Tag: Goddess

  • Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    Navratri 2025 Day 3: ಚಂದ್ರಘಂಟಾ ದೇವಿ ಯಾರು? ಪುರಾಣ ಕಥೆ ಏನು ಹೇಳುತ್ತೆ?

    ವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ. ದುರ್ಗಾದೇವಿಯ ಒಂಭತ್ತು ಅವತಾರಗಳಲ್ಲಿ ಚಂದ್ರಘಂಟಾ ಅವತಾರವೂ ಒಂದಾಗಿದೆ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಚಂದ್ರಘಂಟಾ ದೇವಿ. ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟಾ ದೇವಿಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ. ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟಾ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

    ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು ಎಂದರ್ಥ. ಚಂದ್ರಘಂಟಾ ದೇವಿಯ ಮೂರನೇ ಕಣ್ಣು ತೆರೆದೇ ಇರುತ್ತದೆ. ಯಾವ ಸಮಯದಲ್ಲಿ ಆದರೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟಾ ದೇವಿಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.

    ಚಂದ್ರಘಂಟಾ ದೇವಿ ಯಾರು?
    ಚಂದ್ರಘಂಟ ದೇವಿಯು ಶುಕ್ರ ಗ್ರಹದ ಅಧಿದೇವತೆಯಾಗಿದ್ದಾಳೆ. ಈಕೆ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಕಂಡುಬರದು.

    ಹಿನ್ನೆಲೆ ಏನು?
    ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.

    ಪೂಜೆಯ ಮಹತ್ವ:
    ನವರಾತ್ರಿಯ ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಭಯವೆಲ್ಲಾ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲೆ ಎಂಬ ವಿಶ್ವಾಸ ಬೆಳೆಯುತ್ತದೆ. ದೇವಿಯ ಮಸ್ತಕದಲ್ಲಿರುವ ಚಂದ್ರಘಂಟಾ ನಾದವು ಋಣಾತ್ಮಕ ಶಕ್ತಿಯನ್ನು ಹೊಂದಿದ್ದು, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹಾಗಾಗಿ ಚಂದ್ರಘಂಟಾ ದೇವಿಯ ಪೂಜೆಯನ್ನು ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳೆಲ್ಲಾ ದೂರವಾಗಿ ಮನೆಶುದ್ಧಿಯಾಗುವುದು.

    ಯಾರು ಜೀವನದಲ್ಲಿ ಭರವಸೆಯನ್ನು ಕಳೆದುಕೊಂಡು ವ್ಯವಹಾರದಲ್ಲಿ ಹೊಸ ಹಾದಿಯನ್ನು ತುಳಿಯಲು ಇಚ್ಛಿಸುತ್ತಾರೋ ಅವರು ಚಂದ್ರಘಂಟಾ ದೇವಿಯ ಪೂಜೆ ಮಾಡಿದರೆ ಅವರು ಸಾಗುವ ದಾರಿಯಲ್ಲಿ ಬೆಳಕನ್ನು ಚೆಲ್ಲಿ, ಯಶಸ್ಸಿನ ಮೆಟ್ಟಿಲೇರಲು ಸಹಕರಿಸುತ್ತಾಳೆ ತಾಯಿ ಚಂದ್ರಘಂಟಾ ದೇವಿ.

  • Navratri 2025 Day 2: ಬ್ರಹ್ಮಚಾರಿಣಿ ದೇವಿಯನ್ನೇಕೆ ಪೂಜಿಸಬೇಕು?

    Navratri 2025 Day 2: ಬ್ರಹ್ಮಚಾರಿಣಿ ದೇವಿಯನ್ನೇಕೆ ಪೂಜಿಸಬೇಕು?

    ವರಾತ್ರಿ ಹಬ್ಬದ ಎರಡನೇ ದಿನದಂದು ದುರ್ಗಾ ದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿ ರೂಪವನ್ನು ಪೂಜಿಸಲಾಗುವುದು. ಅಂದರೆ 9 ದಿನಗಳ ನವರಾತ್ರಿ ಹಬ್ಬದಲ್ಲಿ ಎರಡನೇ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುವುದು. ತಪಸ್ಸಿನ ರೂಪಕವಾದ ಬ್ರಹ್ಮಚಾರಿಣಿ ದೇವಿಯ ಹಿನ್ನೆಲೆ ಏನು? ಸ್ವರೂಪ ಹೇಗೆ ಎಂಬುದರ ಕುರಿತು ಒಂದಿಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಬ್ರಹ್ಮಚಾರಿಣಿಯ ಸ್ವರೂಪ ಹೇಗೆ?
    ಹೆಸರೇ ಸೂಚಿಸುವಂತೆ ತಾಯಿ ಬ್ರಹ್ಮಚಾರಿಣಿ ಎಂದರೆ ದೃಢತೆ ಮತ್ತು ನಡವಳಿಕೆಯ ದೇವತೆ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ನಿಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನೀವು ತಾಯಿಯ ಈ ರೂಪವನ್ನು ಪೂಜಿಸಬೇಕು. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೆಯಿದೆ.

