Tag: goa

  • ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ

    ಕೊನೆಗೂ ಮಾರಾಟವಾಯ್ತು ಗೋವಾದಲ್ಲಿನ ವಿಜಯ್ ಮಲ್ಯ ಮನೆ

    ನವದೆಹಲಿ: ಸತತ ಪ್ರಯತ್ನದ ಬಳಿಕ ಕೊನೆಗೂ ಎಸ್‍ಬಿಐ ನೇತೃತ್ವದ ಸಾಲದಾತರ ಸಮೂಹ ಗೋವಾದಲ್ಲಿನ ವಿಜಯ್ ಮಲ್ಯ ಮನೆ ಕಿಂಗ್‍ಫಿಶರ್ ವಿಲ್ಲಾ ವನ್ನ ಮಾರಾಟ ಮಾಡಿದ್ದಾರೆ.

    ಈ ಹಿಂದೆ ಕಿಂಗ್‍ಫಿಶರ್ ವಿಲ್ಲಾದ ಹರಾಜು ಪ್ರಕ್ರಿಯೆ 3 ಬಾರಿ ವಿಫಲವಾಗಿತ್ತು. ಇದೀಗ ಚಿತ್ರ ನಿರ್ಮಾಣ ಸಂಸ್ಥೆಯಾದ ವೈಕಿಂಗ್ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್, ಖಾಸಗಿ ಒಪ್ಪಂದದ ಮೇಲೆ 73.01 ಕೋಟಿ ರೂಪಾಯಿಗೆ ಮನೆಯನ್ನ ಖರೀದಿಸಿದೆ. ನಟ ಹಾಗೂ ನಿರ್ಮಾಪಕರಾದ ಸಚಿನ್ ಜೋಶಿ, ವೈಕಿಂಗ್ ಮೀಡಿಯಾದ ಮಾಲೀಕರಾಗಿದ್ದಾರೆ. ಸಚಿನ್ ಗೋವಾದಲ್ಲಿ ಬೀರ್ ಬ್ರ್ಯಾಂಡ್‍ವೊಂದನ್ನು ಸಹ ಹೊಂದಿದ್ದಾರೆ.

    ಕಿಂಗ್‍ಫಿಶರ್ ವಿಲ್ಲಾ ವಿಜಯ್ ಮಲ್ಯ ಮಾಲೀಕತ್ವದಲ್ಲಿದ್ದಾಗ ಐಷಾರಾಮಿ ಪಾರ್ಟಿಗಳನ್ನ ಆಯೋಜಿಸಿದ್ದರಿಂದ ಈ ಮನೆ ತುಂಬಾ ಫೇಮಸ್ ಆಗಿತ್ತು.

    2016ರ ಅಕ್ಟೋಬರ್‍ನಲ್ಲಿ ಮೊದಲ ಬಾರಿಗೆ ಕಿಂಗ್‍ಫಿಶರ್ ವಿಲ್ಲಾವನ್ನ 85.29 ರೂ.ಗಳ ಕನಿಷ್ಠ ಬೆಲೆಗೆ ಹರಾಜಿಗಿಡಲಾಗಿತ್ತು. ಆದ್ರೆ ಮನೆ ಕೊಳ್ಳಲು ಯಾರೂ ಮುಂದೆ ಬರದ ಕಾರಣ ಡಿಸೆಂಬರ್‍ನಲ್ಲಿ ಬೆಲೆ ಕಡಿಮೆ ಮಾಡಿ 81 ಕೋಟಿ ರೂ. ಕನಿಷ್ಠ ಬೆಲೆಗೆ ಮತ್ತೆ ಹರಾಜಿಗಿಡಲಾಗಿತ್ತು. ಇದೂ ವಿಫಲವಾಗಿ ಬಳಿಕ 2017ರ ಮಾರ್ಚ್‍ನಲ್ಲಿ 73 ಕೋಟಿ ರೂ.ಗೆ ಮನೆಯನ್ನು ಹರಾಜಿಗಿಡಲಾಗಿತ್ತು. ಇದೀಗ ಕನಿಷ್ಠ ಬೆಲೆಗಿಂತ 1 ಲಕ್ಷ ರೂ. ಹೆಚ್ಚಿನ ಹಣ ಕೊಟ್ಟು  ಖಾಸಗಿ ಒಪ್ಪಂದದ ಮೇಲೆ ವೈಕಿಂಗ್ ಮೀಡಿಯಾ ಮನೆಯನ್ನ ಖರೀದಿಸಿದೆ.

    17 ಸಾಲದಾತರ ಒಕ್ಕೂಟ ವಿಜಯ್ ಮಲ್ಯರ 9 ಸಾವಿರ ಕೋಟಿ ರೂ. ನಷ್ಟು ಸಾಲವನ್ನು ಹಿಂಪಡೆಯಲು ಪಯತ್ನ ನಡೆಸಿವೆ. ಮಲ್ಯಗೆ ಸೇರಿದ ಮುಂಬೈನಲ್ಲಿರುವ ಮತ್ತೊಂದು ಮನೆ ಕಿಂಗ್‍ಫಿಶರ್ ಹೌಸ್ ಕೂಡ ಹರಾಜಿಗಿಡಲಾಗಿದೆ.

  • ಹೈಕಮಾಂಡ್‍ಗೆ ಶಾಕ್: ಗೋವಾ ಹಿರಿಯ ಶಾಸಕ ವಿಶ್ವಜಿತ್ ರಾಣೆ ಕಾಂಗ್ರೆಸ್‍ಗೆ ಗುಡ್‍ಬೈ

    ಹೈಕಮಾಂಡ್‍ಗೆ ಶಾಕ್: ಗೋವಾ ಹಿರಿಯ ಶಾಸಕ ವಿಶ್ವಜಿತ್ ರಾಣೆ ಕಾಂಗ್ರೆಸ್‍ಗೆ ಗುಡ್‍ಬೈ

    ಪಣಜಿ: ಚುನಾವಣೆ ಫಲಿತಾಂಶದಲ್ಲಿ ಅತ್ಯಧಿಕ ಸ್ಥಾನಗಳಿಸಿದರೂ ಗೋವಾದಲ್ಲಿ ಸರ್ಕಾರ ನಡೆಸಲು ಅನುಮತಿ ನೀಡದ್ದಕ್ಕೆ ರಾಜ್ಯಪಾಲರ ನಡೆಯನ್ನು ಟೀಕಿಸಿದ್ದ ಕಾಂಗ್ರೆಸ್‍ಗೆ ಈಗ ಶಾಕಿಂಗ್ ಎನ್ನುವಂತೆ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಕೈ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್‍ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಅವರ ಮಗ ವಿಶ್ವಜಿತ್ ರಾಣೆ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮನೋಹರ್ ಪರಿಕ್ಕರ್ ಅವರ ವಿಶ್ವಾಸ ಮತಯಾಚನೆ ವೇಳೆ ಗೈರಾಗಿದ್ದ ರಾಣೆ ಸಂಜೆ ವೇಳೆ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪಕ್ಷದ ಕ್ರಮವನ್ನು ಟೀಕಿಸಿ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದ ರಾಣೆ ಕ್ರಮ ತೆಗೆದುಕೊಳ್ಳದೇ ಇದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.

    ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬೇಸತ್ತು ಹೋಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮುಂದುವರಿಯುವುದಿಲ್ಲ. ಹೊಸದಾಗಿ ಚುನಾವಣೆ ಎದುರಿಸುತ್ತೇನೆ ಎಂದು ವಿಶ್ವಜಿತ್ ರಾಣೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪಕ್ಷೇತರ ಅಭ್ಯರ್ಥಿಯಾಗಿ ರಾಣೆ ಚುನಾವಣೆಗೆ ನಿಲ್ಲುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ ಎನ್ನುವ ಬಗ್ಗೆ ಇದೂವರೆಗೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಸಿಎಂ ಮನೋಹರ್ ಪರಿಕ್ಕರ್ ಕಾಂಗ್ರೆಸ್ ಶಾಸಕರೊಬ್ಬರು ನನಗೆ ಮೆಸೇಜ್ ಮಾಡಿದ್ದಾರೆ. ಅವರು ಪಕ್ಷದ ಹಿರಿಯ ನಾಯಕರಿಂದ ಬೇಸತ್ತು ಹೋಗಿದ್ದಾರೆ. ಶೀಘ್ರವೇ ಆ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಬುಧವಾರ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಹೀಗಾಗಿ ರಾಣೆ ಅವರ ಬಗ್ಗೆ ಮನೋಹರ್ ಪರಿಕ್ಕರ್ ಹೇಳಿದ್ದಾರಾ ಅಥವಾ ಬೇರೆ ಶಾಸಕರ ಬಗ್ಗೆ ಹೇಳಿದ್ದಾರಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಮೂರು ಬಾರಿ ಶಾಸಕ: ವಾಲ್‍ಪಾಯ್ ಕ್ಷೇತ್ರದಿಂದ 2007ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 2012, 2017ರಲ್ಲಿ ಕಾಂಗ್ರೆಸ್ ನಿಂದ ನಿಂತು ವಿಶ್ವಜಿತ್ ರಾಣೆ ಗೆದ್ದಿದ್ದರು. ಕೊನೆಯ ಚುನಾವಣೆಯಲ್ಲಿ 13493 ಮತಗಳನ್ನು ಪಡೆಯುವ ಮೂಲಕ 5,678 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದರು.

