Tag: Global Goalkeeper Award

  • ಮೋದಿಗೆ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದ ಬಿಲ್‍ಗೇಟ್ಸ್

    ಮೋದಿಗೆ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ ನೀಡಿ ಗೌರವಿಸಿದ ಬಿಲ್‍ಗೇಟ್ಸ್

    – ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಮನ್ನಣೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಕೂಸು ಸ್ವಚ್ಛ ಭಾರತ ಅಭಿಯಾನಕ್ಕೆ ವಿಶ್ವಮನ್ನಣೆ ದೊರಕಿದ್ದು, ಅಮೆರಿಕ ಪ್ರವಾಸದಲ್ಲಿರುವ ಮೋದಿ ಅವರಿಗೆ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ‘ಗ್ಲೋಬಲ್ ಗೋಲ್‍ಕೀಪರ್’ ಪ್ರಶಸ್ತಿ (ಜಾಗತಿಕ ಗುರಿ ಸಾಧಕ ಪ್ರಶಸ್ತಿ) ಪ್ರದಾನ ಮಾಡಿ ಗೌರವಿಸಿದೆ.

    ನ್ಯೂಯಾರ್ಕ್‌ನಲ್ಲಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮೋದಿ ಅವರಿಗೆ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ರೂವಾರಿಯಾದ ಪ್ರಧಾನಿಗೆ ಪ್ರತಿಷ್ಠಿತ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ಒಲಿದಿದೆ.

    ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಈ ಅಭಿಯಾನದಿಂದ 3 ಲಕ್ಷಕ್ಕೂ ಅಧಿಕ ಮಂದಿ ಕಾಯಿಲೆಗಳಿಂದ ದೂರ ಉಳಿದಿದ್ದಾರೆ. ಹಿಂದೆಂದೂ ಈ ರೀತಿ ಅಭಿಯಾನ ನಡೆದಿರಲಿಲ್ಲ ಎಂದಿದೆ. ಗಾಂಧೀಜಿ ಅವರ 150ನೇ ಜನ್ಮದಿನೋತ್ಸವದ ಸಂದರ್ಭದಲ್ಲೇ ಗೇಟ್ಸ್ ಫೌಂಡೇಶನ್ ನನಗೆ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿ ನೀಡಿದೆ. 130 ಕೋಟಿ ಜನರು ಪ್ರತಿಜ್ಞೆ ಮಾಡಿದಾಗ, ಯಾವುದೇ ಸವಾಲನ್ನೂ ಕೂಡ ಎದುರಿಸಬಹುದು ಎಂದು ಮೋದಿ ಟ್ವೀಟ್ ಮಾಡಿ ಖುಷಿಯನ್ನ ಹಂಚಿಕೊಂಡಿದ್ದಾರೆ.

    ಗೇಟ್ಸ್ ಫೌಂಡೇಷನ್‍ನಿಂದ ನನಗೆ ನೀಡಿರುವ ಗ್ಲೋಬಲ್ ಗೋಲ್‍ಕೀಪರ್ ಪ್ರಶಸ್ತಿಯನ್ನು ನಾನು ದೇಶದ 130 ಕೋಟಿ ಜನತೆಗೆ ಅರ್ಪಿಸುತ್ತಿದ್ದೇನೆ. ದೇಶದ ಜನತೆ ಒಗ್ಗಟ್ಟಿನಿಂದ ಸ್ವಚ್ಛ ಭಾರತ ಅಭಿಯಾನದಡಿ ಕೆಲಸ ಮಾಡಿ ಭಾರತವನ್ನು ಸ್ವಚ್ಛಗೊಳಿಸಲು ಸಹಕರಿಸಿದ್ದಾರೆ. ನೈರ್ಮಲ್ಯ ದೂರ ಮಾಡುವಲ್ಲಿ ಇಂದು ಭಾರತ ಯಶಸ್ವಿಯಾಗಿದೆ. ಇದರಿಂದ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಸಹಾಯವಾಗಿದೆ ಎನ್ನುವುದು ನನಗೆ ತುಂಬ ಸಂತೋಷ ತಂದಿದೆ ಎಂದು ಮೋದಿ ಹೇಳಿದ್ದಾರೆ.

    2014ರಲ್ಲಿ ಮೋದಿ ಅವರು ಗಾಂಧೀಜಿ ಹುಟ್ಟಿದ ದಿನವಾದ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಗೊಳಿಸಿದ್ದರು. ಈ ಅಭಿಯಾನಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವತಃ ನರೇಂದ್ರ ಮೋದಿ ಅವರೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಜಾಗೃತಿ ಮೂಡಿಸಿ, ದೇಶದ ಜನತೆಯ ಗಮನ ಸೆಳೆದಿದ್ದರು. ಇದೀಗ ಈ ಸ್ವಚ್ಛ ಭಾರತ ಅಭಿಯಾನ ಕೇವಲ ಭಾರತವಷ್ಟೇ ಅಲ್ಲದೆ ವಿಶ್ವದ ಗಮನ ಸೆಳೆದಿದೆ. ದೇಶವನ್ನು ಸ್ವಚ್ಛಗೊಳಿಸಲು ಆರಂಭವಾದ ಅಭಿಯಾನಕ್ಕೆ ಈಗ ವಿಶ್ವ ಮನ್ನಣೆ ದೊರಕಿರುವುದು ದೇಶಕ್ಕೆ ಹೆಮ್ಮೆ ತಂದಿದೆ.