Tag: goa

  • ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ನಡುವಯಸಿನ ಪಯಣಿಗರಿಗೆ ಹಿರಿಜೀವದ ಬೆಸುಗೆ!

    ಬೆಂಗಳೂರು: ಅಪ್ಪಟ ಕನ್ನಡದ, ಕೇಳಿದಾಕ್ಷಣವೇ ಆಪ್ತವೆನ್ನಿಸುವ ಶೀರ್ಷಿಕೆಯ ಚಿತ್ರಗಳು ಆಗಾಗ ಗಮನ ಸೆಳೆಯುತ್ತಿರುತ್ತವೆ. ಇದೀಗ ಬಿಡುಗಡೆಗೆ ರೆಡಿಯಾಗಿರುವ ರಾಜ್ ಗೋಪಿ ನಿರ್ದೇಶನದ ಪಯಣಿಗರು ಕೂಡಾ ಅದೇ ಸಾಲಿನಲ್ಲಿ ಸೇರ್ಪಡೆಯಾಗಬಲ್ಲ ಚಿತ್ರ. ಕೊಳನ್ ಕಲ್ ಮಹಾಗಣಪತಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಪಯಣಿಗರು ಇದೇ ಏಪ್ರಿಲ್ ಹದಿನೇಳನೇ ತಾರೀಕಿನಂದು ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ.

    ಸಂಸಾರದ ಜವಾಬ್ದಾರಿ ಹೊತ್ತ ಐವರು ನಡುವಯಸಿನ ಸ್ನೇಹಿತರು ಗೋವಾ ಟ್ರಿಪ್ಪಿಗೆ ಹೋಗೋದು ಈ ಕಥೆಯ ಮೂಲ. ನೆಮ್ಮದಿ ಅರಸಿ ಹೊರಡುವ ಈ ಸ್ನೇಹಿತರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸ್ವಭಾವ. ಆದರೆ ಅವರಿಗೆ ಬೆಂಗಳೂರಿನಿಂದ ಗೋವಾ ಪ್ರಯಾಣದಲ್ಲಿ ಅನಿರೀಕ್ಷಿತ ಘಟನಾವಳಿಗಳೇ ಪದೇ ಪದೇ ಎದುರಾಗುತ್ತವೆ. ಗೋವಾದಲ್ಲಿಯಂತೂ ಇರುವ ನೆಮ್ಮದಿಯನ್ನೂ ಕಿತ್ತುಕೊಳ್ಳುವಂಥಾ ಘಟನೆಯೊಂದು ನಡೆದು ಇಡೀ ಟೀಮು ಕಂಗಾಲಾಗುತ್ತೆ.

    ಇಂಥಾ ಹೊತ್ತಲ್ಲಿಯೇ ಈ ಪಯಣದಲ್ಲಿ ಅನಿರೀಕ್ಷಿತವಾಗಿ ರಾಮಣ್ಣ ತಾತ ಎಂಬ ಹಿರಿಯ ಕ್ಯಾರೆಕ್ಟರ್ ಒಂದು ಈ ಟೀಮು ಸೇರಿಕೊಳ್ಳುತ್ತದೆಯಂತೆ. ಈ ರಾಮಣ್ಣ ತಾತನ ಪಾತ್ರವನ್ನು ಹಿರಿಯ ನಟ ನಾಗರಾಜ್ ರಾವ್ ನಿರ್ವಹಿಸಿದ್ದಾರಂತೆ. ಎಲ್ಲ ಪಾತ್ರಗಳಂತೆಯೇ ಈ ಪಾತ್ರವೂ ಕೂಡಾ ಎಲ್ಲರನ್ನು ಕಾಡುವಂತೆ ಮೂಡಿ ಬಂದಿದೆಯಂತೆ. ನಿಖರವಾಗಿ ಹೇಳ ಬೇಕೆಂದರೆ, ಪಯಣಿಗರ ಪಯಣ ಪಕ್ಕಾ ಬೇರೆಯದ್ದೇ ಜಾಡಿನದ್ದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

    ಈ ಚಿತ್ರದಲ್ಲಿ ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ರಾಘವೇಂದ್ರ ಬೂದನೂರು, ಸುಧೀರ್ ಮೈಸೂರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಾ ಶಿವಶಂಕರ್ ಛಾಯಾಗ್ರಹಣ ಮತ್ತು ರವಿಚಂದ್ರ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.

  • ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪದಗ್ರಹಣ

    – ಪರಿಕ್ಕರ್ ಅಂತ್ಯಕ್ರಿಯೆ ಬೆನ್ನಲ್ಲೆ ಸರ್ಕಾರ ರಚನೆ
    – ರಾತ್ರೋರಾತ್ರಿ ಮುಗಿದೇ ಹೋಯ್ತು ಕಾರ್ಯಕ್ರಮ

    ಪಣಜಿ: ಗೋವಾ ನೂತನ ಸಿಎಂ ಆಗಿ ಪ್ರಮೋದ್ ಸಾವಂತ್ ರಾತ್ರೋರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ (ಎಂಜಿಪಿ)ಯ ಸುದೀನ್ ದಾವಲೀಕರ್ ಮತ್ತು ಗೋವಾ ಫಾವರ್ಡ್ ಪಾರ್ಟಿ (ಜಿಎಫ್‍ಪಿ)ಯ ವಿಜಯ್ ಸರ್ದೇಸಾಯಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.

    11 ಗಂಟೆಗೆ ನಡೆಯಬೇಕಿದ್ದ ಕಾರ್ಯಕ್ರಮ ವಿವಿಧ ಕಾರಣಗಳಿಂದಾಗಿ ತಡವಾಯಿತು. ಮಧ್ಯರಾತ್ರಿ 2 ಗಂಟೆ ವೇಳೆಗೆ ರಾಜಭವನದಲ್ಲಿ ಪ್ರಮೋದ್ ಸಾವಂತ್, 11 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಗವರ್ನರ್ ಭೇಟಿಯಾದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಮೈತ್ರಿಪಕ್ಷದ ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಪ್ರಮೋದ್ ಸಾವಂತ್ ಗೋವಾ ಸ್ಪೀಕರ್ ಆಗಿ ಕಾರ್ಯ ನಿರ್ವಸುತ್ತಿದ್ದರು. ದೊಡ್ಡ ಪಕ್ಷವಾದ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.

    ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ?
    40 ಶಾಸಕರನ್ನು ಹೊಂದಿರುವ ಗೋವಾ ವಿಧಾನಸಭೆ ಸಂಖ್ಯೆ 36ಕ್ಕೆ ಇಳಿದಿದ್ದು, 19 ಶಾಸಕರನ್ನು ಹೊಂದಿರುವ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಬಹುದು. ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಎಂಜಿಪಿ, ಜಿಎಫ್ ಪಿ ಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.

  • ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    ದೇಶ ಕಂಡ ಅತ್ಯುತ್ತಮ ರಕ್ಷಣಾ ಸಚಿವ, ಗೋವಾ ಸಿಎಂ ಪಂಚಭೂತಗಳಲ್ಲಿ ಲೀನ

    – ಸಹೋದ್ಯೋಗಿಯನ್ನ ಕಳೆದುಕೊಂಡು ಕಣ್ಣೀರಿಟ್ಟ  ಸ್ಮೃತಿ ಇರಾನಿ

    ಪಣಜಿ: ತೀವ್ರ ಅನಾರೋಗ್ಯ ಕಾರಣ ಇಹಲೋಕ ತ್ಯಜಿಸಿದ ಸರಳ ಮತ್ತು ಸಜ್ಜನ ರಾಜಕಾರಣಿ, ದೇಶಕಂಡ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (63) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

    ಪಣಜಿಯ ಮಿರಮಾರ್ ಬೀಚ್‍ನಲ್ಲಿ ಪರಿಕ್ಕರ್ ಮಕ್ಕಳಾದ ಉತ್ಪಲ್ ಮತ್ತು ಅಭಿಜಿತ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಮನೋರ್ ಪರಿಕ್ಕರ್ ಅಂತ್ಯಕ್ರಿಯೆಗೆ ನಡೆಯಿತು. ಇದಕ್ಕೂ ಮುನ್ನ ಪರಿಕ್ಕರ್ ಅವರ ಮೃತದೇಹವನ್ನು ಕಲಾ ಅಕಾಡೆಮಿಯಿಂದ ಎಸ್‍ಎಜಿ ಮೈದಾನದವರೆಗೆ ಅಂತಿಮ ಯಾತ್ರೆಯಲ್ಲಿ ತರಲಾಯಿತು. ಈ ಅಂತಿಮ ಯಾತ್ರೆಯಲ್ಲಿ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವರು ನಮನ ಸಲ್ಲಿಸಿದರು. ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರ ಮಕ್ಕಳ ಬಳಿಗೆ ತೆರಳಿದ ಮೋದಿ ಕ್ಷಣ ಕಾಲ ಮೌನವಾಗಿ ನಿಂತಿದ್ದರು. ಈ ವೇಳೆ ಅಂತಿಮ ದರ್ಶನ ಪಡೆಯಲು ಆಗಮಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು, ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದು ಕಣ್ಣೀರಿಡುತ್ತಾ ತೆರಳಿದ್ದು ಕಂಡು ಬಂತು.