    ಅಧಿಕಾರಕ್ಕೆ ಬಿಜೆಪಿ: ಇಂದು ನಡೆದ ಬಹುಮತ ಸಾಬೀತು ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆದ್ದಿದ್ದಾರೆ. 22 ಮಂದಿ ಶಾಸಕರು ಮನೋಹರ್ ಪರಿಕ್ಕರ್ ಅವರನ್ನು ಬೆಂಬಲಿಸುವ ಮೂಲಕ ಗೋವಾದಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ.

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಗೆದ್ದಿದ್ದರೆ ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿತ್ತು. ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು, ಇಷ್ಟು ಸೀಟ್‍ಗಳು ಯಾವುದೇ ಪಕ್ಷಕ್ಕೆ ಸಿಗದ ಹಿನ್ನೆಲೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ಈಗ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರು ಮತ್ತು ಓರ್ವ ಎನ್‍ಸಿಪಿ ಶಾಸಕರ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಏರಿದೆ.

  • ಗೋವಾದಲ್ಲಿ ಇಂದಿನಿಂದ ಪರಿಕ್ಕರ್ ಆಡಳಿತ

    ಗೋವಾದಲ್ಲಿ ಇಂದಿನಿಂದ ಪರಿಕ್ಕರ್ ಆಡಳಿತ

    ಪಣಜಿ: ಬಹುಮತ ಸಾಬೀತು ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆದ್ದಿದ್ದಾರೆ. 22 ಮಂದಿ ಶಾಸಕರು ಮನೋಹರ್ ಪರಿಕ್ಕರ್ ಅವರನ್ನು ಬೆಂಬಲಿಸುವ ಮೂಲಕ ಗೋವಾದಲ್ಲಿ ಅಧಿಕೃತವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿದೆ.

    ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಗೆದ್ದಿದ್ದರೆ ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿತ್ತು. ಸರಳ ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದ್ದು, ಇಷ್ಟು ಸೀಟ್‍ಗಳು ಯಾವುದೇ ಪಕ್ಷಕ್ಕೆ ಸಿಗದ ಹಿನ್ನೆಲೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು.

    ಈಗ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರು ಮತ್ತು ಓರ್ವ ಎನ್‍ಸಿಪಿ ಶಾಸಕರ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಏರಿದೆ.

    ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ನಡೆಯನ್ನು ದೂರಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಸುಪ್ರೀಂ ಕಾಂಗ್ರೆಸ್ ಅರ್ಜಿಯನ್ನು ಮಾನ್ಯ ಮಾಡದೇ 48 ಗಂಟೆಯ ಒಳಗಡೆ ಬಹುಮತ ಸಾಬೀತುಪಡಿಸುವಂತೆ ಮಂಗಳವಾರ ಬಿಜೆಪಿಗೆ ಸೂಚಿಸಿತ್ತು.

    ಇದನ್ನೂ ಓದಿ: ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು

  • ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    ಪಂಜಾಬ್‍ನಲ್ಲಿಂದು ಅಮರಿಂದರ್ ಅಧಿಕಾರ ಗ್ರಹಣ – ಗೋವಾದಲ್ಲಿ ಪರಿಕ್ಕರ್‍ಗೆ ಮತ ಪರೀಕ್ಷೆ

    – ಉತ್ತರಪ್ರದೇಶ ಸಿಎಂ ಆಯ್ಕೆ ಇನ್ನೂ ವಿಳಂಬ

    ನವದೆಹಲಿ: 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಆಸರೆಯಂತಿರುವ ಪಂಜಾಬ್‍ನಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಮರಿಂದರ್ ಸಿಂಗ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಮಾತ್ರ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. ರಾಜಭವನದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಬಡ್ನೋರ್ ಪ್ರಮಾಣವಚನ ಬೋಧಿಸಲಿದ್ದಾರೆ. ನವಜೋತ್ ಸಿಂಗ್ ಸಿಧು, ಮನ್‍ಪ್ರೀತ್ ಸಿಂಗ್ ಬಾದಲ್ ಸೇರಿ ಒಟ್ಟು 9 ಮಂದಿ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. 117 ಸದಸ್ಯ ಬಲದ ವಿಧಾನಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ 77 ಶಾಸಕರನ್ನು ಹೊಂದಿದೆ. ಆಮ್ ಆದ್ಮಿ ಪಾರ್ಟಿ 20, ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟ 15 ಶಾಸಕರನ್ನು ಹೊಂದಿದೆ.