    ಬ್ರಹ್ಮಚಾರಿಣಿಯ ಹಿನ್ನೆಲೆ ಏನು?
    ಪಾರ್ವತಿಯಾಗಿ, ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣಿ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು. ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು. ಪರ್ಣವೆಂದರೆ ಎಲೆ. ಹಾಗಾಗಿ ಈಕೆಯನ್ನು ಅಪರ್ಣಾ ಎಂದೂ ಕರೆಯುತ್ತಾರೆ. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.

    ಯಾಕೆ ಪೂಜಿಸಬೇಕು?
    ಬ್ರಹ್ಮಚಾರಿಣಿ ಮಾತೆಯನ್ನು ಪೂಜಿಸುವ ವ್ಯಕ್ತಿಗಳಿಗೆ ಶಾಂತಿ ಮತ್ತು ಸಂತೋಷವು ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಅವಳು ಅದೃಷ್ಟದ ನಿಯಂತ್ರಕ ಮಂಗಳ ದೇವನನ್ನು ನಿಯಂತ್ರಿಸುತ್ತಾಳೆ ಮತ್ತು ತನ್ನ ಅನುಯಾಯಿಗಳಿಗೆ ಬುದ್ಧಿವಂತಿಕೆ ಮತ್ತು ಸಂತೋಷವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

    ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು ಎನ್ನುವ ನಂಬಿಕೆಯಿದೆ.

     

  • Navratri 2025 Day 1: ಶೈಲಪುತ್ರಿಯ ಮಹತ್ವವೇನು?

    Navratri 2025 Day 1: ಶೈಲಪುತ್ರಿಯ ಮಹತ್ವವೇನು?

    ಬಾರಿಯ ನವರಾತ್ರಿ ಹಬ್ಬವು ಸೆ.22ರಿಂದ ಪ್ರಾರಂಭವಾಗಿ ಅ.3ಕ್ಕೆ ಕೊನೆಗೊಳ್ಳುತ್ತದೆ. ನವರಾತ್ರಿಯು ದೇವಿ ದುರ್ಗೆಯ ಮತ್ತು ಅವಳ 9 ರೂಪಗಳ ಆಚರಣೆಯಾಗಿದ್ದು, ಹಿಂದೂಗಳು ಈ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ದೇವಿ ದುರ್ಗೆಯ ಒಂಬತ್ತು ರೂಪಗಳನ್ನು ನೋಡುವುದಾದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಆದಿ ಶಕ್ತಿಯ ಈ 9 ರೂಪಗಳನ್ನು ನವದುರ್ಗೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಿಜಯದಶಮಿ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತದೆ. ಮೊದಲನೇ ದಿನ ಪೂಜಿಸಲ್ಪಡುವ ಶೈಲಪುತ್ರಿಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.

    ಶೈಲ ಪುತ್ರಿಯ ಮಹತ್ವ:
    ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.

    ಶಿವನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದಕ್ಷ ಒಮ್ಮೆ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲಾ ಮಕ್ಕಳಿಗೆ, ಬಂಧುಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈಗ ದಕ್ಷ, ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ ಎಂದು ಮನಸ್ಸಿನಲ್ಲೇ ಉರಿದು ಬಿದ್ದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷ ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.

    ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ ಎಂದು ಕೇಳುತ್ತಾಳೆ. ಅದಕ್ಕೆ ಶಿವ ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆಯಾದರೂ ಹೋಗಬಾರದು ಎಂದು ಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತು ಹೋಗಿರಬಹುದು. ತವರು ಮನೆಗೆ ಹೋಗಲು ಮಗಳಿಗೆ ಏಕೆ ಆಹ್ವಾನ ಬೇಕು ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿ ದಾಕ್ಷಾಯಿಣಿಯ ಹಠಕ್ಕೆ ಕರಗಿ ಶಿವ ಅನುಮತಿ ನೀಡುತ್ತಾನೆ.

    ಶಿವನಿಂದ ಅನುಮತಿಯನ್ನು ಪಡೆದು ದಾಕ್ಷಾಯಿಣಿ ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿ ನಾನು ಆಹ್ವಾನ ನೀಡದಿದ್ದರೂ ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನನ್ನು ಅವಮಾನಿಸುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ತನ್ನ ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ಶೈಲ ಪುತ್ರಿ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. ಮತ್ತೆ ಶಿವನ ಮಡದಿ ಸತಿಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.

