Tag: girl baby

  • ಮಗುವಿನ ಲಿಂಗ ನೋಡಲು ಹೊಟ್ಟೆಗೆ ಇರಿತ- ಗಂಡು ಶಿಶು ಸಾವು

    ಮಗುವಿನ ಲಿಂಗ ನೋಡಲು ಹೊಟ್ಟೆಗೆ ಇರಿತ- ಗಂಡು ಶಿಶು ಸಾವು

    – ಇನ್ಮುಂದೆ ಗರ್ಭಧರಿಸಲು ಸಾಧ್ಯವಿಲ್ಲ ಎಂದ ವೈದ್ಯರು

    ಲಕ್ನೋ: ವ್ಯಕ್ತಿಯೊಬ್ಬ ಹುಟ್ಟುವ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದನು. ಇದೀಗ ಮಹಿಳೆಯ ಗರ್ಭದಲ್ಲಿದ್ದ ಶಿಶು ಸಾವನ್ನಪ್ಪಿದ್ದು, ಹೊಟ್ಟೆಯಲ್ಲಿ ಗಂಡು ಮಗುವಿತ್ತು ಎಂಬುದು ಗೊತ್ತಾಗಿದೆ. ಅಲ್ಲದೇ ಆಕೆಯ ಗರ್ಭಕೋಶಕ್ಕೆ ತೀವ್ರವಾಗಿ ಗಾಯಗಳಾಗಿರುವ ಪರಿಣಾಮ ಇನ್ನೂ ಮುಂದೆ ಮಹಿಳೆ ಗರ್ಭಧರಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಹೆಣ್ಣೋ, ಗಂಡೋ ನೋಡಲು ಪತ್ನಿ ಹೊಟ್ಟೆಗೆ ಇರಿದ ಪತಿ

    ಈ ಭಯಾನಕ ಘಟನೆ ಉತ್ತರ ಪ್ರದೇಶದ ಬುದೌನ್‍ನಲ್ಲಿ ಭಾನುವಾರ ನಡೆದಿತ್ತು. ಏಳು ತಿಂಗಳ ಗರ್ಭಿಣಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮೂಲಕ ಅನಿತಾ ದೇವಿಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗರ್ಭದಲ್ಲಿದ್ದ ಗಂಡು ಶಿಶು ಸಾವನ್ನಪ್ಪಿದೆ. ಅಲ್ಲದೇ ದೇವಿಯ ಗರ್ಭಾಶಯಕ್ಕೆ ತೀವ್ರವಾಗಿ ಗಾಯವಾದ ಕಾರಣ ಆಕೆ ಮುಂದೆ ಎಂದಿಗೂ ಗರ್ಭಧರಿಸಲು ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯಕ್ಕೆ ದೇವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಪತಿ ಪನ್ನಾಲಾಲ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಶಿಶುವಿನ ಮರಣದ ನಂತರ ಪೊಲೀಸರು ಹೆಚ್ಚಿನ ಪ್ರಕರಣಗಳನ್ನು ಆತನ ವಿರುದ್ಧ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಇನ್ನೂ ಐದು ಮಕ್ಕಳು ಅನಿತಾಳ ಸಂಬಂಧಿಕರ ಮನೆಯಲ್ಲಿದ್ದಾರೆ.

    ನನ್ನ ಸಹೋದರಿ ಸ್ಥಿತಿ ನೋಡಿ ನಾನು ಭರವಸೆ ಕಳೆದುಕೊಂಡಿದ್ದೆ. ಆದರೆ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ದೇವರಂತೆ ಬಂದು ನನ್ನ ಸಹೋದರಿಯ ಜೀವವನ್ನು ಉಳಿಸಿದರು. ದುರದೃಷ್ಟವಶಾತ್ ಆಕೆಯ ಗರ್ಭದಲ್ಲಿರುವ ಮಗು ನಿಜವಾಗಿ ಗಂಡು ಮಗುವಾಗಿತ್ತು. ಆದರೆ ಗರ್ಭಾಶಯಕ್ಕೆ ಆದ ಗಾಯದಿಂದಾಗಿ ಮಗು ಸಾವನ್ನಪ್ಪಿದೆ. ಅಲ್ಲದೇ ತನ್ನ ತಂಗಿ ಮತ್ತೆ ಗರ್ಭಧರಿಸಲು ಸಾಧ್ಯವಾಗದಿರಬಹುದು ಅಂತ ವೈದ್ಯರು ತಿಳಿಸಿದ್ದಾರೆ ಎಂದು ದೇವಿಯ ಸಹೋದರ ರವಿ ಸಿಂಗ್ ಹೇಳಿದ್ದಾರೆ.

    ಮಹಿಳೆಯ ವೈದ್ಯಕೀಯ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ನಾವು ಭ್ರೂಣ ಹತ್ಯೆಯ ಆರೋಪವನ್ನು ಆತನ ವಿರುದ್ಧ ದಾಖಲಿಸುತ್ತೇವೆ. ಈಗಾಗಲೇ ಆರೋಪಿ ಪನ್ನಾಲಾಲ್‍ನನ್ನು ಜೈಲಿಗೆ ಕಳುಹಿಸಲಾಗಿದೆ. ಸದ್ಯಕ್ಕೆ ಹೆಚ್ಚಿನ ತನಿಖೆಗಾಗಿ ನಾವು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ ಎಂದು ಸ್ಟೇಷನ್ ಹೌಸ್ ಆಫೀಸರ್ ಸುಧಾಕರ್ ಪಾಂಡೆ ತಿಳಿಸಿದರು.

