Tag: George

  • ಮಾರ್ಗ ಮಧ್ಯೆ ಪ್ಲಾನ್ ಚೇಂಜ್: ನಮ್ಮ ಹೋಟೆಲ್‍ಗೆ ಬನ್ನಿ ಎಂದ ಜಾರ್ಜ್

    ಮಾರ್ಗ ಮಧ್ಯೆ ಪ್ಲಾನ್ ಚೇಂಜ್: ನಮ್ಮ ಹೋಟೆಲ್‍ಗೆ ಬನ್ನಿ ಎಂದ ಜಾರ್ಜ್

    ಬೆಂಗಳೂರು: ಹೈದರಾಬಾದ್ ನಿಂದ ಆಗಮಿಸಿದ ಕಾಂಗ್ರೆಸ್ ಶಾಸಕರು ಇಂದಿರಾನಗರದ 100 ಫೀಟ್ ಎಂಬೆಸಿ ಗಾಲ್ಫ್ ಬುಸಿನೆಸ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

    ಬಸ್ ರೆಸಾರ್ಟ್ ಗೆ ತೆರಳಲಿದೆ ಎಂದು ಆರಂಭದಲ್ಲಿ ಮಾಹಿತಿ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ಲಾನ್ ಬದಲಾಗಿದ್ದು ಜಾರ್ಜ್ ಅವರು ರೆಸಾರ್ಟ್ ಬೇಡ ನಮ್ಮ ಹೋಟೆಲ್ ಗೆ ಬನ್ನಿ ಎಂದು ಡಿ.ಕೆ ಶಿವಕುಮಾರ್ ಮತ್ತು ಬೈರತಿ ಬಸವರಾಜ್ ಸಹೋದರರಿಗೆ ಸೂಚನೆ ನೀಡಿದ್ದರು.

    ಈ ಸೂಚನೆಯ ಹಿನ್ನೆಲೆಯಲ್ಲಿ ಶಾಸಕರ ಬಸ್ ಈಗ ಜಾರ್ಜ್ ಒಡೆತನದ ಎಂಬೆಸಿ ಗಾಲ್ಫ್ ಹೋಟೆಲ್‍ಗೆ ಆಗಮಿಸಿದ್ದು, ಹೋಟೆಲ್ ನಲ್ಲಿ ಶಾಸಕರು ವಿಶ್ರಾಂತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು ಈ ಹೋಟೆಲ್‍ಗೆ ಭೇಟಿ ನೀಡಲಿದ್ದು, ಬಳಿಕ ನೇರವಾಗಿ ಇಲ್ಲಿಂದಲೇ ವಿಧಾನ ಸೌಧಕ್ಕೆ ಶಾಸಕರು ತೆರಳಲಿದ್ದಾರೆ.

    ಹೈದರಾಬಾದ್‍ಗೆ ತೆರಳುವ ಮುನ್ನ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ಉಳಿದುಕೊಂಡಿದ್ದರು. ಹೀಗಾಗಿ ಇಲ್ಲಿಗೆ ಆಗಮಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬಿಡದಿಯಿಂದ ವಿಧಾನಸೌಧಕ್ಕೆ 40 ಕಿ.ಮೀ ದೂರ ಇರುವ ಕಾರಣ ಎಂಬೆಸಿ ಗಾಲ್ಫ್ ಗೆ ತೆರಳುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

  • ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಸಚಿವ ಜಾರ್ಜ್ ಕ್ಷೇತ್ರದಲ್ಲಿ ಟ್ರಸ್ಟ್ ಸ್ಥಳವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಮುಂದಾದ ಅಧಿಕಾರಿಗಳು!

    ಬೆಂಗಳೂರು: ಮಠದ ಜಾಗವನ್ನು ಹೊಡೆಯಲು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಪ್ರಯತ್ನಿಸಿದ್ದಾಯ್ತು. ಇದೀಗ ಸಚಿವ ಕೆಜೆ ಜಾರ್ಜ್ ಕ್ಷೇತ್ರದಲ್ಲಿ ಬರುವ ಶ್ರೀರಾಮ ಮಂದಿರದ ಟ್ರಸ್ಟ್ ಗೆ ಸೇರಿದ ಜಾಗವನ್ನು ಸರ್ಕಾರಿ ಜಾಗವನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಿರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಾಚರಕನಹಳ್ಳಿಯಲ್ಲಿರುವ ರಾಮಮಂದಿರದ ಸುತ್ತಮುತ್ತಲಿನ ಜಾಗ ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಗೆ ಸೇರಿದ್ದು ಅಂತ ಕೋರ್ಟ್ ಆದೇಶಿಸಿದೆ. ಆದ್ರೆ ಈ ಜಾಗ ಸರ್ಕಾರದ್ದು ಅಂತ ತಹಶೀಲ್ದಾರ್ ಮತ್ತು ಅಧಿಕಾರಿಗಳು ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.

    ಈ ಕುರಿತು ಆದೇಶ ಎಲ್ಲಿದೆ ಅಂತ ಪ್ರಶ್ನಿಸಿದ್ರೆ ನಮಗೆ ಮೇಲಿಂದ ಒತ್ತಡ ಇದೆ ಅಂತ ಹೇಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಸರ್ಕಾರದ ಕ್ರಮಕ್ಕೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿವ ಕೆಜೆ ಜಾರ್ಜ್ ಅವರೇ ಪರೋಕ್ಷವಾಗಿ ಒತ್ತಡ ಹೇರಿ ತಡೆಗೋಡೆ ನಿರ್ಮಿಸಲು ಸೂಚಿಸಿದ್ದಾರೆ ಅಂತ ಟ್ರಸ್ಟಿಗಳು ಆರೋಪಿಸಿದ್ದಾರೆ.

    ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ಕೇಳಿದ್ರೆ ನಮಗೆ ಯಾರ ಒತ್ತಡವೂ ಇಲ್ಲ ಅಂತ ಹೇಳುತ್ತಿದ್ದಾರೆ. ಆದ್ರೆ ದಾಖಲೆಗಳನ್ನು ಕೇಳಿದ್ರೆ ಮಾತ್ರ ತೋರಿಸಲು ಮುಂದಾಗುತ್ತಿಲ್ಲ.

  • ಡಿವೈಎಸ್‍ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಡಿವೈಎಸ್‍ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಬೆಂಗಳೂರು: ಡಿವೈಎಸ್ಪಿ ಎಂ ಕೆ ಗಣಪತಿ ಅವರ ಅಸಹಜ ಸಾವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದ್ರೆ ಇದೀಗ ಈ ಪ್ರಕರಣಕ್ಕೆ ಸ್ಫೋಟಕ ತಿರುವೊಂದು ದೊರೆತಿದೆ.

    ಹೌದು. ಯಾರೋ ಕೊಲೆ ಮಾಡಿದ್ದಾರೆ, ಇಲ್ಲ ಆತ್ಮಹತ್ಯೆ ಮಾಡಿಕೊಳ್ಳೊದಕ್ಕೆ ಪ್ರಚೋದಿಸಿದ್ದಾರೆ ಅಂತ ಆರೋಪ ಮಾಡಿದ ಕುಟುಂಬವೇ ಇದೀಗ ಸಾವಿಗೆ ನ್ಯಾಯ ಸಿಕ್ಕೋದಕ್ಕೆ ಬರಲೇ ಇಲ್ಲ. ಆತ್ಮಹತ್ಯೆ ಪ್ರಕರಣ ಬಯಲಿಗೆ ಎಳೆಯೋದಕ್ಕೆ ಸರ್ಕಾರ ನಿವೃತ್ತ ನ್ಯಾಯಾಧೀಶರ ಆಯೋಗವೊಂದನ್ನು ಮಾಡಿದೆ. ಆ ಕೇಶವ ನಾರಾಯಣ ಆಯೋಗ ಎಲ್ಲರನ್ನು ವಿಚಾರಣೆ ಮಾಡಿ ಸತ್ಯಾಸತ್ಯತೆ ಬೆಳಕಿಗೆ ತರುವ ಸಲುವಾಗಿ ತನಿಖೆ ಮಾಡ್ತಾ ಇದೆ.

    ಆದ್ರೆ ಗಣಪತಿಯ ಮನೆಯವರೇ ತನಿಖೆಗೆ ಸಹಕಾರ ನೀಡಿಲ್ಲ. ಗಣಪತಿ ಪತ್ನಿ, ಮಗ ಮತ್ತು ತಮ್ಮ ಮೂವರು ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಮಗೆ ಯಾರ ಮೇಲೂ ಅನುಮಾನ ಇಲ್ಲ ನೀವೆ ಪತ್ತೆ ಹಚ್ಚಿ ಅಂತ ಹೇಳಿ ಹೋಗಿದ್ದಾರೆ ಎನ್ನಲಾಗಿದೆ.

