Tag: gokarna mahabaleshwar temple

  • 4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

    4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

    ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯ (Gokarna Mahabaleshwar Temple) ಐತಿಹಾಸಿಕ ಮಹತ್ವ ಹೊಂದಿದ ದೇವಸ್ಥಾನ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ದೇಶ ವಿದೇಶದಿಂದ ಇಲ್ಲಿನ ಆತ್ಮಲಿಂಗ ದರ್ಶನಕ್ಕೆ ಬರುತ್ತಾರೆ. ಧಾರ್ಮಿಕವಾಗಿ ವಿಶೇಷ ಹೊಂದಿದ ಈ ದೇವಸ್ಥಾನದಲ್ಲಿ ಭಕ್ತರಿಗೆ ಆತ್ಮಲಿಂಗ ಸ್ಪರ್ಷಿಸಿ ಪೂಜೆಗೈಯ್ಯಲು ಅವಕಾಶ ನೀಡುವುದೇ ವಿಶೇಷವಾಗಿದೆ. ಇನ್ನು ಇಲ್ಲಿಗೆ ಬರುವಂತ ಭಕ್ತರು ಮಹಾಬಲೇಶ್ವರನಿಗೆ ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆ ಫಲಿಸಿದ ನಂತರ ದೇವಾಲಯಕ್ಕೆ ಆಗಮಿಸಿ ದೇವಾಲಯದ ಮೂಲಕವೇ ಪೂಜೆ ನೆರವೇರಿಸಲಾಗುತ್ತದೆ. ಆದರೆ, 2021 ರಿಂದ ದೇವಾಲಯದ ಮೂಲಕ ಹರಕೆ ವಿಶೇಷ ಪೂಜೆಗಳಿಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ, ಏನೇ ಪೂಜಾ ಕಾರ್ಯ ಮಾಡಬೇಕಾದರೂ ದೇವಾಲಯದ ಹೊರಗೆ ಮಾಡಬೇಕಿದೆ. ದೇವರಿಗೆ ಹರಕೆ ರೂಪದಲ್ಲಿ ಸಲ್ಲುವ ಸುವರ್ಣ ನಾಗಾಭರಣ ಪೂಜೆ, ಪಂಚಾಂಭೃತ ಅಭಿಷೇಕ, ನವಧಾನ್ಯ ಅಭಿಷೇಕ, ಕ್ಷೀರಾಭಿಷೇಕ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ.

    ವಿವಾದಕ್ಕೆ ಸಿಲುಕಿದ ಮಹಾಬಲೇಶ್ವರ
    2008 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು, ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಆಡಳಿತ ಕ್ರಮಗಳು ಬದಲಾದರೂ ಧಾರ್ಮಿಕ ಆಚರಣೆಗಳು ಬದಲಾಗಿರಲಿಲ್ಲ. ಬಂದ ಭಕ್ತರಿಗೆ ಊಟೋಪಚಾರ ಸಹ ಅಂದಿ‌ನ ಆಡಳಿತ ಕಮಿಟಿ ನೋಡಿಕೊಳ್ಳುತ್ತಿತ್ತು. ಇನ್ನು ಧಾರ್ಮಿಕ ಕಾರ್ಯಗಳು ಸಹ ಎಂದಿನಂತೆ ನಡೆಯುತ್ತಿದ್ದು, ಭಕ್ತರಿಗೆ ದೇವಾಲಯದ ಮೂಲಕ ವಿಶೇಷ ಪೂಜೆ ಪುನಸ್ಕಾರಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸ್ಥಳೀಯ ಅರ್ಚಕರಿಗೆ ನಿಯಮಗಳನ್ನು ಮಾಡಲು ಹೊರಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ

    ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ವಹಿಸಿದ ಬಗ್ಗೆ ಅನುವಂಶೀಯ ಅರ್ಚಕರು ವಿರೋಧ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗಡೆ ಎಂಬವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. 2021 ರ ಮೇ ತಿಂಗಳ ಕೊನೆಯಲ್ಲಿ ರಾಮಚಂದ್ರಾಪುರ ಮಠದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ವಾಪಾಸ್ ಪಡೆಯಲು ಸುಪ್ರೀಂ ಕೋರ್ಟ್​ ಸೂಚನೆ ನೀಡಿತ್ತು. ಗೋಕರ್ಣ ದೇವಸ್ಥಾನ ನಿರ್ವಹಣೆಗೆ ಸಮಿತಿ ಕೂಡ ರಚನೆ ಮಾಡಿತ್ತು. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಸಮಿತಿಗೆ ಹಸ್ತಾಂತರಿಸಲಾಗಿತ್ತು.

    ಆಡಳಿತ ಉಸ್ತುವಾರಿ ಸಮಿತಿಗೆ ಹಸ್ತಾಂತರವಾದ ನಂತರ ಕೋವಿಡ್ ಕಾರಣಕ್ಕೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುವ ಪೂಜೆಗೆ ನಿರ್ಬಂಧಿಸಲಾಯಿತು. ಆದರೆ, ಕೋವಿಡ್ ಮುಗಿದ ನಂತರವೂ ಈ ನಿಯಮ ಮುಂದುವರಿದಿದೆ. ಭಕ್ತರು ದೇವಾಲಯದ ಮೂಲಕ ಯಾವ ಪೂಜೆಯನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಆಡಳಿತ ಸಮಿತಿ ಇದೀಗ ಬದಲಾಗಿದ್ದು, ಹೊಸ ಸಮಿತಿ ಸಹ ಬಂದಿದೆ. ಇದರ ಮಧ್ಯೆ ದೇವರ ಪೂಜಾ ಹಕ್ಕಿನ ತೀರ್ಪು ಸಹ ಬಂದಿದ್ದು, ಅನುವಂಶೀಯ ಅರ್ಚಕರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಮಹಾಬಲೇಶ್ವರನಿಗೆ ಹರಕೆ ಪೂಜೆ ಸಲ್ಲಿಸಬೇಕು ಎಂದರೇ ದೇವಾಲಯದ ಹೊರಗೆ ಸಲ್ಲಿಸುವಂತಾಗಿದ್ದು, ದೂರದೂರಿಂದ ಬಂದ ಭಕ್ತರು ಮಹಾಬಲೇಶ್ವರನ ಸನ್ನಿಧಿಯಲ್ಲಿ ಹರಕೆ ತೀರಿಸದ ಪರಿಸ್ಥಿತಿ ನಾಲ್ಕು ವರ್ಷಗಳಿಂದ ಅಡ್ಡಿಯಾಗಿ ನಿಂತಿದೆ. ಇದನ್ನೂ ಓದಿ: ಕಾಂತಾರ ನಮ್ಮ ಗ್ರಹಿಕೆಯನ್ನು ಮೀರಿದ್ದು- ಹೊಗಳಿ ವೀಕ್ಷಿಸುವಂತೆ ಕನ್ನಡಿಗರಲ್ಲಿ ನಾರಾಯಣ ಗೌಡ ಮನವಿ

    ಯಾರು ಏನನ್ನುತ್ತಾರೆ?
    ದೇವಾಲಯ ರಾಮಚಂದ್ರಾಪುರ ಮಠದ ಬಳಿ ಇದ್ದ ಸಂದರ್ಭದಲ್ಲಿ ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ರಾಜ್ಯದ ಹೊರ ಊರುಗಳಿಂದ ಭಕ್ತರು ಮಹಾಬಲೇಶ್ವರನ ಸನ್ನಿಧಿಗೆ ದರ್ಶನ ಹಾಗೂ ಹರಕೆ ಪೂಜೆ ಸಲ್ಲಿಸಲು ಬರುತ್ತಾರೆ. ದೇವಾಲಯದಲ್ಲಿ ಮಹಾಬಲೇಶ್ವರ ಆತ್ಮಲಿಂಗಕ್ಕೆ ಸುವರ್ಣ ನಾಗಾಭರಣ ಪೂಜೆ, ಪಂಚಾಮೃತ ಅಭಿಷೇಕ, ನವಧಾನ್ಯ ಅಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಸೇರಿದಂತೆ ವಿವಿಧ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಅವಕಾಶ ಮಾಡಿಕೊಡದಿರುವುದು ತಪ್ಪು. ಭಕ್ತರ ನಂಬಿಕೆಗೆ ಚ್ಯುತಿ ಬರಬಾರದು. ಆದಷ್ಟು ಬೇಗ ಪ್ರಾರಂಭವಾಗಬೇಕು ಎಂಬುದು ನಮ್ಮ ಆಗ್ರಹ ಎಂಬುದು ರಾಮಚಂದ್ರಾಪುರ ಮಠದ ಮೂಲಕ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಜಿ.ಕೆ ಹೆಗಡೆಯವರ ಮಾತು.

    ರಾಜ್ಯ, ಹೊರರಾಜ್ಯದಿಂದ ಬರುವ ಭಕ್ತರು ದೇವಾಲಯಕ್ಕೆ ಬಂದು ಧಾರ್ಮಿಕ ಕಾರ್ಯ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಬೇಕು. ಕೋರ್ಟ್‌ನಲ್ಲಿ ತೀರ್ಪು ಆದಂತೆ ನಡೆದುಕೊಳ್ಳಬೇಕು ಎನ್ನುವುದು ದೇವಾಲಯದ ಅನುವಂಶೀಯ ಮುಖ್ಯ ಅರ್ಚಕರು, ಗೋಕರ್ಣ ಪುಣ್ಯಾಶ್ರಮದ ರಾಜಗೋಪಾಲ ಅಡಿ ಗುರುಜಿ ಆಗ್ರಹ.

    ಕಮರ್ಷಿಯಲ್ ಆದ ಪೂಜೆ!
    ದೇವಾಲಯದಿಂದ ಯಾವುದೇ ಪೂಜಾಕಾರ್ಯಗಳು ಭಕ್ತರಿಗೆ ಸಿಗದಿರುವುದನ್ನೇ ಬಂಡವಾಳ ಮಾಡಿಕೊಂಡ ವಾಣಿಜ್ಯೋದ್ಯಮಿಗಳು ಆನ್‌ಲೈನ್ ಮೂಲಕವೇ ಗೋಕರ್ಣದ ಶ್ರಾದ್ಧ ಕಾರ್ಯಗಳನ್ನು ಬುಕ್ ಮಾಡಿಸುತ್ತಿದ್ದಾರೆ. ಯಾವ ಯಾವ ಕಾರ್ಯಕ್ಕೆ ಏಷ್ಟು ಎಂಬ ಪಟ್ಟಿ ಹಾಕಲಾಗುತ್ತಿದ್ದು ಧಾರ್ಮಿಕ ಪಿತೃಕಾರ್ಯ ಮಾಡಿಸುವವರು ಆನ್‌ಲೈನ್ ಮೂಲಕ ಬುಕ್ ಮಾಡಬಹುದು. ಹೀಗೆ, ಬುಕ್ ಮಾಡುವವರಿಗೆ ಪ್ರಸಾದ ಪೂಜೆಯ ಪೋಟೋ ಕಳುಹಿಸಿ ಹಣ ಗಳಿಸುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯಿಂದಾಗಲಿ ಅಥವಾ ಆಡಳಿತದಿಂದಾಗಲಿ ಆನ್‌ಲೈನ್ ಸೇವೆ ಪೂಜೆಗಳು ಇಲ್ಲ. ಆದರೆ, ಅನಧಿಕೃತವಾಗಿ ಕೆಲವರು ಗೋಕರ್ಣದ ಹೆಸರಿನಲ್ಲಿ ಹಣ ಗಳಿಸಲು ಮುಂದಾಗಿರುವುದು ಸಹ ಭಕ್ತರ ನಂಬಿಕೆಗೆ ಪೆಟ್ಟು ಬೀಳುವಂತೆ ಮಾಡಿದೆ. ದೇವಾಲಯದಿಂದ ಭಕ್ತರಿಗೆ ಸೇವಾಕಾರ್ಯ ಆರಂಭ ಮಾಡಿದ್ದಲ್ಲಿ ಭಕ್ತರಿಗೂ ಅನುಕೂಲ ಆಗುವ ಜೊತೆ ದೇವಾಲಯಕ್ಕೂ ಆದಾಯ ಬರಲಿದೆ.

  • ಗೋಕರ್ಣ ಮಹಾಬಲೇಶ್ವರನನ್ನು ಮುಳುಗಿಸಿದ ಮಳೆ ನೀರು!

    ಗೋಕರ್ಣ ಮಹಾಬಲೇಶ್ವರನನ್ನು ಮುಳುಗಿಸಿದ ಮಳೆ ನೀರು!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ (Gokarna Mahabaleshwar Temple) ಅಬ್ಬರದ ಮಳೆಯಿಂದಾಗಿ ದೇವಾಲಯದ ಆತ್ಮಲಿಂಗ ಕೊಚ್ಚಿ ನೀರಿನಿಂದ ಆವೃತವಾಗಿ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ವಿಘ್ನ ಉಂಟು ಮಾಡಿತು.

    ದೇವಸ್ಥಾನದ ಸಿಬ್ಬಂದಿ ನಿರಂತರ ಪರಿಶ್ರಮದಿಂದ ಇದೀಗ ಗರ್ಭಗುಡಿಯಲ್ಲಿ ಸೇರಿದ್ದ ನೀರನ್ನು ಹೊರಹಾಕಲು ಯಶಸ್ವಿಯಾಗಿದ್ದಾರೆ. ಈ ಹಿಂದೆಯೂ ಸಹ ದೇವಸ್ಥಾನದ ಗರ್ಭಗುಡಿಗೆ ಕೊಳಚೆ ನೀರು ತುಂಬಿ ಸಮಸ್ಯೆ ಉಂಟುಮಾಡಿತ್ತು. ಇದನ್ನೂ ಓದಿ: ನರೇಂದ್ರ ಮೋದಿ ಪ್ರಮಾಣವಚನಕ್ಕೆ ಬಿಎಸ್‌ವೈಗೆ ಆಹ್ವಾನ

    ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಸ್ಮಶಾನಕಾಳಿ ಮಂದಿರದ ಹತ್ತಿರ ಸಂಗಮ ನಾಲಾಕ್ಕೆ ಸೇರುವ ಬಳಿ ಸೇತುವೆ ನಿರ್ಮಿಸಿದ್ದು, ಇದರ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಹಾಗೂ ಸೇತುವೆ ನಿರ್ಮಾಣದ ವೇಳೆ ಹಾಕಿದ ಮಣ್ಣನ್ನು ಆಡಳಿತ ತೆಗೆಯದಿರುವುದು ಈ ಆವಾಂತರಕ್ಕೆ ಕಾರಣವಾಗಿದೆ.

    ಸೇತುವೆ ನಿರ್ಮಾಣದ ವೇಳೆ ಮಂದಿರಕ್ಕೆ ತೊಂದರೆಯಾಗುವ ಕುರಿತು ಆಡಳಿತದವರ ಮಾಹಿತಿ ಹಾಗೂ ಅಭಿಪ್ರಾಯ ಕೇಳಬೇಕಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಮಳೆಗಾಲ ಪ್ರಾರಂಭದಲ್ಲೇ ಹೀಗಾದರೆ ಮುಂದೆ ಏನಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್‌ – ಅರಬ್ಬಿ ಸಮುದ್ರ ಭಾಗದಲ್ಲಿ ಮೀನುಗಾರಿಕೆ, ಪ್ರವಾಸಿಗರಿಗೆ ನಿರ್ಬಂಧ

    ಸಂಗಮ ನಾಲಾ ಸಮುದ್ರ ಸೇರುವಲ್ಲಿನ ಕೋಡಿಯನ್ನ (ಮರಳ ದಿನ್ನೆ) ಮಂದಿರದ ಸಿಬ್ಬಂದಿ ಸತತ ಎರಡು ತಾಸಿಗೂ ಅಧಿಕಕಾಲ ಕಡಿದು ನೀರು ಸರಾಗವಾಗಿ ಹೋಗುವಂತೆ ಬಿಡಿಸಿಕೊಟ್ಟರು. ಸುರಿಯುವ ಮಳೆಯನ್ನು ಲೆಕ್ಕಿಸಿದೆ ಶ್ರಮಿಸಿದ ಸಿಬ್ಬಂದಿ ಇದೀಗ ಗರ್ಭಗುಡಿಯಲ್ಲಿ ನೀರು ಖಾಲಿ ಮಾಡಿದ್ದಾರೆ. ನಂತರ ಗರ್ಭಗುಡಿ ಸ್ವಚ್ಛಗೊಳಿಸಿ ದಿನದ ಧಾರ್ಮಿಕ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

  • ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆಯ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ

    ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆಯ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ

    ಕಾರವಾರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ (Gokarna Mahabaleshwara Temple) ಪೂಜೆಯ ಹಕ್ಕಿಗಾಗಿ ಅರ್ಚಕರ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೂ ಬಿಡದೇ ಪ್ರತಿಭಟನೆ ನಡೆಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇವಾಲಯದಲ್ಲಿ ಈ ಘಟನೆ ನಡೆದಿದೆ. ನಂದಿ ಮಂಟಪದಲ್ಲಿ ತೀರ್ಥ ನೀಡುವ ಬಾರಿಗಾಗಿ ಎರಡು ಕುಟುಂಬದವರು ಕಾದಾಡಿದ್ದಾರೆ. ಜಂಬೆ ಕುಟುಂಬ ಹಾಗೂ ಗೋಪಿ ಕುಟುಂಬ ಹಕ್ಕಿಗಾಗಿ ಕೋರ್ಟ್ ಮೊರೆ ಹೋಗಿದ್ದವು. ಇದನ್ನೂ ಓದಿ: SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾಗೆ ಜಿ.ಪಂ ಸಿಇಓ ಅಭಿನಂದನೆ

    ಕಳೆದ ಕೆಲವು ತಿಂಗಳಿಂದ ನಂದಿ ಮಂಟಪದಲ್ಲಿ ಜಂಬೆ ಕುಟುಂಬ ತೀರ್ಥ ನೀಡುತ್ತಿದೆ. ಇಂದಿನಿಂದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕು ನಮ್ಮ ಬಾರಿ ಎಂದು ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಕುಟುಂಬ ತಗಾದೆ ತೆಗೆದಿದೆ.

    ನಂದಿ ಮಂಟಪದಲ್ಲಿ ತೀರ್ಥ ಕೊಡುವ ಹಕ್ಕಿನ ವಿಷಯವಾಗಿ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ದೇವಸ್ಥಾನದ ಒಳಗೇ ಗೋಪಿ ಕುಟುಂಬ ಪ್ರತಿಭಟನೆ ನಡೆಸಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ಹರಸಾಹಸ ಪಟ್ಟರು. ಇದನ್ನೂ ಓದಿ: SSLC Result: 73.40 % ಫಲಿತಾಂಶ – ಬಾಲಕಿಯರೇ ಮೇಲುಗೈ; ಉಡುಪಿಗೆ ಮೊದಲ ಸ್ಥಾನ