    ಮಂಗಳವಾರವಷ್ಟೇ ಗೋವಾದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಹಣೆಬರಹ ಇವತ್ತು ನಿರ್ಧಾರವಾಗಲಿದೆ. ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಇಂದು ಬಹುಮತ ಸಾಬೀತುಪಡಿಸಬೇಕಿದೆ. 40 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾವರ್ಡ್(ಜಿಎಫ್‍ಪಿ) ಪಾರ್ಟಿ ತಲಾ ಮೂವರು ಶಾಸಕರನ್ನು ಹೊಂದಿದೆ. ಮೂವರು ಪಕ್ಷೇತರ ಮತ್ತು ಓರ್ವ ಎನ್‍ಸಿಪಿ ಶಾಸಕರಿದ್ದಾರೆ. ಇವರಲ್ಲಿ ಎಂಜಿಪಿ, ಜಿಎಫ್‍ಪಿ ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದ್ದಾರೆ. ಅಲ್ಲಿಗೆ ಅಗತ್ಯ ಸರಳ ಬಹುಮತದ ಸಂಖ್ಯೆ 21ನ್ನು ದಾಟುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 8 ಮಂದಿ ಸಚಿವರಲ್ಲಿ ಎಂಜಿಪಿಯ ಇಬ್ಬರು, ಜಿಎಫ್‍ಪಿಯ ಮೂವರು ಮತ್ತು ಸ್ವತಂತ್ರ ಶಾಸಕರು ಸೇರಿದ್ದಾರೆ. ಈ ಮೂಲಕ ಯಾವುದೇ ಕಾರಣಕ್ಕೂ ಸರ್ಕಾರ ಬೀಳದಂತೆ ನೋಡಿಕೊಳ್ಳುವ ಕಸರತ್ತನ್ನು ಬಿಜೆಪಿ ಮಾಡಿಕೊಂಡಿದೆ.

    ಈ ನಡುವೆ ಅತೀ ದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಗೆ ಆಹ್ವಾನ ನೀಡಿರಲಿಲ್ಲ ಎಂದು ರಾಜ್ಯಪಾಲರ ವಿರುದ್ಧ ದೂರಿದ್ದ ಕಾಂಗ್ರೆಸ್ ಸುಪ್ರೀಂಕೋರ್ಟ್ ಕದ ತಟ್ಟಿತ್ತು. ಈ ಹಿನ್ನೆಲೆಯಲ್ಲಿ ಗುರುವಾರವೇ ಬಹುಮತ ಸಾಬೀತುಪಡಿಸುವಂತೆ ನ್ಯಾಯಾಲಯ ಬಿಜೆಪಿಗೆ ಸೂಚಿಸಿತ್ತು.

    ಸೀಟು ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಆದ್ರೆ ಕಂಡುಕೇಳರಿಯದ ಜಯದ ಬಳಿಕವೂ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ವಿಳಂಬವಾಗಿದೆ. ನಾಲ್ಕು ದಶಕಗಳ ಬಳಿಕ ಸಿಕ್ಕಿರುವ ಪ್ರಚಂಡ ಬಹುಮತದ ಹಿನ್ನೆಲೆಯಲ್ಲಿ ಸರ್ವ ಸಮುದಾಯಗಳನ್ನು ಓಲೈಸಬಲ್ಲ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವುದೇ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದೆ. ನೂತನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸುವ ಹೊಣೆ ಹೊತ್ತಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭೂಪೇಂದರ್ ಯಾದವ್ ಶನಿವಾರದಷ್ಟೊತ್ತಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

    ರಾಜ್ಯದಲ್ಲಿ ಕಟ್ಟಕಡೆಯ ಬಿಜೆಪಿ ಸಿಎಂ ಆಗಿರುವ ರಾಜನಾಥ್ ಸಿಂಗ್‍ರ ಹೆಸರು ಮುಂಚೂಣಿಯಲ್ಲಿದೆಯಾದರೂ ಅದರ ಬಗ್ಗೆ ಚರ್ಚೆಯೇ ಅಪ್ರಯೋಜಕ ಎಂದು ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಕುರಿತ ಚರ್ಚೆ ನಡೆಸದಂತೆ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ. ಮೂಲಗಳ ಪ್ರಕಾರ ನಾಳೆ ಪ್ರಧಾನಿ ನರೇಂದ್ರ ಮೋದಿ ಲಕ್ನೋಗೆ ಭೇಟಿ ನೀಡುವ ಸಾಧ್ಯತೆ ಇದೆ. ಪ್ರಚಂಡ ಫಲಿತಾಂಶದ ನಂತರ ರಾಜ್ಯಕ್ಕೆ ಪ್ರಧಾನಿ ನೀಡುತ್ತಿರುವ ಮೊಟ್ಟ ಮೊದಲ ಭೇಟಿ ಇದಾಗಲಿದೆ. ಉತ್ತರಪ್ರದೇಶ ಜೊತೆಗೆ ಉತ್ತರಾಖಂಡ್‍ನಲ್ಲೂ ಅದ್ಭುತ ಬಹುಮತ ಸಿಕ್ಕಿದ್ದರೂ ಮುಖ್ಯಮಂತ್ರಿ ಯಾರೆಂಬುದು ಇನ್ನೂ ಖಾತ್ರಿಯಾಗಿಲ್ಲ.

  • ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು

    ನಾಲ್ಕನೇಯ ಬಾರಿ ಗೋವಾ ಸಿಎಂ ಆದ ಪರಿಕ್ಕರ್: ಪ್ರಮಾಣವಚನದ ವೇಳೆ ಸಣ್ಣ ಎಡವಟ್ಟು

    ಪಣಜಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಅತಂತ್ರವಾಗಿದ್ದ ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಗೋವಾದ ನೂತನ ಸಿಎಂ ಆಗಿ ಮನೋಹರ್ ಪರಿಕ್ಕರ್ ಸಂಜೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪರಿಕ್ಕರ್ ಜೊತೆಗೆ 8 ಮಂದಿ ಸಚಿವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.

    ಪರಿಕ್ಕರ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಸಿಎಂ ಸಣ್ಣ ಎಡವಟ್ಟು ಮಾಡಿಕೊಂಡಿದ್ದರು. ಪರಿಕ್ಕರ್ ಮೊದಲು ‘ಮಂತ್ರಿ’ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆ ಬಳಿಕ ಮತ್ತೆ ರಾಜ್ಯಪಾಲರ ಬಳಿ ತೆರಳಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ ಮಾಡಲು ಅನುಮತಿ ಪಡೆದು ಮತ್ತೆ ‘ಮುಖ್ಯಮಂತ್ರಿ’ಯಾಗಿ ಪ್ರಮಾಣ ಸ್ವೀಕರಿಸಿದರು.

    ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗಿಯಾಗಿದ್ರು.

    ಇದಕ್ಕೂ ಮೊದಲು ಗೋವಾ ರಾಜ್ಯಪಾಲರು ಪರಿಕ್ಕರ್ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯುತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮೊದಲು ನೀವೇಕೆ ರಾಜ್ಯಪಾಲರನ್ನು ಸರ್ಕಾರ ರಚಿಸಲು ಹಕ್ಕು ಮಂಡಿಸಲಿಲ್ಲ? ಇಂತಹ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಮಾತ್ರ ಸಂಖ್ಯಾಬಲ ಇದ್ದಿದ್ದರಿಂದ ಕಾಂಗ್ರೆಸ್‍ಗೆ ಆಹ್ವಾನ ನೀಡುವ ಪ್ರಶ್ನೆಯೇ ಇಲ್ಲ. ನಿಮಗೆ ಸಂಖ್ಯಾಬಲವಿದ್ದರೆ ಅದನ್ನು ಈಗಲೇ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಗ್ವಿ ಅವರಿಗೆ ಪೀಠ ಪ್ರಶ್ನಿಸಿತು.

    ಪರಿಕ್ಕರ್ ಹಕ್ಕು ಮಂಡನೆಯನ್ನು ತಿರಸ್ಕಾರ ಮಾಡಲು ನಿಮ್ಮ ಬಳಿ ಬಹುಮತ ಸಂಖ್ಯೆ ಇಲ್ಲ. ಅದಕ್ಕಾಗಿ ನಿಮ್ಮನ್ನ ಆಹ್ವಾನಿಸಿಲ್ಲ ಅಂತ ಅರ್ಜಿಯನ್ನ ವಜಾ ಮಾಡಿದ್ರು. ಆದ್ರೆ ಮಾರ್ಚ್ 16ರಂದು ಅಂದರೆ 48 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಪರಿಕ್ಕರ್ ಅವರಿಗೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ.

