Tag: Goats

  • ರಾತ್ರಿ ವೇಳೆ ಆಡು ಕುರಿ ಕದಿಯುತ್ತಿದ್ದ ಕಳ್ಳರ ಬಂಧನ

    ರಾತ್ರಿ ವೇಳೆ ಆಡು ಕುರಿ ಕದಿಯುತ್ತಿದ್ದ ಕಳ್ಳರ ಬಂಧನ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಆಡು-ಕುರಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ನಾಗರಾಜ್, ಹನುಮಂತ ರೆಡ್ಡಿ, ಗುಂಡಪ್ಪ ಮತ್ತು ಆಂಜನೇಯ ಬಂಧಿತ ಆರೋಪಿಗಳು. ಹಟ್ಟಿ ಠಾಣೆ ಪೊಲೀಸರು ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಟ್ಟಿಯ ಯಮನೂರು ಹಾಗೂ ನಿಂಗಮ್ಮ ಅವರಿಗೆ ಸೇರಿದ 13 ಆಡುಗಳನ್ನು ರಾತ್ರಿವೇಳೆ ಕದ್ದು ಪರಾರಿಯಾಗಿದ್ದರು. ಕಳ್ಳರನ್ನ ಬಂಧಿಸಿರುವ ಪೊಲೀಸರು 1.5 ಲಕ್ಷ ಮೌಲ್ಯದ 13 ಆಡುಗಳು ಹಾಗೂ ಒಂದು ಆಟೋ ರಿಕ್ಷಾ ಸೇರಿ 3 ಲಕ್ಷ ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಯುಗಾದಿ ಹಬ್ಬಕ್ಕೆಂದು ಬಂದಿದ್ದ ಲೈಟ್ ಬಾಯ್, ಹುಡುಗಿ ವಿಚಾರಕ್ಕೆ ಹತ್ಯೆ

    ರಾತ್ರಿವೇಳೆ ಮನೆಮುಂದೆ ಕಟ್ಟಿಹಾಕಿದ್ದ ಆಡುಗಳನ್ನು ಕಳ್ಳರು ಕದ್ದೊಯ್ದಿದ್ದರು. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳನ್ನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ: ವಾಟಾಳ್ ನಾಗರಾಜ್ ಪ್ರಶ್ನೆ

    ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ: ವಾಟಾಳ್ ನಾಗರಾಜ್ ಪ್ರಶ್ನೆ

    ರಾಮನಗರ: ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ರಾಜಕೀಯ ಮಾಡಲು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಗೆ ನನ್ನ ಬೆಂಬಲ ಇಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

    ಮೇಕೆದಾಟು ಯೋಜನೆ ಜಾರಿಗೆ ಸಂಬಂಧಿಸಿದಂತೆ ಇಂದು ರಾಮನಗರದ ಐಜೂರು ವೃತ್ತದಲ್ಲಿ ಮೇಕೆಗಳನ್ನು ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ನಡೆಸುವ ಮೇಕೆದಾಟು ಪಾದಯಾತ್ರೆಗೆ ನಮ್ಮ ಬೆಂಬಲ ಇಲ್ಲ. ಅವರ ಪಾಡಿಗೆ ಅವರು ಪಾದಯಾತ್ರೆ ಮಾಡಿಕೊಳ್ಳಲಿ. ಮೇಕೆದಾಟು ಯೋಜನೆ ಆಗಬೇಕೆಂದು ಕಳೆದೊಂದು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮೇಕೆದಾಟು ಯೋಜನೆ ಮಾಡಲಿಲ್ಲ. ರಾಜಕೀಯ ಮಾಡಲು ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಗೆ ನನ್ನ ಬೆಂಬಲ ಇಲ್ಲ. ಅವರು ಪಾದಯಾತ್ರೆ ಮಾಡಿಕೊಳ್ಳಲಿ. ನಾವು ಮುಂದಿನ ದಿನಗಳಲ್ಲಿ ಮೇಕೆದಾಟು ಯೋಜನೆ ಬಗ್ಗೆ ಉಗ್ರ ಚಳುವಳಿ ನಡೆಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕೊರೊನಾ ಸ್ಫೋಟ ಒಟ್ಟು 2,479 ಪ್ರಕರಣ – ಬೆಂಗ್ಳೂರಲ್ಲಿ 2,053 ಕೇಸ್

