ನವದೆಹಲಿ: ಚಿಕಿತ್ಸೆ ಕೊಡಲು ಬಂದಿದ್ದ ಡಾಕ್ಟರ್ ಮೇಲೆ ಹಾಗೂ ಎಲ್ಲೆಂದರಲ್ಲಿ ಉಗುಳಿ ವಿಕೃತಿ ಮೆರೆದಿದ್ದ ತಬ್ಲಿಘಿಗಳು ಗುರುವಾರ ನರ್ಸ್ ಗಳೊಂದಿಗೆ ಅಸಭ್ಯವಾಗಿದೆ ವರ್ತಿಸಿದ್ದಾರೆ.
ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಯು ಕ್ವಾರಂಟೈನ್‍ನಲ್ಲಿರುವ ತಬ್ಲಿಘಿಗಳಿಂದ ಹಿಂಸೆ ಅನುಭವಿಸುತ್ತಿದ್ದಾರೆ. ನಿಜಾಮುದ್ದೀನ್ ಮರ್ಕಜ್ ಸಮೀಪ ಗಾಜಿಯಾಬಾದ್‍ನ ಆಸ್ಪತ್ರೆಯೊಂದರಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಬ್ಲಿಘಿಗಳು ದಾದಿಯರ ಮುಂದೆ ಅರೆನಗ್ನವಾಗಿ ಓಡಾಡುವುದು ಹಾಗೂ ಅಶ್ಲೀಲ ಸನ್ನೆಗಳ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಅಸಭ್ಯ ನಡೆ ಮುಂದುವರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನೂ ಓದಿ: ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

ಗಾಜಿಯಾಬಾದ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ ವೈದ್ಯಕೀಯ ವೀಕ್ಷಣೆಗೆ ಒಳಪಡಿಸಲಾಗಿರುವ ಉತ್ತರ ಪ್ರದೇಶದ ನಗರ ಮೂಲದ ತಬ್ಲಿಘಿಗಳು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರು ಪ್ಯಾಂಟ್ ಧರಿಸದೇ ತಿರುಗಾಡುತ್ತಿರುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಕರ್ಕಷವಾಗಿ ಹಾಡುವುದು ಹಾಗೂ ಸಿಗರೇಟ್ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.
ತಬ್ಲಿಘಿ ಜಮಾತ್‍ನ ನಿಜಾಮುದ್ದೀನ್ ಸಂಕೀರ್ಣದಿಂದ ಬುಧವಾರ ಸ್ಥಳಾಂತರಿಸಿದ ಕ್ವಾರಂಟೈನ್‍ಗಳ ವಿರುದ್ಧ ನರ್ಸ್ ಗಳು ದೂರಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕ್ವಾರಂಟೈನ್‍ಗಳಿಂದ ನಮಾಜ್
ಬುಧವಾರ ಏನಾಗಿತ್ತು?:
ನಿಜಾಮುದ್ದೀನ್‍ನ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 167 ಜನರನ್ನು ತುಘಲಕಾಬಾದ್‍ನಲ್ಲಿ 2,140 ಗಂಟೆಗಳ ಕಾಲ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ಪೈಕಿ 97 ಜನರನ್ನು ಡೀಸೆಲ್ ಶೆಡ್ ತರಬೇತಿ ಶಾಲೆಯ ಹಾಸ್ಟೆಲ್ ಕ್ಯಾರೆಂಟೈನ್ ಸೆಂಟರ್ ಮತ್ತು 70 ಜನರಿಗೆ ಆರ್‍ಪಿಎಫ್ ಬ್ಯಾರಕ್ ಕ್ಯಾರಂಟೈನ್ ಸೆಂಟರ್ ನಲ್ಲಿ ಇರಿಸಲಾಗಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿತ್ತು.
ಕ್ವಾರಂಟೈನ್‍ನಲ್ಲಿರುವ ಕೆಲವರು ಬುಧವಾರ ಬೆಳಗ್ಗೆಯಿಂದ ಅಶಿಸ್ತಿನಿಂದ ವರ್ತಿಸಿದ್ದರು. ಆಹಾರ ಪದಾರ್ಥಗಳಿಗೆ ಅಸಮಂಜಸ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ ಕ್ಯಾರೆಂಟೈನ್ ಸೆಂಟರ್ ನಲ್ಲಿರುವ ಸಿಬ್ಬಂದಿ, ವೈದ್ಯರೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಅವರ ಮೇಲೆ ಉಗುಳಿದ್ದರು. ಜೊತೆಗೆ ಹಾಸ್ಟೆಲ್ ಕಟ್ಟಡದ ಸುತ್ತಲೂ ತಿರುಗಾಟ ನಡೆಸಿದ್ದರು ಎಂದು ವರದಿಯಾಗಿತ್ತು. ಇದನ್ನೂ ಓದಿ: ದೇಶದಲ್ಲಿ 2,400ಕ್ಕೂ ಹೆಚ್ಚು ಜನರಿಗೆ ಕೊರೊನಾ – ಇನ್ನೆರಡು ವಾರದಲ್ಲೇ 10,000 ತಲುಪೋ ಸಾಧ್ಯತೆ