    ಪರಿಕ್ಕರ್ ಅವರ ನಿಧನದಿಂದಾಗಿ ಇಂದು ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಅಂತಿಮವಾಗಿ ಪರಿಕ್ಕರ್ ಅವರು ಜನವರಿಯಲ್ಲಿ ನಡೆದ ಮಾಂಡೋವಿ ನದಿ ನಿರ್ಮಿಸಿಲಾಗಿದ್ದ ಅಟಲ್ ಸೇತುವೆಯನ್ನು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ್ದರು. ಈ ವೇಳೆ ನನ್ನ ಅಂತಿಮ ಉಸಿರು ಇರುವವರೆಗೂ ಗೋವಾ ಸಿಎಂ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು. ಇದರಂತೆಯೇ ಅವರು ತಮ್ಮ ಕೊನೆ ಉಸಿರಿನವರೆಗೂ ಸಿಎಂ ಆಗಿಯೇ ಇಹಲೋಕ ತ್ಯಜಿಸಿದ್ದಾರೆ.

  • ಗೋವಾದಲ್ಲಿ ಹೊಸ ಸಿಎಂಗಾಗಿ ಬಿಜೆಪಿ ಹುಡುಕಾಟ

    ಗೋವಾದಲ್ಲಿ ಹೊಸ ಸಿಎಂಗಾಗಿ ಬಿಜೆಪಿ ಹುಡುಕಾಟ

    -ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬಿಜೆಪಿ ನಡೆಸಿದ ಹೊಸ ಸಿಎಂ ಆಯ್ಕೆಯ ಸಭೆಯಲ್ಲಿ ಸಹಮತ ವ್ಯಕ್ತವಾಗಿಲ್ಲ. ಇತ್ತ ಸರ್ಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ನವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

    ಭಾನುವಾರ ರಾತ್ರಿ ಸುಮಾರು 6 ಗಂಟೆ ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿ ಆಯ್ಕೆಗಾಗಿ ಚರ್ಚೆ ನಡೆಸಿತ್ತು. ಸಭೆಯ ಅಂತ್ಯದಲ್ಲಿ ವಿಧಾನಸಭೆಯ ಅಧ್ಯಕ್ಷ ಪ್ರಮೋದ್ ಸಾವಂತ್ ಮತ್ತು ವಿಶ್ವಜಿತ್ ರಾಣೆ ಅವರ ಹೆಸರು ಕೇಳಿಬಂದಿದೆ. ಕೆಲ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಸಿಎಂ ಯಾರಾಗಬೇಕೆಂಬುದನ್ನು ಅಂತಿಮಗೊಳಿಸಿಲ್ಲ. 40 ಶಾಸಕರನ್ನು ಹೊಂದಿರುವ ಗೋವಾ ವಿಧಾನಸಭೆ ಸಂಖ್ಯೆ 36ಕ್ಕೆ ಇಳಿದಿದ್ದು ಕಾಂಗ್ರೆಸ್ ಸರ್ಕಾರ ರಚನೆಗೆ ಅವಕಾಶ ಕೋರಿದೆ.

    ಗೋವಾದಲ್ಲಿ ಪಕ್ಷಗಳ ಬಲಾಬಲ ಹೇಗಿದೆ?
    ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಸದ್ಯ 19 ಶಾಸಕರನ್ನು ಹೊಂದಿರುವ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಬಹುದು.

