Tag: goa

  • ಗುಡ್‍ಬೈ 2019, ವೆಲ್‍ಕಂ 2020- ದೇಶದೆಲ್ಲೆಡೆ ಹೊಸ ವರ್ಷ ಸಂಭ್ರಮಾಚರಣೆ

    ಗುಡ್‍ಬೈ 2019, ವೆಲ್‍ಕಂ 2020- ದೇಶದೆಲ್ಲೆಡೆ ಹೊಸ ವರ್ಷ ಸಂಭ್ರಮಾಚರಣೆ

    – ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತ
    – ಬೆಂಗಳೂರು, ಮಂಗಳೂರಿನಲ್ಲಿ ಸಂಭ್ರಮದ ಮೇಲೆ ಖಾಕಿ ಕಣ್ಣು

    ಬೆಂಗಳೂರು: “ಗುಡ್‍ಬೈ 2019, ವೆಲ್‍ಕಂ 2020”. ಹೊಸ ವರ್ಷಕ್ಕೆ ಭಾರತ ಕಾಲಿಟ್ಟಿದ್ದು, ರಾಜ್ಯದ ಜನತೆ 2020ನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

    ದೇಶಾದ್ಯಂತ ಹೊಸವರ್ಷದ ಆಚರಣೆ ರಂಗೇರಿತ್ತು. ನ್ಯೂ ಇಯರ್ ಹ್ಯಾಂಗೋವರ್‍ನಲ್ಲಿ ಬೆಂಗಳೂರು ಮಿಂದೆದ್ದಿದ್ದು, ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಏರಿಯಾಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಯುವಕ-ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಪೊಲೀಸರು ಕೂಡ ಹಿಂದೆಂದೂ ಕೇಳಿರದ ಮಟ್ಟಿಗೆ ಟೈಟ್ ಮೇಲೆ ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ಇದಕ್ಕಾಗಿ, 12 ಗಂಟೆ ಹೊತ್ತಲ್ಲಿ ಸಂಭ್ರಮಕ್ಕಾಗಿ ಲೈಟ್ಸ್ ಆಫ್ ಮಾಡದಂತೆ ಪೊಲೀಸರು ಸೂಚಿಸಿದ್ದರು. ಸಂಚಾರಿ ಪೊಲೀಸರು ಕೂಡ ನಗರದಾದ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು.

    ಫ್ಲೈ ಓವರ್‍ಗಳನ್ನು ಬಂದ್ ಮಾಡಿ, ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಹೊಸ ವರ್ಷದ ಪಾರ್ಟಿ ಕುಡುಕರಿಗೆ ರಾಜಮರ್ಯಾದೆ ನೀಡಲಾಗಿತ್ತು. ಕುಡಿದು ಟೈಟ್ ಆಗೋ ಮದ್ಯ ಶೂರರಿಗೆ ಸೆಕ್ಯೂರಿಟಿ ಐಲ್ಯಾಂಡ್ ಹೆಸರಿನಲ್ಲಿ ಕೋರಮಂಗಲದಲ್ಲಿ 18 ಕುಡುಕರ ಆಶ್ರಯ ಕೇಂದ್ರ ಸ್ಥಾಪಿಸಿದ್ದರು. ಕರ್ಲಾನ್ ಬೆಡ್, ದಿಂಬಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಇವರನ್ನು ಕರೆತರಲು ಓಲಾ, ಉಬರ್, ಅಂಬುಲೆನ್ಸ್ ಗಳನ್ನೂ ತಯಾರಿಯಲ್ಲಿಟ್ಟುಕೊಂಡಿದ್ದರು.

    ಮಧ್ಯರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವೈನ್‍ಶಾಪ್‍ಗಳಿಗೆ ರಾತ್ರಿ 11, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಮಧ್ಯರಾತ್ರಿ 1, ಮದ್ಯ ಮಾರಾಟಕ್ಕೆ ಮಧ್ಯರಾತ್ರಿ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಕೋರಮಂಗಲ, ಇಂದಿರಾ ನಗರ, ಮಹದೇವಪುರ, ವೈಟ್‍ಫೀಲ್ಡ್, ಮಾರತ್‍ಹಳ್ಳಿ, ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‍ಗಳು, ಮಾಲ್‍ಗಳು, ಥಿಯೇಟರ್‍ಗಳಲ್ಲಿ ಜನವೋ ಜನ. ರಾಜ್ಯದ ಮಂಗಳೂರು, ಮಡಿಕೇರಿ, ಮೈಸೂರು ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕೋಲಾರಗಳಲ್ಲೂ ಭಾರೀ ಸಂಭ್ರಮ ಇತ್ತು. ಗೋಲಿಬಾರ್ ನಡೆದಿರುವ ಮಂಗಳೂರಿನಲ್ಲಂತೂ ಯಾರೂ ಕೆಮ್ಮಂಗಿಲ್ಲ. ಬಾಲಬಿಚ್ಚಂಗಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ದೆಹಲಿ, ಪಂಜಾಬ್, ಮುಂಬೈ, ಗೋವಾ, ಕೇರಳದ ಬೀಚ್‍ಗಳು, ಚೆನ್ನೈ, ಕೋಲ್ಕತ್ತಾ, ಎಲ್‍ಒಸಿಯಲ್ಲಿ ಸೈನಿಕರು ಹೀಗೇ ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನ್ಯೂಜಿಲೆಂಡ್‍ನ ಆಕ್ಲೆಂಡ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಹ ಸಂಭ್ರಮ ಮನೆ ಮಾಡಿತ್ತು. ಹಾಂಕಾಂಗ್, ಫಿಜಿ, ಇಂಗ್ಲೆಂಡ್, ಅಮೆರಿಕ, ಬ್ರೆಜಿಲ್, ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ತಾಕರ್ಷಕ ಬಾಣಬಿರುಸು, ವರ್ಣರಂಚಿತ ಫೈರ್ ವರ್ಕ್‍ಗಳು ಕಣ್ಮನ ಸೆಳೆದೆವು.

  • ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಹೊಸ ವರ್ಷಾಚರಣೆಗೆ ಗೋವಾ ಖಾಲಿ ಖಾಲಿ – ಬಿಕೋ ಎನ್ನುತ್ತಿದೆ ಬೀಚ್‌ಗಳು

    ಕಾರವಾರ: ಪ್ರವಾಸಿಗರ ಸ್ವರ್ಗ ಗೋವಾ ಎಂದೇ ಪ್ರಸಿದ್ಧ. ಹಾಗೆಯೇ ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಪ್ರಸಿದ್ಧ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ರಜೆಯ ಮೋಜು ಅನುಭವಿಸಲು ಕರಾವಳಿ ತೀರಾ ಹಾಗೂ ಗೋವಾ ರಾಜ್ಯಕ್ಕೆ ದೇಶ ವಿದೇಶಿಗರು ಮುಗಿ ಬೀಳುತ್ತಿದ್ದರು. ಆದರೆ ಈ ವರ್ಷ ದೇಶ, ವಿದೇಶಿಗರ ಪ್ರವಾಸಿ ಸಂಖ್ಯೆ ಇಳಿಮುಖವಾಗಿದೆ.

    ಗೋವಾ ರಾಜ್ಯದಲ್ಲಿ ಹೊಸವರ್ಷದ ಸಂಭ್ರಮಾಚರಣೆಗೆ ದೇಶ ವಿದೇಶದ ಜನರು ಕಿಕ್ಕಿರಿದು ತುಂಬುತ್ತಿದ್ದರು. ಈ ವರ್ಷದ ಕ್ರಿಸ್‍ಮಸ್ ಆಚರಣೆಯ ಹಬ್ಬದಂದು ವಾರವಿಡೀ ಪ್ರವಾಸಿಗರ ನಿರೀಕ್ಷೆಯನ್ನು ಮಾಡಲಾಗಿತ್ತು. ಆದರೆ ನಿರೀಕ್ಷೆಯಂತೆ ಪ್ರವಾಸಿಗರು ಬರಲಿಲ್ಲ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಶೇ.50ರಷ್ಟು ಇಳಿಮುಖವಾಗಿದೆ.

    ಗೋವಾ ರಾಜ್ಯಕ್ಕೆ ಪ್ರತಿ ವರ್ಷ 6 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಗೋವಾ ರಾಜ್ಯದ ಪ್ರವಾಸೋಧ್ಯಮ ಇಲಾಖೆ ಹೇಳುತ್ತದೆ. ಈ ಬಾರಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ ಎಂಬುದರ ಬಗ್ಗೆ ಅಂಕಿ ಅಂಶ ಕಲೆ ಹಾಕಲಾಗಿದೆ. ಅದರ ಪ್ರಕಾರ ಈ ವರ್ಷದ ಡಿಸೆಂಬರ್ ನಲ್ಲಿ ಶೇ.50ರಷ್ಟು ಕಮ್ಮಿಯಾಗಿರುವ ಕುರಿತು ಮಾಹಿತಿ ನೀಡಿದೆ.

    ಗೋವಾ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲು ಕಾರಣಗಳು:
    ದೇಶದಲ್ಲಿ ಪ್ರತಿಭಟನೆ ಹೆಚ್ಚಾಗಿತ್ತು. ಜೊತೆಗೆ ಇಂದು ಗೋವಾದಲ್ಲಿ ಮಹದಾಯಿ ಹೋರಾಟ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಸಲು ಅಲ್ಲಿನ ಸಂಘಟನೆಗಳು ಕರೆಕೊಟ್ಟಿದ್ದರು. ಇದರ ಜೊತೆ ದೇಶ ವಿದೇಶದಿಂದ ಪ್ರವಾಸಿಗರನ್ನು ಕರೆ ತರುತ್ತಿದ್ದ ಪ್ರವಾಸೋಧ್ಯಮ ಕಂಪನಿಗಳು ಆರ್ಥಿಕ ಸಂಕಟದಿಂದ ಮುಚ್ಚಿರುವುದು ಕೂಡ ಗೋವಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ.

    ನೆರೆಯ ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕರಾವಳಿ ಭಾಗ ಅಲ್ಪ ಮಟ್ಟಿಗೆ ಖುಷಿ ಪಡಬಹುದು. ಉತ್ತರ ಕನ್ನಡ ಜಿಲ್ಲೆ ಗೋವಾ ರಾಜ್ಯವನ್ನು ಅಂಟಿಕೊಂಡಿದೆ. ಹೀಗಾಗಿ ಗೋವಾಕ್ಕೆ ಪ್ರತಿ ವರ್ಷ ಹೊಸ ವರ್ಷಾಚರಣೆ ಮಾಡುವ ಪ್ರವಾಸಿಗರು ಇಲ್ಲಿನ ಗೋಕರ್ಣ, ಕಾರವಾರ, ಮುರಡೇಶ್ವರದತ್ತ ಮುಖ ಮಾಡುತ್ತಾರೆ. ಈ ಬಾರಿ ಕಳೆದ ಬಾರಿಗಿಂತ ಇಳಿಮುಖವಾಗಿದ್ದು, ಜನರಲ್ಲಿ ಆಸಕ್ತಿ ಕಡಿಮೆ ಮಾಡಿದೆ. 2018ರ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ದೇಶಿಯರ ಪ್ರವಾಸಿಗರ ಸಂಖ್ಯೆ 6,10,994, ವಿದೇಶಿಗರ ಪ್ರವಾಸಿಗರು -2023 ಒಟ್ಟು 6,13,016 ಲಕ್ಷ ಜನ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದಾರೆ. ಆದರೆ 2019ರ ಪ್ರಕಾರ ದೇಶಿಯ ಪ್ರವಾಸಿಗರು – 5,21,880 ವಿದೇಶಿಯ ಪ್ರವಾಸಿಗರು 3839, ಒಟ್ಟು 5,25,719 ಇದ್ದು ಈ ಬಾರಿ ಇಳಿಮುಖವಾಗಿದೆ.

