Tag: goa election 2022

  • ಗೋವಾಗೂ ಎಂಟ್ರಿ ಕೊಟ್ಟ AAP

    ಗೋವಾಗೂ ಎಂಟ್ರಿ ಕೊಟ್ಟ AAP

    ಪಣಜಿ: ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ ಸಜ್ಜಾಗಿರುವ ಆಮ್‌ ಆದ್ಮಿ ಪಕ್ಷ (AAP) ದಕ್ಷಿಣ ಗೋವಾದ ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಗೋವಾ ವಿಧಾನಸಭೆಗೆ ಎಂಟ್ರಿ ಕೊಟ್ಟಿದೆ.

    ಎಎಪಿ 2017ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ಸ್ಪರ್ಧಿಸಿದಾಗ ಒಂದು ಸ್ಥಾನವನ್ನೂ ಗೆದ್ದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ವೆಲಿಮ್‌ ಮತ್ತು ಬೆನೌಲಿಮ್‌ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. ಇದನ್ನೂ ಓದಿ: ಮನೋಹರ್ ಪರಿಕ್ಕರ್ ಅಣ್ಣ ನಗುತ್ತಿರಬಹುದು- ಗೋವಾ ಸಿಎಂ ಪತ್ನಿ

    ಬೆನೌಲಿಮ್‌ನಲ್ಲಿ ಎಎಪಿ ಅಭ್ಯರ್ಥಿ ವೆಂಜಿ ವಿಗಾಸ್‌ ಅವರು ತೃಣಮೂಲ ಕಾಂಗ್ರೆಸ್‌ನ ಚರ್ಚಿಲ್ ಅಲೆಮಾವೊ ವಿರುದ್ಧ 1,271 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವೆಲಿಮ್‌ ಕ್ಷೇತ್ರದಲ್ಲಿ ಕ್ರೂಜ್ ಸಿಲ್ವಾ ಅವರು ಕಾಂಗ್ರೆಸ್‌ನ ಸವಿಯೋ ಡಿಸಿಲ್ವಾ ವಿರುದ್ಧ 169 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

    ಇಬ್ಬರೂ ಅಭ್ಯರ್ಥಿಗಳಿಗೆ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣ ಆರಂಭವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

    ಮಾಪುಸಾದಿಂದ ಸ್ಪರ್ಧಿಸಿದ್ದ ಎಎಪಿ ಅಭ್ಯರ್ಥಿ ಮಾಂಬ್ರೆ, ಸೇಂಟ್‌ ಕ್ರೂಜ್‌ನಿಂದ ಸ್ಪರ್ಧಿಸಿದ್ದ ಅಮಿತ್‌ ಪಾಲೇಕರ್‌ ಮತ್ತು ವಕೀಲೆ ಪ್ರತಿಮಾ ಕೌಟಿನೋ ಸೇರಿದಂತೆ ಎಎಪಿ ಇತರೆ ಪ್ರಮುಖ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.

  • ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೋವಾ ಮಾಜಿ ಸಿಎಂ ಪುತ್ರ ಸೋಲು

    ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಗೋವಾ ಮಾಜಿ ಸಿಎಂ ಪುತ್ರ ಸೋಲು

    ಪಣಜಿ: ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಪಣಜಿ ಕ್ಷೇತ್ರದಲ್ಲಿ ಪಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್‌ ಪರಿಕ್ಕರ್‌ ಪುತ್ರ ಉತ್ಪಲ್‌ ಪರಿಕ್ಕರ್‌, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.

    ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರೇಟ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ಆದರೆ ಗೆಲುವಿನ ಅಂತರದ ಬಗ್ಗೆ ಅವರು ಬೇಸರಗೊಂಡಿದ್ದಾರೆ. ಬಿಜೆಪಿ ಬೆಂಬಲಿತರೇ ತಮಗೆ ಮತ ಹಾಕಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಸೋಲು: ಇವಿಎಂ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

    ಬಿಜೆಪಿ ಬೆಂಬಲಿತರೇ ನನಗೆ ಮತ ಹಾಕಿಲ್ಲ. ಇದನ್ನು ಬಿಜೆಪಿ ನಾಯಕರಿಗೆ ಹೇಳಿದ್ದೇನೆ. ಭವಿಷ್ಯದಲ್ಲಿ ಅವರು ಈ ಬಗ್ಗೆ ಗಮನಹರಿಸಬೇಕು. ರಾಜ್ಯ ಬಿಜೆಪಿ ಘಟಕ ಜನರಿಗೆ ಸರಿಯಾದ ಸಂದೇಶ ನೀಡಿಲ್ಲ. ನಾನು ಎಲ್ಲಾ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಬಿಜೆಪಿಯೊಂದಿಗಿದ್ದೇನೆ ಎಂದು ತಿಳಿಸಿದ್ದಾರೆ.

    ಪಣಜಿ ಕ್ಷೇತ್ರದಲ್ಲಿ ತನಗೆ ಟಿಕೆಟ್‌ ನೀಡದೇ ಮಾನ್ಸೆರೇಟ್‌ ಅವರನ್ನು ಕಣಕ್ಕಿಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಉತ್ಪಲ್‌ ಪರಿಕ್ಕರ್‌ ಅವರು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಮೂರು ಬಾರಿ ಗೋವಾದ ಸಿಎಂ ಆಗಿದ್ದ ಮನೋಹರ್‌ ಪರಿಕ್ಕರ್‌ ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019ರಲ್ಲಿ ಅವರ ಮರಣ ನಂತರ ನಡೆದ ಉಪಚುನಾವಣೆಯಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಪ್ರತಿಸ್ಪರ್ಧಿ ಮಾನ್ಸೆರೇಟ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. ನಂತರ ಅವರು ಬಿಜೆಪಿ ಸೇರಿದ್ದರು.