Tag: Germanay

  • ಕೊರೊನಾಗೆ ಲಸಿಕೆ ಸಂಶೋಧಿಸುತ್ತಿರುವ ಕಂಪನಿ ಖರೀದಿಗೆ ಟ್ರಂಪ್ ಯತ್ನ

    ಕೊರೊನಾಗೆ ಲಸಿಕೆ ಸಂಶೋಧಿಸುತ್ತಿರುವ ಕಂಪನಿ ಖರೀದಿಗೆ ಟ್ರಂಪ್ ಯತ್ನ

    – ಅಮೆರಿಕದ ಜನತೆಗೆ ಮಾತ್ರ ಲಸಿಕೆ ನೀಡಬೇಕು
    – ಟ್ರಂಪ್ ವಿರುದ್ಧ ಜರ್ಮನಿಯಲ್ಲಿ ಆಕ್ರೋಶ

    ಬರ್ಲಿನ್: ಕೊರೊನಾ ವೈರಸಿಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿರುವ ಜರ್ಮನಿ ಕಂಪನಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖರೀದಿಸಲು ಮುಂದಾಗಿರುವ ವಿಚಾರ ಈಗ ಪ್ರಕಟವಾಗಿದೆ.

    ಜರ್ಮನಿಯ ಕ್ಯುರೆವಾಕ್ ಕಂಪನಿ ಪ್ರಯೋಗಾಲಯದಲ್ಲಿ ಹಲವು ಮಾದರಿಯ ಔಷಧಿಗಳನ್ನು ತಯಾರಿಸಿದ್ದು ಈ ಪೈಕಿ ಅಂತಿಮವಾಗಿ ಎರಡು ಔಷಧಿಗಳನ್ನು ಕ್ಲಿನಿಕಲ್ ಪರೀಕ್ಷೆಗೆ ಪ್ರಯೋಗಿಸಲು ಮುಂದಾಗುತ್ತಿದೆ.

    ಅಮೆರಿಕದಲ್ಲಿ ಕೊರೊನ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಈಗ ಇದರಲ್ಲೂ ಲಾಬಿ ಮಾಡಲು ಮುಂದಾಗಿದ್ದು ಕಂಪನಿಯನ್ನು ಖರೀದಿಸುವ ಪ್ರಸ್ತಾಪ ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕದ ಜನತೆಗೆ ಮಾತ್ರ ಔಷಧಿ ನೀಡಬೇಕೆಂದು ಮಾತುಕತೆ ನಡೆಸಿರುವ ವಿಚಾರವನ್ನು ಮಾಧ್ಯಮ ಪ್ರಕಟಿಸಿದೆ.

    ಈ ವಿಚಾರ ಪ್ರಕಟವಾಗುತ್ತಿದ್ದಂತೆ ಜರ್ಮನಿಯ ಜನತೆ ಡೊನಾಲ್ಡ್ ಟ್ರಂಪ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ “ಜರ್ಮನಿ ಮಾರಾಟಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜರ್ಮನಿ ವಿದೇಶಾಂಗ ಸಚಿವ ಹೀಕೊ ಮಾಸ್ ಅವರು, “ಜರ್ಮನಿ ವಿಜ್ಞಾನಿಗಳಿಗೆ ಲಸಿಕೆ ಸಂಶೋಧನೆಗೆ ಹಲವು ರಾಷ್ಟ್ರಗಳಿಂದ ಸಹಕಾರ ಸಿಗುತ್ತಿದೆ. ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ಬಿಡಬೇಕು” ಎಂದು ಟ್ರಂಪ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಕ್ಯುರೆವಾಕ್  ಕಂಪನಿಗೆ ಟ್ರಂಪ್ 7,424 ಕೋಟಿ ರೂ. ಆಫರ್ ನೀಡಿದ್ದು, ಲಸಿಕೆಯನ್ನು ಅಭಿವೃದ್ಧಿಪಡಿಸಿ ಕೇವಲ ಅಮೆರಿಕಕ್ಕೆ ಮಾತ್ರ ನೀಡಬೇಕು ಎಂಬುದಾಗಿ ಒತ್ತಾಯಿಸಿದ್ದರು ಎಂದು ವಾರ ಪತ್ರಿಕೆ ವರದಿ ಪ್ರಕಟಿಸಿತ್ತು.

    ಮಾರ್ಚ್ 2 ರಂದು ಕ್ಯುರೆವಾಕ್ ಕಂಪನಿಯ ಸಿಇಒ ಡೇನಿಯಲ್ ಮೆನಿಚಿಲ್ಲಾ ಟ್ರಂಪ್ ಅವರನ್ನು ಶ್ವೇತಭವನದಲ್ಲಿ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ದರು.

    ಮಾಧ್ಯಮಗಳಲ್ಲಿ ಬಂದ ವರದಿಯನ್ನು ಕ್ಯುರೆವಾಕ್ ನಿರಾಕರಿಸಿದ್ದು, ಅಮೆರಿಕದ ಅಧ್ಯಕ್ಷ ಟ್ರಂಪ್ ಯಾವುದೇ ಆಫರ್ ನೀಡಿಲ್ಲ. ಮಾಧ್ಯಮಗಳ ಆರೋಪ ಸುಳ್ಳು ಎಂದು ಹೇಳಿದೆ.