    ನಡೆದಿದ್ದೇನು?
    ಆರೋಪಿ ಪನ್ನಾಲಾಲ್ ಮತ್ತು ಪತ್ನಿ ಅನಿತಾ ದೇವಿ ದಂಪತಿಗೆ ಐವರು ಹೆಣ್ಣು ಮಕ್ಕಳಿದ್ದು, ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಪನ್ನಾಲಾಲ್‍ಗೆ ಗಂಡು ಮಗುವಿನ ಅತಿಯಾದ ವ್ಯಾಮೋಹವಿತ್ತು. ಈ ಸಂಬಂಧ ದಂಪತಿ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು. ಭಾನುವಾರ ದಂಪತಿ ನಡುವೆ ಹುಟ್ಟುವ ಮಗುವಿನ ಬಗ್ಗೆ ಜಗಳ ನಡೆದಿದೆ. ಈ ವೇಳೆ ಪನ್ನಾಲಾಲ್ ಮಗು ಯಾವುದು ಎಂದು ನೋಡಲು ಏಳು ತಿಂಗಳ ಗರ್ಭಿಣೆ ಹೊಟ್ಟೆಗೆ ಇರಿದಿದ್ದನು.

  • 7 ತಿಂಗಳ ಹೆಣ್ಣು ಮಗುವನ್ನು ಬಕೆಟ್‍ ನೀರಿನಲ್ಲಿ ಮುಳುಗಿಸಿ ಕೊಂದ ವಕೀಲ

    7 ತಿಂಗಳ ಹೆಣ್ಣು ಮಗುವನ್ನು ಬಕೆಟ್‍ ನೀರಿನಲ್ಲಿ ಮುಳುಗಿಸಿ ಕೊಂದ ವಕೀಲ

    ಚಿಕ್ಕಮಗಳೂರು: ಹೆಣ್ಣು ಮಗು ಎಂದು ಏಳು ತಿಂಗಳ ಮಗುವನ್ನು ಅಪ್ಪನೇ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.

    ಉಮಾಶಂಕರ್ ಮಗುವನ್ನ ಕೊಂದ ಅಪ್ಪನಾಗಿದ್ದು, ಈತ ವಕೀಲನಾಗಿದ್ದು, ಮೂರು ವರ್ಷಗಳ ಹಿಂದೆ ಕಡೂರು ನ್ಯಾಯಾಲಯದಲ್ಲಿ ಡಿ ದರ್ಜೆ ನೌಕರಳಾಗಿರೋ ಮಂಜುಳ ಎಂಬಾಕೆಯನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದನು. ಮಂಜುಳಾಗೆ ಏಳು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಆರಂಭದಿಂದಲೂ ಹೆಣ್ಣು ಮಗು ಎಂದು ಮಂಜುಳಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು.

    ಗುರುವಾರ ಮಂಜುಳ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಗುವನ್ನ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ತನಗೇನು ಗೊತ್ತಿಲ್ಲದಂತೆ ಇದ್ದ ಎಂದು ಆರೋಪಿಸಿರೋ ಮಗುವಿನ ತಾಯಿ ಮಂಜುಳ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಕಡೂರು ಪೊಲೀಸರು ಆರೋಪಿ ಉಮಾಶಂಕರ್ ನನ್ನ ಬಂಧಿಸಿದ್ದಾರೆ.

    ಬಂಧಿತ ಉಮಾಶಂಕರ್ ನ ಮೊದಲ ಹೆಂಡತಿಗೆ ಗಂಡು ಮಗುವಿದ್ದು, ವಿಚ್ಛೇದನವನ್ನೂ ಪಡೆದಿರಲಿಲ್ಲ. ಎರಡನೇ ಹೆಂಡತಿಗೆ ಹೆಣ್ಣು ಮಗು ಆಯ್ತು, ಆಸ್ತಿ ಕೈ ತಪ್ಪಿ ಹೋಗುತ್ತೆಂದು ಏಳು ತಿಂಗಳ ಹೆಣ್ಣು ಮಗು ಲಾವಣ್ಯಳನ್ನ ಅಪ್ಪನೇ ಕೊಲೆ ಮಾಡಿದ್ದಾನೆಂಬ ಮಾಹಿತಿ ಪ್ರಾಥಮಿಕ ವರದಿಯಲ್ಲಿ ಲಭ್ಯವಾಗಿದೆ.

  • ನವಜಾತ ಹೆಣ್ಣು ಶಿಶುವನ್ನ ಜಮೀನಿನಲ್ಲಿ ಬಿಸಾಕಿದ ಪಾಪಿಗಳು

    ನವಜಾತ ಹೆಣ್ಣು ಶಿಶುವನ್ನ ಜಮೀನಿನಲ್ಲಿ ಬಿಸಾಕಿದ ಪಾಪಿಗಳು

    ರಾಯಚೂರು: ಆಗತಾನೆ ಜನಿಸಿದ ಹಸುಗೂಸನ್ನು ಜಮೀನೊಂದರಲ್ಲಿ ಎಸೆದು ಹೋದ ಹೃದಯ ವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ನಡದಿದೆ. ಒಂದು ದಿನದ ಮಗುವನ್ನು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಬಿಸಾಡಿದ್ದಾರೆ ಅದೃಷ್ಟವಶಾತ್ ಶಿಶು ಪ್ರಾಣಾಪಾಯದಿಂದ ಪಾರಾಗಿದೆ.

    ಮೇಲ್ನೋಟಕ್ಕೆ ನೋಡಿದಾಗ ಹೆಣ್ಣು ಮಗು ಎಂಬ ಕಾರಣಕ್ಕೆ ಹೀಗೆ ಬಿಸಾಡಿರಬಹುದೆಂಬ ಅನಮಾನ ವ್ಯಕ್ತವಾಗಿದೆ. ಗ್ರಾಮದ ಕುಮಾರಗೌಡ ಎಂಬವರ ಜಮೀನಿನಲ್ಲಿ ಹೆಣ್ಣು ಶಿಶುವನ್ನ ಬಿಸಾಡಿದ್ದಾರೆ. ಹಸಿವಿನಿಂದ ಅಳುತ್ತಿದ್ದ ಮಗುವನ್ನು ಬಹಿರ್ದೆಸೆಗೆ ತೆರಳಿದ ಮಲ್ಲಿಕಾರ್ಜುನ ಹಾಗೂ ಕಿರಣ್ ಎಂಬವರು ಗಮನಿಸಿದ್ದಾರೆ. ಸ್ಥಳೀಯರಿಗೆ ಮಾಹಿತಿ ನೀಡಿದ್ದು ಮಗುವನ್ನು ರಕ್ಷಿಸಿದ್ದಾರೆ.

    ಮಾಹಿತಿ ಮೇರೆಗೆ ಬಂದ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಿಶುವಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಶಿಶುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಿಂಗಸೂಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ- 15 ದಿನದ ಕಂದಮ್ಮನ ಮಾರಿದ ತಂದೆ

    ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ- 15 ದಿನದ ಕಂದಮ್ಮನ ಮಾರಿದ ತಂದೆ

    – ಇದ್ದ ಕೆಲಸವನ್ನೂ ಕಿತ್ಕೊಂಡ ಕೊರೊನಾ
    – ಜೀವನ ನಿರ್ವಹಣೆಗಾಗಿ ಮಗು 45 ಸಾವಿರಕ್ಕೆ ಮಾರಾಟ

    ಭುವನೇಶ್ವರ: ಜೀವನ ನಿರ್ವಹಣೆಗಾಗಿ 15 ದಿನದ ಹೆಣ್ಣು ಮಗುವನ್ನು ತಂದೆ ಮಾರಾಟ ಮಾಡಿರುವ ಘಟನೆ ಅಸ್ಸಾಂ ರಾಜ್ಯದ ಕೊಕ್ರಾಝಾರ್ ಜಿಲ್ಲೆಯಲ್ಲಿ ನಡೆದಿದೆ.

    ದೀಪಕ್ ಬ್ರಹ್ನಾ ಮಗುವನ್ನು ಮಾರಿದ ತಂದೆ. ಗುಜರಾತಿನಲ್ಲಿ ಕೆಲಸ ಮಾಡಿಕೊಂಡಿದ್ದ ದೀಪಕ್ ಲಾಕ್‍ಡೌನ್ ಆಗಿದ್ದರಿಂದ ಸ್ವಗ್ರಾಮಕ್ಕೆ ಆಗಮಿಸಿದ್ದನು. ಗ್ರಾಮಕ್ಕೆ ಬಂದ್ರೂ ದೀಪಕ್ ಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಕಳೆದ ದಿನಗಳಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈ ಪರಿಸ್ಥಿತಿಯಲ್ಲಿ 15 ದಿನಗಳ ಹಿಂದೆ ದೀಪಕ್ ಪತ್ನಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಹುಟ್ಟಿದ ಮಗುವಿನ ಆರೈಕೆ ಕುಟುಂಬಕ್ಕೆ ಕಷ್ಟವಾಗಿತ್ತು. ಹೀಗಾಗಿ ದೀಪಕ್ ತನ್ನ 15 ದಿನದ ಮಗಳನ್ನು ಇಬ್ಬರು ಮಹಿಳೆಗೆ ಮಾರಿದ್ದನು. ಶುಕ್ರವಾರ ಎನ್‍ಜಿಓ ವೊಂದರ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ದೀಪಕ್ ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ನಿಧಾನ್ ಎನ್‍ಜಿಓ ಅಧ್ಯಕ್ಷ ದಿಗಂಬರ್ ನರ್ಜರಿ, ಲಾಕ್‍ಡೌನ್ ಆಗಿದ್ದರಿಂದ ಗುಜರಾತಿನಲ್ಲಿ ಕೆಲಸ ಮಾಡಿಕೊಂಡಿದ್ದ ದೀಪಕ್ ಸ್ವಗ್ರಾಮಕ್ಕೆ ಹಿಂದಿರುಗಿದ್ದನು. ಗ್ರಾಮದಲ್ಲಿ ದೀಪಕ್ ನಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. 15 ದಿನಗಳ ಹಿಂದೆ ದೀಪಕ್ ಎರಡನೇ ಹೆಣ್ಣು ಮಗುವಿಗೆ ತಂದೆಯಾಗಿದ್ದನು. ಜೀವನ ನಿರ್ವಹಣೆಗೆ ಹಣವಿಲ್ಲದೇ ಅಸಹಾಯಕನಾಗಿದ್ದ ದೀಪಕ್ ಮಗುವನ್ನು ಮಾರಲು ನಿರ್ಧರಿಸಿದ್ದನು. ಪತ್ನಿಗೆ ವಿಷಯ ತಿಳಿಸದೇ ಮಗುವನ್ನು ಇಬ್ಬರು ಮಹಿಳೆಯರಿಗೆ 45 ಸಾವಿರ ರೂಪಾಯಿಗೆ ಮಾರಿದ್ದನು ಎಂದು ಹೇಳಿದ್ದಾರೆ.