    4ನೇ ಬಾರಿ ಸಿಎಂ: ಪರಿಕ್ಕರ್ ಈ ಹಿಂದೆ 2000, 2002 ನಂತರ 2012ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 2012ರ ಮಾರ್ಚ್ 19 ರಿಂದ 2014ರ ನವೆಂಬರ್ 8 ರವರೆಗೆ ಗೋವಾ ಮುಖ್ಯಮಂತ್ರಿಯಾಗಿದ್ದರು. 2014 ನವೆಂಬರ್ ನಿಂದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ರಾಜೀನಾಮೆಯ ಬಳಿಕ ಲಕ್ಷ್ಮಿಕಾಂತ್ ಪರ್ಸೇಕರ್ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ಎಲ್ಲಿಂದ ಸ್ಪರ್ಧೆ?: ಗೋವಾದಲ್ಲಿ ವಿಧಾನ ಸಭೆ ಮಾತ್ರ ಇದ್ದು, ವಿಧಾನ ಪರಿಷತ್ ಇಲ್ಲ. ಹೀಗಾಗಿ ಮನೋಹರ್ ಪರಿಕ್ಕರ್ ಚುನಾವಣೆಗೆ ನಿಲ್ಲುವುದು ಅನಿವಾರ್ಯವಾಗಿದೆ. ಈ ಮೊದಲು ಪರಿಕ್ಕರ್ ಮಾಫ್ಸಾದಿಂದ ಸ್ಪರ್ಧಿಸಲಿದ್ದಾರೆ. ಪರಿಕ್ಕರ್‍ಗಾಗಿ ಮಾಜಿ ಉಪ ಮುಖ್ಯಮಂತ್ರಿ ಫ್ರಾನ್ಸಿಸ್ ಡಿಸೋಜಾ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸದಾನಂದ ತಾನವಾಡೆ ಪ್ರತಿಕ್ರಿಯಿಸಿ, ಮಾಫ್ಸಾದಿಂದ ಮನೋಹರ್ ಪರಿಕ್ಕರ್ ಕಣಕ್ಕೆ ಇಳಿಯುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ಬಿಜೆಪಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ರಾಜಧಾನಿ ಪಣಜಿಯಿಂದ ಪರಿಕ್ಕರ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮಣಿಪುರದಲ್ಲಿ ನಾಳೆ ಪ್ರಮಾಣವಚನ: ಮಣಿಪುರದಲ್ಲೂ ಬಿಜೆಪಿ ಸರ್ಕಾರ ರಚನೆಗೆ ಗವರ್ನರ್ ನಜ್ಮಾ ಹೆಪ್ತುಲ್ಲಾ ಆಹ್ವಾನ ನೀಡಿದ್ದು, ನಾಳೆ ಮಧ್ಯಾಹ್ನ 1.30ಕ್ಕೆ ಸಮಯ ನಿಗದಿಯಾಗಿದೆ. ಮಣಿಪುರದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಪ್ರಥಮ ಸಿಎಂ ಆಗಿ ಬೀರೇನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    https://www.youtube.com/watch?v=X1k4hWLA2TI

  • ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ನವದೆಹಲಿ: ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಬಹುದು, ಆದರೆ ಗುರುವಾರದಂದು ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದರಿಂದ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ.

    ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮೊದಲು ನೀವೇಕೆ ರಾಜ್ಯಪಾಲರನ್ನು ಸರ್ಕಾರ ರಚಿಸಲು ಹಕ್ಕು ಮಂಡಿಸಲಿಲ್ಲ? ಇಂತಹ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಮಾತ್ರ ಸಂಖ್ಯಾಬಲ ಇದ್ದಿದ್ದರಿಂದ ಕಾಂಗ್ರೆಸ್‍ಗೆ ಆಹ್ವಾನ ನೀಡುವ ಪ್ರಶ್ನೆಯೇ ಇಲ್ಲ. ನಿಮಗೆ ಸಂಖ್ಯಾಬಲವಿದ್ದರೆ ಅದನ್ನು ಈಗಲೇ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಗ್ವಿ ಅವರಿಗೆ ನ್ಯಾ. ಪ್ರಶ್ನಿಸಿತು.

    ಅಲ್ಲದೆ ಮನೋಹರ್ ಪರಿಕ್ಕರ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದ್ದು, ಮಾರ್ಚ್ 16ರಂದು ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿತು. ಈ ನಡುವೆ ಇಂದು ಮಧ್ಯಾಹ್ನ 1.30ಕ್ಕೆ ಕಾಂಗ್ರೆಸ್ ನಿಯೋಗ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನ ಭೇಟಿಯಾಗಲಿದೆ.

    ಗೋವಾ ವಿಧಾನಸಭೆಯ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 17 ಹಾಗೂ ಬಿಜೆಪಿ 13 ಸ್ಥಾನಗಳನ್ನ ಗೆದ್ದಿದವು. ಬಹುಮತಕ್ಕೆ ಬೇಕಾಗಿದ್ದಿದ್ದು 21 ಸ್ಥಾನಗಳು. ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಇತರೆ ಪ್ರಾದೇಶಿಕ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಭಾನುವಾರದಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು.

  • ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಪಣಜಿ: ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಧಾರದ ಪರವಾಗಿ ಮಂಗಳವಾರ ಆದೇಶ ನೀಡಿದರೆ, ಸಂಜೆ 5 ಗಂಟೆಗೆ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    13 ಶಾಸಕರಿರುವ ಬಿಜೆಪಿಯವರು, ಎಂಜಿಪಿಯ ಮೂವರು, ಜಿಎಫ್‍ಪಿಯ ಮೂವರು ಹಾಗೂ ಇಬ್ಬರು ಪಕ್ಷೇತರರನ್ನ ತನ್ನತ್ತ ಸೆಳೆದುಕೊಂಡಿದ್ದಾರೆ. ಪರಿಕ್ಕರ್ ಜೊತೆ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸುಪ್ರೀಂ ನಲ್ಲಿ ಅರ್ಜಿ: ಸೋಮವಾರ ಸಂಜೆ ಹೊತ್ತಿಗೆ ಪರಿಕ್ಕರ್ ಸಿಎಂ ಆಗುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅರ್ಜಿಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋರ್ಟ್ ತುರ್ತು ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ್ದು ಮಂಗಳವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಲಿದೆ.

    ಬಿಜೆಪಿಯ ಹೈಜಾಕ್ ಕ್ರಮವನ್ನು ಕಂಡಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಜನಬಲದ ಎದುರು ಹಣ ಬಲ ಗೆದ್ದಿದೆ ಅಂದ್ರು. ಇನ್ನು ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಚುನಾವಣೆಯನ್ನ ಕದ್ದಿದ್ದಾರೆ ಅಂತ ಪಿ.ಚಿದಂಬರಂ ಆರೋಪಿಸಿದ್ದಾರೆ. ಗೋವಾ ರಾಜ್ಯಪಾಲರು ಬಿಜೆಪಿ ಏಜೆಂಟಂತೆ ವರ್ತಿಸಿದ್ದಾರೆ ಅಂತಾ ಮಾರ್ಗರೆಟ್ ಆಳ್ವಾ ಆರೋಪಿಸಿದ್ದಾರೆ.

    ಈ ನಡುವೆ ಮಾತಾಡಿರುವ ಒಮರ್ ಅಬ್ದುಲ್ಲಾ, 2002ರಲ್ಲಿ ನ್ಯಾಷನಲ್ ಕಾಂಗ್ರೆಸ್ ದೊಡ್ಡ ಪಕ್ಷವಾಗಿತ್ತು. ಆದ್ರೆ ರಾಜ್ಯಪಾಲರು ಪಿಡಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಜೇಟ್ಲಿಗೆ ಮತ್ತೊಮ್ಮೆ ಖಾತೆ: ರಕ್ಷಣಾ ಖಾತೆಗೆ ಪರಿಕ್ಕರ್ ನೀಡಿದ ರಾಜೀನಾಮೆಯನ್ನ ರಾಷ್ಟ್ರಪತಿ ಅಂಗೀಕರಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಗೆ ರಕ್ಷಣಾ ಖಾತೆಯನ್ನ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅರುಣ್ ಜಟ್ಲಿ 2014ರ ಮೇ 26ರಿಂದ ನವೆಂಬರ್ 14ರ ವರೆಗೆ ರಕ್ಷಣಾ ಖಾತೆಯ ಸಚಿವರಾಗಿದ್ದರು.

    ಬಹುಮತಕ್ಕೆ ಎಷ್ಟು ಬೇಕು?
    40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ 17ರಲ್ಲಿ ವಿಜಯಿ ಆಗಿದ್ದರೆ, ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿದೆ. ಇತರೆ ಪಕ್ಷದವರು 10 ಸ್ಥಾನವನ್ನು ಗೆದ್ದುಕೊಂಡಿದ್ದು, ಸರಳ ಬಹುಮತಕ್ಕೆ ಸರ್ಕಾರಕ್ಕೆ 21 ಶಾಸಕರ ಬೆಂಬಲ ಅನಿವಾರ್ಯವಾಗಿದೆ.

  • ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬಂದಿದ್ದು ಈಗಾಗ್ಲೇ ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ. ಆದ್ರೆ ಗೋವಾ ಮತ್ತು ಮಣಿಪುರದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಎರಡೂ ಕಡೆ ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ.

    ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾರಿಗೆ ಮನವಿ ಸಲ್ಲಿಸಿದೆ. ಮನವಿ ಪುರಸ್ಕರಿಸಿರುವ ರಾಜ್ಯಪಾಲರು ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಪರಿಕ್ಕರ್ ಅವರಿಗೆ ಸೂಚಿಸಿದ್ದಾರೆ.

    ಗೋವಾದಲ್ಲಿ ಬಹುಮತಕ್ಕೆ ಬೇಕಾಗಿರುವುದು 21 ಸದಸ್ಯರ ಸಂಖ್ಯಾಬಲ. ಎನ್‍ಸಿಪಿ 1, ಎಂಜಿಪಿ 3, ಜಿಎಫ್‍ಪಿ 3, ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಇನ್ನು ಗೋವಾದಲ್ಲಿ 17 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ ಅಂತ ಉನ್ನತ ಮೂಲಗಳು ತಿಳಿಸಿವೆ.

    ಮಣಿಪುರದಲ್ಲಿ 21 ಸ್ಥಾನಗಳನ್ನ ಗೆದ್ದಿರುವ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 31 ಸದ್ಯಸರ ಅಗತ್ಯವಿದೆ. ಇತರೆ ಪಕ್ಷದ 10 ಮಂದಿ ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಸರ್ಕಸ್ ಮಾಡ್ತಿದೆ. ಇಲ್ಲಿಯೂ ಬಿಜೆಪಿಗೆ ಸ್ಪಷ್ಟ ಬೆಂಬಲ ಸಿಕ್ಕಿದ್ರೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿದಂತಾಗುತ್ತದೆ.

  • ಮನೋಹರ್ ಪರಿಕ್ಕರ್ ಗೋವಾದ ಮುಂದಿನ ಮುಖ್ಯಮಂತ್ರಿ!

    ಮನೋಹರ್ ಪರಿಕ್ಕರ್ ಗೋವಾದ ಮುಂದಿನ ಮುಖ್ಯಮಂತ್ರಿ!

    ಪಣಜಿ: ಗೋವಾ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಪರಿಕ್ಕರ್ ಸಿಎಂ ಆಗುವುದಾದರೆ ಬೆಂಬಲ ನೀಡೋದಾಗಿ ಇತರೆ ಪಕ್ಷ ಹಾಗೂ ಪಕ್ಷೇತರ ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ಎಂಜಿಪಿಯ 3, ಜಿಎಫ್‍ಪಿಯ 3, ಇಬ್ಬರು ಪಕ್ಷೇತರು, ಏಕೈಕ ಎನ್‍ಸಿಪಿ ಶಾಸಕ ಪರಿಕ್ಕರ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ 22 ಶಾಸಕರ ಬೆಂಬಲ ಪರಿಕ್ಕರ್‍ಗೆ ಸಿಕ್ಕಿದೆ. 17 ಸ್ಥಾನ ಗೆದ್ರೂ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

    ಅತ್ತ ಮಣಿಪುರದಲ್ಲೂ ಬಿಜೆಪಿಗೆ 31 ಶಾಸಕರ ಬೆಂಬಲ ಇದ್ದು ನಾವೇ ಸರ್ಕಾರ ರಚಿಸ್ತೇವೆ ಅಂತ ಮಣಿಪುರ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಹೇಳಿದ್ದಾರೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯ ಇದೆ. ಕಾಂಗ್ರೆಸ್ 28 ಸ್ಥಾನಗಳನ್ನ ಗೆದ್ರೆ ಬಿಜೆಪಿ 21ರಲ್ಲಿ ಗೆಲುವು ಸಾಧಿಸಿದೆ.

    ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಗೋವಾ ಹಾಗೂ ಮಣಿಪುರದಲ್ಲಿ ಸರ್ಕಾರ ರಚನೆ ಹಾಗೂ ಉತ್ತರಪ್ರದೇಶ ಹಾಗೂ ಉತ್ತರಾಖಂಡ್‍ನ ಸಿಎಂ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ.

  • ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ: ಪರಿಕ್ಕರ್

    ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ: ಪರಿಕ್ಕರ್

    ಪಣಜಿ: ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಗೋವಾದ ಮಾಜಿ ಸಿಎಂ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ಗೋವಾದಲ್ಲಿ ಆಡಳಿತರೂಢ ಬಿಜೆಪಿಗೆ ಸೋಲಾದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಯಾರಿಗೂ ಸ್ಪಷ್ಟವಾದ ಬಹುಮತ ನೀಡಿಲ್ಲ. ಹೀಗಾಗಿ ಏನಾಗುತ್ತದೆ ಎನ್ನುವುದನ್ನು ಮುಂದೆ ನೋಡೋಣ ಎಂದು ಹೇಳಿದರು.

    ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಮಾತನಾಡಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ್ ನಾವು ಗೆದ್ದಿದ್ದೇವೆ. ಆದರೆ ಗೋವಾದಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಸೋತಿದ್ದು ಯಾಕೆ ಎನ್ನುವುದನ್ನು ನಾವು ಅಧ್ಯಯನ ಮಾಡುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಇಂದೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು.

    ವಿಧಾನಸಭಾ ಚುನಾವಣೆಯ ಬಳಿಕ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರ, ಮತ್ತು ಗೋವಾದಲ್ಲಿ ನಾವು ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.

    ಗೋವಾದಲ್ಲಿ ಒಟ್ಟು 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಇತರರು 10 ಸ್ಥಾನದಲ್ಲಿ ಗೆಲುವು ಕಂಡಿದ್ದಾರೆ. 2012ರ ಚುನಾವಣೆಯಲ್ಲಿ ಬಿಜೆಪಿ 21, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದುಕೊಂಡಿತ್ತು.