Tag: Gentleman

  • ತಮಿಳು ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಆಸ್ಕರ್ ಪ್ರಶಸ್ತಿ ವಿಜೇತ ಕೀರವಾಣಿ

    ತಮಿಳು ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಆಸ್ಕರ್ ಪ್ರಶಸ್ತಿ ವಿಜೇತ ಕೀರವಾಣಿ

    ಆರ್.ಆರ್.ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿರುವ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ (MM Keeravani) ಮತ್ತೆ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಈಗಾಗಲೇ ಕೆಲವು ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕೀರವಾಣಿ, ಈಗ ಮತ್ತೆ ಕಾಲಿವುಡ್ ನತ್ತ ಪ್ರಯಾಣ ಬೆಳೆಸಿದ್ದಾರೆ.

    ಈ ಹಿಂದೆ ‘ಜಂಟಲ್ ಮ್ಯಾನ್’ (Gentleman), ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಿದ್ದು, ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಕೀರವಾಣಿ ಒಪ್ಪಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಎರಡು ತಿಂಗಳ ಹಿಂದೆಯಷ್ಟೇ ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಕೀರವಾಣಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅವರು ಅಲ್ಲಿಂದ ಭಾರತಕ್ಕೆ ಬಂದ ಮೇಲೆ, ಅವರನ್ನು ಹೈದರಾಬಾದ್ ನಲ್ಲಿ  ಚಿತ್ರದ ನಿರ್ದೇಶಕ ಎ. ಗೋಕುಲ್ ಕೃಷ್ಣ (Gokula Krishna) ಭೇಟಿಯಾಗಿದ್ದಾರೆ. ಗೋಕುಲ್ ಹೇಳಿದ ಕಥೆ ಕೇಳಿ ಖುಷಿಯಾದ ಕೀರವಾಣಿ, ತಕ್ಷಣವೇ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ನಿರ್ಮಾಪಕ ಕುಂಜುಮೋನ್ (Kunjumon) ಅವರಿಗೆ ಕರೆ ಮಾಡಿ, ಮುಂದಿನ ತಿಂಗಳಿನಿಂದ ಸಂಗೀತ ಸಂಯೋಜನೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.

  • ಬೇರೆ ಭಾಷೆ ಸಿನಿಮಾಗಿಂತ ‘ಜಂಟಲ್ ಮ್ಯಾನ್’ ಯಾವುದರಲ್ಲೂ ಕಡಿಮೆ ಇಲ್ಲ..!

    ಬೇರೆ ಭಾಷೆ ಸಿನಿಮಾಗಿಂತ ‘ಜಂಟಲ್ ಮ್ಯಾನ್’ ಯಾವುದರಲ್ಲೂ ಕಡಿಮೆ ಇಲ್ಲ..!

    ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ ಮ್ಯಾನ್’ ಸಿನಿಮಾ ತೆರೆಕಂಡು ಯಶಸ್ಸಿನ ಹಾದಿಯಲ್ಲಿ ಓಡುತ್ತಿದೆ. ಕನ್ನಡ ಚಿತ್ರ ವಿಮರ್ಶಕರು ಅಷ್ಟು ಸುಲಭದಲ್ಲಿ ಒಂದು ಸಿನಿಮಾವನ್ನು ಕಂಪ್ಲೀಟ್ ಒಪ್ಪುವುದಿಲ್ಲ. ಆದ್ರೆ ‘ಜಂಟಲ್ ಮ್ಯಾನ್’ ಚಿತ್ರ ಎಲ್ಲಾ ವರ್ಗದವರಿಂದಲೂ ಹೊಗಳಿಕೆಯ ಮಹಾಪೂರವನ್ನೇ ಸ್ವೀಕರಿಸಿದೆ. ಕಮರ್ಷಿಯಲ್ ಅಂಶಗಳನ್ನೂ ಒಳಗೊಂಡಂತೆ ಪರಭಾಷೆಯ ಯಾವ ಚಿತ್ರಕ್ಕೂ ಕಡಿಮೆ ಇಲ್ಲವೆಂಬಂತೆ ‘ಜಂಟಲ್ ಮ್ಯಾನ್’ ಸಿನಿಮಾ ರೂಪುಗೊಂಡಿದೆ.

    ನಮ್ಮ ಜನ ತಾಯ್ನಾಡಿ, ತಾಯಿ ನೆಲದ ಸಿನಿಮಾಗಳನ್ನ ನೋಡಿ, ಹೊಗಳುವುದಕ್ಕಿಂತ ಪಕ್ಕದ ತಮಿಳು, ತೆಲುಗಿನ ಸಿನಿಮಾಗಳಿಗೆ ಮನಃಪೂರ್ವಕ ಹೊಗಳುತ್ತಾರೆ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ ಬರುವುದಿಲ್ಲ ಎಂಬ ಕೊಂಕು ಮಾತುಗಳನ್ನು ಆಡುವವರು ಕೆಲವರಿದ್ದಾರೆ. ಆ ಭಾವನೆಯನ್ನ ಮೊದಲು ತೆಗೆದು ಹಾಕಿ ಕನ್ನಡ ಸಿನಿಮಾಗಳು ರಿಲೀಸ್ ಆದಾಗ ಚಿತ್ರಮಂದಿರಕ್ಕೆ ಬಂದು ಆ ಸಿನಿಮಾಗಳನ್ನು ನೋಡಬೇಕು. ಆಗ ಅಂತ ವರ್ಗಕ್ಕೆ ಕನ್ನಡದಲ್ಲೂ ಇಂಥ ಸಿನಿಮಾಗಳು ಇವೆ ಅನ್ನೋದು ಅರಿವಿಗೆ ಬರುತ್ತೆ. ಅದನ್ನು ಮಾಡದೇ ಸೋಶಿಯಲ್ ಮೀಡಿಯಾದಲ್ಲೆಲ್ಲೋ ಸಿನಿಮಾ ಬಗ್ಗೆ ವಿಮರ್ಶೆ ಬಂದಾಗ ಕೇವಲ ಒಂದು ಲೈಕ್ ಅಥವಾ ಕಮೆಂಟ್ ಮಾಡಿ ಸುಮ್ಮನಾಗಿ ಬಿಡುತ್ತಾರೆ.

    ಸದ್ಯ ಕನ್ನಡ ಚಿತ್ರರಂಗದ ಸ್ಥಿತಿಯೂ ಹಾಗೇ ಇದೆ. ಬರುವ ಎಲ್ಲಾ ಸಿನಿಮಾಗಳು ಉತ್ತಮವಾಗಿಯೇ, ಒಳ್ಳೆ ಕಂಟೆಂಟ್ ಹೊಂದಿದ ಸಿನಿಮಾಗಳು ಬರುತ್ತವೆಂದು ಹೇಳುವುದಕ್ಕಾಗಲ್ಲ. ಅದರ ನಡುವೆಯೂ ಒಳ್ಳೆ ಕಂಟೆಂಟ್ ಹೊಂದಿದ ಸಿನಿಮಾಗಳು ಸಾಕಷ್ಟು ಬರುತ್ತವೆ. ಅಂತ ಚಿತ್ರಗಳಲ್ಲೊಂದು ಪ್ರಜ್ವಲ್ ದೇವರಾಜ್ ನಟನೆಯ ‘ಜಂಟಲ್ ಮನ್’.

    ಜಂಟಲ್ ಮನ್ ಚಿತ್ರದ ನಿರ್ದೇಶಕ ನಿಜಕ್ಕೂ ಪ್ರತಿಭಾವಂತ. ಮೊದಲ ಸಿನಿಮಾದಲ್ಲೇ ನಿರ್ದೇಶಕನಾಗಿ ಕಸುಬುದಾರಿಕೆ ತೋರಿದ್ದವರು. ಈ ಸಲವಂತೂ ತಮ್ಮ ಎಲ್ಲಾ ಶ್ರಮವನ್ನು ಧಾರೆಯೆರೆದು ಅಪರೂಪದ ಚಿತ್ರ ಮಾಡಿದ್ದಾರೆ. ಸಂಚಾರಿ ವಿಜಯ್ ಅವರಂಥಾ ನಟ ಕೂಡಾ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಗುರು ದೇಶಪಾಂಡೆ ಸ್ವತಃ ನಿರ್ದೇಶಕರಾಗಿದ್ದೂ ಗಟ್ಟಿ ಕಥೆ ಹೊಂದಿದೆ ಎನ್ನುವ ಕಾರಣಕ್ಕೆ ಇಷ್ಟು ದಿನ ತಾವು ದುಡಿದದ್ದನ್ನೆಲ್ಲಾ ಸೇರಿಸಿ, ಅದರೊಟ್ಟಿಗೆ ಎಲ್ಲೆಲ್ಲಿಂದಲೋ ಹಣ ತಂದು ‘ಜಂಟಲ್ ಮ್ಯಾನ್’ ಚಿತ್ರವನ್ನು ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅವರಂತೂ ತಮ್ಮ ಸಿನಿಮಾ ಬದುಕಿನಲ್ಲೇ ಮೈಲಿಗಲ್ಲಾಗಿ ಉಳಿಯುವಂಥಾ ಪಾತ್ರದಲ್ಲಿ, ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸಿದ್ದಾರೆ. ಇವರೆಲ್ಲರ ಶ್ರಮಕ್ಕೆ ಪ್ರತಿಫಲ ದೊರೆಯಬೇಕೆಂದರೆ ಪ್ರೇಕ್ಷಕರು ಉತ್ಸಾಹದಿಂದ ಚಿತ್ರಮಂದಿರಕ್ಕೆ ಬರಬೇಕಲ್ಲವೇ? ನಮ್ಮ ಕನ್ನಡದ ಪ್ರೇಕ್ಷಕರ ಮನತಣಿಸಲು ಜಂಟಲ್ ಮನ್ ಗಿಂತಾ ಸಿನಿಮಾ ಬೇಕೇ? ಇಷ್ಟೆಲ್ಲ ಇದ್ದರೂ ಯಾಕೆ ನಮ್ಮವರು ಅಸಡ್ಡೆ ಮನೋಭಾವನೆ ತೋರುತ್ತಿದ್ದಾರೆ? ಎಂಬ ಬೇಸರ ಚಿತ್ರತಂಡದವರಲ್ಲಿ ಮೂಡಿದೆ.

    ‘ಜಂಟಲ್ ಮ್ಯಾನ್’ ನಲ್ಲಿರುವಂತ ಕಥೆ ಹಿಂದೆಂದೂ ಕೂಡ ನಾವೂ ನೋಡಿರುವುದಕ್ಕೆ ಸಾಧ್ಯವಿಲ್ಲ. ಅಂತದ್ದೊಂದು ಅಪರೂಪದ ಕಥೆ ಹೆಣೆದಿದ್ದಾರೆ. ಅಂತ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವವರಿಗೂ ಕೂಡ ಈ ಸಿನಿಮಾದಿಂದ ಮನಸ್ಥೈರ್ಯ ಸಿಗುವ ಭರವಸೆ ಹೆಚ್ಚಾಗಿದೆ. ಕನ್ನಡದಲ್ಲೂ ಇನ್ನು ಉತ್ತಮ ಸಿನಿಮಾಗಳು ಬರಬೇಕು. ಆ ರೀತಿ ಬರಬೇಕೆಂದೆಲ್ಲಿ ಪ್ರೇಕ್ಷಕರ ಸಹಕಾರ ಅಷ್ಟೇ ಮುಖ್ಯವಾಗುತ್ತೆ. ಕನ್ನಡಿಗರೇ ಕನ್ನಡ ಸಿನಿಮಾಗಳನ್ನ ಉಳಿಸಲಿಲ್ಲ ಅಂದ್ರೆ ಹೇಗೆ? ನಿರ್ಮಾಪಕರಿಗೆ ಧೈರ್ಯ ಬರಬೇಕಾದಲ್ಲಿ ಚಿತ್ರಮಂದಿರಗಳು ತುಂಬಿರಬೇಕು. ‘ಜಂಟಲ್ ಮ್ಯಾನ್’ ಅದ್ಬುತ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ನೋಡದೆ ಇರುವವರು ಚಿತ್ರ ನೋಡಿ ಖಂಡಿತ ಇಷ್ಟವಾಗುತ್ತೆ.

  • ಪ್ರಜ್ವಲ್‍ಗೆ ‘ಜಂಟಲ್‍ಮನ್’ ಕೊಡ್ತಾನಾ ಧಮಾಕ!

    ಪ್ರಜ್ವಲ್‍ಗೆ ‘ಜಂಟಲ್‍ಮನ್’ ಕೊಡ್ತಾನಾ ಧಮಾಕ!