     

  • 54 ದಿನದ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ತಂದೆ- ಪುಟ್ಟ ಕಂದಮ್ಮನ ಸ್ಥಿತಿ ಗಂಭೀರ

    54 ದಿನದ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ತಂದೆ- ಪುಟ್ಟ ಕಂದಮ್ಮನ ಸ್ಥಿತಿ ಗಂಭೀರ

    – ಮೆದುಳಿನಲ್ಲಿ ರಕ್ತಸ್ರಾವ, ಜಜ್ಜಿ ಹೋದವು ಕಾಲುಗಳು

    ತಿರುವನಂತಪುರಂ: ತಂದೆಯೇ 54 ದಿನದ ತನ್ನ ಪುಟ್ಟ ಕಂದಮ್ಮನನ್ನು ಕೊಲೆ ಮಾಡಲು ಯತ್ನಿಸಿರುವ ಅಮಾನವೀಯ ಘಟನೆಯೊಂದು ಕೇರಳದ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ನಡೆದಿದೆ.

    ತಂದೆ ತನ್ನ ಮಗಳನ್ನು ಬೆಡ್‍ನಿಂದ ನೆಲಕ್ಕೆ ಬಿಸಾಕಿದ ಪರಿಣಾಮ ಮಗುವಿನ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಣ್ಣು ಮಗುವಿಗೆ ಇಂದು ಸರ್ಜರಿ ನಡೆಯಲಿದೆ.

    ತಂದೆಯ ಕೃತ್ಯದಿಂದ ತಲೆಗೆ ಗಂಭೀರ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಕಾಲುಗಳು ಕೂಡ ಜಜ್ಜಿ ಹೋಗಿವೆ. ಸದ್ಯ ಮೆದುಳಿನಲ್ಲಿ ಆಗುತ್ತಿರುವ ರಕ್ತಸ್ರಾವ ನಿಯಂತ್ರಣಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಸೋಜನ್ ಅವರು ತಿಳಿಸಿದ್ದಾರೆ.

    ಮಗುವಿನ ಪೋಷಕರು ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಅಲ್ಲದೆ ಮಗು ಮಂಚದಿಂದ ಕೆಳಗೆ ಬಿದ್ದು ಗಾಯಗಳಾಗಿವೆ ಎಂದು ಮೊದಲು ಹೇಳಿದ್ದಾರೆ. ಆದರೆ ಪೋಷಕರ ಮಾತು ಕೇಳಿ ಶಂಕೆ ವ್ಯಕ್ತಪಡಿಸಿದ ವೈದ್ಯರು, ಇಬ್ಬರನ್ನು ಮತ್ತಷ್ಟು ಪ್ರಶ್ನಿಸಿದ್ದಾರೆ. ಈ ವೇಳೆ ಅವರು, ಸೊಳ್ಳೆ ಬ್ಯಾಟ್ ಬಳಸುವ ವೇಳೆ ಆಕಸ್ಮಿಕವಾಗಿ ಮಗುವಿನ ಮೇಲೆ ಗಾಯಗಳಾಗಿವೆ ಎಂದು ಸುಳ್ಳು ಹೇಳಿದ್ದಾರೆ. ಪೋಷಕರ ಹೇಳಿಕೆಯಿಂದ ಮತ್ತಷ್ಟು ಶಂಕೆ ವ್ಯಕ್ತಪಡಿಸಿದ ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರಿಗೆ ಮಾಹಿತಿ ನೀಡಿ 2 ಗಂಟೆಯೊಳಗೆ ಪುಥೆನ್ ಕುರಿಶ್ ಪೊಲೀಸರು, ಮಗುವಿನ ಪೋಷಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