    ವಿದೇಶಿ ಪ್ರವಾಸಿಗರಲ್ಲಿ ಏರಿಕೆ
    ಕಳೆದ ಬಾರಿ ಹೋಲಿಸಿದರೆ ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2018 ಡಿಸೆಂಬರ್ ರಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾದ ಗೋಕರ್ಣಕ್ಕೆ 836, ಓಂ ಬೀಚ್ 625, ಮುರಡೇಶ್ವರ 395, ಕಾರವಾರ ಕಡಲ ತೀರ 94 ಜನ ಭೇಟಿ ನೀಡಿದ್ದು, ಒಟ್ಟು ವಿದೇಶಿ ಪ್ರವಾಸಿಗರು 2023 ಆಗಿದೆ. 2019 ಡಿಸೆಂಬರ್ ನಲ್ಲಿ ಗೋಕರ್ಣಕ್ಕೆ 2568, ಓಂ ಬೀಚ್ 650, ಮುರಡೇಶ್ವರ 347, ಕಾರವಾರ 100, ಕಾಸರಕೋಡು ಬೀಚ್ 150 ಒಟ್ಟು ವಿದೇಶಿಯ ಪ್ರವಾಸಿಗರು 3839 ಆಗಿದ್ದು, ಕಳೆದ ಬಾರಿಗಿಂತ ಈ ಬಾರಿ ಏರಿಕೆ ಕಂಡಿದೆ.

    ಹೊಸ ವರ್ಷಕ್ಕಿಲ್ಲ ಸೆಲಬ್ರೇಷನ್:
    ಕಳೆದ ವರ್ಷ ದೊಡ್ಡ ದೊಡ್ಡ ಪಾರ್ಟಿಯನ್ನು ಆಯೋಜನೆ ಮಾಡುವ ಮೂಲಕ ಹೊಸ ವರ್ಷಾಚರಣೆಯನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಗಿತ್ತು. ಇದಕ್ಕಾಗಿ ಖಾಸಗಿ ಹೋಟಲ್, ರೆಸಾರ್ಟ್ ಗಳಲ್ಲಿ ಮ್ಯೂಸಿಕಲ್ ಪಾರ್ಟಿ ಸಹ ಇರುತ್ತಿತ್ತು. ಆದರೆ ಕೇಂದ್ರ ಸರ್ಕಾರದ ಜಿ.ಎಸ್‍ಟಿ ಹಾಗೂ ಮನೋರಂಜನಾ ಶುಲ್ಕ ಆಯೋಜಕರಿಗೆ ದುಬಾರಿಯಾಗಿದ್ದು, ಇದರ ಜೊತೆ ಪ್ರವಾಹದಿಂದ ಜಿಲ್ಲೆಗೆ ಆದ ಹಾನಿಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಕಾರವಾರದಲ್ಲಿ ಕೇವಲ ಒಂದು ಹೋಟೆಲ್, ಗೋಕರ್ಣದಲ್ಲಿ ಒಂದು ರೆಸಾರ್ಟ್ ಹೊರತುಪಡಿಸಿ ಉಳಿದ ಭಾಗದಲ್ಲಿ ಹೊಸ ವರ್ಷಾಚರಣೆಯ ಕಾರ್ಯಕ್ರಮಗಳು ಆಯೋಜನೆ ಗೊಂಡಿಲ್ಲ. ಒಟ್ಟಿನಲ್ಲಿ ಈ ವರ್ಷದ ಹೊಸ ವರ್ಷಾಚರಣೆ ಪ್ರವಾಸಿಗರ ಸ್ವರ್ಗದ ನಾಡಿನಲ್ಲಿ ಬಿಕೋ ಎನ್ನಿಸುತ್ತಿದ್ದು, ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉತ್ಸುಕತೆ ಜನರಲ್ಲಿ ಅಷ್ಟಾಗಿ ಕಾಣುತ್ತಿಲ್ಲ.

  • ಈ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ನಿಂದ ಹೆಚ್ಚು ಮಾಲಿನ್ಯವಾಗಿವೆ

    ಈ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ನಿಂದ ಹೆಚ್ಚು ಮಾಲಿನ್ಯವಾಗಿವೆ

    ದೆಹಲಿ: ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿಕೊಂಡರೆ ಮಹಾರಾಷ್ಟ್ರದ ಸಮುದ್ರ ತೀರಗಳು ಮೈಕ್ರೋ ಪ್ಲಾಸ್ಟಿಕ್‍ಗಳಿಂದ ಹೆಚ್ಚು ಮಾಲಿನ್ಯವಾಗಿದೆ ಎಂದು ಹೊಸ ಸಂಶೋಧನಾ ವರದಿ ಹೇಳಿದೆ. ಸಮುದ್ರ ತೀರದಲ್ಲಿರುವ ಪ್ಲಾಸ್ಟಿಕ್ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಇದಕ್ಕೆಲ್ಲ ಹೊಣೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

    ಗೋವಾ ಮೂಲದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಓಷನೊಗ್ರಫಿ (ಎನ್‍ಐಒ) ಎನ್ನುವ ಸಂಸ್ಥೆ ಭಾರತದ ಪಶ್ಚಿಮ ಕರಾವಳಿ ಉದ್ದಕ್ಕೂ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳ ಮೌಲ್ಯಮಾಪನ ಹಾಗೂ ಸಮೃದ್ಧಿ, ವಿತರಣೆ, ಪಾಲಿಮರ್ ಪ್ರಕಾರ ಮತ್ತು ವಿಷತ್ವ ಎಂಬ ಶೀರ್ಷಿಕೆಯಡಿ ಅಧ್ಯಯನ ನಡೆಸಿದ್ದು, ಇದು ಕಳೆದ ವಾರ ನೆದರ್‍ಲ್ಯಾಂಡ್ ಮೂಲದ ಜರ್ನಲ್ ‘ಚೆಮೋಸ್ಫಿಯರ್’ ನಲ್ಲಿ ಪ್ರಕಟಿಸಲಾಗಿದೆ.

