Tag: gold

  • ಕೊರೊನಾ ಲಾಕ್‍ಡೌನ್ ನಡುವೆ ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್

    ಕೊರೊನಾ ಲಾಕ್‍ಡೌನ್ ನಡುವೆ ಚಿನ್ನ ಖರೀದಿದಾರರಿಗೆ ಗುಡ್ ನ್ಯೂಸ್

    ಬೆಂಗಳೂರು: ಕೊರೊನಾ ಲಾಕ್‍ಡೌನ್ ನಡುವೆ ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ.

    ಕೊರೊನಾ ಲಾಕ್‍ಡೌನ್ ನಡುವೆ ಜಾಗತಿಕ ಮಟ್ಟದಲ್ಲಿ ಹಲವಾರು ಕ್ಷೇತ್ರಗಳು ಕಸಿದು ಬಿದ್ದಿದ್ದು, ದೇಶಗಳು ಆರ್ಥಿಕ ಸಂಕಷ್ಟವನ್ನು ಎದರುರಿಸುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಾದ ಏರಿಳಿತ, ಶೇರು ಮಾರುಕಟ್ಟೆಯ ಕುಸಿತದ ಪರಿಣಾಮ ಚಿನ್ನದ ಬೆಲೆಯೂ ಕುಸಿದಿದ್ದು, 10 ಗ್ರಾಂ ಚಿನ್ನಕ್ಕೆ ಒಂದು ಸಾವಿರ ರೂಪಾಯಿ ಕಡಿಮೆಯಾಗಿದೆ.

    ಈ ಮೂಲಕ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,000ರೂ ಇಳಿಕೆಯಾದರೆ, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆಯಲ್ಲೂ 1,000ರೂ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 43,990 ರೂಪಾಯಿ ಇದ್ದರೆ, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 48,490 ರೂಪಾಯಿಗೆ ಇಳಿಕೆಯಾಗಿದೆ. ಇನ್ನೂ ಹಿಂದಿನ ಚಿನ್ನದ ದರವನ್ನು ನೋಡುವುದಾದರೆ. ಮೇ 18ರಂದು 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 44,990 ರೂ. ಇತ್ತು. ಅಂತಯೇ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 49,490 ರೂ. ಇತ್ತು.

  • 20 ಲಕ್ಷ ರೂ. ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಎಸ್‍ಐ

    20 ಲಕ್ಷ ರೂ. ಚಿನ್ನಾಭರಣ ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪಿಎಸ್‍ಐ

    – ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

    ಶಿವಮೊಗ್ಗ: ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಮಾಲೀಕರಿಗೆ ಹಿಂದಿರುಗಿಸುವ ಮೂಲಕ ಜಿಲ್ಲೆಯ ಕುಂಸಿ ಠಾಣೆಯ ಪಿಎಸ್‍ಐ ನವೀನ್ ಮಠಪತಿ ಪ್ರಾಮಾಣಿಕತೆ ಮೆರೆದಿದ್ದಾರೆ.

    ಮೇ 23 ರಂದು ಜಿಲ್ಲೆಯ ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದರು. ಮೃತಪಟ್ಟ ಮಹಿಳೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಭಾರತಿ ಎಂದು ಗುರುತಿಸಲಾಗಿತ್ತು. ದಂಪತಿ ಕಾರಿನಲ್ಲಿ ತುಪ್ಪೂರಿನಿಂದ ಕಡೂರಿಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿತ್ತು.

    ಪತ್ನಿ ಕಳೆದುಕೊಂಡು ದುಃಖದಲ್ಲಿದ್ದ ಸುಬ್ಬಯ್ಯನವರಿಗೆ ಕುಂಸಿ ಠಾಣೆ ಪೊಲೀಸರು ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಪೊಲೀಸರು ಯಾಕೋ ಕರೆಯುತ್ತಿದ್ದಾರೆ ಏನಿರಬಹುದು ಎಂದು ಸುಬ್ಬಯ್ಯನವರ ಜೊತೆಗೆ ಕುಟುಂಬದ ಐದು ಜನ ಭಯದಿಂದಲೇ ಠಾಣೆಗೆ ಹೋಗಿದ್ದಾರೆ. ಈ ವೇಳೆ ಪಿಎಸ್‍ಐ ನವೀನ್ ಮಠಪತಿ ಅವರು ಅಪಘಾತವಾದ ಸ್ಥಳದಲ್ಲಿ ಸಿಕ್ಕಿತ್ತು ತೆಗೆದುಕೊಳ್ಳಿ ಎಂದು ಸುಮಾರು 15-20 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನೀಡಿದ್ದಾರೆ. ಈ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

    ಮೃತ ಭಾರತಿ ಬಂಗಾರದ ಒಡವೆ ತೆಗೆದುಕೊಂಡು ಬಂದಿರುವುದನ್ನು ಪತಿ ಸುಬ್ಬಯ್ಯ ಅವರಿಗೆ ಹೇಳಿರಲಿಲ್ಲ. ಪತ್ನಿ ಕಳೆದುಕೊಂಡ ದುಃಖದಲ್ಲಿದ್ದ ಸುಬ್ಬಯ್ಯ ಚಿನ್ನಾಭರಣದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಪಿಎಸ್‍ಐ ಸ್ವಯಂ ಪ್ರೇರಿತರಾಗಿ ಹಿಂದಿರುಗಿಸಿ, ಇತರರಿಗೆ ಪ್ರೇರಣೆ ಆಗಿದ್ದಾರೆ. ಪಿಎಸ್‍ಐ ನವೀನ್ ಮಠಪತಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕಳ್ಕೊಂಡಿದ್ದ ಚಿನ್ನವನ್ನ 20 ವರ್ಷಗಳ ನಂತ್ರ ಮರಳಿ ಪಡೆದ ಮಹಿಳೆ

    ಕಳ್ಕೊಂಡಿದ್ದ ಚಿನ್ನವನ್ನ 20 ವರ್ಷಗಳ ನಂತ್ರ ಮರಳಿ ಪಡೆದ ಮಹಿಳೆ

    ತಿರುವನಂತಪುರಂ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ಚಿನ್ನವನ್ನು ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ಮರಳಿ ಪಡೆದುಕೊಂಡಿರುವ ಅಚ್ಚರಿ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.

    ಕಾಸರಗೋಡಿನ ನೆಲ್ಲಿಕುನ್ನು ನಿವಾಸಿ ಬಸಾರಿಯಾ 20 ವರ್ಷಗಳ ಹಿಂದೆ ತಮ್ಮ ಚಿನ್ನವನ್ನು ಕಳೆದುಕೊಂಡಿದ್ದರು. 20 ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ವಿವಾಹ ಕಾರ್ಯಕ್ರಮದ ವೇಳೆ ಬಸಾರಿಯಾ ತಮ್ಮ ಚಿನ್ನದ ಸೊಂಟದ ಪಟ್ಟಿಯ ಒಂದು ಭಾಗವನ್ನು ಕಳೆದುಕೊಂಡಿದ್ದರು. ಸೊಂಟದ ಪಟ್ಟಿ ಸುಮಾರು 28 ಗ್ರಾಂ ನಷ್ಟು ತೂಕವಿತ್ತು. ಅದರಲ್ಲಿ ಸುಮಾರು 12 ಗ್ರಾಂ ನಷ್ಟು ತೂಕವಿದ್ದ ಒಂದು ಭಾಗವನ್ನು ಕಳೆದುಕೊಂಡಿದ್ದರು. ಚಿನ್ನ ಸಿಕ್ಕಿದ್ದ ವ್ಯಕ್ತಿ 20 ವರ್ಷಗಳ ನಂತರ ಅದರ ಬದಲಿಗೆ ಎರಡು ಚಿನ್ನದ ನಾಣ್ಯಗಳನ್ನು ಹಿಂದಿರುಗಿಸಿ, ಕ್ಷಮೆ ಕೇಳಿದ್ದಾರೆ.

    ಮಂಗಳವಾರ ಬಸಾರಿಯಾ ಇಫ್ತಾರ್‌ಗೆ ತಯಾರಿ ನಡೆಸುತ್ತಿದ್ದಾಗ, ಹೆಲ್ಮೆಟ್ ಧರಿಸಿದ್ದ ಯುವಕನೊಬ್ಬ ಆಹಾರ ಪದಾರ್ಥಗಳಿದ್ದ ದೊಡ್ಡದಾದ ಪ್ಕಾಕ್ ತೆಗೆದುಕೊಂಡು ಬಂದು ನೀಡಿದ್ದನು. ಕಾಸರಗೋಡಿನಲ್ಲಿ ಇಫ್ತಾರ್ ಆಹಾರವನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಮಹಿಳೆ ಹೆಲ್ಮೆಟ್ ಧರಿಸಿದ್ದ ಯುವಕನನ್ನು ಯಾರು ನೀನು ಎಂದು ಕೇಳಿದ್ದರು. ಆಗ ಯುವಕ, ನಾನು ಕೇವಲ ಡೆಲಿವರಿ ಹುಡುಗ ಅಷ್ಟೆ. ಬೇರೆ ವ್ಯಕ್ತಿ ಇದನ್ನು ಕಳುಹಿಸಿದ್ದಾರೆ ಎಂದು ಉತ್ತರಿಸಿದ. ಅಷ್ಟರಲ್ಲಿ ಮಹಿಳೆ ಪ್ರಾರ್ಥನೆ ಮಾಡಲು ಹೋಗದರು. ಇತ್ತ ಯುವಕ ಕೂಡ ಹೊರಟುಹೋದ.

    ಆಹಾರ ಪ್ಯಾಕ್ ಓಪನ್ ಮಾಡಿದಾಗ ಅದರಲ್ಲಿ ಸಣ್ಣ ಬಾಕ್ಸ್ ನಲ್ಲಿ ಎರಡು ಚಿನ್ನದ ನಾಣ್ಯಗಳಿತ್ತು. ಜೊತೆಗೆ ಒಂದು ಪತ್ರ ಕೂಡ ಇತ್ತು. ಅದರಲ್ಲಿ, “ನೀವು 20 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಚಿನ್ನ ನನಗೆ ಸಿಕ್ಕಿತ್ತು. ಅದನ್ನು ನಿಮಗೆ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಈಗ ಅದರ ಬದಲಿಗೆ ನಾಣ್ಯಗಳನ್ನು ನೀಡುತ್ತಿದ್ದೇನೆ. ದಯವಿಟ್ಟು ಈ ನಾಣ್ಯಗಳನ್ನು ಸ್ವೀಕರಿಸಿ ನನ್ನನ್ನು ಕ್ಷಮಿಸಿ” ಎಂದು ಬರೆದಿತ್ತು.

    ಅಚ್ಚರಿಯಾದ ಬಸಾರಿಯಾ ಪತ್ರ ಮತ್ತು ಚಿನ್ನದ ನಾಣ್ಯವನ್ನು ಶಾರ್ಜಾದಲ್ಲಿ ಪಾದರಕ್ಷೆಗಳ ಅಂಗಡಿ ನಡೆಸುತ್ತಿದ್ದ ತನ್ನ ಪತಿ ಇಬ್ರಾಹಿಂ ತೈವಾಲಪ್ಪಿಲ್‍ಗೆ ವಾಟ್ಸಪ್ ಮೂಲಕ ತಿಳಿಸಿದ್ದಾರೆ. ಇದನ್ನು ನೋಡಿದ ಪತಿ 20 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಜೊತೆಗೆ ಚಿನ್ನದ ನಾಣ್ಯಗಳ ಕಳುಹಿಸಿದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.

  • 48 ಸಾವಿರದ ಗಡಿಯತ್ತ ಚಿನ್ನ

    48 ಸಾವಿರದ ಗಡಿಯತ್ತ ಚಿನ್ನ

    ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ಆರ್ಥಿಕತೆ ಬುಡಮೇಲಾಗಿದ್ದು, ಇದರ ಪರಿಣಾಮ ಚಿನ್ನದ ಮೇಲೂ ಬೀರಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 47,740 ರೂ. ತಲುಪಿದ್ದು, ಬೆಳ್ಳಿ ಪ್ರತಿ ಕೆಜಿಗೆ 48,190 ರೂ.ಗೆ ಏರಿಕೆಯಾಗಿದೆ.

    ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್(ಎಂಸಿಎಕ್ಸ್)ನಲ್ಲಿ ಸೋಮವಾರದ ಚಿನ್ನದ ಬೆಲೆ 47,740 ರೂ. ಗಡಿ ದಾಟಿದ್ದು, ಶುಕ್ರವಾರದಿಂದ ಈವರೆಗೆ ಕೇವಲ ಮೂರು ದಿನಗಳಲ್ಲಿ 10 ರೂ.ಹೆಚ್ಚಾಗಿದೆ. ಇಂದು ಪ್ರತಿ 10 ಗ್ರಾಂ. 22 ಕ್ಯಾರೆಟ್ ಚಿನ್ನದ ಬೆಲೆ 46,120 ರೂ.ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 47,740 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ 48,520 ರೂ.ಗೆ ತಲುಪಿದ್ದು, ಇದರಲ್ಲಿ ಆಮದು ತೆರಿಗೆ ಶೇ.12.5 ಹಾಗೂ ಶೇ.3ರಷ್ಟು ಜಿಎಸ್‍ಟಿ ಸಹ ಸೇರಿದೆ.

    ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ, ವಿದೇಶಿ ಕರೆನ್ಸಿಗಳ ಆಧಾರದ ಮೇಲೆ ಹಾಗೂ ಸ್ಥಳೀಯ ಟಾರಿಫ್‍ಗಳ ಆಧಾರದ ಮೇಲೆ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಹೆಚ್ಚಾಗಿರುವುದೇ ಭಾರತದಲ್ಲಿಯೂ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.

    ಎಂಜೆಲ್ ಬ್ರೋಕಿಂಗ್‍ನ ಡಿವಿಪಿ ಕಮಾಡಿಟೀಸ್ ಮತ್ತು ಕರೆನ್ಸಿ ರಿಸರ್ಚ್‍ನ ಅನುಜ್ ಗುಪ್ತಾ ಈ ಕುರಿತು ಮಾಹಿತಿ ನೀಡಿ, ಚಿನ್ನದ ದರವೂ ಹಿಂದೆಂದಿಗಿಂತಲೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಎಂಸಿಎಕ್ಸ್‍ನಲ್ಲಿ ಚಿನ್ನದ ಬೆಲೆ 47.711 ರೂ.ಗೆ ತಲುಪಿದೆ. ಕಳೆದ ವಾರ ಚಿನ್ನದ ದರ ಶೇ.3.42ರಷ್ಟು ಹೆಚ್ಚಾಗುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

    ಏಳು ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2012ರ ನಂತರ ಇದೀಗ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಸೋಮವಾರದ ದರ ಏಳು ವರ್ಷದ ಹಿಂದಿನ ದಾಖಲೆಯನ್ನು ಮುರಿದಿದೆ. ಅಮೆರಿಕ-ಚೀನಾ ಸಂಬಂಧ ಹಾಗೂ ಅಮೆರಿಕದ ಆರ್ಥಿಕತೆ ಕುಸಿದಿದ್ದರ ಪರಿಣಾಮ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಅಕ್ಟೋಬರ್ 2012ರ ನಂತರ ಇದೀಗ ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

  • ಬರೋಬ್ಬರಿ 10 ಕೆ.ಜಿ ಚಿನ್ನ ಧರಿಸ್ತಿದ್ದ ಗೋಲ್ಡ್ ಮ್ಯಾನ್ ಸಾವು

    ಬರೋಬ್ಬರಿ 10 ಕೆ.ಜಿ ಚಿನ್ನ ಧರಿಸ್ತಿದ್ದ ಗೋಲ್ಡ್ ಮ್ಯಾನ್ ಸಾವು

    ಮುಂಬೈ: 10 ಕೆ.ಜಿ ಚಿನ್ನ ಧರಿಸುವ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಗೋಲ್ಡ್ ಮ್ಯಾನ್ 39 ವರ್ಷದ ಸಾಮ್ರಾಟ್ ಮೊಜ್ ಹೃದಯಾಘಾತದಿಂದ ಇತ್ತೀಚೆಗಷ್ಟೆ ನಿಧನರಾಗಿದ್ದಾರೆ.

    ಸಾಮ್ರಾಟ್‍ಗೆ ಹೃದಯಾಘಾತವಾಗಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊರೊನಾನಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಶನಿವಾರ ಸಾಮ್ರಾಟ್ ಅಂತಿಮ ವಿಧಿ-ವಿಧಿಗಳನ್ನು ಪುಣೆಯ ಯರವಾಡದಲ್ಲಿ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ಕೆಲವೇ ಜನರು ಹಾಜರಿದ್ದರು.

    ಮೃತ ಸಾಮ್ರಾಟ್ ನಗರದ ಪ್ರಸಿದ್ಧ ಉದ್ಯಮಿಯಾಗಿದ್ದು, ಸುಮಾರು 8 ರಿಂದ 10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದರು. ಕುತ್ತಿಗೆಯಲ್ಲಿ ದಪ್ಪ ದಪ್ಪ ಸರಗಳು, ಕೈಯಲ್ಲಿ ದಪ್ಪದ ಬ್ರಾಸ್‍ಲೈಟ್ ಮತ್ತು ವಿವಿಧ ರೀತಿ ಉಂಗುರಗಳನ್ನು ಧರಿಸಿಕೊಂಡು ತಿರುಗಾಡುತ್ತಿದ್ದರು. ಹೀಗಾಗಿ ಜನರು ‘ಗೋಲ್ಡ್ ಮ್ಯಾನ್’ ಎಂಬ ಕರೆಯುತ್ತಿದ್ದರು.

    ಇತ್ತೀಚೆಗಷ್ಟೆ ಸಾಮ್ರಾಟ್ ತಮ್ಮ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆಯ ತೆರೆಯಲಾಗಿದೆ ಎಂದು ಪುಣೆ ಪೊಲೀಸರಿಗೆ ದೂರು ನೀಡಿದ್ದರು. ಸಾಮ್ರಾಟ್ ಪತ್ನಿ, ಇಬ್ಬರು ಮಕ್ಕಳು ಮತ್ತು ತಾಯಿಯನ್ನು ಅಗಲಿದ್ದಾರೆ. ಸಾಮ್ರಾಟ್‍ರಂತೆ 9-10 ಕೆ.ಜಿ ಚಿನ್ನವನ್ನು ಧರಿಸುತ್ತಿದ್ದ ಉದ್ಯಮಿಗಳಿದ್ದಾರೆ.

    ಎಂಎನ್‍ಎಸ್ ಶಾಸಕ ರಮೇಶ್ ಎಂಬವರು ಕೂಡ ಇದೇ ರೀತಿ ಚಿನ್ನ ಧರಿಸುತ್ತಿದ್ದರು. 2011ರಲ್ಲಿ ರಮೇಶ್ ಹೃದಯಾಘಾದಿಂದ ಮೃತಪಟ್ಟಿದ್ದಾರೆ. ಇನ್ನೂ ದತ್ತಾತ್ರೇಯ ಪುಂಗೆ ಎಂಬವರು ‘ಚಿನ್ನದ ಅಂಗಿಯನ್ನು’ ಧರಿಸುವ ಮೂಲಕ ಹೆಸರುವಾಸಿಯಾಗಿದ್ದರು. ಇವರು ಧರಿಸುತ್ತಿದ್ದ ಅಂಗಿ ಸುಮಾರು 3.5 ಕಿ.ಗ್ರಾಂ ತೂಕವಿತ್ತು. 1.29 ಕೋಟಿ ಮೌಲ್ಯದ ಅಂಗಿಯನ್ನು ಇವರು 2012ರಲ್ಲಿ ಖರೀದಿಸಿದ್ದರು. ದುರದೃಷ್ಟವಶಾತ್ ಜುಲೈ 2016ರಲ್ಲಿ ದುರ್ಷ್ಕಮಿಗಳು ಕೊಲೆ ಮಾಡಿದ್ದಾರೆ.

  • 13 ಮನೆ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್ – 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    13 ಮನೆ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್ – 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

    ಮಂಗಳೂರು: ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ವಿಚಾರಿಸಿದ ವೇಳೆ ಈತ ದಕ್ಷಿಣ ಕನ್ನಡದ ಹಲವು ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

    ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ನಿವಾಸಿ ಶೌಕತ್ ಯಾನೆ ಶೌಕತ್ ಅಲಿ (56) ಬಂಧಿತ ಆರೋಪಿ. ಈತ ಮಾಣಿ ಗ್ರಾಮದ ಅಳಿರಾ ಎಂಬಲ್ಲಿ ವಾಸವಿದ್ದ. ಪುತ್ತೂರು, ಉಪ್ಪಿನಂಗಡಿ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ 13 ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.

    2017ರ ಬಳಿಕ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಡೆದ ಹೆಚ್ಚಿನ ಮನೆಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಆದರ್ಶನಗರ, 34 ನೆಕ್ಕಿಲಾಡಿ, ಕಲ್ಲೇರಿ, ಕೆಂಪಿಮಜಲು, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಅಜೇಯನಗರ, ಮುರ, ಬನ್ನೂರು, ಹಾರಾಡಿ, ಕೋಡಿಂಬಾಡಿ, ಜೈನರಗುರಿ, ಸಾಲ್ಮರ, ದಾರಂದಕುಕ್ಕು ಮತ್ತು ಬಂಟ್ವಾಳ ಠಾಣಾ ವ್ಯಾಪ್ತಿಯ ಕಲ್ಲಡ್ಕಗಳಲ್ಲಿ ನಡೆದ ಮನೆ ಕಳವು ಪ್ರಕರಣಗಳಲ್ಲಿ ಈತನೇ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತನಿಂದ ವಿವಿಧೆಡೆಯಿಂದ ಕಳ್ಳತನ ಮಾಡಿದ್ದ ಒಟ್ಟು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಕಳ್ಳತನ ಮಾಡಿ ಮಾರಿದ್ದ ಚಿನ್ನವನ್ನು ಉಪ್ಪಿನಂಗಡಿಯ 2 ಹಾಗೂ ಬಂಟ್ವಾಳದ ಒಂದು ಜ್ಯುವೆಲ್ಲರಿಯಿಂದ ವಶಕ್ಕೆ ಪಡೆಯಲಾಗಿದೆ.

  • ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ

    ಬೆಂಗಳೂರು: ಕೊರೊನಾ ವೈರಸ್ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಚಿನ್ನದ ಬೆಲೆ ಗಗನಕ್ಕೇರಿದೆ. ಶುಕ್ರವಾರ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳ ಕಂಡಿದೆ.

    ಒಂದು ತಿಂಗಳಿನಲ್ಲಿ (ಫೆಬ್ರವರಿ 6ರಿಂದ ಮಾರ್ಚ್ 6ರವರೆಗೆ) 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 3,940 ರೂ. ಹೆಚ್ಚಾಗಿದೆ. ಅಂದರೆ ಫೆಬ್ರವರಿ 6ರಂದು 41,750 ರೂ. ಇದ್ದರೆ, ಇಂದು ಚಿನ್ನದ ಬೆಲೆ 45,690 ರೂ.ಗೆ ಏರಿಕೆ ಆಗಿದೆ. ಈ ಮಧ್ಯೆ ಅಂದ್ರೆ ಫೆಬ್ರವರಿ 29ರಂದು ಚಿನ್ನದ ಬೆಲೆ 43 ಸಾವಿರ ರೂ. ಇತ್ತು. ಆದರೆ ಆ ಬಳಿಕ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.

    ಬೆಂಗಳೂರಿನಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ ಮಾರ್ಚ್ 2 ಹಾಗೂ 3ರಂದು 43,510 ರೂ., ಮಾರ್ಚ್ 4ರಂದು 44,570 ರೂ. ಹಾಗೂ ಮಾರ್ಚ್ 5ರಂದು 44,700 ರೂ. ಇತ್ತು. ಆದರೆ ಇಂದು 45,690 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳವಾಗಿದೆ.

    ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

  • ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ಕುಖ್ಯಾತ ಮನೆಗಳ್ಳರು ಅರೆಸ್ಟ್ – 14 ಲಕ್ಷ ಮೌಲ್ಯದ 360 ಗ್ರಾಂ ಚಿನ್ನಾಭರಣ ವಶ

    ರಾಯಚೂರು: ಜಿಲ್ಲೆಯ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನ ಕೊನೆಗೂ ಸಿಂಧನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಚಂಗು ಅಲಿಯಾಸ್ ಗೌಸ್ ಹಾಗೂ ರೆಹಮಾನ್ ಬಂಧಿತ ಆರೋಪಿಗಳು. ರಾಯಚೂರು, ಸಿಂಧನೂರು, ಮುದಗಲ್, ನೇತಾಜಿನಗರ ಹಾಗೂ ಬಳಗಾನೂರ ಪೊಲೀಸ್ ಠಾಣೆಗಳಲ್ಲಿ ಈ ಇಬ್ಬರ ವಿರುದ್ಧ ಒಟ್ಟು 8 ಕಳ್ಳತನ ಪ್ರಕರಣ ದಾಖಲಾಗಿದ್ದವು. ಸಿಂಧನೂರು ಮೂಲದ ಖದೀಮರು ಕೊನೆಗೆ ಸಿಂಧನೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.


    ಬಂಧಿತರಿಂದ 14 ಲಕ್ಷ 40 ಸಾವಿರ ರೂ. ಮೌಲ್ಯದ 360 ಗ್ರಾಂ. ಚಿನ್ನಾಭರಣ ಹಾಗೂ ಅರ್ಧ ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಾರ್ಯಕ್ಕೆ ರಾಯಚೂರು ಎಸ್‍ಪಿ. ಡಾ.ಸಿ.ಬಿ.ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

    ರಾಯಚೂರು ನಗರ ಹಾಗೂ ಲಿಂಗಸುಗೂರಿನಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನ ರಚಿಸಲಾಗಿದೆ ಎಂದು ವೇದಮೂರ್ತಿ ಹೇಳಿದ್ದಾರೆ.

  • ಆಭರಣ ಪ್ರಿಯರಿಗೆ ಶಾಕ್ – ಮತ್ತೆ ಏರಿಕೆಯಾದ ಬಂಗಾರದ ಬೆಲೆ

    ಆಭರಣ ಪ್ರಿಯರಿಗೆ ಶಾಕ್ – ಮತ್ತೆ ಏರಿಕೆಯಾದ ಬಂಗಾರದ ಬೆಲೆ

    ಬೆಂಗಳೂರು: ಆಭರಣ ಪ್ರಿಯರು ಇನ್ನೂ ಮುಂದೆ ಚಿನ್ನವನ್ನು ಖರೀದಿಸುವಾಗ ಯೋಚಿಸಬೇಕಾದ ಸಮಯ ಬಂದಿದೆ. ಯಾಕೆಂದರೆ ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದೆ.

    ದೇಶದಲ್ಲಿ ಚಿನ್ನದ ಬೆಲೆ ಮತ್ತೆ ಮತ್ತೆ ಬೆಲೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಒಂದೇ ದಿನಕ್ಕೆ 22 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 1,790 ರೂ ಹೆಚ್ಚಳವಾಗಿದ್ದರೆ, 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 1,800 ರೂ. ಏರಿಕೆಯಾಗಿದೆ. ಅಂದರೆ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 40,790 ರೂ. ಆದರೆ 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನ 44,790 ರೂಪಾಯಿ ಆಗಿದೆ.

    ಫೆಬ್ರವರಿ 20ರಂದು 22 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 39,090ರೂ. ಇತ್ತು. ಆದರೆ ಇಂದು 40,790 ರೂ. ಗೆ ಏರಿಕೆಯಾಗಿದೆ. ಹಾಗೇ 24 ಕ್ಯಾರೆಟ್‍ನ ಹತ್ತು ಗ್ರಾಂ ಚಿನ್ನಕ್ಕೆ 42,990 ರೂ ಇದ್ದ ಬಂಗಾರ, ಇವತ್ತು 44,790 ರೂ.ಗೆ ಜಿಗಿದಿದೆ.

  • ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ಮಂಡ್ಯ: ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವ ಬೆನ್ನಲ್ಲೆ ಇದೀಗ ಮತ್ತೊಂದು ಅಮೂಲ್ಯವಾದ ಖನಿಜ ಸಂಪನ್ಮೂಲ ಇದೆ ಎಂದು ಹೇಳಲಾಗುತ್ತಿದೆ.

    ಸದ್ಯ ಕೆಲವು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅಲ್ಲಾಪಟ್ಟಣ ಹಾಗೂ ಮರಳಗಾಲ ಪ್ರದೇಶದಲ್ಲಿ ಎಲೆಕ್ಟ್ರಿಕಲ್ ವಾಹನ ತಯಾರಿಕೆಗೆ ಬೇಕಾದ ಅಪರೂಪದ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಿಜ್ಞಾನಿಗಳ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಅತ್ಯಮೂಲ್ಯವಾದ ಖನಿಜ ಸಂಪತ್ತಾದ ಚಿನ್ನದ ನಿಕ್ಷೇಪ ಇರುವುದು ಬೆಳಕಿಗೆ ಬಂದಿದೆ. ಅದೂ ಸಹ ಶ್ರೀರಂಗಪಟ್ಟಣ ತಾಲೂಕಿನಲ್ಲೇ ಇದೆ ಎನ್ನಲಾಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಬ್ರಿಟಿಷ್ ಕಾಲದಲ್ಲೇ ಸಂಶೋಧನೆ:
    ಇಷ್ಟು ದಿನ ಜನರು ಹುಂಜನಕೆರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಮಾತಾನಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಈ ಅರಣ್ಯ ಪ್ರದೇಶವನ್ನು ಬಂಗಾರದ ಗುಡ್ಡ ಅಂತಾನೇ ಕರೆಯುತ್ತಿದ್ದರು. ಇದೀಗ ಈ ಅರಣ್ಯ ಪ್ರದೇಶದಲ್ಲಿ ಮೂರು ಗುಹೆಗಳು ಪತ್ತೆಯಾಗಿವೆ. ಅವು ಕೂಡ ಬ್ರಿಟಿಷ್ ಕಾಲದಲ್ಲಿ ಕೊರೆಯಲಾಗಿರುವ ಗುಹೆಗಳಾಗಿದ್ದು, ಈ ಗುಹೆಗಳನ್ನು ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಲು ಕೊರೆಯಲಾಗಿದೆ ಎನ್ನಲಾಗುತ್ತಿದೆ. ಬ್ರಿಟಿಷ್ ವಿಜ್ಞಾನಿಗಳು 1882ರಿಂದ 1913ರವರೆಗೆ ಈ ಸ್ಥಳದಲ್ಲಿ ಚಿನ್ನದ ನಿಕ್ಷೇಪದ ಕುರಿತು ಸಂಶೋಧನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಸಂಶೋಧನೆ ಬಗ್ಗೆ ಮಂಡ್ಯ ಗೆಜೆಟ್‍ನಲ್ಲೂ ಸಹ ಉಲ್ಲೇಖ ಆಗಿರುವುದು ಗಮನಾರ್ಹವಾಗಿದೆ.

    ಬಂಗಾರದ ಗುಡ್ಡ:
    ಇಂದಿಗೂ ಸಹ ಹುಂಜನಕೆರೆ ಅರಣ್ಯ ಪ್ರದೇಶವನ್ನು ಜನರು ಬಂಗಾರದ ಗುಡ್ಡ ಎಂದೇ ಕರೆಯುತ್ತಾರೆ. ಇಲ್ಲಿ ಚಿನ್ನಕ್ಕಾಗಿ ನಡೆದ ಸಂಶೋಧನೆಯಿಂದಾಗಿ ಜನರು ಅಂದಿನಿಂದ ಇಂದಿನವರೆಗೂ ಇಲ್ಲಿ ಅಪಾರ ಪ್ರಮಾಣದ ಚಿನ್ನ ಇದೆ ಎನ್ನುವ ಕಾರಣಕ್ಕೆ ಬಂಗಾರದ ಗುಡ್ಡ ಎನ್ನುತ್ತಾರೆ. ಈ ಪ್ರದೇಶದ ನಕಾಶೆಯಲ್ಲೂ ಸಹ ಬಂಗಾರದ ಗಣಿ ಎಂದೇ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಂದು ಬ್ರಿಟಿಷ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪಳೆಯುಳಿಕೆಗಳು ಇಂದಿಗೂ ಸಹ ಇರುವುದು ಅಚ್ಚರಿಯಾಗಿದೆ. ಸದ್ಯ ಇಲ್ಲಿರುವ ಮೂರು ಗುಹೆಗಳು ಮುಚ್ಚಿಕೊಂಡಿದ್ದು, ಗುಹೆಗಳ ಸ್ವಲ್ಪ ಭಾಗ ಮಾತ್ರ ಕಾಣಲು ಸಿಗುತ್ತಿದೆ.

    ಮಂಡ್ಯ ಇಷ್ಟು ದಿನ ಸಕ್ಕರೆ ನಗರಿ ಎಂದು ಕರೆಯಲ್ಪಡುತ್ತಿತ್ತು. ಆದರೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಲೀಥಿಯಂ ನಿಕ್ಷೇಪ ಪತ್ತೆ ಬೆನ್ನಲ್ಲೆ ಚಿನ್ನದ ನಿಕ್ಷೇಪದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಈ ಚಿನ್ನದ ನಿಕ್ಷೇಪದ ಬಗ್ಗೆ ಸರ್ಕಾರ ಸಂಶೋಧನೆ ನಡೆಸಿ ಇಲ್ಲಿ ಚಿನ್ನ ಇರುವುದು ನಿಜನಾ? ಇದ್ದರು ಸಹ ಎಷ್ಟು ಪ್ರಮಾಣದಲ್ಲಿ ಇದೆ? ಹಾಗೂ ದೇಶಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತೆ ಎನ್ನುವುದನ್ನ ಪತ್ತೆ ಮಾಡಬೇಕಿದೆ.