    ನಡೆದಿದ್ದೇನು?
    ಅಂಗಮಾಲಿ ನಿವಾಸಿ ಶೈಜು ಥೋಮಸ್(40) ತನ್ನ 54 ದಿನಗಳನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ತನ್ನ ಮಗುವಲ್ಲ ಎಂದು ಶಂಕೆ ವ್ಯಕ್ತಪಡಿಸಿ ಹಾಗೂ ಹೆಣ್ಣು ಮಗುವೆಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆ ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದ್ದು, ಮಗು ಜೋರಾಗಿ ಅಳುತ್ತಿದ್ದರಿಂದ ಸಿಟ್ಟುಗೊಂಡು ಮಗುವನ್ನು ಬೆಡ್ ನಿಂದ ಬಿಸಾಕಿದ್ದಾನೆ. ಅಲ್ಲದೆ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ತಾಯಿಯ ಕೈಯಿಂದ ಬಲವಂತವಾಗಿ ಮಗುವನ್ನು ಎಳೆದು, ಪುಟ್ಟ ಕಂದಮ್ಮನ ತಲೆಗೆ ತನ್ನ ಕೈಯಿಂದ ಎರಡು ಬಾರಿ ಹೊಡೆದಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಶೈಜು ಪತ್ನಿ ಮೂಲತಃ ನೇಪಾಳದವರು. ಫೇಸ್ ಬುಕ್ ಮೂಲಕ ಪರಿಚಯವಾಗಿ ಇಬ್ಬರೂ ಕಳೆದ ವರ್ಷವಷ್ಟೇ ಮದುವೆ ಮಾಡಿಕೊಂಡಿದ್ದರು. ಕಳೆದ 10 ತಿಂಗಳ ಹಿಂದೆ ಜೊಸೆಪುರಂನ ಅಂಗಮಾಲಿ ಎಂಬಲ್ಲಿ ದಂಪತಿ ವಾಸವಾಗಿದ್ದರು. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಮಗು ಅತ್ತಿದ್ದರಿಂದಲೇ ಸಿಟ್ಟುಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಕಾಣೆಯಾಗಿದ್ದ ಹೆಣ್ಣು ಮಗು ಶವವಾಗಿ ಪತ್ತೆ- ಪೋಷಕರಿಂದಲೇ ಕೊಲೆ ಶಂಕೆ

    ಕಾಣೆಯಾಗಿದ್ದ ಹೆಣ್ಣು ಮಗು ಶವವಾಗಿ ಪತ್ತೆ- ಪೋಷಕರಿಂದಲೇ ಕೊಲೆ ಶಂಕೆ

    ಕೋಲಾರ: ಬೆಳಗ್ಗೆ ಕಾಣೆಯಾಗಿದ್ದ ಹೆಣ್ಣು ಮಗುವೊಂದು ಮಧ್ಯಾಹ್ನ ಶವವಾಗಿ ಪತ್ತೆಯಾದ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಛತ್ರಕೋಡಿಹಳ್ಳಿ ಗ್ರಾಮದ ರಘುಪತಿ ಹಾಗೂ ಹರ್ಷಿತಾ ದಂಪತಿಯ ಒಂದೂವರೆ ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಪೋಷಕರೇ ಮಗುವನ್ನು ಕೊಲೆ ಮಾಡಿ, ಕಾಣೆಯಾಗಿದೆ ಎಂದು ಕಥೆ ಕಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಮಗು ಕಾಣೆಯಾಗಿದೆ ಎಂದು ರಘುಪತಿ ದಂಪತಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಇಲಾಖೆ, ಮಕ್ಕಳ ರಕ್ಷಣಾ ಘಟಕ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮಗುವಿನ ಸುಳಿವೇ ಸಿಗದಿದ್ದಾಗ ನಾಯಿ ಅಥವಾ ಕೋತಿಗಳೇನಾದರು ಹೊತ್ತೊಯ್ದಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಊರು ಕೇರಿ, ಮನೆ ಮಠ ಎಲ್ಲೆಡೆ ಹುಡಕಾಡಿದ್ದರು.

    ಮಧ್ಯಾಹ್ನವಾದರೂ ಮಗುವಿನ ಸುಳಿವು ಸಿಕ್ಕಿರಲಿಲ್ಲ. ಸ್ಥಳಕ್ಕೆ ಬಂದ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರು ಕೂಡ ಪರಿಶೀಲನೆ ನಡೆಸಿದರು. ನಂತರ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದಾಗ ಮನೆಯಲ್ಲಿನ ನೀರಿನ ಸಂಪ್ ಬಳಿ ನಾಯಿ ಗಿರಿಕಿ ಹೊಡೆಯುತ್ತಿತ್ತು. ಅನುಮಾನ ಬಂದು ಸಂಪ್ ಒಳಗೆ ನೋಡಿದಾಗ ಮಗುವಿನ ಶವ ಪತ್ತೆಯಾಗಿತ್ತು.