    ಈ ಮೊದಲು ಬಿಜೆಪಿ ತನ್ನ 12 ಶಾಸಕರೊಂದಿಗೆ ಮಹಾರಾಷ್ಟ್ರ ಗೋಮಂತಕ ಪಕ್ಷ (3), ಗೋವಾ ಪಾರ್ವರ್ಡ್ ಪಕ್ಷ (3) ಮತ್ತು ನಿರ್ದಲಿಯ (3) ಬೆಂಬಲದೊಂದಿಗೆ ಗೋವಾದಲ್ಲಿ ಸರ್ಕಾರ ರಚನೆ ಮಾಡಿತ್ತು. ಸದ್ಯ ಮನೋಹರ್ ಪರಕ್ಕರ್ ನಿಧನದ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ವಿಚಾರದಲ್ಲಿ ಮೈತ್ರಿ ಪಕ್ಷಗಳಲ್ಲಿ ಒಮ್ಮತ ಮೂಡುತ್ತಿಲ್ಲ ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. ಈ ಮಧ್ಯೆ ಕಾಂಗ್ರೆಸ್ ಇತರೆ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಹೊಸ ತಂತ್ರಗಳನ್ನು ಬಳಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

  • ಇಂದು ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಸಭೆ ರದ್ದು

    ಇಂದು ಗೋವಾ ಸಿಎಂ ಪರಿಕ್ಕರ್ ಅಂತ್ಯಕ್ರಿಯೆ – ಪ್ರಧಾನಿ ಮೋದಿ ಭಾಗಿ, ಬಿಜೆಪಿ ಟಿಕೆಟ್ ಹಂಚಿಕೆ ಸಭೆ ರದ್ದು

    ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಭಾನುವಾರ ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ವಿಧಿವಶರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.

    ಸಂಜೆ 5 ಗಂಟೆಗೆ ಬೀಚ್‍ಬಳಿಯ ಮಿರಾಮರ್‍ನಲ್ಲಿ ಅಂತ್ಯಸಂಸ್ಕಾರ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಲಾ ಅಕಾಡೆಮಿಯಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

    ಇತ್ತ ಪರಿಕ್ಕರ್ ನಿಧನ ಬೆನ್ನಲ್ಲೇ ರಾಜಕೀಯ ಬಿಕ್ಕಟ್ಟು ಸೃಷ್ಟಿ ಆಗಿದ್ದು, ಹೊಸ ಸಿಎಂ ಯಾರಾಗಬೇಕೆಂಬ ಬಗ್ಗೆ ತಡರಾತ್ರಿವರೆಗೂ ನಡೆದ ಸಭೆ ವಿಫಲವಾಗಿದೆ.

    ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ 63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕೆಲ ತಿಂಗಳ ಹಿಂದೆಯಷ್ಟೇ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು. ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ ಅಳವಡಿಸಲಾಗಿತ್ತು. ಹಾಗಿದ್ದರೂ ಕೂಡ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು.

    ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ ಅಂತ್ಯದಲ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು.

  • ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ

    ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿಧಿವಶ

    ಪಣಜಿ: ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಪಣಜಿಯಲ್ಲಿರುವ ಮಗನ ನಿವಾಸದಲ್ಲಿ ಪರಿಕ್ಕರ್ ಸಂಜೆ ವಿಧಿವಶರಾಗಿದ್ದಾರೆ.

    63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಟಿಕ್ ಕಾಯಿಲೆ (ಮೆದೋಜೀರಕ ಗೃಂಥಿ ಸಮಸ್ಯೆ)ಯಿಂದ ಬಳಲುತ್ತಿದ್ದರು. ಅಲ್ಲದೇ ಕಳೆದ ವರ್ಷ ಅಮೆರಿಕದಲ್ಲಿ 3 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರು ಸೆ.6 ರಂದು ಚೇತರಿಸಿಕೊಂಡು ಮತ್ತೆ ತಾಯ್ನಾಡಿಗೆ ಮರಳಿದ್ದರು.

    ಗೋವಾ, ಮುಂಬೈ, ನವದೆಹಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರ ಮೂಗಿಗೆ ಪೈಪ್ ಅಳವಡಿಸಲಾಗಿತ್ತು. ಹಾಗಿದ್ದರೂ ಕೂಡ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು.

    ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು. ಆದರೆ ಫೆಬ್ರವರಿ ಅಂತ್ಯದಲ್ಲಿ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದಲೂ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದರು. ಗೋವಾದ ಸಚಿವರು ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದ್ದು, ವೈದ್ಯರು ಕರ್ತವ್ಯವನ್ನು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

    ಏನಿದು ಪ್ಯಾಂಕ್ರಿಯಾಸ್ ಕಾಯಿಲೆ?:
    ಪ್ಯಾಂಕ್ರಿಯಾಸ್ ಮಾನವ ದೇಹದ ಪ್ರಮುಖ ಅಂಗವಾಗಿದ್ದು, ಎರಡು ಪ್ರಮುಖ ಹಾರ್ಮೋನ್ ಗಳಾದ ಇನ್ಸುಲಿನ್, ಗ್ಲೂಕಾಗಾನ್ ಗಳ ಉತ್ಪಾದನೆ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊಂದಿದೆ. ಹೊಟ್ಟೆಯ ಭಾಗದಲ್ಲಿ ಕರುಳು ಮತ್ತು ಜಠರದ ಆಳವಾದ ಹಿಂಭಾಗದಲ್ಲಿರುವ ಪ್ಯಾಂಕ್ರಿಯಾಸ್ ಗಳನ್ನು ಕಾಡುವ ಹಲವಾರು ರೋಗಗಳ ಪೈಕಿ ಕ್ಯಾನ್ಸರ್ ಅತ್ಯಂತ ಮಾರಕವಾಗಿದೆ.

    1955 ಡಿಸೆಂಬರ್ 13 ರಂದು ಜನಿಸಿದ ಪರಿಕ್ಕರ್ 1978 ರಲ್ಲಿ ಬಾಂಬೆ ಐಐಟಿಯಿಂದ ಪದವಿಯನ್ನು ಪಡೆದಿದ್ದರು. ಯುವಕರಾಗಿದ್ದ ವೇಳೆಯೇ ಅವರು ಆರ್ ಆರ್ ಎಸ್ ನಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರದಲ್ಲಿ ಒಬ್ಬರಾಗಿ ಬೆಳೆದರು.

    1994 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಗಿ ಆಯ್ಕೆ ಆಗಿದ್ದ ಅವರು, 2000 ಇಸವಿಯಿಂದ 2005 ಹಾಗೂ 2012 ರಿಂದ 2014ರ ವರೆಗೂ ಗೋವಾ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2017 ಮಾರ್ಚ್ 14 ರಂದು ಮತ್ತೆ ಗೋವಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.

    2013 ಲೋಕಸಭಾ ಚುನಾವಣೆಗೂ ಮುನ್ನ ಮನೋಹರ್ ಪರಿಕ್ಕರ್ ಬಿಜೆಪಿಯಿಂದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿದ್ದರು. ಆದರೆ 2014 ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. 2017ರ ಮಾರ್ಚ್ ವರೆಗೂ ಸಚಿವರಾಗಿ ಮುಂದುವರೆದಿದ್ದರು, ಆದರೆ ಗೋವಾ ರಾಜ್ಯ ರಾಜಕೀಯದಲ್ಲಿ ನಡೆದ ಬದಲಾವಣೆಗಳ ಕಾರಣದಿಂದ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.

  • ಮತ್ತೆ ಗೋವಾ ಸಿಎಂ ಪರಿಕ್ಕರ್ ಆಸ್ಪತ್ರೆಗೆ ದಾಖಲು

    ಮತ್ತೆ ಗೋವಾ ಸಿಎಂ ಪರಿಕ್ಕರ್ ಆಸ್ಪತ್ರೆಗೆ ದಾಖಲು

    ಪಣಜಿ: ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್ ಶನಿವಾರ ತಡರಾತ್ರಿ ಗೋವಾದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ.

    63 ವರ್ಷದ ಮನೋಹರ್ ಪರಿಕ್ಕರ್ ಕಳೆದ ಒಂದು ವರ್ಷದಿಂದ ಪ್ಯಾಕ್ರಿಯಾಸ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಯುಜಿಐ ಎಂಡೋಸ್ಕೋಪಿಗಾಗಿ ಗೋವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಪರಿಕ್ಕರ್ ಅವರ ಆರೋಗ್ಯ ಸ್ಥಿರವಾಗಿದ್ದು, ತಜ್ಞ ವೈದ್ಯರ ತಂಡ 24 ಗಂಟೆಗಳ ಕಾಲ ಅವರ ಆರೋಗ್ಯ ಮೇಲೆ ನಿಗಾವಹಿಸಿದೆ ಎಂದು ಸಿಎಂ ಕಚೇರಿ ಪ್ರತಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ತಡರಾತ್ರಿಯೇ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಆಸ್ಪತ್ರೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಸಿಎಂ ಆರೋಗ್ಯ ಉತ್ತಮವಾಗಿದೆ. ಕೆಲ ಚಿಕಿತ್ಸೆಗಳನ್ನು ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಹೋರಾಟಗಾರ, ಬಹುಬೇಗ ಗುಣಮುಖರಾಗಿ ಮನೆಗೆ ತೆರಳುತ್ತಾರೆ ಎಂದಿದ್ದಾರೆ.

    ಮನೋಹರ್ ಪರಿಕ್ಕರ್ ಅವರ ಆರೋಗ್ಯದಲ್ಲಿ ಚೇತರಿಕೆ ಉಂಟಾದ ಪರಿಣಾಮ ಕೆಲ ದಿನಗಳ ಹಿಂದೆ ಬಜೆಟ್ ಅಧಿವೇಶದಲ್ಲಿ ಭಾಗವಹಿಸಿ ಬಜೆಟ್ ಮಂಡನೆ ಮಾಡಿದ್ದರು. ಅಲ್ಲದೇ ಗೋವಾದ ತಮ್ಮ ಖಾಸಗಿ ನಿವಾಸಿದಲ್ಲೇ ಪರಿಕ್ಕರ್ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದರು. ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಕಾರ್ಪಿಯೋ, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ದುರ್ಮರಣ

    ಸ್ಕಾರ್ಪಿಯೋ, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ದುರ್ಮರಣ

    ಕಾರವಾರ: ಸ್ಕಾರ್ಪಿಯೋ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಸಿಂಗನಳ್ಳಿ ಬಳಿ ನಡೆದಿದೆ.

    ದಾಂಡೇಲಿಯ ಜಗಲಪೇಟೆ ನಿವಾಸಿ 24 ವರ್ಷದ ಮುನಾಫ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದು, ಪತ್ನಿ 19 ವರ್ಷದ ರಮೀಜಾ ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಲಾಗಿದೆ.

    ಮಳಗಿಯಿಂದ ಹೊರಟಿದ್ದ ಗೋವಾ ನೋಂದಣಿ ಹೊಂದಿದ್ದ ಬೈಕ್ ಹಾಗೂ ಶಿರಸಿ ಕಡೆ ಹೊರಟಿದ್ದ ತಮಿಳುನಾಡು ನೋಂದಣಿಯ ಸ್ಕಾರ್ಪಿಯೋ ಕಾರು ಅತೀ ವೇಗದಲ್ಲಿ ಮುಖಾಮುಖಿಯಾದುದ್ದೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಾಗೂ ಸ್ಕಾರ್ಪಿಯೋ ನಜ್ಜುಗುಜ್ಜಾಗಿದೆ.

    ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್

    ಮೂಗಿಗೆ ಪೈಪ್ ಹಾಕಿಕೊಂಡು ಬಜೆಟ್ ಮಂಡಿಸಿದ ಗೋವಾ ಸಿಎಂ ಪರಿಕ್ಕರ್

    ಪಣಜಿ: ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮೂಗಿಗೆ ಹಾಕಿಕೊಂಡೇ ಬುಧವಾರ ರಾಜ್ಯ ಬಜೆಟ್ ಮಂಡಿಸಿದ್ದಾರೆ.

    ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಮನೋಹರ್ ಪರಿಕ್ಕರ್ ಅವರು ಇಂದು ಗೋವಾ ವಿಧಾನಸಭೆಗೆ ಮೂಗಿಗೆ ಪೈಪ್, ತಲೆಗೆ ಟೋಪಿ ಹಾಕಿಕೊಂಡು ಆಗಮಿಸಿದ್ದರು. ಬಳಿಕ ಮೆಲು ಧ್ವನಿಯಲ್ಲಿಯೇ ಬಜೆಟ್ ಮಂಡಿಸಿದರು. ಹೀಗಾಗಿ ವಿಧಾನಸಭೆಯ ಸದಸ್ಯರು ಶಾಂತವಾಗಿ ಬಜೆಟ್ ಭಾಷಣವನ್ನು ಆಲಿಸಿದರು.

    ಪರಿಕ್ಕರ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಹಲವು ಬಾರಿ ಸಿಬ್ಬಂದಿಗೆ ಕೇಳಿ ನೀರು ಪಡೆದು ಬಜೆಟ್ ಮಂಡನೆಯನ್ನು ಪೂರ್ಣಗೊಳಿಸಿದರು. ಅನಾರೋಗ್ಯ ಪರಿಸ್ಥಿತಿಯಲ್ಲೂ ಬಜೆಟ್ ಮಂಡನೆ ಮೂಲಕ ಕರ್ತವ್ಯ ನಿರ್ವಹಿಸಿದ ಮನೋಹರ್ ಪರಿಕ್ಕರ್ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸಿದರು.

    ಕಾಂಗ್ರೆಸ್ ಶಾಸಕನಿಗೆ ಟಾಂಗ್:
    ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡನ್ಕರ್, ಮೊದಲು ಹುಷಾರಾಗಿ ಬನ್ನಿ, ಆಮೇಲೆ ಜೋಷ್ ಕುರಿತಾಗಿ ಮಾತನಾಡಿ ಎಂದು ಕಳೆದ ಸೋಮವಾರ ವ್ಯಂಗ್ಯವಾಡಿದ್ದರು. ಬಜೆಟ್ ಮಂಡನೆಗೂ ಮುನ್ನ ಮಹೋಹರ್ ಪರಿಕ್ಕರ್ ಅವರು, ನಾನು ಅತ್ಯಂತ ಜೋಷ್‍ನಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಗಿರೀಶ್ ಚೋಡನ್ಕರ್ ಅವರಿಗೆ ತಿರುಗೇಟು ನೀಡಿದರು.

    ನನ್ನ ಕೊನೆ ಉಸಿರು ಇರುವವರೆಗೂ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಫೇಲ್ ವಿಚಾರದಲ್ಲಿ ಟೀಕಿಸಿದ ಮರುದಿನವೇ ಪರಿಕ್ಕರ್ ಭೇಟಿಯಾದ ರಾಹುಲ್!

    ರಫೇಲ್ ವಿಚಾರದಲ್ಲಿ ಟೀಕಿಸಿದ ಮರುದಿನವೇ ಪರಿಕ್ಕರ್ ಭೇಟಿಯಾದ ರಾಹುಲ್!

    ಪಣಜಿ: ಸೋಮವಾರ ರಫೇಲ್ ಒಪ್ಪಂದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

    ಆನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಪರಿಕ್ಕರ್ ಅವರನ್ನು ರಾಹುಲ್ ಗಾಂಧಿ ಮಂಗಳವಾರ ಬೆಳಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ರಾಹುಲ್ ಗಾಂಧಿ, ಇದು ಖಾಸಗಿ ಭೇಟಿಯಾಗಿದ್ದು ಪರಿಕ್ಕರ್ ಬೇಗನೇ ಗುಣಮುಖರಾಗಲಿ ಎಂದು ಹಾರೈಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

    ಸೋಮವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಫೇಲ್ ಕುರಿತ ಆಡಿಯೋ ಬಿಡುಗಡೆಯಾಗಿ 30 ದಿನ ಆಗಿದೆ. ಯಾವುದೇ ಎಫ್‍ಐಆರ್ ದಾಖಲಾಗಿಲ್ಲ, ತನಿಖೆಗೆ ಆದೇಶವಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆಡಿಯೋದಲ್ಲಿರುವ ಗೋವಾ ಮುಖ್ಯಮಂತ್ರಿ ಧ್ವನಿ ಸಾಚಾ ಆಗಿದೆ. ಪ್ರಧಾನಿಗಿಂತಲೂ ಪರಿಕ್ಕರ್ ಅವರಿಗೆ ಹೆಚ್ಚಿನ ಅಧಿಕಾರವಿದೆ ಎಂದು ಹೇಳಿದ್ದರು.

    ಖಾಸಗಿ ಭೇಟಿಗಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಗೋವಾಗೆ ಬಂದಿದ್ದರು. ಈ ವಿಚಾರ ತಿಳಿದು ಗೋವಾ ಬಿಜೆಪಿ ಟ್ವಿಟ್ಟರಿನಲ್ಲಿ, ರಾಹುಲ್ ಅವರೇ, ಅಟಲ್ ಸೇತುವೆಯನ್ನು ನೋಡಲು ಒಮ್ಮೆ ಬನ್ನಿ. ದೇಶದಲ್ಲಿ ಆಡಳಿತ ನಡೆಸುವ ಬಿಜೆಪಿ ಹೇಗೆ ಭಾರತವನ್ನು ಬದಲಾಯಿಸುತ್ತದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ ಎಂದು ಬರೆದು ಆಹ್ವಾನಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv