Tag: Gokarna

  • 4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

    4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

    ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯ (Gokarna Mahabaleshwar Temple) ಐತಿಹಾಸಿಕ ಮಹತ್ವ ಹೊಂದಿದ ದೇವಸ್ಥಾನ. ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ದೇಶ ವಿದೇಶದಿಂದ ಇಲ್ಲಿನ ಆತ್ಮಲಿಂಗ ದರ್ಶನಕ್ಕೆ ಬರುತ್ತಾರೆ. ಧಾರ್ಮಿಕವಾಗಿ ವಿಶೇಷ ಹೊಂದಿದ ಈ ದೇವಸ್ಥಾನದಲ್ಲಿ ಭಕ್ತರಿಗೆ ಆತ್ಮಲಿಂಗ ಸ್ಪರ್ಷಿಸಿ ಪೂಜೆಗೈಯ್ಯಲು ಅವಕಾಶ ನೀಡುವುದೇ ವಿಶೇಷವಾಗಿದೆ. ಇನ್ನು ಇಲ್ಲಿಗೆ ಬರುವಂತ ಭಕ್ತರು ಮಹಾಬಲೇಶ್ವರನಿಗೆ ವಿವಿಧ ರೀತಿಯಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆ ಫಲಿಸಿದ ನಂತರ ದೇವಾಲಯಕ್ಕೆ ಆಗಮಿಸಿ ದೇವಾಲಯದ ಮೂಲಕವೇ ಪೂಜೆ ನೆರವೇರಿಸಲಾಗುತ್ತದೆ. ಆದರೆ, 2021 ರಿಂದ ದೇವಾಲಯದ ಮೂಲಕ ಹರಕೆ ವಿಶೇಷ ಪೂಜೆಗಳಿಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ, ಏನೇ ಪೂಜಾ ಕಾರ್ಯ ಮಾಡಬೇಕಾದರೂ ದೇವಾಲಯದ ಹೊರಗೆ ಮಾಡಬೇಕಿದೆ. ದೇವರಿಗೆ ಹರಕೆ ರೂಪದಲ್ಲಿ ಸಲ್ಲುವ ಸುವರ್ಣ ನಾಗಾಭರಣ ಪೂಜೆ, ಪಂಚಾಂಭೃತ ಅಭಿಷೇಕ, ನವಧಾನ್ಯ ಅಭಿಷೇಕ, ಕ್ಷೀರಾಭಿಷೇಕ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ.

    ವಿವಾದಕ್ಕೆ ಸಿಲುಕಿದ ಮಹಾಬಲೇಶ್ವರ
    2008 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವು, ಗೋಕರ್ಣ ದೇವಸ್ಥಾನವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಹಲವು ಆಡಳಿತ ಕ್ರಮಗಳು ಬದಲಾದರೂ ಧಾರ್ಮಿಕ ಆಚರಣೆಗಳು ಬದಲಾಗಿರಲಿಲ್ಲ. ಬಂದ ಭಕ್ತರಿಗೆ ಊಟೋಪಚಾರ ಸಹ ಅಂದಿ‌ನ ಆಡಳಿತ ಕಮಿಟಿ ನೋಡಿಕೊಳ್ಳುತ್ತಿತ್ತು. ಇನ್ನು ಧಾರ್ಮಿಕ ಕಾರ್ಯಗಳು ಸಹ ಎಂದಿನಂತೆ ನಡೆಯುತ್ತಿದ್ದು, ಭಕ್ತರಿಗೆ ದೇವಾಲಯದ ಮೂಲಕ ವಿಶೇಷ ಪೂಜೆ ಪುನಸ್ಕಾರಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸ್ಥಳೀಯ ಅರ್ಚಕರಿಗೆ ನಿಯಮಗಳನ್ನು ಮಾಡಲು ಹೊರಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ

    ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಸರ್ಕಾರ ವಹಿಸಿದ ಬಗ್ಗೆ ಅನುವಂಶೀಯ ಅರ್ಚಕರು ವಿರೋಧ ವ್ಯಕ್ತಪಡಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಾಲಚಂದ್ರ ದೀಕ್ಷಿತ್ ಮತ್ತು ನರಹರಿ ಕೃಷ್ಣ ಹೆಗಡೆ ಎಂಬವರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. 2021 ರ ಮೇ ತಿಂಗಳ ಕೊನೆಯಲ್ಲಿ ರಾಮಚಂದ್ರಾಪುರ ಮಠದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ವಾಪಾಸ್ ಪಡೆಯಲು ಸುಪ್ರೀಂ ಕೋರ್ಟ್​ ಸೂಚನೆ ನೀಡಿತ್ತು. ಗೋಕರ್ಣ ದೇವಸ್ಥಾನ ನಿರ್ವಹಣೆಗೆ ಸಮಿತಿ ಕೂಡ ರಚನೆ ಮಾಡಿತ್ತು. ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ನೇತೃತ್ವದ ಸಮಿತಿಗೆ ಹಸ್ತಾಂತರಿಸಲಾಗಿತ್ತು.

