Tag: goa

  • ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    – ಬಿಜೆಪಿ ವಿರುದ್ಧ ಸಂಸತ್ತಿನ ಮುಂದೆ ಕೈ ಸಂಸದರ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮವನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ಸಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣವೆಂದು ಆರೋಪಿಸಿ ಸಂಸತ್ತಿನ ಮುಂದೆ ಕೈ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಕೈ ಸಂಸದರು ಭಾಗಿಯಾಗಿದ್ದರು. ಸಂಸತ್ತಿನ ಸಂಕೀರ್ಣದ ಮುಂದಿರುವ ಗಾಂಧೀಜಿ ಪುತ್ಥಳಿಯ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಫಲಕಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಈ ತಂತ್ರಗಾರಿಕೆ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ, ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಕೆಡವುದು ಬಿಜೆಪಿಯ ಪ್ಲಾನ್. ಅಲ್ಲದೆ ಸರ್ಕಾರದ ಸಂಖ್ಯಾಬಲ ಕಡಿಮೆಯಾಗಿದೆ, ಹೀಗಾಗಿ ಸಿಎಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು.

    ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಕೈತಪ್ಪಿ ಹೋಗಿದ್ದಾರೆ. ಒಟ್ಟು 15 ಮಂದಿ ಶಾಸಕರಲ್ಲಿ 10 ಮಂದಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿ ತಲುಪಲು ಕೇಸರಿ ಪಕ್ಷವೇ ಕಾರಣ. ಅವರಿಂದಲೇ ನಮ್ಮ ಪಕ್ಷಕ್ಕೆ ಈ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

  • ಗೋವಾ ಸಿಎಂ ಕೆಲಸ ನೋಡಿ ‘ಕೈ’ ಬಿಟ್ಟು ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ನಾಯಕ

    ಗೋವಾ ಸಿಎಂ ಕೆಲಸ ನೋಡಿ ‘ಕೈ’ ಬಿಟ್ಟು ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್ ನಾಯಕ

    ಪಣಜಿ: ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಇದೇ ಬೆನ್ನಲ್ಲೇ ನೆರೆಯ ಗೋವಾದಲ್ಲೂ ರಾಜಕೀಯದಲ್ಲಿ ಏರುಪೇರಾಗಿದ್ದು, ಕಾಂಗ್ರೆಸ್ ಶಾಸಕರು ಕಮಲದ ಕೈ ಹಿಡಿದಿದ್ದಾರೆ.

    ಒಂದೆಡೆ ರಾಜ್ಯದ ಅತೃಪ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ಮುಂಬೈ ಖಾಸಗಿ ಹೋಟೆಲ್ ಸೇರಿದ್ದಾರೆ. ಇನ್ನೊಂದೆಡೆ ಒಬ್ಬರ ಮೇಲೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೈತ್ರಿಯಿಂದ ದೂರ ಸರಿಯುತ್ತಿದ್ದಾರೆ. ಅವರನ್ನು ಮನವೊಲಿಸಿ ತರಲು ಕಾಂಗ್ರೆಸ್ ಹಿರಿಯ ನಾಯಕರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಪಕ್ಕದ ರಾಜ್ಯ ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಗೋವಾದಲ್ಲಿ ಬಿಜೆಪಿ ಆಡಳಿತವಿದ್ದು, ಸಿಎಂ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಬಿಜೆಪಿಯತ್ತ ಒಲವು ತೋರುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

    ಗೋವಾದ 15 ಕಾಂಗ್ರೆಸ್ ಶಾಸಕರ ಪೈಕಿ 10 ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 40 ಸದಸ್ಯಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 15 ಶಾಸಕರನ್ನು ಹೊಂದಿತ್ತು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಗೋವಾ ವಿಧಾನಸಭೆ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಬಾಬು ಕವಳೇಕರ್ ನೇತೃತ್ವದಲ್ಲಿ 10 ಬಂಡಾಯ `ಕೈ’ ಶಾಸಕರು ಪಕ್ಷದಿಂದ ಹೊರಬಂದು ತಮ್ಮ ಬಣವನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಮನವಿ ಪತ್ರವನ್ನು ಸ್ಪೀಕರ್ ರಾಜೇಶ್ ಪಟ್ನೇಕರ್ ಅವರಿಗೆ ಸಲ್ಲಿಸಿದ್ದರು.

    ಸ್ಪೀಕರ್ ಮನವಿ ಪತ್ರ ಅಂಗೀಕರಿಸಿದ್ದು, ವಿಲೀನ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಬಿಜೆಪಿಗೆ ಸೇರ್ಪಡೆಯನ್ನು ಸಮರ್ಥಿಸಿಕೊಂಡಿರುವ ಚಂದ್ರಕಾಂತ್ ಕವ್ಲೇಕರ್, ಸಿಎಂ ಒಳ್ಳೆಯ ಕೆಲಸ ಮಾಡುತ್ತಿರುವುದರಿಂದ ನಾವು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ನಾನು ವಿಪಕ್ಷ ನಾಯಕನಾಗಿದ್ದರೂ ಸಹ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದಿದ್ದಾರೆ.

