Tag: goa

  • ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ: ಗೋವಾ ಸಿಎಂ ಮನೋಹರ್ ಪರಿಕ್ಕರ್

    ನವದೆಹಲಿ: ಅಮೇರಿಕದಲ್ಲಿ ಚಿಕೆತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕೆಲವು ವಾರದಲ್ಲಿ ರಾಜ್ಯಕ್ಕೆ ಮರಳುತ್ತೇನೆ ಎಂದು ವಿಡಿಯೊ ಮೂಲಕ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ಕಾರ್ಯಕರ್ತರ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪರಿಕ್ಕರ್ ಕಳುಹಿಸಿದ್ದ ವಿಡಿಯೊವನ್ನು ಕಾರ್ಯಕರ್ತರಿಗೆ ತೋರಿಸಿದ್ದಾರೆ.

    ಕಳೆದ 2 ತಿಂಗಳಿಂದ ನಾನು ನಿಮ್ಮ ಜೊತೆಯಲ್ಲಿ ಇಲ್ಲ. ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯಲ್ಲಿದ್ದೇನೆ. ಆರೋಗ್ಯ ಸಮಸ್ಯೆಯಿಂದ ಕಾರ್ಯಕರ್ತರ ಸಭೆಗೆ ಬರಲಿಕ್ಕೆ ಆಗಲಿಲ್ಲ. ಕೆಲವು ವಾರಗಳಲ್ಲಿ ಗೋವಾಗೆ ಮರಳುತ್ತೇನೆ ಎಂದು ರೆಕಾರ್ಡೆಡ್ ವಿಡಿಯೊದಲ್ಲಿ ಹೇಳಿದ್ದಾರೆ.

    ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನಿಯಾಗುವುದು ದೇಶದ ಅವಶ್ಯಕತೆಯಾಗಿದೆ. 2019ರ ಲೋಕಸಭಾ ಚುನಾವಣೆಗೆ ಸಜ್ಜಾಗಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.

    62 ವಯಸ್ಸಿನ ಪರಿಕ್ಕರ್ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೊದಲಿಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ ಮೊದಲ ವಾರದಲ್ಲಿ ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಪರಿಕ್ಕರ್ ಅವರ ದೀರ್ಘ ಕಾಲದ ಅನುಪಸ್ಥಿತಿಯಿಂದಾಗಿ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯನ್ನು ನೇಮಿಸುವಂತೆ ವಿರೋಧ ಪಕ್ಷ ಕಾಂಗ್ರೆಸ್ ಆಗ್ರಹ ಮಾಡಿತ್ತು. ಪರಿಕ್ಕರ್ ಅವರ ಅನುಪಸ್ಥಿತಿಯಲ್ಲಿ ಸಚಿವ ಸಂಪುಟದ ಸದಸ್ಯರನ್ನು ಒಳಗೊಂಡತೆ ಮೂರು ಜನರ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ದೈನಂದಿನ ಚಟುವಟಿಕೆಗಳನ್ನು ಸಮಿತಿ ನೋಡಿಕೊಳ್ಳುತ್ತಿದೆ.

     

     

  • ಪತಿಯನ್ನ ಕೊಂದು, ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದ್ಳು!

    ಪತಿಯನ್ನ ಕೊಂದು, ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದ್ಳು!

    ಪಣಜಿ: ಪತಿಯನ್ನು ಕೊಲೆ ಮಾಡಿ ಬಳಿಕ ಸ್ನೇಹಿತರೊಂದಿಗೆ ಸೇರಿ ದೇಹವನ್ನು ಕತ್ತರಿಸಿ ಕಾಡಿನಲ್ಲಿ ಎಸೆದಿದ್ದ ಪತ್ನಿಯನ್ನು ಗೋವಾ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

    ಬಸುರಾಜ್ ಬಾಸ್ಸೂ (38) ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಕಲ್ಪನಾ ಬಾಸ್ಸೂ (31) ಕೊಲೆ ಮಾಡಿ ಪತ್ನಿ.

    ಏನಿದು ಪ್ರಕರಣ: ದಕ್ಷಿಣ ಗೋವಾ ಜಿಲ್ಲೆಯ ಕೊರ್ಕೊರೆಮ್ ನಿವಾಸಿಯಾಗಿದ್ದ ಬಸುರಾಜ್ ರಂಬವರನ್ನ ಕಳೆದ ಮೂರು ತಿಂಗಳ ಹಿಂದೆ ಕೊಲೆ ಮಾಡಲಾಗಿತ್ತು. ಅಲ್ಲದೇ ಅವರ ಮೃತ ದೇಹವನನ್ನು ತುಂಡು ಮಾಡಿ ನಗರದ ಹೊರ ವಲಯದ ಕಾಡಿನಲ್ಲಿ ಎಸೆಯಲಾಗಿತ್ತು. ಮೃತ ದೇಹದ ಭಾಗಗಳು ಪತ್ತೆಯಾದ ಬಳಿಕ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಬಸುರಾಜ್ ಪತ್ನಿಯನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದ್ದರು. ಆದ್ರೆ ಮೊದಲು ಕಲ್ಪನಾ ಈ ಕುರಿತು ನಿರಾಕರಿಸಿ ಪೊಲೀಸರ ದಿಕ್ಕು ತಪ್ಪಿಸಿದ್ದಳು.

    ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೇ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೊಲೆಯಲ್ಲಿ ಭಾಗಿಯಾದ ಆರೋಪಿಯ ಪತ್ನಿಯೊಬ್ಬಳು ಕಲ್ಪನಾ ಮೇಲೆಯೇ ಶಂಕೆ ವ್ಯಕ್ತಡಿಸಿದ್ದರು. ಈ ಮಾಹಿತಿ ಬೆನ್ನತ್ತಿದ್ದ ಪೊಲೀಸರು ಕೊಲೆ ಮಾಡಿದ್ದ ಪ್ರಮುಖ ಆರೋಪಿಗಳಾದ ಕಲ್ಪನಾ, ಆಕೆಯ ಪತಿಯ ಗೆಳೆಯರಾದ ಸುರೇಶ್ ಕುಮಾರ್, ಅಬ್ದುಲ್ ಕರೀಮ್ ಶೇಖ್ ಮತ್ತು ಪಂಕಜ್ ಪವಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ರವೀಂದ್ರ ದೇಸಾಯಿ ತಿಳಿಸಿದ್ದಾರೆ.

    ಕಾರಣವೇನು? ಸದ್ಯ ಕೊಲೆಯಾದ ವ್ಯಕ್ತಿಗೆ ಇಬ್ಬರು ಮಕ್ಕಳಿದ್ದು, ಪತಿ ಬಸುರಾಜ್ ನಿತ್ಯ ಅನಗತ್ಯ ಕಾರಣಕ್ಕೆ ನನ್ನ ಜೊತೆಗೆ ಜಗಳವಾಡುತ್ತಿದ್ದ. ಹೀಗಾಗಿ ಮನನೊಂದ ನಾನು ಕೊಲೆ ಮಾಡಿದ್ದಾಗಿ ಕಲ್ಪನಾ ತಿಳಿಸಿದ್ದಾಳೆ.

    ಮೊದಲು ಪತಿಯನ್ನು ಕೊಲೆ ಮಾಡಿದ್ದ ಕಲ್ಪನಾ ಬಳಿಕ ತನ್ನ ಮೂವರು ಸ್ನೇಹಿತರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ. ಈ ವೇಳೆ ನಾಲ್ವರು ಸೇರಿ ಬಸುರಾಜ್ ದೇಹವನ್ನು 3 ತುಂಡು ಮಾಡಿ, ಗೊಣಿ ಚೀಲದಲ್ಲಿ ಹಾಕಿ ಕಾಡಿನಲ್ಲಿ ಬಿಸಾಡಿದ್ದರು. ಸದ್ಯ ಮೃತ ದೇಹ ಎಸೆದ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆ ತಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇನ್ನು ಹೆಚ್ಚಿನ ಜನರು ಈ ಕೃತ್ಯಕ್ಕೆ ಸಾಥ್ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

  • ರಾಹುಲ್ ಗಾಂಧಿ ಭಾಷಣ ಕೇಳಿ ಪಕ್ಷದ ಹುದ್ದೆಗೆ ರಾಜೀನಾಮೆ ಕೊಟ್ಟ ಕೈ ನಾಯಕ!

    ಮುಂಬೈ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣದ ಪ್ರಭಾವದಿಂದಾಗಿ ಕಾಂಗ್ರೆಸ್ ಗೋವಾ ಘಟಕದ ಮುಖ್ಯಸ್ಥ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಶಾಂತರಾಮ್ ನಾಯ್ಕ್ ಎಂಬವರೇ ರಾಜೀನಾಮೆ ನೀಡಿದ್ದು, ಇದೀಗ ತಮ್ಮ ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರಿಗೆ ಕಳುಹಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಯುವ ಪೀಳಿಗೆ ಪಕ್ಷದ ನಾಯಕತ್ವವನ್ನು ಮುನ್ನಡೆಸಬೇಕು ಎಂದು ಹೇಳಿದ್ದರು. ಹೀಗಾಗಿ ಗೋವಾ ಘಟಕದ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಆದ್ರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಅಂತ ಅವರು ಹೇಳಿದ್ದಾರೆ.

    71 ವರ್ಷದ ಶಾಂತರಾಮ ನಾಯ್ಕ್ ಅವರು ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದಾರೆ. ಅಲ್ಲದೇ ಮೂರು ಬಾರಿ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ಅದರಲ್ಲಿ ಒಂದು ಬಾರಿ ಲೋಕಸಭಾ ಹಾಗೂ ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನ ಸಿಕ್ಕಿತ್ತು. ಆದರೆ ಬಿಜೆಪಿ ಇತರೇ ಪಕ್ಷಗಳನ್ನು ಸೆಳೆದು ಮೈತ್ರಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು.

    ಸದ್ಯ ಶಾಂತರಾಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಇನ್ನೋರ್ವ ಮುಖ್ಯಸ್ಥ ಭರತ್ಸಿನ್ಹ್ ಸೋಲಂಕಿ ಕೂಡ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.

  • ಕೊಳಕು ಬೀಚ್ ಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ!

    ಕೊಳಕು ಬೀಚ್ ಗಳ ಪೈಕಿ ಕರ್ನಾಟಕಕ್ಕೆ 2ನೇ ಸ್ಥಾನ!

    ಮುಂಬೈ: ದೇಶದಲ್ಲಿ ಪ್ಲಾಸ್ಟಿಕ್ ಅವಶೇಷಗಳು ಅತ್ಯಂತ ಹೆಚ್ಚಿರುವ ಬೀಚ್ ಗಳ ಪೈಕಿ ಗೋವಾ ಮೊದಲ ಸ್ಥಾನವನ್ನು ಪಡೆದುಕೊಂಡ್ರೆ, ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರವೊಂದನ್ನು ಸಂಶೋಧನಾ ವರದಿಯಿಂದಾಗಿ ಬಹಿರಂಗಗೊಂಡಿದೆ.

    ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‍ಆರ್ ಐ)ಯು ಈ ವರದಿ ನೀಡಿದೆ. ದೇಶದಲ್ಲಿ 7,516 ಕಿ.ಮೀ ಕರಾವಳಿ ತೀರ ಹೊಂದಿರುವ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 254 ಬೀಚ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿಯನ್ನು ತಯಾರಿಸಲಾಗಿದೆ.

    ಪ್ಲಾಸ್ಟಿಕ್ ಅವಶೇಷ: ಗೋವಾದ ಬಳಿಕ ಕರ್ನಾಟಕದ 33 ಬೀಚ್ ಗಳಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಅವಶೇಷಗಳಿವೆ. ಇಲ್ಲಿನ ಪ್ರತಿ 1 ಮೀಟರ್ ಮರಳಿನಲ್ಲಿ 21.91 ಗ್ರಾಂನಷ್ಟು ಪ್ಲಾಸ್ಟಿಕ್ ಅವಶೇಷಗಳು ದೊರೆಯುತ್ತವೆ. ಇನ್ನು ನಂ.1 ಸ್ಥಾನದಲ್ಲಿರುವ ಗೋವಾ ಬೀಚ್ ಗಳಲ್ಲಿ ಪ್ರತಿ 1 ಮೀಟರ್ ಮರಳಿನಲ್ಲಿ ಸರಾಸರಿ 25.47 ಗ್ರಾಂ ಪ್ಲಾಸ್ಟಿಕ್ ಇದೆ. ಇನ್ನು ಈ ಪಟ್ಟಿಯಲ್ಲಿ ಗುಜರಾತ್ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ 1 ಮೀಟರ್ ಮರಳಿನಲ್ಲಿ 12.62 ಗ್ರಾಂ ಪ್ಲಾಸ್ಟಿಕ್ ಇದೆ ಎಂದು ವರದಿಯಲ್ಲಿ ಮಾಹಿತಿಯಿದೆ.

    ಗೋವಾದಲ್ಲಿ ನೈಲಾನ್ ಫಿಶಿಂಗ್ ನೆಟ್, ಗ್ಲಾಸ್, ಇ-ತ್ಯಾಜ್ಯ, ಥರ್ಮೋಕೋಲ್ ಮುಂತಾದ ಹಾನಿಕಾರ ವಸ್ತುಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವುಗಳ ಪ್ರಮಾಣ 205.27 ಗ್ರಾಂ ಇದೆ.

    ಕಸದ ಪ್ರಮಾಣ ಕರ್ನಾಟಕದಲ್ಲಿ ಹೆಚ್ಚು: ಕಸದ ಪ್ರಮಾಣ ಕರ್ನಾಟಕದ ಬೀಚ್ ಗಳಲ್ಲೇ ಹೆಚ್ಚಿದ್ದು, ಅದು ಪ್ರತಿ ಮೀಟರ್ ಗೆ 178.44 ಗ್ರಾಂನಷ್ಟಿದೆ. ಗುಜರಾತ್ ನಲ್ಲಿ ಕಸದ ಪ್ರಮಾಣ ಪ್ರತಿ ಮೀಟರ್ ಗೆ 90.56 ಗ್ರಾಂನಷ್ಟಿದೆ. ಪ್ಲಾಸ್ಟಿಕ್ ಕೈ ಚೀಲಗಳು, ಹರಿದ ಮೀನಿನ ಬಲೆ, ಹಾಲಿನ ಪ್ಯಾಕ್ ಗಳು, ತೈಲ, ಟೂತ್ ಪೇಸ್ಟ್, ಪಿಇಟಿ ಬಾಟಲ್ ಗಳು ಬೀಚ್ ಗಳಲ್ಲಿ ಕಂಡು ಬರುವ ಪ್ರಮುಖ ಪ್ಲಾಸ್ಟಿಕ್ ವಸ್ತುಗಳಾಗಿವೆ. ಇವುಗಳು ಸಮುದ್ರದಲ್ಲಿ ವಾಸಿಸುವ ಜಲಚರಗಳಿಗೆ ತುಂಬಾ ಅಪಾಯಕಾರಿ ಎಂದು ಅಧ್ಯಯನ ತಂಡ ತಿಳಿಸಿದೆ.

    12 ಮಂದಿಯ ತಂಡ ದೇಶದ 254 ಬೀಚ್ ಗಳಲ್ಲಿ ಈ ಅಧ್ಯಯನ ನಡೆಸಿ ವರದಿಯನ್ನು ತಯಾರಿಸಿದೆ.

  • ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಅಂತ್ಯ: ಮೂರು ರಾಜ್ಯಗಳ ವಾದ ಏನಿತ್ತು? ಜುಲೈನಲ್ಲಿ ಬರುತ್ತಾ ತೀರ್ಪು?

    ಮಹದಾಯಿ ನ್ಯಾಯಾಧಿಕರಣದ ಮುಂದೆ ವಾದ ಅಂತ್ಯ: ಮೂರು ರಾಜ್ಯಗಳ ವಾದ ಏನಿತ್ತು? ಜುಲೈನಲ್ಲಿ ಬರುತ್ತಾ ತೀರ್ಪು?

    ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧಿಕರಣದಲ್ಲಿ ಅಂತಿಮ ಹಂತದ ವಾದ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

    ಮಹದಾಯಿ ವಿವಾದವನ್ನು ಕಳೆದ ಐದು ವರ್ಷದಲ್ಲಿ 105 ದಿನಗಳು ಒಟ್ಟು ವಿಚಾರಣೆ ನಡೆದಿದ್ದು, ಹನ್ನೊಂದು ದಿನಗಳ ಕಾಲ ಅಂತಿಮ ವಿಚಾರಣೆ ನಡೆಸಲಾಗಿದೆ. ನ್ಯಾಯಮೂರ್ತಿ ಜೆ.ಎಂ ಪಾಂಚಾಳ್ ನೇತೃತ್ವದ ತ್ರಿಸದಸ್ಯಪೀಠ ಮೂರು ರಾಜ್ಯಗಳ ವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.

    ಆಗಸ್ಟ್ 20ಕ್ಕೆ ನ್ಯಾಯಾಧಿಕರಣದ ಅವಧಿ ಮುಕ್ತಾಯವಾಗಲಿದ್ದು ಜೂನ್ ಅಥವಾ ಜುಲೈನಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ. ಕರ್ನಾಟಕ ಪರ ವಕೀಲ ಅಶೋಕ್ ದೇಸಾಯಿ, ಮೋಹನ್ ಕಾತರಕಿ, ಇಂದಿರಾ ಜೈಸಿಂಗ್ ಹಾಗೂ ಗೋವಾ ಪರ ಆತ್ಮರಾಮ್ ನಾಡಕರ್ಣಿ ವಾದ ಮಂಡಿಸಿದ್ದಾರೆ. ಕಾವೇರಿ ನದಿ ವಿವಾದದಂತೆ ಮಹದಾಯಿ ವಿಚಾರದಲ್ಲೂ ನ್ಯಾಯಸಿಗುವ ವಿಶ್ವಾಸವನ್ನು ರಾಜ್ಯದ ಪರ ವಕೀಲರು ವ್ಯಕ್ತಪಡಿಸಿದ್ದಾರೆ.

    ಮಹದಾಯಿ ಅಂತಿಮ ವಿಚಾರಣೆ ಮುಕ್ತಾಯ ಬಳಿಕ ಕರ್ನಾಟಕ ಪರ ಹಿರಿಯ ವಕೀಲ ಮೋಹನ್ ಕಾತರಕಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಕಳೆದ ಆರು ವರ್ಷದಲ್ಲಿ 105 ದಿನಗಳ ಕಾಲ ವಾದ ಮಂಡಿಸಲಾಗಿದೆ. ಅಗಸ್ಟ್ 20 ರೊಳಗೆ ತೀರ್ಪು ನಿರೀಕ್ಷೆ ಮಾಡಬಹುದು. ನಮ್ಮ ಪರವಾಗಿ ಉತ್ತಮ ತೀರ್ಪು ಬರುವ ವಿಶ್ವಾಸವಿದೆ. ಕರ್ನಾಟಕ 14.98 ಟಿಎಂಸಿ ನೀರು ನ್ಯಾಯಾಧಿಕರಣ ಮುಂದೆ ಕೇಳಿದೆ. 7 ಟಿಎಂಸಿ ಹೆಚ್ಚುವರಿ ನೀರಿಗಾಗಿ ಮನವಿ ಮಾಡಿದೆ. ಗೋವಾ 172 ಟಿಎಂಸಿ ನೀರನ್ನು ಕೇಳಿದ್ದು, ಮಹಾರಾಷ್ಟ್ರ 6.34 ಟಿಎಂಸಿ ಗೆ ಬೇಡಿಕೆ ಇಟ್ಟಿದೆ ಎಂದರು.

    ಮಹದಾಯಿ ಅಚ್ಚುಕಟ್ಟು ನಲ್ಲಿ ಕೇಂದ್ರದ ಜಲ ಆಯೋಗ ಮಾಹಿತಿ ಪ್ರಕಾರ ಒಟ್ಟು 199.6 ಟಿಎಂಸಿ ನೀರು ಲಭ್ಯವಾಗಲಿದೆ. ಆದರೆ ಗೋವಾ ನೀಡುತ್ತಿರುವ ಮಾಹಿತಿ ಪ್ರಕಾರ 113 ಟಿಎಂಸಿ ನೀರು ಲಭ್ಯ ಎಂಬ ಮಾಹಿತಿ ನೀಡಿದೆ. ನ್ಯಾಯಾಧಿಕರಣ ಮೊದಲು ಒಟ್ಟು ಮಹದಾಯಿ ಅಚ್ಚುಕಟ್ಟಿನ ನೀರಿನ ಮಾಹಿತಿ ನಿರ್ಧರಿಸಲಿದ್ದಾರೆ. ಬಳಿಕ ರಾಜ್ಯವಾರು ವಿಂಗಡನೆ ಮಾಡಲಿದ್ದಾರೆ. ಕರ್ನಾಟಕ ಕುಡಿಯುವ ನೀರಾವರಿ ಯೋಜನೆ ನಿರ್ಮಾಣದಿಂದ ಗೋವಾಕ್ಕೆ ದಕ್ಕೆ ಉಂಟಾಗುವ ಪರಿಶೀಲನೆ ನಡೆಸಲಾಗುತ್ತೆ. ಈ ಆಧಾರದ ಮೇಲೆ ನೀರು ಹಂಚಿಕೆ ಮಾಡಲಾಗುತ್ತದೆ. ಪರಿಣಿತ ತಜ್ಞರು ಮತ್ತು ವೈಜ್ಞಾನಿಕ ಅಂಶಗಳನ್ನು ಆಧರಿಸಿ ನ್ಯಾಯಾಧಿಕರಣ ಮುಂದೆ ವಾದ ಮಂಡಿಸಿದ್ದೇವೆ ಎಂದು ಹೇಳಿದರು.

    ಕರ್ನಾಟಕಕ ಪರ ವಾದ ಏನಾಗಿತ್ತು?
    ಹುಬ್ಬಳ್ಳಿ- ಧಾರವಾಡಕ್ಕೆ ಕುಡಿಯುವ ನೀರಿಗೆ ಸೂಕ್ತ ಪರ್ಯಾಯವಿಲ್ಲ. ಕೇಂದ್ರ ಜಲ ಆಯೋಗದ ಪ್ರಕಾರ ಕುಡಿಯುವ ನೀರಿಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕಕ್ಕೆ ತನ್ನ ಪಾಲಿನ 14.98 ಟಿಎಂಸಿ ನೀರು ಬಳಕೆ ಮಾಡಲು ಅವಕಾಶ ನೀಡಬೇಕು. ಅಲ್ಲದೇ ಹೆಚ್ಚುವರಿಯಾಗಿ ಹುಬ್ಬಳ್ಳಿ – ಧಾರವಾಡಕ್ಕೆ ಕುಡಿಯಲು 7.56 ಟಿಎಂಸಿ ನೀರು ಬೇಕು. ಮಹದಾಯಿಯ ನೀರು ಹು-ಧಾ ಕ್ಕೆ ಕುಡಿಯಲು ಸಿಕ್ಕರೆ ಮಲಪ್ರಭದ ಮೇಲಿನ ಒತ್ತಡ ಕಡಿಮೆ ಆಗಿ ಅದರ ನೀರನ್ನು ನೀರಾವರಿಗೆ ಬಳಸಬಹುದು. ಗೋವಾ ಸರ್ಕಾರ 113 ಟಿಎಂಸಿ ನೀರು ಮಹದಾಯಿಯಲ್ಲಿದೆ ಎನ್ನುತ್ತದೆ. ಆದರೆ 173 ಟಿಎಂಸಿ ಮಹದಾಯಿ ನೀರಿಗೆ ಬೇಡಿಕೆ ಸಲ್ಲಿಸುತ್ತದೆ. ಗೋವಾ ಮಂಡಿಸಿರುವ ವಾದ ಸರಿಯಲ್ಲ ಮತ್ತು ತಪ್ಪು ದಾರಿಗೆಳೆಯುತ್ತಿದೆ. ಅಂತಾರಾಜ್ಯ ನದಿಗಳಲ್ಲಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಯಾವುದೇ ರಾಜ್ಯವು ಇನ್ನೊಂದು ರಾಜ್ಯದ ಅನುಮತಿ ಪಡೆಯಬೇಕು ಎಂಬುದಿಲ್ಲ. ಆದರೆ ಮತ್ತೊಂದು ರಾಜ್ಯವು ಯೋಜನೆಯಿಂದ ತನಗೆ ಹಾನಿ ಆಗುತ್ತದೆ ಎಂದರೆ ಮಾತ್ರ ದೂರು ಸಲ್ಲಿಸಬಹುದು ಎಂದು ವಾದ ಮಂಡಿಸಿತ್ತು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಗೋವಾ ವಾದ ಏನು?
    ಕಳಸಾ ಬಂಡೂರಿ ಯೋಜನೆಯು ಕುಡಿಯುವ ನೀರಿನ ಯೋಜನೆಯಲ್ಲ. ಕರ್ನಾಟಕ ಸರ್ಕಾರ ನೀರಾವರಿಗಾಗಿ ಮಾಡಿರುವ ಯೋಜನೆ. ಮಲಪ್ರಭಾವು ಮಹದಾಯಿಗಿಂತ ಮೂರು ಪಟ್ಟು ದೊಡ್ಡ ನದಿ. ಆ ನದಿಯಲ್ಲಿ ಕರ್ನಾಟಕ ಕಟ್ಟಿರುವ ಅಣೆಕಟ್ಟಿನಲ್ಲಿ ನೀರು ಭರ್ತಿ ಆಗದ ಹಿನ್ನೆಲೆಯಲ್ಲಿ ಮಹದಾಯಿಯನ್ನು ತಿರುಗಿಸಲು ಕರ್ನಾಟಕ ಮುಂದಾಗಿದ್ದು ಇದಕ್ಕೆ ಅವಕಾಶ ನೀಡಬಾರದು.

    ಕುಡಿರುವ ನೀರಿಗಾಗಿ ಎಂದು ವಾದ ಮಾಡುತ್ತಿರುವ ಕರ್ನಾಟಕದ ಹುಬ್ಬಳ್ಳಿ – ಧಾರವಾಡ ಪ್ರದೇಶ ಮಹದಾಯಿ ನದಿ ವ್ಯಾಪ್ತಿಯಲ್ಲಿ ಬರುವುದಿಲ್ಲ. ನದಿ ಕೊಳ್ಳದ ಹೊರಗಿನ ಪ್ರದೇಶಗಳಿಗೆ ಯಾವ ಕಾರಣಕ್ಕೂ ನೀರು ಹರಿಸಲು ಅವಕಾಶ ನೀಡಬಾರದು. ಹುಬ್ಬಳ್ಳಿ ಧಾರವಾಡದ ಜನಸಂಖ್ಯೆಯ ಏರಿಕೆಯ ಬಗ್ಗೆ ಕರ್ನಾಟಕ ಕೊಟ್ಟಿರುವ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ. 2044ರ ಹೊತ್ತಿಗೆ ಆ ಭಾಗದ ಜನಸಂಖ್ಯೆ ಅಷ್ಟೊಂದು ಪ್ರಮಾಣದಲ್ಲಿ ಏರಲು ಸಾಧ್ಯವೇ ಇಲ್ಲ. ಕರ್ನಾಟಕವು ಮಹದಾಯಿ ಕೊಳ್ಳದಲ್ಲಿ ಲಭ್ಯವಿರುವ ನೀರಿನ ಮೇಲು ಅಂದಾಜು (199.6 ಟಿಎಂಸಿ) ಮಾಡಿದೆ. ಆದರೆ ಅಷ್ಟೊಂದು ನೀರು ಮಹಾದಾಯಿಯಲ್ಲಿ ಇಲ್ಲವೇ ಇಲ್ಲ.

    ಪರಿಸರ ನಾಶ: ಕರ್ನಾಟಕ ನೀರಿನ ತಿರುವು ಯೋಜನೆಗಳನ್ನು ಜಾರಿಗೊಳಿಸಿದರೆ ಪರಿಸರದ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ ವ್ಯಾಪಕ ಅರಣ್ಯ ನಾಶವಾಗಲಿದೆ. ಕರ್ನಾಟಕ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು ಆಧರಿಸಿರುವ ದಾಖಲೆಗಳಲ್ಲಿ ಲೋಪವಿದೆ. ಮಳೆಯ ಪ್ರಮಾಣ ಮತ್ತು ನೀರಿನ ಲಭ್ಯತೆಯ ಪ್ರಮಾಣ ಬಗ್ಗೆ ಕರ್ನಾಟಕ ಸಲ್ಲಿಸಿರುವ ದಾಖಲೆಗಳಲ್ಲಿನ ಮಾಹಿತಿ ನಂಬಲು ಸಾಧ್ಯವಿಲ್ಲ. ಅನೇಕ ವರ್ಷಗಳ ಕಾಲ ಏಕ ಪ್ರಮಾಣದ ಮಳೆ ಮತ್ತು ನೀರಿನ ಅಳತೆಯನ್ನು ನಮೂದಿಸಲಾಗಿದೆ. ಇದು ಹೇಗೆ ಸಾಧ್ಯ? ಇದು ಬದಲಾಗಬೇಕಲ್ಲವೇ?. ಕರ್ನಾಟಕ ತನ್ನ ಯೋಜನೆಗಳ ಪರಿಸರ ಅಧ್ಯಯನ ನಡೆಸಿಲ್ಲ. ಅಷ್ಟೇ ಅಲ್ಲದೆ ಕರ್ನಾಟಕವು ಮಹದಾಯಿ ಕೊಳ್ಳದ ನೀರಿನ ಲೆಕ್ಕ ಹಾಕಲು ಆಧರಿಸಿರುವ ಕೇಂದ್ರ ಜಲ ಮಂಡಳಿಯ ವರದಿಯಲ್ಲೇ ಲೋಪವಿದೆ.

    ನೀರಿನ ಪ್ರಮಾಣ ಕಡಿಮೆ: ಕರ್ನಾಟಕದ ಲೆಕ್ಕಾಚಾರದ ಪ್ರಕಾರ ಮಹದಾಯಿ ಕೊಳ್ಳದಲ್ಲಿ ಬೀಳುವ ಮಳೆಯ ಪ್ರಮಾಣಕ್ಕಿಂತ ನದಿಯಲ್ಲಿ ಹೆಚ್ಚು ನೀರಿದೆ ಇದು ಹೇಗೆ ಸಾಧ್ಯ. ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎಂಬ ಕರ್ನಾಟಕದ ನಿಲುವು ಆಧಾರರಹಿತವಾದದ್ದು. ನೀರು ಸಮುದ್ರ ಸೇರುವ ಪ್ರಕ್ರಿಯೆಗೆ ನೈಸರ್ಗಿಕ ಮಹತ್ವವಿದೆ. ಹಾಗೆಯೇ ಗೋವಾದ ಮೀನುಗಾರಿಕೆ ಮತ್ತು ನೌಕಾಯನಗಳು ಸಮುದ್ರ ಸೇರುವ ನೀರನ್ನು ಅವಲಂಬಿಸಿಕೊಂಡಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕಡು ಬಿಸಿಲಿನ ಮಾಸಗಳಲ್ಲಿ ಸಮುದ್ರಕ್ಕೆ ಸೇರಲು ಮಹದಾಯಿಯಲ್ಲಿ ನೀರೆ ಇರುವುದಿಲ್ಲ ಎಂದು ಗೋವಾ ಹೇಳಿದೆ.

    ಗೋವಾ ಪ್ಲಾನ್: ಗೋವಾಕ್ಕೆ ಅದರ ಅಗತ್ಯಗಳನ್ನು ಪೂರೈಸಲು 94 ಟಿಎಂಸಿ ನೀರು ಸಾಕು ಎಂಬುದು ಕರ್ನಾಟಕದ ವಾದ. ಆದರೆ ಗೋವಾದ ಹೊಸ ಮಾಸ್ಟರ್ ಪ್ಲಾನ್ ಪ್ರಕಾರ 144 ಟಿಎಂಸಿ ನೀರು ಬೇಕಿದೆ. ಈಗಾಗಲೇ ನ್ಯಾಯಾಧಿಕರಣದ ಗಮನಕ್ಕೆ ತಂದಿದ್ದೇವೆ. ಇನ್ನು ಜಲ ವಿದ್ಯುತ್, ಅರಣ್ಯ ಸಂರಕ್ಷಣ ಮುಂತಾದ ಅಂಶಗಳನ್ನು ಪರಿಗಣಿಸಿದ್ದೇ ಆದರೆ ಗೋವಾಕ್ಕೆ 222 ಟಿಎಂಸಿ ಮಹದಾಯಿ ನೀರು ಬೇಕು. ಆದರೆ ಕರ್ನಾಟಕ ಮತ್ತು ಕರ್ನಾಟಕದ ಪರ ತಜ್ಞ ಸಾಕ್ಷಿಗಳು ಇದೆಲ್ಲವನ್ನು ಪರಿಗಣಿಸಿಲ್ಲ ಅಧ್ಯಯನ ನಡೆಸಿಲ್ಲ. ನಾವು ಮಳೆ ನೀರು ಕೊಯ್ಲು ಕಡ್ಡಾಯ ಮಾಡಿದ್ದೇವೆ. ಆದರೆ ಮಳೆ ಕೊಯ್ಲಿನಿಂದಾಗಿ ಸಂಗ್ರಹವಾಗುವ ನೀರು ಖಾಸಗಿ ಸ್ವತ್ತಾಗಿದ್ದು. ರಾಜ್ಯದ ನದಿ, ಜಲಾಶಯಗಳಿಗೆ ಸೇರುವುದಿಲ್ಲ. ಆದ್ದರಿಂದ ಈ ನೀರಿನ ಪ್ರಮಾಣವನ್ನು ಲೆಕ್ಕ ಹಾಕಲು ರಾಜ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದರು.

    ಗೋವಾ ಜೀವನದಿ: ಗೋವಾದ ಬಳಿ 9 ನದಿಗಳಿವೆ. ಕರ್ನಾಟಕದಲ್ಲಿ 35 ನದಿಗಳಿವೆ, ಮಹದಾಯಿ ಗೋವಾದ ಜೀವನದಿಯಾಗಿದೆ. ಆದರೆ ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಸಾಕಷ್ಟು ನದಿಗಳಿವೆ. 16 ಚೆಕ್ ಡ್ಯಾಂಗಳ ಮೂಲಕ ಈ ನೀರಿನ ಸಂಗ್ರಹಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಕರ್ನಾಟಕ ತನ್ನ ನೀರಿನ ಬೇಡಿಕೆಯಲ್ಲಿ ಪರಿಸರ ಬಳಕೆಗೆ ನೀರು ಹಂಚಿಲ್ಲ. ಪರಿಸರಕ್ಕೆ ನೀರು ನೀಡುವುದು ಕೇವಲ ಗೋವಾದ ಬಾಧ್ಯತೆಯಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೂಡ ಪರಿಸರಕ್ಕೆಂದು ನೀರು ನೀಡಬೇಕು. ಸಮುದ್ರಕ್ಕೆ ನೀರು ಸೇರುವುದು ನೈಸರ್ಗಿಕ ಪ್ರಕ್ರಿಯೆ ಎಂದು ವಕೀಲ ಆತ್ಮರಾಮ್ ನಾಡಕರ್ಣಿ ವಾದಿಸಿದ್ದರು.

    ಗೋವಾದ ವಾದವನ್ನು ಬೆಂಬಲಿಸಿದ ಮಹಾರಾಷ್ಟ್ರ:
    ರಾಜ್ಯಗಳ ನೈಜ ಅಗತ್ಯವನ್ನು ನ್ಯಾಯಾಧಿಕರಣ ನಿರ್ಧರಿಸಬೇಕು. ಕೊಳ್ಳದೊಳಗಿನ ಬೇಡಿಕೆಗೆ ಒತ್ತು ನೀಡಬೇಕು. ಕೃಷ್ಣಾ ನದಿ ನೀರಿನಲ್ಲಿ ಕೃಷ್ಣಾ ನ್ಯಾಯಾಧಿಕರಣ ರಚನೆ ಆಗುವ ಮುಂಚಿತವಾಗಿ ಅಂಧ್ರಪ್ರದೇಶ 750 ಟಿಎಂಸಿ ಬಳಸುತ್ತಿದ್ದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾರಣ ನೀಡಿ ಅದನ್ನು ರಕ್ಷಿಸಲಾಗಿತ್ತು. ಈ ಪ್ರಕರಣದಲ್ಲಿಯೂ ಪ್ರಸ್ತುತ ಬಳಕೆಯನ್ನು ರಕ್ಷಿಸಬೇಕು. ನ್ಯಾಯಾಧಿಕರಣವು ಈ ಪ್ರಕರಣದಲ್ಲಿ ಅಡಕವಾಗಿರುವ ಎಲ್ಲ (ಪರಿಸರ, ಅಂತರ್ ಕೊಳ್ಳ) ಮುಂತಾದ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಬೇಕು. ಪರಿಸರದ ಅಗತ್ಯಗಳನ್ನು ಗಮನಿಸಬೇಕು. ಗೋವಾ ಮಹದಾಯಿಯನ್ನು ಕರ್ನಾಟಕ ನದಿ ಪಾತ್ರದ ಹೊರಗೆ ಕೊಂಡೊಯ್ಯುತ್ತದೆ ಎಂಬ ಆತಂಕದಿಂದ ಅದು ದೂರು ಸಲ್ಲಿಸಿದೆ. ಗೋವಾವು ಪೂರ್ವಗ್ರಹದಿಂದ ದೂರು ಸಲ್ಲಿಸಿದೆ ಎಂಬುದು ಸರಿಯಲ್ಲ ಎಂದು ಮಹರಾಷ್ಟ್ರ ಪರ ವಕೀಲ ನಾಗೋಲ್ಕರ್ ವಾದ ಮಂಡಿಸಿದರು. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

    https://www.youtube.com/watch?v=Pen28gCcuho

     

  • ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಹುಡುಗಿಯರೂ ಬಿಯರ್ ಕುಡಿಯಲು ಶುರು ಮಾಡಿದ್ದಾರೆ, ನನಗೀಗ ಆತಂಕವಾಗ್ತಿದೆ- ಮನೋಹರ್ ಪರಿಕ್ಕರ್

    ಪಣಜಿ: ಹುಡುಗಿಯರೂ ಮದ್ಯಪಾನ ಮಾಡಲು ಶುರು ಮಾಡಿರೋದ್ರಿಂದ ಆತಂಕ ಶುರುವಾಗಿದೆ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

    ನನಗೀಗ ಭಯ ಶುರುವಾಗಿದೆ. ಯಾಕಂದ್ರೆ ಹುಡುಗಿಯರೂ ಕೂಡ ಬಿಯರ್ ಕುಡಿಯಲು ಶುರು ಮಾಡಿದ್ದಾರೆ. ಸಹಿಷ್ಣುತೆಯ ಎಲ್ಲೆ ಮೀರ್ತಿದೆ ಎಂದು ಪರಿಕ್ಕರ್ ಹೇಳಿದ್ದಾರೆ.

    ರಾಜ್ಯ ಶಾಸಕಾಂಗ ಇಲಾಖೆ ಆಯೋಜಿಸಿದ್ದ ರಾಜ್ಯ ಯುವ ಸಂಸತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲ್ಲರ ಬಗ್ಗೆ ಮಾತನಾಡ್ತಿಲ್ಲ. ನಾನು ಇಲ್ಲಿ ಕುಳಿತಿರುವ ಜನರ ಬಗ್ಗೆ ಮಾತನಾಡ್ತಿಲ್ಲ ಅಂದ್ರು.

    ಇದಕ್ಕೂ ಮುನ್ನ ಗೋವಾದಲ್ಲಿ ಮಾದಕದ್ರವ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಾದಕದ್ರವ್ಯ ಜಾಲದ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಲಾಗ್ತಿದೆ. ಡ್ರಗ್ಸ್ ಕಣ್ಣಿಗೆ ಕಾಣದಂತೆ ಮರೆಯಾಗುವವರೆಗೆ ಇದು ಮುಂದುವರೆಯಲಿದೆ ಎಂದರು. ಇದು ಸಂಪೂರ್ಣವಾಗಿ ನಿಲ್ಲುತ್ತದೆ ಎಂಬ ನಂಬಿಕೆಯಿಲ್ಲ. ಆದ್ರೂ ಕಾಲೇಜುಗಳಲ್ಲಿ ತೀವ್ರವಾದ ಮಾದಕದ್ರವ್ಯ ಪ್ರಸರಣ ಇಲ್ಲ ಎಂದು ನಂಬಿದ್ದೇನೆ ಅಂತ ಹೇಳಿದ್ರು.

    ಮಾದಕದ್ರವ್ಯ ಮಾರಾಟದ ಬಗ್ಗೆ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ 170 ಮಂದಿಯನ್ನ ಡ್ರಗ್ಸ್ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಿದ್ರು.

    ಕಾನೂನಿನ ಪ್ರಕಾರ ಸಣ್ಣ ಪ್ರಮಾಣದ ಡ್ರಗ್ಸ್ ಇದ್ದರೆ ವ್ಯಕ್ತಿಗೆ 8 ರಿಂದ 15 ದಿನಗಳಲ್ಲಿ ಅಥವಾ ಒಂದು ತಿಂಗಳಲ್ಲಿ ಜಾಮೀನು ಸಿಗುತ್ತದೆ. ಕೋರ್ಟ್ ಗಳೂ ಕೂಡ ಸಹಾನುಭೂತಿ ತೋರುತ್ತಿವೆ. ಆದ್ರೂ ತಪ್ಪಿತಸ್ಥರು ಸಿಕ್ಕಿಬೀಳುತ್ತಿದ್ದಾರೆ ಎಂದು ಹೇಳಿದ್ರು.

    ನಿರುದ್ಯೋಗದ ಬಗ್ಗೆ ಮಾತನಾಡಿದ ಪರಿಕ್ಕರ್, ಗೋವಾದ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಲು ಇಚ್ಛಿಸದ ಕಾರಣ ಸರ್ಕಾರಿ ಇಲಾಖೆಯೊಂದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸಕ್ಕೆ ಉದ್ದ ಕ್ಯೂ ಇದ್ದಿದ್ದು ಕಂಡಿತು. ಸರ್ಕಾರಿ ಕೆಲಸ ಅಂದ್ರೆ ಅಷ್ಟೇನು ಕಷ್ಟದ ಕೆಲಸವಲ್ಲ ಅಂತ ಜನ ಅಂದುಕೊಂಡಿದ್ದಾರೆ ಎಂದು ಹೇಳಿದ್ರು.

