ಹೈದರಾಬಾದ್: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಮನೆಯಲ್ಲಿದ್ದ ತನ್ನ ತಾಯಿಯ ಚಿನ್ನಾಭರಣವನ್ನೇ ಕದ್ದ ಘಟನೆ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.
ಅರುಣ್ ಕುಮಾರ್ ಚಿನ್ನ ಕದ್ದ ಆರೋಪಿ. ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ತನ್ನ ಪ್ರೀತಿಗಾಗಿ ಅವನು ಮನೆಯಲ್ಲಿ ಕದಿಯಲು ಶುರು ಮಾಡಿದ್ದನು. ಅಲ್ಲದೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕದಿಯುತ್ತಿದ್ದನು. ಮನೆಯಲ್ಲಿ ಕಳ್ಳತನ ಆಗುವುದನ್ನು ನೋಡಿ ಯುವಕನ ತಾಯಿ ಈ ಬಗ್ಗೆ ಸಂಜೀವ್ ರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಅರುಣ್ ಕುಮಾರ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಯುವತಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಅರುಣ್ ಕುಮಾರ್ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದನು. ಅಲ್ಲದೆ ಆಕೆಗೆ ಪ್ರತಿ ತಿಂಗಳು ಉಡುಗೊರೆ ನೀಡುತ್ತಿದ್ದನು. ಇದರ ಜೊತೆಗೆ ಆಕೆಯನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.
ತನ್ನ ಪ್ರೇಯಸಿಗಾಗಿ ಅರುಣ್ ಮನೆಯಲ್ಲಿ ಕಳ್ಳತನ ಮಾಡುವ ನಿರ್ಧಾರ ಮಾಡುತ್ತಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ 50 ಸಾವಿರ ನಗದು ಹಾಗೂ 80 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾನೆ. ಚಿನ್ನಾಭರಣ ಹಾಗೂ ಹಣ ಕಾಣಿಸದಿದ್ದಾಗ ಯುವಕನ ತಾಯಿ ಮೊದಲು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದೆ ಎಂದು ಅರಿತ ಯುವಕನ ತಾಯಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರುಣ್‍ನನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಆತ ಸರಿಯಾದ ಉತ್ತರ ನೀಡಲಿಲ್ಲ. ಹಾಗಾಗಿ ಪೊಲೀಸರು ಅರುಣ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.
– ವಾರ್ಷಿಕ ಆದಾಯ 5 ಲಕ್ಷ ರೂ.ಒಳಗಿರಬೇಕು
– ಬಾಲ್ಯ ವಿವಾಹ ಆಗಿರಬಾರದು
ದಿಸ್ಪುರ್: ಮದುವೆ ನೋಂದಣಿ ಉತ್ತೇಜಿಸುವುದು ಹಾಗೂ ಬಾಲ್ಯವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಅಸ್ಸಾಂ ಸರ್ಕಾರ ‘ಅರುಂಧತಿ ಚಿನ್ನದ ಯೋಜನೆ’ಯನ್ನು ಜಾರಿಗೆ ತಂದಿದ್ದು, ಮುಂದಿನ ವರ್ಷದಿಂದ ಇದು ಕಾರ್ಯರೂಪಕ್ಕೆ ಬರಲಿದೆ.
ಈ ಯೋಜನೆಯಡಿ ಎಲ್ಲ ವಧುಗಳಿಗೆ 10 ಗ್ರಾಂ ಚಿನ್ನಕ್ಕೆ ತಗಲುವ ಮೊತ್ತವನ್ನು ಸರ್ಕಾರ ನೀಡಲಿದೆ. ಆದರೆ ಮದುವೆ ನೋಂದಣಿ ಸಮಯದಲ್ಲಿ ಚಿನ್ನ ಖರೀದಿಯ ರಶೀದಿಯನ್ನು ಫಲಾನುಭವಿಗಳು ನೀಡಬೇಕಾಗುತ್ತದೆ.
ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಮಾಹಿತಿ ನೀಡಿ, ಈ ಯೋಜನೆಯು ವಿವಾಹ ನೋಂದಣಿ ಉತ್ತೇಜಿಸುವುದು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಯೋಜನೆಯ ಲಾಭ ಪಡೆಯಲು ವಧು ಹಾಗೂ ಆಕೆಯ ತಂದೆಯ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎಂದು ವಿವರಿಸಿದರು.