    ಇಂದು ಗೋವಾ ಶಾಸಕರೆಲ್ಲಾ ದೆಹಲಿಗೆ ತೆರಳಲಿದ್ದು ಅಮಿತ್ ಶಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಕರ್ನಾಟಕದ ಬಳಿಕ ಗೋವಾದಲ್ಲಿ 10 ಕೈ ಶಾಸಕರು ಬಿಜೆಪಿ ಸೇರ್ಪಡೆ

    ಕರ್ನಾಟಕದ ಬಳಿಕ ಗೋವಾದಲ್ಲಿ 10 ಕೈ ಶಾಸಕರು ಬಿಜೆಪಿ ಸೇರ್ಪಡೆ

    ಪಣಜಿ: ಕರ್ನಾಟಕದ ಬಳಿಕ ಈಗ ಗೋವಾದಲ್ಲೂ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

    ಕಾಂಗ್ರೆಸ್ಸಿನ 15 ಶಾಸಕರ ಪೈಕಿ 10 ಜನ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಬಾಬು ಕವಲೇಕರ್ ನೇತೃತ್ವದಲ್ಲಿ 10 ಶಾಸಕರು ಪ್ರತ್ಯೇಕವಾಗಿ ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

    ಶಾಸಕರೆಲ್ಲ ಸ್ಪೀಕರ್ ಅವರನ್ನು ಭೇಟಿ ಮಾಡಿದ್ದು ಇಂದು ರಾತ್ರಿಯೇ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಟ್ಟು 40 ಶಾಸಕರು ಇರವ ವಿಧಾನಸಭೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 15, ಜೆಎಫ್‍ಎಫ್ 3, ಎಂಜಿಪಿ 1, ಎನ್‍ಸಿಪಿ 2, ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ.

  • ಗೋವಾದಲ್ಲಿ ಜಂಪಿಂಗ್ ಚಿಕನ್‍ಗೆ ಭಾರೀ ಬೇಡಿಕೆ- ಕಾರವಾರದಿಂದ ಅಪರೂಪದ ಕಪ್ಪೆಗಳ ಅಕ್ರಮ ಸಾಗಾಟ

    ಗೋವಾದಲ್ಲಿ ಜಂಪಿಂಗ್ ಚಿಕನ್‍ಗೆ ಭಾರೀ ಬೇಡಿಕೆ- ಕಾರವಾರದಿಂದ ಅಪರೂಪದ ಕಪ್ಪೆಗಳ ಅಕ್ರಮ ಸಾಗಾಟ

    ಕಾರವಾರ: ಮಳೆಗಾಲ ಬಂತೆಂದರೇ ಸಾಕು ಕಪ್ಪೆಗಳು ಒಟಗುಟ್ಟುವುದು ಮಾಮೂಲು. ಆದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಪ್ಪೆಗಳು ಒಟಗುಟ್ಟುವುಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕರಾವಳಿ ಭಾಗದಲ್ಲಿ ಆಹಾರಕ್ಕಾಗಿ ಮೀನುಗಳಿಗೆ ಹೇಗೆ ಬೇಡಿಕೆಯಿದೆಯೋ ಹಾಗೆಯೇ ಕಪ್ಪೆಗಳಿಗೂ ಬೇಡಿಕೆ ಹೆಚ್ಚಾಗತೊಡಗಿದೆ. ಜೀವಂತ ಕಪ್ಪೆಗಳ ಬೇಡಿಕೆ ಹೆಚ್ಚಾಗುತ್ತರಿವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಂಡಿರುವ ಇಂಡಿಯನ್ ಬುಲ್ ಫ್ರಾಗ್ ಕಪ್ಪೆಗಳ ಮಾಂಸಕ್ಕೆ ನೆರೆಯ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ಜಂಪಿಂಗ್ ಚಿಕನ್ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪೆಗಳ ಮಾಂಸಕ್ಕೆ ಗೋವಾ ಜನತೆ ಅಷ್ಟೇ ಅಲ್ಲದೆ ವಿದೇಶಿಯರೂ ಕೂಡ ಮಾರುಹೋಗಿದ್ದಾರೆ.

    ಕರ್ನಾಟಕ, ಗೋವಾದಲ್ಲಿ ಈ ಕಪ್ಪೆಗಳ ಬೇಟೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ಈ ಕಪ್ಪೆಗಳ ಅಕ್ರಮ ಸಾಗಾಟದ ಮೂಲಕ ರೆಸ್ಟೋರೆಂಟ್ ತಲುಪುತ್ತಿವೆ. ಬಳಿಕ ಜಂಪಿಂಗ್ ಚಿಕನ್ ಎಂಬ ಹೆಸರಿನ ಖಾದ್ಯಗಳಾಗಿ ಮಾರಾಟ ಮಾರಾಟವಾಗುತ್ತಿವೆ.