    ಶೈಲಪುತ್ರಿಯ ಸ್ವರೂಪ ಹೇಗೆ?
    ಶೈಲ ಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿ ಮಲ್ಲಿಗೆ ಪ್ರಿಯಳು.

    ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವುಗಳನ್ನು ಹಿಂಸಿಸಬಾರದೆಂಬುದರ ಸಂಕೇತ ನೀಡುತ್ತಾಳೆ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು ವಿನಯ ಮತ್ತು ತಾಳ್ಮೆಯ ಸಂಕೇತ. ಇದು ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

  • ಕಾಳಿ ದೇವಿ ಮದ್ಯ, ಮಾಂಸ ಸೇವಿಸುವ ದೇವತೆ: ಟಿಎಂಸಿ ಸಂಸದೆ

    ಕಾಳಿ ದೇವಿ ಮದ್ಯ, ಮಾಂಸ ಸೇವಿಸುವ ದೇವತೆ: ಟಿಎಂಸಿ ಸಂಸದೆ

    ಕೋಲ್ಕತ್ತಾ: ಕಾಳಿ ದೇವಿಯು ಮಾಂಸ ತಿನ್ನುವ, ಮದ್ಯವನ್ನು ಸೇವಿಸುವ ದೇವತೆಯಾಗಿ ಕಾಣುತ್ತಾಳೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಚಿತ್ರದ ಪೋಸ್ಟರ್ ವಿವಾದಕ್ಕೆ ಪ್ರತಿಕ್ರಿಯಿಸಿದರು. ಅವರವರ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇರುತ್ತದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ಧರ್ಮದ ನಿಂದನೆ ಆಗಿರುತ್ತದೆ ಎಂದು ತಿಳಿಸಿದರು.

    ಅದಕ್ಕೆ ಉದಾಹರಣೆ ಎಂಬಂತೆ ಸಿಕ್ಕಿಂನಲ್ಲಿ ಕಾಳಿ ದೇವಿಗೆ ವಿಸ್ಕಿಯನ್ನು ನೀಡುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ವಿಸ್ಕಿಯನ್ನು ಪ್ರಸಾದ ಎಂದು ಹೇಳಿದರೆ ಅವರು ಅದನ್ನು ಪ್ರಸಾದ ಎಂದರೆ ಧರ್ಮ ನಿಂದನೆ ಆಗುತ್ತದೆ ಎಂದರು. ಇದನ್ನೂ ಓದಿ: ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಲೀನಾ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ

    ಬೆಂಗಳೂರು: ಅಲ್ಲೊಂದು ಗ್ರಾಮ. ಅದಕ್ಕೊಂದು ಅಧಿದೇವತೆಯ ದೇವಸ್ಥಾನ. ಆದರೆ 200 ವರ್ಷದ ಹಿಂದೆ ದೇವಸ್ಥಾನ ಪಾಳು ಬಿದ್ದು ನಾಶವಾಗಿತ್ತು. ಈ ಗ್ರಾಮದಲ್ಲಿ ಕಳೆದ ವರ್ಷ ದೇವರ ಮೂಲ ವಿಗ್ರಹವಿಲ್ಲದೇ ದೇವಸ್ಥಾನವನ್ನು ಕಟ್ಟಿದ್ರು. ಆದರೆ ಮೂಲ ವಿಗ್ರಹ ಹುಡುಕಲೇ ಬೇಕು ಅಂತಾ ಪಟ್ಟು ಹಿಡಿದ ಗ್ರಾಮಸ್ಥರು, ಈಗ ಇರುವ ದೇವರನ್ನೇ ಕಟ್ಟಿ ಹಾಕಿ ಪಲ್ಲಕ್ಕಿಯಲ್ಲಿ ಹೊತ್ತು ಮೂಲ ವಿಗ್ರಹ ಹುಡುಕಿಕೊಡು ಅಂತಾ ಪ್ರಶ್ನೆ ಹಾಕಿದ್ರು.

    ಹೌದು.. 200 ವರ್ಷದ ಹಿಂದೆ ರಾಮೋಹಳ್ಳಿಯಲ್ಲೊಂದು ದೇವಸ್ಥಾನ ಇತ್ತಂತೆ. ಕಾಲಕ್ರಮೇಣ ಇದು ಪಾಳು ಬಿದ್ದು ನೆಲಸಮವಾಗಿತ್ತು. ಕೆಲವರ ಪ್ರಕಾರ ಈ ವಿಗ್ರಹವನ್ನು ಅನೇಕರು ಕದ್ದೊಯ್ಯಲು ಪ್ರಯತ್ನ ಪಟ್ಟಿದ್ರಂತೆ. ಆದರೆ ಅಲ್ಲೇ ಸಿಡಿಲು ಬಡಿದು ಸತ್ತು ಹೋಗಿದ್ರಂತೆ. ಹೀಗಾಗಿ ದೇವರ ಮೂರ್ತಿ ಎಲ್ಲಿ ಹೋಯ್ತು ಅನ್ನೋದು ಜನರಿಗೆ ಗೊತ್ತಾಗಲಿಲ್ಲ. ಅದಾದ ಬಳಿಕ ಕಳೆದ ವರ್ಷ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ.

    ಮೂಲ ವಿಗ್ರಹಕ್ಕಾಗಿ ದೇವಿಯ ಮುಂದೆ ಕವಡೆ ಹಾಕಿ ಪ್ರಶ್ನೆ ಇಟ್ಟಿದ್ದಾರೆ. ನಂತರ ದೇವಿಯ ಪಲ್ಲಕ್ಕಿ ಹೊತ್ತು ವಿಗ್ರಹಕ್ಕೆ ಕಳೆದ ವಾರದಿಂದ ಹುಡುಕಾಟ ನಡೆಸಿದ್ದಾರೆ. ಆಗ ಎರಡು ದೇವಿಯ ವಿಗ್ರಹ ಸಿಕ್ಕಿತ್ತು. ಇನ್ನೊಂದು ಮೂರ್ತಿ ಇರುವ ಬಗ್ಗೆಯೂ ಪ್ರಶ್ನೆಯಲ್ಲಿ ಗೊತ್ತಾಯ್ತು. ಅದಕ್ಕಾಗಿ ಇಂದು ಮತ್ತೆ ದೇವಿಯನ್ನು ಜಾಗ ತೋರಿಸುವಂತೆ ಪ್ರಶ್ನೆ ಇಟ್ಟು ಪಲ್ಲಕ್ಕಿ ಹೊತ್ತು ಸಾಗಿದ್ದಾರೆ. ಹುತ್ತದ ಬಳಿ ದೇವಿ ಪಲ್ಲಕ್ಕಿ ಬಂದು ನಿಂತಿದೆ. ಬಳಿಕ ಹುತ್ತವನ್ನೇ ಕೆಡವಿದ್ದಾರೆ. ಆಗ ಹಳೆಯ ಕಾಲ ಮಣ್ಣಿನಡಿಯಲ್ಲಿ ಹೂತು ಹೋದ ಲಿಂಗಸ್ವರೂಪಿ ವಿಗ್ರಹ ಹಾಗೂ ಕಮಂಡಲ ಪತ್ತೆಯಾಗಿದೆ.

    ದೇವಿಯ ಪವಾಡಕ್ಕೆ ಉಘೇ ಅಂದ ಜನ: ಹುತ್ತದಲ್ಲಿ ಸಿಕ್ಕಿದ ಲಿಂಗಸ್ವರೂಪಿ ವಿಗ್ರಹವನ್ನು ತೆರೆದು ನೋಡಿದಾಗ ಪುರಾತನ ಗಣೇಶನ ಮೂರ್ತಿ ಪತ್ತೆಯಾಗಿದೆ .ಮೂರು ಕೆಜಿ ಇರುವ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಸ್ದಾರೆ. ಪುರಾತನ ಲಿಪಿ ಸರ್ಪದ ಕೆತ್ತನೆ ಸೂರ್ಯನ ಕೆತ್ತನೆಯ ವಿಗ್ರಹ ಬಲು ಅಪರೂಪವಾಗಿದೆ. ಇದು ದೇವರ ಮಹಿಮೆ. ಇದನ್ನು ಪೂಜೆ ಮಾಡಿ ಪ್ರತಿಷ್ಠಾಪನೆ ಮಾಡುತ್ತೇವೆ ಅಂತಾ ಪುರೋಹಿತರು ಹೇಳಿದ್ರು.

    ಇದು ಪವಾಡವೋ ವಿಸ್ಮಯವೋ ಇದನ್ನೆಲ್ಲ ನಂಬಬೇಕೋ ಬೇಡ್ವೋ ಎಲ್ಲವೂ ಜನ್ರ ಅವರವರ ನಂಬಿಕೆ ವಿಮರ್ಶೆಗೆ ಬಿಟ್ಟಿದ್ದು. ಆದರೆ 200 ವರ್ಷದ ಹಿಂದೆ ಕಳೆದು ಹೋದ ವಿಗ್ರಹ ಮತ್ತೆ ಸಿಕ್ಕಿದ ಖುಷಿಯಲ್ಲಿ ಗ್ರಾಮದ ಜನ ಇದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಪಕ್ಷಿ ಬಡಿದು ಎಮರ್ಜನ್ಸಿ ಲ್ಯಾಂಡಿಂಗ್

    Live Tv

  • ಬಿಕಿನಿಯಲ್ಲಿ ದೇವರ ಫೋಟೋ – ರೊಚ್ಚಿಗೆದ್ದ ನೆಟ್ಟಿಗರಿಂದ ಹಿಗ್ಗಾಮುಗ್ಗ ತರಾಟೆ

    ಬಿಕಿನಿಯಲ್ಲಿ ದೇವರ ಫೋಟೋ – ರೊಚ್ಚಿಗೆದ್ದ ನೆಟ್ಟಿಗರಿಂದ ಹಿಗ್ಗಾಮುಗ್ಗ ತರಾಟೆ

    ಸೀರೆ, ಚಪ್ಪಲಿಯಲ್ಲಿ ದೇವರ ಫೋಟೋ ಹಾಕಿ ಕೆಲವೊಂದು ಕಂಪನಿಗಳು ವಿವಾದಕ್ಕೀಡಾಗಿರುವುದನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಇಂತದ್ದೇ ಒಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

    ಹೌದು. ಬಿಕಿನಿಯಲ್ಲಿ ಹಿಂದೂ ದೇವರ ಫೋಟೋ ಹಾಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ. ‘ಸುಹಾರಾ ರೇ ಸ್ವಿಮ್’ ಎಂಬ ಹೆಸರಿನ ಬಟ್ಟೆ ಕಂಪನಿಯೊಂದು ಈ ಮೂಲಕ ಹೊಸ ವಿವಾದಕ್ಕೆ ಸಿಲುಕಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಸ್ವಿಮ್ ಸೂಟ್‍ನಲ್ಲಿ ಹಿಂದೂ ದೇವರ ಚಿತ್ರಗಳನ್ನು ಮುದ್ರಿಸಲಾಗಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ದೆಹಲಿ ಶಾಲೆಯ ತರಗತಿಯಲ್ಲಿ ಹಾಜರಾಗಿ ಪಾಠ ಕೇಳಿದ ಕೇಜ್ರಿವಾಲ್, ಭಗವಂತ್ ಮಾನ್

    https://twitter.com/pocasians_/status/1518179041559277568

    ಹಿಂದೂ ದೇವರ ಚಿತ್ರಗಳಿರುವ ಬಿಕಿನಿಯನ್ನು ಮಾಡೆಲ್ ಒಬ್ಬರು ಧರಿಸಿರುವ ಫೋಟೋವನ್ನು ದಿ ಟ್ರೈಡೆಂಟ್ ಎಂಬ ಹೆಸರುಳ್ಳ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಿಕೊಳ್ಳಲಾಗದೆ. ಅಲ್ಲದೆ ಇದು ಕೇವಲ ವಿನ್ಯಾಸಕ್ಕಾಗಿಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯೇ ಎಂದು ಪ್ರಶ್ನಿಸಲಾಗಿದೆ. ಒಂದು ವೇಳೆ ಇದರ ಹಿಂದೆ ಧಾರ್ಮಿಕ ಉದ್ದೇಶವಿದ್ದಿದ್ದೇ ಆದರೆ ಯಾಕೆ ಜೀಸಸ್ ಚಿತ್ರವನ್ನು ಮುದ್ರಿಸಿಲ್ಲ ಎಂದು ಕಿಡಿಕಾರಲಾಗಿದೆ. ಇನ್ನೊಬ್ಬರು ಹಿಂದೂ ಅನ್ನೋದು ಜೋಕ್ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಮತ್ತೊಬ್ಬರು, ಇಂತಹ ಚಿತ್ರಗಳನ್ನು ಬಿಕಿನಿಯಲ್ಲಿ ಮುದ್ರಿಸುವುದನ್ನು ಕೂಡಲೇ ನಿಲ್ಲಿಸಿ. ಅಲ್ಲದೆ ಈ ಸಂಬಂಧ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸುವುದು ಇದೀಗ ಫ್ಯಾಶನ್ ಆಗೋಗ್ಬಿಟ್ಟಿದೆ ಎಂದು ಇನ್ನೊಬ್ಬರು ಗರಂ ಆಗಿದ್ದಾರೆ. ಒಟ್ಟಿನಲ್ಲಿ  ಟು ಪೀಸ್‍ನಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿ ಕಂಪನಿ ಪೇಚಿಗೆ ಸಿಲುಕಿದೆ. ಇದನ್ನೂ ಓದಿ: ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ

  • ಶ್ರೀರಾಮುಲುಗೆ ಎದುರಾದ ಸಂಕಷ್ಟ ನಿವಾರಣೆಗೆ ದೇವಿ ಮೊರೆ ಹೋದ ಅರ್ಚಕ

    ಶ್ರೀರಾಮುಲುಗೆ ಎದುರಾದ ಸಂಕಷ್ಟ ನಿವಾರಣೆಗೆ ದೇವಿ ಮೊರೆ ಹೋದ ಅರ್ಚಕ

    ಯಾದಗಿರಿ: ಸಚಿವ ಶ್ರೀರಾಮಲುಗೆ ಸಂಕಷ್ಟ ನಿವಾರಣೆಯಾಗಲೆಂದು ದೇವಿಗೆ ಪೂಜೆ ಸಲ್ಲಿಸಲಾಗಿದೆ. ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ದೇವಸ್ಥಾನದ ಅರ್ಚಕ ಮರಿಸ್ವಾಮಿ ಪೂಜಾರಿವಿಶೇಷ ಅರ್ಚನೆ ಮಾಡಿದ್ದಾರೆ.

    ಸೆಪ್ಟೆಂಬರ್ 16ಕ್ಕೆ ದೇವಿ ಸನ್ನಿಧಿಗೆ ಭೇಟಿ ನೀಡಿದ್ದ ಸಚಿವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ದೇವಿ ಮೊರೆ ಹೋಗಿದ್ದರು. ಚೀಟಿಯಲ್ಲಿ ಡಿಸಿಎಂ ಮಸ್ಟ್ ಅಂತ ಬರೆದಿಟ್ಟು ಹರಕೆ ಹೊತ್ತಿದ್ದರು. ಇದೀಗ ಸ್ಥಾನ ಪಲ್ಲಟ ಗೊಂದಲ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರು ದೇವಿಗೆ ಪೂಜೆ ಸಲ್ಲಿಸಿದ್ದಾರೆ.

    ಶ್ರೀರಾಮುಲು ಮುಂದಿರುವ ಗೊಂದಲ ಬಗೆ ಹರಿಸಲು ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತ ದಲ್ಲಿ ಅಮ್ಮನಿಗೆ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ರಾಮುಲುಗೆ ಎದುರಾಗಿರುವ ಸಂಕಷ್ಟ ನಿವಾರಣೆಯಾಗಿ ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗುವಂತೆ ದೇವಿಯಲ್ಲಿ ಬೇಡಿಕೊಳ್ಳಲಾಗಿದೆ. ಇದನ್ನೂ ಓದಿ: ನನ್ನನ್ನು ಕರ್ನಾಟಕದ ಡಿಸಿಎಂ ಮಾಡು- ದೇವರಿಗೆ ಶ್ರೀರಾಮುಲು ಲೆಟರ್

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಚಿವ ಶ್ರೀರಾಮುಲು ಅವರಿಗೆ ನಿನ್ನೆ ಡಬಲ್ ಶಾಕ್ ನೀಡಿದ್ದರು. ಈ ಮೂಲಕ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಬೇಕು ಎಂದಿದ್ದ ಶ್ರೀರಾಮುಲುಗೆ ತೀವ್ರ ನಿರಾಸೆ ಉಂಟಾಗಿತ್ತು. ಇಂದು ಸುಧಾಕರ್ ಅವರನ್ನು ಕರೆಸಿ ಸಿಎಂ ಶ್ರೀರಾಮುಲು ಜೊತೆ ಮಾತುಕತೆ ನಡೆಸಿದ್ದು, ಈ ವೇಳೆ ತನಗೆ ನೀಡುವ ಖಾತೆಯನ್ನು ನಿಭಾಯಿಸುವುದಾಗಿ ಶ್ರೀರಾಮುಲು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಡಿಸಿಎಂ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಒಂದೇ ಖಾತೆ

  • ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ

    ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ

    ಮಡಿಕೇರಿ: ಜಗತ್ ಪ್ರಸಿದ್ಧ ಮೈಸೂರು ದಸರಾಕ್ಕೆ ಇಂದು ಬೆಳಗ್ಗೆ ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಇತ್ತ ಐತಿಹಾಸಿಕ ಮಡಿಕೇರಿ ದಸರಾಕ್ಕೂ ಇಂದು ಚಾಲನೆ ನೀಡಲಾಗಿದೆ. 147 ವರ್ಷಗಳ ಇತಿಹಾಸ ಹೊಂದಿರುವ ಮಂಜಿನ ನಗರಿ ಮಡಿಕೇರಿ ದಸರಾ ಇಂದು ನಗರದ ನಾಲ್ಕು ಶಕ್ತಿದೇವತೆಗಳ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆತಿದೆ.

    ನಗರದ ಪಂಪಿನ ಕೆರೆಬಳಿಯಲ್ಲಿ ನಾಲ್ಕು ಕರಗಗಳಿಗೆ ಸಾಂಪ್ರದಾಯಿಕ ಪೂಜೆಸಲ್ಲಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪ್ಪಯ್ಯ, ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು. ಇಂದು ಕರಗ ಹೊರುವ ಮೂಲಕ ದಸರಾ ಪ್ರಾರಂಭಗೊಂಡಿದ್ದು, ನಾಳೆಯಿಂದ ಒಂದು ವಾರಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನವನ್ನು ತಣಿಸಲಿವೆ. ದಸರಾ ಪ್ರಯುಕ್ತ ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದ್ದು, ಇಡೀ ನಗರವೇ ಕಂಗೊಳಿಸುತ್ತಿದೆ.

    ಇಂದು ಸಂಜೆ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಲ್ಲಿ ಮೊರೆಯಿಟ್ಟಿದ್ದಾರೆ. ನಗರದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವೃತಧಾರಿಗಳು ನವರಾತ್ರಿಯ ಒಂಭತ್ತು ದಿನಗಳ ಕಾಲ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.

    ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಕಾಲರಾ ಆವರಿಸಿದ್ದ ಸಂದರ್ಭದಲ್ಲಿ ದೇವತೆಗಳನ್ನು ಕರಗದ ಮೂಲಕ ನಗರ ಪ್ರದಕ್ಷಿಣೆ ಮಾಡಿ ಪೂಜೆಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಕರಗ ಉತ್ಸವ ನಡೆಸಲಾಗುತ್ತದೆ. ಮಡಿಕೇರಿಯ ಶಕ್ತಿದೇವತೆಗಳೆಂದೇ ಕರೆಸಿಕೊಳ್ಳುವ ನಾಲ್ಕೂ ದೇವಿಯರನ್ನು ಜನತೆ ಆರಾಧಿಸುತ್ತಾರೆ. ಕೊನೆಯ ದಿನ ಮಡಿಕೇರಿ ದಸರಾದ ವಿಶೇಷ ದಶಮಂಟಪಗಳ ಉತ್ಸವ ಎಲ್ಲರನ್ನು ಬೆರಗುಗೊಳಿಸಲಿದೆ.

  • ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಂಕಿಯಲ್ಲಿ ಅಗ್ನಿ ದೇವತೆ ಪ್ರತ್ಯಕ್ಷ- ವಿಸ್ಮಯ ಕಂಡು ಪುಳಕಿತರಾದ ಭಕ್ತರು

    ಬೆಳಗಾವಿ: ದೇವರು ಮಾತನಾಡಲಿಲ್ಲ ಎಂದು ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ಹತ್ತಾರು ವರ್ಷಗಳ ಬಳಿಕ ಜನ ಹೋಮ ಹವನ ಮಾಡಿಸಿದ್ದಾರೆ. ಆದರೆ ಈ ವೇಳೆ ಅಗ್ನಿ ಕುಂಡದಲ್ಲಿ ಮಗುವಿನ ಆಕಾರವೊಂದು ಪ್ರತಕ್ಷವಾಗಿದೆ. ಇದು ವಿಸ್ಮಯವೋ ಪವಾಡವೋ ಗೊತ್ತಿಲ್ಲ ಜನ ಮಾತ್ರ ವಿಡಿಯೋ ನೋಡಿ ಅಶ್ಚರ್ಯಗೊಳಗಾಗಿದ್ದಾರೆ.

    ಈ ವಿಸ್ಮಯ ಬೆಳಗಾವಿ ತಾಲೂಕಿನ ಗೊಡಿಹಾಳ ಗ್ರಾಮದಲ್ಲಿ ನಡೆದಿದೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ ಎಂದು ಭಕ್ತಿಪರವಶರಾಗಿದ್ದಾರೆ. 11 ದಿನಗಳ ಅಗ್ನಿ ಪೂಜೆಯ ನಂತರ ಕಡೆ ದಿನ ಈ ಘಟನೆ ನಡೆದಿದೆ. ಇದನ್ನೂ ಓದಿ: 

    ಇದು ನಂಬಿಕೆಯೋ ಅಥವಾ ಮುಢ ನಂಬಿಕೆಯೋ ಗೊತ್ತಿಲ್ಲ ಆದರೆ ಮುಗ್ಧ ಮಗುವಿನ ಆಕಾರದಲ್ಲಿರುವ ದೃಶ್ಯಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಸಿದ್ದೇಶ್ವರ ದೇವರು ನಮ್ಮ ಗ್ರಾಮದ ಸಮಸ್ಯೆಗಳನ್ನು ನಿವಾರಿಸಲು ಪ್ರತ್ಯಕ್ಷನಾಗಿದ್ದಾನೆ. ಇನ್ನು ಮುಂದೆ ನಮ್ಮ ಕಷ್ಟ ಕಾರ್ಪಣ್ಯಗಳು ಎಲ್ಲವೂ ದೂರಾಗುತ್ತವೆ ಎಂದು ಗ್ರಾಮಸ್ಥರು ನಂಬಿದ್ದಾರೆ. ಪೂಜೆಗೆ ಸನ್ನಿಧೀವಹಿಸಿದ ಭೂತರಾಮನಹಟ್ಟಿ ಶ್ರೀಗಳು ಆಶ್ಚರ್ಯ ಚಕಿತರಾಗಿದ್ದಾರೆ. ಇದನ್ನೂ ಓದಿ:  ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    ದೇವತೆಗಳ ಸಮ್ಮುಖದಲ್ಲಿ ನಡೆಯಿತು ಮದುವೆ! ಫೋಟೋ ಗಳಲ್ಲಿ ನೋಡಿ

    ಹೈದರಾಬಾದ್: ಹಿಂದೆ ರಾಜರೆಲ್ಲ ತಲೆ ಮೇಲೆ ಕಿರೀಟ ಹಾಗೂ ಆಭರಣವನ್ನೆ ಮೈ ಮೇಲೆ ಹೊತ್ತುಕೊಂಡು ವಿವಾಹವಾಗಿದ್ದನ್ನು ನೀವು ಟೀವಿಗಳಲ್ಲಿ ನೋಡಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಕೋಟು, ಬೂಟು, ಸೂಟು, ಕುರ್ತಾ, ಪಂಚೆ, ಸಾವಿರಾರು ರೂ. ಬೆಲೆ ಬಾಳುವ ಸೀರೆ, ಇನ್ನಿತ್ಯಾದಿ ಬಟ್ಟೆಗಳನ್ನು ತೊಟ್ಟು ಮದುವೆಗಳು ನಡೆಯುತ್ತವೆ. ಆದರೆ ಇಲ್ಲೊಂದು ಮದುವೆ ಮಾತ್ರ ದೇವತೆಗಳ ಸಮ್ಮುಖದಲ್ಲಿ ಆಗಿದೆ.

    ಅರೇ ಇದೇನಪ್ಪ ಅಂತೀರಾ ಹೌದು. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಕ್ಕ ಪಟ್ಟಣವಾದ ತನುಕದಲ್ಲಿ ನಡೆದ ಮದುವೆ ತುಂಬಾ ವಿಶೇಷತೆಯಿಂದ ಕೂಡಿತ್ತು. ತಲೆ ಮೇಲೆ ಕಿರೀಟ, ಮೈ ತುಂಬಾ ಆಭರಣಗಳು ಹಾಕಿ ವಿಷ್ಣು, ಲಕ್ಷ್ಮೀ, ರಾಮ ಸೀತೆ ಮದುವೆನಾ ಎಂದು ಬಂದವರೆಲ್ಲಾ ಅನ್ನೋ ರೀತಿಯಲ್ಲಿ ವಧು ವರರು ಕಾಣುತ್ತಿದ್ದರು.

    ತನುಕು ಸಮೀಪದ ಮುಖ್ಯಮಾಲಾ ಆಶ್ರಮದ ಪೀಠಾಧಿಪತಿಯಾಗಿರುವ ಶ್ರೀಧರ್ ಸ್ವಾಮಿಯ ಮಗಳ ಮದುವೆಯಲ್ಲಿ‌ ಈ ‌ವಿಶೇಷತೆ ಕಂಡುಬಂದಿತ್ತು.ವಧು ಲಕ್ಷ್ಮೀ ದೇವಿಯಂತೆ ವಸ್ತ್ರ ಧರಿಸಿದ್ದರೆ, ವರನೂ ಕೂಡ ವಿಷ್ಣುವಿನಂತೆ ದಿರಿಸು ತೊಟ್ಟು ಹಸೆಮಣೆ ಏರಿದ್ದಾರೆ.

    ವಧು ಮತ್ತು ವರನ ಪೋಷಕರು ನಿಜವಾದ ದೇವತೆಗಳ ರೀತಿ ರಾಜ, ರಾಣಿಯಂತೆ ಅಲಂಕಾರ ಮಾಡಿಕೊಂಡು ಮದುವೆ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುವಾಗಿದ್ದರು. ರಾಜ ರಾಣಿಯರು ಧರಿಸುವಂತಹ ಆಭರಣಗಳು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಇವರನ್ನು‌ ನೋಡಿ ಅತಿಥಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಇವರಷ್ಟೇ ಅಲ್ಲದೇ ಇವರ ಆತ್ಮೀಯ ಸಂಬಂದಿಗಳು ದೇವತೆಗಳ ಉಡುಪನ್ನು ಧರಿಸಿ ಮದುವೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

    ಈ ವಿಶೇಷ ಉಡುಪುಗಳನ್ನು ಹಾಕಿ ಮದುವೆಯಾಗಿದ್ದು ಆಂಧ್ರದಲ್ಲಿ ಈಗ ಭಾರೀ ಸುದ್ದಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಒಂದು ಟ್ರೆಂಡ್ ಆಗಬಹುದು ಎನ್ನುವ ಮಾತುಗಳು ಕೇಳಿಬಂದಿದೆ.