    ಈ ಅಧ್ಯಯನದ ಪ್ರಕಾರ ಕರ್ನಾಟಕ ಮತ್ತು ಗೋವಾಕ್ಕೆ ಹೋಲಿಸಿದರೆ ಮಹಾರಾಷ್ಟ್ರದ ಕಡಲ ತೀರಗಳಲ್ಲಿ ಹೆಚ್ಚಿನ ಉಬ್ಬರವಿಳಿತದ ರೇಖೆಯಲ್ಲಿ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯಕಾರಕಗಳು ಹೆಚ್ಚು ಕಂಡುಬರುತ್ತವೆ ಎಂದು ಹೇಳಿದೆ. ಕಡಲ ತೀರದಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಗಳು, ಬಂದರು ಪ್ರದೇಶಗಳು, ಪೆಟ್ರೋಲಿಯಂ ಕೈಗಾರಿಕೆಗಳು ಅತಿಯಾದ ಪ್ರವಾಸೋದ್ಯಮ ಚಟುವಟಿಕೆಯಿಂದ ಮಹಾರಾಷ್ಟ್ರ ಕಡಲ ತೀರಗಳಲ್ಲಿ ಹೇರಳವಾಗಿ ಮ್ಯಾಕ್ರೋ ಮತ್ತು ಮೈಕ್ರೋ ಪ್ಲಾಸ್ಟಿಕ್‍ಗಳನ್ನು ಕಂಡು ಬರುತ್ತಿದೆ ಎಂದು ವರದಿ ಹೇಳಿದೆ.

    ಸಂಶೋಧಕರು ಭಾರತದ ಪಶ್ಚಿಮ ಕರಾವಳಿಯ 10 ಕಡಲ ತೀರಗಳಲ್ಲಿ ಎರಡು ವರ್ಷಗಳ ಕಾಲ ಮ್ಯಾಕ್ರೋ ಮತ್ತು ಮೈಕ್ರೋಪ್ಲಾಸ್ಟಿಕ್ ಮಾಲಿನ್ಯದ ಮೌಲ್ಯಮಾಪನ ಮತ್ತು ಸಮುದ್ರ ಜೀವಿಗಳ ಮೇಲೆ ಅವುಗಳ ವಿಷಕಾರಿ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಿದರು. ಈ ಕಡಲ ತೀರಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ಕಾರಕಗಳು ಬಿಳಿ, ತಿಳಿ ಹಳದಿ, ಗಾಢ ಕಂದು, ಹಸಿರು, ನೀಲಿ ಮತ್ತು ಕೆಂಪು ಮುಂತಾದ ವಿವಿಧ ಬಣ್ಣಗಳಲ್ಲಿ ಕಂಡು ಬಂದಿವೆ ಎಂದು ಎನ್‍ಐಒ ವಿಜ್ಞಾನಿಗಳಾದ ಡಾ.ಮಹುವಾ ಸಹಾ ಮತ್ತು ಡಾ. ದುಷ್ಮಂತ್ ಮಹಾರಾನ ನೇತೃತ್ವದ ಅಧ್ಯಯನ ತಿಳಿಸಿದೆ.

    ಪ್ಲಾಸ್ಟಿಕ್ ಮಾಲಿನ್ಯಕಾರಕಗಳಿಂದ ಸಮುದ್ರ ಪರಿಸರಕ್ಕೆ ತೊಂದರೆಯಾಗದಂತೆ ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ನಡೆಸುವುದರ ಜೊತೆಗೆ ಏಕ ಬಳಕೆಯ ಪ್ಲಾಸ್ಟಿಕ್‍ನಿಂದ ದೂರವಿರಲು ಮತ್ತು ಅದರ ಮರುಬಳಕೆಯನ್ನು ಹೆಚ್ಚಿಸಲು ಸರ್ಕಾರದ ಚೌಕಟ್ಟಿನ ನೀತಿಗಳು ಅಗತ್ಯ ಎಂದು ಸಂಶೋಧಕರು ಸೂಚಿಸಿದ್ದಾರೆ.

  • ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಧಾರವಾಡ: ಮಹಾದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಪರಿಸರ ಇಲಾಖೆಯಿಂದ ಕಳಸಾ ಬಂಡೂರಿ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮವನ್ನು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು, ಸಂಘ ಸಂಸ್ಥೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಕಳಸಾ ಬಂಡೂರಿಗೆ ಅನುಮತಿ ನೀಡಿ ನಂತರ ವಾಪಸ್ ಪಡೆಯಲು ನೀಡಿರುವ ಕಾರಣ ಸೂಕ್ತವಾಗಿಲ್ಲ. ಏಕೆಂದರೆ ಅನುಮತಿ ಕೊಡುವಾಗ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿರುವ ಕುರಿತು ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.

    ಈಗ ಅನುಮತಿ ಹಿಂಪಡೆಯಲು ನೀಡಿದ ಕಾರಣ ನೋಡಿದರೆ ನಮಗೆ ಮೋಸವಾಗುತ್ತಿದೆ ಎಂದು ಅನ್ನಿಸುತ್ತಿದೆ. 2002ರಲ್ಲಿ ವಾಜಪೇಯಿ ಕಾಲದಲ್ಲಿಯೂ ಹೀಗೆ ಮಾಡಿದ್ದರು. ಅನುಮತಿ ಕೊಟ್ಟ ನಾಲ್ಕು ತಿಂಗಳ ಬಳಿಕ ಗೋವಾ ಸರ್ಕಾರದ ಕಾರಣ ನೀಡಿ ವಾಪಸ್ ಪಡೆದಿದ್ದರು. ಇದರಿಂದಾಗಿ 17 ವರ್ಷ ತಡವಾಗಿದೆ, ಈಗ ಮತ್ತೆ ಅನುಮತಿ ಕೊಟ್ಟು ವಾಪಸ್ ಪಡೆದಿದ್ದೀರಿ. ಹಾಗಾದರೆ ಇದಕ್ಕೆ ಇನ್ನು ಎಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.

  • ಮಹದಾಯಿ ಯೋಜನೆಗೆ ತಡೆ – ಶೀಘ್ರ ಸಿಹಿ ಸುದ್ದಿ ಎಂದ ಜಾವಡೇಕರ್

    ಮಹದಾಯಿ ಯೋಜನೆಗೆ ತಡೆ – ಶೀಘ್ರ ಸಿಹಿ ಸುದ್ದಿ ಎಂದ ಜಾವಡೇಕರ್

    ನವದೆಹಲಿ: ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಮತ್ತು ರಾಜ್ಯಕ್ಕೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ನವದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಮಾತನಾಡಿದ ಅವರು, ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವ ಕಾರಣ ಕೇಂದ್ರ ಸರ್ಕಾರ ಕಳಸಾ ಬಂಡೂರಿ ಯೋಜನೆಗೆ ತಾತ್ಕಾಲಿಕ ತಡೆ ನೀಡಿದೆ. ಈ ಸಂಬಂಧ ಗುರುವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಮಿತಿ ಭೇಟಿ ಮಾಡಿ ಚರ್ಚೆ ಮಾಡಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಈ ಸಮಸ್ಯೆಯ ಪರಿಹಾರಕ್ಕಿರುವುದು ಎರಡೇ ದಾರಿಗಳು ಒಂದು ಗೋವಾ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಸಹಮತದಿಂದ ತೀರ್ಮಾನಕ್ಕೆ ಬರಬೇಕು ಅಥಾವ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟರು.

  • ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ನವದೆಹಲಿ: ಮಹದಾಯಿ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ನೀಡಿದ್ದ ಪರಿಸರ ಒಪ್ಪಿಗೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಈ ಬಗ್ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಒಪ್ಪಿಗೆ ತಡೆ ಹಿಡಿದಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಹಿತಿ ತಿಳಿಸಿದೆ.

    2018 ಅಗಸ್ಟ್ 14 ರಂದು ಮಹದಾಯಿ ನ್ಯಾಯಾಧೀಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಗೋವಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮತ್ತಷ್ಟು ನೀರಿನ ಬೇಡಿಕೆ ಇಟ್ಟು ಕರ್ನಾಟಕವೂ ಅರ್ಜಿ ಸಲ್ಲಿಸಿತ್ತು. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.

    ಇತ್ತೀಚಿಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಅರಣ್ಯ ಪರಿಸರ ಇಲಾಖೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿತ್ತು. ಇದೊಂದು ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ. ಇಲ್ಲಿ ಯಾವುದೇ ನೀರಾವರಿ ಮತ್ತು ಜಲ ವಿದ್ಯುತ್ ಯೋಜನೆ ಇಲ್ಲದಿರುವ ಹಿನ್ನೆಲೆ ಇಲಾಖೆ ಅನುಮತಿ ನೀಡಲಾಗಿತ್ತು. ಕೇಂದ್ರ ಸರ್ಕಾರದ ಯಾಕ ಆಕ್ಷೇಪಣೆ ಇಲ್ಲದೇ ನೀವೂ ಕಾಮಗಾರಿ ಆರಂಭಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ನಿರಪೇಕ್ಷಣಾ ಪತ್ರವನ್ನು ವಿರೋಧಿಸಿ ಗೋವಾ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭೇಟಿಯಾಗಿ ಒಪ್ಪಿಗೆಯನ್ನು ಹಿಂದೆ ಪಡೆಯುವಂತೆ ಒತ್ತಾಯ ಮಾಡಿತ್ತು.

    ಎಚ್‍ಡಿಕೆ ಕಿಡಿ: ಕನ್ನಡಿಗರನ್ನು ರಾಜಕೀಯಕ್ಕೆ ದುಡಿಸಿಕೊಳ್ಳುವುದು, ಯೋಜನೆ, ಕಾರ್ಯಕ್ರಮ, ಅನುದಾನಗಳ ವಿಷಯದಲ್ಲಿ ಶೋಷಿಸುವುದು ಬಿಜೆಪಿಯ ಚಾಳಿಯಾಗಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿರುವುದನ್ನು ಕನ್ನಡಿಗರಾಗಿ ಟೀಕಿಸಬೇಕೋ? ಬೆಂಬಲಿಸಬೇಕೋ? ಕನ್ನಡಿಗರ ಆತ್ಮಾಭಿಮಾನ ಕೆಣಕುವುದರಲ್ಲಿ ನಿಮಗೆಂಥ ಸಂತೋಷ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಚುನಾವಣೆ ವೇಳೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ವೋಟು ಹಾಕಿಸಿಕೊಂಡ ರಾಜ್ಯದ ಬಿಜೆಪಿ ನಾಯಕರು ಇದೀಗ ಮೋದಿಗೆ ಬೆದರಿ ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕನ್ನಡಿಗರನ್ನು ದಾಸ್ಯಕ್ಕೆ ಈಡು ಮಾಡುವ ದಲ್ಲಾಳಿಗಳಾಗಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗೋವಾದಲ್ಲಿ ಹೆಚ್‍ಡಿಕೆ ಜಾಲಿ ಮೂಡ್

    ಗೋವಾದಲ್ಲಿ ಹೆಚ್‍ಡಿಕೆ ಜಾಲಿ ಮೂಡ್

    ಬೆಂಗಳೂರು: ಸಮಯ ಸಿಕ್ಕಾಗಲೆಲ್ಲ ವಿದೇಶಕ್ಕೆ ಹಾರಿ ರಿಲ್ಯಾಕ್ಸ್ ಆಗುತ್ತಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇದೀಗ ಗೋವಾ ಕಡೆ ಮುಖ ಮಾಡಿದ್ದಾರೆ.

    ಇಂದು ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದು, 3 ದಿನಗಳ ಕಾಲ ಕುಟುಂಬದ ಜೊತೆ ಸಮಯ ಕಳೆಯಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಜೊತೆ ಸಮಯ ಕಳೆಯಲು ಗೋವಾ ಪ್ರವಾಸ ಕೈಗೊಂಡಿದ್ದಾರೆ.

    ಉಪ ಚುನಾವಣೆಯಲ್ಲಿ ಸತತ ಓಡಾಟದಿಂದ ಕುಮಾರಸ್ವಾಮಿ ಬಳಲಿದ್ದಾರೆ. ವೈದ್ಯರ ಸಲಹೆ ಮೇರೆಗೆ ಕಳೆದ 10 ದಿನಗಳಿಂದ ಕುಮಾರಸ್ವಾಮಿ ರೆಸ್ಟ್ ನಲ್ಲಿದ್ದರು. ವಾತಾವರಣ ಚೇಂಜ್ ಆಗಬೇಕು ಅನ್ನೋ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಗೋವಾಕ್ಕೆ ತೆರಳಿದ್ದಾರೆ. ಮೂರು ದಿನ ಗೋವಾದ ವಿವಿಧ ತಾಣಗಳಲ್ಲಿ ಸುತ್ತಾಟ ನಡೆಸಲಿದ್ದಾರೆ.

    ಗೋವಾದಲ್ಲಿ ಮಾಜಿ ಸಿಎಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ. ಸೋಮವಾರ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಮನೆಯ ಬಳಿ ಸಾವಿರಾರು ಜನ ಅಭಿಮಾನಿಗಳು ಬರುತ್ತಾರೆ. ಇದರಿಂದ ಕುಮಾರಸ್ವಾಮಿಗೂ ಸ್ವಲ್ಪ ಕಿರಿಕಿರಿ ಅನ್ನಿಸುತ್ತದೆ. ಹೀಗಾಗಿ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಬೇಡ ಅಂತ ಗೋವಾಕ್ಕೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ.

  • ಚಿಕಿತ್ಸಾ ವೆಚ್ಚ ಭರಿಸಲಾಗದೆ ಪತ್ನಿಯನ್ನು ಜೀವಂತವಾಗಿ ಸುಟ್ಟ ಪತಿ

    ಚಿಕಿತ್ಸಾ ವೆಚ್ಚ ಭರಿಸಲಾಗದೆ ಪತ್ನಿಯನ್ನು ಜೀವಂತವಾಗಿ ಸುಟ್ಟ ಪತಿ

    ಪಣಜಿ: ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಪತಿಯೋರ್ವ ಅನಾರೋಗ್ಯದಿಂದ ಬಳಸುತ್ತಿದ್ದ ತನ್ನ ಹೆಂಡತಿಯನ್ನು ಜೀವಂತವಾಗಿ ಸುಟ್ಟಿರುವ ಘಟನೆ ಉತ್ತರ ಗೋವಾದಲ್ಲಿ ನಡೆದಿದೆ.

    ಉತ್ತರ ಗೋವಾದ ನಿವಾಸಿ ತುಕಾರಾಮ್ ಶೆಟ್ಗಾಂವ್ಕರ್ (46) ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಹೆಂಡತಿ ತನ್ವಿ (44) ಅವರನ್ನು ನರ್ವೆಸ್ ಗ್ರಾಮದಲ್ಲಿ ನಡೆಯುತ್ತಿರುವ ತಿಲಹರಿ ನೀರಾವರಿ ಯೋಜನೆಯ ನಿರ್ಮಾಣ ಸ್ಥಳದಲ್ಲಿ ಜೀವಂತವಾಗಿ ಸುಟ್ಟು ಹಾಕಿದ್ದಾನೆ.

    ತುಕಾರಾಮ್ ಬುಧವಾರ ತನ್ನ ಪತ್ನಿಯನ್ನು ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಈ ವೇಳೆ ಮಹಿಳೆಯ ಶವವನ್ನು ಕೆಲವು ಕಾರ್ಮಿಕರು ವಶಕ್ಕೆ ಪಡೆದುಕೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಈ ವೇಳೆ ಘಟನ ಸ್ಥಳದಲ್ಲಿ ಕಾರ್ಮಿಕರನ್ನು ಕೆಲಸ ಮಾಡದಂತೆ ತುಕಾರಾಮ್ ಅಡ್ಡಿ ಮಾಡಿದ್ದ ಎಂದು ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ, ಆರೋಪಿ ತುಕಾರಾಮ್ ತನ್ನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಭರಿಸಲಾಗದೆ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿದೆ ಎಂದು ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷಿ ನಾಶ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

  • ಗೋವಾ ರಾಜಕಾರಣದಲ್ಲಿ ಚಮತ್ಕಾರ-ಎಲ್ಲದರಿಂದ ಹೊರ ಬಂದ ಕಾಂಗ್ರೆಸ್

    ಗೋವಾ ರಾಜಕಾರಣದಲ್ಲಿ ಚಮತ್ಕಾರ-ಎಲ್ಲದರಿಂದ ಹೊರ ಬಂದ ಕಾಂಗ್ರೆಸ್

    ಪಣಜಿ: ರಾಜಕೀಯದಲ್ಲಿ ಏನು ಬೇಕಾದರೂ ಎಂಬುದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ರಾಜಕಾರಣ. ಒಂದು ಕಾಲದ ಬದ್ಧವೈರಿಗಳಾಗಿದ್ದ ಶಿವಸೇನೆ ಜೊತೆ ಕಾಂಗ್ರೆಸ್ ಕೈ ಜೋಡಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿತ್ತು. ಮಹಾರಾಷ್ಟ್ರದಲ್ಲಿ ಆದಂತೆ ಗೋವಾ ರಾಜಕಾರಣದಲ್ಲಿಯೂ ಬದಲಾಗಬಹುದು ಎಂಬ ಸುಳಿವನ್ನು ಶಿವಸೇನೆಯ ನಾಯಕ ಸಂಜಯ್ ರಾವತ್ ನೀಡಿದ್ದರು. ಆದ್ರೆ ಶಿವಸೇನೆಗೆ ಹೇಳಿಕೆಗೆ ಪರೋಕ್ಷವಾಗಿ ಟಕ್ಕರ್ ನೀಡಿರುವ ಗೋವಾ ಕಾಂಗ್ರೆಸ್ ನಾವು ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಎಲ್ಲ ಸುದ್ದಿಗಳಿಂದ ಹೊರ ಬಂದಿದೆ.

    ಸಂಜಯ್ ರಾವತ್ ಹೇಳಿದ್ದೇನು? ಗುರುವಾರ ಉದ್ಧವ್ ಠಾಕ್ರೆ ಪ್ರಮಾಣ ವಚನಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಂಜಯ್ ರಾವತ್, ನಾವು ಚದುರಂಗದಲ್ಲಿ ಹೇಗೆ ಕಮಾಲ್ ಮಾಡುತ್ತೇವೆ ಅಂದ್ರೆ ನಮ್ಮ ಸೈನಿಕನೇ ರಾಜನನ್ನು ಹೊಡೆದುರಳಿಸುತ್ತಾನೆ ಎಂದು ಬರೆದುಕೊಂಡಿದ್ದಾರೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ, ಮುಂದಿನ ದಿನಗಳಲ್ಲಿ ವಿರೋಧ ಪಕ್ಷವೇ ಇರಲ್ಲ. ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಫಡ್ನವೀಸ್ ಅವರಿಗೆ ಶುಭಾಶಯಗಳು ಎಂದಿದ್ದರು.

    ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಂಜಯ್ ರಾವತ್, ಗೋವಾ ಫಾರ್ವರ್ಡ್ ಪಕ್ಷದ ಅಧ್ಯಕ್ಷ ಮತ್ತು ಗೋವಾದ ಮಾಜಿ ಡಿಸಿಎಂ ವಿಜಯ್ ಸರ್‍ದೇಸಾಯಿ ತಮ್ಮ ಮೂವರು ಶಾಸಕರೊಂದಿಗೆ ಶಿವಸೇನೆಯ ಮೈತ್ರಿ ಸೇರಲಿದ್ದಾರೆ. ಶೀಘ್ರದಲ್ಲಿಯೇ ಮಹಾರಾಷ್ಟ್ರದಲ್ಲಿ ನಡೆದಂತೆ ಗೋವಾದಲ್ಲಿಯೂ ಹೊಸ ರಾಜಕಾರಣದ ಗಾಳಿ ಬೀಸಲಿದೆ. ಕೆಲವೇ ದಿನಗಳಲ್ಲಿ ನೀವೆಲ್ಲರೂ ಗೋವಾ ರಾಜಕಾರಣದಲ್ಲಾಗುವ ಚಮತ್ಕಾರಕ್ಕೆ ಸಾಕ್ಷಿ ಆಗುತ್ತೀರಿ ಎಂದು ಹೇಳಿದ್ದರು.

    ಸಂಜಯ್ ರಾವತ್ ಹೇಳಿಕೆ ಗೋವಾ ರಾಜಕಾರಣದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಆಡಳಿತದಲ್ಲಿರುವ ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವ ಸವಾಲು ಎದುರಾಗಿತ್ತು. ಕಾಂಗ್ರೆಸ್ ಇತರೆ ಸಣ್ಣ ಪಕ್ಷಗಳ ಬೆಂಬಲ ಪಡೆದು, ಆಪರೇಷನ್ ಹಸ್ತದ ಮೂಲಕ ಸರ್ಕಾರ ರಚನೆ ಮಾಡುತ್ತೆ ಎಂಬಿತ್ಯಾದಿ ರಾಜಕೀಯದ ಹೊಸ ಹೊಸ ಲೆಕ್ಕಾಚಾರ ಮತ್ತು ಸಮೀಕರಣಗಳು ಹರಿದಾಡಿದ್ದವು.

    ಮೈತ್ರಿಯಿಂದ ದೂರ ಸರಿದ ಕಾಂಗ್ರೆಸ್: ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಗೋವಾ ಕಾಂಗ್ರೆಸ್ ಅಧ್ಯಕ್ಷ ಚೋಡನಕರ್, ನಾವು ಕುದುರೆ ವ್ಯಾಪಾರ ನಡೆಸಲ್ಲ. ವಿಪಕ್ಷ ಸ್ಥಾನದಲ್ಲಿಯೇ ಕುಳಿತು ಕೆಲಸ ಮಾಡುತ್ತೇವೆ. 40 ಶಾಸಕರ ಪೈಕಿ 30 ಜನಪ್ರತಿನಿಧಿಗಳು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಸರ್ಕಾರ ರಚಿಸುವ ಸಾಧ್ಯತೆಗಳಿಲ್ಲ. ಸರ್ಕಾರ ಬೀಳಿಸುವದಕ್ಕಿಂತ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂದು ಹೇಳುವ ಮೂಲಕ ಶಿವಸೇನೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

    ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ನೀಡಿರುವ ಕಾಂಗ್ರೆಸ್, ಗೋವಾದಲ್ಲಿ ತದ್ವಿರುದ್ಧವಾಗಿ ನಿಂತಿದೆ. ಗೋವಾದಲ್ಲಿ ಶಿವಸೇನೆಗೆ ಧ್ವಜ ಹಾರಿಸಲು ಮುಂದಾಗಿದ್ದ ಸಂಜಯ್ ರಾವತ್ ಒಂದು ರೀತಿಯ ಹಿನ್ನಡೆ ಆಗಿದೆ ಎಂಬುವುದು ರಾಜಕೀಯ ವಿಮರ್ಶಕರ ಲೆಕ್ಕಾಚಾರ ಆಗಿದೆ.

  • ದೆಹಲಿಯಲ್ಲಿ ಹೃದಯಾಘಾತ – ಗೋವಾ ಡಿಜಿಪಿ ನಿಧನ

    ದೆಹಲಿಯಲ್ಲಿ ಹೃದಯಾಘಾತ – ಗೋವಾ ಡಿಜಿಪಿ ನಿಧನ

    ನವದೆಹಲಿ: ಗೋವಾ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪ್ರಣಬ್ ನಂದ ಅವರು ದೆಹಲಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    1988ರ ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಇತರ ಕೇಂದ್ರಾಡಳಿತ ಪ್ರದೇಶ ಕೇಡರಿನ ಐಪಿಎಸ್ ಅಧಿಕಾರಿಯಾಗಿದ್ದ ಪ್ರಣಬ್ ನಂದ ಅವರು ದೀರ್ಘಕಾಲ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇಂದು ಕಚೇರಿ ಕೆಲಸದ ಸಂಬಂಧ ದೆಹಲಿಗೆ ಆಗಮಿಸಿದ್ದ ವೇಳೆ ಹೃದಯಘಾತದಿಂದ ಮೃತಪಟ್ಟಿದ್ದಾರೆ.

    ಪೊಲೀಸ್ ಅಧಿಕಾರಿಯಾಗಿದ್ದರೂ ಅವರು ಉತ್ತಮ ಹಾಡುಗಾರರಾಗಿದ್ದರು ಮತ್ತು ಜ್ಯೋತಿಷ್ಯ ಹೇಳುತ್ತಿದ್ದರು. ಅದಕ್ಕಿಂತಲೂ ಮುಖ್ಯವಾಗಿ ಗುಪ್ತಚರ ಇಲಾಖೆಯಲ್ಲಿದ್ದಾಗ ಗುಪ್ತ ಮಾಹಿತಿ ಪಡೆಯುವ ವಿಶೇಷ ಕೌಶಲ್ಯವನ್ನು ಹೊಂದಿದ್ದರು.

    ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನಂದ ಅವರು ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. ಇವರ ಪತ್ನಿ ಸುಂದರಿ ನಂದ ದೆಹಲಿ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    2001ರಲ್ಲಿ ದೆಹಲಿಯ ಡಿಸಿಪಿಯಾಗಿದ್ದ ನಂದ ಅವರನ್ನು ಡೆಪ್ಯುಟೆಶನ್ ಮೇಲೆ ಗುಪ್ತಚರ ಇಲಾಖೆಗೆ ಕಳುಹಿಸಲಾಗಿತ್ತು. 18 ವರ್ಷಗಳ ಕಾಲ ಗುಪ್ತಚರ ಇಲಾಖೆಯಲ್ಲಿದ್ದ ಇವರು ಈ ವರ್ಷ ಗೋವಾ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದರು.

    ನಂದ ಅವರು ಡಿಜಿಪಿ ಆಗಿದ್ದಾಗ ಈಶಾನ್ಯ ಭಾರತದ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಬಂಡುಕೋರರ ಕಾಟ ಮೀತಿ ಮೀರಿತ್ತು. ಈ ಸಂದರ್ಭದಲ್ಲಿ ನಂದ ಅವರೇ ಮುಖ್ಯ ಪಾತ್ರವಹಿಸಿ ಈ ಬಂಡುಕೋರರನ್ನು ಸಮಾಜಕ್ಕೆ ಕರೆ ತರುವ ಪ್ರಯತ್ನ ನಡೆಸಿ ಹಲವಾರು ಮಂದಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದರು.

    ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಭಾರತದ ರಾಯಭಾರ ಕಚೇರಿಯಲ್ಲೂ ನಂದ ಅವರು ಸೇವೆ ಸಲ್ಲಿಸಿದ್ದರು. 2008ರಲ್ಲಿ ಕಾಬೂಲಿನ ಜರ್ಮನ್ ರಾಯಭಾರ ಕಚೇರಿ ಬಳಿ ಆತ್ಮಹುತಿ ದಾಳಿಯಾದಾಗ ಅಫ್ಘಾನಿಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರನ್ನು ನಂದ ಅವರು ರಕ್ಷಣೆ ಮಾಡಿದ್ದರು.