    ಗೋವಾದಲ್ಲಿ ಅಳವಿನಂಚಿನಲ್ಲಿರುವ ಇಂಡಿಯನ್ ಬುಲ್ ಫ್ರಾಗ್ ಗಳನ್ನು ಹಿಡಿಯದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲಾಗಿದೆ. ಇದರಿಂದಾಗಿ ರೆಸ್ಟೋರೆಂಟ್ ಮಾಲೀಕರು ತಮ್ಮ ಗ್ರಾಹಕರನ್ನು ತೃಪ್ತಿ ಪಡಿಸಲು ಕರ್ನಾಟಕದ ಕಾರವಾರದ ಕಡೆ ಮುಖ ಮಾಡಿದ್ದಾರೆ. ಗಾತ್ರಕ್ಕೆ ಅನುಗುಣವಾಗಿ ಒಂದು ಕಪ್ಪೆಯ ಬೆಲೆ 600 ರಿಂದ 1000 ರೂ. ಮಾರಾಟವಾಗುತ್ತದೆ. ಇದನ್ನೂ ಓದಿ: ವಿದೇಶಿಗರ ಹೊಟ್ಟೆ ಸೇರಿದ ಕಾರವಾರದ ಕಪ್ಪೆಗಳು – ಅಪಾಯದ ಅಂಚಿನಲ್ಲಿ ಕಪ್ಪೆ ಜೀವ ಸಂಕುಲ

    ಹೇಗೆ ಹಿಡಿಯುತ್ತಾರೆ:
    ಮಳೆಗಾಲ ಪ್ರಾರಂಭದಲ್ಲಿ ಇಂಡಿಯನ್ ಬುಲ್ ಫ್ರಾಗ್‍ಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಹೊರಬರುವ ಇವು ಕರಾವಳಿ ಭಾಗದ ಎಲ್ಲೆಡೆ ಕಾಣಿಸಿಕೊಳ್ಳುತ್ತವೆ. ಗಾತ್ರದಲ್ಲಿ ಎಲ್ಲಾ ಕಪ್ಪೆಗಳಿಗಿಂತ ಅತೀ ದೊಡ್ಡದಿದ್ದು ಇವುಗಳನ್ನು ಗುರುತಿಸುವುದು ಸುಲಭ. ಹೀಗಾಗಿ ಭೇಟೆಗಾರರು ಇವುಗಳನ್ನು ಜೀವಂತವಾಗಿ ಹಿಡಿಯುತ್ತಾರೆ.

    ಜೀವಂತವಾಗಿ ಹಿಡಿದು ಪ್ರೈ ಮಾಡ್ತಾರೆ!
    ಈ ಕಪ್ಪೆಗಳನ್ನು ಖಾದ್ಯ ತಯಾರಿಸುವವರೆಗೂ ಕೊಂದು ಮಾಂಸ ಬೇರ್ಪಡಿಸುವಂತಿಲ್ಲ. ಹೀಗಾಗಿ ಬೇಟೆಗಾರರು ಇವುಗಳನ್ನು ಜೀವಂತ ಹಿಡಿದು ಸಾಗಿಸುತ್ತಾರೆ. ರೆಸ್ಟೋರೆಂಟ್‍ಗಳಲ್ಲಿ ಇವುಗಳ ದೇಹಕ್ಕಿಂತ ತೊಡೆ ಭಾಗಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಕಪ್ಪೆಗಳ ತೊಡೆ ಭಾಗವನ್ನು ಕತ್ತರಿಸಿ ಉಳಿದ ಭಾಗವನ್ನು ಎಸೆಯುತ್ತಾರೆ. ತೊಡೆ ಭಾಗದಲ್ಲಿ ಹೆಚ್ಚಿನ ಮಾಂಸ ಇರುವುದರಿಂದ ಸೂಫ್, ಫ್ರೈ ಮುಂತಾದ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