    ಆಡಳಿತ ಉಸ್ತುವಾರಿ ಸಮಿತಿಗೆ ಹಸ್ತಾಂತರವಾದ ನಂತರ ಕೋವಿಡ್ ಕಾರಣಕ್ಕೆ ಭಕ್ತರು ಹರಕೆ ರೂಪದಲ್ಲಿ ಸಲ್ಲಿಸುವ ಪೂಜೆಗೆ ನಿರ್ಬಂಧಿಸಲಾಯಿತು. ಆದರೆ, ಕೋವಿಡ್ ಮುಗಿದ ನಂತರವೂ ಈ ನಿಯಮ ಮುಂದುವರಿದಿದೆ. ಭಕ್ತರು ದೇವಾಲಯದ ಮೂಲಕ ಯಾವ ಪೂಜೆಯನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಆಡಳಿತ ಸಮಿತಿ ಇದೀಗ ಬದಲಾಗಿದ್ದು, ಹೊಸ ಸಮಿತಿ ಸಹ ಬಂದಿದೆ. ಇದರ ಮಧ್ಯೆ ದೇವರ ಪೂಜಾ ಹಕ್ಕಿನ ತೀರ್ಪು ಸಹ ಬಂದಿದ್ದು, ಅನುವಂಶೀಯ ಅರ್ಚಕರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಮಹಾಬಲೇಶ್ವರನಿಗೆ ಹರಕೆ ಪೂಜೆ ಸಲ್ಲಿಸಬೇಕು ಎಂದರೇ ದೇವಾಲಯದ ಹೊರಗೆ ಸಲ್ಲಿಸುವಂತಾಗಿದ್ದು, ದೂರದೂರಿಂದ ಬಂದ ಭಕ್ತರು ಮಹಾಬಲೇಶ್ವರನ ಸನ್ನಿಧಿಯಲ್ಲಿ ಹರಕೆ ತೀರಿಸದ ಪರಿಸ್ಥಿತಿ ನಾಲ್ಕು ವರ್ಷಗಳಿಂದ ಅಡ್ಡಿಯಾಗಿ ನಿಂತಿದೆ. ಇದನ್ನೂ ಓದಿ: ಕಾಂತಾರ ನಮ್ಮ ಗ್ರಹಿಕೆಯನ್ನು ಮೀರಿದ್ದು- ಹೊಗಳಿ ವೀಕ್ಷಿಸುವಂತೆ ಕನ್ನಡಿಗರಲ್ಲಿ ನಾರಾಯಣ ಗೌಡ ಮನವಿ

    ಯಾರು ಏನನ್ನುತ್ತಾರೆ?
    ದೇವಾಲಯ ರಾಮಚಂದ್ರಾಪುರ ಮಠದ ಬಳಿ ಇದ್ದ ಸಂದರ್ಭದಲ್ಲಿ ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ರಾಜ್ಯದ ಹೊರ ಊರುಗಳಿಂದ ಭಕ್ತರು ಮಹಾಬಲೇಶ್ವರನ ಸನ್ನಿಧಿಗೆ ದರ್ಶನ ಹಾಗೂ ಹರಕೆ ಪೂಜೆ ಸಲ್ಲಿಸಲು ಬರುತ್ತಾರೆ. ದೇವಾಲಯದಲ್ಲಿ ಮಹಾಬಲೇಶ್ವರ ಆತ್ಮಲಿಂಗಕ್ಕೆ ಸುವರ್ಣ ನಾಗಾಭರಣ ಪೂಜೆ, ಪಂಚಾಮೃತ ಅಭಿಷೇಕ, ನವಧಾನ್ಯ ಅಭಿಷೇಕ, ಕ್ಷೀರಾಭಿಷೇಕ, ಬಿಲ್ವಪತ್ರೆ ಸೇರಿದಂತೆ ವಿವಿಧ ಪೂಜೆಗಳನ್ನು ಭಕ್ತರು ದೇವಸ್ಥಾನದಲ್ಲಿ ಮಾಡಲು ಅವಕಾಶ ಮಾಡಿಕೊಡದಿರುವುದು ತಪ್ಪು. ಭಕ್ತರ ನಂಬಿಕೆಗೆ ಚ್ಯುತಿ ಬರಬಾರದು. ಆದಷ್ಟು ಬೇಗ ಪ್ರಾರಂಭವಾಗಬೇಕು ಎಂಬುದು ನಮ್ಮ ಆಗ್ರಹ ಎಂಬುದು ರಾಮಚಂದ್ರಾಪುರ ಮಠದ ಮೂಲಕ ಮಹಾಬಲೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಜಿ.ಕೆ ಹೆಗಡೆಯವರ ಮಾತು.

    ರಾಜ್ಯ, ಹೊರರಾಜ್ಯದಿಂದ ಬರುವ ಭಕ್ತರು ದೇವಾಲಯಕ್ಕೆ ಬಂದು ಧಾರ್ಮಿಕ ಕಾರ್ಯ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರಿಯಾಗಬೇಕು. ಕೋರ್ಟ್‌ನಲ್ಲಿ ತೀರ್ಪು ಆದಂತೆ ನಡೆದುಕೊಳ್ಳಬೇಕು ಎನ್ನುವುದು ದೇವಾಲಯದ ಅನುವಂಶೀಯ ಮುಖ್ಯ ಅರ್ಚಕರು, ಗೋಕರ್ಣ ಪುಣ್ಯಾಶ್ರಮದ ರಾಜಗೋಪಾಲ ಅಡಿ ಗುರುಜಿ ಆಗ್ರಹ.

    ಕಮರ್ಷಿಯಲ್ ಆದ ಪೂಜೆ!
    ದೇವಾಲಯದಿಂದ ಯಾವುದೇ ಪೂಜಾಕಾರ್ಯಗಳು ಭಕ್ತರಿಗೆ ಸಿಗದಿರುವುದನ್ನೇ ಬಂಡವಾಳ ಮಾಡಿಕೊಂಡ ವಾಣಿಜ್ಯೋದ್ಯಮಿಗಳು ಆನ್‌ಲೈನ್ ಮೂಲಕವೇ ಗೋಕರ್ಣದ ಶ್ರಾದ್ಧ ಕಾರ್ಯಗಳನ್ನು ಬುಕ್ ಮಾಡಿಸುತ್ತಿದ್ದಾರೆ. ಯಾವ ಯಾವ ಕಾರ್ಯಕ್ಕೆ ಏಷ್ಟು ಎಂಬ ಪಟ್ಟಿ ಹಾಕಲಾಗುತ್ತಿದ್ದು ಧಾರ್ಮಿಕ ಪಿತೃಕಾರ್ಯ ಮಾಡಿಸುವವರು ಆನ್‌ಲೈನ್ ಮೂಲಕ ಬುಕ್ ಮಾಡಬಹುದು. ಹೀಗೆ, ಬುಕ್ ಮಾಡುವವರಿಗೆ ಪ್ರಸಾದ ಪೂಜೆಯ ಪೋಟೋ ಕಳುಹಿಸಿ ಹಣ ಗಳಿಸುತ್ತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯಿಂದಾಗಲಿ ಅಥವಾ ಆಡಳಿತದಿಂದಾಗಲಿ ಆನ್‌ಲೈನ್ ಸೇವೆ ಪೂಜೆಗಳು ಇಲ್ಲ. ಆದರೆ, ಅನಧಿಕೃತವಾಗಿ ಕೆಲವರು ಗೋಕರ್ಣದ ಹೆಸರಿನಲ್ಲಿ ಹಣ ಗಳಿಸಲು ಮುಂದಾಗಿರುವುದು ಸಹ ಭಕ್ತರ ನಂಬಿಕೆಗೆ ಪೆಟ್ಟು ಬೀಳುವಂತೆ ಮಾಡಿದೆ. ದೇವಾಲಯದಿಂದ ಭಕ್ತರಿಗೆ ಸೇವಾಕಾರ್ಯ ಆರಂಭ ಮಾಡಿದ್ದಲ್ಲಿ ಭಕ್ತರಿಗೂ ಅನುಕೂಲ ಆಗುವ ಜೊತೆ ದೇವಾಲಯಕ್ಕೂ ಆದಾಯ ಬರಲಿದೆ.

  • ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ

    ಗೋಕರ್ಣ ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮರಳಿ ತಾಯ್ನಾಡಿಗೆ

    ಕಾರವಾರ: ಗೋಕರ್ಣದ (Gokarna) ರಾಮತೀರ್ಥ ಅರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ರಷ್ಯಾದ ಮಹಿಳೆ (Russian Woman) ನೀನಾ ಕುಟೀನಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕೊನೆಗೂ ಸ್ವಧೇಶಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ.

    ಜುಲೈ 10 ರಂದು ಗೋಕರ್ಣದ ಪೊಲೀಸರು ಬೀಟ್‌ನಲ್ಲಿ ತಪಾಸಣೆಗೆ ತೆರಳಿದ್ದಾಗ ರಾಮತೀರ್ಥ ಅರಣ್ಯದ ಗುಹೆಯಲ್ಲಿ ರಷ್ಯಾ ಮಹಿಳೆ ತನ್ನ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ಗುಹೆಯಲ್ಲಿ ವಾಸವಾಗಿರುವುದು ಬೆಳಕಿಗೆ ಬಂದಿತ್ತು. ಇವರನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಈ ಕುರಿತು ʻಪಬ್ಲಿಕ್ ಟಿವಿʼ ವಿಸೃತ ವರದಿ ಮಾಡಿತ್ತು. ಇದಾದ ನಂತರ ಈಕೆಯ ಪತಿ ರಷ್ಯಾ ನಿವಾಸಿ ಡೋರ್‌ಶ್ಲೋಮೋ ಗೋಲ್ಡ್‌ಸ್ಟೈನ್ ಬೆಂಗಳೂರು ಹೈಕೋರ್ಟ್‌ನಲ್ಲಿ ರಷ್ಯಾಗೆ ಕಳಿಹಿಸುವಂತೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಇದೇ ರೀತಿ 20 ದೇಶದ ಕಾಡಿನಲ್ಲಿ ವಾಸವಿದ್ದೆವು – ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮಾತು

    ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ ತನಿಖೆ ನಡೆಸಿ ರಷ್ಯಾಗೆ ಕಳುಹಿಸಲು ಸೂಚಿಸಿತ್ತು. ಗೋಕರ್ಣ ಪೊಲೀಸರು ಈಕೆಯ ಮಕ್ಕಳ ಡಿ.ಎನ್.ಎ ಪರೀಕ್ಷೆ ನಡೆಸಿ ಈಕೆಯದ್ದೇ ಮಕ್ಕಳು ಎಂದು ದೃಡಪಡಿಸಿಕೊಂಡಿದ್ದಾರೆ. ಇನ್ನೂ ಮಹಿಳೆಯ ವಿಸಾ ಅವಧಿ ಮುಗಿದಿತ್ತು ಎಂದು ಪೊಲೀಸರ ಪರಿಶೀಲನೆ ವೇಳೆ ತಿಳಿದು ಬಂದಿತ್ತು. ಮಹಿಳೆಯನ್ನು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ರಷ್ಯಾಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್‌ | ನನ್ಗೆ ಪ್ರಧಾನಿ ಗೊತ್ತು – ಪೊಲೀಸರಿಗೇ ಬೆದರಿಕೆ ಹಾಕಿದ ಸ್ವಾಮಿ ಚೈತನ್ಯಾನಂದ ಸರಸ್ವತಿ

  • ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ

    ಕಾರವಾರ: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 (Air India Crash) ದುರಂತಕ್ಕೀಡಾಗಿ 260 ಮಂದಿ ಮೃತಪಟ್ಟಿದ್ದರು. ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ (Gokarna) ಮೃತರ ಪಿತೃಕಾರ್ಯ (Pitru Karya) ನೆರವೇರಿಸಲಾಯಿತು.

    ಜೂನ್ 12 ರಂದು ದುರಂತ ಸಂಭವಿಸಿ 260 ಜನ ಮೃತಪಟ್ಟಿದ್ದರು. ಇದರಲ್ಲಿ ಭಾರತ ಹಾಗೂ ಲಂಡನ್ ಪ್ರಜೆಗಳು ಸಹ ಅಸುನೀಗಿದ್ದರು. ಈ ಘಟನೆ ನಡೆದು ನಾಲ್ಕು ತಿಂಗಳ ನಂತರ ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಗಿದೆ. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

    ಪಿತೃಕಾರ್ಯಕ್ಕೆ ಪ್ರಾಮುಖ್ಯತೆ ಹೊಂದಿರುವ ಗೋಕರ್ಣದಲ್ಲಿ ಮೃತರ ಕುಟುಂಬದವರು ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬೇಡಿಕೊಳ್ಳುವುದು ಸಂಪ್ರದಾಯ. ದೇಶ ವಿದೇಶದಿಂದಲೂ ಪಿತೃಪಕ್ಷದ ಸಂದರ್ಭದಲ್ಲಿ ಗೋಕರ್ಣಕ್ಕೆ ಬಂದು ಪಿತೃಕಾರ್ಯ ನಡೆಸಿ, ಇಲ್ಲಿಯೇ ಅಸ್ತಿ ವಿಸರ್ಜಿಸುತ್ತಾರೆ. ಹೀಗಾಗಿ, ಮಹಾಬಲೇಶ್ವರ ದೇವಸ್ಥಾನ ಕಾಶಿಯಷ್ಟೇ ಪ್ರಾಮುಖ್ಯತೆ ಹೊಂದಿದೆ.

    ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಅಹಮದಾಬಾದ್ ವಿಮಾನ ದುರಂತ (Ahmedabad Plane Crash) ಮಡಿದ 260 ಜನರ ಪಿತೃಕಾರ್ಯ ನಡೆಸಲಾಗಿದೆ. ದೇಶದಲ್ಲಿ ನಡೆದ ದೊಡ್ಡ ದುರಂತದ ಸಾಲಿಗೆ ಈ ವಿಮಾನ ದುರಂತ ಸೇರಿಹೋಗಿತ್ತು. ಹೀಗಾಗಿ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಹೆಸರನ್ನೂ ಸಹ ಪಡೆದು ಅವರ ಹೆಸರಲ್ಲಿ ಎಳ್ಳು-ನೀರಿನ ಅರ್ಗೆ ಸಮರ್ಪಿಸಿ ಪಿಂಡ ಪ್ರದಾನವನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜು ಅಡಿಯವರು ತಮ್ಮ ಪುಣ್ಯಾಶ್ರಮದಲ್ಲಿ ನೆರವೇರಿಸಿದರು. ಇದನ್ನೂ ಓದಿ: Photo Gallery: ಅಹಮದಾಬಾದ್‌ನಲ್ಲಿ ವಿಮಾನ ದುರಂತ ನಡೆದ ಸ್ಥಳಕ್ಕೆ ಮೋದಿ ಭೇಟಿ

    ಗೋಕರ್ಣದ ಪುಣ್ಯಾಶ್ರಮದಲ್ಲಿ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜುಗೋಪಾಲ ಅಡಿ ಅವರ ನೇತೃತ್ವದಲ್ಲಿ 30 ಜನ ಪುರೋಹಿತರೊಂದಿಗೆ ಈ ಪಿತೃಕಾರ್ಯವನ್ನು ಕೈಗೊಳ್ಳಲಾಯಿತು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ದಿವಂಗತ ವಿಜಯ್ ರೂಪಾನಿ ಅವರಿಂದ ಹಿಡಿದು ಲಂಡನ್‌ನ ಮೃತ ಪ್ರಜೆಗಳಿಗೂ ಇಲ್ಲಿ ಪಿತೃಕಾರ್ಯ ನಡೆಸಲಾಯಿತು. ಎರಡು ದಿನದ ಈ ಕಾರ್ಯದಲ್ಲಿ ವಿಘ್ನ ನಿವಾರಕ ಗಣಪತಿಯ ಪೂಜೆ ನಡೆಸಿ, ನಾರಾಯಣ, ಈಶ್ವರನ ನೆನೆದು ನಾರಾಯಣ ಬಲಿ, ದಶ ಪಿಂಡ ಪ್ರದಾನ ಮಾಡಲಾಯ್ತು. ನಂತರ ಗೋದಾನ, ವಸ್ತ್ರದಾನ ಮಾಡಲಾಗಿದ್ದು, ಇಂದು ನೂರಾರು ಜನರಿಗೆ ಮೃತರ ಹೆಸರಿನಲ್ಲಿ ಅನ್ನ ಸಂತರ್ಪಣೆ ಕಾರ್ಯ ಸಹ ಕೈಗೊಳ್ಳಲಾಗಿದೆ.

    ಈ ಕಾರ್ಯವನ್ನು ಮುಂದೆ ದೇಶದಲ್ಲಿ ಈರೀತಿಯ ಘಟನೆ ನಡೆಯದಿರಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಬೇಕು ಎಂಬ ಉದ್ದೇಶದಿಂದ ಮಾಡಲಾಗಿದೆ. ಪಿತೃಮಾಸದ ಈ ಸಂದರ್ಭದಲ್ಲಿ ಪುಣ್ಯಾಶ್ರಮದ ಮಹಾಬಲೇಶ್ವರ ದೇವಾಲಯದ ಮುಖ್ಯ ಅರ್ಚಕ ರಾಜು ಗೋಪಾಲ ಅಡಿ ಅವರಿಂದ ಪಿತೃಕಾರ್ಯ ನೆರವೇರಿಸಲಾಗಿದೆ.

  • ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

    ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

    – ಗುಹೆಯಲ್ಲೇ ಒಂದು ಮಗುವಿಗೆ ಜನ್ಮ ನೀಡಿದ್ದ ನೀನಾ ಕುಟಿನಾ

    ಬೆಂಗಳೂರು/ಕಾರವಾರ: ದಟ್ಟಕಾನನದ ಗುಹೆಯಲ್ಲಿ ವಾಸವಿದ್ದ ರಷ್ಯಾ (Russia) ಮಹಿಳೆ ಕುರಿತು ದಿನಕ್ಕೊಂದು ವಿಷಯಗಳು ಬಯಲಾಗುತ್ತಿದ್ದು, ಸದ್ಯ ಆಕೆಯ ಪ್ರಿಯಕರ ತನ್ನ ಮಕ್ಕಳನ್ನು ಹುಡುಕಿಕೊಂಡು ಬಂದಿದ್ದಾರೆ.

    ಮಹಿಳೆ ನೀನಾ ಕುಟಿನಾ ರಷ್ಯಾ ಪ್ರಜೆಯಾಗಿದ್ದು, ಪ್ರಿಯಕರ ಇಸ್ರೇಲ್ (Israel) ಪ್ರಜೆ ಡ್ರೋರ್ ಗೋಲ್ಡ್ ಸ್ಪೇನ್ ವ್ಯಾಪಾರಿ, ಮ್ಯೂಜಿಸಿಯನ್ ಆಗಿದ್ದರು. ಮಕ್ಕಳನ್ನು ಪ್ರಿಯಾ ಮತ್ತು ಅಮಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಇದೇ ರೀತಿ 20 ದೇಶದ ಕಾಡಿನಲ್ಲಿ ವಾಸವಿದ್ದೆವು – ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮಾತು

    ಸುದ್ದಿ ಮಾಧ್ಯಮದೊಂದಿಗೆ ಪ್ರಿಯಕರ ಮಾತನಾಡಿ, ಗೋವಾಗೆ ತೆರಳಿದ್ದಾಗ ನೀನಾ ಕುಟಿನಾ ಹಾಗೂ ನನ್ನ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. 2017ರಿಂದ 2024ರವರೆಗೂ ನಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿದ್ದೆವು. ವರ್ಷದಲ್ಲಿ ಆರು ತಿಂಗಳು ಗೋವಾದಲ್ಲಿ ಇರುತ್ತಿದ್ದೆವು. ಇಬ್ಬರು ಕೂಡ ದೊಡ್ಡದಾದ ವಿಲ್ಲಾದಲ್ಲಿ ವಾಸವಾಗಿದ್ದೆವು. 2019ರಿಂದಲೂ ನಾನು ಆಕೆಗೆ ಪ್ರತಿ ತಿಂಗಳು 400 ಡಾಲರ್ (3.5 ಲಕ್ಷ) ಹಣವನ್ನು ಕೊಡುತ್ತಿದ್ದೆ. ಆದರೆ 2024ರ ಡಿಸೆಂಬರ್‌ನಲ್ಲಿ ನೀನಾ ಯಾವುದೇ ಮಾಹಿತಿ ನೀಡದೇ ಗೋವಾದಿಂದ ಹೊರಟು ಹೋಗಿದ್ದಳು. ಬಳಿಕ ನಾನು ಪಣಜಿಯಲ್ಲಿ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿದೆ. ಬಳಿಕ ಮಾರ್ಚ್ ತಿಂಗಳಲ್ಲಿ ಆಕೆ ಮಕ್ಕಳ ಜೊತೆಗೆ ಗೋಕರ್ಣದಲ್ಲಿ ಇರುವುದು ಗೊತ್ತಾಗಿದೆ ಎಂದು ತಿಳಿಸಿದರು.

    ನನ್ನ ಮಕ್ಕಳನ್ನು ನನಗೆ ಕೊಡಿ, ಸುರಕ್ಷಿತವಾದ ಜಾಗದಲ್ಲಿ ನನ್ನ ಮಕ್ಕಳು ಬೆಳೆಯಬೇಕು. ಆರು ವರ್ಷವಾದ್ರೂ ಶಿಕ್ಷಣ ಕೊಡಿಸಿಲ್ಲ. ಶಾಲೆಗೆ ಕಳಿಸಬೇಕು ಎಂದಿದ್ದಾರೆ. ಆದರೆ ಮಹಿಳೆ ಪ್ರಿಯಕರನ ಜೊತೆ ಮಕ್ಕಳನ್ನು ಕಳಿಸಲು ನಿರಾಕರಿಸುತ್ತಿದ್ದು, ಮಕ್ಕಳು ಪರಿಸರದಲ್ಲೇ ಬೆಳೆಯಬೇಕು ಎಂದು ವಾದ ಮಾಡುತ್ತಿದ್ದಾರೆ. ಇತ್ತ ಪ್ರಿಯಕರ ಮಕ್ಕಳಿಗೆ ಸೋಶಿಯಲ್ ಲೈಫ್ ಬೇಕು, ಎಜುಕೇಷನ್ ಬೇಕು, ಮಕ್ಕಳನ್ನು ಕಸ್ಟಡಿಗೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

    ಮೂಲಗಳ ಪ್ರಕಾರ, ನೀನಾ ಗುಹೆಯಲ್ಲಿದ್ದಾಗ ಒಂದು ಮಗುವಿಗೆ ಜನ್ಮ ನೀಡಿದ್ದು, ಈ ಎರಡು ಮಕ್ಕಳ ಹೊರತಾಗಿ ರಷ್ಯಾದಲ್ಲಿ ಇನ್ನೊಂದು ಮಗುವಿದೆ ಎಂದು ತಿಳಿದು ಬಂದಿದೆ.

    ಇತ್ತೀಚಿಗೆ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆ ನೀನಾ, ನನ್ನ ದೊಡ್ಡ ಮಗ ಸಾವನ್ನಪ್ಪಿದ್ದ. ಹೀಗಾಗಿ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜೊತೆಗಿದ್ದು ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದನೆಯ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಗುಹೆಯಲ್ಲಿ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ. ಇನ್ನೂ ನನ್ನ ಮಕ್ಕಳು ಯಾವತ್ತೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಒಳ್ಳೊಳ್ಳೆ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದೆವು ಎಂದಿದ್ದರು.