    ಹೆಣ್ಣು ಮಗು ಬೇಡವಾಗಿದ್ದರಿಂದ ಪೋಷಕರೇ ಮಗುವನ್ನು ಸಂಪ್‍ನಲ್ಲಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ ಮಗುವಿನ ದೊಡ್ಡಪ್ಪ, ‘ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನಮಗೆ ಹಣ್ಣು ಮಗು ಅಂದ್ರೆ ತುಂಬಾ ಇಷ್ಟ. ನನ್ನ ತಮ್ಮನಿಗಿದ್ದ ಹೆಣ್ಣು ಮಗು ಈಗ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.

    ಮಗುವಿನ ಕೊಲೆಗೆ ನಿಖರ ಕಾರಣವಾದರು ಏನು? ಮಗುವನ್ನು ಸಂಪ್‍ಗೆ ಹಾಕಿ ಇಷ್ಟೆಲ್ಲಾ ಹೈಡ್ರಾಮಾ ಸೃಷ್ಟಿಸಿದ್ದಾದರೂ ಯಾಕೆ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ. ಸದ್ಯ ಮಗುವಿನ ಅಜ್ಜಿ ರತ್ನಮ್ಮ, ತಾಯಿ ಹರ್ಷಿತಾ, ತಂದೆ ರಘುಪತಿಯನ್ನ ಕೋಲಾರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

  • 11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    11 ಹೆಣ್ಣುಮಕ್ಕಳ ನಂತ್ರ ಜನಿಸಿತು ಗಂಡು ಮಗು

    – ಕುಟುಂಬದಲ್ಲಿ ಮುಗಿಲುಮುಟ್ಟದ ಸಂಭ್ರಮ

    ಜೈಪುರ: ಒಂದು ಬೇಕು ಎರಡು ಸಾಕು ಹೋಗಿ ಇದೀಗ ಒಂದೇ ಮಗು ಅನ್ನೋ ನಿರ್ಧಾರಕ್ಕೆ ಬಂದ್ರೆ ಜೈಪುರದ ಮಹಿಳೆಯೊಬ್ಬಳು ಗಂಡು ಮಗುವಿಗೋಸ್ಕರ ಬರೋಬ್ಬರಿ 12 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಹೌದು. ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿ ಗುಡ್ಡಿ ಕೊನೆಗೂ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನೆರೆಹೊರೆಯವರ ಬಾಯಿಮುಚ್ಚಿಸಿದ್ದಾಳೆ. ನವೆಂಬರ್ 20ರಂದು ಗಿಡ್ಡು ನಗರ ಆಸ್ಪತ್ರೆಯಲ್ಲಿ 12ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೆ ಹೆಣ್ಣು ಮಕ್ಕಳನ್ನು ಹೆತ್ತಿದ್ದಕ್ಕೆ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದು, ಆಘಾತಕಾರಿ ಅನುಭವವಾಗಿದೆ ಎಂದು ಗಿಡ್ಡು ಹೇಳುತ್ತಾಳೆ.

    42 ವರ್ಷದ ಗಿಡ್ಡುವಿನ ಪತಿ ಕೂಡ ಸಂತತಿ ಮುಂದುವರಿಯಲು ಗಂಡು ಮಗು ಬೇಕು ಎಂದು ಆಸೆ ಪಟ್ಟಿದ್ದರು. ಅಲ್ಲದೆ ಪತಿ ಕೃಷ್ಣ ಕುಮಾರ್ ಕೂಡ ಗಂಡು ಮಗು ಇಲ್ಲದೆ ನೊಂದಿದ್ದರು. ಸದ್ಯ ಗಂಡು ಮಗು ಹುಟ್ಟಿರುವುದು ಎಲ್ಲರಿಗೂ ಸಂತಸ ತಂದಿದೆ.

    ನವೆಂಬರ್ 20ರಂದು ಗುಡ್ಡಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಇಬ್ಬರನ್ನು ಬಿಟ್ಟು ಉಳಿದ ಎಲ್ಲಾ ಹೆಣ್ಣು ಮಕ್ಕಳು ಓದುತ್ತಿದ್ದಾರೆ. 11 ಮಂದಿ ಹೆಣ್ಣು ಮಕ್ಕಳಲ್ಲಿ ಮೂವರಿಗೆ ಈಗಾಗಲೇ ಮದುವೆಯಾಗಿದ್ದು ಕಿರಿಯ ಮಗಳಿಗೆ 22 ವರ್ಷ ವಯಸ್ಸಾಗಿದೆ. ಇಷ್ಟೊಂದು ಮಕ್ಕಳನ್ನು ಹೇಗೆ ಸಾಕುತ್ತೀರಿ ಎಂದು ಕೆಲವರು ಗುಡ್ಡಿಯನ್ನು ಪ್ರಶ್ನಿಸಿದರೆ, ಆಕೆ ಒಂದು ಸಣ್ಣ ನಗು ಬೀರುತ್ತಾಳೆ.

    ಹಲವು ಹೆಣ್ಣು ಮಕ್ಕಳ ನಂತರ ಗಂಡು ಮಗು ಜನಿಸಿದ್ದು ಇದೇ ಮೊದಲ ಕೇಸಲ್ಲ. ಈ ಹಿಂದೆ ಅಂದರೆ 2017ರಲ್ಲಿ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು 10 ಹೆಣ್ಣು ಮಕ್ಕಳ ನಂತರ ಗಂಡು ಮಗುವಿಗೆ ಜನ್ಮ ನಿಡಿದ್ದರು.