    ಯಾರ ಬೇಡಿಕೆ!?
    ಈ ಕಪ್ಪೆಗಳ ಖಾದ್ಯಕ್ಕೆ ವಿದೇಶಿಯರೇ ಹೆಚ್ಚು ಬೇಡಿಕೆ ಹೊಂದಿದ್ದಾರೆ. ಚೀನಾ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಟರ್ಕಿ, ಟಿಬೆಟ್ ದೇಶದ ಪ್ರಜೆಗಳು ಇಂಡಿಯನ್ ಬುಲ್ ಫ್ರಾಗ್‍ಗಳ ಖಾದ್ಯಕ್ಕೆ ಹೆಚ್ಚು ಹಣ ಕೊಟ್ಟು ಸವಿಯುತ್ತಾರೆ. ಭಾರತದ ಮುಂಬೈ, ಬೆಂಗಾಲ್ ಪ್ರದೇಶದ ಪ್ರವಾಸಿಗರು ಸಹ ಜಂಪಿಂಗ್ ಚಿಕನ್‍ಗೆ ಮಾರುಹೋಗಿದ್ದು, ಗೋವಾಕ್ಕೆ ಪ್ರವಾಸ ಬಂದ ರೆಸ್ಟೋರೆಂಟ್‍ಗಳಲ್ಲಿ ಹೆಚ್ಚಿನ ಬೇಡಿಕೆ ಇಡುತ್ತಾರೆ. ಹೀಗಾಗಿ ಈ ಬೇಡಿಕೆಯೇ ಕಪ್ಪೆಗಳ ಭೇಟೆಗೆ ಕಾರಣವಾಗುತ್ತಿದ್ದು ಕರ್ನಾಟಕದ ಕಳ್ಳ ಹಾದಿಯಿಂದ ಗೋವಾ ಹಾಗೂ ಮುಂಬೈನ ರೆಸ್ಟೋರೆಂಟ್‍ಗೆ ರವಾನೆಯಾಗುತ್ತಿವೆ.

    ಅರಣ್ಯ ಇಲಾಖೆ ಹೇಳೋದೇನು?:
    ಮೊದಲು ಈ ಕಪ್ಪೆಗಳ ಅಕ್ರಮ ಸಾಗಾಟದ ಬಗ್ಗೆ ಮಾಹಿತಿ ಇರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಕಾರವಾರದ ಗಡಿಯಲ್ಲಿ ಸಾಗಾಟ ಮಾಟುವಾಗ ಕಪ್ಪೆಗಳ ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದರು. ಬಳಿಕ ಅವುಗಳನ್ನು ಭಕ್ಷಣೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಹೊರ ಜಗತ್ತಿಗೆ ಗೊತ್ತಾಗಿತ್ತು. ಈ ಬಗ್ಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಆರಂಭದಿಂದ ಗಡಿಭಾಗದಲ್ಲಿ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು ತಪಾಸಣೆ ಮಾಡಲಾಗುತ್ತಿದೆ ಎಂದು ಕಾರವಾರದ ಎಸಿಎಫ್ ಮಂಜುನಾಥ್ ನಾವಿ ತಿಳಿಸಿದ್ದಾರೆ.

    ಕೆಎಸ್‍ಆರ್ ಟಿಸಿ ಡಿಪೋ ಮ್ಯಾನೇಜರ್ ಹಾಗೂ ಸಂಬಂಧಿಸಿದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಸಾಗಾಟ ಮಾಡುವವರು ಅಥವಾ ಸಂಶಯಾಸ್ಪದ ವ್ಯಕ್ತಿಗಳು ಬಸ್‍ನಲ್ಲಿ ಕಂಡರೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಭಟ್ಕಳದಿಂದ ಕಾರವಾರದವರೆಗೂ ಅರಣ್ಯ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಸಾಗಾಟ ಮಾಡುವಾಗ ಅಂಕೋಲದ ವ್ಯಕ್ತಿಯೊಬ್ಬರು ಸಿಕ್ಕಿದ್ದು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.

    ಮಳೆಗಾಲ ಆರಂಭವಾದರೆ ಕಪ್ಪೆಗಳ ಅಕ್ರಮ ಸಾಗಾಟ ಜಾಲಗಳು ತಮ್ಮ ಚಟುವಟಿಕೆ ಪ್ರಾರಂಭಿಸುತ್ತವೆ. ಇದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಮಂಜುನಾಥ್ ನಾವಿ ಮಾಹಿತಿ ನೀಡಿದ್ದಾರೆ.

    ಕಪ್ಪೆಗಳ ಅಕ್ರಮ ಸಾಗಾಟ ಜಾಲ ಕಾರವಾರ, ಅಂಕೋಲ ಹಾಗೂ ಭಟ್ಕಳದಲ್ಲಿ ಹೆಚ್ಚಾಗಿವೆ. ಪರಿಸರ ಚಕ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಈ ಕಪ್ಪೆಗಳು ಪರಿಸರ ವೈದ್ಯ ಎಂದೇ ಪ್ರಸಿದ್ಧಿ ಹೊಂದಿವೆ. ಗಾತ್ರದಲ್ಲಿ ದೊಡ್ಡದಿರುವ ವಿಶೇಷ ಕಪ್ಪೆಗಳು ಕೇವಲ ಕರಾವಳಿ ಭಾಗದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸುತ್ತವೆ. ಈಗ ಇವುಗಳ ಅಕ್ರಮ ಬೇಟೆಯಿಂದ ಸಂತತಿ ಸಹ ಕ್ಷೀಣಿಸುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • ಚಲಿಸುತ್ತಿದ್ದ ರೈಲು ನಿಲ್ಲಿಸಿ 4ರ ಬಾಲಕನ ಜೀವ ಉಳಿಸಿದ ಚಾಲಕ

