಲದವಳು ಎಂದು ತಿಳಿದುಬಂದಿದೆ. ಆರೋಪಿ ಮಹಿಳೆಯು ಕಳೆದ ಮೂರು ತಿಂಗಳಿನಿಂದ ಹೈದರಾಬಾದ್‍ನಲ್ಲಿ ನೆಲೆಸಿದ್ದಳು.

    ಹೈದರಾಬಾದ್‍ನ ವಿಮಾನ ನಿಲ್ದಾಣದ ಎಕ್ಸಿಟ್ ಗೇಟ್‍ನಲ್ಲಿ ಇಂದು ಬೆಳಗ್ಗೆ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಲಾಗುತಿತ್ತು. ಈ ವೇಳೆ ದುಬೈನಿಂದ ಆಗಮಿಸಿದ ಮಹಿಳೆಯ ಬ್ಯಾಗ್‍ನಲ್ಲಿ ಬಟ್ಟೆ, ಸಾಕ್ಸ್ ಒಳಗೆ ಇಟ್ಟಿದ್ದ 3,63,52,500 ಕೋಟಿ ರೂ. ಮೌಲ್ಯದ 11.1 ಕೆ.ಜಿ ಚಿನ್ನ ಪತ್ತೆಯಾಗಿದೆ. ಅಷ್ಟೇ ಅಲ್ಲದೆ 4,25,312 ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಈ ಸಂಬಂಧ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಹಿಳೆ ಫೈ ಸ್ಟಾರ್ ಹೋಟೆಲ್‍ನ ರೂಮ್ ಒಂದರಲ್ಲಿ ಕಳೆದ ಮೂರು ತಿಂಗಳಿಂದ ವಾಸವಾಗಿದ್ದ ಮಾಹಿತಿ ಸಿಕ್ಕಿತ್ತು. ತಕ್ಷಣವೇ ರೂಮ್ ಪರಿಶೀಲನೆ ಮಾಡಿದ ಅಧಿಕಾರಿಗಳಿಗೆ 1.5 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ.

  • ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಏರ್‌ಪೋರ್ಟ್‌ನಲ್ಲಿ ಬರೋಬ್ಬರಿ 39.57 ಲಕ್ಷ ಮೌಲ್ಯದ ಚಿನ್ನ ಸೀಜ್!

    ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 39.57 ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಶ್ರೀಲಂಕಾ ಮೂಲದ ಮೂವರು ಹಾಗೂ ಭಾರತದ ಓರ್ವ ಅಕ್ರಮವಾಗಿ ಚಿನ್ನವನ್ನು ವಿಮಾನದಲ್ಲಿ ಸಾಗಿಸಲು ಮುಂದಾಗಿದ್ದರು. ಆದರೆ ಆರೋಪಿಗಳು ಎಷ್ಟೇ ಚಾಣಾಕ್ಷ್ಯತನ ಮಾಡಿದರು ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಇಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ಕು ಮಂದಿ ಬೇರೆ ಬೇರೆಯಾಗಿ ಸುಮಾರು 1.2 ಕೆ.ಜಿ ಚಿನ್ನವನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ 39.57 ಲಕ್ಷ ಮೌಲ್ಯದ 1.2 ಕೆಜಿ ಚಿನ್ನವನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹಾಗೆಯೇ ಅಕ್ರಮವಾಗಿ ಚಿನ್ನ ಸಾಗಿಸ್ತಿದ್ದ ನಾಲ್ವರನ್ನೂ ಕೂಡ ಬಂಧಿಸಲಾಗಿದೆ.

  • ಐಶಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್ – ಲಕ್ಷಾಂತರ ಮೌಲ್ಯದ ಚಿನ್ನ ವಶ

    ಐಶಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಅಂದರ್ – ಲಕ್ಷಾಂತರ ಮೌಲ್ಯದ ಚಿನ್ನ ವಶ

    -ಮಾಲೀಕರಿಗೆ ಹಿಂದಿರುಗಿಸಿದ ಪೊಲೀಸರು

    ಬೆಂಗಳೂರು: ಐಶಾರಾಮಿ ಜೀವನಕ್ಕಾಗಿ ಮನೆ ಬೀಗ ಮುರಿಯುತ್ತಿದ್ದ ಖತರ್ನಾಕ್ ಗ್ಯಾಂಗ್‍ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಗೋಪಿ, ರಾಜ ಅಲಿಯಾಸ್ ಜಪಾನ್ ರಾಜ ಮತ್ತು ಡೇವಿಡ್ ಬಂಧಿತ ಆರೋಪಿಗಳು. ಕೆ.ಪಿ ಅಗ್ರಹಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾಡಹಗಲಲ್ಲೇ ಕಬ್ಬಿಣದ ರಾಡ್‍ನಿಂದ ಮನೆಯ ಬೀಗ ಮುರಿಯುತ್ತಿದ್ದರು. ಬಳಿಕ ಮನೆಗೆ ನುಗ್ಗಿ ಹಣ, ಚಿನ್ನ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.

    ಪೊಲೀಸರು ಬಂಧಿತರಿಂದ ಬರೋಬ್ಬರಿ 35 ಲಕ್ಷ ಬೆಲೆ ಬಾಳುವ 1.119 ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಜಪಾನ್ ರಾಜನನ್ನು ಅರೆಸ್ಟ್ ಮಾಡಿ 1 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫೆಬ್ರವರಿಯಲ್ಲಿ ಜೈಲಿನಿಂದ ರಿಲೀಸ್ ಆಗಿ ಮತ್ತೆ ಜಪಾನ್ ರಾಜ 18 ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದನು.

    ಜಪಾನ್ ರಾಜ ಕದ್ದ ಚಿನ್ನವನ್ನು ಹೆಂಡತಿಯರ ಮೂಲಕ ವಿಲೇವಾರಿ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಜಪಾನ್ ರಾಜನಿಗೆ ಇಬ್ಬರು ಹೆಂಡತಿಯರಿದ್ದು, ಇವರ ಮೂಲಕ ಚಿನ್ನ ವಿಲೇವಾರಿ ಮಾಡುತ್ತಿದ್ದನು. ಸದ್ಯಕ್ಕೆ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸಿದ್ದಾರೆ.

  • ಅಕ್ಷಯ ತೃತೀಯ ದಿನದಂದೇ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ವಂಚನೆ

    ಅಕ್ಷಯ ತೃತೀಯ ದಿನದಂದೇ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ವಂಚನೆ

    ಧಾರವಾಡ: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಚಿತ್ರದುರ್ಗ ಮೂಲದ ಇಬ್ಬರನ್ನು ವ್ಯಕ್ತಿಗಳನ್ನು ಧಾರವಾಡಕ್ಕೆ ಕರೆಸಿಕೊಂಡು, ಚಾಕು ತೋರಿಸಿ 15 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

    ಚಿತ್ರದುರ್ಗ ಮೂಲದ ಜಿ.ಆರ್. ರವಿಕುಮಾರ್ ಮತ್ತು ಜಾಕೀರ್ ಹುಸೇನ್ ಕಡಿಮೆ ಬೆಲೆಗೆ ಚಿನ್ನ ಪಡೆಯಲು ಬಂದು ಮೋಸ ಹೋಗಿದ್ದು, ಅಕ್ಷಯ ತೃತೀಯ ದಿನದಂದೇ ಘಟನೆ ನಡೆದಿದೆ.

    ಏನಿದು ಪ್ರಕರಣ: ದಾವಣಗೆರೆ ಮೂಲದ ವ್ಯಕ್ತಿಯೊಬ್ಬರಿಂದ ಆರೋಪಿಗಳು ರವಿಕುಮಾರ್ ಅವರಿಗೆ ಪರಿಚಯವಾಗಿದ್ದರು. ಈ ವೇಳೆ 200 ರಿಂದ 300 ರೂ. ಗಳಿಗೆ ಒಂದು ಗ್ರಾಂ ಚಿನ್ನ ಕೊಡಿಸುವುದಾಗಿ ಹೇಳಿ ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಅವರು ಜಾಕೀರ್ ಹುಸೇನ್ ಅವರೊಂದಿಗೆ ಚಿತ್ರದುರ್ಗದಿಂದ ಧಾರವಾಡಕ್ಕೆ ಹಣದೊಂದಿಗೆ ಆಗಮಿಸಿದ್ದರು. ಈ ವೇಳೆ ನಗರದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿದ್ದ ಅವರು ಮೊದಲು ಸ್ಯಾಂಪಲ್ ಎಂದು ಅಸಲಿ ಚಿನ್ನವನ್ನು ತೋರಿಸಿದ್ದು, ಬಳಿಕ ಹಣ ತಂದಿರುವ ಬಗ್ಗೆ ಖಚಿತ ಪಡಿಸಿಕೊಂಡಿದ್ದಾರೆ.

    ಹಣ ತಂದಿರುವುದು ಖಚಿತವಾಗುತ್ತಿದಂತೆ ತಮ್ಮ ಆಸಲಿ ಮುಖ ಪರಿಚಯ ಮಾಡಿಸಿದ ಖದೀಮರು ಚಾಕು ತೋರಿಸಿ ಅವರ ಬಳಿ ಇದ್ದ ಹಣ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಕಡಿಮೆ ಹಣಕ್ಕೆ ಚಿನ್ನ ಪಡೆಯುವ ಆಸೆಯಿಂದ ಬಂದ ರವಿಕುಮಾರ್ ಹಾಗೂ ಹುಸೇನ್ ಅವರು ಇತ್ತ ಚಿನ್ನ ಇಲ್ಲದೇ, ತಂದಿದ್ದ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳು ನಕಲಿ ಹೆಸರುಗಳಿಂದ ತಮ್ಮನ್ನು ಪರಿಚಯಿಸಿಕೊಂಡು ಧಾರವಾಡದ ರಜತಗಿರಿಯಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ.

  • ಇಂದು ಅಕ್ಷಯ ತೃತೀಯ – ಝಗಮಗಿಸುತ್ತಿದೆ ಹೊಸ ಜ್ಯುವೆಲ್ಸ್ ಕಲೆಕ್ಷನ್ಸ್

    ಇಂದು ಅಕ್ಷಯ ತೃತೀಯ – ಝಗಮಗಿಸುತ್ತಿದೆ ಹೊಸ ಜ್ಯುವೆಲ್ಸ್ ಕಲೆಕ್ಷನ್ಸ್

    ಬೆಂಗಳೂರು: ಇಂದು ಅಕ್ಷಯ ತೃತೀಯದ ಶುಭದಿನ. ಬಂಗಾರ ಕೊಳ್ಳೋ ಶುಭ ಘಳಿಗೆ. ಕೆಲ ದಿನಗಳೀಂದ ಚಿನ್ನದ ಬೆಲೆ ಇಳಿಕೆಯಾದ್ದರಿಂದ ಇದೀಗ ಸಿಲಿಕಾನ್ ಸಿಟಿಯಲ್ಲಿ ಈ ಚಿನ್ನದ ಹಬ್ಬದ ಸಂಭ್ರಮ ಜೋರಾಗಿದೆ.

    ಹೌದು. ಕಣ್ಣು ಕುಕ್ಕುವಂತೆ ಮಿನುಗೋ ನೆಕ್ಲೆಸ್, ನೋಡುತ್ತಿದ್ದಂತೆ ಅಟ್ರಾಕ್ಟ್ ಮಾಡೋ ಪುಟ್ಟ ಪುಟ್ಟ ಇಯರಿಂಗ್ಸ್, ಬ್ಯಾಂಗಲ್ಸ್ ಹೀಗೆ ಒಂದಕ್ಕಿಂತ ಒಂದು ಸೂಪರ್ ಡಿಸೈನ್ಸ್ ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

    ಇಂದು ಬಂಗಾರ ಖರೀದಿಸಿದ್ರೆ ವೃದ್ಧಿಯಾಗುತ್ತೆ ಎನ್ನುವ ನಂಬಿಕೆ ಇರೋದರಿಂದ, ಆಭರಣ ಪ್ರಿಯರ ಚಿತ್ತ ಗೋಲ್ಡ್ ಶಾಪ್ ನತ್ತ ನೆಟ್ಟಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ, ಚಿನ್ನದ ದರ 150 ರೂ ಕಡಿಮೆಯೇ ಇದೆ. ಜೊತೆಗೆ ಬೆಳ್ಳಿ ದರವೂ 2500 ಕಡಿಮೆಯಾಗಿದೆ. ಇದು ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಆಭರಣಗಳ ಬೆಲೆ ಇಳಿಕೆಯ ಜೊತೆಗೆ ಮಾಲೀಕರು ಕೆಲವೊಂದು ಆಫರ್ ಗನ್ನು ಕೂಡ ನೀಡಿದ್ದಾರೆ. ಇದನ್ನೂ ಓದಿ: ಬಂಗಾರ ಈಗ ಬಲು ಹಗುರ- ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ!

    ಕಾಲ ಬದಲಾದಂತೆ ಜನರ ಅಭಿರುಚಿ ಸಹ ಬದಲಾಗುತ್ತಿದ್ದು, ಎಲ್ಲಾ ಪಕ್ಷದ ರಾಜಕೀಯ ನಾಯಕರುಗಳ ಭಾವಚಿತ್ರಗಳ ಆಭರಣಗಳನ್ನು ತಯಾರಿಸುತ್ತಿದ್ದಾರೆ. ವೆರೈಟಿ- ವೆರೈಟಿ, ಟ್ರೆಂಡಿ ಜ್ಯುವೆಲ್ಸ್ ಮಾರ್ಕೆಟ್ ಗೆ ಲಗ್ಗೆಯಿಟ್ಟಿವೆ. ಇವತ್ತು ಆಭರಣ ಖರೀದಿಸಿದ್ರೆ, ಏನಾಗಬಹುದು ಎಂದು ಕೆಲವರು ಜ್ಯೋತಿಷಿಗಳ ಮೊರೆ ಕೂಡ ಹೋಗಿದ್ದಾರೆ.

    ಒಟ್ಟಿನಲ್ಲಿ ಚಿನ್ನ ಕೊಂಡರೆ ಅಕ್ಷಯ ವೃದ್ಧಿಯಾಗುತ್ತೆ ಅನ್ನೋ ನಂಬಿಕೆಯಲ್ಲಿ ಗ್ರಾಹಕರಿದ್ದರೆ ಒಳ್ಳೆ ವಹಿವಾಟಿನ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಇದನ್ನೂ ಓದಿ: ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

  • 7.6 ಕೆಜಿ ಕಬ್ಬಿಣ ಬಳಸಿ ಚಿನ್ನ ಪ್ಯಾಕ್ ಮಾಡಿದ್ದ ಕಳ್ಳ ಅಂದರ್!

    7.6 ಕೆಜಿ ಕಬ್ಬಿಣ ಬಳಸಿ ಚಿನ್ನ ಪ್ಯಾಕ್ ಮಾಡಿದ್ದ ಕಳ್ಳ ಅಂದರ್!

    ಬೆಂಗಳೂರು: ಏರ್ ಇಂಟಲಿಜೆನ್ಸಿ ಯುನಿಟ್ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಬೃಹತ್ ಕಾರ್ಯಾಚರಣೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3 ಕೆಜಿ 679 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಚಾಮರಾಜನಗರ ಮೂಲದ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಾಟ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ.

    ಖತರ್ನಾಕ್ ವ್ಯಕ್ತಿ ‘ಬೆಂಚ್ ವೈಸ್’ ಎಂಬ ಕಬ್ಬಿಣದ ಸಾಧನದಲ್ಲಿ ಚಿನ್ನ ಅಡಗಿಸಿಟ್ಟಿದ್ದನು. ಚಿನ್ನದ ಸುತ್ತಲೂ 7.6 ಕೆ.ಜಿ ಕಬ್ಬಿಣ ಹಾಕಿ ಪ್ಯಾಕ್ ಮಾಡಿದ್ದನು. ವಿಮಾನ ನಿಲ್ದಾಣದಲ್ಲಿ ಅನುಮಾನದ ಮೇರೆಗೆ ಏರ್ ಇಂಟಲಿಜೆನ್ಸಿ ಯುನಿಟ್ ಅಧಿಕಾರಿಗಳು ಪ್ರಶ್ನಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.

    ಸದ್ಯಕ್ಕೆ ಅಧಿಕಾರಿಗಳು ವ್ಯಕ್ತಿಯನ್ನು ಮತ್ತು 1 ಕೋಟಿ 19 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ.

  • 1 ಮತ ಹಾಕಿದ್ರೆ ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಓಲೆ!

    1 ಮತ ಹಾಕಿದ್ರೆ ಪುರುಷರಿಗೆ ಚಿನ್ನದ ಉಂಗುರ, ಮಹಿಳೆಯರಿಗೆ ಓಲೆ!

    – ಶಿಮೂಲ್ ಚುನಾವಣೆಯಲ್ಲಿ ಮತದಾರರಿಗೆ ಆಮಿಷ
    – ಇಂದು ನಡೆಯುತ್ತಿರುವ ಚುನಾವಣೆ

    ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಣವನ್ನು ಹಂಚಿಕೆ ಮಾಡಿದರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ ಮಂಡಳಿ (ಶಿಮುಲ್) ಚುನಾವಣೆಯಲ್ಲಿ ಒಂದು ಮತಕ್ಕೆ ಚಿನ್ನ, ಬೆಳ್ಳಿಯ ಆಮಿಷವನ್ನು ಅಭ್ಯರ್ಥಿಗಳು ಒಡ್ಡಿದ್ದಾರೆ.

    ಶಿವಮೊಗ್ಗದ ಮಾಚೇನಹಳ್ಳಿ ಯಲ್ಲಿರುವ ಶಿಮುಲ್ ಕಚೇರಿಯಲ್ಲಿ ಇಂದು ಮತದಾನ ನಡೆಯುತ್ತಿದ್ದು, ಬಿಜೆಪಿ ಬೆಂಬಲಿತ ಮತ್ತು ಜೆಡಿಎಸ್ ಬೆಂಬಲಿತ ಬಣಗಳ ಮಧ್ಯೆ ಭಾರೀ ಸ್ಪರ್ಧೆಯಿದೆ.

    14 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ 31 ಅಭ್ಯರ್ಥಿಗಳಿದ್ದಾರೆ. ಒಟ್ಟು 835 ಸದಸ್ಯರ ಮತಗಳಿರುವ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ಆಮಿಷವನ್ನು ಅಭ್ಯರ್ಥಿಗಳು ಮತದಾರರಿಗೆ ಒಡ್ಡಿದ್ದಾರೆ.

    ಪುರುಷರ ಒಂದು ಮತಕ್ಕೆ 25 ಸಾವಿರ, ಚಿನ್ನದ ಉಂಗುರ ಮಹಿಳೆಯರಿಗೆ ಚಿನ್ನದ ಓಲೆ, ಒಂದು ಬೆಳ್ಳಿ ನಾಣ್ಯವನ್ನು ನೀಡಲಾಗುವುದು ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಮತದಾನಕ್ಕೆ ಆಮಿಷವಾಗಿ ನೀಡಿದ ವಸ್ತುಗಳು ವಾಟ್ಸಪ್ ನಲ್ಲಿ ವೈರಲ್ ಆಗಿವೆ.

    ನಿರಂತರ ನಷ್ಟದ ಹಾದಿಯಲ್ಲಿದ್ದ ಹಾಲು ಒಕ್ಕೂಟ ಇತ್ತೀಚಿನ ವರ್ಷಗಳಲ್ಲಿ ಲಾಭದತ್ತ ಮುಖ ಮಾಡಿದೆ. ಕಳೆದ ವರ್ಷ 6.4 ಕೋಟಿ ರೂಪಾಯಿ ಲಾಭ ಗಳಿಸಿದೆ. ಸಹಜವಾಗಿಯೇ ಇಂಥ ಲಾಭಗಳಿಸುತ್ತಿರುವ ಸಂಸ್ಥೆಯ ಅಧಿಕಾರ ಹಿಡಿಯಲು ಅಭ್ಯರ್ಥಿಗಳು ಶತಗತಾಯ ಪ್ರಯತ್ನ ನಡೆಸಿದ್ದಾರೆ. ಹೇಗಾದರೂ ಸರಿ, ಎಷ್ಟು ಖರ್ಚಾದರೂ ಸರಿ ಶಿಮೂಲ್ ಆಡಳಿತ ವಶಕ್ಕೆ ಪಡೆಯಲೇಬೇಕು ಎಂಬ ಹಠಕ್ಕೆ ಎರಡೂ ಬಣಗಳು ಬಿದ್ದಿವೆ. ಸಂಜೆ 4ಗಂಟೆಗೆ ಮತದಾನ ಮುಗಿಯಲಿದ್ದು, ರಾತ್ರಿ 8ಗಂಟೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

  • ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

    ಅಕ್ಷಯ ತೃತೀಯಗೆ ಚಿನ್ನದ ಬದಲಾಗಿ ನೀರನ್ನು ಪೂಜಿಸಿ: ಶಾಲಿನಿ ರಜನೀಶ್

    ಬೆಂಗಳೂರು: ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ಬೆಲೆ ಇಳಿಕೆ ಕಂಡಿದ್ದು, ಮೇ 7ರ ಅಕ್ಷಯ ತೃತೀಯದಂದು ಚಿನ್ನಾಭರಣ ಖರೀದಿಸೋಣ ಎಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಆದರೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಅವರು ಚಿನ್ನದ ಬದಲು ಮನೆಯ ಪೂಜಾ ಕೋಣೆಯಲ್ಲಿ ನೀರು ಇಟ್ಟು ಪೂಜೆ ಸಲ್ಲಿಸಿ ಎಂದು ಸಲಹೆ ನೀಡಿದ್ದಾರೆ.

    ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ, ವಜ್ರ ಖರೀದಿ ಮಾಡೋದು ಅಲ್ಲ. ಚಿನ್ನ-ಬೆಳ್ಳಿಗಿಂತ ನೀರು ಜೀವನಕ್ಕೆ ಮುಖ್ಯ. ಅಕ್ಷಯ ತೃತೀಯ ದಿನ ಪೂಜಾ ಮನೆಯಲ್ಲಿ ನೀರು ಇಟ್ಟು ಸಂವೃದ್ಧಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಮಾರ್ಚ್ 1ರಂದು 22 ಕ್ಯಾರೆಟ್ ಚಿನ್ನದ ಬೆಲೆ 31 ಸಾವಿರ ರೂ. ಇದ್ರೆ. ಇವತ್ತು ಬೆಂಗಳೂರಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 32,350 ರೂಪಾಯಿ, 22 ಕ್ಯಾರೆಟ್‍ನ ಚಿನ್ನದ ಬೆಲೆ 29,950 ರೂಪಾಯಿ. 1 ಕೆಜಿ ಬೆಳ್ಳಿ 40,500 ರೂಪಾಯಿ ಆಗಿದೆ. ಅಂತರಾಷ್ಟೀಯ ಮಟ್ಟದಲ್ಲಿ ಚಿನ್ನದ ದರ ಕಡಿಮೆ ಆಗಿರೋದೇ ಚಿನ್ನದ ಬೆಲೆ ಇಳಿಕೆಗೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರು ಈಗಲೇ ಬುಕ್ ಮಾಡೋದು ಬೆಸ್ಟ್ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಿದ್ದಾರೆ.