    ನಾವು ಕಾಡಿನ ಮಧ್ಯೆ ಇದ್ದ ನದಿಯಲ್ಲಿ ಈಜುತ್ತಿದ್ದೆವು, ಮಕ್ಕಳು ಕೂಡ ಈಜುತ್ತಿದ್ದರು. ಮಕ್ಕಳು ವಾಟರ್ ಫಾಲ್ಸ್ನಲ್ಲಿ ಚೆನ್ನಾಗಿ ಆಟವಾಡುತ್ತಿದ್ದರು. ಚೆನ್ನಾಗಿ ನಿದ್ದೆ ಕೂಡ ಮಾಡುತ್ತಿದ್ದೆವು. ನಾವು ಮೂರು ಜನ ಪ್ರಕೃತಿಯ ಮಧ್ಯೆ ಖುಷಿಯಾಗಿ ಜೀವನ ಮಾಡುತ್ತಿದ್ದೆವು. ಹಳ್ಳಿಯ ಪಕ್ಕದಲ್ಲಿಯೇ ಈ ಗುಹೆ ಇತ್ತು. ಗುಹೆ ಅಂದ್ರೆ ತೀರಾ ಸಣ್ಣ ಇಕ್ಕಟ್ಟು ಗುಹೆ ಅಲ್ಲ, ವಾಸಕ್ಕೆ ಯೋಗ್ಯವಾಗಿದ್ದ ಗುಹೆಯಾಗಿತ್ತು. ಇನ್ನೂ ಗುಹೆಯೊಳಗೆ ಹಾವುಗಳು ಆಗಾಗ ಹರಿದಾಡುತ್ತಿದ್ದವು, ಆದರೆ ನಾವು ಅವುಗಳಿಗೆ ಏನು ಮಾಡುತ್ತಿರಲಿಲ್ಲ. ಹೀಗಾಗಿ ಹಾವುಗಳು ಸುಮ್ಮನೇ ಹೋಗುತ್ತಿದ್ದವು. ನಾನು ಯಾವತ್ತೂ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಹೋದರು. ಪ್ರಕೃತಿಯ ಮಧ್ಯೆ ಇದ್ದೆವು, ಹೀಗಾಗಿ ಆರೋಗ್ಯವಾಗಿಯೇ ಇರುತ್ತೇವೆ ಎಂದು ತಿಳಿಸಿದ್ದರು.

    ಜು.12ರಂದು ಗೋಕರ್ಣದ ರಾಮತೀರ್ಥ ದಟ್ಟಾರಣ್ಯದಲ್ಲಿನ ಗುಹೆಯಲ್ಲಿ ಏಕಾಂತವಾಗಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆ ಹಾಗೂ ಎರಡು ಪುಟ್ಟ ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು. ಸದ್ಯ ಆಕೆಯನ್ನು ತುಮಕೂರಿನಲ್ಲಿರುವ ಎಫ್‌ಆರ್‌ಸಿ (ಅಕ್ರಮವಾಗಿ ವಲಸೆ ಬಂದ ಮಹಿಳೆಯರ ಬಂಧನ ಕೇಂದ್ರ) ಕೇಂದ್ರಕ್ಕೆ ಕರೆತರಲಾಗಿದೆ.ಇದನ್ನೂ ಓದಿ: Uttara Kannada | ದಟ್ಟ ಅರಣ್ಯದ ಗುಹೆಯಲ್ಲಿ ಚಿಕ್ಕ ಮಕ್ಕಳೊಂದಿಗೆ ವಾಸ – ರಷ್ಯಾ ಮೂಲದ ಮಹಿಳೆಯ ರಕ್ಷಣೆ

  • ಗೋಕರ್ಣ ಸಮುದ್ರದಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ ವಿದೇಶಿಗನ ರಕ್ಷಣೆ

    ಗೋಕರ್ಣ ಸಮುದ್ರದಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ ವಿದೇಶಿಗನ ರಕ್ಷಣೆ

    ಕಾರವಾರ: ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿದ್ದ ವಿದೇಶಿಗನನ್ನು ಲೈಫ್‌ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರಿಸ್‌ಮಸ್ ಹಾಗೂ ಹೊಸವರ್ಷಾಚರಣೆಗಾಗಿ ದೇಶ, ವಿದೇಶದ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಆದರೆ, ಪ್ರವಾಸಕ್ಕೆ ಬಂದ ಜನರು ಮೋಜು-ಮಸ್ತಿಯಲ್ಲಿ ಸಮುದ್ರಕ್ಕಿಳಿದು ಪ್ರಾಣವನ್ನೇ ಬಿಡುತಿದ್ದಾರೆ. ಇತ್ತೀಚೆಗೆ ಮುರುಡೇಶ್ವರ ಕಡಲಲ್ಲಿ ಕೋಲಾರ, ಬೆಂಗಳೂರು ಸೇರಿ ಐದು ಜನ ವಿದ್ಯಾರ್ಥಿಗಳು ಸಾವು ಕಂಡಿದ್ದರು. ಹೀಗಾಗಿ ಮುರುಡೇಶ್ವರ ಕಡಲ ತೀರವನ್ನು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.

    ಇತರೆ ಬೀಚ್‌ಗಳಿಗೆ ಪ್ರವಾಸಿಗರು ತೆರಳುತ್ತಿದ್ದು, ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಕಳೆದ ನಾಲ್ಕು ದಿನದಲ್ಲಿ ಐದು ಜನ ದೇಶ-ವಿದೇಶದ ಪ್ರವಾಸಿಗರನ್ನು ಲೈಫ್‌ಗಾರ್ಡ್‌ಗಳು ರಕ್ಷಣೆ ಮಾಡಿದ್ದಾರೆ. ಇಂದು ಕುಡ್ಲೆ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಟಲಿ ಮೂಲದ ವಿದೇಶಿ ಪ್ರವಾಸಿಗ ಜಾರ್ಜ್‌ ಎಂಬಾತನನ್ನು ರಕ್ಷಣೆ ಮಾಡಲಾಗಿದೆ.

    ಸಮುದ್ರ ನೀರಿನಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಸಹಾಯಕ್ಕೆ ಕೂಗಿ ಕರೆದಾಗ ಲೈಫ್‌ಗಾರ್ಡ್ ನಾಗೇಂದ್ರ ಎಸ್ ಕೂರ್ಲೆ, ಪ್ರದೀಪ್ ಅಂಬಿಗ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಅವರು ರಕ್ಷಣೆ ಮಾಡಿದ್ದಾರೆ.

  • ಗೋಕರ್ಣ| ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

    ಗೋಕರ್ಣ| ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

    ಕಾರವಾರ: ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಲೈಫ್‌ಗಾರ್ಡ್‌ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.

    ಬಿಹಾರ ಮೈಲದ ಪ್ರದೀಪ್ ಗುಪ್ತ (29), ಅರ್ಪಿತ್ ಬೆಹೆರಾ (30) ರಕ್ಷಣೆಗೊಳಗಾದವರಾಗಿದ್ದಾರೆ. ಇಬ್ಬರು ಸ್ನೇಹಿತರು ಗೋಕರ್ಣದ ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ್ದರು.

    ಈ ವೇಳೆ ಅವರನ್ನು ಗಮನಿಸಿದ ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್‌ಗಾರ್ಡ್ ಸಿಬ್ಬಂದಿ ನಾಗೇಂದ್ರ ಎಸ್ ಕೂರ್ಲೆ ಮತ್ತು ಮಂಜುನಾಥ್ ಎಸ್ ಹರಿಕಂತ್ರ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ತಕ್ಷಣ ರಕ್ಷಣೆಗೆ ಬಂದಿದ್ದು ಸ್ಪೀಡ್ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.

  • ಗೋಕರ್ಣದ ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ

    ಗೋಕರ್ಣದ ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ

    ಕಾರವಾರ: ಕಾರ್ತಿಕ ಮಾಸದ ವಿಶೇಷ ತಿಂಗಳಲ್ಲಿ ಕಾರ್ತಿಕೋತ್ಸವ ಆಚರಣೆ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣ ಕ್ಷೇತ್ರದ ಕೋಟಿತೀರ್ಥದ ವಿನಾಯಕ ದೇವಾಲಯದ ಕಾರ್ತಿಕ ದೀಪೋತ್ಸವ ಬುಧವಾರ ನೆರವೇರಿತು.

    ಚಂಡೆನಾದ, ವಾದ್ಯಘೋಷದ ನಡುವೆ ಸಾಗುವ ಉತ್ಸವ ಇನ್ನೊಂದೆಡೆ ಹಾಲಕ್ಕು ಒಕ್ಕಲಿಗರ ಗುಮಟೆ ಪಾಂಗ ಜಾನಪದೀಯ ಹಾಡು, ಮೊತ್ತೊಂದೆಡೆ ವಿದ್ಯುತ್ ದೀಪ, ಹಣತೆ ದೀಪದಿಂದ ಕಂಗೊಳಿಸುತ್ತಿರುವ ವಿಶಾಲ ಕೋಟಿತೀರ್ಥ ಮಂದಿರದಲ್ಲಿ ವಿಶೇಷ ಅಲಂಕಾರ ವಿವಿಧ ದೈವ ಕಾರ್ಯ, ಸಾವಿರಾರು ಜನರು ಭಾಗಿ.. ಇದು ಕೋಟಿತೀರ್ಥ ಕಟ್ಟೆಯಲ್ಲಿರುವ ಪಟ್ಟೆ ವಿನಾಯಕ ದೇವಾಲಯದ ಕಾರ್ತಿಕ ದೀಪೋತ್ಸವ ಝಲಕ್.

    ಪ್ರತಿ ವರ್ಷದಂತೆ ಕೋಟಿ ತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ಮಂದಿರದ 50 ನೇ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ವಿವಿಧ ದೈವಿಕ ಕಾರ್ಯಕ್ರಮಗಳ ಜರುಗಿ, ಸಂಜೆ ಶ್ರೀದೇವರ ಉತ್ಸವ ನಾಗಬೀದಿ ಮೂಲಕ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ರಥಬೀದಿ ಮೂಲಕ ಮಂದಿರಕ್ಕೆ ಮರಳಿತು. ನಂತರ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ವೇ.ಚಿಂತಾಮಣ ಶಾಸ್ತಿ ಕೊಡಗಿ ಪೂಜಾ ಕೈಂಕರ್ಯ ನೆರವೇರಿಸಿದರು.

    ವೆಂಕಟರಮಣ ಮಂದಿರದಿಂದ ಕೋಟಿತೀರ್ಥಕ್ಕೆ ಬರುವ ಮಾರ್ಗ ಹಾಗೂ ಎಳು ಎಕರೆ ವಿಸ್ತಾರದ ಕೋಟಿತೀರ್ಥ ಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಉತ್ಸವ ಬರುವ ವೇಳೆ ಕೋಟಿತೀರ್ಥ ಕಟ್ಟೆಯನ್ನ ಹಣತೆಯಿಂದ ಸಹಸ್ರ ದೀಪ ಬೆಳಗಿಸಲಾಯಿತು.

    ಕೋಟಿ ತೀರ್ಥದಲ್ಲಿ ವಾದ್ಯಘೋಷ, ಚಂಡೆನಾದ ಉತ್ಸವಕ್ಕೆ ಮೆರುಗು ತಂದಿತ್ತು. ಉತ್ಸವ ಬರುವ ಮಾರ್ಗದಲ್ಲಿ ರಂಗೋಲಿ ಹಾಕಿ ಮಾವಿನ ತೋರಣದಿಂದ ಸಿಂಗರಿಸಿ ಜನರು ಆರತಿ ನೀಡಿ ವಂದಿಸಿದರು.

  • ಕಾರವಾರ| ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

    ಕಾರವಾರ| ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ (Gokarna Sea)  ನಡೆದಿದೆ.

    ಮೈಸೂರು ಮೂಲದ ಅಭಿ (20) ಹಾಗೂ ಇನ್ನೋರ್ವನನ್ನು ರಕ್ಷಣೆ ಮಾಡಲಾಗಿದೆ. ರಜೆ ಹಿನ್ನೆಲೆಯಲ್ಲಿ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವಕರು ಸಮದ್ರಕ್ಕಿಳಿದು ಅಲೆಗೆ ಸಿಲುಕಿಕೊಂಡಿದ್ದರು. ಈ ವೇಳೆ ಲೈಫ್‌ಗಾರ್ಡ್ ಸಿಬ್ಬಂದಿ ಶಿವಪ್ರಸಾದ್ ಅಂಬಿಗ, ಮೋಹನ್ ಅಂಬಿಗ ಎಂಬವರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಇನ್ನೊಬ್ಬ ಪ್ರವಾಸಿಗ ಲೈಫ್‌ಗಾರ್ಡ್ ಸಿಬ್ಬಂದಿಗೆ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಣಕಾಸು ನಿರ್ವಹಣೆ ಸರಿ ಮಾಡದೇ ಕೇಂದ್ರದ ಮೇಲೆ ಗೂಬೆ: ಜೋಶಿ ವಾಗ್ದಾಳಿ

  • ಗೋಕರ್ಣ ಬೀಚ್‌ನಲ್ಲಿ ಮುಳುಗಿ ಬೆಂಗ್ಳೂರಿನ ಯುವಕ ದುರ್ಮರಣ – ಐವರು ಅಸ್ವಸ್ಥ

    ಗೋಕರ್ಣ ಬೀಚ್‌ನಲ್ಲಿ ಮುಳುಗಿ ಬೆಂಗ್ಳೂರಿನ ಯುವಕ ದುರ್ಮರಣ – ಐವರು ಅಸ್ವಸ್ಥ

    ಕಾರವಾರ: ಸಮುದ್ರದಲ್ಲಿ ಈಜಲು ತೆರಳಿದ್ದ ಬೆಂಗಳೂರು ಮೂಲದ ಪ್ರವಾಸಿಗರಲ್ಲಿ ಓರ್ವ ನೀರಿನಲ್ಲಿ ಸಿಲುಕಿ ನಾಪತ್ತೆಯಾಗಿದ್ದು, ಐವರು ಅಸ್ವಸ್ಥಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಾವಿಕೊಡ್ಲ ಕಡಲ ತೀರದಲ್ಲಿ ನಡೆದಿದೆ.

    ಕೋಲಾರದ ಶ್ರೀನಿವಾಸಪುರದ ವಿನಯ ಎಸ್.ವಿ (22) ನೀರುಪಾಲಾದ ವಿದ್ಯಾರ್ಥಿಯಾಗಿದ್ದು, ಆತನ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.

    ಬೆಂಗಳೂರಿನ ಖಾಸಗಿ ಫಾರ್ಮಸಿ ಕಾಲೇಜಿನ ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಸಮುದ್ರಲ್ಲಿ ಮೋಜು ಮಸ್ತಿ ಮಾಡಲು ತೆರಳಿ ಈ ಅವಘಡ ನಡೆದಿದೆ.

    ಅಪಾಯದಲ್ಲಿದ್ದವರನ್ನ ಗಮನಿಸಿ ಸ್ಥಳೀಯರಾದ ದುಬ್ಬಸಸಿಯ ಸರ್ವೇಶ ಮೊರ್ಜೆ ಮತ್ತು ಪಂಢರಿನಾಥ ಮೂರ್ಜೆ ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಇವರಿಗೆ ಕರಾವಳಿ ಕಾವಲು ಪೊಲೀಸ್ ಪಡೆಯವರು ಸಹಕರಿಸಿ ಹರಸಾಹಸ ಪಟ್ಟು ಒಟ್ಟು ಐವರನ್ನು ದಡಕ್ಕೆ ತಂದು ಪ್ರಾಣ ಉಳಿಸಿದ್ದಾರೆ.

    ಅಸ್ವಸ್ಥಗೊಂಡ 5 ವಿದ್ಯಾರ್ಥಿಗಳನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸ ಕೊಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಕುಮಟಾಕ್ಕೆ ಸಾಗಿಸಲಾಗಿದೆ.

    ಪಿ.ಐ. ವಸಂತ್ ಆಚಾರ್, ಪಿ.ಎಸ್.ಐ. ಖಾದರ್ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

  • ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ

    ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ

    ಕಾರವಾರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಕಳೆದ ಎರಡು ದಿನದಿಂದ ಧಾರ್ಮಿಕ ಕ್ಷೇತ್ರ ಪರ್ಯಟನೆ ಮಾಡುತಿದ್ದು, ಇಂದು ಗೋಕರ್ಣದ (Gokarna) ಮಹಾಬಲೇಶ್ವರ ದೇವಸ್ಥಾನ ಹಾಗೂ ಕಾಲಭೈರವೇಶ್ವರ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಜ್ಯದ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಕೊಂಡರು.

    ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಮುಂಜಾನೆ ಆಗಮಿಸಿದ್ದ ಅವರು ಮೊದಲು ಪೂಜಾ ಸಂಕಲ್ಪ ನೆರವೇರಿಸಿ ನಂತರ ಮಹಾಬಲೇಶ್ವರನ ಆತ್ಮಲಿಂಗ ಸನ್ನಿಧಿಯಲ್ಲಿ ಪೂಜಾಕಾರ್ಯ ನೆರವೇರಿಸಿದರು. ಇದೇ ವೇಳೆ ಅರ್ಚಕರು ಮುಂದೆ ಮುಖ್ಯಮಂತ್ರಿಯಾಗುವಂತೆ ಸಂಕಲ್ಪ ಮಾಡಿಸಿದರು. ಇದನ್ನೂ ಓದಿ: ಸುಧಾಕರ್‌ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ

    ಇದಾದ ನಂತರ ಅಧಿಕಾರ ಹಾಗೂ ನಾಯಕತ್ವ ಕೇಂದ್ರೀಕರಣಕ್ಕಾಗಿ ಕಾಲಭೈರವನ ಮೊರೆಹೋದ ಡಿಕೆಶಿ ಮುಂದೆ ಮುಖ್ಯಮಂತ್ರಿ ಹುದ್ದೆಗಾಗಿ ವಿಶೇಷ ಪೂಜೆ ನೆರವೇರಿಸಿದರು. ಇದನ್ನೂ ಓದಿ: ಗೋವಿಂದ ಕಾರಜೋಳಗೆ ಚಿತ್ರದುರ್ಗ ಬಿಜೆಪಿ ಟಿಕೆಟ್‌