Tag: girlbaby

  • 17 ದಿನದ ಹೆಣ್ಣು ಶಿಶುವನ್ನು ಗುಂಡಿಯೊಳಗಿಟ್ಟು ಬೆಂಕಿಕೊಟ್ಟ ಪಾಪಿ ತಂದೆ!

    17 ದಿನದ ಹೆಣ್ಣು ಶಿಶುವನ್ನು ಗುಂಡಿಯೊಳಗಿಟ್ಟು ಬೆಂಕಿಕೊಟ್ಟ ಪಾಪಿ ತಂದೆ!

    ಚೆನ್ನೈ: ತಂದೆಯೊಬ್ಬ ತನ್ನ 17 ದಿನದ ಹೆಣ್ಣು ಶಿಶುವನ್ನು ಜೀವಂತವಾಗಿ ಸುಟ್ಟ ಅಮಾನವೀಯ ಘಟನೆ ತಿರುಕೋವಿಲೂರ್ ಸಮೀಪದ ಅಥಂಡಮರುತುರ್ ಗ್ರಾಮದಲ್ಲಿ ನಡೆದಿದೆ.

    ಪಾಪಿ ತಂದೆ ನವಜಾತ ಶಿಶುವನ್ನು ಈ ಹಿಂದೆಯೇ ಕೊಲೆಗೈಯಲು ಯತ್ನಿಸಿದ್ದನು. ಮಗು ಹುಟ್ಟಿ 3 ದಿನವಾದಾಗಲೇ ಅದನ್ನು ಕೊಲೆ ಮಾಡಲು ಯತ್ನಿಸಿದ್ದನು. ಆ ಸಂದರ್ಭದಲ್ಲಿ ಸಂಬಂಧಿಕರು ಮಗುವನ್ನು ರಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ವದಮರುತುರ್ ಗ್ರಾಮದ ನಿವಾಸಿಯಾಗಿರೋ ಡಿ ವರದರಾಜನ್ ಗೆ 15 ತಿಂಗಳ ಹಿಂದೆ ಸುಂದರೇಶಪುರಂ ಗ್ರಾಮದ ಸೌಂದರ್ಯ ಜೊತೆ ವಿವಾಹವಾಗಿತ್ತು. ಇವರಿಬ್ಬರೂ ಅಥಂಡಮರುತುರ್ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. 17 ದಿನದ ಹಿಂದೆಯಷ್ಟೇ ಪಾಂಡಿಚೇರಿಯ ಆಸ್ಪತ್ರೆಯೊಂದರಲ್ಲಿ ಈ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತು. ತನಗೆ ಹುಟ್ಟಿದ ಮಗು ಹೆಣ್ಣಾಗಿದ್ದರಿಂದ ವರದರಾಜನ್ ನಿರಾಶೆಗೊಂಡಿದ್ದನು ಎಂದು ಪೊಲೀಸರು ವಿವರಿಸಿದ್ದಾರೆ.

    ಮಂಗಳವಾರ ಮಧ್ಯರಾತ್ರಿ 12.30ರ ಸುಮಾರಿಗೆ ಸೌಂದರ್ಯ ಮಗುವಿಗೆ ಹಾಲುಣಿಸಿ ನಿದ್ದೆಗೆ ಜಾರಿದ್ದಳು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿ ಪತಿ, 500 ಮೀ. ದೂರದಲ್ಲಿರುವ ನದಿ ಪಾತ್ರದ ಬಳಿ ಸಣ್ಣ ಗುಂಡಿ ಅಗೆದು ಅದರೊಳಗೆ ಮಗುವನ್ನು ಮಲಗಿಸಿ ಬೆಂಕಿ ಕೊಡುವ ಮೂಲಕ ಸಜೀವ ದಹನ ಮಾಡಿದ್ದಾನೆ.

    ಇತ್ತ ಮುಂಜಾನೆ 4 ಗಂಟೆ ಸುಮಾರಿಗೆ ಸೌಂದರ್ಯಗೆ ಎಚ್ಚರವಾಗಿದ್ದು, ತನ್ನ ಪಕ್ಕ ಮಲಗಿದ್ದ ಮಗು ಇಲ್ಲವಾಗಿದ್ದನ್ನು ಕಂಡು ಶಾಕ್ ಗೆ ಒಳಗಾಗಿದ್ದಾಳೆ. ಅಲ್ಲದೆ ಮಗುವನ್ನು ಹುಡುಕುವಂತೆ ಸಹಾಯ ಮಾಡಿ ಎಂದು ಜೋರಾಗಿ ಕಿರುಚಾಡಿದ್ದಾಳೆ.

    ಈ ವೇಳೆ ವರದರಾಜನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೂಡಲೇ ಮಹಿಳೆಯ ಸಂಬಂಧಿಕರು ಹಾಗೂ ಗ್ರಾಮಸ್ಥರು ತಿರುಕೋವಿಲೂರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಮುಂದೆಯೇ ಗುಂಡಿಯಿಂದ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಯಿತು.

    ವಿಚಾರಣೆಯ ವೇಳೆ ವರದರಾಜನ್, ಗಂಡು ಮಗುವಾಗುತ್ತದೆಂಬ ನಂಬಿಕೆಯಲ್ಲಿದ್ದೆ. ಅಲ್ಲದೆ ಒಂದು ವೇಳೆ ಹೆಣ್ಣು ಮಗುವಿಗೆ ಜನ್ಮ ನಿಡಿದರೆ ಆ ಮಗುವನ್ನು ಉಳಿಸಿಕೊಳ್ಳಲ್ಲ ಎಂದು ಪತ್ನಿ ಹಾಗೂ ಆಕೆಯ ಸಂಬಂಧಿಕರ ಬಳಿ ಹೇಳಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 315(ಭ್ರೂಣ ಹತ್ಯೆ) ಹಾಗೂ 498ಎ(ಪತಿ ಅಥವಾ ಪತಿಯ ಸಂಬಂಧಿಕರಿಂದ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

  • ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

    ನವದೆಹಲಿ: ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಟ್ವಿಟ್ಟರ್ ಮೂಲಕ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ವಿಡಿಯೋವೊಂದನ್ನು ಶೇರ್ ಮಾಡಿ ನನಗೆ ಅಳು ತಡೆಯಲಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಹೌದು. ರಷ್ಯಾ ದೇಶದ ಪುಟ್ಟ ಬಾಲಕಿ ಹುಟ್ಟುವಾಗಲೇ ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಹೀಗಾಗಿ ಕಾಲುಗಳ ಮೂಲಕವೇ ಆಹಾರ ಸೇವಿಸುತ್ತಿರುವ ವಿಡಿಯೋವನ್ನು ಆನಂದ್ ಅವರು ಶೇರ್ ಮಾಡಿಕೊಂಡಿದ್ದಾರೆ. 2 ವರ್ಷದ ಬಾಲಕಿಯ ಈ ವಿಡಿಯೋ ಮನಕಲಕುವಂತಿದೆ.

    ವಿಡಿಯೋದಲ್ಲೇನಿದೆ?
    ಪುಟ್ಟ ಬಾಲಕಿಯೊಬ್ಬಳು ಫೋರ್ಕ್ ಮೂಲಕ ಆಹಾರ ಸೇವಿಸುತ್ತಾಳೆ. ಫೋರ್ಕನ್ನು ತನ್ನ ಕಾಲಿನ ಬೆರಳುಗಳ ಮಧ್ಯೆ ಇಟ್ಟುಕೊಂಡು ಕಾಲನ್ನು ಮೇಲಕ್ಕೆತ್ತಿ ತಿನ್ನಲು ಪ್ರಯತ್ನಿಸುತ್ತಿದ್ದಾಳೆ. ಇದು ಸಾಧ್ಯವಾಗದಿದ್ದಾಗ ಮತ್ತೆ ಪೋರ್ಕನ್ನು ಇನ್ನೊಂದು ಕಾಲಿನಲ್ಲಿ ಸರಿಪಡಿಸಿಕೊಂಡು ನಂತರ ತಾನೇ ಬಗ್ಗಿ ಆಹಾರ ಸೇವಿಸಿದ್ದಾಳೆ. 17 ನಿಮಿಷಗಳ ಈ ವಿಡಿಯೋವನ್ನು ನೋಡಿದರೆ ನಿಜಕ್ಕೂ ಕಣ್ಣೀರು ತರಿಸುತ್ತದೆ.

    ಟ್ವೀಟ್‍ನಲ್ಲೇನಿದೆ..?
    ಇತ್ತೀಚೆಗಷ್ಟೇ ನಾನು ನನ್ನ ಮೊಮ್ಮಗನನ್ನು ನೋಡಿದ್ದೇನೆ. ಈ ಮಧ್ಯೆ ವಾಟ್ಸಾಪ್ ನಲ್ಲಿ ಬಂದಂತಹ ಈ ವಿಡಿಯೋವನ್ನು ನೋಡಿ ನನಗೆ ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡು ಬಾಲಕಿಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ಬೇಸರಗೊಂಡಿರುವ ಆನಂದ್ ಅವರು, ನ್ಯೂನ್ಯತೆ, ಸವಾಲುಗಳು ಕೆಲವರ ಜೀವನಕ್ಕೆ ಸಿಕ್ಕ ಗಿಫ್ಟ್ ಆಗಿವೆ. ಆದರೆ ಇವುಗಳನ್ನೆಲ್ಲ ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದು ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಆನಂದ್ ಮಹೀಂದ್ರಾ ಶೇರ್ ಮಾಡಿಕೊಂಡ ಈ ವಿಡಿಯೋಗೆ 50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 10 ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಹಲವರು ಮಗುವಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಕೆಲವರು ವಿಶೇಷಚೇತನ ಮಕ್ಕಳ ವಿಡಿಯೋಗಳನ್ನು ಹಾಕಿದ್ದಾರೆ. ಅದರಲ್ಲೊಬ್ಬರು ಇಂಥವರು ನಮ್ಮ ಭಾರತದಲ್ಲಿಯೂ ಇದ್ದಾರೆ ಎಂದು ಬರೆದುಕೊಂಡು ಕರ್ನಾಟಕದ ಶಾಲಾ ವಿದ್ಯಾರ್ಥಿಯೊಬ್ಬ ಊಟ ತೆಗೆದುಕೊಂಡು ಹೋಗಿ ಬಳಿಕ ಎಲ್ಲರೊಂದಿಗೆ ಕುಳಿತು ಊಟ ಮಾಡುತ್ತಿರುವ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಂಧು ಜಿಮ್ ಟ್ರೈನಿಂಗ್ ವಿಡಿಯೋ ನೋಡಿ ಆಯಾಸಗೊಂಡೆ ಎಂದ ಆನಂದ್ ಮಹೀಂದ್ರಾ

    https://twitter.com/Gkyadav11590/status/1175272793266503686

  • ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಮಗುವನ್ನು ಚರಂಡಿಗೆ ಬಿಸಾಕಿದ ತಾಯಿ- ಶ್ವಾನಗಳಿಂದ ಶಿಶುವಿನ ರಕ್ಷಣೆ

    ಚಂಡೀಗಢ: ಶ್ವಾನಗಳೆರಡು ಚರಂಡಿಯಲ್ಲಿ ಬಿದ್ದ ಶಿಶುವನ್ನು ರಕ್ಷಣೆ ಮಾಡಿದ್ದು, ಆ ಕಂದಮ್ಮನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ಆತಂಕಕಾರಿ ಘಟನೆಯೊಂದು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಪುಟ್ಟ ಮಗುವನ್ನು ಅದರ ತಾಯಿಯೇ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಚರಂಡಿಗೆ ಬಿಸಾಡಿದ್ದಾಳೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.

     ಸಿಸಿಟಿವಿಯಲ್ಲೇನಿತ್ತು?:
    ಮುಂಜಾನೆ ಮಹಿಳೆಯೊಬ್ಬಳು ಕೈತಾಲ್ ನಲ್ಲಿರುವ ಡೋಗ್ರಾ ಗೇಟ್ ಬಳಿ ನಡೆದುಕೊಂಡು ಬರುತ್ತಾಳೆ. ಪಕ್ಕದಲ್ಲೇ ಚರಂಡಿಯೊಂದಿದ್ದು, ಮಹಿಳೆ ತನ್ನ ಕೈಯಲ್ಲಿದ್ದ ವಸ್ತುವನ್ನು ಎಸೆಯುತ್ತಾಳೆ. ಹೀಗೆ ಚರಂಡಿಗೆ ಬಿದ್ದ ಮಗು ಜೋರಾಗಿ ಬಿದ್ದು ಅಳಲು ಆರಂಭಿಸಿದೆ. ಈ ಶಬ್ಧ ಕೇಳಿ ಪಕ್ಕದಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸಿವೆ. ಅಲ್ಲದೆ ಕೂಡಲೇ ಶಬ್ಧ ಕೇಳಿ ಬಂದ ಕಡೆ ದೌಡಾಯಿಸಿವೆ. ಹೀಗೆ ಚರಂಡಿ ಬಳಿ ಬಂದ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿವೆ.

    ನಾಯಿಗಳು ಏನು ಮಾಡುತ್ತಿವೆ ಎಂದು ನಿಂತು ನೋಡುತ್ತಿದ್ದ ಜನರಿಗೆ ಅದು ಮಗು ಎಂದು ಗೊತ್ತಾದ ಕೂಡಲೇ ಎಚ್ಚೆತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಶಿಶುವನ್ನು ಸ್ಥಳೀಯ ಕೈತಾಲ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿಶು ಬದುಕಿದ್ದು, ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಸರಿಸುಮಾರು 100 ಗ್ರಾಂ ಇದ್ದು, ಆಕೆಯನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಶಿಶುವಿನ ಆರೋಗ್ಯ ಸುಧಾರಿಸಿದ ಬಳಿಕ ಮಗುವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್)ಗೆ ಹಸ್ತಾಂತರಿಸಲಾಗುವುದು. ಆ ಬಳಿಕ ಅಲ್ಲಿಂದ ಹಲವು ಪ್ರಕ್ರಿಯೆಗಳ ಮೂಲಕ ಪಂಚಕುಲ ಅನಾಥಾಶ್ರಮಕ್ಕೆ ಮಗುವನ್ನು ನೀಡಲಾಗುವುದು ಎಂದು ಮತ್ತೊಬ್ಬ ವೈದ್ಯ ತಿಳಿಸಿದ್ದಾರೆ.

    ಶಿಶುವನ್ನು ಚರಂಡಿಗೆ ಬಿಸಾಕಿದ ಸಂಬಂಧ ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಮೆರವಣಿಗೆ ಮೂಲಕ ತಂದೆಯಿಂದ ಅದ್ಧೂರಿ ಸ್ವಾಗತ

    ಹೆಣ್ಣು ಮಗು ಹುಟ್ಟಿದ್ದಕ್ಕೆ ಮೆರವಣಿಗೆ ಮೂಲಕ ತಂದೆಯಿಂದ ಅದ್ಧೂರಿ ಸ್ವಾಗತ

    ಗಾಂಧಿನಗರ: ಹೆಣ್ಣು ಮಗು ಜನಸಿದ್ದಕ್ಕೆ ಗುಜರಾತ್ ಸೂರತ್ ನಲ್ಲಿ ತಂದೆಯೊಬ್ಬರು ಅದ್ಧೂರಿಯಾಗಿ ಮಗಳಿಗೆ ಸ್ವಾಗತ ಕೋರಿ ಸುದ್ದಿಯಾಗಿದ್ದಾರೆ.

    ರಾಕೇಶ್ ಅಲಿಯಾಸ್ ಗಿರೀಶ್ ಪಟೇಲ್ ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಸುದ್ದಿಯಾಗಿದ್ದಾರೆ. ರಾಕೇಶ್ ಸೂರತ್ ಪುರಸಭೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಪತ್ನಿ 45 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಹೀಯಾ ಎಂದು ನಾಮಕರಣ ಮಾಡಿ ಮನೆಯ ಮಹಾಲಕ್ಷ್ಮೀ ಬಂದಳು ಎಂದು ಭಾವಿಸಿ ರಾಕೇಶ್ ಸಂಭ್ರಮಸಿದ್ದಾರೆ.

    ಸೂರತ್‍ನಿಂದ 35 ಕಿ.ಮೀಟರ್ ದೂರದಲ್ಲಿರುವ ಡೆಹೆನ್ ಗ್ರಾಮದ ರಸ್ತೆಯಲ್ಲಿ ಸುಮಾರು 200 ಅಡಿ ಉದ್ದಕ್ಕೂ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಮನೆಗೆ ಎಂಟ್ರಿಯಾಗುವ ರಸ್ತೆಯ ಉದ್ದಕ್ಕೂ ಮೆರವಣೆಗೆ ಮಾಡಿ ಕರೆದುಕೊಂಡು ಬಂದಿದ್ದಾರೆ.

    ರಾಕೇಶ್ ಪತ್ನಿ ಧರ್ಮಿಷ್ಠಾ ಅವರು ತಮ್ಮ ಪೋಷಕರ ಜೊತೆ ಗ್ರಾಮಕ್ಕೆ ಎಂಟ್ರಿಯಾಗಿದ್ದಾರೆ. ತಾಯಿ ಬರುತ್ತಿದ್ದಂತೆ ಹೂಗುಚ್ಛ ನೀಡಿ ಸ್ವಾಗತಿಸಲಾಗಿದೆ. ತಾಯಿ ಮತ್ತು ಮಗು ಬರುವ ಹಾದಿಯಲ್ಲಿ ರೆಡ್ ಕಾರ್ಪೆಟ್ ಹಾಕಿ, ಹೂ ಹಾಕಿ ಸ್ವಾಗತಿಸಲಾಗಿದೆ. ಈ ವೇಳೆ ಮಹಿಳೆಯರು ಗರ್ಬಾ ನೃತ್ಯ ಮಾಡುವ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ರಾಕೇಶ್ ತನ್ನ ಮಗಳು ಹಿಯಾಳನ್ನು ಭಾವನಾತ್ಮಕವಾಗಿ ತನ್ನ ಎರಡು ಕೈಗಳಿಂದ ಎತ್ತಿಕೊಂಡು ಆನಂದಿಸಿದ್ದಾರೆ. ಪ್ರೀತಿಯ ಪತ್ನಿ ಹಾಗೂ ಮಗಳನ್ನು ಕರೆದುಕೊಂಡು ಬರಲು ರಾಕೇಶ್, ಸ್ನೇಹಿತರೊಬ್ಬರ ಕಾರನ್ನು ಕೇಳಿದ್ದರು. ಕಾರಿಗೂ ಕೂಡ ಮದುವಣಗಿತ್ತಿಯಂತೆ ಅಲಂಕಾರ ಮಾಡಲಾಗಿತ್ತು.

    ಹೀಯಾ ನನಗೆ ಮೊದಲ ಮಗಳಾಗಿ ಜನಿಸಿದ್ದಾಳೆ. ನಮ್ಮ ಮನೆಗೆ ಮಹಾಲಕ್ಷ್ಮೀ ಇದ್ದಂತೆ ನನ್ನ ಮಗಳು. ಆದ್ದರಿಂದ ನನ್ನ ಮಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಮನೆಗೆ ಸ್ವಾಗತ ಮಾಡಿಕೊಳ್ಳಲಾಗಿದೆ. ನಮ್ಮ ಸಮಾಜಕ್ಕೆ ಹೆಣ್ಣು ಮಗುವಿನ ಮಹತ್ವ ತಿಳಿಸುವ ಉದ್ದೇಶ ನನ್ನದು ಎಂದು ತಂದೆ ರಾಕೇಶ್ ತಿಳಿಸಿದ್ದಾರೆ.

    ಕೆಲ ಕಡೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಪೋಷಕರು ತಾತ್ಸರ ಮಾಡಿದ್ದಾರೆ ಎನ್ನುವ ಸುದ್ದಿ ಬರುತ್ತಿರುವಾಗ ಗುಜರಾತಿನ ರಾಕೇಶ್ ಅವರ ಸಂಭ್ರಮದ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

    ಧಾರವಾಡ: ಜಿಮ್ ಆವರಣದಲ್ಲಿ 5 ತಿಂಗಳ ಭ್ರೂಣ ಪತ್ತೆ

    ಧಾರವಾಡ: ಸುಮಾರು 5 ತಿಂಗಳ ಭ್ರೂಣವೊಂದು ಧಾರವಾಡದ ಜಿಮ್‍ವೊಂದರ ಆವರಣದಲ್ಲಿ ಪತ್ತೆಯಾಗಿದೆ.

    ಇಲ್ಲಿನ ಜಯನಗರದ ಶಿವಕಮಲ ಫೀಟ್‍ನೆಸ್ ಸೆಂಟರಿನ ಆವರಣದಲ್ಲಿ ಈ ಭ್ರೂಣ ಪತ್ತೆಯಾಗಿದ್ದು, ನೋಡಿದ ಜನರ ಮನಕಲುಕುವಂತೆ ಮಾಡಿದೆ. ಬೆಳಗ್ಗೆ ಜಿಮ್‍ಗೆ ಬಂದಿದ್ದ ಮಹಿಳೆಯರು ಹಾಗೂ ಯುವತಿಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ಭ್ರೂಣವನ್ನ ಪರಿಶೀಲನೆ ಮಾಡಿದ್ದಾರೆ. ಶವ ಪರೀಕ್ಷೆ ಮಾಡಿದ ಮೇಲೆ ಇದರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಹೆಣ್ಣು ಭ್ರೂಣ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಅವರು, ಯಾರೋ ಇದನ್ನ ಇಲ್ಲಿ ಇಟ್ಟು ಹೋಗಿರಬಹುದು ಎಂದು ಹೇಳಿದರು.

  • ಹೊಸ ಬಟ್ಟೆ, ಕೈ,ಕಾಲಲ್ಲಿ ಬೆಳ್ಳಿ ಒಡವೆ- 3 ತಿಂಗಳ ಹೆಣ್ಣು ಮಗುವನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ್ರು

    ಹೊಸ ಬಟ್ಟೆ, ಕೈ,ಕಾಲಲ್ಲಿ ಬೆಳ್ಳಿ ಒಡವೆ- 3 ತಿಂಗಳ ಹೆಣ್ಣು ಮಗುವನ್ನ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋದ್ರು

    ಕೋಲಾರ: ಅನಾರೋಗ್ಯ ಪೀಡಿತ ಮೂರು ತಿಂಗಳ ಮುದ್ದಾದ ಹೆಣ್ಣು ಮಗುವೊಂದನ್ನ ಪೋಷಕರು ಬಿಟ್ಟು ಹೋಗಿರುವ ಘಟನೆ ಕೋಲಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ.

    ಕಳೆದ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿ ಮಗುವನ್ನು ಬಿಟ್ಟು ಹೋಗಿದ್ದು, ಮಗು ಅಳುವ ಶಬ್ದವನ್ನು ಕೇಳಿ ಆಸ್ಪತ್ರೆ ಸಿಬ್ಬಂದಿ ಹೋಗಿ ನೋಡಿದ್ದಾರೆ. ಸುಮಾರು ಮೂರು ತಿಂಗಳ ಹೆಣ್ಣು ಮಗುವೊಂದು ಅನಾಥವಾಗಿ ಅಳುತ್ತಾ ಮಲಗಿದ್ದನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಮಗುವನ್ನು ತಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

    ಮಗುವಿಗೆ ಪಿಡ್ಸ್ ಇದ್ದು ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಸದ್ಯ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಗುವಿಗೆ ಆರೈಕೆ ಮಾಡುತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಾಗೂ ಕೋಲಾರ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಮಗು ನೀಲಿ ಬಣ್ಣದ ಬಟ್ಟೆ ಧರಿಸಿದ್ದು, ಕಾಲಿಗೆ ಬೆಳ್ಳಿ ಕಾಲೊಂದಿಗೆ, ಕೈಗೆ ಬಳೆಗಳನ್ನೆಲ್ಲಾ ಹಾಕಲಾಗಿದೆ. ಮಗುವನ್ನ ನೋಡಿದ್ರೆ ಯಾರೋ ಸ್ಥಿತಿವಂತರ ಮನೆಯ ಮಗು ಎಂದು ತಿಳಿದುಬರುತ್ತಿದೆ. ಆದ್ರೆ ಮಗುವನ್ನು ಯಾಕೆ ಆಸ್ಪತ್ರೆ ಬಳಿ ಬಿಟ್ಟುಹೋಗಿದ್ದಾರೆ ಅನ್ನೋದು ತಿಳಿದುಬಂದಿಲ್ಲ. ಪೋಷಕರಿಂದ ದೂರಾಗಿ ಅನಾಥವಾಗಿರುವ ಮಗು ಸದ್ಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಪ್ರೀತಿಯ ಆರೈಕೆಯಲ್ಲಿದೆ.