Tag: glass house

  • 6 ಕೋಟಿ ವೆಚ್ಚದ ಗಾಜಿನ ಮನೆ ಕೆರೆಯಪಾಲು

    6 ಕೋಟಿ ವೆಚ್ಚದ ಗಾಜಿನ ಮನೆ ಕೆರೆಯಪಾಲು

    – ಕೆರೆಯಂಗಳದಲ್ಲಿ ಕಾಂಪೌಂಡ್‍ಗಾಗಿ ಸರಿಸುಮಾರು 3 ಕೋಟಿ ಖರ್ಚು

    ಚಿಕ್ಕಬಳ್ಳಾಪುರ: ಅಮಾನಿ ಗೋಪಾಲಕೃಷ್ಣ ಕೆರೆಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದ್ದು, ಜಿಲ್ಲಾಡಳಿತದಿಂದ ಸರಿಸುಮಾರು 6 ಕೋಟಿ ರೂಪಾಯಿ ಖರ್ಚು ಮಾಡಿ ಕೆರೆಯಂಗಳದಲ್ಲಿ ಕಟ್ಟಲಾಗಿದ್ದ ಗಾಜಿನ ಮನೆ ಈಗ ಕೆರೆಯಪಾಲಾಗಿದೆ.

    ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಐದಾರು ವರ್ಷಗಳ ಹಿಂದೆ 3 ಕೋಟಿ ಖರ್ಚು ಮಾಡಿ ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನದಲ್ಲಿನ ಗಾಜಿನ ಮನೆ ಮಾದರಿಯಲ್ಲೇ ಇಲ್ಲೂ ಸಹ ಗಾಜಿನ ಮನೆ ನಿರ್ಮಾಣ ಮಾಡಲಾಗಿತ್ತು. ಗಾಜಿನ ಮನೆ ಸುತ್ತ ಕೆರೆಯಂಗಳದಲ್ಲಿ ಕಾಂಪೌಂಡ್ ಹಾಗೂ ಮುಖ್ಯ ಪ್ರವೇಶ ದ್ವಾರ, ಗಾಜಿನ ಮನೆ ಕಾವಲುಗಾರರಿಗೆ ಮನೆ ಸೇರಿದಂತೆ ಬೊಟಾನಿಕಲ್ ಗಾರ್ಡನ್ ಮಾಡುವ ಉದ್ದೇಶದಿಂದ ಕೊಳವೆಬಾವಿಗಳನ್ನ ಕೊರೆಸಲು ಸರಿಸುಮಾರು 3 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿತ್ತು. ಇದನ್ನೂ ಓದಿ:  ಕುಮಾರಸ್ವಾಮಿಯನ್ನು ಆನೆಯನ್ನಾಗಿ ಮಾಡಿದ್ದು ನಾವು: ಜಮೀರ್

    ಆದರೆ ಈಗ ಭಾರೀ ಮಳೆಯಿಂದ ಅಮಾನಿ ಗೋಪಾಲಕೃಷ್ಣ ಕೆರೆಗೆ ಕಂದವಾರ ಕೆರೆಯಿಂದ ಭರಪೂರ ನೀರು ಹರಿದುಬರ್ತಿದ್ದು, ಗಾಜಿನ ಮನೆ ಕೆರೆಯಪಾಲಾಗಿದೆ. ಈ ಹಿಂದೆಯೇ ಕೆರೆಯಂಗಳದಲ್ಲಿ ಗಾಜಿನ ಮನೆ ನಿರ್ಮಾಣ ವಿರೋಧಿಸಿ, ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದು, ಗಾಜಿನ ಮನೆ ತೆರವು ಮಾಡಲು ಲೋಕಾಯುಕ್ತ ಸಂಸ್ಥೆ ಜಿಲ್ಲಾಡಳಿತಕ್ಕೆ ಆದೇಶ ಮಾಡಿದೆ ಎನ್ನಲಾಗಿದ್ದು, ಗಾಜಿನ ಮನೆ ಮಾತ್ರ ತೆರವಾಗಿಲ್ಲ. ಆದರೆ ಜನರ ತೆರಿಗೆಯ 6 ಕೋಟಿ ಹಣ ಮಾತ್ರ ಈಗ ಕೆರೆಯ ನೀರಲ್ಲಿ ಹೋಮ ಮಾಡಿದಂತಾಗಿದೆ. ಇದನ್ನೂ ಓದಿ: ಕೈಲಾಗದವನು ಮೈ ಪರಚಿಕೊಂಡ ಹಾಗೆ, ಜಮೀರ್ ಸ್ಥಿತಿ: ಹೆಚ್‍ಡಿಕೆ ಲೇವಡಿ 

  • ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಅಧಿಕಾರಿಗಳ ಎಡವಟ್ಟು – ಕೋಟ್ಯಂತರ ರೂ. ಖರ್ಚು ಮಾಡಿ ಕೆರೆಯಲ್ಲೇ ಗಾಜಿನ ಮನೆ ನಿರ್ಮಾಣ

    ಚಿಕ್ಕಬಳ್ಳಾಪುರ: ನಗರ ಹೊರವಲಯ ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ನಿರ್ಮಾಣ ಮಾಡಿರುವ ನೂತನ ಗಾಜಿನ ಮನೆ ತೆರವುಗೊಳಿಸಿ, ಕೆರೆಯ ಮೂಲ ಸ್ವರೂಪ ಮರುಸೃಷ್ಟಿ ಮಾಡುವಂತೆ ಲೋಕಾಯುಕ್ತ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಆದೇಶಿಸಿದೆ.

    ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ, ಒಂದಲ್ಲ ಎರಡಲ್ಲ ಅಂತ ಸರಿ ಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೆರೆಯಂಗಳದಲ್ಲೇ 70 ಎಕೆರೆ ಪ್ರದೇಶಕ್ಕೆ ಕಾಂಪೌಂಡ್ ಹಾಕಿ, ಅದರೊಳಗೆ ಗಾಜಿನ ಮನೆ, ಉದ್ಯಾನವನ ಎಂದು ಗಿಡ ನೆಟ್ಟು ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದೆ.

    70 ಎಕೆರೆ ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾಡಳಿತದ ಅನುದಾನದಿಂದ ಮೂರೂವರೆ ಕೋಟಿ ಖರ್ಚು ಮಾಡಿ ಸುಸಜ್ಜಿತ ಗಾಜಿನ ಮನೆ ನಿರ್ಮಾಣವಾಗಿದ್ದು, ತೋಟಗಾರಿಕಾ ಇಲಾಖೆ ವತಿಯಿಂದ ಸರಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ, 70 ಎಕೆರೆ ಪ್ರದೇಶಕ್ಕೆ ತಡೆಗೋಡೆ, ತಡೆಗೋಡೆಗೆ ಮುಖ್ಯ ದ್ವಾರ ಬಾಗಿಲು. ಅದರಲ್ಲಿ ಉದ್ಯಾನವನ ಅಭಿವೃದ್ಧಿ ಉದ್ಯಾನವನಕ್ಕೆ ನೀರೊದಗಿಸಲು ಕೊಳವೆಬಾವಿ, ಹಾಗೂ ನೀರು ಶೇಖರಿಸಲು ತೊಟ್ಟಿ, ವಾಚ್ ಗಾರ್ಡ್ ಮನೆ ಸೇರಿದಂತೆ ವಿವಿಧ ಕಾಮಗಾರಿಗಳನ್ನ ನಡೆಸಲಾಗಿದೆ.

    ಆದರೆ ಕೆರೆಗಳನ್ನು ಉಳಿಸಬೇಕಾದ ಅಧಿಕಾರಿಗಳೇ ಕೆರೆಗೆ ಕಂಟಕವಾಗಿದ್ದಾರೆ ಎಂದು ಬೆಂಗಳೂರು ಮೂಲದ ನಾರಾಯಣ ಎನ್ನುವವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಿಸಿದ್ರು. ಕೆರೆಯ ನೀರು ಮುಳುಗಡೆ ಪ್ರದೇಶವನ್ನು ಸರ್ಕಾರಿ ಖರಾಬ್ ಅಂತ ಅಧಿಕಾರಿಗಳು ದಾಖಲೆಗಳಲ್ಲಿ ತಿದ್ದಿತೀಡಿ ಅದರಲ್ಲಿ 70 ಎಕೆರೆಯನ್ನು ಉದ್ಯಾನವನ ಮಾಡಿ ಗಾಜಿನ ಮನೆ ನಿರ್ಮಾಣ ಮಾಡಿದ್ದಾರೆ ಅಂತ ನಾರಾಯಣ ಎಂಬವರು ಲೋಕಾಯುಕ್ತ ಸಂಸ್ಥೆ ಮೊರೆ ಹೋದ ಕಾರಣ, ಪರ ವಿರೋಧ ವಾದ ಆಲಿಸಿದ ಲೋಕಾಯುಕ್ತರು, ಕೆರೆಯಲ್ಲಿ ಕಾಮಗಾರಿ ಮಾಡಿದ್ದು ತಪ್ಪು ಅಂತ ಎತ್ತಿ ಹಿಡಿದಿದ್ದು, ಕೆರೆಯಂಗಳದಲ್ಲಿ ನಿರ್ಮಿಸಿರುವ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಬೇಗ ತೆರವುಗೊಳಿಸಿ ಮೊದಲಿನಂತೆಯೇ ಕೆರೆಯನ್ನು ಮರುಸೃಷ್ಟಿಸಿ ಅಂತ ಆದೇಶ ಮಾಡಿದ್ದಾರೆ.

    ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಚಿಕ್ಕಬಳ್ಳಾಪುರ ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಲೋಕಾಯುಕ್ತರ ಆದೇಶ ಅನುಷ್ಠಾನ ಮಾಡುವಂತೆ ಸೂಚಿಸಿದೆ. ಕೆರೆ ಹಾಗೂ ಕರೆಯಂಗಳದಲ್ಲಿ ಯಾವುದೇ ಕಾಮಗಾರಿಗಳನ್ನ ಮಾಡಬಾರದು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಈಗ ಸರಿಸುಮಾರು ಆರೂವರೆ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರೋ ಗಾಜಿನಮನೆ ಎಲ್ಲವೂ ಕೆರೆಗೆ ಆಹಾರವಾಗಲಿದೆ ಎಂಬ ಆತಂಕ ಕಾಡುತ್ತಿದೆ.

    ಇದ್ರಿಂದ ಸದ್ಯ ಪೇಚಿಗೆ ಸಿಲಿಕಿರೋ ಅಧಿಕಾರಿಗಳು ಗಾಜಿನಮನೆ ತೆರವು ಮಾಡೋದಾ ಇಲ್ಲ ಸುಮ್ಮನಿರೋದಾ ಎಂದು ಇಕ್ಕಟ್ಟಿಗೆ ಸಿಲುಕಿ ಮೀನಾಮೇಷ ಎಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಜನರ ತೆರಿಗೆ ಹಣದ ಆರೂವರೆ ಕೋಟಿ ಕೆರೆಯ ನೀರಿಗೆ ಹೋಮ ಮಾಡಿದಂತಾಗುತ್ತಿದೆಯಲ್ಲಾ ಎಂಬುದು ಸಹ ಬೇಸರದ ಸಂಗತಿ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

  • ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರಿನಲ್ಲೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಅಂಗನವಾಡಿ ಕಾರ್ಯಕರ್ತೆಯರು

    ತುಮಕೂರು: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರು ಪಾದಯಾತ್ರೆಗೆ ಹೋಗದಿರಲು ನಿರ್ಧರಿಸಿದ್ದಾರೆ. ತುಮಕೂರಿನ ಗಾಜಿನ ಮನೆಯಲ್ಲೇ ಇದ್ದುಕೊಂಡು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ.

    ಎಲ್‍ಕೆಜಿ, ಯುಕೆಜಿ ತರಗತಿಗಳನ್ನ ಅಂಗನವಾಡಿ ಕೇಂದ್ರದಲ್ಲಿ ಮಾತ್ರ ನಡೆಸಲು ಸರ್ಕಾರ ಆದೇಶ ಹೊರಡಿಸಬೇಕು ಎಂಬ ಪ್ರಮುಖ ಬೇಡಿಕೆ ಇಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡಲು ಸಜ್ಜಾಗಿದ್ದರು. ಆದರೆ ಪೊಲೀಸರು ಕಾರ್ಯಕರ್ತೆಯರನ್ನ ತಡೆದಿದ್ದರಿಂದ ತುಮಕೂರಿನಲ್ಲೇ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬಂದು ತಮ್ಮ ಅಹವಾಲು ಸ್ವೀಕರಿಸಿ, ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಮಂಗಳವಾರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕಾರ್ಯಕರ್ತೆಯರು ತುಮಕೂರಿನ ಗಾಜಿನ ಮನೆಯಲ್ಲಿ ಸೇರಿದ್ದರು. ಅಲ್ಲಿಂದಲೇ ಪಾದಯಾತ್ರೆ ಹೋಗಲು ಸಿದ್ದರಾಗಿದ್ದರು. ಪಾದಯಾತ್ರೆ ಕೈ ಬಿಟ್ಟು ಸಿಎಂ ಜೊತೆ ಮಾತುಕತೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕವಾಗಿ ತಡೆಕೊಟ್ಟಿದ್ದಾರೆ. ಆದರೆ ಸಿಎಂ ಜೊತೆಗಿನ ಮಾತುಕತೆ ತೃಪ್ತಿ ತಂದಿಲ್ಲವಾದರಿಂದ ಗಾಜಿನ ಮನೆಯಲ್ಲೇ ಧರಣಿಗೆ ಮುಂದಾಗಿದ್ದಾರೆ.

  • ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ

    ದಾವಣಗೆರೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯು ಏಷ್ಯಾದ ಅತಿ ದೊಡ್ಡ ಗಾಜಿನ ಮನೆಯಲ್ಲಿ 5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿದೆ. ವಿವಿಧ ಹೂಗಳಿಂದ ರಚಿಸಿರುವ ಕಲಾಕೃತಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಕೆಂಪು, ಬಿಳಿ ರೋಸ್ ಬಳಸಿ ಐಫೆಲ್ ಟವರ್ ರಚಿಸಲಾಗಿದೆ.

    ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆಯಿಂದ ಒಮ್ಮೆ ಮಾತ್ರ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಲ್ಲಿ ಎರಡನೇ ಬಾರಿಗೆ ಫಲಪುಪ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ಐಫೆಲ್ ಟವರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 30 ಅಡಿ ಎತ್ತರ, 23 ಅಡಿ ಅಗಲದಲ್ಲಿ ಕೆಂಪು, ಬಿಳಿ ಗುಲಾಬಿ ಹೂವುಗಳಿಂದ ಐಫೆಲ್ ಟವರ್ ನಿರ್ಮಾಣ ಮಾಡಲಾಗಿದೆ. ಗಾಜಿನ ಮನೆಯ ಮಧ್ಯ ಭಾಗದಲ್ಲಿ ಈ ಐಫೆಲ್ ಟವರ್ ತಲೆ ಎತ್ತಿದ್ದು ಜನರು ಫೋಟೋ ಕ್ಲಿಕ್ಕಿಸಿಕೊಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಐಫೆಲ್ ಟವರ್ ಜೊತೆಗೆ ಆರು ಅಡಿ ಎತ್ತರ, ನಾಲ್ಕು ಅಡಿ ಅಗಲದ ಅಣಬೆ ಆಕಾರದ ಹೂವಿನ ಕಲಾಕೃತಿಯನ್ನು ಎರಡು ಸಾವಿರ ಗುಲಾಬಿ, ಸೇವಂತಿಗೆ ಬಳಸಿ ನಿರ್ಮಿಸಲಾಗಿದೆ. ಇದರ ಜೊತೆ ಫೋಟೋ ಫ್ರೇಮ್, ವಿದೇಶಿ ಹೂವುಗಳನು ಜನರನ್ನು ಆಕರ್ಷಿಸಿತು. ಅಲ್ಲದೆ ಹಣ್ಣಿನೊಳಗೆ ಮಾಡಿದ್ದ ಕಲಾಕೃತಿಗಳು ಮಕ್ಕಳ ಅಚ್ಚುಮೆಚ್ಚಿಗೆ ಕಾರಣವಾದವು. ಇದನ್ನು ನೋಡಿ ಜನರು ಫುಲ್ ಖುಷಿಯಾದರು. ಗ್ಲಾಸ್ ಹೌಸ್‍ನಲ್ಲಿ ಹೂ, ಹಣ್ಣಿನ ಅಲಂಕಾರಕ್ಕೆ ಬಂದ ಜನರು ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

  • ದಾವಣಗೆರೆಯಲ್ಲಿರೋ ಅತೀ ದೊಡ್ಡ ಗ್ಲಾಸ್ ಹೌಸ್‍ಗೆ ಶಾಸಕ ಎಸ್.ಎ. ರವೀಂದ್ರನಾಥ್ ಭೇಟಿ

    ದಾವಣಗೆರೆಯಲ್ಲಿರೋ ಅತೀ ದೊಡ್ಡ ಗ್ಲಾಸ್ ಹೌಸ್‍ಗೆ ಶಾಸಕ ಎಸ್.ಎ. ರವೀಂದ್ರನಾಥ್ ಭೇಟಿ

    ದಾವಣಗೆರೆ: ಇಲ್ಲಿನ ಅತೀ ದೊಡ್ಡ ಗ್ಲಾಸ್ ಹೌಸ್ ಗೆ ಶಾಸಕ ಎಸ್.ಎ. ರವೀಂದ್ರನಾಥ್ ಅವರು ಭೇಟಿ ನೀಡಿದ್ದು, ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದಾರೆ.

    ನಗರದ ಕುಂದಾವಾಡ ಕೆರೆಯ ಪಕ್ಕದಲ್ಲಿರುವ ಗ್ಲಾಸ್ ಹೌಸನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಆದರೆ ಜನರಿಗೆ ಪ್ರವಾಸಿತಾಣವಾಗಿ ಅನುಕೂಲ ಮಾಡಿಕೊಟ್ಟಿರಲ್ಲಿಲ್ಲ. ಆದ್ದರಿಂದ ಆಗಸ್ಟ್ 15 ರ ಒಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಪ್ರವಾಸಕ್ಕೆ ಅನುವು ಮಾಡಿಕೊಡಲಾಗುವುದು.

    ಕೆಲ ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಇದರ ಬಗ್ಗೆ ಗಮನ ಹರಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ತಿಳಿಸಿದ್ದಾರೆ.

    ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದರು. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯು ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿದೆ. ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನಿರ್ಮಾಣವಾಗಿರೋ ಈ ಗಾಜಿನ ಅರಮನೆ ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನು ಹೊಂದಿದೆ.

    ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ. ಗಾಜಿನ ಮನೆಗೆ 13.35 ರೂ. ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, 1.50 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್, 1.99 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, 1.08 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಮಾಹಿತಿ ಕೇಂದ್ರ, ರಸ್ತೆ ನಿರ್ಮಾಣ, ಸುತ್ತಮುತ್ತ ವಿದೇಶಿ ಗಿಡಗಳನ್ನ ಬೆಳೆಸುವ ಜೊತೆ ಸುಂದರವಾದ ಉದ್ಯಾನವನ ನಿರ್ಮಾಣದ ಗುರಿ ಹೊಂದಲಾಗಿತ್ತು.

  • ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

    ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

    ದಾವಣಗೆರೆ: ಕ್ಯೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಈಗ ಕಳಪೆ ಕಾಮಗಾರಿಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ.

    ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆಕರ್ಷಕವಾದ ಗಾಜಿನ ಮನೆ ಇದಾಗಿದ್ದು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿ ಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಇಡೀ ರಾಜ್ಯಕ್ಕೆ ಈ ಗಾಜಿನ ಮನೆ ಒಂದು ಪ್ರವಾಸಿ ತಾಣವಾಗುತ್ತೆ ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಗಾಜಿನ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ. ಆಗ್ಲೇ ತನ್ನ ಕಳಪೆ ಕಾಮಗಾರಿಯ ನಿಜ ಸ್ವರೂಪ ಬಯಲಾಗುತ್ತಿದೆ.

    ಸುಮಾರು 13.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಬೆಂಗಳೂರು ಲಾಲ್ ಬಾಗ್ ನ ಗಾಜಿನ ಮನೆಗಿಂತ ದೊಡ್ಡದಾಗಿದ್ದು, ಸುಂದರ ಗಾಜಿನ ಅರಮನೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ ಆಗ್ಲೆ ಅರಮನೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ಇದು ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಾಣವಾಗಿದ್ದು, ಗಾಜಿನಿಂದ ಗಾಜಿಗೆ ಹಾಕಿರುವ ನಟ್, ಬೋಲ್ಟ್ ಗಳು ಕಳಚಿ ಬಿದ್ದಿವೆ. ಮೇಲ್ಛಾವಣಿಗೆ ಹೊದಿಸಿದ್ದ ಗಾಜು ಪುಡಿಪುಡಿಯಾಗಿದ್ದು, ಅಲ್ಲಿಂದ ನೀರು ಸೋರುತ್ತಿವೆ. ಮಳೆ ಬಂದ್ರೆ ಸಾಕು ಅರಮನೆಯ ಒಳಗೆ ಕೆರೆ ನಿರ್ಮಾಣವಾಗುತ್ತೆ. ಇಲ್ಲಿಗೆ ಬರುವ ಪ್ರವಾಸಿಗರು ಅವ್ಯವಸ್ಥೆ ಹಾಗೂ ಕಳೆಪೆ ಕಾಮಗಾರಿ ನೋಡಿ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

    ಕಾಂಗ್ರೆಸ್ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕನಸಿನ ಯೋಜನೆಯಾಗಿದ್ದು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ. ಎಸ್.ಎಸ್.ಮಲ್ಲಿಕಾರ್ಜುನ್ ಕೂಡ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸುಂದರವಾದ ಗಾಜಿನ ಅರಮನೆ ದೇವನಗರಿಗೆ ಮುಕುಟಪ್ರಾಯವಾಗಿತ್ತು. ಆದ್ರೆ ಇದೀಗ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರಮನೆ ಶಿಥಿಲಗೊಳ್ಳುತ್ತಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ದುರಸ್ತಿಗೊಳಿಸಬೇಕು ಹಾಗೂ ಕಳಪೆ ಕಾಮಗಾರಿ ಮಾಡಿದವರವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

  • ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

    ದಾವಣಗೆರೆ: ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನ ಸಿಎಂ ಸಿದ್ದರಾಮಯ್ಯ ಇಂದು ಅನಾವರಣಗೊಳಿಸಲಿದ್ದಾರೆ.

    ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿರುವ ಗಾಜಿನ ಮನೆ, ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಅನ್ನೇ ನಾಚಿಸುವಂತೆ ರೆಡಿಯಾಗುತ್ತಿರುವ ಗಾಜಿನ ಸುಂದರಿ. ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನ ಈ ಗಾಜಿನ ಅರಮನೆ ಹೊಂದಿದೆ. ಇದು ನಿರ್ಮಾಣವಾಗಿರೋದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ.

    2014-15 ನೇ ಸಾಲಿನಲ್ಲಿ ಶಾಮನೂರು ಶಿವಶಂಕರಪ್ಪ ಸಚಿವರಾಗಿದ್ದಾಗ 5 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಈಗ ಅಂದಾಜು 30 ಕೋಟಿ ರೂಪಾಯಿಗೆ ಬಂದು ತಲುಪಿದೆ. ಇದು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಗಿಂತ ದೊಡ್ಡದಾಗಿದೆ. ಅಲ್ಲದೆ ಇಡೀ ದೇಶದಲ್ಲೇ ಇದು ದೊಡ್ಡ ಅರಮನೆ ಎನ್ನಬಹುದಾಗಿದೆ.

    ಗಾಜಿನ ಮನೆಗೆ 13.35 ರೂ. ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 1.50 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್, 1.99 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, 1.08 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಮಾಹಿತಿ ಕೇಂದ್ರ, ರಸ್ತೆ ನಿರ್ಮಾಣ, ಸುತ್ತಮುತ್ತ ವಿದೇಶಿ ಗಿಡಗಳನ್ನ ಬೆಳೆಸುವ ಜೊತೆ ಸುಂದರವಾದ ಉದ್ಯಾನವನ ನಿರ್ಮಾಣದ ಗುರಿ ಹೊಂದಲಾಗಿದೆ. ಇಂತಹ ಸುಂದರ ಸ್ಥಳವನ್ನ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

    ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ದಾವಣಗೆರೆಗೆ ಈ ಗಾಜಿನ ಅರಮನೆ ಮತ್ತೊಂದು ಗರಿಯನ್ನ ತಂದುಕೊಡಲಿದೆ. ಈ ಸುಂದರವಾದ ಅರಮನೆ ದೇಶ-ವಿದೇಶಿಗರನ್ನ ದಾವಣಗೆರೆಯತ್ತ ಸೆಳೆಯುವ ಜೊತೆಗೆ ಜಿಲ್ಲೆಯ ಹಿರಿಮೆಯನ್ನೂ ಹೆಚ್ಚಿಸಲಿದೆ.