Tag: goa

  • ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ಪಣಜಿ: ರಸ್ತೆಯ ಬದಿಯಲ್ಲಿರುವ ಮರಗಳ ಫೋಟೋವನ್ನು ನೀವು ತೆಗೆದಿರಬಹುದು. ಆದರೆ ಗೋವಾದ ಗ್ರಾಮವೊಂದರಲ್ಲಿ ರಸ್ತೆ ಬದಿಯಲ್ಲಿರುವ ತೆಂಗಿನ ಮರಗಳ ಫೋಟೋ ಕ್ಲಿಕ್ಕಿಸಬೇಕಾದರೆ 500 ರೂ. ಶುಲ್ಕ ನೀಡಬೇಕು.

    ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇದು ಏನು ಎಂದು ಕೇಳಬಹುದು. ಆದರೆ ಇದು ನಿಜ. ಉತ್ತರ ಗೋವಾದಲ್ಲಿ ಒಂದು ಗ್ರಾಮವಿದೆ. ಇದು ಸ್ವಚ್ಛತೆ ಹಾಗೂ ರಸ್ತೆ ಬದಿಯಲ್ಲಿ ಸಾಲಗಿ ನೆಟ್ಟಿರುವ ತೆಂಗಿನ ಮರಗಳ ಸೌಂದರ್ಯಕ್ಕೆ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಬರುವ ಪ್ರವಾಸಿಗರು ಈ ತೆಂಗಿನ ಮರಗಳ 1 ಫೋಟೋ ತೆಗೆದುಕೊಂಡರೆ 100 ರಿಂದ 500 ರೂ.ವರೆಗೆ ಶುಲ್ಕ ಕಟ್ಟಬೇಕು.

    ಹೌದು. ಮಾಜಿ ರಕ್ಷಣಾ ಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಹಳ್ಳಿಯಾದ ಪರ್ರಾ ಗ್ರಾಮದಲ್ಲಿ ಫೋಟೋ ತೆಗೆದರೂ ಶುಲ್ಕ ಕಟ್ಟಬೇಕು. ಪರ್ರಾ ಗ್ರಾಮದ ರಸ್ತೆ ಅಕ್ಕಪಕ್ಕದಲ್ಲಿ ಸಾಲಾಗಿ ತೆಂಗಿನ ಮರಗಳು ಇವೆ. ಜೊತೆಗೆ ಈ ಗ್ರಾಮ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಗೋವಾದ ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಗ್ರಾಮವು ಒಂದಾಗಿದೆ.

    ಪರ್ರಾ ಗ್ರಾಮದ ಸುಂದರ ನೋಟಕ್ಕೆ ಮನಸೋಲದವರೇ ಇಲ್ಲ. ಹಲವು ಬಾಲಿವುಡ್, ಹಾಲಿವುಡ್ ಚಿತ್ರಗಳು ಕೂಡ ಪರ್ರಾ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಪರ್ರಾ ಗ್ರಾಮ ಪಂಚಾಯ್ತಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸ್ವಚ್ಛತಾ ತೆರಿಗೆಯನ್ನು ಸಂಗ್ರಹಿಸುತ್ತದೆ. ಈ ಗ್ರಾಮದಲ್ಲಿ ಪ್ರವಾಸಿಗರು 1 ಫೋಟೋ ತೆಗೆದುಕೊಂಡರೆ 500 ರೂ.ವರೆಗೂ ಗ್ರಾಮ ಪಂಚಾಯ್ತಿ ಶುಲ್ಕ ನಿಗದಿಗೊಳಿಸಿದೆ.

    ಜೊತೆಗೆ ಶುಲ್ಕ ಕಟ್ಟಿದ ಪ್ರವಾಸಿಗರಿಗೆ ರಶೀದಿಯನ್ನು ಕೊಡಲಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ಬೇರೆ ಶುಲ್ಕ, ವಾಣಿಜ್ಯ ಚಿತ್ರೀಕರಣಕ್ಕೆ ಬೇರೆ ಶುಲ್ಕವನ್ನು ಪಂಚಾಯ್ತಿ ನಿಗದಿಗೊಳಿಸಿದೆ. ಆದರೆ ಪರ್ರಾದ ಗ್ರಾಮ ಪಂಚಾಯ್ತಿಯ ಈ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸೌಂದರ್ಯ ಕಣ್ತುಂಬಿಕೊಂಡು, ಆ ಕ್ಷಣವನ್ನು ಸೆರೆಹಿಡಿದುಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಆದರೆ 1 ಫೋಟೋ ತೆಗೆದುಕೊಳ್ಳಲು ಇಷ್ಟೆಲ್ಲಾ ಶುಲ್ಕ ನಿಗದಿಗೊಳಿಸಿರುವುದು ಸರಿಯಲ್ಲ. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ ಎಂದು ವಿರೋಧಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ಪ್ರವಾಸಿಗರೊಬ್ಬರು ತಮ್ಮ ಸ್ನೇಹಿರೊಬ್ಬರಿಗೆ ಪರ್ರಾದಲ್ಲಿ ಫೋಟೋ ತೆಗೆದುಕೊಂಡಿದ್ದಕ್ಕೆ ಶುಲ್ಕ ವಿಧಿಸಿ, ರಶೀದಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಪರ್ರಾದ ಸುಂದರ ರಸ್ತೆಯಲ್ಲಿ ಒಂದೇ ಒಂದು ಫೋಟೋ ತೆಗೆದುಕೊಂಡಿದಕ್ಕೆ ಅವರಿಂದ ಅಲ್ಲಿನ ಪಂಚಾಯ್ತಿ 500 ರೂ. ಶುಲ್ಕ ಪಡೆದಿದೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಈ ಕ್ರಮದಿಂದ ಪ್ರವಾಸಿಗರು ಗೋವಾಕ್ಕೆ ಬರಲು ಹಿಂದೇಟು ಹಾಕುವಂತ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಗೋವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸ್ಯಾವಿಯೋ ಅವರು ಪ್ರತಿಕ್ರಿಯಿಸಿ, ಇದು ಪರ್ರಾ ಪಂಚಾಯ್ತಿ ಪ್ರವಾಸಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಹೀಗೆ 1 ಫೋಟೋಗೆ 500 ರೂ. ಶುಲ್ಕ ನಿಗಧಿಗೊಳಿಸಿರುವುದು ತಪ್ಪು. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ. ಈ ರೀತಿ ಶುಲ್ಕವನ್ನು ಪರ್ರಾದಲ್ಲಿ ಚಿತ್ರೀಕರಣ ಅಥವಾ ಖಾಸಗಿ ಫೋಟೋಶೂಟ್ ಮಾಡಿಸುವವರ ಬಳಿ ಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವಾಸಿಗರ ಬಳಿ ಈ ರೀತಿ ಹಣ ಪಡೆಯುವುದು ಸುಲಿಗೆ ಮಾಡಿದ ಸಮಾನವಾಗುತ್ತೆ ಎಂದು ಕಿಡಿಕಾರಿದ್ದಾರೆ.