  • ಹೆಣ್ಣು ಶಿಶುವನ್ನು ಮಾರಿ ಮೊಬೈಲ್, ಚಿನ್ನ ಖರೀದಿಸಿದ ದಿನಗೂಲಿ ಕಾರ್ಮಿಕ!

    ಹೆಣ್ಣು ಶಿಶುವನ್ನು ಮಾರಿ ಮೊಬೈಲ್, ಚಿನ್ನ ಖರೀದಿಸಿದ ದಿನಗೂಲಿ ಕಾರ್ಮಿಕ!

    ಚೆನ್ನೈ: ದಿನಗೂಲಿ ಕಾರ್ಮಿಕನೊಬ್ಬ ಆಗ ತಾನೇ ಹುಟ್ಟಿದ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವನ್ನು ಮಾರಿ ಮೊಬೈಲ್ ಹಾಗೂ ಚಿನ್ನದ ಸರ ಖರೀದಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ಯೇಸುರುಧಯರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ನೀಡುವ ಮೂಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಏನಿದು ಘಟನೆ?
    ನವೆಂಬರ್ 8ರಂದು ಯೇಸುರುಧಯರಾಜ್ ಪತ್ನಿ ಪುಷ್ಪಲತಾ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ದಂಪತಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೀಗಾಗಿ ಇನ್ನೊಂದು ಹೆಣ್ಣು ಮಗು ಬೇಡ ಎಂದು ನಿರ್ಧರಿಸಿ ಗಂಡು ಮಗುವನ್ನು ಇಟ್ಟುಕೊಂಡು ಹೆಣ್ಣು ಮಗುವನ್ನು ಮಾರಾಟ ಮಾಡಲು ಆರೋಪಿ ತಂದೆ ತೀರ್ಮಾನಿಸಿದ್ದಾನೆ. ಅಲ್ಲದೆ ದಲ್ಲಾಳಿಗಳ ಮುಖಾಂತರ ತಿರುನೆಲ್ವೇಲಿಯಲ್ಲಿ ಮಕ್ಕಳಿಲ್ಲದವರು ಇದ್ದರೆ ತಿಳಿಸಿ. ಹೆಣ್ಣು ಮಗುವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾನೆ.

    ಹೀಗೆ 1 ಲಕ್ಷದ 80 ಸಾವಿರಕ್ಕೆ ಮಗು ಮಾರಾಟ ಕೂಡ ಆಗುತ್ತದೆ. ಅದರಲ್ಲಿ 80 ಸಾವಿರವನ್ನು ಮೂವರು ಬ್ರೋಕರ್ ಗಳು ಹಂಚಿಕೊಂಡು ಉಳಿದ ಹಣವನ್ನು ಆರೋಪಿ ತಂದೆಯ ಕೈಗಿತ್ತಿದ್ದಾರೆ.

    ವರದಿಗಳ ಪ್ರಕಾರ, ಆರೋಪಿ ಮಗು ಮಾರಾಟ ಮಾಡುವ ವಿಚಾರವನ್ನು ತನ್ನ ಪತ್ನಿಯ ಬಳಿ ತಿಳಿಸಿರಲಿಲ್ಲ. ಹೀಗಾಗಿ ತನ್ನ ಕೈಗೆ ಹಣ ಸಿಕ್ಕಿದ ಕೂಡಲೇ ಆತ ಮದ್ಯ ಹಾಗೂ ಮೊಬೈಲ್ ಖರೀದಿಸಿದ್ದಾನೆ. ನಂತರ ಗಂಡು ಮಗುವಿಗೆ ಚಿನ್ನವನ್ನು ಖರೀದಿ ಮಾಡಿದ್ದಾನೆ. ಜೊತೆಗೆ ತಾನು ಅಡ ಇಟ್ಟಿದ್ದ ಬೈಕ್ ಹಾಗೂ ಸೈಕಲ್ ನನ್ನು ಬಿಡಿಸಿಕೊಂಡಿದ್ದಾನೆ.

    ಇತ್ತ ತನ್ನ ಮಗನನ್ನು ಮಾರಿರುವ ಗಂಡನ ಮೋಸದ ವಿಚಾರ ಪತ್ನಿ ಪುಷ್ಪಲತಾ ಗಮನಕ್ಕೆ ಬಂದಿದ್ದು, ಕ್ಯಾತೆ ತೆಗೆದಿದ್ದಾಳೆ. ಪತಿ ಹಾಗೂ ಪತ್ನಿಯ ಜಗಳ ತಾರಕಕ್ಕೇರುತ್ತಿದ್ದಂತೆಯೇ ಆಸ್ಪತ್ರೆಯ ನರ್ಸ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೂವರು ಬ್ರೋಕರ್ ಗಳು ಹಾಗೂ ಆರೋಪಿ ಯೇಸುರುಧಯರಾಜ್ ವಿರುದ್ಧ ಐಪಿಸಿ ಸೆಕ್ಷನ್ 363(ಅಪಹರಣ), 120ಬಿ(ಕ್ರಮಿನಲ್ ಪಿತೂರಿ), 420(ವಂಚನೆ) ಹಾಗೂ 147(ಗಲಭೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ- ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ

    ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ- ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ

    – ಚಿತ್ರದುರ್ಗದಲ್ಲಿ ಅಮಾನವೀಯ ಘಟನೆ

    ಚಿತ್ರದುರ್ಗ: ಆರೋಗ್ಯ ಕೇಂದ್ರದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಬಯಲಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಮಾನವೀಯ ಘಟನೆಯೊಂದು ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಘಟನೆ ವಿವರ:
    ಸೋಮವಾರ 11 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪತಿ ಚೌಡಪ್ಪ ಕೂಡಲೇ ಗಂಗಮಲ್ಲಮ್ಮ(30) ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ಮಧ್ಯಾಹ್ನದವರೆಗೆ ಕಾಯುವಂತೆ ಹೇಳಿದ್ದಾರೆ. ಅಲ್ಲದೇ ಸ್ವಲ್ಪ ಸಮಯದ ಬಳಿಕ ಬಂದು ಇದು ಊಟದ ಸಮಯವಾಗಿದೆ. ಹೀಗಾಗಿ ಮನೆಗೆ ತೆರಳಿ ಮಧ್ಯಾಹ್ನದ ನಂತರ ಬನ್ನಿ ಎಂದು ಆರೋಗ್ಯ ಕೇಂದ್ರದ ನರ್ಸ್ ಹಾಗೂ ವೈದ್ಯರು ಸೂಚಿಸುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ ಎಂದು ಪತಿ ಚೌಡಪ್ಪ ಆರೋಪಿಸಿದ್ದಾರೆ.

    ವೈದ್ಯರ ಸೂಚನೆಯಂತೆ ಚೌಡಪ್ಪ, ತನ್ನ ಗರ್ಭಿಣಿ ಪತ್ನಿಯನ್ನು ಆರೋಗ್ಯ ಕೇಂದ್ರದಿಂದ ಮನೆಗೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಗಂಗಮಲ್ಲಮ್ಮ ಅವರಿಗೆ ಪ್ರಸವ ನೋವು ಜಾಸ್ತಿಯಾಗಿದೆ. ಹೀಗಾಗಿ ಮಹಿಳೆಯರು ಬಯಲಲ್ಲೇ ಗರ್ಭಿಣಿ ಸುತ್ತ ಬಟ್ಟೆ ಹಿಡಿದು ನಿಂತು ಹೆರಿಗೆ ಮಾಡಿಸಿದ್ದಾರೆ. ನಂತರ ಬಾಣಂತಿ ಹಾಗೂ ಮಗುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಘಟನೆ ಸುದ್ದಿಯಾಗುತ್ತಿದ್ದಂತೆಯೇ ಚಿತ್ರಹಳ್ಳಿ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ ಸಂಬಂಧಿಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್ ಪಾಟೀಲ್ ಅವರು ಪ್ರತಿಕ್ರಿಯಿಸಿ, ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಕೋಲಾರ: ಹೆರಿಗೆ ಅಂತ ಬಂದ ತಾಯಿ ಹೆರಿಗೆ ನಂತರ ಹೆಣ್ಣು ಮಗುವಾಗಿದ್ದಕ್ಕೆ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಸೆಪ್ಟೆಂಬರ್ 22ರಂದು ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಕಲಿ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದ ತಾಯಿಗೆ ಈಗ ಮಗು ಬೇಡವಾಗಿದೆ. ಕೋಲಾರ ತಾಲೂಕಿನ ಆವಣಿ ಬಳಿಯ ನಕಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನ ನೀಡಿದ್ದು, ಪುಷ್ಪ ಹಾಗೂ ಸುನೀಲ್ ಎಂಬ ಹೆಸರಿನ ದಂಪತಿಗೆ ಸೇರಿದ ಹೆಣ್ಣು ಮಗು ಎನ್ನಲಾಗಿದೆ.

    ಅವಧಿ ಮುನ್ನವೇ ಹುಟ್ಟಿರುವುದರಿಂದ ಮಗು ಕಡಿಮೆ ತೂಕವನ್ನು ಹೊಂದಿದ್ದು ಉಸಿರಾಟದ ತೊಂದರೆಯನ್ನು ಹೊಂದಿದೆ. ಸದ್ಯ ಮಗುವನ್ನು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದೀಗ ಮಗು ಚೇತರಿಕೆ ಕಂಡಿದೆ.

    ಮಗುವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಗುವನ್ನು ದತ್ತು ಪಡೆದುಕೊಳ್ಳಲು ಸಾಕಷ್ಟು ಸಂಘ ಸಂಸ್ಥೆಗಳು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಾವಳಿಗಳಂತೆ ದತ್ತು ಪಡೆದುಕೊಳ್ಳುವರಿಂದ ಸಹಿಯನ್ನು ಪಡೆದು ನಂತರ ದತ್ತು ನೀಡುವ ಚಿಂತನೆ ನಡೆಯುತ್ತಿದೆ.

    ಸದ್ಯ ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv