Tag: goa

  • ಸರಿಯಾದ ಭಾಷೆ ಬಳಸಲು ಹೇಳಿ, ಇಲ್ಲ ಮತ್ತೊಮ್ಮೆ ಕರ್ನಾಟಕಕ್ಕೆ ಕಾಲಿಟ್ರೆ ನಾವೇ ಪಾಠ ಕಲಿಸ್ತೀವಿ- ಪಾಲೇಕರ್ ವಿರುದ್ಧ ಸಿಡಿದೆದ್ದ ಪ್ರತಾಪ್ ಸಿಂಹ

    ಸರಿಯಾದ ಭಾಷೆ ಬಳಸಲು ಹೇಳಿ, ಇಲ್ಲ ಮತ್ತೊಮ್ಮೆ ಕರ್ನಾಟಕಕ್ಕೆ ಕಾಲಿಟ್ರೆ ನಾವೇ ಪಾಠ ಕಲಿಸ್ತೀವಿ- ಪಾಲೇಕರ್ ವಿರುದ್ಧ ಸಿಡಿದೆದ್ದ ಪ್ರತಾಪ್ ಸಿಂಹ

    ಬೆಂಗಳೂರು: ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕನ್ನಡಿಗರನ್ನು ಹರಾಮಿಗಳು ಎಂದು ಅವಹೇಳನಕಾರಿ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಟ್ವಿಟರ್‍ನಲ್ಲಿ ಗೋವಾ ಸಚಿವರ ವಿರುದ್ದ ಧ್ವನಿ ಎತ್ತಿದ ಸಂಸದ ಪ್ರತಾಪ್ ಸಿಂಹ, ಗೋವಾ ಬಿಜೆಪಿ ಸಚಿವರ ಹೇಳಿಕೆಯನ್ನ ಖಂಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿ ಪರಿಕ್ಕರ್ ಜೀ ಅವರೇ ನಿಮ್ಮ ಸರ್ಕಾರದ ಉದಾರತೆ ಬಗ್ಗೆ ನಮಗೆ ಗೌರವ ಇದೆ. ಕಾಂಗ್ರೆಸ್‍ನ ಕೊಳಕು ರಾಜಕಾರಣದ ಹೊರತಾಗಿ ಕುಡಿಯುವ ನೀರು ಕೊಡುವ ವಿಷಯದ ನಿಮ್ಮ ನಿಲುವಿಗೆ ಗೌರವ ಇದೆ. ಆದ್ರೆ ಪದಗಳು ಉಚಿತವಾಗಿ ಸಿಗುತ್ತವೆ ಅಂತ ಮಾತನಾಡಬಾರದು. ಆ ಪದಗಳನ್ನ ಬಳಸುವಾಗ ಎಚ್ಚರವಿರಬೇಕು. ನಿಮ್ಮ ಸಚಿವ ವಿನೋದ್ ಪಾಲೇಕರ್ ಗೆ ಸರಿಯಾದ ಭಾಷೆ ಬಳಸಲು ಹೇಳಿ. ಇಲ್ಲವಾದರೆ ಅವರು ಇನ್ನೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ನಾವೇ ಪಾಠ ಕಲಿಸಬೇಕಾಗುತ್ತೆ ಅಂತ ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡರ ವಿರುದ್ಧದ ಹೇಳಿಕೆಗೆ ಗೋವಾ ಬಿಜೆಪಿ ವಿರುದ್ಧವೇ ಧ್ವನಿ ಎತ್ತಿದ ಪ್ರತಾಪ ಸಿಂಹ, ಮನೋಹರ್ ಪರಿಕ್ಕರ್ ಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.

    ವಿನೋದ್ ಪಾಲೇಕರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರೋ ಬಿಎಸ್‍ವೈ, ಪಾಲೇಕರ್ ತಕ್ಷಣ ಕನ್ನಡಿಗರ ಕ್ಷಮೆ ಕೇಳಲು ಆಗ್ರಹಿಸಿದ್ದಾರೆ. ಗೋವಾ, ಕರ್ನಾಟಕ ರಾಜ್ಯಗಳ ಮಧ್ಯೆ ಬಿರುಕು ಮೂಡಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕನ್ನಡಿಗರ ಬಗ್ಗೆ ಮಾತನಾಡಲು ಪಾಲೇಕರ್‍ಗೆ ಅಧಿಕಾರವನ್ನ ಯಾರೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

    ಇಂದು ಬೆಳಗಾವಿಯ ಕಣಕುಂಬಿ ಕಳಸಾ ಯೋಜನಾ ಸ್ಥಳಕ್ಕೆ ಸಚಿವ ಎಂ.ಬಿ ಪಾಟೀಲ್ ಭೇಟಿ ನೀಡಲಿದ್ದಾರೆ. ನಿನ್ನೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಕಳಸಾ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದರು. ಪಾಲೇಕರ್ ಹೇಳಿಕೆಯನ್ನು ಎಂ.ಬಿ ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

    ಅತ್ತ ವಿನೋದ್ ಪಾಲೇಕರ್, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಇಲ್ಲದ ಪತ್ರಕರ್ತನಿಂದ ಸುದ್ದಿ ಪ್ರಕಟವಾಗಿದೆ ಎಂದಿದ್ದಾರೆ. ಮಹದಾಯಿ ವಿಚಾರದಲ್ಲಿ ನಮ್ಮ ನಿರ್ಧಾರ ಅಚಲ ಎಂದು ಸಿಎಂ ಸಿದ್ದರಾಮಯ್ಯ ಹಾಘೂ ಬಿಎಸ್‍ವೈಗೆ ಪಾಲೇಕರ್ ಸ್ಪಷ್ಟನೆ ನೀಡಿದ್ದಾರೆ.

    ಕನ್ನಡಿಗರನ್ನು ಹರಾಮಿಗಳು ಎಂದಿದ್ದಾಯ್ತು ಇದೀಗ ಕನ್ನಡಿಗರ ವಿರುದ್ಧವೇ ದೂರು ನೀಡಲು ಗೋವಾ ಸಜ್ಜಾಗಿದೆ. ಕರ್ನಾಟಕ ಅಕ್ರಮ ಎಸಗುತ್ತಿದೆ ಎಂದು ದೂರಲು ಹಗಲು ರಾತ್ರಿ ಗೋವಾ ಕಷ್ಟಪಟ್ಟಿದ್ದು, ಗೋವಾದ ಮಹದಾಯಿ ತಂಡದಿಂದ ದಾಖಲೆಗಳ ತಯಾರಿ ನಡೆದಿದೆ. ನ್ಯಾಯಾಧೀಕರಣದ ಮುಂದೆ ವಾದ ಮಂಡಿಸಲು ಅಗತ್ಯ ದಾಖಲೆಗಳನ್ನು ಗೋವಾ ರೆಡಿ ಮಾಡಿಕೊಂಡಿದೆ.

  • ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

    ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್

    ಬೆಂಗಳೂರು: ಮಹದಾಯಿ ಯೋಜನೆಗೆ ಅವಕಾಶ ಇಲ್ಲ. ಮಹಾರಾಷ್ಟ್ರ, ಕರ್ನಾಟಕ, ಗೋವಾದಲ್ಲಿ ಮಹದಾಯಿ ಹರಿಯುತ್ತಿದ್ದು, ನದಿ ಮೇಲೆ ಮೂರೂ ರಾಜ್ಯಗಳ ಹಕ್ಕಿದೆ ಅಂತಾ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ಕರ್ನಾಟಕ ಮಹದಾಯಿ ನದಿಯನ್ನು ಬೇರೆಡೆಗೆ ತಿರುಗಿಸಲು, ಬೇರೆ ನದಿಪಾತ್ರಕ್ಕೆ ಹರಿಸಲು ಅವಕಾಶ ನೀಡುವುದಿಲ್ಲ. ನದಿಪಾತ್ರದ ಪ್ರದೇಶದಲ್ಲೇ ನೀರನ್ನು ಬಳಸಿಕೊಳ್ಳಬೇಕು. ನಾನು ಬಿಎಸ್ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ನ್ಯಾಯಮಂಡಳಿಯ ವ್ಯಾಪ್ತಿಯಲ್ಲೇ ಮಾತುಕತೆ ನಡೆಸುವ ಬಗ್ಗೆ ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.

    ಕರ್ನಾಟಕದ ಮುಖ್ಯಮಂತ್ರಿಗಳು ಮಹದಾಯಿ ನದಿ ಪಾತ್ರ ತಿರುವಿನ ಬೇಡಿಕೆ ಇಟ್ಟಿದ್ದಾರೆ. ಅಂತರರಾಜ್ಯ ನದಿ ನೀರು ವಿವಾದ ಕಾಯ್ದೆ ಪ್ರಕಾರ, ನೀರಿನ ಕೊರತೆ ಇರುವ ನದಿ ಪಾತ್ರದಿಂದ ನೀರನ್ನು ಬೇರೆಡೆಗೆ ತಿರುಗಿಸುವುದಕ್ಕೆ ಅವಕಾಶ ಇಲ್ಲ. ಮಹದಾಯಿ ನದಿಯಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ನಾವು ದಾಖಲೆ ಸಮೇತ ಸಾಬೀತು ಮಾಡಿದ್ದೇವೆ ಅಂತಾ ಹೇಳಿದ್ದಾರೆ.

  • ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಗೋವಾದಿಂದ ಕರ್ನಾಟಕದ ಗಡಿ ಜನರಿಗೆ ಮತ್ತೊಂದು ಬಿಗ್ ಶಾಕಿಂಗ್ ನ್ಯೂಸ್!

    ಕಾರವಾರ: ಕಾರವಾರ ಸೇರಿದಂತೆ ಕರ್ನಾಟಕದ ಬೇರೆ ಜಿಲ್ಲೆಯ ರೋಗಿಗಳಿಗೆ ಗೋವಾ ಸರ್ಕಾರ ಉಚಿತ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಶಾಕ್ ನೀಡಿದೆ.

    ಗೋವಾ ರಾಜ್ಯದ ನಾಲ್ಕು ಆಸ್ಪತ್ರೆಗಳಲ್ಲಿ ಜನವರಿ ಮೊದಲ ದಿನದಿಂದಲೇ ಶುಲ್ಕ ಪಡೆಯಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಪ್ರಮುಖವಾಗಿ ಕರ್ನಾಟಕದಿಂದ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾದ 80 ಜನ ಹೊರ ರೋಗಿಗಳನ್ನು ದಾಖಲಿಸಿಕೊಂಡಿದ್ದು, ಪ್ರತಿ ರೋಗಿಗಳಲ್ಲಿಯೂ ಶುಲ್ಕ ವಸೂಲಿ ಮಾಡಿದೆ. ಹೊರ ರಾಜ್ಯದಿಂದ ಬಂದ ರೋಗಿಗಳು ಇಷ್ಟು ಶುಲ್ಕ ಕಟ್ಟಲೇಬೇಕಾಗಿದೆ. ಹೊರ ರೋಗಿಗಳಾಗಿ ನೊಂದಾಯಿಸಿಕೊಳ್ಳಲು 50 ರೂ ಗಳಿಂದ 100 ರೂ ಗಳಿಗೆ ಹೆಚ್ಚಳ ಮಾಡಲಾಗಿದೆ.

    ತುರ್ತು ಪರಿಸ್ಥಿತಿಯಲ್ಲಿ ಬಂದವರೂ ಕಡ್ಡಾಯವಾಗಿ ಹಣ ಕಟ್ಟಬೇಕು. ಇನ್ನು ಉಚಿತ ಸೇವೆ ಪಡೆಯುತ್ತಿದ್ದ ಕರ್ನಾಟಕದ ಕಾರವಾರದ ಜನರಿಗೂ ಬಿಸಿ ತಟ್ಟಿದೆ. ಸ್ಕ್ಯಾನಿಂಗ್, ಇಸಿಜಿ ಸೇರಿದಂತೆ ಪ್ರಮುಖ ಸೇವೆಗಳಿಗೂ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಜೋಯಿಡಾ, ಹಳಿಯಾಳ ಸೇರಿದಂತೆ ಕರ್ನಾಟಕದ ಗಡಿಭಾಗದ ಜನರು ಈ ಭಾಗದಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿರದ ಕಾರಣ ಗೋವಾ ರಾಜ್ಯದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುತಿದ್ದರು. ಆದ್ರೆ ಗೋವಾ ಸರ್ಕಾರ ಹೊಸ ವರ್ಷದಲ್ಲಿಯೇ ಕರ್ನಾಟಕದ ಗಡಿಭಾಗದ ಜನರಿಗೆ ಮಹದಾಯಿ ನಂತರ ಮತ್ತೊಂದು ಶಾಕ್ ನೀಡಿದೆ.

    ಗೋವಾದಲ್ಲೇ ಯಾಕೆ ಚಿಕಿತ್ಸೆ?: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಭಾಗದ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತ ಹಾಗೂ ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲು ಉಪಕರಣಗಳಾಗಲಿ ತಜ್ಞ ವೈದ್ಯರಾಗಲಿ ಇಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗಿಂತ ಕೆಳಮಟ್ಟದ ವೈದ್ಯಕೀಯ ಸೇವೆ ನೀಡುತ್ತಿವೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೂ ಇರಬೇಕಾದ ಸವಲತ್ತುಗಳು ರೋಗಿಗಳಿಗೆ ಸಿಗುತ್ತಿಲ್ಲ. ಈ ಕಾರಣದಿಂದ ಈ ಭಾಗದ ಜನರು ನೆರೆಯ ಗೋವಾದ ಪಣಜಿಯಲ್ಲಿರುವ ಬಾಂಬೋಲಿಂ ಆಸ್ಪತ್ರೆಗೆ ಹೋಗುತ್ತಾರೆ.

    ಕರ್ನಾಟಕದಿಂದ ಗೋವಾ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದಾಗಿ ಗೋವಾ ಜನರಿಗೆ ಆಸ್ಪತ್ರೆಯ ಸವಲತ್ತುಗಳು ಸಿಗುವುದರಲ್ಲಿ ತೊಂದರೆಯಾಗುತ್ತಿತ್ತು. ಅಲ್ಲದೇ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಇದನ್ನು ತಡೆಯಲು ಬಿಜೆಪಿ ನೇತೃತ್ವದ ಮನೋಹರ್ ಪರಿಕ್ಕರ್ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಳೆದ ಮೂರು ದಿನಗಳಿಂದ ಕರ್ನಾಟಕದಿಂದ ಹೊರ ರೋಗಿಗಳು ಹಾಗೂ ವಿವಿಧ ಶಸ್ತ್ರ ಚಿಕಿತ್ಸೆಗಾಗಿ ಬಂದವರಲ್ಲಿ ಶುಲ್ಕ ವಸೂಲಿ ಮಾಡಲಾಗಿದ್ದು, ಈಗಾಗಲೇ ಎರಡೂವರೆ ಲಕ್ಷ ರುಪಾಯಿಗಳು ಜಮಾ ಆಗಿದೆ ಎಂದು ಬಾಂಬೋಲಿಂ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಶಿವಾನಂದ ಬಾಂದೇಕರ್ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಹೊರ ರಾಜ್ಯದಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕಾರವಾರ ಭಾಗದಿಂದ ಬರುವ ಅಪಘಾತ ಮತ್ತು ತುರ್ತು ಸೇವೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಮುಂದುವರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಿರ್ಣಯ ಮರು ಪರಿಶೀಲಿಸಿ: ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ಹೊರ ರಾಜ್ಯದಿಂದ ಬರುವ ರೋಗಿಗಳಿಗೆ ಎಲ್ಲಾ ವೈದ್ಯಕೀಯ ಸೇವೆಗಳಿಗೆ ಪ್ರತ್ಯೇಕ ಶುಲ್ಕ ಪಡೆಯುವ ನಿರ್ಣಯ ಹಿಂಪಡೆಯಬೇಕೆಂದು ಮನವಿ ಮಾಡಲಾಗಿದೆ. ಕಾರವಾರ, ಜೋಯಿಡಾ, ಮಹಾರಾಷ್ಟ್ರ, ಸಿಂಧುದುರ್ಗದ ಜನತೆಯ ವತಿಯಿಂದ ವಕೀಲ ಆರ್.ವಿ.ನಾಯ್ಕರವರು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ವಿರೋಧ ಪಕ್ಷದ ನಾಯಕ ಚಂದ್ರಕಾಂತ್ ಕವಳೇಕರ್ ಈ ಮನವಿಯನ್ನು ಸಲ್ಲಿಸಿದ್ದಾರೆ.

  • ಮಹದಾಯಿ ವಿವಾದಕ್ಕೆ ಸ್ಫೋಟಕ ತಿರುವು- ಪರಿಕ್ಕರ್ ವಿರುದ್ಧವೇ ಬಿಎಸ್‍ವೈ ದೂರು

    ಮಹದಾಯಿ ವಿವಾದಕ್ಕೆ ಸ್ಫೋಟಕ ತಿರುವು- ಪರಿಕ್ಕರ್ ವಿರುದ್ಧವೇ ಬಿಎಸ್‍ವೈ ದೂರು

    ಬೆಂಗಳೂರು: ಮಹದಾಯಿ ವಿವಾದ ಇದೀಗ ಮತ್ತೊಂದು ಸ್ಫೋಟಕ ತಿರುವು ಪಡೆದುಕೊಂಡಿದ್ದು, ಗೋವಾ ಬಿಜೆಪಿ ಇಬ್ಬಗೆ ನೀತಿ ವಿರುದ್ಧ ಕರ್ನಾಟಕ ಬಿಜೆಪಿಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

    ಮಹದಾಯಿ ಕುರಿತು ಮಾತುಕತೆಗೆ ಒಪ್ಪಿ ಬರೆದಿರುವ ಪತ್ರದ ಬಗ್ಗೆ ಗೋವಾ ಬಿಜೆಪಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ಇತ್ತ ಮಹದಾಯಿ ಭಾಗದ ರೈತರು ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಗೋವಾ ಬಿಜೆಪಿಯ ಇಬ್ಬಗೆ ನೀತಿಯಿಂದ ಕರ್ನಾಟಕದಲ್ಲಿ ನಮ್ಮ ಇಮೇಜ್‍ಗೆ ಧಕ್ಕೆ ಆಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ.

    ಒಟ್ಟಿನಲ್ಲಿ ಮಹದಾಯಿ ವಿವಾದದ ಕುರಿತು ಮಾತುಕತೆ ಸಂಬಂಧ ಗೋವಾ ಸಿಎಂ ಮನೋಹರ್ ಪರಿಕ್ಕರ್‍ಗೆ ಸ್ಪಷ್ಟ ನಿರ್ದೇಶನ ನೀಡಿ ಅಂತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ಆದರೆ ಅಮಿತ್ ಶಾ ಅವರು ಗೋವಾ-ಕರ್ನಾಟಕ ಬಿಜೆಪಿ ನಡುವೆ ಸಂಧಾನದ ಭರವಸೆ ನೀಡಿಲ್ಲ ಎಂದು ವರದಿಯಾಗಿದೆ.

  • ಗೋವಾದ ಇಬ್ಬರು ಸಂಸದರ ಮುಂದೆ ರಾಜ್ಯದ 28 ಸಂಸದರು ಸೈಲೆಂಟ್!

    ಗೋವಾದ ಇಬ್ಬರು ಸಂಸದರ ಮುಂದೆ ರಾಜ್ಯದ 28 ಸಂಸದರು ಸೈಲೆಂಟ್!

    ಬೆಂಗಳೂರು: ಕೇಂದ್ರದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕದ ಸಂಸದರು ಮಹದಾಯಿ ವಿಚಾರದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ.

    ಹೌದು, ಸಾಧಾರಣವಾಗಿ ಎರಡು ರಾಜ್ಯಗಳ ನಡುವೆ ವಿವಾದಗಳು ಜೋರಾದಾಗ ಆ ವಿಚಾರ ಸಂಸತ್ ನಲ್ಲಿ ಪ್ರತಿಧ್ವನಿಸುವುದು ಸಾಮಾನ್ಯ. ಆದರೆ ಮಹದಾಯಿ ವಿಚಾರದ ಬಗ್ಗೆ ರಾಜ್ಯದಲ್ಲಿ ದೊಡ್ಡದಾಗಿ ಮಾತನಾಡುವ ಸಂಸದರು ಅಧಿವೇಶನದಲ್ಲಿ ಮೌನ ವ್ರತಕ್ಕೆ ಶರಣಾಗಿದ್ದಾರೆ. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    ಡಿಸೆಂಬರ್ 15 ರಿಂದ ಜನವರಿ 5ರ ವರೆಗೆ ಸಂಸತ್ ಕಲಾಪ ನಡೆಯಲಿದೆ. ಆದರೆ ಇಬ್ಬರು ಲೋಕಸಭಾ ಸಂಸದರಿರುವ ಗೋವಾದ ಮುಂದೆ 28 ಮಂದಿ ಸಂಸದರಿರುವ ಕರ್ನಾಟಕ ಫುಲ್ ಸೈಲೆಂಟ್ ಆಗಿದ್ದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ರಾಜ್ಯದ ಎಲ್ಲ ಸಂಸದರು ಒಗ್ಗಟಾಗಿ ಸಮನ್ವಯ ಮನಸ್ಸಿನಿಂದ ಪ್ರಧಾನಿ ಮೇಲೆ ಒತ್ತಡ ಹಾಕಲು ಸಾಧ್ಯವಿದೆ. ಆದರೆ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದರೆ ಆಯಾ ಪಕ್ಷಕ್ಕೆ ತಿರುಗುಬಾಣವಾಗುವ ಸಾಧ್ಯತೆ ಇರುವ ಕಾರಣ ಬಿಜೆಪಿ, ಕಾಂಗ್ರೆಸ್ ಸದಸ್ಯರು ಮಹದಾಯಿ ಬಗ್ಗೆ ಚಕಾರವೇ ಎತ್ತುತ್ತಿಲ್ಲ.

    ರಾಜದ ಹಿತಾಸಕ್ತಿ ಮರೆತು ಅಧಿವೇಶನದಲ್ಲಿ ನೀವೂ ಮಾಡುತ್ತಿರುವುದು ಏನು? ಇನ್ನು ಉಳಿದಿರುವ ಅಧಿವೇಶನಲ್ಲಾದರೂ ಪಕ್ಷ ಬೇಧ ಮರೆತು ಚರ್ಚೆ ಮಾಡ್ತಿರಾ ಮಾನ್ಯ ಸಂಸದರೇ ಎಂದು ಜನರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಈ ವಿಚಾರದವಾಗಿ ಪಬ್ಲಿಕ್ ಟಿವಿಗೆ ಕರೆ ಮಾಡಿದ ಹುಬ್ಬಳ್ಳಿಯ ಜಯಪ್ರಕಾಶ್, ಪ್ರಧಾನಿ ಮೋದಿ ಅವರಿಗೆ ಶೌಚಾಲಯ ಇಲ್ಲ ಅಥವಾ ಇನ್ಯಾವುದೋ ಸಮಸ್ಯೆಯ ಬಗ್ಗೆ ಪತ್ರ ಬರೆದರೆ ಕೂಡಲೇ ಸ್ಪಂದನೆ ಮಾಡಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚನೆ ಕೊಡುತ್ತಾರೆ. ಆದರೆ ಮಹದಾಯಿಗಾಗಿ ರೈತರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರೂ ಯಾಕೆ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

  • ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಸೋನಿಯಾ ಗಾಂಧಿ ಜಾಲಿ ಸೈಕಲ್ ಸವಾರಿ – ಫೋಟೋ ವೈರಲ್

    ಪಣಜಿ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸೋನಿಯಾ ಗಾಂಧಿ ಅವರು ವಿಶಾಂತ್ರಿಗಾಗಿ ಗೋವಾಕ್ಕೆ ತೆರಳಿದ್ದು, ಈ ವೇಳೆ ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೋನಿಯಾ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ವಿಶಾಂತ್ರಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಕಾರಣದಿಂದ ಅವರು ಗೋವಾಕ್ಕೆ ವಿಶ್ರಾಂತಿ ಪಡೆಯಲು ಆಗಮಿಸಿದ್ದಾರೆ. ಜನವರಿ ಮೊದಲ ವಾರ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    71 ವರ್ಷದ ಸೋನಿಯಾ ಗಾಂಧಿ ಅವರು ಸತತ 19 ವರ್ಷ ಎಐಸಿಸಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಡಿ.16ರಂದು ತಮ್ಮ ಮಗ ರಾಹುಲ್ ಗಾಂಧಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿದ್ದರು.

  • ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎಂದು ಹೇಳಿ ನೋಡೋಣ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎಂದು ಹೇಳಿ ನೋಡೋಣ: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಬೆಂಗಳೂರು: ಈ ಹಿಂದೆ ಮಹದಾಯಿ ನದಿ ನೀರನ್ನು ತಿರುವಲು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯನವರನ್ನು ಮೈಸೂರಿನ ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ.

    ಸಿಎಂ ಸಿದ್ದರಾಮಯ್ಯನವರು ಡಿಸೆಂಬರ್ 24 ರಂದು, ಯಡಿಯೂರಪ್ಪನವರಿಗೆ ಜನತೆಯ ಬಗ್ಗೆ ಕಾಳಜಿ ಇದ್ದರೆ ಕುಡಿಯುವ ನೀರಿನ ಉದ್ದೇಶಕ್ಕೆ 7.56 ಟಿ.ಎಂ.ಸಿ ನೀರು ಕೊಡಲು ನಾವು ಒಪ್ಪಿದ್ದೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಂದ ಅಫಿಡವಿಟ್ ಬರೆಸಿ ಮಹದಾಯಿ ನ್ಯಾಯಮಂಡಳಿಗೆ ಸಲ್ಲಿಸಲಿ. ಅದನ್ನು ಬಿಟ್ಟು ಯಡಿಯೂರಪ್ಪ ಅವರು ಜನತೆಯ ಮುಂದೆ ಬೇಜವಾಬ್ದಾರಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗೆ ಪ್ರತಿಯಾಗಿ ಪ್ರತಾಪ್ ಸಿಂಹ, ನಿಮಗೆ ಕನ್ನಡಿಗರ ಬಗ್ಗೆ ಕಾಳಜಿಯಿದ್ದರೆ, ಗೋವಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಯನ್ನು ಖಂಡಿಸಿ ಹಾಗೂ ಎಂದು ಸೋನಿಯಾ ಗಾಂಧಿ ಹೇಳಿದ್ದು ಸರಿಯಲ್ಲ ಎನ್ನಿ ನೋಡೋಣ ಎಂದು ಖಾರವಾಗಿ ಪ್ರಶ್ನಿಸಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಮೋದಿ, ಸೋನಿಯಾ ಗಾಂಧಿ ಹೇಳಿದ್ದು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

    ಈ ಪ್ರಶ್ನೆಯ ಜೊತೆ ಪ್ರತಾಪ್ ಸಿಂಹ 4 ಪ್ರಶ್ನೆಗಳಿರುವ ಫೋಟೋಗಳನ್ನು ಹಾಕಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

    1. 2007ರ ಗೋವಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದಿದ್ದ ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ನಿಮ್ಮವರಲ್ಲವೇ?

    2. ಮಾತುಕತೆಯಲ್ಲಿ ಬಗೆಹರಿಸದೇ 2009ರಲ್ಲಿ ಮಹದಾಯಿ ವಿವಾದವನ್ನು ನ್ಯಾಯಾಧಿಕರಣದ ಮುಖಾಂತರ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದ್ದು ಯಾರು?

    3. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 100 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ 5.5 ಕಿ.ಮೀ ಮಹದಾಯಿ ಮತ್ತು ಮಲಪ್ರಭಾ ಜೋಡಣಾ ಕಾಲುವೆಗೆ 2014-15 ರಲ್ಲಿ ತಡೆಗೋಡೆ ನಿರ್ಮಿಸಿದ್ದು ಯಾರು?

    4. ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನೀವು ಹೇಳಿದಂತೆ ಗೋವಾ ಕಾಂಗ್ರೆಸ್ ನಾಯಕರನ್ನು ಒಪ್ಪಿಸುತ್ತೇವೆಂದು ನುಡಿದಂತೆ ನಡೆಯುತ್ತಿಲ್ಲ ಏಕೆ?

    ಸೋನಿಯಾ ಗಾಂಧಿ ಹೇಳಿದ್ದು ಏನು?
    2007ರ ಗೋವಾ ಚುನಾವಣಾ ಪ್ರಚಾರದ ವೇಳೆ ಮಾರ್ಗೋ ದಲ್ಲಿ ಭಾಷಣ ಮಾಡಿದ ಸೋನಿಯಾ ಗಾಂಧಿ, ಯಾವುದೇ ಕಾರಣಕ್ಕೂ ಮಹದಾಯಿ ನದಿ ತಿರುವಲು ಬಿಡುವುದಿಲ್ಲ. ಗೋವಾ ಕಾಂಗ್ರೆಸ್ ಮೇಲೆ ನೀವು ನಂಬಿಕೆ ಇಡಿ ಎಂದು ಅವರು ಆಶ್ವಾಸನೆ ನೀಡಿದ್ದರು.  ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!

  • ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    ಬೆಂಗಳೂರು: ಆಗಸ್ಟ್ ನಲ್ಲಿ ಮಹದಾಯಿ ಕುರಿತಂತೆ ನ್ಯಾಯಮಂಡಳಿ ತೀರ್ಪು ಬರಲಿದೆ. ಮಹದಾಯಿ ವಿಚಾರದಲ್ಲಿ ಗೋವಾ ನ್ಯಾಯಾಧಿಕರಣದ ಮುಂದೆ ದೃಢವಾದ ಸಾಕ್ಷ್ಯಾಧಾರಗಳನ್ನ ಒದಗಿಸಿದೆ ಎಂದು ಗೋವಾ ಪರವಾಗಿ ವಾದ ಮಾಡುತ್ತಿರುವ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಡಕರ್ಣಿ, ನ್ಯಾಯಾಧಿಕರಣದಲ್ಲಿ ಕೇಸ್ ಗೋವಾ ಪರವೇ ಗಟ್ಟಿ ಇದೆ. ಗೋವಾ ವಕೀಲರ ತಂಡ ರಾಜ್ಯದ ಹಿತಾಸಕ್ತಿಗಾಗಿ ಹೋರಾಟ ಮಾಡ್ತಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ನಮಗೆ ಮಹದಾಯಿ ನದಿ ಗೋವಾದಲ್ಲಿ ಹರಿಯಬೇಕು ಎಂದು ಹೇಳಿದ್ದಾರೆ.

    ಮಹದಾಯಿ ವಿಚಾರಣೆ ಕೊನೆಯ ಹಂತಕ್ಕೆ ಬಂದಿದೆ. ಎಲ್ಲಾ ಸಾಕ್ಷಿ, ಪುರಾವೆಗಳ ಪರಿಶೀಲನೆ ಮುಗಿದಿದೆ. ಒಂದೆರಡು ಸಾಕ್ಷ್ಯಾಧಾರಗಳ ಪರಿಶೀಲನೆಗೆ ಕರ್ನಾಟಕಕ್ಕೆ ಸ್ವಾತಂತ್ರ್ಯ ನೀಡಲಾಗಿದೆ. ಜನವರಿ 15ರೊಳಗೆ ಅವರು ಫೈಲ್ ಮಾಡಬೇಕು. ಇಲ್ಲವಾದಲ್ಲಿ ಫೆಬ್ರವರಿ 6ರಿಂದ ವಾದ ಶುರುವಾಗುತ್ತದೆ. ನಾವು ನಮ್ಮ ಪ್ರತಿವಾದವನ್ನು ಜನವರಿ 15ರೊಳಗೆ ಫೈಲ್ ಮಾಡಬೇಕು. ಫೆಬ್ರವರಿ 6ರಿಂದ ನಾನು ನನ್ನ ವಾದ ಶುರು ಮಾಡುತ್ತೇನೆ. ವಾದ ಪೂರ್ಣಗೊಳಿಸಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತೇನೆ. ಫೆಬ್ರವರಿಯಲ್ಲಿ ನಾನು, ಮಾರ್ಚ್‍ನಲ್ಲಿ ಕರ್ನಾಟಕ, ಏಪ್ರಿಲ್‍ನಲ್ಲಿ ಕೆಲವು ದಿನಗಳನ್ನ ಮಹಾರಾಷ್ಟ್ರ ತೆಗೆದುಕೊಳ್ಳುತ್ತದೆ. ಅಗತ್ಯ ಇದ್ದರೆ ಅವರ ವಾದದ ಆಧಾರದ ಮೇಲೆ ನಾನು ಕೆಲವು ದಿನ ಮತ್ತೆ ಸೇರ್ಪಡೆಯಾಗ್ತೀನಿ. ಅಲ್ಲಿಗೆ ಮುಗಿಯುತ್ತದೆ. ಜೂನ್-ಜುಲೈ ವೇಳೆಗೆ ನ್ಯಾಯಾಧಿಕರಣದಿಂದ ತೀರ್ಪು ಬರುತ್ತದೆ. ಆಗಸ್ಟ್ 2018ರ ವೇಳೆಗೆ ನ್ಯಾಯಾಧಿಕರಣದ ಅವಧಿ ಕೂಡ ಮುಕ್ತಾಯವಾಗುತ್ತದೆ. ಅದಕ್ಕೂ ಮುನ್ನ ಅವರು ತೀರ್ಪು ಪ್ರಕಟಿಸಬೇಕು ಎಂದು ನಾಡಕರ್ಣಿ ತಿಳಿಸಿದ್ರು.

    ಯಡಿಯೂರಪ್ಪರನ್ನ ನಂಬಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣದಲ್ಲಿ ನ್ಯಾಯಾಧಿಕರಣದ ಮುಂದೆ ನನಗೆ ಕರ್ನಾಟಕ ವಿರೋಧಿ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಕರ್ನಾಟಕ ಹಾಗೂ ಕರ್ನಾಟಕದ ಯಾರನ್ನೂ ನಂಬುವುದಿಲ್ಲ. ಯಾಕಂದ್ರೆ ಟ್ರಿಬ್ಯುನಲ್ ತೀರ್ಪು, ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರವೂ ಕರ್ನಾಟಕ ಸುಗ್ರೀವಾಜ್ಞೆಗಳನ್ನ ತಂದಿರುವ ಇತಿಹಾಸವಿದೆ. ಆದ್ದರಿಂದ ನಾನು ಕರ್ನಾಟಕವನ್ನು ನಂಬಲು ಸಿದ್ಧವಿಲ್ಲ ಎಂದು ಹೇಳಿದ್ರು. ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರ ಬರೆದಿದ್ದು ರಾಜಕೀಯ ಪರಿಹಾರಕ್ಕಷ್ಟೇ. ಯಡಿಯೂರಪ್ಪಗೆ ಬರೆದ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಅಂದ್ರು.

    ಕುಡಿಯುವ ನೀರಿನ ಬೇಡಿಕೆಗೆ ಯಾರಿಂದಲೂ ವಿರೋಧ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ. ಕರ್ನಾಟಕ 7.5 ಟಿಎಂಸಿ ನೀರು ಕೇಳ್ತಿದೆ. ಆದ್ರೆ ಅವರಿಗೆ ನಿರ್ದಿಷ್ಟವಾಗಿ ಎಷ್ಟು ಪ್ರಮಾಣದ ನೀರು ಅಗತ್ಯವಿದೆ? ಎಂಬ ಪ್ರಶ್ನೆಗೆ ಉತ್ತರಿಸಿ, ಜಲಾನಯನ ಪ್ರದೇಶದ ಬಳಕೆಯನ್ನ ಪರಿಗಣಿಸಿದ್ರೆ(ಹುಬ್ಬಳ್ಳಿ ಧಾರವಾಡ ಅಲ್ಲ) ಬೆಳಗಾವಿ, ಖಾನಪುರ, ಹುಬ್ಬಳಿ ಪ್ರದೇಶಕ್ಕೆ ಎಷ್ಟು ಕುಡಿಯುವ ನೀರು ಬೇಕೋ ಅದನ್ನು ಅವರು ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಅದನ್ನು ನಾವು ಹೇಳಿದ್ದೇವೆ. ನಾವು ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೋರಾಟಗಾರರಂತೆ ಹೇಳಲು ಸಾಧ್ಯವಿಲ್ಲ. ಬೆಳಗಾವಿ ಖಾನಾಪುರ ಜನರಿಗೆ 0.1 ಟಿಎಂಸಿ ನೀರು ಬಿಟ್ಟರೆ ಸಾಕು ಎಂದು ಹೇಳಿದ್ರು.

    ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋವಾ ಪರ ವಕೀಲಿ ಮಾಡಬಹುದೇ?: ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ಆಯ್ಕೆಯಾಗುವ ವಕೀಲರು ಖಾಸಗಿ ಮೊಕದ್ದಮೆಗಳ ವಕೀಲಿ ಕೈಗೊಳ್ಳು­ವಂತಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯ ಮೊಕದ್ದಮೆಗಳ ವಿನಃ ರಾಜ್ಯ ಸರ್ಕಾರಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳ ಪರ ವಕಾಲತ್ತು ಮಾಡಲು ಕೇಂದ್ರದ ಅನುಮತಿ ಪಡೆಯಬೇಕು. ಹೀಗಿರುವಾಗ ಎರಡೂ ರಾಜ್ಯಗಳ ನಡುವೆ ತಟಸ್ಥ ಧೋರಣೆ ಅನುಸರಿಸಬೇಕಾದ ಕೇಂದ್ರ ಸರ್ಕಾರ ಆತ್ಮಾರಾಮ ನಾಡಕರ್ಣಿ ಅವರಿಗೆ ಗೋವಾದ ಪರ ವಾದ ಮಾಡಲು ಅನುಮತಿ ನೀಡಿದ್ದು ಸರಿಯೇ ಎನ್ನುವ ಪ್ರಶ್ನೆ ಈ ಹಿಂದೆ ಎದ್ದಿತ್ತು. ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ನಾಡಕರ್ಣಿ ಗೋವಾದ ಅಡ್ವೊಕೇಟ್ ಜನರಲ್ ಆಗಿದ್ದರು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆಪ್ತರು ಕೂಡ ಆಗಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಾಡಕರ್ಣಿ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್‍ಗಳಲ್ಲಿ ಒಬ್ಬರನ್ನಾಗಿ ನೇಮಕ ಮಾಡಲಾಗಿದೆ.

    ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

  • ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಬಾರಿಯೂ ನೆರೆ ರಾಜ್ಯಗಳು ಖ್ಯಾತೆಯನ್ನು ತೆರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಗೆ ತಮಿಳುನಾಡು ಕಿರಿಕ್ ಮಾಡುತ್ತಿದ್ದರೆ, ಇತ್ತ ಬೆಳಗಾವಿ ಹುಟ್ಟುವ ಮಹದಾಯಿ ನದಿಗೆ ಗೋವಾ ಕ್ಯಾತೆ ತೆಗೆಯುತ್ತಿದೆ. ಮಹದಾಯಿ ನದಿಯ ತಿರುವು ಯೋಜನೆಯಿಂದ ಗೋವಾಕ್ಕೆ ಮತ್ತು ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅಧ್ಯಯನಗಳು ವರದಿ ನೀಡಿದರೂ ಗೋವಾ ಸರ್ಕಾರ ಮಾತ್ರ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ. ಆದರೆ ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ತತ್ತರಿಸಿ ಹೋಗಿದ್ದು, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮಹದಾಯಿ ಯೋಜನೆ ಎಂದರೆ ಏನು? ವಿವಾದ ಯಾಕೆ ಆರಂಭವಾಯಿತು ಮತ್ತು ಪ್ರಸ್ತುತ ಯೋಜನೆ ಸ್ಥಿತಿಗತಿ ಏನು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಲಪ್ರಭಾ ನದಿ ಸಂಜೀವಿನಿ ಯಾಕೆ?
    ಕಳಸಾ-ಬಂಡೂರಿ ನಾಲಾ ಜೋಡಣೆ ಅಥವಾ ಮಹದಾಯಿ ತಿರುವು ಹೆಸರಿನಿಂದ ಕರೆದುಕೊಳ್ಳುವ ಯೋಜನೆ ಕರ್ನಾಟಕ ಸರ್ಕಾರದ ಒಂದು ಮಹಾತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗಳನ್ನು ತಿಳಿದುಕೊಳ್ಳುವ ಮೊದಲು ಬೆಳಗಾವಿ, ಗದಗ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಮಲಪ್ರಭಾ ನದಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ಮಾವೋಲಿ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ರೀತಿಯಾಗಿ ಹರಿದು ಬರುವ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಎಂಬಲ್ಲಿ ರೇಣುಕಾಸಾಗರ ಹೆಸರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. 1962 ರಲ್ಲಿ ಆರಂಭಿಸಿ, 1972 ರಲ್ಲಿ ಪೂರ್ಣಗೊಂಡ ಈ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಾಗುತಿತ್ತು. ಈ ಜಲಾಶಯದಲ್ಲಿ ಸಂಗ್ರಹವಾದ ನೀರು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲ ತಾಲೂಕಿನ ಗ್ರಾಮಗಳಿಗೆ ಸಿಗುತಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಯಿತು. ಹೀಗಾಗಿ ನವಿಲು ತೀರ್ಥ ಜಲಾಶಯದ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಿದ್ದವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ.

    ಏನಿದು ಮಹದಾಯಿ ಯೋಜನೆ?
    ನವಿಲು ತೀರ್ಥ ಜಲಾಶಯ ನಿರ್ಮಾಣ ಮಾಡುವ ಮೊದಲೇ ಈ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು ಎನ್ನುವ ಮುಂದಾಲೋಚನೆ ಸರ್ಕಾರಕ್ಕಿತ್ತು. ಹೀಗಾಗಿ ಈ ಪ್ರದೇಶಗಳ ನದಿಗಳನ್ನು ಮೊದಲು ಜೋಡಿಸಿ, ನಂತರ ಅವುಗಳನ್ನು ಮಲಪ್ರಭೆಗೆ ಜೋಡಿಸಿ, ಕಟ್ಟಲು ಉದ್ದೇಶಿಸಿರುವ ಡ್ಯಾಂಗೆ ಮತ್ತಷ್ಟು ನೀರು ಸಂಗ್ರಹಿಸಲು ಯೋಜನೆ ರೂಪುಗೊಂಡಿತ್ತು. ಮಹದಾಯಿ ಕಣಿವೆಗೆ ಎಲ್ಲ ಉಪ ನದಿಗಳು ಸೇರುವ ಕಾರಣ ಈ ಯೋಜನೆಗೆ ‘ಮಹಾದಾಯಿ ಕಣಿವೆ ತಿರುವು ಯೋಜನೆ’ ಎಂದು ನಾಮಕರಣ ಮಾಡಲಾಯಿತು.

    ಮಹದಾಯಿ ನದಿಯ ಪಾತ್ರ ಏನು?
    ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೇವಗಾವುಡು ಗ್ರಾಮದ ಬಳಿ ಹುಟ್ಟುತ್ತದೆ. ಈ ಮಹದಾಯಿ ನದಿ ಕರ್ನಾಟಕದಲ್ಲಿ 35 ಕಿ.ಮೀ. ಹರಿದು ‘ಸುರಗ’ ಪ್ರದೇಶದಲ್ಲಿ ಗೋವಾ ರಾಜ್ಯ ಪ್ರವೇಶಿಸುತ್ತದೆ. ಗೋವಾದಲ್ಲಿ ‘ಮಾಂಡೋವಿ’ ಹೆಸರಿನಲ್ಲಿ ಕರೆಯುವ ನದಿ ಅಲ್ಲಿ ಸುಮಾರು 45 ಕಿ.ಮೀ. ಹರಿಯುತ್ತದೆ. ಮಹದಾಯಿ ನದಿ ಹಳತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

    ಮಹದಾಯಿ ನದಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಪಾಲು?
    ಮಹದಾಯಿ ನದಿ 2032 ಚ.ಕಿ.ಮೀ ಜಲನಯನ ಪ್ರದೇಶ ಹೊಂದಿದ್ದು ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ, ಗೋವಾದಲ್ಲಿ 1580 ಚ.ಕೀ.ಮೀ ಪ್ರದೇಶವನ್ನು ಹೊಂದಿದೆ.

    ಕಾಲುವೆ ಜೋಡಣೆ ಹೇಗೆ?
    ಗದಗ್, ಧಾರವಾಡ, ಬೆಳಗಾವಿ ಜನರ ನೀರಿನ ಸಮಸ್ಯೆ ಪರಿಹಾರಿಸಲು ಸರ್ಕಾರ ಕಳಸಾ ಹಾಗೂ ಬಂಡೂರಿ ಎಂಬ ಎರಡು ಹೊಸ ಯೋಜನೆಗಳನ್ನು ಆರಂಭಿಸಲು ಮುಂದಾಯಿತು. ಇದಕ್ಕಾಗಿ ಕಳಸಾ ಯೋಜನೆಯಲ್ಲಿ ಮೊದಲು ಕಳಸಾ ನದಿಗೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ ಮಾಡುವುದು, ಇನ್ನೊಂದು ಹಳತಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವ ಉದ್ದೇಶದೊಂದಿಗೆ ಈ ಕಾಮಗಾರಿ ಆರಂಭವಾಯಿತು. ಬಂಡೂರಿ ಯೋಜನೆಯಲ್ಲಿ ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವ ಯೋಜನೆಯನ್ನು ಸರ್ಕಾರ ರೂಪಿಸಿತು.

    ಯೋಜನೆ ಆರಂಭಗೊಂಡು ಅರ್ಧದಲ್ಲಿ ನಿಂತ ಕಥೆ:
    ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾದ ಹಿನ್ನೆಲೆಯಲ್ಲಿ 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವೇಳೆ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಫಲಪ್ರದವಾಗಿ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆಯೂ ಅನುಮತಿ ನೀಡಿತು. ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ. ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ವಾಜಪೇಯಿ ನೃತೃತ್ವದ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿದ ಪರಿಣಾಮ ಈ ಯೋಜನೆ ಈಗ ಅರ್ಧದಲ್ಲೇ ನಿಂತಿದೆ.

    ಕಾಮಗಾರಿಗೆ ತಡೆ ನೀಡುತ್ತಿರುವ ಗೋವಾದ ವಾದವೇನು?
    ಮೊದಲನೆಯದಾಗಿ ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶ. ಹೀಗಾಗಿ ಈ ಕಣಿವೆಯಲ್ಲಿ ಹರಿಯುವ ನೀರನ್ನು ವರ್ಗಾಯಿಸಬಾರದು. ಎರಡನೇಯದಾಗಿ ಮಹದಾಯಿ ನದಿಯನ್ನು ತಿರುವು ಮಾಡಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಮೂರನೇಯದಾಗಿ ಈ ನೀರಿನಲ್ಲಿ ವಾಸ ಮಾಡುತ್ತಿರುವ ಸಿಗಡಿ ಮೀನು ನಮಗೆ ಅಮೂಲ್ಯವಾಗಿದೆ. ಸಿಹಿ ನೀರಿನಲ್ಲಿ ಮಾತ್ರ ಬದುಕಬಲ್ಲ ಈ ಮೀನು ಗೋವಾಕ್ಕೆ ಬರುವ ಪ್ರವಾಸಿಗರಿಗೆ ಅಚ್ಚುಮೆಚ್ಚು. ಒಂದು ವೇಳೆ ನೀರಿನ ಸಮಸ್ಯೆಯಾಗಿ ಮೀನು ಉತ್ಪಾದನೆ ಕಡಿಮೆಯಾದರೆ ಪ್ರವಾಸೋದ್ಯಮದ ಮೇಲೆ ನೇರ ಹೊಡೆತ ಬೀಳುತ್ತದೆ. ಹೀಗಾಗಿ ಮಹಾದಾಯಿ ನದಿಯ ನೀರು ತನ್ನ ರಾಜ್ಯದ ಮೂಲಕವೇ ಹಾದು ಹೋಗಬೇಕೆಂಬ ವಾದವನ್ನು ಮುಂದಿಟ್ಟುಕೊಂಡು ಬಂದಿದೆ.

    ಮಹಾರಾಷ್ಟ್ರದ ಕಿರಿಕ್ ಏನು?
    ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀನಷ್ಟು ದೂರದವರೆಗೆ ಮಹದಾಯಿ ನದಿ ಹರಿಯುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ತಡೆಗೋಡೆಗಳನ್ನ ನಿರ್ಮಿಸಬಾರದೆಂಬ ಕೇಂದ್ರ ಜಲ ಮಂಡಳಿ ಆದೇಶ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಒಟ್ಟು 9 ಬ್ಯಾರೇಜ್ ನಿರ್ಮಿಸಿ, ಅದಕ್ಕೆ ತಿಲಹರಿ ಜಲಾಶಯ ಎಂದು ಹೆಸರಿಟ್ಟಿತು. ಈ ಪೈಕಿ 7 ಬ್ಯಾರೇಜ್ ನೀರು, ಕರ್ನಾಟಕದ ಅರಣ್ಯ ಪ್ರದೇಶವನ್ನ ಹಾಳು ಮಾಡಿತು. ಒಂದು ವೇಳೆ ಮಹದಾಯಿ ನದಿ ತಿರುವುಗೊಂಡರೆ ನಮ್ಮ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ವಾದವನ್ನು ಮಂಡಿಸಿದೆ.

    ಕರ್ನಾಟಕದ ವಾದ ಏನು?
    ನಾವು ಈ ಯೋಜನೆಯನ್ನು ವಿದ್ಯುತ್ ಅಥವಾ ಇನ್ಯಾವುದೇ ಯೋಜನೆಗಾಗಿ ಆರಂಭಿಸಿಲ್ಲ. ಕುಡಿಯುವ ನೀರಿಗಾಗಿ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕೆಂದು ಅಂತಾರಾಷ್ಟ್ರೀಯ ಜಲ ನೀತಿ ಹೇಳಿದೆ. ಅಷ್ಟೇ ಅಲ್ಲದೇ ಈ ಯೋಜನೆ ಆರಂಭಗೊಂಡರೂ ಗೋವಾ ರಾಜ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ನಮ್ಮ ಯೋಜನೆ ನ್ಯಾಯಸಮ್ಮತವಾಗಿದೆ ಎಂದು ವಾದವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು.

    ಯೋಜನೆಯಿಂದ ಪರಿಸರದ ಮೇಲೆ ಹಾನಿ ಆಗುತ್ತಾ?
    ಗೋವಾ ಸರ್ಕಾರ ಈ ಯೋಜನೆ ಆರಂಭಗೊಂಡರೆ ಪರಿಸರ ಹಾಳಾಗುತ್ತದೆ ಎನ್ನುವ ವಾದ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ನೀರಿ, ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಮುಂಗಾರು ನಂತರದ ನದಿಯ ನೀರಿನ ಹರಿವಿನಲ್ಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ತಿಳಿಸಿದೆ. ನೀರಿ ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ತಿಳಿಸಿತ್ತು. ಅಧ್ಯಯನಗಳು ವರದಿ ನೀಡಿದರೂ ಗೋವಾ ಈಗಲೂ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ.

    ನ್ಯಾಯಾಧಿಕರಣ ರಚಿಸಲು ಗೋವಾ ಪಟ್ಟು:
    ಈ ವಿಚಾರ ಇತ್ಯರ್ಥ ಆಗಬೇಕಾದರೆ ಅದು ನ್ಯಾಯಾಧಿಕರಣದಿಂದ ಮಾತ್ರ. ಹೀಗಾಗಿ ನ್ಯಾಯಾಧಿಕರಣ ರಚಿಸಿ ಎಂದು 2002ರಲ್ಲಿ ಕೇಂದ್ರ ಸರ್ಕಾರವನ್ನು ಗೋವಾ ಕೇಳಿಕೊಂಡಿತು. 2006ರಲ್ಲಿ ಕರ್ನಾಟಕ ಆರಂಭಿಸಿರುವ ಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿ ಮತ್ತು ನ್ಯಾಯಾಧಿಕರಣವನ್ನು ರಚಿಸುವುಂತೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿತು. 2006ರಲ್ಲಿ ಕೇಂದ್ರದ ಪರಿಸರ ಮಂತ್ರಾಲಯ, ಈ ಯೋಜನೆಯನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಯ ಮೆರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಿತು. 2010 ಜೂನ್‍ನಲ್ಲಿ ಕರ್ನಾಟಕ, 2010ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ನ್ಯಾಯಾಧಿಕರಣ ರಚಿಸುವಂತೆ ಮನವಿ ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ ನವೆಂಬರ್ 16 ರಂದು 2010ರಂದು ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ವನ್ನು ರಚಿಸಿದ್ದು, ಈಗ ಈ ಯೋಜನೆ ವಿವಾದ ನ್ಯಾಯಾಧಿಕರಣದ ಅಂಗಳದಲ್ಲಿದೆ. ಮೂರು ರಾಜ್ಯ ಸರ್ಕಾರಗಳು ನ್ಯಾಯಾಧಿಕರಣ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎನ್ನುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿವೆ.

    ಪ್ರಸ್ತುತ ಈ ಕಾಮಗಾರಿಗಳ ಸ್ಥಿತಿ ಗತಿ ಹೇಗಿದೆ?
    ಗೋವಾ ಸರ್ಕಾರ ಕಿರಿಕಿರಿ ಮತ್ತು ನಮ್ಮ ರಾಜ್ಯ ಸರ್ಕಾರಗಳ ರಾಜಕೀಯದಿಂದಾಗಿ ಈ ಯೋಜನೆ ಆರಂಭವಾಗಲೇ ಇಲ್ಲ. ಆದರೆ 2006ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಕಳಸಾ ನಾಲಾ ಯೋಜನೆಗೆ ಚಾಲನೆ ನೀಡಿದರು. ಕುಂಟುತ್ತಾ, ತೆವಳುತ್ತಾ ಕಾಮಗಾರಿ ಆರಂಭವಾಯಿತು. ಈ ಯೋಜನೆಯಲ್ಲಿ ತಾತ್ಕಾಲಿಕ ಬಂಡ್ ನಿರ್ಮಾಣ ಅಗತ್ಯವಾಗಿತ್ತು. ಈ ತಾತ್ಕಾಲಿಕ ಬಂಡ್ ನಿರ್ಮಾಣಕ್ಕೆ ಕೇಂದ್ರ ಜಲ ಮಂಡಳಿ ಒಪ್ಪಿಗೆ ನೀಡಿತು. ಆದರೆ ಸುಮ್ಮನೇ ಕೂರದ ಗೋವಾ ರಾಜ್ಯ ಇದನ್ನ ವಿರೋಧಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿ, ಅಲ್ಲಿಂದ ತಡೆಯಾಜ್ಞೆಗೆ ಪ್ರಯತ್ನಿಸಿತು. ಆಗ ಸುಪ್ರೀಂಕೋರ್ಟ್ 6 ತಿಂಗಳ ಕಾಲಾವಧಿಯಲ್ಲಿ ಈ ಬಗ್ಗೆ ದಾಖಲೆಗಳನ್ನು ತಂದು ತೋರಿಸುವಂತೆ ಸೂಚಿಸಿತು. ಹೀಗೆ ಮೂರು ಬಾರಿ ವಿನಾಕಾರಣ ಕ್ಯಾತೆ ತೆಗೆದ ಗೋವಾ ಸರ್ಕಾರ ಒಂದೂವರೆ ವರ್ಷ ಹಾಳು ಮಾಡಿತು. ಮೂರು ಬಾರಿ 6 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್, ಕೊನೆಗೆ ಛೀಮಾರಿ ಹಾಕಿ ಕೊನೆಗೆ ಗೋವಾದ ಅರ್ಜಿಯನ್ನು ವಜಾಗೊಳಿಸಿತು. ಆಗಲೇ ರಾಜ್ಯ ಸರಕಾರ ಈ ಕಾಮಗಾರಿ ಬಗ್ಗೆ ಗಂಭೀರವಾಗಿ ಚಿಂತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಯೋಚಿಸಬಹುದಿತ್ತು. ಆದರೆ ರಾಜಕಾರಣದಿಂದಾಗಿ ಗುತ್ತಿಗೆದಾರರನ್ನು ಬದಲಾಯಿಸುವುದು ಮತ್ತೆ ಬೇರೆಯವರಿಗೆ ನೀಡಿದ ಕಾರಣ ಕಾಮಗಾರಿ ವಿಳಂಬವಾಯಿತು. ಪ್ರಸ್ತುತ ಕಳಸಾ ನಾಲದ 5.5 ಕಿ.ಮೀ ಉದ್ದದ ಕಾಮಗಾರಿಯಲ್ಲಿ ಶೇ.95 ಭಾಗ ಪೂರ್ಣಗೊಂಡಿದೆ. ಬಂಡೂರಿ ನಾಲಾ ಯೋಜನೆಯ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ.

    ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು ಏನಿದೆ?
    ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಈ ವೇಳೆ ಪ್ರಧಾನಿ, “ಪ್ರಸ್ತುತ ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ರಾಜ್ಯದ ಮೂವರು ಮುಖ್ಯಮಂತ್ರಿಗಳು ಸೇರಿ ಮೊದಲು ಮಾತನಾಡಿಕೊಂಡು ಬನ್ನಿ. ಅಷ್ಟೇ ಅಲ್ಲದೇ ಈ ರಾಜ್ಯಗಳ ವಿರೋಧ ಪಕ್ಷಗಳನ್ನು ಮನವೊಲಿಸಿ” ಎಂಬುದಾಗಿ ನಿಯೋಗಕ್ಕೆ ಸೂಚಿಸಿದ್ದಾರೆ ಎಂದು ಕರ್ನಾಟಕದ ಬಿಜೆಪಿ ನಾಯಕರು ತಿಳಿಸಿದ್ದರು.

    2017ರ ಡಿಸೆಂಬರ್ ನಲ್ಲಿ ಏನಾಯ್ತು?
    2018 ವಿಧಾನಸಭೆ ಚುನಾವಣೆ ನಡೆಯುವ ಕಾರಣ ಮಹದಾಯಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯ ಬಳಿಕ ಮಾನವೀಯತೆ ದೃಷ್ಟಿಯಿಂದ ನೀರು ಬಿಡಲು ಒಪ್ಪಿಗೆ ನೀಡುತ್ತೇನೆ ಎಂದು ಪರಿಕ್ಕರ್ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಬಿಎಸ್‍ವೈ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಓದಿದರು. ಆದರೆ ಮಹದಾಯಿ ಹೋರಾಟಗಾರರು ಈ ರೀತಿಯ ಪತ್ರ ಬರೆಯುದರಿಂದ ವಿವಾದ ಪರಿಹಾರವಾಗುವುದಿಲ್ಲ. ಕೂಡಲೇ ವಿವಾದವನ್ನು ಪರಿಹರಿಸುವಂತೆ ಆಗ್ರಹಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪ್ರತಿಭಟಿಸಿದರು. ಅಷ್ಟೇ ಅಲ್ಲದೇ ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದರು.

    ಬಿಜೆಪಿ ಆರೋಪ ಏನು?
    ಗೋವಾದಲ್ಲಿರುವ ಬಿಜೆಪಿ ಮಹದಾಯಿ ನೀರನ್ನು ಹರಿಸಲು ಒಪ್ಪಿಗೆ ನೀಡಿದೆ. ಆದರೆ ಅಲ್ಲಿನ ಕಾಂಗ್ರೆಸ್ ಒಪ್ಪಿಗೆ ನೀಡಿಲ್ಲ. 2007ರಲ್ಲಿ ಚುನಾವಣಾ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಪ್ರತಿಭಟಿಸುವ ಬದಲು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ. ನಾವು ನೀರು ತರಲು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ.

    ಕಾಂಗ್ರೆಸ್ ಆರೋಪ ಏನು?
    ಈಗ ಕೇಂದ್ರದಲ್ಲಿ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಮನಸ್ಸು ಮಾಡಿದರೆ ನೀರು ತರುವುದು ಸುಲಭ. ಪ್ರಧಾನಿ ಮೋದಿಗೆ ಒತ್ತಡ ಹಾಕಿದರೆ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಮೋದಿ ಮಹದಾಯಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೇ ಗೋವಾದ  ಸರ್ಕಾರಕ್ಕೆ ನಾವು ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

    –  ಜಾವೇದ್ ಅಧೋನಿ, ಮುರಳೀಧರ್, ಅಶ್ವಥ್ ಸಂಪಾಜೆ


  • ಬೆಳಗಾವಿಯಲ್ಲೂ ಬಂದ್ ಬಿಸಿ – ಗೋವಾಗೆ ಹೋಗ್ತಿಲ್ಲ, ಬರ್ತಿಲ್ಲ ಬಸ್‍ಗಳು

    ಬೆಳಗಾವಿಯಲ್ಲೂ ಬಂದ್ ಬಿಸಿ – ಗೋವಾಗೆ ಹೋಗ್ತಿಲ್ಲ, ಬರ್ತಿಲ್ಲ ಬಸ್‍ಗಳು

    ಬೆಳಗಾವಿ: ಮಹದಾಯಿ ಯೋಜನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೋವಾ -ಕರ್ನಾಟಕ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದೆ.

    ಕರ್ನಾಟಕದಿಂದ ಯಾವುದೇ ವಾಹನ ಗೋವಾಕ್ಕೆ ಹೋಗುತ್ತಿಲ್ಲ. ಗೋವಾದಿಂದ ಯಾವುದೇ ಬಸ್ ಕರ್ನಾಟಕದತ್ತ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗೋವಾಗೆ ಹೋಗುವ ಪ್ರಯಾಣಿಕರು ಬೆಳಗಾವಿ ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದಾರೆ.

    ಮಹದಾಯಿ ನದಿ ಜೋಡಣೆ ಹೋರಾಟ ಮತ್ತೆ ತೀವ್ರತೆ ಪಡೆದಿದೆ. ಕಳೆದ 889 ದಿನಗಳಿಂದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹೋರಾಟಗಾರರು 7.56 ಟಿಎಂಸಿ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ್ದಾರೆ. ಮಹದಾಯಿ ಹೋರಾಟಗಾರರು ನಡೆಸಿದ ಹೋರಾಟದ ಮುಖ್ಯ ಅಂಶಗಳು ಹೀಗಿವೆ:

    * ಮಹದಾಯಿ ಹೋರಾಟಕ್ಕಾಗಿ ಹಲವು ಬಾರಿ ನವಲಗುಂದ ಪಟ್ಟಣ ಬಂದ್.
    * ಕಳೆದ ವರ್ಷ ಫೆಬ್ರವರಿ 11ರಂದು ಧಾರವಾಡ ಬಂದ್ ಕರೆ.
    * 2016 ಮೇ 12ಕ್ಕೆ ಧಾರವಾಡ ತಾಲೂಕಿನ ಅಮ್ಮಿನಬಾವಿ ಬಳಿ ಇರುವ ಜಾಕವೇಲ್ ಬಂದ್ (ಈ ಜಾಕವೇಲ್ ಹುಬ್ಬಳ್ಳಿ ಧಾರವಾಡಕ್ಕೆ ನೀರು ಸರಬರಾಜು ಮಾಡುತ್ತೆ).
    * ಹೋರಾಟಕ್ಕೆ ಒಂದು ವರ್ಷವಾದ ಹಿನ್ನೆಲೆ 2016ರ ಜುಲೈ 16ಕ್ಕೆ ಮತ್ತೆ ಧಾರವಾಡ ಜಿಲ್ಲೆ ಬಂದ್‍ಗೆ ಕರೆ.
    * 2016ರ ಜುಲೈ 27ರಂದು ಮಹದಾಯಿಗಾಗಿ ತೀವ್ರಗೊಂಡ ಹೋರಾಟ.
    * ನವಲಗುಂದ ತಾಲೂಕಿನಲ್ಲಿ ಲಾಠಿಚಾರ್ಜ್, 250ಕ್ಕೂ ಹೆಚ್ಚು ಹೋರಾಟಗಾರರ ಬಂಧನ.
    * 2016 ಜುಲೈ 28 ರಂದು ಮತ್ತೆ ಧಾರವಾಡ ಬಂದ್ ಕರೆ.
    * ಫೆಬ್ರವರಿ 19, 2016 ರಂದು ನವಲಗುಂದದಲ್ಲಿ ಪ್ರತ್ಯೇಕ ರಾಜ್ಯ ಹೋರಾಟದ ಧ್ವಜವನ್ನ ಹಾರಿಸಿದ ಹೋರಾಟಗಾರರು.

    ಇದನ್ನೂ ಓದಿ: ಮಹದಾಯಿಗಾಗಿ ಉತ್ತರ ಕರ್ನಾಟಕ ಬಂದ್: ಎಲ್ಲಿ ಬಂದ್? ಏನ್ ಇರುತ್ತೆ? ಏನ್ ಇರಲ್ಲ?