    ಚಲಿಸುತ್ತಿದ್ದ ರೈಲು ನಿಲ್ಲಿಸಿ 4ರ ಬಾಲಕನ ಜೀವ ಉಳಿಸಿದ ಚಾಲಕ

    ಪಣಜಿ: ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿ ಚಾಲಕರೊಬ್ಬರು ಹಳಿ ಮೇಲೆ ಬಂದ 4 ವರ್ಷದ ಬಾಲಕನ ಜೀವವನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಗೋವಾದ ಬಲ್ಲಿ ಮತ್ತು ಮಾರ್ಗೋವಾ ರೈಲ್ವೇ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ಸೋಮವಾರ ನಾಲ್ಕು ವರ್ಷದ ಬಾಲಕನೊಬ್ಬನು ರೈಲಿನ ಹಳಿ ಮೇಲೆ ಓಡಾಡುತ್ತಿದ್ದನು. ರೈಲು ಬರುತ್ತಿದ್ದರೂ ಏನು ಅರಿಯದೆ ಬಾಲಕ ಹಳಿಗಳ ಮೇಲೆ ಬಂದಿದ್ದಾನೆ. ಈ ವೇಳೆ ಪರ್ನೆಮ್-ಕಾರವಾರ ರೈಲಿನ ಚಾಲಕ ಸುರೇಶ್ ಬಾಲಕನ್ನು ದೂರದಿಂದಲೇ ಗಮನಿಸಿ ತಕ್ಷಣವೇ ರೈಲನ್ನು ನಿಲ್ಲಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಒಂದು ಪುಟ್ಟ ಜೀವ ಉಳಿದುಕೊಂಡಿದೆ.

    ರೈಲು ನಿಲ್ಲಿಸಿದ ಬಳಿಕ ಸ್ವಲ್ಪವೇ ಅಂತರದಲ್ಲಿದ್ದ ಮಗುವನ್ನು ಚಾಲಕ ಓಡಿ ಹೋಗಿ ರಕ್ಷಿಸಿದ್ದಾರೆ. ಬಳಿಕ ಚಾಲಕ ಬಲ್ಲಿ ರೈಲ್ವೇ ನಿಲ್ದಾಣದ ಸ್ಟೇಷನ್ ಮಾಸ್ಟರ್ ಬಳಿ ಮಗುವನ್ನು ಕೊಟ್ಟು, ಪೋಷಕರಿಗೆ ಒಪ್ಪಿಸುವಂತೆ ಹೇಳಿ, ನಂತರ ತಮ್ಮ ಕೆಲಸಕ್ಕೆ ಹಿಂತಿರುಗಿದ್ದಾರೆ.

    ಪೋಷಕರಿಂದ ತಪ್ಪಿಸಿಕೊಂಡಿದ್ದ ಈ ಮಗುವನ್ನು ರೈಲ್ವೇ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸರು ವಿಚಾರಣೆ ನಡೆಸಿ ಮಗುವಿನ ಪೋಷಕರನ್ನು ಪತ್ತೆ ಹಚ್ಚಿದ್ದು, ಬಿಹಾರ್ ಮೂಲದವರಾದ ಮಗುವಿನ ಹೆತ್ತವರು ಬಲ್ಲಿಯಲ್ಲಿ ವಾಸವಾಗಿದ್ದಾರೆ ಎಂದು ವಿಚಾರಣೆ ಬಳಿಕ ತಿಳಿದುಬಂದಿದೆ. ಸದ್ಯ ಬಾಲಕನನ್ನು ಹೆತ್ತವರ ಮಡಿಲಿಗೆ ಪೊಲೀಸರು ಸುರಕ್ಷಿತವಾಗಿ ಸೇರಿಸಿದ್ದಾರೆ. ಹಾಗೆಯ ರೈಲು ಚಾಲಕನ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ

    ಪಣಜಿ: ಪ್ರತಿನಿತ್ಯ ಮನೆಗೆ ಕುಡಿದು ಬಂದು ದೌರ್ಜನ್ಯ ಎಸಗುತ್ತಿದ್ದ ಪತಿಯನ್ನು ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ ಮಾಡಿದ ಘಟನೆ ಗೋವಾದಲ್ಲಿ ನಡೆದಿದೆ.

    ಐಎನ್‍ಎಸ್ ಹನ್ಸಾ ದಲ್ಲಿ ಕೆಲಸ ಮಾಡುತ್ತಿದ್ದ ಕೌಶಲೇಂದ್ರ ಸಿಂಗ್ ಮೃತ ದುದೈರ್ವಿ. ಕೊಲೆಗೈದ ಪತ್ನಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಕೌಶಲೇಂದ್ರ ಅವರು ನಿತ್ಯ ಮದ್ಯದ ಅಮಲಿನಲ್ಲಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಪತ್ನಿಗೆ ಹೊಡೆದು ಬಡೆದು ಕಿರುಕುಳ ನೀಡುತ್ತಿದ್ದರು. ಹೀಗಾಗಿ ಕಿರುಕುಳದಿಂದ ಬೇಸತ್ತ ಮಹಿಳೆ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಟ್ಟಿನಲ್ಲಿದ್ದ ಪತ್ನಿ ಶನಿವಾರ ಕೌಶಲೇಂದ್ರ ಮಲಗಿದ್ದಾಗ ಅಡುಗೆ ಮನೆಯಲ್ಲಿದ್ದ ಸುತ್ತಿಗೆ ತಂದು ಹಲ್ಲೆ ಮಾಡಿದ್ದಾಳೆ. ಪರಿಣಾಮ ಮದ್ಯದ ಅಮಲಿನಲ್ಲಿದ್ದ ಕೌಶಲೇಂದ್ರ ಹಲ್ಲೆ ನಡೆಸಿದರೂ ಏನೂ ಪ್ರತಿಕ್ರಿಯೆ ನೀಡಲಿಲ್ಲ. ಆಗ ಭಯಗೊಂಡ ಪತ್ನಿ ನೆರೆಹೊರೆಯವರ ಸಹಾಯದಿಂದ ನೌಕಾಪಡೆಯ ಆಸ್ಪತ್ರೆಗೆ ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಅದರಂತೆ ಪತಿ ಹಣೆಯ ಭಾಗಕ್ಕೆ 12 ರಿಂದ 14 ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಹೆಚ್ಚಾಗಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

  • ರಾತ್ರೋರಾತ್ರಿ ರೆಸಾರ್ಟ್​ಗೆ ಹಾರಿದ ಜಾರಕಿಹೊಳಿ

    ರಾತ್ರೋರಾತ್ರಿ ರೆಸಾರ್ಟ್​ಗೆ ಹಾರಿದ ಜಾರಕಿಹೊಳಿ

    ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದ ಆಪರೇಷನ್ ಕಮಲಕ್ಕೆ ಕೈ ಹಾಕಿದ ಕೈ ಪಕ್ಷದ ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಲೋಕಸಮರ ಫಲಿತಾಂಶದ ಬೆನ್ನಲ್ಲೇ ತಡರಾತ್ರಿ ಕಡಲ ನಗರಿ ಗೋವಾಗೆ ತೆರಳಿದ್ದಾರೆ.

    ಶಾಸಕ ರಮೇಶ್ ಜಾರಕಿಹೊಳಿ ಶನಿವಾರ ಮಧ್ಯಾಹ್ನ ಮಗ ಅಮರನಾಥ ಜೊತೆ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಗೋವಾಗೆ ತೆರಳಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಸುಮಾರು 9 ಶಾಸಕರು ಗೋವಾ ಖಾಸಗಿ ಹೊಟೇಲ್‍ಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೇ 29ರ ವರಗೆ ರೆಸಾರ್ಟಿನಲ್ಲಿದ್ದು ದೆಹಲಿಯಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ 3 ರಂದು ಸರ್ಕಾರ ಬೀಳಿಸಲು ಮೂಹೂರ್ತ ಪಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ.

    ಸದ್ಯದ ಮಾಹಿತಿ ಪ್ರಕಾರ 15 ದಿನಗಳವರೆಗೆ ರೆಸಾರ್ಟ್ ರಾಜಕೀಯ ನಡೆಯಲಿದೆ ಎಂದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ರಮೇಶ್ ಆ್ಯಂಡ್ ಟೀಂ ಸಭೆ ನಡೆಸಿ ಗೋವಾಗೆ ಹೋಗುವ ತೀರ್ಮಾನಕ್ಕೆ ಬಂದಿದ್ದರು. ಗೋವಾದ ಪೋರ್ಟ್ ಅಗೋಡಾದಲ್ಲಿರುವ ಐಷಾರಾಮಿ ಪೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದೇ ಹೋಟೆಲ್‍ನಲ್ಲಿ ಸುಮಾರು 30 ರೂಮ್ ಬುಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಸೆಲ್ಫಿ ಕ್ಲಿಕ್ಕಿಸುವ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ವೈದ್ಯೆ

    ಸೆಲ್ಫಿ ಕ್ಲಿಕ್ಕಿಸುವ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ವೈದ್ಯೆ

    ಪಣಜಿ: ಬೀಚ್‍ಗೆ ತೆರಳಿದ್ದ ವೈದ್ಯೆಯೊಬ್ಬರು ಸಮುದ್ರದ ಅಲೆಗಳ ನಡುವೆ ಸಿಕ್ಕಿ ಕೊಚ್ಚಿ ಹೋಗಿರುವ ಘಟನೆ ಗೋವಾದಲ್ಲಿ ನಡೆದಿದೆ.

    25 ವರ್ಷದ ರಮ್ಯಾಕೃಷ್ಣ ಸಾವನ್ನಪ್ಪಿದ ಯುವತಿಯಾಗಿದ್ದು, ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮೂಲದವರಾಗಿದ್ದಾರೆ.

    ರಮ್ಯಾಕೃಷ್ಣ ತಮ್ಮ ಮೂವರು ಗೆಳತಿಯರೊಂದಿಗೆ ಗೋವಾ ಬೀಚ್‍ಗೆ ತೆರಳಿದ್ದು, ಸಮುದ್ರದ ಬಳಿ ಸೆಲ್ಫಿ ಕಿಕ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಂತದಲ್ಲಿ ಭಾರೀ ಗಾತ್ರದ ಅಲೆ ದಡಕ್ಕೆ ಅಪ್ಪಳಿಸಿದ್ದು, ಕೂಡಲೇ ಮೂವರು ಗೆಳತಿಯರು ಅಲೆಯೊಂದಿಗೆ ಸಮುದ್ರಕ್ಕೆ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವತಿಯರು ದಡಕ್ಕೆ ಮರಳಿ ಬರಲು ಯಶಸ್ವಿಯಾದರೆ ರಮ್ಯಾಕೃಷ್ಣ ಮಾತ್ರ ಕಾಣೆಯಾಗಿದ್ದರು.

    ಕೂಡಲೇ ಯುವತಿಯರು ಗೆಳತಿಯನ್ನು ರಕ್ಷಣೆ ಮಾಡಲು ಸ್ಥಳೀಯರೊಂದಿಗೆ ಹುಡುಕಾಟದ ಪ್ರಯತ್ನ ನಡೆಸಿದ್ದರು ರಮ್ಯಾಕೃಷ್ಣ ಕಾಣಿಸಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಅವರ ಮೃತದೇಹ ದಡಕ್ಕೆ ತೇಲಿ ಬಂದಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ ನಗರದ ನಿವಾಸಿಯಾಗಿದ್ದ ರಮ್ಯಾಕೃಷ್ಣ ಅವರು ಎಂಬಿಬಿಎಸ್ ಪೂರ್ಣಗೊಳಿಸಿ ಕೆಲ ಸಮಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 4 ವರ್ಷಗಳ ಹಿಂದೆ ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಪಡೆದ ಅವರು ಗೋವಾದಲ್ಲೇ ನೆಲೆಸಿದ್ದರು. ಮಂಗಳವಾರ ಸ್ನೇಹಿತರ ಜೊತೆ ಬೀಚ್‍ಗೆ ತೆರಳಿದ ವೇಳೆ ಈ ಅವಘಡ ಸಂಭವಿಸಿದೆ.

  • ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ ಉಪ ಚುನಾವಣೆ: ಮನೋಹರ್ ಪರಿಕ್ಕರ್ ಪುತ್ರನಿಗಿಲ್ಲ ಬಿಜೆಪಿ ಟಿಕೆಟ್

    ಪಣಜಿ: ಗೋವಾ ರಾಜ್ಯದ ಪಣಜಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಭಾನುವಾರ ಸಂಜೆ ಬಿಜೆಪಿ ಘೋಷಣೆ ಮಾಡಿದೆ. ಆದರೆ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ತಪ್ಪಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರಿಗೆ ಪಣಜಿ ಉಪ ಚುನಾವಣೆಯ ಟಿಕೆಟ್ ನೀಡಲಾಗಿದೆ. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕರ್ನಾಟಕದ ಚಿಂಚೋಳಿ ಕ್ಷೇತ್ರದ ಅಭ್ಯರ್ಥಿ ಅವಿನಾಶ್ ಜಾಧವ್ ಹಾಗೂ ಕುಂದಗೋಳದ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.

    ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಪಣಜಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 19ರಂದು ನಡೆಯಲಿದೆ. ಹೀಗಾಗಿ ಬಿಜೆಪಿಯು ಉತ್ಪಾಲ್ ಪರಿಕ್ಕರ್ ಅವರಿಗೆ ಟಿಕೆಟ್ ನೀಡುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಈ ಹಿಂದೆ ಎರಡು ಬಾರಿ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಗೋವಾ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದರು. ಹೀಗಾಗಿ ಸಿದ್ಧಾರ್ಥ್ ಕುಂಕಲೇನಕರ್ ಅವರು 2017 ಮೇ 10ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಪಣಜಿ ಉಪ ಚುನಾವಣೆಯಲ್ಲಿ ಜಯಗಳಿಸಿದ್ದ ಮನೋಹರ್ ಪರಿಕ್ಕರ್ ಅವರು ಮತ್ತೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು.

    ಸಿದ್ಧಾರ್ಥ್ ಕುಂಕಲೇನಕರ್ ಅವರು ಎರಡು ಬಾರಿ ಪಣಜಿ ಕ್ಷೇತ್ರದಿಂದ ಜಯಗಳಿದ್ದರಿಂದ ಹಾಗೂ ಮನೋಹರ್ ಪರಿಕ್ಕರ್ ಅವರ ಸ್ಪರ್ಧೆಗೆ ಸಹಕರಿಸಿದ್ದರು ಎಂಬ ಕಾರಣಕ್ಕೆ ಮತ್ತೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.

    ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕಟ್ ತಪ್ಪಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಸಹ ಸಂಘಟಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ ಕಲಬುರಗಿ ಕ್ಷೇತ್ರದಲ್ಲಿ ಯಾವ ಡಿಎನ್‍ಎ ನೋಡಿ ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿದ್ದಾರೆ ಅಂತ ವಿಪಕ್ಷ ನಾಯಕರು ವ್ಯಂಗ್ಯವಾಡುತ್ತಿದ್ದಾರೆ.

  • ಪ್ರಿಯಕರನ ಜೊತೆ ಗೋವಾಕ್ಕೆ ಬಂದು ಹೋಟೆಲ್‍ನಲ್ಲಿ ಕೊಲೆಯಾದ್ಳು!

    ಪ್ರಿಯಕರನ ಜೊತೆ ಗೋವಾಕ್ಕೆ ಬಂದು ಹೋಟೆಲ್‍ನಲ್ಲಿ ಕೊಲೆಯಾದ್ಳು!

    ಪಣಜಿ: ಹಿಮಾಚಲ ಪ್ರದೇಶದ 25 ವರ್ಷದ ಯುವತಿಯೊಬ್ಬಳು ಪ್ರವಾಸಕ್ಕೆಂದು ಬಂದು ಹೋಟೆಲ್ ರೂಮಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.

    ಮೃತಳನ್ನು ಮೂಲತಃ ಹಿಮಾಚಲ ಪ್ರದೇಶದ ಆಲ್ಕಾ ಸೈನಿ ಎಂದು ಗುರುತಿಸಲಾಗಿದೆ. ಈಕೆ ಏಪ್ರಿಲ್ 20 ರಂದು ತನ್ನ ಪ್ರಿಯಕರನ ಜೊತೆ ಅರ್ಪೊರಾ ಬೀಚ್ ಗ್ರಾಮದಲ್ಲಿ ಹೋಟೆಲ್‍ಗೆ ಬಂದಿದ್ದಳು ಎಂದು ತಿಳಿದುಬಂದಿದೆ. ಆದರೆ ಆತನ ಪ್ರಿಯಕರ ನಾಪತ್ತೆಯಾಗಿದ್ದು, ಆತನನ್ನು ಇನ್ನೂ ಪತ್ತೆಹಚ್ಚಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ಹೋಟೆಲ್ ನಿರ್ವಹಣೆ ಸಿಬ್ಬಂದಿ ರೂಮ್ ಸ್ವಚ್ಛಗೊಳಿಸಲು ಹೋಗಿದ್ದಾನೆ. ಆಗ ಸೈನಿಯ ಮೃತದೇಹ ಪತ್ತೆಯಾಗಿದೆ. ತಕ್ಷಣ ಆತ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಸೈನಿಯ ಕುತ್ತಿಗೆಯ ಮೇಲೆ ಅನೇಕ ಮಾರ್ಕ್ ಕಂಡು ಬಂದಿತ್ತು. ನಂತರ ಮರಣೋತ್ತರ ಪರೀಕ್ಷೆಗಾಗಿ ಸೈನಿ ದೇಹವನ್ನು ಗೋವಾ ಮೆಡಿಕಲ್ ಕಾಲೇಜ್‍ಗೆ ರವಾನಿಸಿದ್ದೇವೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

    ಹೋಟೆಲ್ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸಿಬ್ಬಂದಿ ಹೋಗುವ ಮೊದಲು ಇಬ್ಬರು ವ್ಯಕ್ತಿಗಳು ಆ ರೂಮಿನಿಂದ ಹೊರ ಬಂದಿರುವುದು ಸೆರೆಯಾಗಿದೆ. ಹೀಗಾಗಿ ತಕ್ಷಣವೇ ವ್ಯಕ್ತಿಯನ್ನು ಪತ್ತೆ ಮಾಡಲು ಬಸ್, ರೈಲ್ವೆ ನಿಲ್ದಾಣಗಳು, ಡಬೋಲಿಮ್ ಅಂತರಾಷ್ಟ್ರೀಯ ಏರ್‌ಪೋರ್ಟ್‌ ಮತ್ತು ಗಡಿ ಚೆಕ್ ಪಾಯಿಂಟ್‍ಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಅಂಜುನಾ ಪೊಲೀಸ್ ಠಾಣೆಯಲ್ಲಿ ಕೊಲೆಯ ಪ್ರಕರಣ ದಾಖಲಾಗಿದೆ.