Tag: GKVK

  • ಕೈಗಾರಿಕೋದ್ಯಮಕ್ಕೆ ಕರ್ನಾಟಕ ಸರ್ಕಾರ ಹೆಚ್ಚಿನ ಅವಕಾಶ ನೀಡಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಕೈಗಾರಿಕೋದ್ಯಮಕ್ಕೆ ಕರ್ನಾಟಕ ಸರ್ಕಾರ ಹೆಚ್ಚಿನ ಅವಕಾಶ ನೀಡಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

    ಬೆಂಗಳೂರು: ಕರ್ನಾಟಕ ಸುಸ್ಥಿರ ಆಡಳಿತ, ಜಲಸಂಪನ್ಮೂಲ, ಮಾನವ ಸಂಪನ್ಮೂಲ, ಇಂಧನ, ತಂತ್ರಜ್ಞಾನ ಸೇರಿದಂತೆ ಕೈಗಾರಿಕೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯವನ್ನು ಹೊಂದಿದ್ದು, ಕೈಗಾರಿಕೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಿ ನೀವು ನಮಗೆ ಶಕ್ತಿ ತುಂಬಿದರೆ, ನಾವು ಕೂಡ ನಿಮಗೆ ಅಗತ್ಯ ಬಲ ನೀಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

    ಇಲ್ಲಿನ ಜಿಕೆವಿಕೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಭಾರತೀಯ ಲೋಹಗಳ ಸಂಸ್ಥೆ (IIM) ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ, ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

    ಕರ್ನಾಟಕ ದೊಡ್ಡ ರಾಜ್ಯವಾಗಿದ್ದು, ದೇಶದಲ್ಲಿ ತೆರಿಗೆ ಪಾವತಿಯಲ್ಲಿ 2ನೇ ಸ್ಥಾನದಲ್ಲಿದೆ. ಭೂ ವಿಸ್ತೀರ್ಣದಲ್ಲಿ 3ನೇ ಅತಿ ದೊಡ್ಡ ರಾಜ್ಯವಾಗಿದೆ. ಐಟಿ ಬಿಟಿ ಮಾತ್ರವಲ್ಲದೇ ನೀವೆಲ್ಲರೂ ನಿಮ್ಮ ಇತರೇ ಕ್ಷೇತ್ರಗಳಲ್ಲಿಯೂ ನಮಗೆ ಮಾರ್ಗದರ್ಶನ ನೀಡಬೇಕು. ನಮ್ಮ ರಾಜ್ಯದಲ್ಲಿ ಕೈಗಾರಿಕೆಗೆ ಅನೇಕ ಅವಕಾಶಗಳನ್ನು ಒದಗಿಸಿಕೊಡಲಾಗಿದೆ. ರಾಜ್ಯದಲ್ಲಿ ಸುಸ್ಥಿರ ಆಡಳಿತ ಹಾಗೂ ಜಲಸಂಪನ್ಮೂಲ ಹೊಂದಿದ್ದೇವೆ. ಇಂಧನ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಿದ್ದು, ಮತ್ತಷ್ಟು ಪ್ರಗತಿ ಸಾಧಿಸಲು ಅವಕಾಶವಿದೆ. ಸಿದ್ದರಾಮಯ್ಯ ಅವರ ಕಳೆದ ಅವಧಿಯ ಸರ್ಕಾರದಲ್ಲಿ 18 ಸಾವಿರ ಮೆಗಾವ್ಯಾಟ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡಲಾಗಿದೆ ಎಂದು ತಿಳಿಸಿದರು.

    ಈ ಅವಧಿಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಬೃಹತ್ ಕೈಗಾರಿಕಾ ಕ್ಷೇತ್ರವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾರೆ. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ನೀಡಲು ಬದ್ಧವಾಗಿದ್ದೇವೆ. ನಮ್ಮ ರಾಜ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿಭಾವಂತ ಮಾನವ ಸಂಪನ್ಮೂಲಗಳನ್ನು ತಯಾರು ಮಾಡುತ್ತಿರುವ ರಾಜ್ಯವಾಗಿದೆ. ನಮ್ಮ ರಾಜ್ಯದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿದ್ದು, ಅತಿ ಹೆಚ್ಚು ವೈದ್ಯರು ಹೊರ ಬರುತ್ತಿದ್ದಾರೆ. ಅನೇಕ ಮ್ಯಾನೇಜ್‌ಮೆಂಟ್‌ ಕಾಲೇಜುಗಳಿವೆ ಎಂದು ವಿವರಿಸಿದರು.

    ಸಜ್ಜನ್ ಜಿಂದಾಲ್ ಅವರು ಎಂ.ಎಸ್ ರಾಮಯ್ಯ ಕಾಲೇಜಿನಲ್ಲೇ ಓದಿದ್ದು, ಅವರಿಗೆ ಬೆಂಗಳೂರಿನ ಬೀದಿ ಬೀದಿಗಳ ಪರಿಚಯವಿದೆ. ಅವರು ಬೆಂಗಳೂರಿನಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಅನೇಕ ಸಿಎಸ್ಆರ್ ಯೋಜನೆ ಹಮ್ಮಿಕೊಂಡಿದ್ದಾರೆ ಎಂದರು.

    ಈ ಕಾರ್ಯಕ್ರಮದಲ್ಲಿ ರತನ್ ಟಾಟಾ ಅವರ ಭಾವಚಿತ್ರವಿಟ್ಟು ಗೌರವ ಸಲ್ಲಿಸಿರುವುದನ್ನು ನೋಡಿ ನನಗೆ ಸಂತೋಷವಾಯಿತು. 25 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅವರನ್ನು ಭೇಟಿ ಮಾಡಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಚರ್ಚೆ ಮಾಡಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಆಹ್ವಾನ ನೀಡಿದ್ದೆ. ಆದರೆ ಬೇರೆ ವಿಚಾರಗಳಿಂದ ಅವರು ಇದನ್ನು ನಿರಾಕರಿಸಿದ್ದರು.

    ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಬೇಕು. ನೀವು ದೂರ ಸಾಗಬೇಕಾದರೆ ಎಲ್ಲರೊಂದಿಗೆ ಒಟ್ಟಾಗಿ ಸಾಗಬೇಕು ಎಂಬ ನಾಣ್ಣುಡಿ ಇದೆ. ಇಂದು ನೀವೆಲ್ಲರೂ ಜತೆಗೂಡಿ ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಅದೇ ರೀತಿ ನೀವು ಜತೆಗೂಡಿ ಚರ್ಚೆ ಮಾಡಿ ಈ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ. ಸಜ್ಜನ್ ಜಿಂದಾಲ್ ಅವರ ನೇತೃತ್ವದಲ್ಲಿ ಈ ಸಂಸ್ಥೆ ನೀತಿ ನಿರೂಪಕರು, ಕೈಗಾರಿಕೋದ್ಯಮಿಗಳು ಏನೇನು ಮಾಡಬೇಕು ಎಂದು ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

    ಐಐಎಂ ಸಂಸ್ಥೆ ತನ್ನದೇ ಆದ ಇತಿಹಾಸ ಹೊಂದಿದೆ. ಈ ಸಂಸ್ಥೆ ಕೈಗಾರಿಕೋದ್ಯಮದ ಅಡಿಪಾಯವಾಗಿದೆ. ದೇಶದ ಗಣಿಗಾರಿಗೆಯಲ್ಲಿ ಕರ್ನಾಟಕ ಕೇಂದ್ರ ಸ್ಥಾನ. 200 ವರ್ಷಗಳ ಹಿಂದೆ ಕೆಜಿಎಫ್‌ನಲ್ಲಿ ಚಿನ್ನದ ಅದಿರು ತೆಗೆಯಲು ಪ್ರಾರಂಭಿಸಲಾಯಿತು. ನಮ್ಮದು ದೊಡ್ಡ ಕಬ್ಬಿಣದ ಅದಿರು ಹೊಂದಿರುವ ರಾಜ್ಯವಾಗಿದೆ. ಈ ಕ್ಷೇತ್ರದಲ್ಲಿ ಸಜ್ಜನ್ ಜಿಂದಾಲ್ ಅವರ ಸಂಸ್ಥೆ ಮುಂದಾಳತ್ವ ವಹಿಸಿದೆ.

    ಅನೇಕ ವಿಚಾರಗಳಿಂದಾಗಿ ಇಡೀ ವಿಶ್ವ ನಮ್ಮ ರಾಜ್ಯದತ್ತ ಮುಖಮಾಡಿದೆ. ಎಸ್.ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಿದ್ದಾಗ ಒಂದು ಮಾತು ಹೇಳಿದ್ದರು. ಇಷ್ಟು ದಿನ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ತೆರಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಣ್ಣಿಸಿದ್ದರು ಎಂದು ತಿಳಿಸಿದರು.

    ನಮ್ಮ ಸರ್ಕಾರ ಸದಾ ನಿಮ್ಮ ಬೆಂಬಲಕ್ಕೆ ಇದೆ. ನಾವೆಲ್ಲರೂ ಒಟ್ಟಾಗಿ ಈ ರಾಜ್ಯದ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕೋಣ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿ ನಿಮಗೆ ನೆರವಾಗಲು ನಾವು ಬದ್ಧರಾಗಿದ್ದೇವೆ. ನೀವು ನಿಮ್ಮ ಮನಸ್ಸು ಬಿಚ್ಚಿ ಈ ವೇದಿಕೆ ಮೂಲಕ ನಿಮ್ಮ ವಿಚಾರವನ್ನು ಚರ್ಚೆ ಮಾಡಿ. ನೀವು ನಮ್ಮ ರಾಜ್ಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿದಷ್ಟು ನಾವು ನಿಮಗೆ ಎಲ್ಲಾ ರೀತಿ ಶಕ್ತಿ ತುಂಬಲು ಮುಂದಾಗುತ್ತೇವೆ ಎಂದು ತಿಳಿಸಿದರು.

  • ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಸಾಧ್ಯ: ವಿಜ್ಞಾನ ಹಬ್ಬದಲ್ಲಿ ಮೋದಿ ಮಾತು

    ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಸಾಧ್ಯ: ವಿಜ್ಞಾನ ಹಬ್ಬದಲ್ಲಿ ಮೋದಿ ಮಾತು

    ಬೆಂಗಳೂರು: ದೇಶವನ್ನು ಒಗ್ಗೂಡಿಸಲು ತಂತ್ರಜ್ಞಾನದಿಂದ ಮಾತ್ರ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನವ ಭಾರತಕ್ಕೆ ತಂತ್ರಜ್ಞಾನ ಬೇಕಿದೆ. ಬೆಂಗಳೂರು ಮೊದಲು ಗಾರ್ಡನ್ ಸಿಟಿಯಾಗಿತ್ತು, ಇಂದು ಸ್ಟಾರ್ಟ್ ಅಪ್ ಕೇಂದ್ರವಾಗಿದೆ. ಜಗತ್ತು ಬೆಂಗಳೂರಿನತ್ತ ಮುಖ ಮಾಡುತ್ತಿದೆ. ಭಾರತವನ್ನು ಸಮಾಜದೊಂದಿಗೆ ಜೋಡಿಸುವ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮಾಡುವಲ್ಲಿ ಮೊದಲ ಸ್ಥಾನದಲ್ಲಿವೆ. ದೇಶದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್ ಫೋನ್‍ಗಳು ಜನರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುತ್ತಿವೆ. ಕಳೆದ ಐದು ವರ್ಷಗಳಲ್ಲಿ ಗ್ರಾಮೀಣ ಭಾಗಗಳು ಅಭಿವೃದ್ಧಿ ಹೊಂದುತ್ತಿವೆ. ಸ್ವಚ್ಛ ಭಾರತ್ ದಿಂದ ಇಂದಿನ ಆಯುಷ್ಮಾನ್ ಭಾರತ್ ಯೋಜನೆಗಳು ಜನರಿಗೆ ತಲುಪವಲ್ಲಿ ತಂತ್ರಜ್ಞಾನ ಪಾತ್ರವಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ರೈತರ ಖಾತೆಗೆ ನಗದು ಜಮಾವಣೆ ತಂತ್ರಜ್ಞಾನದಿಂದ ಆಗಿದೆ. ಅಭಿವೃದ್ಧಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಿಂತಿದೆ ಎಂದರು.

    ತಂತ್ರಜ್ಞಾನದಿಂದಾಗಿ ಸರ್ಕಾರದ ಯೋಜನೆಗಳು ವೇಗ ಪಡೆದುಕೊಂಡಿದೆ. ಸರ್ಕಾರ ಮತ್ತು ಫಲಾನುಭವಿಗಳ ನಡುವಿನ ಅಂತರ ತಂತ್ರಜ್ಞಾನದಿಂದ ಕಡಿಮೆ ಆಗಿದೆ. ಇಂದು ಇ-ಕಾಮರ್ಸ್ ನಿಂದಾಗಿ ವ್ಯವಹಾರಗಳು ಕ್ಷಣಾರ್ಧದಲ್ಲಿ ಬೆರಳ ತುದಿಯಲ್ಲಿ ನಿಂತಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಜನರಿಗೂ ತಂತ್ರಜ್ಞಾನ ಸೌಲಭ್ಯ ಸಿಗುವಂತಾಗಬೇಕಿದೆ. ಜಲ್ ಮಿಷನ್ ಅಭಿಯಾನ ಸಹ ತಂತ್ರಜ್ಞಾನದಿಂದ ಸಾಧ್ಯವಾಗಲಿದೆ. ಸುಧಾರಿತ ಮತ್ತು ಕಡಿಮೆ ಖರ್ಚಿನಲ್ಲಿ ಹೇಗೆ ಸಿಗಬೇಕು ಎಂಬುದರ ಬಗ್ಗೆ ನೀವು ಕೆಲಸ ಮಾಡಬೇಕಿದೆ. ಅದೇ ರೀತಿ ಸುಧಾರಿತ ಬೀಜ ಮತ್ತು ರಸಗೊಬ್ಬರ ಉತ್ಪಾದನೆ, ರೈತರಿಗೆ ಅನುಕೂಲವಾಗಿ ತಂತ್ರಜ್ಞಾನ ಮತ್ತು ಬಳಕೆಯಾದ ನೀರಿನ ಪುನರ್ ಬಳಕೆ ಕುರಿತ ಸುಧಾರಿತ ವ್ಯವಸ್ಥೆಗಳು ಮತ್ತು ಪರಿಕರಗಳು, ಮಣ್ಣಿನ ಫಲವತ್ತತೆ ಕಾಪಾಡುವ ಹೊಣೆಯೂ ನಿಮ್ಮ ಮೇಲಿದೆ ಎಮದು ತಿಳಿಸಿದರು.

    ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋದು, ಪ್ಲಾಸ್ಟಿಕ್ ಪರ್ಯಾಯ ವಸ್ತುಗಳ ಸಂಶೋಧನೆ ಸೇರಿದಂತೆ ಇನ್ನಿತರ ಅನ್ವೇಷನೆಗಳು ಇಂದು ನಡೆಯಬೇಕಿದೆ. ನಿಮ್ಮ ಸಂಶೋಧನೆಯಿಂದಾಗಿ ಗ್ರಾಮೀಣ ಭಾಗದ ಜನರು ಉದ್ಯೋಗ ಕಂಡುಕೊಳ್ಳುವಂತಾಗಬೇಕಿದೆ. ಪ್ಲಾಸ್ಟಿಕ್ ತ್ಯಾಜ್ಯದ ಪುನರ್ ಬಳಕೆಯ ಬಗ್ಗೆ ಚಿಂತಿಸಬೇಕಿದೆ. ಒಂದೇ ಬಾರಿ ಬಳಕೆಯಾಗುವ ಪ್ಲಾಸ್ಟಿಕ್ ನಿಂದ ಭಾರತ ಮುಕ್ತವಾಗಬೇಕಿದೆ. 2022ರ ವೇಳೆಗೆ ಕಚ್ಚಾತೈಲದ ಬಳಕೆ ಶೇ.10ರಷ್ಟು ಕಡಿಮೆಗೊಳಿಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಸ್ಟಾರ್ಟ್ ಅಪ್ ಆರಂಭವಾಗಬೇಕಿದೆ. ನಿಮ್ಮ ಸಮಾಜಮುಖಿ ಸಂಶೋಧನೆಗಳಿಂದಾಗಿ ಭಾರತ 5 ಟ್ರಿಲಿಯನ್ ಮಿಲಿಯನ್ ಅರ್ಥ ವ್ಯವಸ್ಥೆ ಆಗಲಿದೆ ಎಂದು ಅವರು ಹೇಳಿದರು.

  • ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

    – ಕೇಳಲು ಹೋದ ರೈತನಿಗೆ ನಿನ್ನ ಹಣೆ ಬರಹ ಅಂತ ಹಾರಿಕೆ ಉತ್ತರ

    ಚಿಕ್ಕಬಳ್ಳಾಪುರ: ಕಡಿಮೆ ಅವಧಿಯಲ್ಲೇ ಅತ್ಯಧಿಕ ಇಳುವರಿ ಅಂತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರ ಸಲಹೆಯಂತೆ ಖರೀದಿಸಿದ ರಾಗಿ ಬಿತ್ತನೆ ಬೀಜಗಳಿಂದ ನಾಟಿ ಮಾಡಿದ ಪೈರಿನ ತೆನೆಯಲ್ಲಿ ರಾಗಿ ಕಾಳು ಕಟ್ಟದೆ ರೈತರೊಬ್ಬರು ಕಣ್ಣೀರುಡುತ್ತಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೊಯಿರಾ ಹೊಸೂರು ಗ್ರಾಮದ ರೈತ ಮುನಿ ಆಂಜಿನಪ್ಪ ಪ್ರತಷ್ಠಿತ ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಎಂಆರ್ 31305 ಅನ್ನೋ ತಳಿಯ ರಾಗಿ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ್ದರು. ಆದ್ರೆ ಈ ರಾಗಿ ಪೈರು ಬೆಳೆದು 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ. ಈ ಬಗ್ಗೆ ಕೇಳಿದ್ರೆ ಜಿಕೆವಿಕೆ ಯವರು “ನಿನ್ನ ಹಣೆಬರಹ, ನಾವು ಏನೂ ಮಾಡಲಾಗುವುದಿಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಅಂಜಿನಪ್ಪ ಹೇಳಿದ್ದಾರೆ.

    ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೆಜಿಗೆ 35 ರೂಪಾಯಿಯಂತೆ ಬರೋಬ್ಬರಿ 15 ಕಜಿ ರಾಗಿ ಖರೀದಿ ಮಾಡಿ ಎರಡು ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಒಂದು ಕಡೆ ಬರಗಾಲ ಮತ್ತೊಂದೆಡೆ ವಿದ್ಯುತ್ ಗೆ ಬರ. ಈ ನಡುವೆ ಪಾತಾಳಕ್ಕೆ ಕುಸಿದಿರುವ ಅಂರ್ತಜಲದ ನಡುವೆ ಕೊಳವೆ ಬಾವಿಯ ನೀರು ಬಳಸಿ ಎರಡು ಎಕರೆಯಲ್ಲಿ ರಾಗಿ ಬೆಳೆಯಲಾಗಿದೆ. ಎರಡು ಎಕರೆ ರಾಗಿ ಬೆಳೆಯಲು ಬಿತ್ತನೆ ಬೀಜ, ಸಾವಯುವ ಗೊಬ್ಬರ, ಸೇರಿದಂತೆ ಅಂದಾಜು 50 ಸಾವಿರ ರೂ. ಹಣ ಖರ್ಚು ಮಾಡಿ 3 ತಿಂಗಳು ಕಾದಿದ್ದಾರೆ. ಆದ್ರೆ ರಾಗಿ ಪೈರು 3 ರಿಂದ ಮೂರೂವರೆ ಅಡಿ ಎತ್ತರಕ್ಕೆ ಸೊಂಪಾಗಿ ಬೆಳೆದಿದ್ರೂ ರಾಗಿ ತೆನೆಯಲ್ಲಿ ಮಾತ್ರ ರಾಗಿ ಕಾಳುಗಳೇ ಇಲ್ಲ.

    ಪ್ರತಿ ಎಕರೆಗೆ 35 ಕ್ವಿಂಟಾಲ್ ಇಳುವರಿ ಬರುತ್ತೆ ಅಂತ ಹೇಳಿದ ಜಿಕೆವಿಕೆ ಸಂಶೋಧಕರು ಈಗ ಕನಿಷ್ಠ ಬೆಳೆ ನೋಡಲು ಬರುತ್ತಿಲ್ಲ. ಸ್ಥಳೀಯ ಕೃಷಿ ಅಧಿಕಾರಿ ಕೂಡ ರಾಗಿ ತೆನೆ ಕಾಳು ಕಟ್ಟದಿರುವ ಬಗ್ಗೆ ಧೃಡೀಕರಣ ಮಾಡಿದ್ದಾರೆ. ಸಂಶೋಧನೆ ಮಾಡಿ ಹೊಚ್ಚ ಹೊಸ ಅತ್ಯುತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನ ಅಭಿವೃದ್ಧಿಪಡಿಸೋ ಜಿಕೆವಿಕೆ ನವರು ಕೊಟ್ಟ ಬಿತ್ತನೆ ಬೀಜಗಳೇ ಈ ಪರಿಯಾದ್ರೇ ಮತ್ಯಾರನ್ನ ನಂಬೋದು ಸ್ವಾಮಿ ಅಂತಿದ್ದಾರೆ ನೊಂದ ರೈತ.