ಮಸೀದಿಯಲ್ಲಿ ನಡೆದ ಕಾರ್ಯಕ್ರಮ ಏನು?
ತಬ್ಲಿಘಿ-ಎ-ಜಮಾತ್ ಎಂಬ ಧಾರ್ಮಿಕ ಸಂಸ್ಥೆ ಮಾರ್ಚ್ 1ರಿಂದ ಮಾರ್ಚ್ 15ರವರೆಗೂ ದೆಹಲಿ ಹೊರವಲಯದಲ್ಲಿರುವ ನಿಜಾಮುದ್ದೀನ್ ಪ್ರಾಂತ್ಯದ ಮರ್ಕಜ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿವಿಧ ರಾಜ್ಯಗಳಿಂದ 2,500ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂಡೋನೇಷಿಯಾ, ಮಲೇಷಿಯಾ, ಥಾಯ್ಲೆಂಡ್, ಸೌದಿ ಅರೇಬಿಯಾ, ಕಜಕಿಸ್ತಾನ ಸೇರಿದಂತೆ ಒಟ್ಟು 16 ದೇಶಗಳ ಧರ್ಮಗುರುಗಳಿಂದ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅವಧಿಯಲ್ಲಿ ಮರ್ಕಜ್ ಮಸೀದಿಯಲ್ಲೇ 280 ಧರ್ಮಗುರುಗಳು ಉಳಿದುಕೊಂಡಿದ್ದರು. 8 ಸಾವಿರಕ್ಕೂ ಹೆಚ್ಚು ಭಾರತೀಯ ಮುಸ್ಲಿಮರಿಂದಲೂ ಅದೇ 6 ಅಂತಸ್ತಿನ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊರೋನಾ ವೈರಸ್ ಪಾಲ್ಗೊಂಡವರಿಗೆ ಕೊರೊನಾ ವೈರಸ್ ಹಬ್ಬಿದೆ.

ಉಲ್ಲಂಘನೆ ಯಾಕೆ?
ಈ ಕಾರ್ಯಕ್ರಮದ ಆಯೋಜಕರು ಮತ್ತು ಬೆಂಬಲಿಸುವ ವ್ಯಕ್ತಿಗಳು ಯಾವುದೇ ಉಲ್ಲಂಘನೆ ಆಗಿಲ್ಲ. ಜನತಾ ಕಫ್ರ್ಯೂ ಮತ್ತು 21 ದಿನಗಳ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಅಲ್ಲಿದ್ದ ಮಂದಿಗೆ ಊರಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ವಾದಿಸುತ್ತಿದ್ದಾರೆ. ಆದರೆ ಈ ಕಾರ್ಯಕ್ರಮ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗಿದೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ.
ಉಲ್ಲಂಘನೆ -1: ಪ್ರವಾಸಿ ವೀಸಾದಡಿ ಬಂದವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ ಪ್ರವಾಸಿ ವೀಸಾ ಪಡೆದುಕೊಂಡಿದ್ದರು. ಈಗ ಈ ವೀಸಾ ಪಡೆದು ಬಂದವನ್ನು ಬಂದವರನ್ನು ಕಪ್ಪು ಪಟ್ಟಿಗೆ ಸೇರಿಸಲು ಗೃಹ ಇಲಾಖೆ ಮುಂದಾಗಿದೆ ಎಂದು ವರದಿಯಾಗಿದೆ.

ಕಳೆದ 2 ದಿನಗಳಿಂದ ಈ ಜಾಗದಲ್ಲಿ 281 ವಿದೇಶಿ ಪ್ರಜೆಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನೇಪಾಳ 19, ಮಲೇಷ್ಯಾ 20, ಅಫ್ಘಾನಿಸ್ಥಾನ 1, ಮ್ಯಾನ್ಮಾರ್ 33, ಕಿರ್ಗಿಸ್ಥಾನ 28, ಇಂಡೋನೇಷ್ಯಾ 72, ಥಾಯ್ಲೆಂಡ್ 7, ಶ್ರೀಲಂಕಾ 34, ಬಾಂಗ್ಲಾದೇಶ 19, ಇಂಗ್ಲೆಂಡ್ 3, ಫಿಜಿ 4, ಫ್ರಾನ್ಸ್, ಸಿಂಗಾಪುರ, ಕುವೈತ್, ಅಫ್ಘಾನಿಸ್ಥಾನ, ಅಲ್ಜೀರಿಯಾದಿಂದ ತಲಾ ಒಬ್ಬೊಬ್ಬರು ಭಾಗವಹಿಸಿದ್ದಾರೆ. ಇದು ಪತ್ತೆಯಾದವರ ಸಂಖ್ಯೆ, ಇಲ್ಲಿಂದ ಹಲವು ರಾಜ್ಯಗಳಿಗೆ ವಿದೇಶಿಯರು ಪ್ರಯಾಣಿಸಿದ್ದು ಅದರ ಲೆಕ್ಕ ಸಿಗಬೇಕಿದೆ.
ಉಲ್ಲಂಘನೆ – 2: ವಿದೇಶದಿಂದ ಬಂದಂತಹ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ನಲ್ಲಿ ಇರುವುದು ಕಡ್ಡಾಯ. ಎಲ್ಲ ರಾಜ್ಯ ಸರ್ಕಾರಗಳು ಈ ವಿಚಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ಮನೆಗೆ ತೆರಳಿ ನೋಟಿಸ್ ಅಂಟಿಸಿ ಬರುತ್ತಿದ್ದಾರೆ. ಆದರೆ ಇಲ್ಲಿ ವಿದೇಶದಿಂದ ಬಂದವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ವಿದೇಶಿ ವ್ಯಕ್ತಿಗಳ ಪೈಕಿ ಎಷ್ಟು ಜನ ಆದೇಶ ಉಲ್ಲಂಘಿಸಿದ್ದಾರೆ ಎನ್ನುವುದು ಮುಂದೆ ತಿಳಿದು ಬರಲಿದೆ. ಈ ಕಾರಣಕ್ಕಾಗಿ ಐಪಿಸಿ ಸೆಕ್ಷನ್ 271(ಸೋಂಕು ಇದ್ದರೂ ಕ್ವಾರಂಟೈನ್ ನಿಯಮ ಉಲ್ಲಂಘನೆ) ಅಡಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ವಿದೇಶದಿಂದ ಪ್ರವಾಸಕ್ಕೆ ಬಂದವರ ಮಾಹಿತಿ ಸಿಗುತ್ತಿಲ್ಲ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದವು. ಈಗ ನಾಪತ್ತೆಯಾದ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರಬಹುದೇ ಎನ್ನುವ ಅನುಮಾನ ಎದ್ದಿದೆ.

ಉಲ್ಲಂಘನೆ – 3: ದೆಹಲಿ ಸರ್ಕಾರ ಫೆ.13 ರಂದು 200ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಎಲ್ಲ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. ಅಂದು ಸುದ್ದಿಗೋಷ್ಠಿ ನಡೆಸಿದ್ದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಐಪಿಎಲ್ ಸೇರಿದಂತೆ ಎಲ್ಲ ಸಭೆ ಸಮಾರಂಭಗಳಿಗೆ ಸರ್ಕಾರ ನಿಷೇಧ ಹೇರಿದೆ ಎಂದು ತಿಳಿಸಿದ್ದರು. ನಿಷೇಧ ಹೇರಿದ್ದರೂ ಈ ಕಾರ್ಯಕ್ರಮ ಮಾ.15 ರವರೆಗೆ ಹೇಗೆ ನಡೆಯಿತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಉಲ್ಲಂಘನೆ – 4: 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಸೆಕ್ಷನ್ 3 ಉಲ್ಲಂಘನೆಯಾಗಿದೆ. ಈ ಕಾಯ್ದೆ ಅಡಿ ಸಾಂಕ್ರಾಮಿಕ ರೋಗವನ್ನು ಹರಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾರ್ಚ್ 13 ರಂದು ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ಉಲ್ಲಂಘನೆ – 5 : ಈ ಕಾರ್ಯಕ್ರಮದ ಆಯೋಜಕರು ಐಪಿಸಿ ಸೆಕ್ಷನ್ ಗಳನ್ನು ಸಹ ಉಲ್ಲಂಘನೆ ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269(ನಿರ್ಲಕ್ಷ್ಯದಿಂದ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡಿರುವುದು), 270(ಉದ್ದೇಶಪೂರ್ವಕವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ಸೋಂಕನ್ನು ಹರಡಿರುವುದು) ಮತ್ತು 120 ಬಿ(ಕ್ರಿಮಿನಲ್ ಒಳಸಂಚು) ಉಲ್ಲಂಘಿಸಿದ್ದು ದೆಹಲಿ ಪೊಲೀಸರು ಈಗ 1897ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ ಮತ್ತು ಈ ಮೇಲೆ ತಿಳಿಸಿದ ಐಪಿಸಿ ಸೆಕ್ಷನ್ ಅಡಿ ಆಯೋಜಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.