    ಇತ್ತ ಸುಪ್ರೀಂಕೋರ್ಟ್ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡಿದ ಗಣಪತಿ ಅಕ್ಕ ಸಬಿತಾ, ತಮ್ಮ ಮಾಚಯ್ಯ ಕೂಡ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುತ್ತಿಲ್ಲ. ಮೂರು ಮೂರು ಬಾರಿ ನೋಟೀಸ್ ನೀಡಿದ್ರು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡ್ತಾ ಇಲ್ಲ. ಇನ್ನು ವಿಚಾರಣೆ ಹಾಜರಾದ ಮೂವರು ಯಾವುದೇ ಹೇಳಿಕೆ ಹಾಗೂ ಯಾರ ವಿರುದ್ಧವೂ ಹೇಳಿಕೆ ನೀಡದೇ ಇದ್ದಿದ್ರಿಂದ ಆರೋಪಿಗಳ ಸ್ಥಾನದಲ್ಲಿ ಇರುವ ಜಾರ್ಜ್, ಪ್ರಣವ್ ಮೊಹಂತಿ ಮತ್ತು ಎ ಎಂ ಪ್ರಸಾದ್‍ನ ವಿಚಾರಣೆಯೇ ನಡೆಸಿಲ್ಲ. ಕೇವಲ ಸಿಬಿಐ ಮೇಲೆ ನಂಬಿಕೆ ಇಟ್ಟುಕೊಂಡಿರೋದ್ರಿಂದ ಆಯೋಗವನ್ನು ಕ್ಯಾರೆ ಅನ್ನುತ್ತಿಲ್ಲ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇದನ್ನೂ ಓದಿ: ಗಣಪತಿ ಸಾವಿನ ಕೇಸಲ್ಲಿ ಕಲಾಪ ಕೋಲಾಹಲ- ಡಾಕ್ಟರ್ ಮೇಲೆ ಸರ್ಕಾರ ಹಾಕಿತ್ತಂತೆ ಒತ್ತಡ

    ಕಳೆದ ವರ್ಷ ಜು. 7 ರಂದು ಬೆಳಗ್ಗೆ ಮಡಿಕೇರಿಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವಿನಾಯಕ ಲಾಡ್ಜ್ ಗೆ ಬಂದ ಗಣಪತಿ ಅವರು ರೂಮು ಪಡೆದುಕೊಂಡಿದ್ದರು. ಸಾವಿಗೂ ಮುನ್ನ ಖಾಸಗಿ ವಾಹಿನಿ ಸ್ಟುಡಿಯೋದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದ ಗಣಪತಿ, ಸಚಿವ ಕೆ. ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಹಾಗೂ ಎ. ಎಂ. ಪ್ರಸಾದ್ ಅವರುಗಳಿಂದ ಕಿರುಕುಳ ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ನಂತರ ಲಾಡ್ಜ್ ನಲ್ಲಿ ಪೊಲೀಸ್ ಯೂನಿಫಾಂನಲ್ಲಿಯೇ ನೇತಾಡುತ್ತಿದ್ದ ಅವರ ದೇಹ ಪತ್ತೆಯಾಗಿತ್ತು.

    ಇದನ್ನೂ ಓದಿ: ಗಣಪತಿ ಕೇಸ್: ಕಾಟಾಚಾರದ ಸಿಐಡಿ ತನಿಖೆಗೆ ಸಿಕ್ತು ಪುರಾವೆ-ಸಿಬಿಐ ತನಿಖೆ ವೇಳೆ ಪತ್ತೆ ಆಯ್ತು ಗುಂಡು

    https://www.youtube.com/watch?v=ExzV6YadXj8

  • ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

    ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್‍ಗೆ 2 ರೂಪಾಯಿ 50 ಪೈಸೆಯಲ್ಲಿ ನೀಡಿದ್ದೇ ಆದಲ್ಲಿ ನನ್ನ ವೈಯಕ್ತಿಕ ಕೆಲಸ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಿಂದೆ ಅಲೆಯುವೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಪ್ರತಿ ಯೂನಿಟ್‍ಗೆ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ 2.50 ರೂಪಾಯಿ ಗೆ ವಿದ್ಯುತ್ ನೀಡಿದ್ರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ ಅಂದ್ರು.

    ನನ್ನ ಮೇಲೆ ಐಟಿ ದಾಳಿ ನಡೆದಾಗ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಜೆಪಿಯವರು ಬಿಂಬಿಸಿದ್ರು. ಆದ್ರೆ ವಿಧಾನ ಸಭೆಯಲ್ಲಿ ಯಾಕೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ನಾಯಕರು ಹಿಟ್ ಎಂಡ್ ರನ್ ಇದ್ದ ಹಾಗೆ ಅಂದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶಡ್ಡಿಂಗ್ ಮಾಡೋದಿಲ್ಲ. ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಸಂಪೂರ್ಣ ವಿದ್ಯುತ್ ನೀಡಲಾಗುವುದು ಅಂತ ಅವರು ಹೇಳಿದ್ರು.

    ಇನ್ನು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಬಿಜೆಪಿಯವರು ಮಾಡುತ್ತಿರೋ ಸುಳ್ಳು ಆರೋಪವಾಗಿದೆ. ನಮ್ಮ ಯಾವೊಬ್ಬ ಸಚಿವರು ಕೂಡ ಅಕ್ರಮವನ್ನು ಎಸಗಿಲ್ಲ. ಅವರು ನಮ್ಮ ಬೆಳವಣಿಗೆಯನ್ನು ಕಂಡು ಹತಾಶರಾಗಿದ್ದಾರೆ. ಹೀಗಾಗಿ ಸಚಿವ ಕೆ.ಜೆ ಜಾರ್ಜ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಮೇಲೆ ಸುಳ್ಳು ಆರೋಪ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದ್ರು.

    ಬಿಎಸ್‍ವೈ ಹೇಳಿದ್ದು ಏನು?: ಪ್ರತಿ ಯೂನಿಟ್‍ಗೆ 2.50ರಂತೆ ವಿದ್ಯುತ್ ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿರುವಾಗ ರಾಜ್ಯ ಸರ್ಕಾರ ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿಸುತ್ತಿರುವುದರ ಬಗ್ಗೆ ತನಿಖೆ ನಡೆಸಬೇಕು ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದರು.

    ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸುವುದಕ್ಕಾಗಿ ಪ್ರತಿ ಯೂನಿಟ್‍ಗೆ ಯುಪಿಸಿಎಲ್‍ನಿಂದ 4.71ರಂತೆ ಮತ್ತು ಜಿಂದಾಲ್‍ನಿಂದ ಪ್ರತಿ ಯೂನಿಟ್‍ಗೆ 4.17 ರಂತೆ ಖರೀದಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಅರ್ಧ ದರಕ್ಕೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿದರೂ ದುಬಾರಿ ಬೆಲೆಯನ್ನು ನೀಡಿ ಖಾಸಗಿಯರಿಂದ ಖರೀದಿಸುತ್ತಿರುವುದು ಯಾಕೆ? ನನ್ನ ಪ್ರಶ್ನೆಗೆ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಆಗ್ರಹಿಸಿದ್ದರು.

  • ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ಪರಮೇಶ್ವರ್‍ಗೇ ‘ಕೈ’ ಪಟ್ಟ – ಗೃಹ ಸಚಿವ ಸ್ಥಾನ ತ್ಯಜಿಸಲು ಹೈಕಮಾಂಡ್ ಸೂಚನೆ

    ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಅವರನ್ನೇ ಮುಂದುವರೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದರೆ ಕೈ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈಕಮಾಂಡ್ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಸೂತ್ರವನ್ನು ಮುಂದಿಟ್ಟಿದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪರಮೇಶ್ವರ್ ಮುಂದುವರಿಕೆಗೆ ಹೈಕಮಾಂಡ್ ನಿರ್ಧಾರ ಮಾಡಿದ್ದು, ಪರಮೇಶ್ವರ್ ಅವರನ್ನ ಬದಲಾಯಿಸಿದರೆ ದಲಿತರು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮುಂದೆ ಚುನಾವಣಾ ವರ್ಷ ಇದೆ. ಹೀಗಾಗಿ ಈಗ ಪರಮೇಶ್ವರ್ ಅವರನ್ನು ಬದಲಾಯಿಸಿದರೆ ದಲಿತ ಸಮುದಾಯದವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದರಿಂದ ಮುಂದಿನ ಚುನಾವಣೆ ವೇಳೆ ಪಕ್ಷದ ವೋಟ್ ಬ್ಯಾಂಕ್‍ಗೆ ತೊಂದರೆ ಎದುರಾಗಲಿದೆ. ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಪರಮೇಶ್ವರ್ ಮುಂದುವರೆಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.

    ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇಮಕಕ್ಕೆ ಒಮ್ಮತ ಮೂಡಲಿಲ್ಲ. ಡಿಕೆಶಿಗೆ ಹಲವು ಹಿರಿಯ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಹೀಗಾಗಿ ಪರಮೇಶ್ವರ್ ಮುಂದುವರಿಕೆ ಹೈಕಮಾಂಡ್ ಸೂತ್ರ ಸಿದ್ಧಪಡಿಸಿದೆ.

    ಸಚಿವ ಸ್ಥಾನ ತೊರೆಯಲು ಪರಮೇಶ್ವರ್‍ಗೆ ಹೈಕಮಾಂಡ್ ಸೂಚನೆ ನೀಡಿದ್ದು, ಗೃಹ ಖಾತೆ ಮತ್ತೆ ಕೆಜೆ ಜಾರ್ಜ್ ಹೆಗಲಿಗೇರುವ ಸಾಧ್ಯತೆ ನಿಚ್ಚಳವಾಗಿದೆ. ಸಿದ್ದರಾಮಯ್ಯನವರ ಅಭ್ಯರ್ಥಿ ಎಸ್.ಆರ್ ಪಾಟೀಲ್ ಅವರನ್ನು ಪರಿಷತ್ ಸಭಾಪತಿ ಹುದ್ದೆಗೆ ತರಲು ಚಿಂತನೆ ನಡೆದಿದೆ. ಸಚಿವ ಸೀತಾರಾಮ್‍ಗೆ ಪರಿಷತ್ ಸಭಾನಾಯಕನ ಹೊಣೆ, ಮೇಲ್ವರ್ಗದ ನಾಯಕರಿಗೆ ಪ್ರಚಾರ ಸಮಿತಿ ಮತ್ತು ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಇಂದು ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎನ್ನಲಾಗಿದೆ.

    ಇದೇ ವೇಳೆ ಸಭೆ ಬಳಿಕ ದೆಹಲಿಯಲ್ಲಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಯಾರೇ ಅಧ್ಯಕ್ಷರಾದ್ರೂ ಅವರ ಜೊತೆ ಕೆಲಸ ಮಾಡಲು ಸಿದ್ಧ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದು ಹೇಳಿದ್ದಾರೆ.

    ಮೂವರ ನಡುವೆ ಇತ್ತು ಪೈಪೋಟಿ: ದಲಿತ ಸಮುದಾಯದ ಬೆಂಬಲದೊಂದಿಗೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಪರಮೇಶ್ವರ್ ಕಸರತ್ತು ಮಾಡ್ತಿದ್ರೆ, ಒಕ್ಕಲಿಗರ ಜೊತೆ ಉಪಚುನಾವಣೆಗಳಲ್ಲಿ ಕೆಲಸ ಮಾಡಿ ಜಯದ ಹುಮ್ಮಸ್ಸಿನಲ್ಲಿರೋ ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಪ್ರಭಾವ ಬೀರಿ ಮತ್ತೊಂದು ಕಡೆ ಲಾಬಿ ಮಾಡಿದ್ದರು. ಇನ್ನೊಂದು ಕಡೆ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಆಪ್ತ ಸಚಿವ ಎಂ.ಬಿ. ಪಾಟೀಲ್ ಪರ ಬ್ಯಾಟಿಂಗ್ ಮಾಡಲು ಮುಂದಾಗಿದ್ದರು.

    ಸಚಿವ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು ಭೇಟಿಯಾಗಿದ್ದರು. ಆಶ್ಚರ್ಯ ಎಂಬಂತೆ ರವಿವಾರ ಸಿಎಂ ದೆಹಲಿಗೆ ತೆರಳುವ ವೇಳೆ ಅಧ್ಯಕ್ಷ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಕೂಡ ಜೊತೆಯಲ್ಲೇ ಪ್ರಯಾಣ ಬೆಳೆಸಿದ್ದರು.