Tag: Go Pooja

  • ದೀಪಾವಳಿ| ಕರಾವಳಿಯಲ್ಲಿ ಗೋಪೂಜೆ ಮಹತ್ವ ಏನು?

    ದೀಪಾವಳಿ| ಕರಾವಳಿಯಲ್ಲಿ ಗೋಪೂಜೆ ಮಹತ್ವ ಏನು?

    ಗೋವನ್ನು ಮಾತೆಯೆಂದು ನಾವೆಲ್ಲರೂ ಪೂಜಿಸುತ್ತೇವೆ. ಬಲಿಪಾಡ್ಯಮಿಯಂದು ಗೋಪೂಜೆಯನ್ನು ಮಾಡಲಾಗುತ್ತದೆ. ಹಿಂದೆ ಹಳ್ಳಿಗಳಲ್ಲಿ ದುಡಿಮೆಯ ಅವಿಭಾಜ್ಯ ಅಂಗವಾಗಿರುವ ಕೃಷಿಗೆ ಜಾನುವಾರುಗಳೇ ಆಧಾರವಾಗಿದ್ದವು. ಎತ್ತು, ಕೋಣಗಳನ್ನು ಗದ್ದೆ ಉಳುಮೆ ಮಾಡಲು ಬಳಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಹೆಚ್ಚಿನ ಕಡೆ ಗದ್ದೆಯನ್ನು ಕೋಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ.

    ದೀಪಾವಳಿ (Diwali) ಸಮಯದಲ್ಲಿ ಮೂರು ದಿನ ಕೃಷಿ ಕೆಲಸಕ್ಕೆ ವಿರಾಮ ಎಂಬುದು ತುಳುನಾಡಿನ ಜನರ ನಿಯಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಪೂಜೆ ಮತ್ತು ಗದ್ದೆಗಳಿಗೆ ದೀಪ ಇಡುವ ಕ್ರಮ ಬಲಿಪಾಡ್ಯಯಂದೇ ನಡೆಯುತ್ತದೆ. ಬೆಳಗ್ಗೆ ಗೋಪೂಜೆ ಮಾಡಿ ಸಂಜೆ ಗದ್ದೆಗಳಿಗೆ ದೀಪ ಇಟ್ಟು, ರಾತ್ರಿ ಜಾನುವಾರುಗಳಿಗೆ ‘ತುಡಾರ್’, (ದೀಪ) ತೋರಿಸುವ ಕ್ರಮ ಹಿಂದಿನಿಂದಲೂ ನಡೆದು ಬಂದಿದೆ.

    ಗೋಪೂಜೆ ದಿನ ಬೆಳಗ್ಗೆ ಗೋವುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ ಸ್ವಚ್ಛಗೊಳಿಸುತ್ತಾರೆ. ಕೋಣಗಳಿಗಾದರೆ ಅವುಗಳ ಮೈ ಪೂರ್ತಿ ತೆಂಗಿನ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿಸುತ್ತಾರೆ. ಬಳಿಕ ಶೃಂಗಾರ ಮಾಡಲಾಗುತ್ತದೆ. ಸಂಜೆಯ ವೇಳೆ ಗದ್ದೆಗಳಿಗೆ ದೀಪ ಇರಿಸಿದ ಬಳಿಕ ತುಡಾರ್ ತೋರಿಸಿ ತಲೆಗೆ ತೆಂಗಿನ ಎಣ್ಣೆ ಹಾಕಿ ಕುಂಕುಮ ಹಚ್ಚಿ ಪ್ರಾರ್ಥಿಸಲಾಗುತ್ತದೆ. ರಾತ್ರಿ ಜಾನುವಾರುಗಳಿಗೆ ಕೊರಳಿಗೆ ಹೂವಿನ ಹಾರ ಹಾಕಿ, ಸಣ್ಣ ಕರುಗಳಿಗೆ ನಾಮಕರಣವನ್ನು ಈ ದಿನ ಮಾಡುತ್ತಾರೆ. ಇದಾದ ಬಳಿಕ ರಾತ್ರಿ ಮನೆಮಂದಿಯೆಲ್ಲ ಸೇರಿ ಅಕ್ಕಿಯಿಂದ ತಯಾರಿಸಿದ ಉದ್ದಿನ ದೋಸೆಯನ್ನು ಜಾನುವಾರುಗಳಿಗೆ ನೀಡಲಾಗುತ್ತದೆ. ಮರುದಿನ ಬೆಳಗ್ಗೆ ಕೂಡ ಸಿಹಿ ನೀಡಿ ವಿಶೇಷವಾದ ಅಕ್ಕಿ ಗಂಜಿಯನ್ನು ಎಲ್ಲ ಜಾನು ವಾರುಗಳಿಗೆ ನೀಡಲಾಗುತ್ತದೆ. ಈ ಮೂಲಕ ಕರಾವಳಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆಯು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗುತ್ತವೆ.

