Tag: gold ATM

  • ಚೀನಾದಲ್ಲಿ ಚಿನ್ನ ಕರಗಿಸಿ ಹಣ ನೀಡುತ್ತೆ ATM – ಭಾರತಕ್ಕೆ ಬರುತ್ತಾ?

    ಚೀನಾದಲ್ಲಿ ಚಿನ್ನ ಕರಗಿಸಿ ಹಣ ನೀಡುತ್ತೆ ATM – ಭಾರತಕ್ಕೆ ಬರುತ್ತಾ?

    ಮ್ಮ ಕಷ್ಟಕಾಲದಲ್ಲಿ ನೆರವಿಗೆ ದೊರೆಯುವ ಅಪತ್ಬಾಂಧವ ಅಂದರೆ ಅದು ಚಿನ್ನ. ಕಷ್ಟದ ಸಮಯದಲ್ಲಿ, ತುರ್ತು ಸಂದರ್ಭಗಳಲ್ಲಿ ಚಿನ್ನ (Gold) ಬಹಳಷ್ಟು ಜನರಿಗೆ ಆರ್ಥಿಕ ನೆರವು ನೀಡುತ್ತದೆ. ಸಾಲಕ್ಕಾಗಿ ಕೈ ಚಾಚುವ ಬದಲು ಬ್ಯಾಂಕ್‌ಗೆ ತೆರಳಿ ಅಡವಿಟ್ಟರೆ ಅಥವಾ ಚಿನ್ನದಂಗಡಿಗೆ ತೆರಳಿ ಮಾರಾಟ ಮಾಡಿದರೆ ಹಣವನ್ನು ಪಡೆಯಬಹುದು. ಹೀಗಾಗಿ, ಬಂಗಾರ ನಿಜಕ್ಕೂ ಕಷ್ಟಕಾಲದ ಬಂಧುವಿನಂತೆ ನೆರವಿಗೆ ಬರುತ್ತದೆ. ಅದಕ್ಕಾಗಿಯೇ ಹೆಚ್ಚಿನವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ ಸದ್ಯಕ್ಕಂತು ಚಿನ್ನದ ಬೆಲೆ ಗಗನಕ್ಕೇರಿದೆ.

    ಆದರೆ ಈ ಚಿನ್ನ ಮಾರಾಟ ಅಥವಾ ಅಡವಿಡುವುದು ಅಂದ್ರೆ ತಕ್ಷಣ ಆಗುವ ಕೆಲಸವಲ್ಲ. ಅದು ಬ್ಯಾಂಕ್ ಆದರೂ ಸರಿ ಚಿನ್ನದ ಮಳಿಗೆಯಾದರೂ ಸರಿ, ಅದರ ಶುದ್ದತೆ ಪರೀಕ್ಷಿಸಿ, ಪೇಪರ್ ವರ್ಕ್ ಮುಗಿಸಿ ಹಣ ಪಡೆಯಲು ದಿನಪೂರ್ತಿ ಓಡಾಟ ಮಾಡಬೇಕಾಗುತ್ತದೆ. ತಂತ್ರಜ್ಞಾನದಲ್ಲಿ ದಿನಾ ಹೊಸತೇನಾದರೂ ಆವಿಷ್ಕಾರ ಮಾಡುವ ಚೀನಾ (China) ಇದೀಗ ಶಾಂಘೈನಲ್ಲಿ (Shanghai) ಚಿನ್ನದ ಎಟಿಎಂ (Gold ATM) ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣವೇ ಹಣವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಹಾಗಿದ್ರೆ ಏನಿದು ಚಿನ್ನ ಕರಗಿಸಿ ಹಣ ನೀಡುವ ಎಟಿಎಂ? ಇದರ ಕೆಲಸ ಏನು? ಭಾರತಕ್ಕೂ ಈ ಎಟಿಎಂ ಬರುತ್ತಾ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಗೋಲ್ಡ್‌ ಎಟಿಎಂಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
    ಶಾಂಘೈನ ಗೋಲ್ಡ್ ಎಟಿಎಂಗಳನ್ನು ಶೆನ್ಜೆನ್ ಮೂಲದ ಕಿಂಗ್‌ಹುಡ್ ಗ್ರೂಪ್ ತಯಾರಿಸಿದೆ. ಚೀನಾದ ರಾಜ್ಯ ಮಾಲೀಕತ್ವದ ಪ್ರಕಟಣೆಯಾದ ಸಿಕ್ಸ್ತ್ ಟೋನ್ ವರದಿಯ ಪ್ರಕಾರ, ಇವುಗಳನ್ನು ಚೀನಾದಾದ್ಯಂತ ಸುಮಾರು 100 ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಚಿನ್ನದ ಬೆಲೆ ಏರಿಕೆಯ ನಡುವೆವೇ ಈ ಎಟಿಎಂ ಅನ್ನು ಚೀನಾ ಪರಿಚಯಿಸಿದೆ.

    ಚಿನ್ನವನ್ನು 1,200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಿಸಲಾಗುತ್ತದೆ. ಇದು ನಿಮ್ಮನ್ನು ಸಾಂಪ್ರದಾಯಿಕ ಆಭರಣ ಅಂಗಡಿಗಳಿಗೆ ತೆರಳಿ, ಬಂಗಾರ ಕೊಟ್ಟು ಹಣ ತೆಗೆದುಕೊಳ್ಳುವುದಕ್ಕೆ ತ್ವರಿತ ಪರ್ಯಾಯ ಕೆಲಸ ಮಾಡುತ್ತದೆ. ಇದು ನೈಜ-ಸಮಯದ ಶುದ್ಧತೆಯ ಪರಿಶೀಲನೆಗಳು, ನೇರ ಬೆಲೆ ನಿಗದಿ ಮತ್ತು ಬ್ಯಾಂಕ್ ವರ್ಗಾವಣೆಗಳನ್ನು ಒದಗಿಸುತ್ತದೆ. ಇದು ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

    ಗೋಲ್ಡ್‌ ಎಟಿಎಂ ವೈಶಿಷ್ಟ್ಯಗಳೇನು?
    ಈ ಎಟಿಎಂ ಮೂಲಕ ಚಿನ್ನದ ವಹಿವಾಟು ನಡೆಸುವುದು ತುಂಬಾ ಸುಲಭ. ಮೊದಲನೆಯದಾಗಿ, ಈ ಯಂತ್ರವು ಚಿನ್ನದ ತೂಕವನ್ನು ಹೊಂದಿರುತ್ತದೆ. ಇದು ಚಿನ್ನವು 99.99% ಶುದ್ಧವಾಗಿದೆಯೇ ಎಂದು ಪರಿಶೀಲಿಸುತ್ತದೆ. ನಂತರ ಯಂತ್ರವು ಶಾಂಘೈ ಚಿನ್ನದ ವಿನಿಮಯ ಕೇಂದ್ರದ ನೇರ ದರದ ಪ್ರಕಾರ ಹಣವನ್ನು ಲೆಕ್ಕಾಚಾರ ಮಾಡುತ್ತದೆ. ಬಳಿಕ ಚಿನ್ನದ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾಯಿಸುತ್ತದೆ. ಇದರಿಂದ ಒಂದು ಸಣ್ಣ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.

    ಹಿಂದೆ, ಚಿನ್ನ ಮಾರಾಟ ಮಾಡಲು, ನೀವು ಆಭರಣ ಅಂಗಡಿಗೆ ಹೋಗಬೇಕಾಗಿತ್ತು. ಶುದ್ಧತೆ ಪರಿಶೀಲನೆಗಳು, ಬೆಲೆ ಚರ್ಚೆಗಳು ಇದೆಲ್ಲವೂ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಈಗ ಅದು ಅಗತ್ಯವಿಲ್ಲ. ಈ ಚಿನ್ನದ ಎಟಿಎಂಗಳು ನಿಮಗೆ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಚಿನ್ನವನ್ನು ಮಾರಾಟ ಮಾಡಲು ಅವಕಾಶ ನೀಡುತ್ತವೆ. ಇದು ರಾತ್ರಿಯೂ ಕೆಲಸ ಮಾಡುತ್ತದೆ. ಅಂದರೆ ತುರ್ತು ಸಂದರ್ಭಗಳಲ್ಲಿಯೂ ಸಹ ಈ ಯಂತ್ರ ತುಂಬಾ ಉಪಯುಕ್ತವಾಗಿದೆ.

    ಈ ಎಟಿಎಂನಲ್ಲಿ ಚಿನ್ನವನ್ನು ಸ್ವೀಕರಿಸಲು, ಅದು 99.99% ಶುದ್ಧವಾಗಿರಬೇಕು. ಶೀಘ್ರದಲ್ಲೇ ಶಾಂಘೈನಲ್ಲಿ ಮತ್ತೊಂದು ಚಿನ್ನದ ಎಟಿಎಂ ಅನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಕಂಪನಿಯ ಪ್ರಕಾರ, ಚಿನ್ನದ ಬೆಲೆಗಳು ಹೆಚ್ಚಾದಂತೆ, ಈ ಯಂತ್ರಗಳಿಗೆ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    ಭಾರತಕ್ಕೆ ಈ ಎಟಿಎಂ ಬರುತ್ತಾ?
    ಭಾರತದಲ್ಲಿಯೂ ಚಿನ್ನ ವಿಶೇಷ ಸ್ಥಾನಮಾನ ಹೊಂದಿದೆ. ಮದುವೆ, ಹಬ್ಬ, ಶುಭ ಸಂದರ್ಭಗಳಲ್ಲಿ ಚಿನ್ನಕ್ಕೆ ಬೇಡಿಕೆ ಇರುವುದು ಮಾತ್ರವಲ್ಲದೇ ಭದ್ರತೆ ಮತ್ತು ಭವಿಷ್ಯದಲ್ಲಿ ಹೂಡಿಕೆಯ ಪರಿಕಲ್ಪನೆಯೊಂದಿಗೆ ಸಹ ಇದನ್ನು ಖರೀದಿಸಲಾಗುತ್ತದೆ. ಆದ್ದರಿಂದ, ಅಂತಹ ಚಿನ್ನದ ಎಟಿಎಂಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆ ಬಲವಾಗಿ ಕಂಡುಬರುತ್ತಿದೆ.

    ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಚೀನಾದ ಶಾಂಘೈನಲ್ಲಿ ಪರಿಚಯಿಸಲಾದ ಗೋಲ್ಡ್ ಎಟಿಎಂಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಚಿನ್ನದ ಸಾಲ ನೀಡುವವರ ಸಹಾಯವಿಲ್ಲದೇ ಜನರು ತಕ್ಷಣವೇ ಚಿನ್ನವನ್ನು ಮಾರಾಟ ಮಾಡುವ ಒಂದು ಹೊಸ ವಿಧಾನವಾಗಿದೆ. ನಿಮ್ಮ ಆಭರಣಗಳನ್ನು ಹಾಕಿ, ಅದು ಶುದ್ಧತೆಯನ್ನು ಪರೀಕ್ಷಿಸುತ್ತದೆ, ಕರಗಿಸುತ್ತದೆ, ಮೌಲ್ಯವನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ತಕ್ಷಣವೇ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ ಎಂದು ಗೋಯೆಂಕಾ ಹೇಳಿದ್ದಾರೆ.

    ಚೀನಾದ ಗೋಲ್ಡ್‌ ಎಟಿಎಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಗೋಯೆಂಕಾ, ಈ ಎಟಿಎಂಗಳು ಪಾರದರ್ಶಕವಾಗಿವೆ ಮತ್ತು ಶೋಷಣೆ ರಹಿತವಾಗಿವೆ ಎಂದು ಹೇಳಿದ್ದಾರೆ. ಅಲ್ಲದೇ ಈ ತಂತ್ರಜ್ಞಾನವು ಭಾರತದಲ್ಲಿ ಚಿನ್ನದ ಸಾಲ ನೀಡುವವರಿಗೆ ಅಪಾಯವನ್ನುಂಟುಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಎಟಿಎಂ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಇದನ್ನು ಅನುಮತಿಸಿದರೆ, ಯಾರೂ ಬೀದಿಗಳಲ್ಲಿ ತೆರಳಬೇಕಾದರೆ ಆಭರಣಗಳನ್ನು ಧರಿಸುವುದಿಲ್ಲ. ಸರಗಳ್ಳತನವು ಹೆಚ್ಚಾಗುತ್ತದೆ. ಚೀನಾದಂತೆ, ನಮ್ಮ ನಗರಗಳಲ್ಲಿ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ, ಇದು ದುಃಖಕರವಾದ ಸತ್ಯ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಕಷ್ಟಕಾಲದಲ್ಲಿ ತಕ್ಷಣಕ್ಕೆ ಈ ಎಟಿಎಂಗಳು ಸಹಾಯಕವಾಗಬಹುದು ಎಂದಿದ್ದಾರೆ.