  • ಇಂದಿನಿಂದ ಮಹದಾಯಿ ಅಂತಿಮ ವಿಚಾರಣೆ- ಆಗಸ್ಟ್ ನೊಳಗೆ ತೀರ್ಪು ಹೊರಬರುವ ಸಾಧ್ಯತೆ

    ಇಂದಿನಿಂದ ಮಹದಾಯಿ ಅಂತಿಮ ವಿಚಾರಣೆ- ಆಗಸ್ಟ್ ನೊಳಗೆ ತೀರ್ಪು ಹೊರಬರುವ ಸಾಧ್ಯತೆ

    ಬೆಂಗಳೂರು: ಗೋವಾ ಮತ್ತು ಕರ್ನಾಟಕದ ನಡುವೆ ಕಗ್ಗಂಟಾಗಿ ಉಳಿದಿರುವ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಅಂತಿಮ ವಿಚಾರಣೆ ಇಂದಿನಿಂದ ನಡೆಯಲಿದೆ.

    ದೆಹಲಿಯಲ್ಲಿರುವ ಮಹದಾಯಿ ನ್ಯಾಯಾಧಿಕರಣದಲ್ಲಿ ಇಂದಿನಿಂದ ಅಂತಿಮ ವಿಚಾರಣೆ ಶುರುವಾಗಲಿದೆ. ಸುಮಾರು 2 ತಿಂಗಳು ಕಾಲ ಅಂತಿಮ ಹಂತದ ವಿಚಾರಣೆ ನಡೆಯಲಿದ್ದು, ಗೋವಾ ಸರ್ಕಾರ ರಾಜ್ಯದ ಮೇಲೆ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ಮೊದಲಿಗೆ ವಿಚಾರಣೆಗೆ ಬರಲಿದೆ. ಬಳಿಕ ಮೂಲ ಅರ್ಜಿಯನ್ನು ವಿಚಾರಣೆಗೆ ಕೈಗೊತ್ತಿಕೊಳ್ಳುವ ಸಾಧ್ಯತೆ ಇದೆ.

    ಕರ್ನಾಟಕದ ಪರವಾಗಿ ವಾದ ಮಂಡಿಸಬೇಕಿದ್ದ ವಕೀಲ ಫಾಲಿ ಎಸ್. ನಾರಿಮನ್ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಚಾರಣೆಗೆ ಗೈರಾಗಲಿದ್ದಾರೆ. ಅವರ ಬದಲಿಗೆ ಹೊಸ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಅಶೋಕ ದೇಸಾಯ್ ನೀರಿನ ಹಂಚಿಕೆಯ ಕುರಿತು ವಾದ ಮಂಡಿಸಲಿದ್ದಾರೆ.

    ಆಗಸ್ಟ್ 20ರಂದು ನ್ಯಾಯಾಧಿಕರಣಕ್ಕೆ ಐದು ವರ್ಷ ತುಂಬಲಿದ್ದು ನ್ಯಾಯಧೀಕರಣದ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ನೊಳಗೆ ನ್ಯಾಯಾಧಿಕರಣದಿಂದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

     

  • ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಗೋವಾ ವಿಧಾನಸಭೆ ಟೀಂ ದಿಢೀರ್ ಭೇಟಿ

    ಬೆಳಗಾವಿ: ಮಹದಾಯಿ ನದಿ ನೀರುಹಂಚಿಕೆ ವಿವಾದ ವಿಚಾರ ಸಂಬಂಧಿಸಿದಂತೆ ಕರ್ನಾಟಕ ಕಣಕುಂಬಿಗೆ ಗೋವಾ ವಿಧಾನಸಭೆ ಸ್ವೀಕರ್ ನೇತೃತ್ವದ ತಂಡ ಇಂದು ಭೇಟಿ ನೀಡಿದೆ.

    ಕರ್ನಾಟಕ ಸರ್ಕಾರ ಕಳಸಾ ಕಾಮಗಾರಿ ನಡೆಸುತ್ತಿರುವ ಪ್ರದೇಶ ಇದಾಗಿದ್ದು, ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್, ಡೆಪ್ಯೂಟಿ ಸ್ಪೀಕರ್ ಮೈಖೆಲ್ ಲೋಬೋ ಹಾಗೂ ಹಲವು ಹಾಲಿ ಮತ್ತು ಮಾಜಿ ಶಾಸಕರು ಸೇರಿದಂತೆ 40 ಜನರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

    ಈ ವೇಳೆ ಕಣಕುಂಬಿಯಲ್ಲಿ ಮಾತನಾಡಿದ ಗೋವಾ ಡೆಪ್ಯೂಟಿ ಸ್ಪೀಕರ್ ಮೈಕಲ್ ಲೋಬೋ, ನ್ಯಾಯಾಧೀಕರಣದ ಆದೇಶವನ್ನು ಕರ್ನಾಟಕ ಉಲ್ಲಂಘನೆ ಮಾಡಿದೆ. ಕರ್ನಾಟಕ ಸರ್ಕಾರ ನಿಯಮ ಉಲ್ಲಂಘನೆ ಮಾಡಿ ಗೋವಾಕ್ಕೆ ಹೋಗುವ ನೀರನ್ನು ತಡೆಯುವ ಯತ್ನ ಮಾಡಿದೆ. ನ್ಯಾಯಾಧೀಕರಣ ಸಮಿತಿಯನ್ನು ರಚಿಸಿ ತನಿಖೆ ನಡೆಸಬೇಕು. ಇದು ಕೇವಲ ಸಾಮಾನ್ಯ ಭೇಟಿ ಅಷ್ಟೇ ಎಂದು ಹೇಳಿದರು.

    ಮಹದಾಯಿ ನ್ಯಾಯಾಧೀಕರಣ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸುತ್ತಿದೆ ಎನ್ನುವ ಆರೋಪದ ಹಿನ್ನೆಲೆ ಗೋವಾ ತಂಡದ ಈ ಭೇಟಿ ತೀವ್ರ ಕುತೂಹಲವನ್ನು ಉಂಟುಮಾಡಿದೆ. ಸ್ಥಳದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ, ಎಸ್ಪಿ ಉಪಸ್ಥಿತರಿದ್ದರು. ಮುಂಜಾಗೃತ ಕ್ರಮವಾಗಿ ಕಳಸಾ ನಾಲೆ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

    ಸಿಎಂ ಸ್ಪಷ್ಟನೆ: ಗೋವಾ ಸ್ಪೀಕರ್ ತಂಡದಿಂದ ಕಳಸಾ ನಾಲಾ ಯೋಜನೆ ವೀಕ್ಷಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಗೋವಾ ರಾಜ್ಯದಿಂದ ಸ್ಪೀಕರ್, ಡೆಪ್ಯುಟಿ ಸ್ಪೀಕರ್ ಹಾಗೂ ಅವರ ತಂಡ ಕಳಸಾ ಕಾಮಗಾರಿ ನಡೆಯೋ ಕಣಕುಂಬಿಗೆ ಬಂದಿದ್ದಾರೆ. ಅವರನ್ನು ತಡೆಯುವುದು ಬೇಡ. ಶಿಷ್ಟಾಚಾರದ ಪ್ರಕಾರ ಅವರ ಜೊತೆ ಸಹಕರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡುವುದರ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಸ್ಥಳ ವೀಕ್ಷಣೆ ಮಾಡಿ ಹೋಗಲಿ. ಆದರೆ ನಾವು ಯಾವುದೇ ಕಾಮಗಾರಿ ಮುಂದುವರೆಸಿಲ್ಲ. ನ್ಯಾಯಾಧೀಕರಣದ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

     

  • ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆ ಬಿಸಿ- ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಕ್ಕೆ ತಡೆ

    ಬೆಳಗಾವಿ: ರಾಜ್ಯಾದ್ಯಂತ ಇಂದು ಕರವೇ ಸಂಘಟನೆಯ ನೇತೃತ್ವದಲ್ಲಿ ಕರ್ನಾಟಕ ಬಂದ್ ನಡೆಯುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಡರಾತ್ರಿಯೇ ಪ್ರತಿಭಟನೆಯ ಬಿಸಿ ತಟ್ಟಿದೆ.

    ಬೆಳಗಾವಿಯ ಪೀರನವಾಡಿ ಕ್ರಾಸ್ ಬಳಿ ಕರ್ನಾಟಕದಿಂದ ಗೋವಾಗೆ ಹೋಗುವ ತರಕಾರಿ, ಹಾಲಿನ ವಾಹನಗಳನ್ನು ತಡೆಯಲು ಕರವೇ ಕಾರ್ಯಕರ್ತರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ನಗರದಲ್ಲಿ ಬಸ್‍ಗಳು ರಸ್ತೆಗೆ ಇಳಿಯದಿದ್ದರಿಂದ ಕೇಂದ್ರಿಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇಂದು ಗೋವಾದಿಂದ ಯಾವುದೇ ಬಸ್ ಗಳು ರಾಜ್ಯದತ್ತ ಬಂದಿಲ್ಲ. ಕರ್ನಾಟಕದ ಬಸ್ ಗಳು ಮಾತ್ರ ರಾಜ್ಯದತ್ತ ಆಗಮಿಸುತ್ತಿವೆ.

  • ಮಹದಾಯಿಗಾಗಿ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕದಿಂದ 50 ಸಾವಿರ ರೂ. ಲಂಚ: ಗೋವಾ ಸಚಿವ

    ಮಹದಾಯಿಗಾಗಿ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕದಿಂದ 50 ಸಾವಿರ ರೂ. ಲಂಚ: ಗೋವಾ ಸಚಿವ

    ಬೆಂಗಳೂರು: ಕನ್ನಡಿಗರನ್ನು ಹರಾಮಿಗಳು ಎಂದಿದ್ದ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಮತ್ತೊಮ್ಮೆ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕದ ವಿರುದ್ಧ ಸುಳ್ಳು ಸಾಕ್ಷಿಯ ಆರೋಪ ಮಾಡಿದ್ದಾರೆ.

    ಈ ಕುರಿತು ರಾಷ್ಟ್ರೀಯ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಮಹದಾಯಿ ಬಗ್ಗೆ ಸುಳ್ಳು ಸಾಕ್ಷಿ ಹೇಳಲು ಕರ್ನಾಟಕ ಸರ್ಕಾರ ಸಾಕ್ಷಿಗಳಿಗೆ 50 ಸಾವಿರ ಲಂಚ ನೀಡುತ್ತಿದೆ. ಗೋವಾ ಸರ್ಕಾರ ಮಾತ್ರ ಸಾಕ್ಷಿಗಳಿಗೆ ನಯಾಪೈಸೆ ಕೊಟ್ಟಿಲ್ಲ ಎಂದು ಮತ್ತೆ ತಮ್ಮ ಬಾಯಿ ಹರಿಬಿಟ್ಟಿದ್ದಾರೆ.

    ಮಹದಾಯಿ ಸಮಸ್ಯೆಯ ನ್ಯಾಯಾಧೀಕರಣದ ವಿಚಾರಣೆ ಫೆಬ್ರವರಿ 6 ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪಾಲ್ಯೇಕರ್ ಮತ್ತೊಮ್ಮೆ ಕರ್ನಾಟಕ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

    ಕೆಲವೇ ದಿನಗಳ ಹಿಂದೆ ಕಣಕುಂಬಿಗೆ ಭೇಟಿ ನೀಡಿದ್ದ ಪಾಲ್ಯೇಕರ್, ಕರ್ನಾಟಕ ಸರ್ಕಾರ ನ್ಯಾಯಾಧೀಕರಣ ಆದೇಶ ವಿರುದ್ಧವಾಗಿ ಡ್ಯಾಂ ನಿರ್ಮಾಣ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಕುರಿತು ಪಣಜಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಪಾಲ್ಯೇಕರ್ ಕರ್ನಾಟಕದವರು ಹರಾಮಿಗಳು ಎಂದು ಹೇಳಿಕೆ ಕೊಟ್ಟಿದ್ದರು. ನಂತರ ಕನ್ನಡಿಗರ ಆಕ್ರೋಶಕ್ಕೆ ಒಳಗಾದ ಕಾರಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಅವರು, ನ್ಯಾಯಾಧೀಕರಣದ ನಿಯಮಗಳ ಆನ್ವಯ ಮಹದಾಯಿ ನೀರಾವರಿ ಕಮಿಟಿ ಕನಿಷ್ಟ ವಾರಕ್ಕೆ ಒಮ್ಮೆಯಾದರು ವಿವಾದಿತ ಸ್ಥಳಕ್ಕೆ ಭೇಟಿ ನೀಡಬಹುದು. ಅಲ್ಲದೇ ಆ ಪ್ರದೇಶದಲ್ಲಿ ನಡೆಯುವ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳನ್ನು ಪರಿಗಣಿಸಬಹುದು. ಅಗತ್ಯ ವೇಳೆ ಸ್ಥಳಕ್ಕೆ ಭೇಟಿ ನೀಡಿ ವಸ್ತು ಸ್ಥಿತಿ ಬಗ್ಗೆ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿ ನೀಡಬಹುದು ಎಂಬ ನಿಯಮಗಳ ಪಟ್ಟಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    ಈ ಕುರಿತ ಸರಣಿ ಟ್ವೀಟ್‍ಗಳಲ್ಲಿ ಕರ್ನಾಟಕ ಸಚಿವರು ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿ ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾರೆ. ಆದರೆ ಈ ಕುರಿತು ವಿಡಿಯೋ ಸಮೇತ ಸಾಕ್ಷ್ಯವನ್ನು ನ್ಯಾಯಾಲಯದಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

     

    ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಟ್ವೀಟ್ ಗೆ ರಾಜ್ಯ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ. ನಮ್ಮ ನಾಡ ರಕ್ಷಣೆಯ ಪಾಠ ನಿಮ್ಮಿಂದ ಕಲಿಯಬೇಕಿಲ್ಲ. ನೀವು ಅಲ್ಲ, ನಿಮ್ಮಂತ ಸಾವಿರ ಜನರು ಬಂದರು ನಮನ್ನು ಬಗ್ಗಿಸಲು ಸಾಧ್ಯವಿಲ್ಲ. ಮಹಾದಾಯಿ ಭಿಕ್ಷೆ ಅಲ್ಲ, ಅದು ನಮ್ಮ ಹಕ್ಕು ಎಂದು ಟಾಂಗ್ ನೀಡಿದ್ದಾರೆ.