    ಸಿಎಂ ಇರುವ ವೇದಿಕೆಯಲ್ಲಿ ಸಚಿವರ ಭಾಷಣಕ್ಕೆ ಸಂಸದರ ಅಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಿಎಂ ಇರುವ ವೇದಿಕೆಯಲ್ಲಿ ಅವರು ಹಾಗೆ ನಡೆದುಕೊಳ್ಳಬಾರದಿತ್ತು. ವೇದಿಕೆಯಲ್ಲಿ ಮಾತನಾಡುವಾಗ ಆವೇಶದ ಮಾತು ಆಡುವುದು ಸಹಜ. ಇದಕ್ಕೆ ವೇದಿಕೆಯಲ್ಲಿ ಮಾತನಾಡಿ ಉತ್ತರ ನೀಡಬೇಕೇ ಹೊರತು ಈ ರೀತಿ ವೀರಾವೇಷದಲ್ಲಿ ನಡೆದುಕೊಂಡಿದ್ದು ಸರಿಯಲ್ಲ. ಕೂಡಲೇ ಸಂಸದರು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಭೀತಿ – ಫೀಲ್ಡಿಗಿಳಿದ ಚಾಮರಾಜನಗರದ ಮಹಿಳಾ ಅಧಿಕಾರಿಗಳು

  • ಮಾಸ್ಕ್ ಧರಿಸದಕ್ಕೆ ಆಡುಗಳನ್ನು ಬಂಧಿಸಿದ ಪೊಲೀಸರು

    ಮಾಸ್ಕ್ ಧರಿಸದಕ್ಕೆ ಆಡುಗಳನ್ನು ಬಂಧಿಸಿದ ಪೊಲೀಸರು

    – ಆಡುಗಳಿಂದ ಕೋವಿಡ್ ನಿಯಮ ಉಲ್ಲಂಘನೆ
    – ವಿಚಿತ್ರ ಆದ್ರೂ ಸತ್ಯ

    ಲಕ್ನೋ: ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಆಡುಗಳನ್ನು ಬಂಧಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬೇಕನಗಂಜ್ ಪ್ರದೇಶದಲ್ಲಿ ಮೇಯುತ್ತಿದ್ದ ಆಡುಗಳನ್ನ ಪೊಲೀಸರು ತಮ್ಮ ವಾಹನದಲ್ಲಿ ಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಪೊಲೀಸರು ಆಡುಗಳನ್ನು ಬಂಧಿಸಿರುವ ವಿಷಯ ತಿಳಿದ ಮಾಲೀಕ ಠಾಣೆಗೆ ಆಗಮಿಸಿದ್ದಾನೆ. ಇನ್ಮುಂದೆ ಆಡುಗಳನ್ನು ರಸ್ತೆಗೆ ಬಿಡುವುದಿಲ್ಲ. ದಯವಿಟ್ಟು ನನ್ನ ಸಾಕು ಪ್ರಾಣಿಗಳನ್ನು ಬಿಡುಗಡೆಗೊಳಿಸಬೇಕೆಂದು ಮಾಲೀಕ ಮನವಿ ಮಾಡಿಕೊಂಡಿದ್ದಾನೆ. ಬಳಿಕ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ ಸೈಫುದ್ದೀನ್ ಬೇಗ್, ಆಡುಗಳನ್ನು ಮೇಯಿಸುತ್ತಿದ್ದ ಯುವಕ ಮಾಸ್ಕ್ ಧರಿಸಿರಲಿಲ್ಲ ಎಂದು ತಿಳಿಸಿದ್ದಾರೆ.

    ನಮ್ಮನ್ನು ನೋಡಿದ ಕೂಡಲೇ ಆಡುಗಳನ್ನು ಮೇಯಿಸುತ್ತಿದ್ದ ಮಾಸ್ಕ್ ಧರಿಸದ ಯುವಕ ಪರಾರಿಯಾದನು. ಹಾಗಾಗಿ ಆಡುಗಳನ್ನು ಠಾಣೆಗೆ ತರಲಾಯ್ತು. ನಂತರ ಠಾಣೆಗೆ ಬಂದ ಮಾಲೀಕನಿಗೆ ಆಡುಗಳನ್ನು ಹಸ್ತಾಂತರಿಸಲಾಯ್ತು ಎಂದು ಸೈಫುದ್ದೀನ್ ಬೇಗ್ ಹೇಳಿದ್ದಾರೆ.

    ಆಡುಗಳನ್ನು ಕರೆತಂದ ಒರ್ವ ಪೊಲೀಸ್, ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಬಂಧಿಸಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜನರು ತಮ್ಮ ಸಾಕು ನಾಯಿಗಳಿಗೆ ಮಾಸ್ಕ್ ಹಾಕುತ್ತಿದ್ದಾರೆ. ಅದೇ ರೀತಿ ಆಡುಗಳಿಗೂ ಮಾಸ್ಕ್ ಹಾಕಬೇಕು ಎಂದಿದ್ದಾರೆ. ಇನ್ನು ಆಡುಗಳ ಬಂಧನದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳಿಗೆ ಮುನ್ನುಡಿ ಬರೆದಿದೆ.

  • ರಾಜ್ಯದ ವಿವಿಧೆಡೆ ಭಾರೀ ಮಳೆ- ಸಿಡಿಲು ಬಡಿದು 21 ಕುರಿ, ಎತ್ತು ಸಾವು

    ರಾಜ್ಯದ ವಿವಿಧೆಡೆ ಭಾರೀ ಮಳೆ- ಸಿಡಿಲು ಬಡಿದು 21 ಕುರಿ, ಎತ್ತು ಸಾವು

    ಬೆಂಗಳೂರು: ರಾಯಚೂರು, ಗದಗ, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆಡೆ ಇಂದು ಭಾರೀ ಮಳೆಯಾಗಿದ್ದು, ರಾಯಚೂರು ಜಿಲ್ಲೆಯಲ್ಲಿ ಸಿಡಿಲು ಬಡಿದು 21 ಕುರಿ, ಒಂದು ಎತ್ತು ಸಾವನ್ನಪ್ಪಿದೆ.

    ರಾಯಚೂರು ಜಿಲ್ಲೆಯ ವಿವಿಧಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ದೇವದುರ್ಗ ತಾಲೂಕಿನ ಕುರ್ಲೇರ ದೊಡ್ಡಿಯಲ್ಲಿ ಸಿಡಿಲು ಬಡಿದು 10ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮಲ್ಲಯ್ಯ ಎಂಬವರು ತಮ್ಮ ಕುರಿಗಳನ್ನ ಮೇಯಿಸಲು ಹೋದಾಗ ಮಧ್ಯಾಹ್ನ ವೇಳೆ ಘಟನೆ ನಡೆದಿದೆ. ಮಾನ್ವಿ ತಾಲೂಕಿನ ಕಾತರ್ಕಿಯಲ್ಲಿ ಕೊರವಿ ಗ್ರಾಮದ ಹನುಮಂತ ಎಂಬವರಿಗೆ ಸೇರಿದ 11 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

    ಲಿಂಗಸುಗೂರಿನ ಮುದಗಲ್ ಸಮೀಪದ ಕೆ.ಮರಿಯಮ್ಮನಹಳ್ಳಿಯಲ್ಲಿ ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದೆ. ಪ್ರಕಾಶಪ್ಪ ಎನ್ನುವ ರೈತನಿಗೆ ಸೇರಿದ್ದ ಎತ್ತು ಸಿಡಿಲಿಗೆ ಬಲಿಯಾಗಿದೆ. ಜಮೀನಿನಲ್ಲಿ ಬೇವಿನ ಮರದ ಕೆಳಗೆ ಕಟ್ಟಿ ಹಾಕಲಾಗಿದ್ದ ಎರಡು ಎತ್ತುಗಳಲ್ಲಿ ಒಂದು ಸಾವನ್ನಪ್ಪಿದೆ. ಎತ್ತು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಜಿಲ್ಲೆಯ ಹಲವು ಕಡೆ ಗುಡುಗು ಸಹಿತ ಮಳೆಯಾಗಿದ್ದು, ಮಳೆಯ ವೇಳೆ ಸಿಂಧನೂರಿನ ಬಾದರ್ಲಿಯಲ್ಲಿ ಸಿಡಿಲು ಬಡಿದು ತೆಂಗಿನ ಗಿಡಕ್ಕೆ ಬೆಂಕಿ ಬಿದ್ದು ಹಾಳಾಗಿದೆ.

    ಗದಗ: ತಾಲೂಕಿನ ಹರ್ಲಾಪುರ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಯ ಆರ್ಭಟಕ್ಕೆ ಜನ ನಲುಗಿಹೋಗಿದ್ದಾರೆ. ಸತತ ಒಂದು ಗಂಟೆಕಾಲ ಆಲಿಕಲ್ಲು, ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

    ಕಲ್ಲಿನಂತೆ ರಪರಪನೆ ಬಿದ್ದ ಆಲಿಕಲ್ಲು ನೋಡಿ ಜನ ಆಶ್ಚರ್ಯ ಚಕಿತರಾಗಿದ್ದರು. ಕೆಲವರು ಕೆಲಕಾಲ ಬೊಗಸೆಯಲ್ಲಿ ಆಲಿಕಲ್ಲು ಹಿಡಿದುಕೊಂಡು ಖುಷಿಪಟ್ಟರು. ಕೆಲವರು ಆಲಿಕಲ್ಲಿನ ರಭಸಕ್ಕೆ ಓಡಿ ಗೂಡುಸೇರಿದರು. ಬಿಸಿಲುನಲ್ಲಿ ಬೆಂದ ಜನರಿಗೆ ಒಂದುಕಡೆ ತಂಪೆರೆದಂತಾದ್ರೆ, ಮತ್ತೊಂದು ಕಡೆ ಆಲಿಕಲ್ಲು ಅಪಾಯ ತಂದಂತಿದೆ.

    ಭರಣಿ ಮಳೆಯ ಕೊನೆಯ ಕ್ಷಣದಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲು ಸುರಿಸಿಹೋಗಿದೆ. ಇದರಿಂದ ರೈತಾಪಿಕುಲ ಚಿಂತೆಗಿಡುಮಾಡಿದೆ. ಯಾಕೆಂದರೆ ಆಲಿಕಲ್ಲು ಮಳೆಯಾದರೆ ಮುಂದೆ ಸಕಾಲಕ್ಕೆ ಮಳೆಯಾಗಲ್ಲ. ಸರಿಯಾಗಿ ಬೆಳೆ ಬರೋಲ್ಲ ಎಂಬ ನಂಬಿಕೆ ರೈತಾಪಿ ಕುಲದ್ದಾಗಿದೆ. ಇಂದಿನ ಮಳೆ ಕಂಡು ಮುಂದೆ ಏನಾಗುತ್ತೋ ಎನ್ನುವ ಚಿಂತೆ ರೈತರು ಜಾರುವಂತೆ ಮಾಡಿದೆ. ಅಷ್ಟೇ ಅಲ್ಲದೆ ಈ ವರುಣನ ಅಬ್ಬರಕ್ಕೆ ಅನೇಕ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿವೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವರುಣ ಅಬ್ಬರಿಸಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇತ್ತ ಚಿಕ್ಕಮಗಳೂರು ಜಿಲ್ಲೆ ಕೆಲ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.