ಅಲ್ಲದೆ ಫಲಾನುಭವಿ ವಧು-ವರರ ವಯಸ್ಸು ಕ್ರಮವಾಗಿ 18 ಹಾಗೂ 21 ವರ್ಷಗಳನ್ನು ಮೀರಿರಬೇಕು. 1954ರ ವಿಶೇಷ ವಿವಾಹ(ಅಸ್ಸಾಂ) ಕಾಯ್ದೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮದುವೆಯನ್ನು ಔಪಚಾರಿಕವಾಗಿ ನೋಂದಾಯಿಸಿಕೊಂಡ ನಂತರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮದುವೆ ಸಮಯದಲ್ಲೇ ಚಿನ್ನ ಕೊಳ್ಳಲು ಹಣ ನೀಡಲಾಗುವುದು ಎಂದು ಶರ್ಮಾ ತಿಳಿಸಿದರು.
ನವದೆಹಲಿ: ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ದಿಢೀರ್ ಭಾರೀ ಇಳಿಕೆಯಾಗಿದೆ. ಭಾರೀ ಕುಸಿತ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ಬೆಲೆ 2,300 ರೂ. ಇಳಿಕೆಯಾಗಿದೆ.
ಇತ್ತೀಚೆಗೆ ಸೆಪ್ಟೆಂಬರಿನಲ್ಲಿ ಪ್ರತಿ 10 ಗ್ರಾಂ.ಗೆ 40 ಸಾವಿರ ರೂ. ತಲುಪಿದ್ದ ಚಿನ್ನದ ಬೆಲೆ ಇದೀಗ ಕಡಿಮೆಯಾಗಿದೆ. ಸಿಎಕ್ಸ್(ಮಲ್ಟಿ ಕಮಾಡಿಟಿ ಎಕ್ಸ್‍ಚೇಂಜ್)ನಲ್ಲಿ ಚಿನ್ನದ ಬೆಲೆ ಸೋಮವಾರ ಪ್ರತಿ 10 ಗ್ರಾಂ. ಚಿನ್ನಕ್ಕೆ ಶೇ.0.04ರಷ್ಟು ಕಡಿಮೆಯಾಗಿದ್ದು, ಚಿನ್ನದ ಬೆಲೆ 37,671 ರೂ.ಗೆ ತಲುಪಿದೆ. ಇದನ್ನೂ ಓದಿ: ದೀಪಾವಳಿಗೆ 40 ಸಾವಿರ ರೂ. ಗಡಿ ದಾಟಲಿದೆ ಚಿನ್ನ – ಬೆಲೆ ಏರುತ್ತಿರುವುದು ಯಾಕೆ?
ಚೀನಾ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಮರ ಕಡಿಮೆಯಾಗಲಿದೆ ಎನ್ನುವ ಸುಳಿವು ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಸಂತೋಷಗೊಂಡಿದ್ದು ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಜೊತೆ ಭಾರತದ ಷೇರು ಮಾರುಕಟ್ಟೆ ಉತ್ತಮ ಫಲಿತಾಂಶ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿರುವುದರಿಂದ ಬೆಲೆ ಕಡಿಮೆಯಾಗುತ್ತಿದೆ.
ಮದುವೆ ಸೀಸನ್ ಹತ್ತಿರದಲ್ಲಿರುವಾಗಲೇ ಚಿನ್ನದ ಬೆಲೆ ಕಡಿಮೆಯಾಗಿರುವುದು ಜಾಗತಿಕ ಮಾರುಕಟ್ಟೆ ಹಾಗೂ ಚಿಲ್ಲರೆ ಖರೀದಿದಾರರಲ್ಲಿ ಸಂತಸ ತಂದಿದೆ.
ಇನ್ನೊಂದೆಡೆ ಎಂಸಿಎಕ್ಸ್‍ಲ್ಲಿ ಬೆಳ್ಳಿ ದರ ಪ್ರತಿ ಕೆ.ಜಿ.ಗೆ ಶೇ.0.30ರಷ್ಟು ಹೆಚ್ಚಳವಾಗಿದ್ದು, ಪ್ರತಿ ಕೆ.ಜಿ. ದರ 44,000 ರೂ. ತಲುಪಿದೆ. ಆದರೆ ಸೆಪ್ಟೆಂಬರ್ ತಿಂಗಳಿನಲ್ಲಿದ್ದ ದರಕ್ಕೆ ಹೋಲಿಸದರೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ದೇಶೀಯ ಚಿನ್ನದ ಬೆಲೆಯಲ್ಲಿ ಕುಸಿತದ ರೀತಿಯಲ್ಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಪ್ರೈಸಸ್ 1,455.55 ಡಾಲರ್ ಕುಸಿತವನ್ನು ಕಂಡಿದೆ.
ಯುಎಸ್-ಚೀನಾ ನಡುವಿನ ವ್ಯಾಪಾರ ಸಮರದಿಂದಾಗಿ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿತ್ತು. ಪ್ರತಿ ಆನ್ಸ್(1 ಆನ್ಸ್-28.34 ಗ್ರಾಂ.)ಗೆ 1,550 ಡಾಲರ್ ಏರಿಕೆಯಾಗಿತ್ತು.
ಕೋಲ್ಕತ್ತಾ: ಅಕ್ರಮವಾಗಿ 25.79 ಕೆಜಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಡಿಆರ್‌ಐ ಅಧಿಕಾರಿಗಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 10 ಕೋಟಿ ರೂ. ಮೌಲ್ಯದ 25.79 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಇಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.
Siliguri: Directorate of Revenue Intelligence (DRI) seized 25.79 kgs of gold and arrested two persons yesterday. They were produced before a Siliguri court today. #WestBengalpic.twitter.com/mctLblmSO7
ಸಿಲಿಗುರಿ ಹಾಗೂ ಹೌರಾ ನಗರದಲ್ಲಿ ಚಿನ್ನವನ್ನು ಅಕ್ರವಾಗಿ ಸಾಗಿಸುತ್ತಿದ್ದ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಅಕ್ಟೋಬರ್ ನಲ್ಲಿ ಬಂಧಿಸಿದ್ದರು. ಈ ವೇಳೆ ಆರೋಪಿಗಳಿಂದ 2.5 ಕೋಟಿ ರೂ. ಮೌಲ್ಯ 6 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ 25.79 ಕೆಜಿ ಚಿನ್ನ ಸಿಕ್ಕಿದೆ. ಹೀಗಾಗಿ ಚಿನ್ನ ಅಕ್ರಮ ಸಾಗಾಣಿಕೆ ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿಗಳು ಪಶ್ಚಿಮ ಬಂಗಾಳದ ಬೆಹಾರ್ ಜಿಲ್ಲೆಯ ದಿನ್ಹಾಟಾ ಅಂತರಾಷ್ಟ್ರೀಯ ಗಡಿಭಾಗದ ಮೂಲಕ ಬಾಂಗ್ಲಾದೇಶದಿಂದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಹೀಗಾಗಿ ಈ ಜಾಲವನ್ನು ಭೇದಿಸಲು ಡಿಆರ್‌ಐ ಕಾರ್ಯಾಚರಣೆ ನಡೆಸಿದೆ ಎಂದು ವರದಿಯಾಗಿದೆ.
ಮೈಸೂರು: ನೋಟ್ ಬ್ಯಾನ್ ಆಗಿ ಮೂರು ವರ್ಷ ಕಳೆದರೂ ಜನರು ಮಾತ್ರ ಹಳೆಯ ನೋಟನ್ನು ದೇವರ ಹುಂಡಿಗೆ ಹಾಕುವುದನ್ನು ನಿಲ್ಲಿಸುತ್ತಿಲ್ಲ. ತಮ್ಮ ಬಳಿ ಇಟ್ಟುಕೊಂಡಿರುವ ಹಳೆಯ 500 ಹಾಗೂ 1 ಸಾವಿರ ರೂ. ಮುಖ ಬೆಲೆಯ ನೋಟ್‍ಗಳನ್ನು ಕಾಣಿಕೆ ರೂಪವಾಗಿ ದೇವರ ಹುಂಡಿಗೆ ಹಾಕಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದೇವಸ್ಥಾನದ ಹುಂಡಿಯಲ್ಲಿ 20 ಸಾವಿರ ರೂಪಾಯಿಗಳ ಹಳೆಯ ನೋಟುಗಳು ಸಿಕ್ಕಿವೆ. ನಂಜನಗೂಡು ದೇವಸ್ಥಾನದ ಹುಂಡಿ ಹಣದ ಎಣಿಕೆ ನಡೆದಿದೆ. ಹುಂಡಿಯಲ್ಲಿ 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಇದರಲ್ಲಿ ನಿಷೇಧಿತ ನೋಟುಗಳು ಇವೆ.
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಸಂಗ್ರಹವಾದ ಹಣವಿದು. ಹಣದ ಜೊತೆಗೆ 34 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 8 ವಿದೇಶಿ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ.
ಕೋಲ್ಕತ್ತಾ: ಭಾರತೀಯ ತಳಿಯ ಹಸುಗಳು ವಿಶೇಷ ಗುಣಗಳನ್ನು ಹೊಂದಿದ್ದು, ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ ಎಂದು ಹೇಳಿದ್ದ ಬಿಜೆಪಿ ಮುಖಂಡ ದಿಲೀಪ್ ಘೋಷ್ ಸದ್ಯ ಮತ್ತೊಂದು ಹೇಳಿಕೆಯನ್ನು ನೀಡಿದ್ದು, ಗೋ ಮಾಂಸ (ಬೀಫ್) ಸೇವಿಸುವವರಿಗೆ ಹಾಲಿನ ಮಹತ್ವ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಗೋವಿನ ಹಾಲಿನಲ್ಲಿ ಚಿನ್ನ ಬೆರೆತಿದೆ ಎಂಬ ಹೇಳಿಕೆಗೆ ಭಾರೀ ವಿಮರ್ಶೆಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಲೀಪ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ನನ್ನ ವಿರುದ್ಧ ಟೀಕೆ ಮಾಡುವವರು ನಾನು ಹೇಳಿದ್ದು ಸುಳ್ಳು ಎಂದು ಸಾಬೀತು ಪಡಿಸಲಿ ಎಂದು ಸವಾಲು ಎಸೆದರು.
ಈಗಾಗಲೇ ಯುಎಸ್‍ಎ, ಪೋಲ್ಯಾಂಡ್ ದೇಶಗಳಲ್ಲಿ ಹಸುವಿನ ಹಾಲಿನ ಬಣ್ಣದ ಕಾರಣ ತಿಳಿಯಲು ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಈ ಸಂಶೋಧನೆಗಳಲ್ಲಿ ಹಾಲಿಗೆ ಹಳದಿ ಬಣ್ಣ ಬರಲು, ಆದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನದ ಅಂಶವಿರುವುದೇ ಕಾರಣ ಎಂಬುವುದು ತಿಳಿದು ಬಂದಿದೆ ಎಂದು ತಮ್ಮ ವಾದಕ್ಕೆ ಸಮರ್ಥನೆಯನ್ನು ನೀಡಿದರು.
ಕೆಲವರು ನಮ್ಮ ಸಂಸ್ಕೃತಿ, ಸಂಪ್ರಾದಾಯಗಳನ್ನು ಆಕ್ಷೇಪಿಸಲು ಇಷ್ಟಪಡುತ್ತಾರೆ. ಆದರೆ ನನ್ನ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಪಡಿಸುವ ಚಿಂತನೆ ಮಾತ್ರ ಇಲ್ಲ. ಯಾರು ಈ ಬಗ್ಗೆ ಸಂಶೋಧನೆ ಮಾಡಲು ಬಯಸುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ ಗೋ ಮಾಂಸ ಸೇವನೆ ಮಾಡುವವರಿಂದ ಹೇಗೆ ನೀವು ಹಾಲಿನ ಮಹತ್ವ ಬಗ್ಗೆ ಅರಿಯಲು ಪ್ರಯತ್ನಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.
Dilip Ghosh, BJP West Bengal President: Indian breed of cows has a special characteristic, there is gold mixed in its milk, & that is why colour of their milk is slightly yellow. Cow's navel helps in producing gold with help of sunshine. (4.11.19) pic.twitter.com/XoHUwfowBS
ಈ ಹಿಂದೆಯೂ ಗೋ ಮಾಂಸ ಸೇವನೆ ಮಾಡುವವರ ವಿರುದ್ಧ ಟೀಕೆ ಮಾಡಿದ್ದ ಘೋಷ್, ಗೋವು ನಮ್ಮ ತಾಯಿ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ಸೇವಿಸುವುದು ಅಪರಾಧ ಎಂದು ಹೇಳಿದ್ದರು.
ಕೋಲ್ಕತ್ತಾ: ಗೋ ಮಾಂಸ (ಬೀಫ್) ತಿನ್ನುವ ಕೆಲ ಬುದ್ಧಿಜೀವಿಗಳು ನಾಯಿಯ ಮಾಂಸವನ್ನೂ ತಿನ್ನಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಕೋಲ್ಕತ್ತಾದಲ್ಲಿ ಮಾತನಾಡಿದ ಅವರು, ಗೋವು ನಮ್ಮ ತಾಯಿ. ಹಸುವಿನ ಹಾಲು ಸೇವಿಸಿ ನಾವು ಜೀವಂತವಾಗಿದ್ದೇವೆ. ನಮ್ಮ ತಾಯಿಯೊಂದಿಗೆ ಯಾರದರು ಅಸಭ್ಯವಾಗಿ ನಡೆದುಕೊಂಡರೆ ಸುಮ್ಮನೆ ಇರುವುದಿಲ್ಲ. ಅವರಿಗೆ ಯಾವ ರೀತಿ ಪಾಠ ಕಲಿಸಬೇಕೋ ಹಾಗೆ ಕಲಿಸುತ್ತೇವೆ. ಪವಿತ್ರ ಭೂಮಿಯಲ್ಲಿ ಗೋವು ಹತ್ಯೆ ಹಾಗೂ ಗೋ ಮಾಂಸ ತಿನ್ನುವುದು ಅಪರಾಧ ಎಂದು ಹೇಳಿದ್ದಾರೆ.
ಭಾರತೀಯ ತಳಿಯ ಹಸುಗಳು ವಿಶೇಷ ಗುಣವನ್ನು ಹೊಂದಿವೆ. ಅವುಗಳ ಹಾಲಿನಲ್ಲಿ ಚಿನ್ನ ಬೆರೆತಿರುತ್ತದೆ. ಅದಕ್ಕಾಗಿಯೇ ಅವುಗಳ ಹಾಲಿನ ಬಣ್ಣ ಸ್ವಲ್ಪ ಹಳದಿ ಬಣ್ಣ ಇರುತ್ತದೆ. ಹಸುವಿನ ಹೊಕ್ಕುಳವು ಬಿಸಿಲಿನ ಸಹಾಯದಿಂದ ಚಿನ್ನವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕೆಲವು ಬುದ್ಧಿ ಜೀವಿಗಳು ರಸ್ತೆಬದಿಯ ಅಂಗಡಿಗಳಲ್ಲಿ ಗೋ ಮಾಂಸ ತಿನ್ನುತ್ತಾರೆ. ಅಂತವರಿಗೆ ನಾಯಿ ಮಾಂಸವನ್ನು ಸಹ ತಿನ್ನಲು ನಾನು ಹೇಳುತ್ತೇನೆ. ಅವರು ಯಾವುದೇ ಪ್ರಾಣಿಗಳನ್ನು ತಿಂದರೂ ಅವರ ಆರೋಗ್ಯವು ಉತ್ತಮವಾಗಿರುತ್ತದೆ. ರಸ್ತೆಗಳಲ್ಲಿ ಏಕೆ? ನಿಮ್ಮ ಮನೆಯಲ್ಲಿ ತಿನ್ನಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Dilip Ghosh, BJP West Bengal President: Cow is our mother, we stay alive by consuming cow milk, so if anyone misbehaves with my mother, I will treat them the way they should be treated. On the holy soil of India killing cows & consuming beef is a crime. (4.11.19) https://t.co/djiB8c2cYR
ದಿಲೀಪ್ ಘೋಷ್ ಹೇಳಿಕೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ದಿಲೀಪ್ ಘೋಷ್ ಅವರು ಆಗಸ್ಟ್ ನಲ್ಲಿ ಪೂರ್ವ ಮಿಡ್ನಾಪೋರ್ ನ ಮೆಚೆಡಾದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿ, ವಿವಾದಕ್ಕೆ ಗುರಿಯಾಗಿದ್ದರು.
ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಂದಿಗೆ ಕೆಟ್ಟದಾಗಿ ವರ್ತಿಸಿದವರ ಶವವನ್ನು ಯಾರೂ ಗುರುತಿಸಲು ಸಾಧ್ಯವಾಗುವುದಿಲ್ಲ. ಅವರ ಕುಟುಂಬದ ಸದಸ್ಯರು ತಮ್ಮ ಅಂತಿಮ ವಿಧಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ದಿಲೀಪ್ ಘೋಷ್ ಅಧಿಕಾರಿಗೆ ಬೆದರಿಕೆ ಹಾಕಿದ್ದರು.
ಟೋಕಿಯೊ: ಒಲಿಪಿಂಕ್ ಟೆಸ್ಟ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಶಿವ ಥಾಪಾ ಹಾಗೂ ಪೂಜಾ ರಾಣಿ ಚಿನ್ನದ ಪದಕ್ಕೆ ಮುತ್ತಿಟ್ಟರೆ, ಅಶಿಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ನಾಲ್ಕು ಬಾರಿಯ ಏಷ್ಯನ್ ಪದಕ ವಿಜೇತ ಶಿವ ಥಾಪಾ 63 ಕೆಜಿ ತೂಕ ವಿಭಾಗದಲ್ಲಿ ಕಜಕಿಸ್ತಾನ ರಾಷ್ಟ್ರೀಯ ಚಾಂಪಿಯನ್ ಮತ್ತು ಏಷ್ಯನ್ ಕಂಚಿನ ಪದಕ ವಿಜೇತ ಸಂತಾಲಿ ಟೋಲ್ಕಾಯೆವ್ ಅವರನ್ನು 5-0 ಅಂಕಗಳಿಂದ ಸೋಲಿಸಿದರು. ಶಿವ ರಾಷ್ಟ್ರೀಯ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮತ್ತೊಂದೆಡೆ, ಏಷ್ಯನ್ ಕ್ರೀಡಾಕೂಟದ ಮಾಜಿ ಕಂಚಿನ ಪದಕ ವಿಜೇತೆ ಪೂಜಾ ಆಸ್ಟ್ರೇಲಿಯಾದ ಕೈಟ್ಲಿನ್ ಪಾರ್ಕರ್ ಅವರನ್ನು ಸೋಲಿಸಿದರು. ಈ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಪೂಜಾ ಬೆಳ್ಳಿ ಪದಕವನ್ನು ಗೆದ್ದಿದ್ದರು.
ಆಶಿಶ್ 69 ಕೆಜಿ ತೂಕ ವಿಭಾಗದಲ್ಲಿ ಜಪಾನ್‍ನ ಸೆವೊನ್ ಒಕಾಜಾವಾ ವಿರುದ್ಧ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್ ಶಿವ ಥಾಪಾ ಜಪಾನ್‍ನ ದೈಸುಕಿ ನಾರಿಮತ್ಸು ಎದುರು ಭರ್ಜರಿ ಗೆಲುವು ಸಾಧಿಸಿದ್ದರು. ಪೂಜಾ ರಾಣಿ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬ್ರೆಜಿಲ್‍ನ ಬೀಟ್‍ರಿಜ್ ಸೋರೆಸ್ ಎದುರು ಜಯದ ನಗೆ ಬೀರಿದ್ದರು.
ಇದಕ್ಕೂ ಮುನ್ನ ಮಹಿಳೆಯರ 51 ಕೆಜಿ ತೂಕದ ವಿಭಾಗದಲ್ಲಿ ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು 60 ಕೆಜಿ ವಿಭಾಗದಲ್ಲಿ ಸಿಮ್ರನ್‍ಜೀತ್ ಕೌರ್ ಸೆಮಿಫೈನಲ್ ನಲ್ಲಿ ನಿರಾಸೆ ಅನುಭವಿಸಿ ಕಂಚಿನ ಪದಕ ಗಳಿಸಿದ್ದಾರೆ. ನಾಲ್ಕರ ಘಟ್ಟದಲ್ಲೇ ಸೋತ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸುಮಿತ್ ಸಂಗ್ವಾನ್ 91 ಕೆಜಿ ವಿಭಾಗದಲ್ಲಿ ಮತ್ತು ವಹಲಿಂಪುಯಾ 75 ಕೆಜಿ ಕೂಡ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಬರ್ಲಿನ್: ಇಟಾಲಿಯನ್ ಕಳ್ಳಸಾಗಾಣಿಕೆದಾರರಿಂದ 2013ರಲ್ಲಿ ರಕ್ಷಿಸಿದ್ದ ಬಂಗಾಳದ ಟೈಗರ್ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಲಾಗಿದೆ.
ಕಾರಾ ಇದೇ ವರ್ಷ ಆಗಸ್ಟ್ ನಲ್ಲಿ ಆಟಿಕೆ ಅಗಿಯುವಾಗ ಒಂದು ಕೋರೆಹಲ್ಲು ಮುರಿದಿತ್ತು. ಇದರಿಂದಾಗಿ ಮೂಳೆ ಇರುವ ಮಾಂಸವನ್ನು ತಿನ್ನಲು ಭಾರೀ ಸಮಸ್ಯೆ ಎದುರಿಸುತ್ತಿದ್ದಳು. ಹೀಗಾಗಿ ಜರ್ಮನಿಯ ಮೆಸ್ವೀಲರ್ ನಗರದಲ್ಲಿ ಡೆನ್ಮಾರ್ಕ್ ನ ತಜ್ಞರು ಶಸ್ತ್ರಚಿಕಿತ್ಸೆ ಮೂಲಕ ಬಂಗಾಳದ ಹೆಣ್ಣು ಹುಲಿ ಕಾರಾಳಿಗೆ ಚಿನ್ನದ ಹಲ್ಲು ಅಳವಡಿಸಿದ್ದಾರೆ. ಶಸ್ತ್ರಚಿಕಿತ್ಸೆಯಾದ ಮೂರು ವಾರಗಳ ನಂತರ ಕಾರಾ ಸಾಮಾನ್ಯ ಸ್ಥಿತಿಗೆ ಮರಳಿದ್ದಾಳೆ.
ಡ್ಯಾನಿಶ್ ದಂತವೈದ್ಯರ ತಂಡವು ಕಾರಾಳ ದಂತ ಶಸ್ತ್ರಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಮುರಿದ ಹಲ್ಲು ಬದಲಿಸಲು ಎರಡನೇ ಹಲ್ಲು ತಯಾರಿಸಲಾಗಿತ್ತು. ಈ ಶಸ್ತ್ರಚಿಕಿತ್ಸೆಯು ಎರಡು ಗಂಟೆ ತೆಗೆದುಕೊಂಡಿತ್ತು. ಎರಡನೇ ಬಾರಿಗೆ ಚಿನ್ನದ ಹಲ್ಲನ್ನು ಅಕ್ಟೋಬರ್ ತಿಂಗಳ ಆರಂಭದಲ್ಲಿ ಅಳವಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮೊದಲು ನಾಲ್ಕು ಗಂಟೆ, ಬಳಿಕ ಒಂದೂವರೆ ಗಂಟೆ ಬೇಕಾಯಿತು.
3 ವಾರ ಚಿನ್ನದ ಹಲ್ಲು ನೆಕ್ಕಿದ ಕಾರಾ:
ಮೂರು ವಾರಗಳ ನಂತರ ನಿಜವಾದ ಹಲ್ಲಿನ ಬದಲಿಗೆ ಚಿನ್ನದ ಹಲ್ಲು ಹೊಂದಿಸಲಾಗಿದೆ. ಈ ಸಮಯದಲ್ಲಿ ಅವಳಿಗೆ ಮೂಳೆ ಇಲ್ಲದೆ ಮಾಂಸ ತಿನ್ನಲು ನೀಡಲಾಗಿತ್ತು. ಆಗ ಹಲ್ಲುಗಳಿಲ್ಲದ ಸಮಸ್ಯೆ ಎದುರಿಸಿತ್ತು. ಹಲ್ಲುಗಳನ್ನು ಅಳವಡಿಸಿದ ನಂತರ ಕಾರಾ ಸುಮಾರು ಮೂರು ವಾರಗಳ ಕಾಲ ಅವುಗಳನ್ನು ನೆಕ್ಕುತ್ತಿದ್ದಳು. ಇದನ್ನು ಆಕೆಯ ಆರೈಕೆದಾರರು ಗಮನಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಜೀವಶಾಸ್ತ್ರಜ್ಞ ಇವಾ ಲಿಂಡೆನ್ಸ್‍ಮಿಡ್ಟ್, ನಮ್ಮ ಕಾರ್ಯ ಸಂತೋಷ ತಂದಿದೆ. ಈಗ ಕಾರಾ ಮಾಂಸವನ್ನು ಸರಿಯಾಗಿ ಕತ್ತರಿಸಿ ತಿನ್ನಬಹುದು. ಚಿನ್ನದ ಹಲ್ಲು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಅವಳು ತನ್ನ ಹೊಸ ಚಿನ್ನದ ಹಲ್ಲುಗಳನ್ನು ತೋರಿಸುತ್ತಾ ನಗುವಂತೆ ಕಾಣಿಸುತ್ತಾಳೆ. ಕಾರಾಳ ಹಲ್ಲುಗಳು ಸರಿಯಾಗಿ ಸೇರಿಕೊಂಡಿವೆ ಎಂದು ಕ್ಷ-ಕಿರಣದಲ್ಲಿ ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ನಾವು ವಿಶ್ವಪ್ರಸಿದ್ಧ ದಂತವೈದ್ಯರ ತಂಡವನ್ನು ಹೊಂದಿದ್ದೇವೆ. ಹೀಗಾಗಿ ಶಸ್ತ್ರಚಿಕಿತ್ಸೆ ಸುಲಭವಾಗಿದೆ. ತಜ್ಞರಲ್ಲಿ ವಿಯೆನ್ನಾ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಪಶುವೈದ್ಯರು ಮತ್ತು ದಂತವೈದ್ಯರಾದ ಜೇನ್ ರುಹಾನು ಮತ್ತು ಡಾ. ಜೋಹಾನ್ನಾ ಪನ್ನರ್ ಸೇರಿದ್ದಾರೆ ಎಂದು ಇವಾ ಲಿಂಡೆನ್ಸ್‍ಮಿಡ್ಟ್ ಮಾಹಿತಿ ನೀಡಿದ್ದಾರೆ.
– ಬಂಗಾರದ ಮೇಲೆ ಬೀಳುತ್ತೆ ಭಾರೀ ದಂಡ
– ಕಪ್ಪುಹಣ ನಿಯಂತ್ರಣಕ್ಕೆ ಸರ್ಕಾರದ ಕ್ರಮ
ನವದೆಹಲಿ: ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ.
ಹೌದು. ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನು ನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆ.
ಆದಾಯ ತೆರಿಗೆ ಅಮ್ನೆಸ್ಟಿ ಸ್ಕೀಂ ಮಾದರಿಯಲ್ಲಿ ಕೇಂದ್ರ ಸರ್ಕಾರವು ಗೋಲ್ಡ್ ಅಮ್ನೆಸ್ಟಿ ಸ್ಕೀಮ್ ತರಲಿದೆ. ಈ ಸ್ಕೀಂ ಪ್ರಕಾರ ದಾಖಲೆ ಇಲ್ಲದ ಚಿನ್ನ ಅಕ್ರಮವಾಗಿದ್ದು ಈ ಚಿನ್ನವನ್ನು ಇಂತಿಷ್ಟು ಬೆಲೆ ತೆತ್ತು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ರೂಪಿಸಿದ್ದು ಆರಂಭದಲ್ಲಿ ಸರ್ಕಾರ ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ಈ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಹೊಂದಿದ್ದರೆ ಅದರ ವಿವರವನ್ನು ತೋರಿಸುವ ಅಗತ್ಯವಿಲ್ಲ. ಆದರೆ ಆ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಇದ್ದರೆ ಮೂಲವನ್ನು ತಿಳಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ನಂತರ ಸರ್ಕಾರವೇ ನಿಗದಿಪಡಿಸಿದ ದಂಡವನ್ನು ತೆತ್ತು ಈ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕಾಗುತ್ತದೆ.
ಅಕ್ಟೋಬರ್ ಎರಡನೇ ವಾರದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯ ಬಗ್ಗೆ ನಿರ್ಧಾರ ಪ್ರಕಟವಾಗಬೇಕಿತ್ತು. ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ನಿಗದಿಯಾಗಿದ್ದರಿಂದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಚಿನ್ನದ ಮೇಲೆ ತೆರಿಗೆ ಯಾಕೆ?
ನೋಟು ನಿಷೇಧದ ಬಳಿಕ ಹಣಕಾಸು ವ್ಯವಹಾರಗಳಿಗೆ ಕಠಿಣ ನೀತಿಯನ್ನು ತರಲಾಗಿದ್ದು ಬ್ಯಾಂಕಿನಿಂದ ನಗದು ಡ್ರಾ ಮಾಡಲು ಮಿತಿ ಹೇರಲಾಗಿದೆ. ಅಷ್ಟೇ ಅಲ್ಲದೇ ಆನ್‍ಲೈನ್ ವ್ಯವಹಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವ್ಯವಹಾರಗಳು ದಾಖಲಾಗುತ್ತದೆ. ಇದರಿಂದ ಪಾರಾಗಲು ಕಪ್ಪು ಕುಳಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ವರ್ಷ ವರ್ಷ ಜಾಸ್ತಿ ಆಗುತ್ತಿರುವ ಕಾರಣ ಮತ್ತು ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಆಸ್ತಿ ಆಗಿದ್ದರಿಂದ ಇದರ ಮೇಲೆಯೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಚಿನ್ನದ ಆಭರಣ/ ಬಾರ್ ಗಳನ್ನು ಖರೀದಿಸುತ್ತಿದ್ದಾರೆ. ಚಿನ್ನ ನೀಡುವುದರ ಮೂಲಕವೂ ಭ್ರಷ್ಟಾಚಾರ ನಡೆಯುತ್ತದೆ. ಯಾರ ಬಳಿ ಎಷ್ಟು ಚಿನ್ನ ಇದೆ ಎನ್ನುವ ಮಾಹಿತಿಯೂ ಸರ್ಕಾರದ ಬಳಿ ಇಲ್ಲದ ಕಾರಣ ಕಪ್ಪು ಕುಳಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆದಾಗ ಕೆಜಿಗಟ್ಟಲೇ ಚಿನ್ನ ಇರುವುದು ಪತ್ತೆಯಾಗುತ್ತದೆ. ಹೀಗಾಗಿ ಅಕ್ರಮವಾಗಿ ಬಂದಿರುವ ಚಿನ್ನದ ಮೇಲೆ ನಿಗಾ ಇಡಲು ಸರ್ಕಾರ ಈಗ ತೆರಿಗೆ ಹೇರಲು ಮುಂದಾಗುತ್ತಿದೆ.
ಗೊಂದಲವೂ ಇದೆ:
ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಚಿನ್ನ ಸರ್ಕಾರ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿದ್ದರೆ ಅದು ಸಕ್ರಮವೋ? ಅಕ್ರಮವೋ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಸದ್ಯ ಸರ್ಕಾರ ಚಿನ್ನದ ಮೇಲೆ ತೆರಿಗೆ ವಿಧಿಸಲು ಮುಂದಾಗುತ್ತಿದೆ ಎನ್ನುವ ವಿಚಾರ ಮಾತ್ರ ಪ್ರಕಟವಾಗಿದ್ದು, ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ಯಾವ ರೀತಿ ಇರುತ್ತದೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.