    ಪ್ರವಾಸಿಗರ ವಿರೋಧಗಳಿಗೆ ಪರ್ರಾ ಸರ್ಪಂಚ್ ಲೋಬೋ ಅವರು ಪ್ರತಿಕ್ರಿಯಿಸಿ, ನಾವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾರೆ. ಸೀನರಿ ಸುಂದರವಾಗಿದೆ ಎಂದು ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಈ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನಾವು ಶುಲ್ಕ ನಿಗಧಿಗೊಳಿಸಿರುವುದನ್ನ ವಿರೋಧಿಸುತ್ತಾರೆ. ಆದರೆ ಪ್ರವಾಸಿಗರು ಗ್ರಾಮಕ್ಕೆ ಭೇಟಿನೀಡಿ ಮಾಡುವ ತೊಂದರೆ ಬಗ್ಗೆ ಯಾರು ಮಾತನಾಡಲ್ಲ. ಅವರ ಹಾವಳಿ ನಿಯಂತ್ರಿಸಲು ನಾವು ಶುಲ್ಕ ನಿಗದಿಗೊಳಿಸಿದ್ದೇವೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

  • ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    ಮರಾಠಿ ಭಾಷೆಗೆ ಬ್ರೇಕ್ – ಕಾರವಾರ ಗಡಿಯಲ್ಲಿ ಹೆಚ್ಚಾಯ್ತು ಕನ್ನಡ ಶಾಲೆಗಳು

    – ಗೋವಾಕ್ಕೆ ಕಾರವಾರ ಸೇರಿಸಿ ಎಂದವರು ಕನ್ನಡ ಕಲಿತರು
    – ಬಾಗಿಲು ಮುಚ್ಚುತ್ತಿವೆ ಮರಾಠಿ ಶಾಲೆಗಳು

    ಕಾರವಾರ: ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಕಾರವಾರ ಗಡಿಯಿಂದ ಸಿಹಿಸುದ್ದಿ ಸಿಕ್ಕಿದೆ. ಗಡಿಯಲ್ಲಿ ಹೆಚ್ಚಿದ್ದ ಮರಾಠಿ ಶಾಲೆಗಳಿಗೆ ಬೀಗ ಬಿದ್ದಿದ್ದು ಅಲ್ಲಿ ಕನ್ನಡ ಕಂಪು ನಿಧಾನವಾಗಿ ಅರಳುತ್ತಿದೆ. ಈ ಮೂಲಕ ಕನ್ನಡಿಗರು ಮನಸ್ಸು ಮಾಡಿದರೆ ಹೇಗೆ ಬದಲಾವಣೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

    ಗೋವಾ ಗಡಿಯಲ್ಲಿರುವ ಉತ್ತರ ಕನ್ನಡದ ಕೆಲ ಭಾಗದಲ್ಲಿ ಈ ಹಿಂದೆ ಕನ್ನಡಕ್ಕಿಂತ ಮರಾಠಿ ಭಾಷೆಯೇ ಪ್ರಮುಖವಾಗಿತ್ತು. ಅದರಲ್ಲೂ ಗೋವಾ ಗಡಿಯಲ್ಲಿ ಸುಮಾರು 20ಕ್ಕೂ ಅಧಿಕ ಶಾಲೆಗಳಲ್ಲಿ ಮಕ್ಕಳಿಗೆ ಮರಾಠಿ ಶಿಕ್ಷಣವನ್ನು ಕೊಡುತ್ತಿದ್ದರು. ಆದರೆ ಈಗ ಕಾರವಾರದಲ್ಲಿ ಮರಾಠಿ ಪ್ರಾಬಲ್ಯ ಕಡಿಮೆಯಾಗಿ ಕನ್ನಡ ಪ್ರೇಮ ಹೆಚ್ಚಾಗಿದೆ. ಬಹುತೇಕ ಮರಾಠಿ ಶಾಲೆಗಳಿಗೆ ಬೀಗ ಬಿದ್ದ ಮೇಲೆ ವಿದ್ಯಾರ್ಥಿಗಳು ಕನ್ನಡ ಶಾಲೆಯತ್ತ ಮುಖಮಾಡಿದ್ದಾರೆ. ಇದನ್ನೂ ಓದಿ:ಕಾಫಿನಾಡಿನ ದೇಗುಲದಲ್ಲಿ ಕನ್ನಡ ಡಿಂಡಿಮ

    ಮರಾಠಿ ಭಾಷೆಯನ್ನೇ ಮಾತನಾಡುವವರ ಸಂಖ್ಯೆ ಅಧಿಕವಾಗಿದ್ದರಿಂದ ಮರಾಠಿ ಶಾಲೆಗಳ ಸಂಖ್ಯೆ ಸಹ ಅಧಿಕವಾಗಿತ್ತು. ಅದರಲ್ಲೂ ಕಾರವಾರದ ಗಡಿ ಗ್ರಾಮಗಳಾದ ಮಾಜಾಳಿ, ಹಣಕೋಣ, ಅಸ್ನೋಟಿ, ಸದಾಶಿವಗಡ ಸೇರಿದಂತೆ ಹಲವು ಗ್ರಾಮದಲ್ಲಿ ಸುಮಾರು 31 ಮರಾಠಿ ಶಾಲೆಗಳನ್ನ ಸರ್ಕಾರವೇ ತೆರೆದಿತ್ತು. ಅಧಿಕ ವಿದ್ಯಾರ್ಥಿಗಳು ಮರಾಠಿ ಶಿಕ್ಷಣವನ್ನೇ ಪಡೆಯಲು ಇಚ್ಛಿಸುತ್ತಿದ್ದ ಹಿನ್ನೆಲೆಯಲ್ಲಿ ಮರಾಠಿ ಶಾಲೆಗಳನ್ನ ತೆರೆಯಲಾಗಿತ್ತು. ಆದರೆ ಕೆಲ ವರ್ಷದಿಂದ ಕನ್ನಡ ಪರ ಸಂಘಟನೆಗಳ ಶ್ರಮದಿಂದ ಗಡಿ ಭಾಗದಲ್ಲಿ ಮರಾಠಿ ಪ್ರೇಮ ಕಡಿಮೆಯಾಗಿ ಕನ್ನಡ ಮೇಲಿನ ಆಸಕ್ತಿ ಜನರಲ್ಲಿ ಹೆಚ್ಚಾಗತೊಡಗಿದೆ.

    ಮರಾಠಿ ಶಾಲೆಗಳನ್ನ ಬಿಟ್ಟು ಕನ್ನಡ ಶಾಲೆಯತ್ತ ಮುಖಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸದ್ಯ ಕಾರವಾರದಲ್ಲಿ 28 ಮರಾಠಿ ಶಾಲೆಗಳು ಬಾಗಿಲು ಮುಚ್ಚಿ ಕೇವಲ 3 ಮರಾಠಿ ಶಾಲೆಗಳು ಮಾತ್ರ ಬಾಗಿಲು ತೆರೆದಿದ್ದು, ಅದೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಗಡಿಯಲ್ಲಿ ಕನ್ನಡ ಶಾಲೆಯತ್ತ ವಿದ್ಯಾರ್ಥಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುಮಾರು 147 ಕನ್ನಡ ಶಾಲೆಗಳಲ್ಲಿ ಪ್ರಸ್ತುತ ಮಕ್ಕಳಿಗೆ ಶಿಕ್ಷಣವನ್ನ ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದು ಕಾರವಾರದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ್ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಕ್ಕಳ ಕೈಯಲ್ಲಿ ವ್ಯಂಗ್ಯ ಚಿತ್ರಕೊಟ್ಟು ಎಂಇಎಸ್ ಪುಂಡಾಟ

    ಸದ್ಯ ಮೂರು ಮರಾಠಿ ಶಾಲೆಗಳಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಗೋವಾ ಮಹಾರಾಷ್ಟ್ರ ಪಕ್ಕದ ರಾಜ್ಯವಾಗಿದ್ದು, ಗೋವಾದಲ್ಲೂ ಮರಾಠಿ ಭಾಷೆಯಲ್ಲಿಯೇ ಹಲವು ಭಾಗದ ನಿವಾಸಿಗಳು ಶಿಕ್ಷಣ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಕಾರವಾರದಲ್ಲೂ ಮರಾಠಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು. ಅಲ್ಲದೇ ಬಹುತೇಕ ಗಡಿ ಭಾಗದಲ್ಲಿನ ಜನರು ಕೆಲಸಕ್ಕಾಗಿ ಗೋವಾದ ಮೊರೆ ಹೋಗುತ್ತಿದ್ದ ಕಾರಣಕ್ಕೆ ಮರಾಠಿ ಶಿಕ್ಷಣ ಪಡೆಯಲು ಮುಂದಾಗಿದ್ದರು. ಆದರೆ ಕನ್ನಡ ಬಳಕೆ, ಕರ್ನಾಟದಲ್ಲಿಯೇ ಹೆಚ್ಚಾಗಿ ಕೆಲಸಕ್ಕೆ ಹೋಗುವವರ ಸಂಖ್ಯೆ ಅಧಿಕವಾಗತೊಡಗಿತು. ಕಳೆದ 20 ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘಟನೆಗಳ ಶ್ರಮದಿಂದಾಗಿ ಕಾರವಾರದಲ್ಲಿ ಮರಾಠಿ ಶಿಕ್ಷಣ ಮಾಯವಾಗಿ ಕನ್ನಡ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ ಎನ್ನುವುದು ಸ್ಥಳೀಯರ ಮಾತಾಗಿದೆ.

    ಹಿಂದೆ ಪರಿಸ್ಥಿತಿ ಹೇಗಿತ್ತು?
    ಕಾರವಾರದ ಸುತ್ತಮುತ್ತಲ ಗ್ರಾಮಗಳಲ್ಲಿ ಕನ್ನಡ ಶಾಲೆ ಇದ್ದರೂ ಈ ಶಾಲೆಯಲ್ಲಿ ಕನ್ನಡ ಕಲಿಯುವ ಮಕ್ಕಳೇ ಇರಲಿಲ್ಲ. ಹೀಗಾಗಿ 20 ವರ್ಷಗಳ ಹಿಂದೆ ಕನ್ನಡ ಶಾಲೆಗಳೇ ಬಂದ್ ಆಗಿ ಮರಾಠಿ ಶಾಲೆಗಳು ತನ್ನ ಪ್ರಾಬಲ್ಯ ಮೆರೆದಿದ್ದವು. ಕರ್ನಾಟಕ ನೆಲದಲ್ಲೇ ಕನ್ನಡ ಮಾಯವಾಗುತ್ತಿರುವುದು ಅರಿವಿಗೆ ಬರುತ್ತಿದ್ದಂತೆ ಕನ್ನಡ ಸಂಘಟನೆಗಳು ಕೂಡ ಕನ್ನಡ ಕಲಿಸಲು ಹಾಗೂ ಕನ್ನಡ ಪ್ರೀತಿ ಬೆಳೆಸಲು ಹಲವು ಕಾರ್ಯಕ್ರಮ ರೂಪಿಸಿತ್ತು. ಜೊತೆಗೆ ಪೋಷಕರಲ್ಲಿ ಕನ್ನಡ ಪ್ರೇಮ ಬೆಳೆಸುವ ಕಾರ್ಯ ಸಹ ನಡೆಸಿತ್ತು. ಪರಿಣಾಮ ಫಲಿತಾಂಶ ಕಾಣುತ್ತಿದ್ದು ಮರಾಠಿ ಶಾಲೆಗಳು ಹಂತ ಹಂತವಾಗಿ ಮುಚ್ಚುತ್ತಿವೆ. ಇದನ್ನೂ ಓದಿ:ರಂಗೇರಿದ ಕರುನಾಡ ಹಬ್ಬ – ಕನ್ನಡ ಹಾಡಿಗೆ ಊರುಗೋಲು ಹಿಡಿದು ಅಂಗವಿಕಲನ ಸ್ಟೆಪ್

    ಬದಲಾವಣೆ ಹೇಗಾಯ್ತು?
    ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಮಟ್ಟಿಗೆ ಮರಾಠಿ, ಕೊಂಕಣಿ ಅತೀ ಪ್ರಭಾವ ಹೊಂದಿದ ಭಾಷೆಯಾಗಿದೆ. ಇನ್ನು ಇಲ್ಲಿನ ಜನ ಉದ್ಯೋಗ, ವ್ಯವಹಾರಕ್ಕಾಗಿ ಗೋವಾ ನೆಚ್ಚಿಕೊಂಡಿದ್ದರಿಂದಾಗಿ ಕೊಂಕಣಿ, ಮರಾಠಿ ಅನಿವಾರ್ಯವಾಗಿತ್ತು. ಹೀಗಾಗಿ ತಮ್ಮ ಮಕ್ಕಳಿಗೆ ಮರಾಠಿ ಶಾಲೆಯಲ್ಲಿಯೇ ಶಿಕ್ಷಣ ಕೊಡಿಸುತ್ತಿದ್ದರು. ಇದರಿಂದಾಗಿ ಈ ಭಾಗದಲ್ಲಿ ಕನ್ನಡ ಮಾತನಾಡುವ, ವ್ಯವಹರಿಸುವ ಜನರ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ಬೇರೆ ರಾಜ್ಯಕ್ಕೆ ಬಂದಿದ್ದೇವೆ ಎಂದು ಕನ್ನಡಿಗರಿಗೆ ಅನುಭವ ಆಗುತಿತ್ತು. ಆದರೆ ಈಗ ಗೋವಾ ರಾಜ್ಯದಂತೆ ಕರ್ನಾಟಕದಲ್ಲಿಯೂ ಉದ್ಯೋಗದ ವಿಫುಲ ಅವಕಾಶ ದೊರೆಯುತಿದ್ದು, ಕಾರವಾರದ ಸ್ಥಳೀಯ ಜನರು ಕನ್ನಡ ಭಾಷೆಯತ್ತ ಮುಖಮಾಡಿದ್ದಾರೆ.

    ಹೋರಾಟ ಹೇಗಾಯ್ತು?
    2008ರಲ್ಲಿ ಸದಾಶಿವ ಘಡದ ಗೋವಾ ಕೊಂಕಣಿ ಮಂಚ್‍ನ ಪ್ರಕಾಶ್ ಪಾಲನ್ಕರ್, ಅಂದಿನ ಪುರಸಭಾ ಸದಸ್ಯೆ ಆಶಾ ಪಾಲನ್ಕರ್ ನೇತೃತ್ವದಲ್ಲಿ ಕಾರವಾರವನ್ನು ಗೋವಾ ರಾಜ್ಯಕ್ಕೆ ಸೇರಿಸಬೇಕೆಂದು ದೊಡ್ಡ ಪ್ರತಿಭಟನೆ ಆಗ್ರಹ ನಡೆದಿತ್ತು. ಇದಕ್ಕೆ ವಿರುದ್ಧವಾಗಿ ಅಂದಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾನಾಯ್ಕ, ಸಾಹಿತಿ ಚಂಪಾ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಚಂದ್ರು ಹಾಗೂ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಿ, ಮನೆ ಮನೆಗೆ ತೆರಳಿ ಕನ್ನಡ ಪರ ಪ್ರಚಾರ, ಶಿಕ್ಷಣ, ಕನ್ನಡ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕನ್ನಡ ಅಭಿಮಾನವನ್ನು ಹೆಚ್ಚಿಸಲಾಯಿತು. ಇದರ ಫಲಶೃತಿಯಿಂದ ಕಾರವಾರ ಗೋವಾಕ್ಕೆ ಸೇರಬೇಕೆನ್ನುವ ಒತ್ತಾಯ ಮಾಯವಾಗಿ ಕನ್ನಡದ ಪರ ಒಲವು ಹೆಚ್ಚಾಗುವುದರ ಜೊತೆಗೆ ಕನ್ನಡದಲ್ಲೇ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಇಲ್ಲಿನ ಜನ ಉತ್ಸುಕರಾದರು. ಅಂದು ಬಿತ್ತಿದ್ದ ಕನ್ನಡದ ಬೀಜ ಈಗ ಚಿಗುರೊಡೆದು ಮರವಾಗುತ್ತಿದೆ.

    ಗಡಿ ನಾಡಿನ ಕಾರವಾರದಲ್ಲಿ ಮರಾಠಿ ಶಾಲೆಗಳ ಪ್ರಾಬಲ್ಯವಿದ್ದ ಸ್ಥಳಗಳಲ್ಲಿ ಸದ್ಯ ಮರಾಠಿ ಶಾಲೆಗಳು ಸಂಪೂರ್ಣ ಬಂದ್ ಆಗುವ ಹಂತಕ್ಕೆ ತಲುಪಿವೆ. ಈ ಮೂಲಕ ಕನ್ನಡಕ್ಕೆ ಹೆಚ್ಚಿನ ಒಲವು ತೋರಿರುವುದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದ್ದು, ಕನ್ನಡದ ಏಕೈಕ ಭುವನೇಶ್ವರಿ ದೇವಿಯ ಸನ್ನಿಧಿಯಿರುವ ಈ ಜಿಲ್ಲೆಯಲ್ಲಿ ಕನ್ನಡ ಮರವಾಗಿ ಬೆಳೆದಿರುವುದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದೆ.

  • ಊರ್ವಶಿ ಹೆಸರಲ್ಲಿ ಲಾಂಚ್ ಆಯ್ತು ಹೊಸ ಡ್ರಿಂಕ್

    ಊರ್ವಶಿ ಹೆಸರಲ್ಲಿ ಲಾಂಚ್ ಆಯ್ತು ಹೊಸ ಡ್ರಿಂಕ್

    ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌತೆಲಾ ಹೆಸರಲ್ಲಿ ಹೊಸ ಡ್ರಿಂಕ್ ಲಾಂಚ್ ಆಗಿದೆ. ಗೋವಾದ ಕ್ಲಬ್ ಊರ್ವಶಿ ರೌತೆಲಾ ಹೆಸರಲ್ಲಿ ಹೊಸ ಡ್ರಿಂಕ್ ಆರಂಭ ಮಾಡಿದೆ. ಕ್ಲಬ್ ಈ ಡ್ರಿಂಕ್ ಗೆ ‘ಊರ್ವಶಿ ರೌತೆಲಾ ಶಾಟ್’ ಎಂದು ಹೆಸರಿಡಲಾಗಿದೆ.

    ಊರ್ವಶಿ ಹೆಸರಿನ ಡ್ರಿಂಕ್ ಕುಡಿಯಲು ಗ್ರಾಹಕರು ನಮ್ಮ ಕ್ಲಬ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಸದ್ಯದ ಗೋವಾದ ಮಾರುಕಟ್ಟೆಯಲ್ಲಿ ಈ ರೀತಿಯ ಟೆಕ್ನಿಕ್ ಅವಶ್ಯವಿತ್ತು. ಊರ್ವಶಿಯವರು ಯಾವಾಗಲೂ ಫಿಟ್ ಮತ್ತು ಲವಲವಿಕೆಯಿಂದ ಇರುತ್ತಾರೆ. ಹಾಗಾಗಿ ಡ್ರಿಂಕ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ ಎಂದು ಕ್ಲಬ್ ಸಿಬ್ಬಂದಿ ಹೇಳಿದ್ದಾರೆ. ಇದನ್ನೂ ಓದಿ: ಹಿಂಭಾಗಕ್ಕೆ ಬೋನಿ ಕಪೂರ್ ಟಚ್ – 5 ತಿಂಗಳ ಬಳಿಕ ಊರ್ವಶಿ ಮೌನ ಸ್ಫೋಟ

    ನನ್ನ ಹೆಸರಿನಲ್ಲಿ ಡ್ರಿಂಕ್ ಆರಂಭವಾಗಿರುವ ವಿಷಯ ಕೇಳಿ ಸಂತೋಷವಾಯ್ತು. ಕ್ಲಬ್ ಅವರ ಈ ಹೊಸ ಡ್ರಿಂಕ್ ಗೆ ಉತ್ತಮ ಸ್ಪಂದನೆ ದೊರೆಯಲಿ. ನನ್ನ ವೃತ್ತಿ ಜೀವನದಲ್ಲಿ ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಜನರಿಗೆ ಹತ್ತಿರವಾಗಲು ಇದು ಮತ್ತಷ್ಟು ಸಹಾಯವಾಗಲಿದೆ ಎಂದು ಊರ್ವಶಿ ರೌತೆಲಾ ಕ್ಲಬ್ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಚಿತ್ರ-ವಿಚಿತ್ರ ಡ್ರೆಸ್ ತೊಟ್ಟುಕೊಂಡ ಊರ್ವಶಿ

    ಈ ಮೊದಲು ಕಿಲಾಡಿ ಅಕ್ಷಯ್ ಕುಮಾರ್ ಮತ್ತು ನಟಿ ರಿಚಾ ಚಡ್ಡಾ ಹೆಸರಿನಲ್ಲಿ ಡ್ರಿಂಕ್ ಲಾಂಚ್ ಮಾಡಲಾಗಿದೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದುಬಾರಾ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶೋಯೆಬ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆ ಬಳಿಕ ಒಂದು ಬಗೆಯ ಕಾಕೆಟಲ್ ಗೆ ‘ಶೋಯೆಬ್‍ಟಿನಿ’ ಎಂದು ಹೆಸರಿಡಲಾಗಿತ್ತು. ಫುಕರೆ ಖ್ಯಾತಿಯ ನಟಿ ರಿಚಾ ಚಡ್ಡಾ ಅವರ ಹೆಸರನಲ್ಲಿ ಮುಂಬೈನಲ್ಲಿ ಕಾಕೆಟೆಲ್ ಲಾಂಚ್ ಮಾಡಲಾಗಿತ್ತು. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಊರ್ವಶಿ ಎಡವಟ್ಟು-ಸೊಂಟದ ಪಟ್ಟಿಯೇ ಕಳಚಿ ಬಿತ್ತು

  • ಮಹದಾಯಿ ನೋಟಿಫಿಕೇಷನ್ ವಿಳಂಬದ ಕಾರಣ ತಿಳಿಸಿದ ಸುಪ್ರೀಂಕೋರ್ಟ್ ವಕೀಲ

    ಮಹದಾಯಿ ನೋಟಿಫಿಕೇಷನ್ ವಿಳಂಬದ ಕಾರಣ ತಿಳಿಸಿದ ಸುಪ್ರೀಂಕೋರ್ಟ್ ವಕೀಲ

    – ಕರ್ನಾಟಕಕ್ಕೆ ಶುಭ ಸುದ್ದಿ ಕಾದಿದೆ

    ಧಾರವಾಢ: ಕರ್ನಾಟಕ ಮತ್ತು ಗೋವಾ ಸುಪ್ರಿಂ ಕೋರ್ಟ್ ಮೊರೆ ಹೋದ ಕಾರಣ ನೋಟಿಫಿಕೇಷನ್ ವಿಳಂಬವಾಗುತ್ತಿದೆ. ಆದರೆ ರಾಜ್ಯಕ್ಕೆ ಶುಭ ಸುದ್ದಿ ಕಾದಿದೆ ಎಂದು ಸುಪ್ರಿಂ ಕೋರ್ಟ್‍ನಲ್ಲಿರುವ ರಾಜ್ಯದ ಪರ ವಕೀಲ ಮೋಹನ್ ಕಾತರಕಿ ತಿಳಿಸಿದ್ದಾರೆ.

    ನಗರದಲ್ಲಿ ಈ ಕುರಿತು ಪ್ರತಿಕ್ರಯಿಸಿದ ಅವರು, ಕರ್ನಾಟಕ ಮತ್ತು ಗೋವಾ ಸುಪ್ರಿಂ ಕೋರ್ಟ್ ಮೊರೆ ಹೋದ ಕಾರಣ ನೋಟಿಫಿಕೇಷನ್ ವಿಳಂಬ ಆಗುತ್ತಿದೆ. ಮಹದಾಯಿ ನ್ಯಾಯಾಧೀಕರಣ ತನ್ನ ತೀರ್ಪು ಕೊಟ್ಟಿದೆ. ಕರ್ನಾಟಕಕ್ಕೆ ಈಗ ಬೇಕಾಗುವಷ್ಟು ನೀರು ನ್ಯಾಯಾಧೀಕರಣ ಕೊಟ್ಟಿದೆ. ಆದರೆ ನಾವು ಹೆಚ್ಚುವರಿ ನೀರಿಗಾಗಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಗೋವಾದವರು ಸಹ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ನೋಟಿಫಿಕೇಷನ್ ತಡವಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಸುಪ್ರಿಂ ಕೋರ್ಟ್‍ಗೆ ಹೋಗಿದ್ದರಿಂದ ವಿಷಯ ಕೋರ್ಟ್ ಹಂತದಲ್ಲಿದೆ. ಅಲ್ಲದೆ ಗೋವಾದವರು ನ್ಯಾಯಾಧೀಕರಣದ ಬಗ್ಗೆಯೇ ಕೆಲ ಪ್ರಶ್ನೆ ಕೇಳಿದ್ದಾರೆ. ಇದು ಇತ್ಯರ್ಥ ಆಗಬೇಕಿದೆ, ಹೀಗಾಗಿ ಗೆಜೆಟ್ ನೊಟೀಫಿಕೇಷನ್ ಆಗುತ್ತಿಲ್ಲ. ಆದರೆ ಕರ್ನಾಟಕಕ್ಕೆ ಒಂದು ಶುಭ ಸುದ್ದಿ ಕಾದಿದೆ ಎಂದು ಇದೇ ವೇಳೆ ವಿವರಿಸಿದರು.

    ಗಜೆಟ್ ನೊಟೀಫಿಕೇಷನ್ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಹೊಸ ಕಾಯಿದೆಯೊಂದನ್ನು ತರಲು ಮುಂದಾಗಿದೆ. ಈ ಕಾಯಿದೆ ಜಾರಿಗೆ ಬಂದರೆ ಶೀಘ್ರವೇ ನೋಟಿಫಿಕೇಷನ್ ಆಗುತ್ತದೆ. ಈಗಾಗಲೇ ಈ ಕಾಯಿದೆ ಲೋಕಸಭೆಯಲ್ಲಿ ಪಾಸ್ ಆಗಿದೆ. ಡಿಸೆಂಬರ್‍ನಲ್ಲಿ ರಾಜ್ಯಸಭೆಯಲ್ಲಿ ಈ ಕಾಯಿದೆ ಪಾಸ್ ಆಗಲಿದೆ. ಈ ನೂತನ ಕಾಯಿದೆ ಜಾರಿಗೆ ಬಂದರೆ ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ನೋಟಿಫಿಕೇಷನ್ ಇಲ್ಲದೆಯೇ ಜಾರಿ ಮಾಡಬಹುದು ಎಂದರು.

    ಅಲ್ಲದೆ ಎಂದು ನ್ಯಾಯಧೀಕರಣದಲ್ಲಿ ತೀರ್ಪು ಬರುತ್ತದೆಯೋ ಅಂದೇ ಆ ತೀರ್ಪು ಜಾರಿಗೆ ಬರುತ್ತದೆ. ಈ ಕಾಯಿದೆ ಡಿಸೆಂಬರ್‍ನಲ್ಲಿ ಪಾಸ್ ಆದರೆ ನಮ್ಮ ಮಹದಾಯಿಗೆ ಯಾವುದೇ ಅಡ್ಡಿ ಬರುವುದಿಲ್ಲ. ನ್ಯಾಯಾಧೀಕರಣದ ತೀರ್ಪಿನಂತೆ ಸರಳವಾಗಿ ನೀರು ಪಡೆಯಬಹುದು ಎಂದು ತಿಳಿಸಿದರು.

  • ಮಹಾದಾಯಿ ಇತ್ಯರ್ಥವಾಗ್ಬೇಕಾದ್ರೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು – ಶೆಟ್ಟರ್

    ಮಹಾದಾಯಿ ಇತ್ಯರ್ಥವಾಗ್ಬೇಕಾದ್ರೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು – ಶೆಟ್ಟರ್

    ಧಾರವಾಡ: ಮಹದಾಯಿ ಇತ್ಯರ್ಥ ಆಗಬೇಕಾದಲ್ಲಿ ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತರೆ ಐದೇ ನಿಮಿಷದಲ್ಲಿ ಮಹದಾಯಿ ಸಮಸ್ಯೆ ಬಗೆ ಹರಿಯುತ್ತದೆ. ಅಲ್ಲಿನ ನಮ್ಮ ಸಿಎಂ ಮಾತುಕತೆಗೆ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಧರಣಿ ಮಾಡುತ್ತಿದೆ ಇದು ನಿಲ್ಲಬೇಕು. ಮಹದಾಯಿಯಲ್ಲಿ ಸರ್ಕಾರದ ಪ್ರಶ್ನೆ ಬರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆ ಬರುತ್ತದೆ. ಗೋವಾ ಕಾಂಗ್ರೆಸಿನ ನಿಲುವೇನು ಎಂದು ತಿಳಿಸಬೇಕು. ಬಿಜೆಪಿಯದ್ದು ಒಂದೇ ನಿಲುವಿದೆ. ಆದರೆ ಕಾಂಗ್ರೆಸ್ ವಿರೋಧ ಮಾಡಿಕೊಂಡೇ ಬಂದಿದೆ ಎಂದರು.

    ಗೋವಾ ಮುಖ್ಯಮಂತ್ರಿಗಳು ಮಾತುಕತೆಗೆ ರೆಡಿ ಇದ್ದಾರೆ. ಇವತ್ತಿಲ್ಲ ನಾಳೆ ಕೆಲವೇ ದಿನಗಳಲ್ಲಿ ಮಹದಾಯಿ ನೋಟಿಫಿಕೇಷನ್ ಆಗಿಯೇ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

    ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಹತ್ತು ವರ್ಷ ಯುಪಿಎ ಸರ್ಕಾರ ಇದ್ದಾಗ ಇವರೆಲ್ಲ ಮಲಗಿದ್ದರಾ? ತುಮಕೂರು ಶ್ರೀಗಳಿಗೆ ಭಾರತರತ್ನ ನೀಡುವುದು ಯುಪಿಎ ಸರ್ಕಾರ ಇದ್ದಾಗ ಏಕೆ ನೆನಪಾಗಲಿಲ್ಲ. ಶ್ರೀಗಳಿಗೆ ಭಾರತ ರತ್ನ ಕೊಡುವ ಕುರಿತು ನಮ್ಮ ಒತ್ತಾಯ ಇದೆ. ಆದರೆ ಅದು ಯಾವುದೋ ಕಾರಣಕ್ಕೆ ಆಗಿಲ್ಲ. ಅವರಿಗೆ ಭಾರತ ರತ್ನ ಸಿಗಲೇಬೇಕಿತ್ತು. ಇಂದೂ ಸಹ ಈ ಕುರಿತು ನಾವು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

    ಸಿದ್ದರಾಮಯ್ಯನವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರು ಕಾಂಗ್ರೆಸ್‍ಗೆ ಇತ್ತೀಚೆಗೆ ಬಂದವರು. ತುರ್ತು ಪರಿಸ್ಥಿತಿ ಸಮಯದಲ್ಲಿ ಇದೇ ಸಿದ್ದರಾಮಯ್ಯ ಇಂದಿರಾ ಗಾಂಧಿ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದರು. ಈಗ ಅದೇ ಕಾಂಗ್ರೆಸ್‍ನಲ್ಲಿ ಇದ್ದರಲ್ಲ. ದೇಶಕ್ಕೆ ರಾಜೀವ್ ಗಾಂಧಿ ಕೊಡುಗೆ ಏನಿದೆ? ಭೋಫೋರ್ಸ್ ಹಗರಣವೇ ರಾಜೀವ್ ಗಾಂಧಿ ಕೊಡುಗೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿಯವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ದೇಶ ಆಧೋಗತಿಗೆ ಹೋಗಲು ಕಾಂಗ್ರೆಸ್ 60 ವರ್ಷ ಲೂಟಿ ಮಾಡಿದ್ದೇ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಮಾತನಾಡಿದ ದಾಖಲೆಗಳನ್ನು ಸ್ವಲ್ಪ ನೋಡಲಿ. ತಮ್ಮ ಹಿಂದಿನ ಹೇಳಿಕೆ ಅವಲೋಕನ ಮಾಡಿದರೆ ಯಾರು ಸರ್ವಾಧಿಕಾರಿ ಎಂದು ಗೊತ್ತಾಗುತ್ತದೆ. ಆರ್ಥಿಕವಾಗಿ ಬಹಳ ತೊಂದರೆಯಲ್ಲಿರುವ ರಾಷ್ಟ್ರ ನಮ್ಮದು. ಯುಪಿಎ ಸರ್ಕಾರ ಹಿಂದೆ ಎಷ್ಟು ಸಾಲ ಮಾಡಿತ್ತು ಗೊತ್ತಾ? ಚಿನ್ನ ಒತ್ತೆ ಇಟ್ಟು ಇವರ ಸಾಲ ತೀರಿಸುವ ಸ್ಥಿತಿ ಬಂದಿತ್ತು. ಕಾಂಗ್ರೆಸ್‍ನವರಿದ್ದಾಗ ಅಷ್ಟೊಂದು ಅಧೋಗತಿಗೆ ಹೋಗಿತ್ತು. ಇಡೀ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಇದೆ ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ ಎಂದರು.

  • ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಒಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೇ ಹೆಣವಾದ

    ಪಣಜಿ: 65 ವರ್ಷದ ಕಲಾವಿದರೊಬ್ಬರನ್ನು ತೋಟದ ಕೆಲಸಗಾರ ಕೊಲೆ ಮಾಡಿ ಎಸ್ಕೇಪ್ ಆಗುವ ಭರದಲ್ಲಿ ತಾನೆ ಹೆಣವಾದ ಘಟನೆ ಗೋವಾದಲ್ಲಿ ನಡೆದಿದೆ.

    ಮುಂಬೈ ಮೂಲದ ಚಿತ್ರಕಲಾವಿದರಾದ ಶಿರಿನ್ ಮೋಡಿ(65) ಕೊಲೆಯಾದ ದುರ್ದೈವಿ. ಮನೆಯೊಳಗೆ ಮಾರಕಾಸ್ತ್ರಗಳಿಂದ ಅವರ ತೋಟದ ಮಾಲಿ ಪ್ರಫುಲ್ಲಾ ಶಿರಿನ್‍ರನ್ನು ಕೊಲೆ ಮಾಡಿದ್ದಾನೆ. ಉತ್ತರ ಗೋವಾ ಜಿಲ್ಲೆಯ ಅರಪೊರಾ ಗ್ರಾಮದಲ್ಲಿ ಶಿರಿನ್ ಆರ್ಟ್ ಸ್ಟುಡಿಯೋ ಹೊಂದಿದ್ದರು. ಹೀಗಾಗಿ ಅವರು ಮುಂಬೈ ಬಿಟ್ಟು ಅರಪೊರಾ ಗ್ರಾಮದಲ್ಲೇ ವಾಸಿಸುತ್ತಿದ್ದರು.

    ಅವರ ತೋಟದಲ್ಲಿ ಅಸ್ಸಾಂ ಮೂಲದ ಪ್ರಫುಲ್ಲಾ ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದನು. ಆದರೆ ಭಾನುವಾರ ಪ್ರಫುಲ್ಲಾ ಮನೆಯೊಳಗೆ ಮಾರಕಾಸ್ತ್ರಗಳಿಂದ ಶಿರಿನ್ ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ, ಬಳಿಕ ಅಲ್ಲಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಗಾರ್ಡ್‌ನ್ ನಲ್ಲಿ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ.

    ಈ ವೇಳೆ ಗಾರ್ಡ್‌ನ್ ನಲ್ಲಿ ಬಿದ್ದಿದ್ದ ಮಾಲಿಯನ್ನು ಕಂಡ ಅಕ್ಕಪಕ್ಕದ ಮನೆಯವರು ಆತನನ್ನು ಆಸ್ಪತ್ರಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಆರೋಪಿ ಮೃತಪಟ್ಟಿದ್ದನು. ಬಳಿಕ ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದರು.

    ಆಗ ಅಕ್ಕಪಕ್ಕದ ಮನೆಯವರು, ಮಾಲಿ ಹಾಗೂ ಶಿರಿನ್ ಅವರ ನಡುವೆ ಜಗಳ ನಡೆದಿತ್ತು. ಬಳಿಕ ಮಾಲಿ ಮನೆಯಿಂದ ಹೊರಗೆ ಓಡಿಬರುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ. ಬಹುಶಃ ಆತನೇ ಶಿರಿನ್‍ರನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದನು ಎನಿಸುತ್ತದೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

    ಇತ್ತ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಘಟನೆ ನಡೆದ ಬಳಿಕ ಮಾಲಿ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದು ಕಂಡು ಬಂದಿದೆ. ಆತ ಮನೆಯಿಂದ ಹೊರಗೆ ಓಡಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಲು ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಬೆತ್ತಲೆ ಪಾರ್ಟಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ಬೆತ್ತಲೆ ಪಾರ್ಟಿ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ಪಣಜಿ: ಉತ್ತರ ಗೋವಾದ ಮೊರ್ಜಿಮ್ ನಲ್ಲಿ ‘ಬೆತ್ತಲೆ ಪಾರ್ಟಿ’ ನಡೆಯುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

    ಪ್ರೈವೇಟ್ ಗೋವಾ ಪಾರ್ಟಿ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಗೋವಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಪೊಲೀಸರು ಈಗ ಈ ಪಾರ್ಟಿ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    ಈ ಕುರಿತು ಹೆಚ್ಚಿನ ವಿವರ ಪಡೆಯಲು ಪೊಲೀಸರು ತಮ್ಮ ಮಾಹಿತಿ ಜಾಲವನ್ನು ಚುರುಕುಗೊಳಿಸಿದ್ದು, ಪಾರ್ಟಿ ನಡೆಯುವ ಸಾಧ್ಯತೆ ಇರುವ ಕುರಿತು ಉತ್ತರ ಗೋವಾ ಜಿಲ್ಲೆಯ ಮೂರು ರಸ್ತೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ವಿವರವಾದ ವಿಳಾಸ ಅಥವಾ ದಿನಾಂಕವನ್ನು ಪೋಸ್ಟರ್‍ನಲ್ಲಿ ಹಾಕಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

    10-15 ವಿದೇಶಿಯರು ಹಾಗೂ 10ಕ್ಕೂ ಹೆಚ್ಚು ಭಾರತೀಯ ಹುಡುಗಿಯರು ಭಾಗವಹಿಸಲಿದ್ದಾರೆ ಎಂದು ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಆದರೆ ರಾಜ್ಯದಲ್ಲಿ ಯಾವುದೇ ಬೆತ್ತಲೆ ಪಾರ್ಟಿ ನಡೆಯಲು ನಾವು ಬಿಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಗೋವಾ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಮಾ ಕೌಂಟಿನ್ಹೋ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಪ್ರವಾಸೋದ್ಯಮ ಸಚಿವ ಮನೋಹರ್ ಅಜ್ಗಾಂವ್ಕರ್ ಕೂಡಲೇ ಮಧ್ಯೆ ಪ್ರವೇಶಿಸಿ ಅಂತಹ ಪಾರ್ಟಿಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

  • ಗೋವಾ ಮಾದರಿಯಲ್ಲಿ ಬೆಂಗ್ಳೂರಲ್ಲಿ ನಾಯಿ ಗಣತಿ – ಶ್ವಾನ್ ಆ್ಯಪ್ ಮೂಲಕ ಸರ್ವೇ

    ಗೋವಾ ಮಾದರಿಯಲ್ಲಿ ಬೆಂಗ್ಳೂರಲ್ಲಿ ನಾಯಿ ಗಣತಿ – ಶ್ವಾನ್ ಆ್ಯಪ್ ಮೂಲಕ ಸರ್ವೇ

    ಬೆಂಗಳೂರು: ಗೋವಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಾಯಿ ಗಣತಿ ಮಾಡಲು ಬಿಬಿಎಂಪಿ ಮುಂದಾಗಿದೆ. ಏಳು ವರ್ಷಗಳ ಬಳಿಕ ಈ ಗಣತಿ ಮಾಡಲಾಗುತ್ತಿದ್ದು, ಇದಕ್ಕಾಗಿ ಶ್ವಾನ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಾಯಿಗಳ ಗಣತಿಯನ್ನು ವೈಜ್ಞಾನಿಕವಾಗಿ ಮಾಡುವ ಉದ್ದೇಶದಿಂದ ಬಿಬಿಎಂಪಿಯು ಪಶು ವೈದ್ಯಕೀಯ ಸೇವೆ ಇಲಾಖೆಯ ಆ್ಯಪ್ ಮೂಲಕ ನಾಯಿಗಣತಿ ಮಾಡಲು ಮುಂದಾಗಿದೆ. ಈ ಸಮೀಕ್ಷೆಗೆ ಗೋವಾದ ಪಶುವೈದ್ಯಕೀಯ ಸೇವೆ ಇಲಾಖೆಯು ನೆರವು ನೀಡುತ್ತಿದ್ದು, ಸೆಪ್ಟೆಂಬರ್ 12 ರಿಂದ 20 ದಿನಗಳ ಕಾಲ ಬಿಬಿಎಂಪಿಯೊಂದಿಗೆ ಸಮೀಕ್ಷೆ ನಡೆಸಲಿದೆ.

    ಈ ಸಮೀಕ್ಷೆ ನಡೆಸುವ ತಂಡದಲ್ಲಿ ಗೋವಾದ 28 ಜನ ಹಾಗೂ ಬಿಬಿಎಂಪಿಯ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಇರಲಿದ್ದಾರೆ. ಗೋವಾ ಮತ್ತು ಬಿಬಿಎಂಪಿಯ ಸಿಬ್ಬಂದಿಗಳನ್ನು 13 ತಂಡಗಳಾಗಿ ವಿಂಗಡನೆ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 198 ವಾರ್ಡ್‌ಗಳಲ್ಲಿ ನಾಯಿ ಗಣತಿ ನಡೆಯಲಿದೆ.

    ಹಾಗೆಯೇ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಮಾಹಿತಿಯೂ ಇದರಲ್ಲಿ ಇರಲಿದೆ. ರೇಬಿಸ್‍ನಿಂದ ನಾಯಿಗಳ ಸಂತತಿಯಲ್ಲಿ ಉಂಟಾಗಿರುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸರ್ವೇ ನಡೆಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

    ನಾಯಿಗಳ ಗಣತಿ ತೆಗೆದುಕೊಳ್ಳುವುದರ ಜೊತೆಗೆ ಸರ್ವೇಯಿಂದ ನಾಯಿಗಳ ಸಂತಾನ ಶಕ್ತಿ, ನಾಯಿ ಮರಿಗಳು ಹಾಗೂ ನಾಯಿಗಳ ವಾಸ ಸ್ಥಾನ, ಹೆಣ್ಣು ನಾಯಿಗಳೆಷ್ಟು? ಗಂಡು ನಾಯಿಗಳು ಸಂಖ್ಯೆ ಎಷ್ಟು ಎನ್ನುವುದನ್ನು ಗುರುತಿಸಲಾಗುತ್ತದೆ ಎಂದು ವಿಶೇಷ ಆಯುಕ್ತರಾದ ರಂದೀಪ್ ಹೇಳಿದ್ದಾರೆ.

  • ‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ

    ‘ಕೈ’ ಬಿಟ್ಟು ಬಿಜೆಪಿ ಸೇರಿದ್ದ ಮೂವರು ಶಾಸಕರಿಗೆ ಮಂತ್ರಿಗಿರಿ ಕೊಟ್ಟ ಗೋವಾ ಸರ್ಕಾರ

    ಪಣಜಿ: ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ 10 ಶಾಸಕರ ಪೈಕಿ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ.

    ಫಿಲಿಪ್ ನೆರಿ ರಾಡ್ರಿಗೆಸ್, ಜೆನ್ನಿಫರ್ ಮಾನ್ಸೆರಾಟ್ಟೆ ಮತ್ತು ಚಂದ್ರಕಾಂತ್ ಕವಲೇಕರ್ ಅವರು ಪ್ರಮೋದ್ ಸಾವಂತ್ ಅವರ ಸಂಪುಟ ಸೇರಿದ್ದಾರೆ. ಈ ಮೂವರು ನೂತನ ಸಚಿವರು ಹಾಗೂ ಮಾಜಿ ಉಪಸಭಾಪತಿ ಮೈಕೆಲ್ ಲೋಬೋ ಕೂಡ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಗೋವಾದ 10 ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿ ಸೇರಿದ್ದರು. 40 ಸದಸ್ಯರ ಸದನದಲ್ಲಿ ಕಾಂಗ್ರೆಸ್‍ನ ಹತ್ತು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದು ಕಮಲ ಪಾಳಯದ ಬಲವನ್ನು 27ಕ್ಕೇರುವಂತೆ ಮಾಡಿತ್ತು. ಈ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮುಂದಾಗಿದ್ದರು.

    ಈ ಬಗ್ಗೆ ಶುಕ್ರವಾರ ತಡರಾತ್ರಿ ಮಾಹಿತಿ ನೀಡಿದ್ದ ಪ್ರಮೋದ್ ಸಾವಂತ್ ಅವರು, ನಾಲ್ಕು ನೂತನ ಸಚಿವರನ್ನು ನೇಮಕ ಮಾಡಲಾಗುವುದು. ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಓರ್ವ ಪಕ್ಷೇತರ ಶಾಸಕರಿಗೆ ನೀಡಿದ್ದ ಸಚಿವ ಸ್ಥಾನವನ್ನು ಹಿಂಪಡೆಯಲಾಗುತ್ತಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು.

    ದೋಸ್ತಿ ಪಕ್ಷದ ಶಾಸಕರನ್ನು ಸಂಪುಟದಿಂದ ಕೈಬಿಡುತ್ತಿರುವುದು ಯಾಕೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಮೋದ್ ಸಾವಂತ್ ಅವರು, ಉತ್ತಮ ಆಡಳಿತ ನೀಡಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ಹೈಕಮಾಂಡ್ ಸೂಚನೆಮೇರೆಗೆ ಸಂಪುಟ ಪುನಾರಚನೆ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದರು.

    ಪ್ರಮೋದ್ ಸಾವಂತ್ ಅವರು ನೂತನ ಸಚಿವರಾಗಿ ನೇಮಕಗೊಳ್ಳುವ ಶಾಸಕರು ಯಾರು ಎನ್ನುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಕಾಂಗ್ರೆಸ್ ಬಿಟ್ಟು ಪಕ್ಷ ಸೇರಿದ ಶಾಸಕರಿಗೆ ಮಂತ್ರಿಗಿರಿ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ರಾಜಕೀಯ ಚಾಣಾಕ್ಷತೆ ತೋರಿದೆ ಎನ್ನಲಾಗುತ್ತಿದೆ. ಪ್ರಮೋದ್ ಸಾವಂತ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎರಡನೇ ಬಾರಿಗೆ ಸಂಪುಟ ಪುನಾರಚನೆ ಇದಾಗಿದೆ.

    ವಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ ಕಾಂಗ್ರೆಸ್‍ನ 10 ಮಂದಿ ಬಣವು ಬುಧವಾರ ಸಂಜೆಯ ನಂತರ ಸ್ಪೀಕರ್ ಅವರನ್ನು ಭೇಟಿಯಾಗಿತ್ತು. ಕಾಂಗ್ರೆಸ್‍ನಿಂದ ಹೊರಬರುತ್ತಿರುವುದಾಗಿ ಸ್ಪೀಕರ್ ರಾಜೇಶ್ ಪಾಟ್ನೇಕರ್ ಅವರಿಗೆ ಪತ್ರವನ್ನು ನೀಡಿತ್ತು. ಚಂದ್ರಕಾಂತ್ ಕವಲೇಕರ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಫಿಲಿಪ್ ನೆರಿ ರಾಡ್ರಿಗೆಸ್, ಕ್ಲಿಯೋಫೇಷಿಯೋ ಡಯಾಸ್, ವಿಲ್‍ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್‍ನಿಂದ ಬಂದು ಕಮಲ ಬಣದ ಸದಸ್ಯರಾಗಿದ್ದಾರೆ.

  • ಗೋವಾಗೆ ತೆರಳಿದ ಆನಂದ್ ಸಿಂಗ್

    ಗೋವಾಗೆ ತೆರಳಿದ ಆನಂದ್ ಸಿಂಗ್

    ಬೆಂಗಳೂರು: ಕಾಂಗ್ರೆಸ್‍ನ ರೆಬೆಲ್ ಶಾಸಕ ಆನಂದ್ ಸಿಂಗ್ ಅವರು ಗೋವಾಗೆ ತೆರಳಿದ್ದಾರೆ

    ಆನಂದ್ ಸಿಂಗ್ ಅವರು ಕಾರಿನಲ್ಲಿ ಶುಕ್ರವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಮಾಡಿದವು. ಆದರೆ ಆನಂದ್ ಸಿಂಗ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ವಿಮಾನ ನಿಲ್ದಾಣದ ಒಳಗೆ ನಡೆದರು.

    ಶಾಸಕ ಆನಂದ್ ಸಿಂಗ್ ಅವರು ಕೆಐಎಎಲ್‍ನಿಂದ 6ಇ992 ಇಂಡಿಗೋ ವಿಮಾನದ ಮೂಲಕ ಗೋವಾಗೆ ಪ್ರಯಾಣ ಬೆಳೆಸಿದ್ದಾರೆ. ಅತೃಪ್ತ ಶಾಸಕರ ಜೊತೆಗೆ ಮುಂಬೈ ರೆಸಾರ್ಟಿಗೆ ಹೋಗದೆ ರಾಜ್ಯದಲ್ಲಿಯೇ ಉಳಿದಿದ್ದ ಅವರು ಇಂದು ದಿಢೀರ್ ಪ್ರಯಾಣ ಕೈಗೊಂಡಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.