  • ಹೈದರಾಬಾದ್‌ನಲ್ಲಿ ದೇಶದ ಮೊದಲ ಚಿನ್ನದ ATM ಉದ್ಘಾಟನೆ – ಇಲ್ಲಿ ಹಣ ಅಲ್ಲ, ಚಿನ್ನ ಡ್ರಾ ಮಾಡ್ಬೋದು!

    ಹೈದರಾಬಾದ್‌ನಲ್ಲಿ ದೇಶದ ಮೊದಲ ಚಿನ್ನದ ATM ಉದ್ಘಾಟನೆ – ಇಲ್ಲಿ ಹಣ ಅಲ್ಲ, ಚಿನ್ನ ಡ್ರಾ ಮಾಡ್ಬೋದು!

    ಹೈದರಾಬಾದ್: ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದೀರಾ. ಆದರೆ ಚಿನ್ನವನ್ನು ಡ್ರಾ ಮಾಡುವುದನ್ನು ನೋಡಿದ್ದೀರಾ? ಹೌದು, ಹೈದರಾಬಾದ್‌ನ (Hyderabad) ಬೇಗಂಪೇಟೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಚಿನ್ನದ ಎಟಿಎಂ (Gold ATM) ಉದ್ಘಾಟಿಸಲಾಗಿದೆ.

    ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನೀವು ಬಯಸಿದ ಚಿನ್ನವನ್ನು ಡ್ರಾ ಮಾಡಬಹುದು. ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯಲ್ಲಿ ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮಾ ರೆಡ್ಡಿ ಅವರು ನೂತನ ಚಿನ್ನದ ಎಟಿಎಂ ಅನ್ನು ಉದ್ಘಾಟಿಸಿದ್ದಾರೆ. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್‌

    ಶೇ.99.99ರಷ್ಟು ಶುದ್ಧತೆಯ 0.5, 1, 2, 5, 10, 20, 50 ಮತ್ತು 100 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಡ್ರಾ ಮಾಡಬಹುದು. ಚಿನ್ನದ ಜೊತೆಗೆ ಅದರ ಗುಣಮಟ್ಟ ಖಾತರಿಪಡಿಸಲು ದಾಖಲೆಗಳನ್ನು ಸಹ ನೀಡಲಾಗುತ್ತದೆ ಎಂದು ಗೋಲ್ಡ್‌ ಸಿಕ್ಕಾ ಲಿಮಿಟೆಡ್‌ನ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ.

    ಗೋಲ್ಡ್‌ ಸಿಕ್ಕಾ ದೇಶಾದ್ಯಂತ ಸುಮಾರು 3,000 ಎಟಿಎಂಗಳನ್ನು ಸ್ಥಾಪಿಸಲು ಯೋಜಿಸಿದೆ. ಇದರಲ್ಲಿ ಶೇ.60-70ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲು ಚಿಂತಿಸಿದೆ. ಎಟಿಎಂಗಳು ಪ್ರಾಯೋಗಿಕವಾಗಿ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ನಗರದ ಗುಲ್ಜಾರ್‌ಹೌಸ್, ಸಿಕಂದರಾಬಾದ್, ಅಬಿಡ್ಸ್, ಪೆದ್ದಪಲ್ಲಿ, ವಾರಂಗಲ್ ಮತ್ತು ಕರೀಂನಗರದಲ್ಲಿ ಶೀಘ್ರದಲ್ಲೇ ಚಿನ್ನದ ಎಟಿಎಂಗಳನ್ನು ತೆರೆಯಲಾಗುವುದು ಎಂದು ತರುಜ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಗೆಂದು ವಿಮಾನವನ್ನೇ ಬುಕ್ ಮಾಡಿದ ಜೋಡಿ

    Live Tv
    [brid partner=56869869 player=32851 video=960834 autoplay=true]