    ದೀಪಾವಳಿಯಂದು ಕೃಷ್ಣನು ನರಕಾಸುರನ ವಧೆ ಮಾಡಿದ ಮತ್ತು ಬಲಿಯನ್ನು ಉದ್ಧರಿಸಿದ ಕಾರಣ ವಿಷ್ಣು ಪೂಜೆ, ಬಲೀಂದ್ರ ಪೂಜೆ, ಧನದ ದೇವನಾದ ಕುಬೇರನ ಪೂಜೆ, ಯಮನ ಪೂಜೆ, ಗೋಪೂಜೆ, ಮಹಾಲಕ್ಷ್ಮೀ ಪೂಜೆ, ಮಹಾದೇವನ ಪೂಜೆ ಮಾಡಲಾಗುತ್ತದೆ. ಯಾಕೆಂದರೆ ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಮಾಡಲಾಗುತ್ತದೆ.

  • ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?

    ದೀಪಾವಳಿಯಲ್ಲಿ ಗೋಪೂಜೆಯ ಮಹತ್ವವೇನು?

    ದೀಪಾವಳಿ (Deepavali) ಎಂದರೆ ದೀಪಗಳ ಹಬ್ಬ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ದೀಪಾವಳಿಯ ಬಲಿಪಾಡ್ಯಮಿಯಂದು ಗೋವುಗಳಿಗೆ ಪೂಜೆಯನ್ನೂ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗೋಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಶಾಸ್ತ್ರೋಕ್ತ ಪೂಜೆ ಮಾಡಿ, ತಿಂಡಿ- ತಿನಿಸುಗಳನ್ನು ನೀಡುವ ಸಂಪ್ರದಾಯವು ಈಗಲೂ ಇದೆ. ನಾವು ಆಚರಿಸುವ ಪ್ರತಿಯೊಂದು ಸಂಪ್ರದಾಯಕ್ಕೂ ಒಂದೊಂದು ಹಿನ್ನೆಲೆ ಇರುವಂತೆ ದೀಪಾವಳಿಯ ಸಮಯದಲ್ಲಿನ ಗೋ ಆರಾಧನೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ.

    ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ಪೂಜೆ, ಗೋ ಪೂಜೆ (Go Pooja) ಇವುಗಳನ್ನು ಮಾಡಲಾಗುವುದು. ಯಾಕೆಂದರೆ ಬಲಿಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು. ಅದಕ್ಕೆ ಪೂಜೆಗಳನ್ನು, ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

    ಕೃಷ್ಣ ನಂದಗೋಕುಲದಲ್ಲಿದ್ದಾಗ ಅಲ್ಲಿದ್ದ ಗೋಪ, ಗೋಪಿಯರು ಪ್ರತಿವರ್ಷ ಮಳೆ ಬರಲಿ ಎಂದು ಎಲ್ಲರು ಇಂದ್ರದೇವನ ಪೂಜೆಯನ್ನು ಮಾಡುತ್ತಿದ್ದರು. ಇದರಿಂದಾಗಿ ಇಂದ್ರನಿಗೆ ನಾನು ಮಳೆ ಬರಿಸುವುದರಿಂದಲೇ ಪ್ರಪಂಚದಲ್ಲಿ ಎಲ್ಲವೂ ನಡೆಯುತ್ತಿದೆ ಎಂದು ಗರ್ವದಿಂದ ಬೀಗಿದ. ಇಂದ್ರ ತಾನು, ತನ್ನಿಂದ ಎಂದು ಗರ್ವದಲ್ಲಿ ಬೀಗುತ್ತಿರುವ ವಿಚಾರ ಕೃಷ್ಣನಿಗೆ ತಿಳಿಯುತ್ತದೆ. ಈ ಕಾರಣಕ್ಕೆ ಈತನ ಗರ್ವ ಇಳಿಸಲು ಇಂದ್ರನಿಗೆ ಪೂಜೆ ಮಾಡದೇ ಗೋವರ್ಧನ ಪರ್ವತಕ್ಕೆ ಪೂಜೆ ಮಾಡಬೇಕೆಂದು ಗೋಪಾಲಕರಿಗೆ ಸೂಚಿಸಿದ. ನಮಗೆ ಮಳೆ ಗೋವರ್ಧನ ಪರ್ವತದಿಂದ ಬರುತ್ತಿದೆ, ಅದಕ್ಕಾಗಿ ನಾವು ಇನ್ನು ಮುಂದೆ ಗೋವರ್ಧನ ಪರ್ವತವನ್ನು ಪೂಜೆ ಮಾಡಬೇಕೇ ವಿನಾಃ ಇಂದ್ರದೇವನ ಪೂಜೆ ಮಾಡುವುದು ಬೇಡ ಎಂದು ಸೂಚಿಸಿದ. ಇದನ್ನೂ ಓದಿ: ನರಕ ಚತುರ್ದಶಿ ಏಕೆ ಆಚರಿಸ್ತಾರೆ?

    ಕೃಷ್ಣನ ಸೂಚನೆಯ ಹಿನ್ನೆಲೆಯಲ್ಲಿ ಗೋವರ್ಧನ ಪರ್ವತದ ಪೂಜೆ ಮಾಡಲು ಶುರು ಮಾಡಿದರು. ನನಗೆ ಪೂಜೆ ಮಾಡುವುದನ್ನು ಬಿಟ್ಟು ಗೋವರ್ಧನ ಪರ್ವತಕ್ಕೆ ಪೂಜೆ ಮಾಡುವುದನ್ನು ನೋಡಿ ಇಂದ್ರನಿಗೆ ಕೋಪ ಬಂತು. ಗೋಪಾಲರಿಗೆ ಪಾಠ ಕಲಿಸಲು ಇಂದ್ರನು ತುಂಬಾ ರಭಸವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸಿದನು. ಇದರಿಂದಾಗಿ ನದಿಯು ತುಂಬಿ ಹರಿಯಲಾರಂಭಿಸಿತು. ಎಲ್ಲ ಜನರು ಗಾಬರಿಯಿಂದ ಶ್ರೀಕೃಷ್ಣನ ಬಳಿಗೆ ಸಹಾಯ ಕೇಳಲು ಓಡಿದರು.

    ಆಗ ಶ್ರೀಕೃಷ್ಣನು, ನೀವು ಯಾರು ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಒಟ್ಟು ಸೇರೋಣ. ನಾವು ಪೂಜಿಸಿದ ಗೋವರ್ಧನ ಪರ್ವತವೇ ನಮ್ಮನ್ನು ರಕ್ಷಿಸುತ್ತದೆ ಎಂದು ಅಭಯವನ್ನು ಇತ್ತ. ಎಲ್ಲ ಜನ ಸೇರಿದ ನಂತರ ಕೃಷ್ಣ ತನ್ನ ಕಿರು ಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗ್ರಾಮಸ್ಥರನ್ನು ರಕ್ಷಿಸಿದ. ಬಲಿ ಪಾಡ್ಯಮಿಯಂದು ಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿದ ಹಿನ್ನೆಲೆಯಲ್ಲಿ ಈ ದಿನ ಈಗಲೂ ಗೋವುಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ.

    ಹೆಚ್ಚಿನ ಕಡೆಗಳಲ್ಲಿ ಆ ದಿನದಂದು ಹಸುವಿನ ಹಾಲನ್ನೂ ಕರೆಯಬಾರದೆಂಬ ಪ್ರತೀತಿ ಇದೆ. ಕರುಗಳು ಬೇಕಾದಷ್ಟು ಹಾಲು ಕುಡಿದು ಸಂತೋಷವಾಗಿರಬೇಕೆಂಬುದು ಇದರ ಉದ್ದೇಶ. ಸರ್ವಸಮೃದ್ಧಿಯುಂಟಾಗಿ, ಧನಕನಕಗಳು ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ. ಒಟ್ಟಾರೆ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಸಂಭ್ರಮದಲ್ಲಿ ಗೋ ಪೂಜೆ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಇದು ಭೂಲೋಕದ ಕಾಮಧೇನುವಿಗೆ ನೀಡಿದ ಮಹತ್ವವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

  • ಹಿಂದೂ ಜಪ ಆರಂಭಿಸಿದ ಪರಮೇಶ್ವರ್ – ಗೋ ಪೂಜೆ, ಧರ್ಮಗೋಷ್ಠಿ ಆಯೋಜನೆ

    ಹಿಂದೂ ಜಪ ಆರಂಭಿಸಿದ ಪರಮೇಶ್ವರ್ – ಗೋ ಪೂಜೆ, ಧರ್ಮಗೋಷ್ಠಿ ಆಯೋಜನೆ

    ತುಮಕೂರು: ಚುನಾವಣೆ ಸಮೀಪಿಸುತಿದ್ದಂತೆ ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಹಿಂದೂ (Hindu) ಧರ್ಮದ ಜಪ ಮಾಡುತ್ತಿದ್ದಾರೆ. ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಲುಕೆರೆ ಅಟವಿ ಮಠದಲ್ಲಿ ಧರ್ಮಗೋಷ್ಠಿ ಮತ್ತು ಗೋ ಪೂಜೆ (Go Pooja) ಆಯೋಜನೆ ಮಾಡಿದ್ದಾರೆ.

    ಈ ವೇಳೆ ಧರ್ಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿ.ಪರಮೇಶ್ವರ್, ಹಿಂದೂ ಧರ್ಮ ಬಹಳ ಶ್ರೇಷ್ಠವಾದ ಧರ್ಮ, ಹಿಂದೂ ಧರ್ಮದ ಬದ್ಧತೆಗಳು, ಹಿಂದೂ ಧರ್ಮ ಕೊಟ್ಟ ಅನೇಕ ವಿಚಾರಧಾರೆಗಳನ್ನು ಚರ್ಚೆ ಮಾಡಿ ಸಮಾಜಕ್ಕೆ ಇನ್ನೊಮ್ಮೆ ತಿಳಿಸುವ ಅವಶ್ಯಕತೆ ಇದೆ ಹೀಗಾಗಿ ಧರ್ಮಗೋಷ್ಠಿ ಆಯೋಜನೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ 108 ಅಂಬುಲೆನ್ಸ್ ನೌಕರರ ಹೋರಾಟದ ಎಚ್ಚರಿಕೆ

    ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಬಗ್ಗೆ ಗೊಂದಲ ಎದ್ದಿದೆ. ಈ ಧರ್ಮ ಸಭೆಯಲ್ಲಿ ಅದಕ್ಕೆ ಸ್ಪಷ್ಟೀಕರಣ ಸಿಗಲಿದೆ ಎಂದಿದ್ದು, ಗೋ ಪೂಜೆಯ ಮಹತ್ವವನ್ನೂ ಸಾರಿದ್ದಾರೆ. ಗೋ ಪೂಜೆ ಅನ್ನೋದು ಹಿಂದೂ ಧರ್ಮದಲ್ಲಿ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮ. ಗೋ ಪೂಜೆ ಮಾಡೋದ್ರಿಂದ ನಾವು 33 ಕೋಟಿ ದೇವರುಗಳಿಗೆ ತಲುಪುತ್ತೇವೆ. ಹಾಗಾಗಿ ನಾವು ಇವತ್ತು ಗೋ ಪೂಜೆ ಮಾಡಿ ಆ ಶ್ರೇಷ್ಠತೆಯನ್ನು ಗಳಿಸಿಕೊಳ್ಳಬೇಕು. ಅದರಿಂದ ಸಮಾಜಕ್ಕೆ, ಮನುಕುಲಕ್ಕೆ ಒಳ್ಳೆದಾಗಬೇಕು ಎಂದಿದ್ದಾರೆ. ಗೋ ಹತ್ಯೆ ನಿಷೇಧ ಕಾನೂನು ವಿರೋಧಿಸುವ ಪಕ್ಷದ ನಾಯಕ ಗೋ ಪೂಜೆಗೆ ಬೆಂಬಲ ಸೂಚಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ವಿಕೃತಕಾಮಿ ಉಮೇಶ್‌ ರೆಡ್ಡಿಗೆ ರಿಲೀಫ್‌ – ಸುಪ್ರೀಂನಿಂದ ಗಲ್ಲು ಶಿಕ್ಷೆ ರದ್ದು

    Live Tv
    [brid partner=56869869 player=32851 video=960834 autoplay=true]