Tag: gold

  • ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ವಿಚಿತ್ರ ವಿಗ್ ಮೂಲಕವೇ ಸಿಕ್ಕಿಬಿದ್ದ ಕಳ್ಳ

    ತಿರುವನಂತಪುರಂ: ಕಳ್ಳಸಾಗಾಣಿಕೆದಾರರು ವಿವಿಧ ರೀತಿಯಲ್ಲಿ ಚಿನ್ನ, ವಜ್ರ, ಡ್ರಗ್ ಸೇರಿದಂತೆ ಮುಂತಾದವುಗಳನ್ನು ಕಳವು ಮಾಡುತ್ತಾರೆ. ಆದರೆ ಕೇರಳದ ಮೂಲದ ವ್ಯಕ್ತಿಯೊಬ್ಬ ವಿಚಿತ್ರವಾಗಿ ತಲೆ ಕೂದನ್ನು ಕತ್ತರಿಸಿದಾಗೆ ಕಾಣುವಂತೆ ನೆತ್ತಿಯ ಮೇಲೆ ವಿಗ್ ಧರಿಸಿಕೊಂಡು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

    ಆರೋಪಿಯನ್ನು ಮಲಪ್ಪುರಂನ ನೌಶಾದ್ ಎಂದು ಗುರುತಿಸಲಾಗಿದೆ. ಆರೋಪಿ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಈತ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡ ರೀತಿ, ತಲೆಯ ಮಧ್ಯ ಭಾಗದಲ್ಲಿ ವಿಗ್ ಅಡಿಯಲ್ಲಿ 1.13 ಕೆಜಿ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿದ್ದನು.

    ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಸಿಐಎಎಲ್)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನ ವಿಗ್ ನೋಡಿ ಅನುಮಾನಗೊಂಡು ಪರಿಶೀಲಿಸಿದ್ದಾರೆ. ನಂತರ ಆತನನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ. ಆಗ ಆತನ ತಲೆ ಮೇಲಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನ ಪತ್ತೆಯಾಗಿದೆ. ಚಿನ್ನವು ಪೇಸ್ಟ್ ರೀತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

    ಈ ಹಿಂದೆ ಕಳ್ಳಸಾಗಾಣಿಕೆದಾರರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಕಳ್ಳಸಾಗಾಣೆ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ರೀತಿ ವಿಗ್‍ನಲ್ಲಿ ಚಿನ್ನವನ್ನು ಇಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಪೊಲೀಸರಿಂದಲೇ 2 ಕೆ.ಜಿ.ಚಿನ್ನ ಸೇರಿ ಹಲವು ವಸ್ತುಗಳ ದರೋಡೆ

    ಪೊಲೀಸರಿಂದಲೇ 2 ಕೆ.ಜಿ.ಚಿನ್ನ ಸೇರಿ ಹಲವು ವಸ್ತುಗಳ ದರೋಡೆ

    ಚಂಡೀಗಢ: ಬಲವಂತವಾಗಿ ನಾಲ್ವರನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಪೊಲೀಸರೇ ಠಾಣೆಯಲ್ಲಿ ದರೋಡೆ ಮಾಡಿರುವ ಘಟನೆ ಪಂಜಾಬ್‍ನ ಅಮೃತಸರದಲ್ಲಿ ನಡೆದಿದೆ.

    ದುಬೈನಿಂದ ಹಿಂದಿರುಗಿದ ನಾಲ್ವರು ಸ್ನೇಹಿತರು ಅಮೃತಸರ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಎಸ್‍ಯುವಿ ಕಾರ್ ಅಡ್ಡಗಟ್ಟಿ, ನಾಲ್ವರನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರ ಬಳಿ ಇದ್ದ 2 ಕೆ.ಜಿ.ಚಿನ್ನ ಹಾಗೂ ಬೆಲೆಬಾಳುವ ವಸ್ತಗಳನ್ನು ಪೊಲೀಸರೇ ದರೋಡೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ನಾಲ್ವರು ಸ್ನೇಹಿತರು ರಾಜಸ್ಥಾನದ ನಾಗೌರ್ ನಿವಾಸಿಗಳಾಗಿದ್ದು, ಗುರುವಾರ ರಾತ್ರಿ ಅಮೃತಸರ ವಿಮಾನನಿಲ್ದಾಣದಲ್ಲಿ ಇಳಿದು ಮನೆಗೆ ಮರಳುತ್ತಿದ್ದರು. ಆಗ ಪಂಜಾಬ್‍ನ ಬಟಿಂಡಾ ಬಳಿ ಕಪ್ಪು ಎಸ್‍ಯುವಿ ಕಾರ್ ಇವರ ಕಾರನ್ನು ನಿಲ್ಲಿಸಿದೆ. ನಿಲ್ಲಿಸಿದ ಎಸ್‍ಯುವಿ ಕಾರಿನಿಂದ ಮೌರ್ ಮಂಡಿಯ ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್ ಕೆಳಗಿಳಿದಿದ್ದಾನೆ. ಆಗ ನಾಲ್ವರು ಪ್ರಯಾಣಿಸುತ್ತಿದ್ದ ಕಾರ್ ಒಳಗಡೆ ಏನಿದೆ ಹುಡುಕಿ ಎಂದು ತನ್ನ ಸಹಚರರಿಗೆ ಹೇಳಿದ್ದಾನೆ. ಈ ವೇಳೆ ಕಾರಿನಲ್ಲಿ ಚಿನ್ನ ಹಾಗೂ ಬೆಲೆ ಬಾಳುವ ವಸ್ತುಗಳಿರುವುದು ಬೆಳಕಿಗೆ ಬಂದಿದೆ.

    ಕಾರಿನಲ್ಲಿದ್ದ ಮೊಹಮ್ಮದ್ ರಫೀಕ್, ಲಿಯಾಕತ್ ಶೆರಾನಿ, ಮೊಹಮ್ಮದ್ ಇಮ್ರಾನ್ ಹಾಗೂ ಮೊಹಮ್ಮದ್ ಯುನಸ್ ನಾಲ್ವರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಂತರ ಅವರನ್ನು ಸೆಲ್‍ನಲ್ಲಿ ಬಂಧಿಸಿ, ನಾಲ್ಕು ಗಂಟೆಗಳ ನಂತರ ಅವರನ್ನು ಹೊರಗೆ ಬಿಟ್ಟಿದ್ದಾರೆ. ಆದರೆ ದುಬೈನಿಂದ ತಂದಿದ್ದ ಹಲವು ವಸ್ತುಗಳನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದಾರೆ, ಇದರಲ್ಲಿ 2 ಕೆ.ಜಿ.ಚಿನ್ನವೂ ಸೇರಿದೆ ಎಂದು ಆರೋಪಿಸಲಾಗಿದೆ.

    ಆರೋಪಿಗಳ ವಿರುದ್ಧ ಅಪಹರಣ ಹಾಗೂ ಸುಲಿಗೆ ಪ್ರಕರಣ ದಾಖಲಿಸಲಾಗಿತ್ತು. ಸ್ಟೇಷನ್ ಹೌಸ್ ಆಫೀಸರ್ ಕೆ.ಸಿ.ಪರಶರ್, ಇವನ ಗನ್ ಮ್ಯಾನ್ ಹವಾಲ್ದಾರ್ ಅವತಾರ್ ಸಿಂಗ್ ಹಾಗೂ ಅನುಪ್ ಗ್ರೋವರ್‍ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಚಿನ್ನ ಇನ್ನೂ ಸಿಕ್ಕಿಲ್ಲ, ವಶಪಡಿಸಿಕೊಳ್ಳಬೇಕಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ತಿಳಿಸಿದ್ದಾರೆ.

  • ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಹೆಚ್‍ಡಿಕೆ, ಹೆಚ್‍ಡಿಡಿ ದೇಹ ಬಂಗಾರ, ಕಿವಿ ಮಾತ್ರ ಹಿತ್ತಾಳೆ: ಶಿವರಾಮೇಗೌಡ

    ಮಂಡ್ಯ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರ ದೇಹವೆಲ್ಲಾ ಬಂಗಾರ. ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.

    ಇಂದು ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, 20 ವರ್ಷ ಅಧಿಕಾರ ಸಿಗದ ನನಗೆ ಜೆಡಿಎಸ್ ಪಕ್ಷ ಎಂ.ಪಿ ಮಾಡಿದೆ. ಕುಮಾರಸ್ವಾಮಿ ಮತ್ತು ದೇವೇಗೌಡ್ರು ಹಾಗೂ ನನ್ನ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಸಣ್ಣ ಪುಟ್ಟ ಅಸಮಾಧಾನ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.

    ದೊಡ್ಡವರಿಗೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಅಧಿಕಾರ ಇದೆ. ಕೆಲ ಭಟ್ಟಂಗಿಗಳು ಕುಮಾರಸ್ವಾಮಿ ಬಳಿ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಯಾರು ಏನ್ ಹೇಳಿದರು ಅವರುಗಳು ಕೇಳಿ ಬಿಡುತ್ತಾರೆ. ಆ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡುವುದಕ್ಕೆ ನನಗೆ ಸಮಯ ಸಿಕ್ಕಿಲ್ಲ. ಡಿಕೆಶಿ ವಿಚಾರವಾಗಿ ಡೆಲ್ಲಿ ಹೋಗಿದ್ದರಿಂದ ಸಮಯ ಸಿಗಲಿಲ್ಲ ಎಂದು ತಿಳಿಸಿದ್ದಾರೆ.

    ಕುಮಾರಸ್ವಾಮಿ, ದೇವೇಗೌಡರ ದೇಹ ಬಂಗಾರ ಆದರೆ ಕಿವಿ ಹಿತ್ತಾಳೆಯಾದ್ದರಿಂದ ಭಟ್ಟಂಗಿಗಳ ಮಾತು ಕೇಳುತ್ತಾರೆ. ಜೆಡಿಎಸ್ ಪಕ್ಷ ನನ್ನ ಎಂ.ಪಿ ಮಾಡಿದ್ದಕ್ಕೆ ನನಗೆ ಕೃತಜ್ಞತೆ ಇದೆ. ಜೆಡಿಎಸ್ ವರಿಷ್ಠರ ಮೇಲೆ ಗೌರವವಿದೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

  • ಪೂಜೆಗೆ ಪಕ್ಕದಮನೆಯರ ಚಿನ್ನವಿಟ್ಟು ಮೋಸಹೋದ ಗೃಹಿಣಿ: ಸಾಧು ವೇಷಧಾರಿಯಿಂದ ಪಂಗನಾಮ

    ಪೂಜೆಗೆ ಪಕ್ಕದಮನೆಯರ ಚಿನ್ನವಿಟ್ಟು ಮೋಸಹೋದ ಗೃಹಿಣಿ: ಸಾಧು ವೇಷಧಾರಿಯಿಂದ ಪಂಗನಾಮ

    ರಾಯಚೂರು: ಸಾಧು ವೇಷಧರಿಸಿ ಬಂದ ವ್ಯಕ್ತಿಯೋರ್ವನ ಮಾತಿಗೆ ಮರುಳಾಗಿ ಗೃಹಿಣಿಯೊಬ್ಬಳು 40 ಗ್ರಾಂ ಚಿನ್ನ ಕಳೆದುಕೊಂಡಿರುವ ಘಟನೆ ನಗರದ ಮಕ್ತಲ್ ಪೇಟೆಯಲ್ಲಿ ನಡೆದಿದೆ.

    ಪತಿಗೆ ಒಳ್ಳೆಯದಾಗಲಿ ಎಂದು ಸಾಧುವಿನ ಮಾತು ಕೇಳಿ ಮಹಿಳೆ ಪೂಜೆ ಮಾಡಿಸಿದ್ದಾಳೆ. ಆದರೆ ಪೂಜೆಯ ಬಳಿಕ ಚಿನ್ನದ ಸರ ಕದ್ದು ಸಾಧು ವೇಷಧಾರಿ ಪರಾರಿಯಾಗಿದ್ದಾನೆ. ಖದೀಮನ ಮಾತು ಕೇಳಿ ತನ್ನಲ್ಲಿ ಚಿನ್ನಾಭರಣ ಇಲ್ಲದಿದ್ದರೂ ಪಕ್ಕದಮನೆಯವರ ಚಿನ್ನದ ಸರ ತಂದು ಪೂಜೆಗೆ ಇಟ್ಟು ಮೋಸಹೋಗಿದ್ದಾಳೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಸಾಧು ವೇಷಧಾರಿ ಖದೀಮನ ಪತ್ತೆಗೆ ಬಲೆ ಬೀಸಿದ್ದು, ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದೆ.

    ನಡೆದಿದ್ದೇನು?:
    ಆಗಸ್ಟ್ 28 ರಂದು ಮಧ್ಯಾಹ್ನ ಗೃಹಿಣಿ ಪದ್ಮ ರಮೇಶ್ ಮನೆಗೆ ಇಬ್ಬರು ಮಹಿಳೆಯರು ಬಂದು ನಾವು ಆಂಧ್ರದ ವೀರಬ್ರಹ್ಮಯ್ಯ ಮಠದಿಂದ ಬಂದಿದ್ದೇವೆ ವೆಂಕಟೇಶ್ ಸಾಧು ಅವರನ್ನು ಹುಡುಕುತ್ತಿದ್ದೇವೆ. ಒಂದು ವೇಳೆ ಅವರು ನಿಮ್ಮಲ್ಲಿಗೆ ಬಂದರೆ ನೀವೇ ಅದೃಷ್ಟವಂತರು, ನಿಮ್ಮಲ್ಲಿ ಅವರು ಯಾವುದೇ ಹಣ ಕೇಳುವುದಿಲ್ಲ. ಅವರು ದೈವಿ ಪುರುಷರು ನಿಮಗೆ ಹಾರೈಸಿ ಹೋಗುತ್ತಾರೆ ಎಂದು ಹೇಳಿ ಹೋಗಿದ್ದಾರೆ.

    ಮರುದಿನ ಸಾಧು ವೇಷದಲ್ಲಿ ಬಂದ ಅಪರಿಚಿತ ವ್ಯಕ್ತಿ ತಾನು ವೀರಬ್ರಹ್ಮಯ್ಯ ಮಠ ಆಂಧ್ರದಿಂದ ಬಂದಿರುವ ವೆಂಕಟೇಶ್ ಸಾಧು ನಿನ್ನ ಗಂಡನಿಗೆ ದೋಷವಿದೆ ಪೂಜೆ ಮಾಡಿಸಬೇಕು. ಇಲ್ಲದಿದ್ದರೆ 2 ದಿನದಲ್ಲಿ ನಿನ್ನ ಗಂಡ ಸಾಯುತ್ತಾನೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಿಸಲು ಒಂದು ಪೇಪರಿನಲ್ಲಿ ಅರಿಶಿನ ಕುಂಕುಮ ಹಾಕಿ ಕೈಯಿಂದ ಒರೆಸಿ ದೆವ್ವದ ಚಿತ್ರ ಮೂಡಿಸಿದ್ದಾನೆ.

    ಸಾಧು ವೇಷಧಾರಿಯ ಮಾತು ನಂಬಿ ಪಕ್ಕದ ಮನೆಯ ಸಂಧ್ಯಾ ಎಂಬುವರ ಮನೆಯಿಂದ 40 ಗ್ರಾಂ ಬಂಗಾರದ ಚೈನ್ ತಂದು ಪೂಜೆಗೆ ನೀಡಿದ್ದಾಳೆ. ತಾನೇ ತಂದಿದ್ದ ಸ್ಟೇನ್ಲೆಸ್ ಡಬ್ಬಿಯಲ್ಲಿ ಅಕ್ಕಿ, ಅರಿಶಿನ ಕುಂಕುಮ ಮತ್ತು ಚಿನ್ನದ ಸರ ಹಾಕಿ ಪೂಜೆ ಮಾಡಿದ್ದಾನೆ. ನಾನು ಹೋದ ಮೇಲೆ 5 ನಿಮಿಷ ಬಿಟ್ಟು ಸ್ನಾನ ಮಾಡಿ ದೇವರ ಮುಂದೆ ಡಬ್ಬಿ ತೆಗೆಯಬೇಕು ಎಂದು ತಿಳಿಸಿದ್ದಾನೆ. ಆದರೆ ತನ್ನಲ್ಲಿರುವ ಅಂತಹದೇ ಇನ್ನೊಂದು ಡಬ್ಬಿ ಇಟ್ಟು ಚಿನ್ನವಿದ್ದ ಡಬ್ಬಿಯನ್ನು ತೆಗೆದುಕೊಂಡು ಹೋಗಿದ್ದಾನೆ. ಡಬ್ಬಿ ತೆಗೆದು ನೋಡಿದಾಗಲೇ ಮಹಿಳೆಗೆ ತಾನು ಮೋಸಹೋಗಿರುವುದು ಅರಿವಿಗೆ ಬಂದಿದೆ.

    ಘಟನೆ ಹಿನ್ನೆಲೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಭೇದಿಸಲು ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಡೋಂಗಿ ಸ್ವಾಮಿಗಳು, ಸಾಧು ವೇಷಧಾರಿಗಳು ಬಂದರೆ ಮೋಸ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

  • ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?

    ನವದೆಹಲಿ: ಈ ದೀಪಾವಳಿ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆ 40 ಸಾವಿರ ರೂಪಾಯಿಗೆ ಏರಿಕೆಯಾಗುವ ಸಾಧ್ಯತೆಯಿದೆ.

    ಆಗಸ್ಟ್ ಮೂರನೇ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 38 ಸಾವಿರದ ಗಡಿ ದಾಟಿದ್ದರೆ 22 ಕ್ಯಾರೆಟ್ ಚಿನ್ನದ ಬೆಲೆ 35,780 ರೂ. ಇತ್ತು. ಈ ಬೆಲೆ ಅಕ್ಟೋಬರ್ ದೀಪಾವಳಿಯ ಸಂದರ್ಭದಲ್ಲಿ 40 ಸಾವಿರ ರೂ.ಗೆ ಏರಿಕೆಯಾಗಬಹುದು ಈ ಕ್ಷೇತ್ರದಲ್ಲಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಜುಲೈ ತಿಂಗಳಿನಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 34,300 ರೂ. ಇದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 32,520 ರೂ. ಇತ್ತು. ಆಗಸ್ಟ್ ಮೊದಲ ವಾರದಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 35,590 ರೂ. ಇದ್ದರೆ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 33,830 ರೂ.ಗೆ ಏರಿಕೆಯಾಗಿದೆ.

    ಬೆಲೆ ಏರಿಕೆಗೆ ಕಾರಣ ಏನು?
    ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾದ ಅಮೆರಿಕ, ಚೀನಾ ನಡುವೆ ವಾಣಿಜ್ಯ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಇದರ ಜೊತೆ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಚೀನಾ ಅಭಿವೃದ್ಧಿ ಶೀಲ ರಾಷ್ಟ್ರಗಳ ಹೆಸರನ್ನು ಹೇಳಿಕೊಂಡು ಲಾಭ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಚೀನಾ ನಡುವಿನ ವ್ಯಾಪಾರ ಸಮರ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು ಡಾಲರ್ ಬದಲು ಚಿನ್ನದಲ್ಲಿ ಹೂಡಿಕೆದಾರರು ಹೂಡಿಕೆ ಮಾಡುತ್ತಿದ್ದಾರೆ.

    ಎರಡನೇ ಕಾರಣ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಕಡಿತಗೊಳಿಸಿದೆ. ಭಾರತದಲ್ಲಿ ಹೇಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆಯೋ ಅದೇ ರೀತಿ ಅಮೆರಿಕದ ಫೆಡರಲ್ ರಿಸರ್ವ್ ಇದೆ. ದಶಕದ ಬಳಿಕ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಕೆ ಮಾಡಿದೆ. ಹಿಂದೆ ಜಾಗತಿಕ ಆರ್ಥಿಕ ಹಿಂಜರಿತವಾದಾಗ ಬಡ್ಡಿದರವನ್ನು ಇಳಿಕೆ ಮಾಡಿತ್ತು. ಮುಂದೆ ವಿಶ್ವದಲ್ಲೂ ಆರ್ಥಿಕ ಕುಸಿತವಾಗಬಹುದು ಎನ್ನುವ ಭೀತಿಯಿಂದ ಫೆಡರಲ್ ರಿಸರ್ವ್ ಬಡ್ಡಿ ದರ ಮಾಡಿರಬಹುದು ಎಂದು ಊಹಿಸಿ ಹೂಡಿಕೆದಾರರು ಚಿನ್ನದತ್ತ ಹೂಡಿಕೆ ಮಾಡುತ್ತಿದ್ದಾರೆ.

     

    ಮೂರನೇಯದಾಗಿ ಬಹಳ ಮುಖ್ಯವಾಗಿ ಅಮೆರಿಕದಲ್ಲಿ ಉತ್ಪಾದನಾ ಸೂಚ್ಯಂಕ ಇಳಿಮುಖವಾಗಿದ್ದರೆ ಚೀನಾ ಜರ್ಮನಿಯಲ್ಲಿ ಕೈಗಾರಿಕಾ ಉತ್ಪಾದನೆ ಭಾರೀ ಇಳಿಕೆ ಕಂಡಿದೆ. ಇದೆಲ್ಲದರ ಪರಿಣಾಮ ಭಾರತದ ಷೇರು ಮರುಕಟ್ಟೆಯ ಜೊತೆಗೆ ವಿಶ್ವದ ಹಲವು ದೇಶಗಳ ಮಾರುಕಟ್ಟೆ ಸೂಚ್ಯಂಕಗಳು ಕೆಲ ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಅಮೆರಿಕದ ಡೌ ಜೋನ್ಸ್, ಜಪಾನ್, ಜರ್ಮನಿ, ಯುರೋಪ್, ಏಷ್ಯಾದ ಪ್ರಮುಖ ದೇಶಗಳ ಷೇರು ಮಾರುಕಟ್ಟೆ ಭಾರೀ ಇಳಿಕೆ ಕಾಣುತ್ತಿವೆ. ಈ ಕಾರಣದ ಜೊತೆಗೆ ಇಂಟರ್‌ನ್ಯಾಷನಲ್‌ ಮಾನಿಟರಿ ಫಂಡ್ ಕೂಡ ಇತ್ತೀಚೆಗೆ ಜಾಗತಿಕ ಜಿಡಿಪಿ ದರದ ಮುನ್ನೋಟವನ್ನು ಶೇ.3.3ರಿಂದ ಶೇ.3.2ಕ್ಕೆ ತಗ್ಗಿಸಿದ್ದರಿಂದ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಹಿಂಪಡೆಯುತ್ತಿದ್ದಾರೆ.

    ಬೆಲೆ ಏರಿಕೆ ಆಗುತ್ತಿದೆ ಎನ್ನುವ ಕಾರಣಕ್ಕೆ ಚಿನ್ನದ ದರ ಭಾರೀ ಏರಿಕೆಯಾಗಿಲ್ಲ. 2013ಕ್ಕೆ ಹೋಲಿಸಿದರೆ ಈಗಲೂ ಕಡಿಮೆಯೇ ಇದೆ. 2013ರಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 29,277 ರೂ. ತಲುಪಿತ್ತು. ಆದರೆ ಈಗ ಒಂದೇ ಸಮನೆ ಏರುತ್ತಿರುವುದನ್ನು ಗಮನಿಸಿದರೆ ದೀಪಾವಳಿ ವೇಳೆಗೆ 40 ಸಾವಿರ ರೂ. ಗಡಿ ದಾಟಬಹುದು ಎಂದು ಈ ಕ್ಷೇತ್ರದಲ್ಲಿರುವ ಪರಿಣಿತರು ಅಂದಾಜಿಸಿದ್ದಾರೆ.

    ಇಡೀ ವಿಶ್ವದಲ್ಲಿ ಉತ್ಪಾದನೆ ಕಡಿಮೆಯುತ್ತಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇದ್ದರೆ 2019ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 59 ಡಾಲರ್ ಇಳಿಕೆಯಾಗಿದೆ. ಆರ್ಥಿಕ ಬಿಕ್ಕಟ್ಟು, ಮಂದಗತಿಯಲ್ಲಿ ಪ್ರಗತಿ, ಹಣದುಬ್ಬರದ ಸಂದರ್ಭದಲ್ಲಿ ಹೂಡಿಕೆದಾರರು ಷೇರುಗಳ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸೇಫ್ ಎಂದು ತಿಳಿದು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ.

    24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ
    24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.

  • ಪೊಲೀಸಪ್ಪನ ಮಗನ ಜೊತೆ ನಾಯಿಗೂ ಗೋಲ್ಡ್ ಬೆಲ್ಟ್

    ಪೊಲೀಸಪ್ಪನ ಮಗನ ಜೊತೆ ನಾಯಿಗೂ ಗೋಲ್ಡ್ ಬೆಲ್ಟ್

    – ಬೆಂಗ್ಳೂರಲ್ಲಿ ದಾಳಿ, ಗೋಲ್ಡ್ ಗಿರಿ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ಪುಂಡರ ಜೊತೆ ಪೊಲೀಸಪ್ಪನ ಮಗ ಬಿಂದಾಸ್ ಹುಟ್ಟುಹಬ್ಬ ಆಚರಣೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಬಂಧಿತನನ್ನು ಎಎಸ್‍ಐ ಮಗ ಗಿರಿ ಅಲಿಯಾಸ್ ಗೋಲ್ಡ್ ಗಿರಿ, ನಾಯಿ ಗಿರಿ ಎಂದು ಗುರುತಿಸಲಾಗಿದೆ. ಈತನ ಕೊರಳಲ್ಲಿ ಚಿನ್ನದ ಸರಗಳ ರಾಶಿಯೇ ಇದೆ. ಕೇವಲ ಗಿರಿ ಕೊರಳಲ್ಲಿ ಮಾತ್ರವಲ್ಲ, ನಾಯಿಗೂ ಗೋಲ್ಡ್ ಬೆಲ್ಟ್ ಧರಿಸಲಾಗಿದೆ.

    ಈತ ಮಲ್ಲತ್ತಹಳ್ಳಿಯ ನಡು ರಸ್ತೆಯಲ್ಲೇ ಅದ್ಧೂರಿಯಾಗಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಅಲ್ಲದೆ ಗೊಲ್ಡ್ ಗಿರಿಗೆ ಹುಟ್ಟಿದ ಹಬ್ಬಕ್ಕೆ ರಸ್ತೆ ಮಧ್ಯೆಯೇ ಪುಡಾರಿಗಳು ಅದ್ಧೂರಿ ಸ್ವಾಗತ ನೀಡಿದ್ದಾರೆ. ಬರ್ತ್ ಡೇ ಸಂಭ್ರಮದ ವೇಳೆ ಸಾಲು ಸಾಲು ರೌಡಿಶೀಟರ್ ಗಳು ಬಂದು ಸೆಲ್ಫಿ ತೆಗೆದುಕೊಂಡಿದ್ದಾರೆ.

    ಈ ಬಗ್ಗೆ ಮಾಹಿತಿ ಪಡೆದ ಜ್ಞಾನ ಭಾರತಿ ಪೊಲೀಸರು ಬರ್ತ್ ಡೇ ಆಚರಣೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಗಿರಿ ಅಭಿಮಾನಿಗಳು ಪಾರ್ಟಿಯಿಂದ ಕಾಲ್ಕಿತ್ತಿದ್ದಾರೆ.

    ಸದ್ಯ ಗಿರಿಯನ್ನ ವಶಕ್ಕೆ ಪಡೆದು ಜ್ಞಾನಭಾರತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  • ಇಸ್ತ್ರಿ ಪೆಟ್ಟಿಗೆಯಲ್ಲಿತ್ತು 3.46 ಕೋಟಿ ಮೌಲ್ಯದ ಚಿನ್ನ

    ಇಸ್ತ್ರಿ ಪೆಟ್ಟಿಗೆಯಲ್ಲಿತ್ತು 3.46 ಕೋಟಿ ಮೌಲ್ಯದ ಚಿನ್ನ

    ಹೈದರಾಬಾದ್: 4 ಇಸ್ತ್ರಿ ಪೆಟ್ಟಿಗೆಯಲ್ಲಿ ಬರೋಬ್ಬರಿ 3.45 ಕೋಟಿ ಮೌಲ್ಯದ ಚಿನ್ನವನ್ನು ಅಡಿಗಿಸಿಟ್ಟು, ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 3.46 ಕೋಟಿ ರೂಪಾಯಿ ಮೌಲ್ಯದ 9.21 ಕೆಜಿ ಚಿನ್ನವನ್ನು ಅಬಕಾರಿ ಇಲಾಖೆಯ ಗುಪ್ತಚರ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ದುಬೈ ಮೂಲದವನೆಂದು ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಈ ಚಾಲಾಕಿ ಆರೋಪಿ ಚಿನ್ನದ ಬಾರ್ ಗಳನ್ನು ಇಸ್ತ್ರಿ ಪೆಟ್ಟಿಗೆಯ ಹೀಟಿಂಗ್ ಕಾಯಿಲ್ ಅಳವಡಿಸುವ ಭಾಗದಲ್ಲಿ ಜೊಡಿಸಿ, ಅವುಗಳನ್ನು ಚೆಕ್ಡ್-ಇನ್ ಬ್ಯಾಗೇಜ್‍ನಲ್ಲಿ ಹಾಕಿ ಭದ್ರವಾಗಿ ಪ್ಯಾಕ್ ಮಾಡಿದ್ದನು.

    ಆದರೆ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಆರೋಪಿ ಹಾಗೂ ಆತನ ಬ್ಯಾಗ್‍ಗಳನ್ನು ಪರಿಶೀಲನೆ ಮಾಡಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 3,46,48,096 ರೂಪಾಯಿ ಬೆಲೆ ಬಾಳುವ ನಾಲ್ಕು ವಿ-ಆಕಾರದ ಚಿನ್ನದ ಬಾರ್ ಗಳನ್ನು ಪೊಲೀಸರು ವಶಪಡಿಸಿಕೊಂಡು, ಆತನನ್ನು ಬಂಧಿಸಿದ್ದಾರೆ.

    ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ಹಿನ್ನೆಲೆ ಹಾಗೂ ಆತನ ಬಳಿ ಚಿನ್ನ ಹೇಗೆ ಬಂತು? ಎಲ್ಲಿಗೆ ಇದನ್ನು ಸಾಗಿಸುತ್ತಿದ್ದ ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

  • 7 ಮಂದಿ ದರೋಡೆಕೋರರ ಬಂಧನ – 2.89 ಕೋಟಿ ನಗದು, ಚಿನ್ನ ವಶ

    7 ಮಂದಿ ದರೋಡೆಕೋರರ ಬಂಧನ – 2.89 ಕೋಟಿ ನಗದು, ಚಿನ್ನ ವಶ

    ಹೈದರಾಬಾದ್: ಅಂತರರಾಜ್ಯ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಹೈದರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 2.89 ಕೋಟಿ ರೂ. ನಗದು ಮತ್ತು 350 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಪಿಸ್ತೂಲ್ ಬಳಸಿ 3.6 ಕೋಟಿ ದರೋಡೆ ಮಾಡಿರುವ ಆರೋಪ ಈ ಗ್ಯಾಂಗ್ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೈದರಾಬಾದ್ ಪೊಲೀಸ್ ಆಯುಕ್ತರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಶಾಡ್ ನಗರ ವಿಭಾಗ ಪೊಲೀಸರ ಜೊತೆಯಾಗಿ ಸೇರಿ ಕಾರ್ಯಾಚರಣೆ ಮಾಡಿದ್ದು, 2019 ರ ಜೂನ್ 28 ರಂದು ಹೆದ್ದಾರಿಯಲ್ಲಿ ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಾಡ್‍ನಗರ ಪ್ರದೇಶದಲ್ಲಿ ಆಟಿಕೆ ಪಿಸ್ತೂಲ್ ಇಟ್ಟುಕೊಂಡು ಬರೋಬ್ಬರಿ 3.6 ಕೋಟಿ ಹಣವನ್ನು ದೋಚಿದ್ದಾರೆ. ಈ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿಯ ಮಾಜಿ ಚಾಲಕ ಕೂಡ ಇದ್ದಾನೆ ಎಂದು ಪೊಲೀಸ್ ಆಯುಕ್ತ ವಿ.ಸಿ.ಸಜ್ಜನಾರ್ ಹೇಳಿದ್ದಾರೆ.

    ಮೂರು ತಿಂಗಳ ಹಿಂದೆಯೇ ಆರೋಪಿ ಮಾಜಿ ಚಾಲಕ ಮಯೂರೇಶ್ ದರೋಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ತನ್ನ ಗ್ರಾಮಕ್ಕೆ ಹೋಗಿದ್ದನು. ಅಲ್ಲಿ ಚಾಲಕ ಇತರ ಇಬ್ಬರು ಆರೋಪಿಗಳನ್ನು ಭೇಟಿಯಾಗಿ ದರೋಡೆಯ ಬಗ್ಗೆ ಪ್ಲ್ಯಾನ್ ಮಾಡಿದ್ದನು. ಅದರಂತೆಯೇ ದರೋಡೆ ಮಾಡಲು ಆರೋಪಿಗಳು ಒಂದು ಸಿಗರೇಟ್ ಲೈಟರ್ ಮತ್ತು ಆಟಿಕೆಯ ಪಿಸ್ತೂಲನ್ನು ಖರೀದಿಸಿದ್ದಾರೆ.

    ದರೋಡೆ:
    ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ರಾಜು ನಂಗ್ರೆ ಬರುವುದನ್ನೇ ಕಾದು ಕುಳಿತ್ತಿದ್ದ ಗ್ಯಾಂಗ್, ವಾಹನ ಬರುತ್ತಿದ್ದಂತೆ ಕಾರನ್ನು ತಡೆದು ಚಾಲಕ ಕಾರಿನಲ್ಲಿದ್ದ ಇತರರಿಗೆ ನಕಲಿ ಪಿಸ್ತೂಲಿನಿಂದ ಬೆದರಿಕೆ ಹಾಕಿದ್ದಾನೆ. ನಂತರ ವಾಹನ ಸಮೇತ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದರೋಡೆಕೋರರು ಕಾರಿನಲ್ಲಿದ್ದವರನ್ನು ಹೊರಗೆ ತಳ್ಳಿ ಹಣದೊಂದಿಗೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ.

    ಚಿನ್ನದ ವ್ಯಾಪಾರಿ ತಕ್ಷಣ ಪೊಲೀಸ್ ಠಾಣೆಗೆ ಬಂದು ದರೋಡೆ ಮತ್ತು ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಹೈದರಾಬಾದ್ ಪೊಲೀಸರು ವಿವಿಧ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಯ ಶುರು ಮಾಡಿದ್ದರು. ನಿರಂತರ ಕಾರ್ಯಾಚರಣೆ ನಂತರ ದರೋಡೆಕೋರರನ್ನು ಬಂಧಿಸಿದ್ದಾರೆ.

  • ಪೊಲೀಸರೆಂದು ನಂಬಿಸಿ ಚಿನ್ನ ದೋಚಿದ ಕಿಲಾಡಿ ಕಳ್ಳರು

    ಪೊಲೀಸರೆಂದು ನಂಬಿಸಿ ಚಿನ್ನ ದೋಚಿದ ಕಿಲಾಡಿ ಕಳ್ಳರು

    ಬಾಗಲಕೋಟೆ: ಪೊಲೀಸರೆಂದು ನಂಬಿಸಿ, ಚಿನ್ನ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.

    ವಿದ್ಯಾಗಿರಿಯ 18 ನೇ ಕ್ರಾಸ್‍ನ ಅಯೋಧ್ಯಾ ಹೋಟೆಲ್ ಎದುರಿಗೆ ಈ ಘಟನೆ ನಡೆದಿದ್ದು, ವಸಂತ ಕೋನರೆಡ್ಡಿ ಮತ್ತು ವಿಠ್ಠಲ ಬೆನಕಟ್ಟಿ ಎಂಬುವರಿಂದ ಚಿನ್ನ ದೋಚಿ ಪರಾರಿಯಾಗಿದ್ದಾರೆ. ನಡೆದುಕೊಂಡು ಹೋದಾಗ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ನಾವು ಪೊಲೀಸರೆಂದು ಐಡಿ ಕಾರ್ಡ್ ತೋರಿಸಿ 45 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ.

    ಈ ದಾರಿಯಲ್ಲಿ ದರೋಡೆ ಆಗುತ್ತಿದೆ. ನೀವು ಈ ದಾರಿಯಲ್ಲಿ ಹೋಗಬೇಡಿ ಎಂದು ಬೇರೆ ದಾರಿಯಲ್ಲಿ ಹೋಗಲು ಹೇಳಿದ್ದಾರೆ. ಚಿನ್ನ ಒಡವೆ ಧರಿಸಿ ಇಲ್ಲಿ ಹೋಗಬೇಡಿ ಚಿನ್ನ ಬಿಚ್ಚಿ ಜೇಬಿನಲ್ಲಿ ಇಟ್ಟಿಕೊಂಡು ಹೋಗಿ ಎಂದು ಹೇಳಿದ್ದಾರೆ.

    ಕಳ್ಳರ ಮಾತಿನಂತೆ ವಸಂತ ಕೋನರೆಡ್ಡಿ ಮತ್ತು ವಿಠ್ಠಲ ಬೆನಕಟ್ಟಿ ಚಿನ್ನ ತೆಗೆಯುತ್ತಿದ್ದಾಗ ಅದನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ನವನಗರ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದೆ.

  • ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು

    ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು

    ಕೋಲಾರ: ಕೋಲಾರ ನಗರದಲ್ಲಿ ಸರಣಿ ಕಳ್ಳತನ ಮುಂದುವರಿದಿದ್ದು, ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.

    ತಡರಾತ್ರಿ ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದಲ್ಲಿ ಕಳ್ಳತನ ಮಾಡಿದ್ದು, ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿರುವ ಚೋರರು. ಮನೆಗಳ ಬಾಗಿಲನ್ನು ಒಡೆದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಟಿವಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಕೋಲಾರ ನಗರ ಠಾಣೆ ಪೊಲೀಸರು ಹಾಗೂ ಗಲ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.