    ಸ್ಯಾಂಡಲ್‍ವುಡ್‍ನ ಡೈನಾಮಿಕ್ ಫ್ರಿನ್ಸ್ ಪ್ರಜ್ವಲ್ ದೇವರಾಜ್ ಸುಮಾರು ಎರಡು ವರ್ಷಗಳಿಂದ ತೆರೆಮೇಲೆ ಕಾಣಿಸುತ್ತಿಲ್ಲ. ಮದ್ವೆ ಆದ್ಮೇಲೆ ಸಿನ್ಮಾ ಮಾಡೋದ್ ಬಿಟ್ರಾ ಅಂತ ಬೇಸರವಾಗಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದೇ ‘ಜಂಟಲ್ ಮನ್’ ಚಿತ್ರದಿಂದ. ಪ್ರಜ್ವಲ್‍ರ ಈ ಜಂಟಲ್‍ಮನ್ ಅವತಾರಕ್ಕೆ ನಾಯಕಿ ಯಾರು ಅಂದಾಗ, ಸದ್ಯ ಚಂದನವನದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದ ಬ್ಯೂಟಿ ನಿಶ್ವಿಕಾ ನಾಯ್ಡು ಅಂತ ಕೇಳಿ ಫುಲ್ ಖುಷ್ ಆಗಿದ್ರು ಪಡ್ಡೆ ಹೈಕಳು. ಇದೆಲ್ಲ ಸರಿ ‘ಜಂಟಲ್ ಮನ್’ ಏನು ಅಂದವರಿಗೆ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ವಿಭಿನ್ನವಾಗಿನೇ ಕ್ಯೂರಿಯಾಸಿಟಿ ಹುಟ್ಟುಹಾಕಿದ್ರು.

    ಹೌದು. ಯಾಕಂದ್ರೆ ಈ ಚಿತ್ರ ನಿಂತಿರೋದೇ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ರೇರ್ ನಿದ್ರಾ ಕಾಯಿಲೆ ಮೇಲೆ. ಸೈಂಟಿಫಿಕ್ ಪ್ರಕಾರ ಈ ಸಿಂಡ್ರೋಮ್ ಇರುವವರು ದಿನದಲ್ಲಿ 18 ಗಂಟೆ ನಿದ್ರೆ ಮಾಡ್ತಾರೆ. ಆದರೆ ಇನ್ನುಳಿದ 6 ಗಂಟೆ ಎಚ್ಚರವಾಗಿರ್ತಾರೆ. ಆದರೆ ನಾಯಕನಾಗಿ ಪ್ರಜ್ವಲ್ ಸಿನಿಮಾದಲ್ಲಿ ಫೈಟ್, ಪ್ರೀತಿ, ಹಾಡು, ಸ್ಟಂಟ್ಸ್ ಇವೆಲ್ಲ ಯಾವಾಗ್ ಮಾಡ್ತಾರೆ…? ಇವೆಲ್ಲ ಒಂದು ಚಿತ್ರದಲ್ಲಿ ಇಲ್ಲದೇ ಇದ್ರೆ ಹೇಗೆ ಅಂದವರಿಗೆ ಚಿತ್ರದ ಟ್ರೈಲರ್ ಉತ್ತರ ಕೊಟ್ಟು,ಜಂಟಲ್ ಮನ್ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿತ್ತು.

    ಇನ್ನು ಚಿತ್ರದಲ್ಲಿರೋ ಅಜನೀಶ್ ಲೋಕನಾಥ್ ಅವರ ಸಂಗೀತ ಸಖತ್ ಹಿಡಿಸಿದೆ. ಇಷ್ಟು ದಿನ ಸೂಪರ್ ಸಕ್ಸಸ್ ಸಿನಿಮಾಗಳನ್ನು ನಿರ್ದೇಶನ ಮಾಡ್ತಿದ್ದ ಗುರುದೇಶ್ ಪಾಂಡೆ, ಜಂಟಲ್‍ಮನ್‍ಗೆ ಬಂಡವಾಳ ಹೂಡಿ ನಿರ್ಮಾಪಕರಾಗ್ತಿರೋದು ಇನ್ನೊಂದು ವಿಶೇಷ. ಹಲವು ತಾರಾಬಳಗ ಹೊಂದಿರೋ ಈ ಚಿತ್ರದಲ್ಲಿ ವಿಶೇಷ ಪಾತ್ರಕ್ಕಾಗಿ ಸಂಚಾರಿ ವಿಜಯ್ ಬಣ್ಣ ಹಚ್ಚಿರೋದು ಮತ್ತೊಂದು ಹೈಲೇಟ್. ಒಟ್ಟಾರೆ ಶುರುವಾದಾಗಿನಿಂದ ಕ್ಯೂರಿಯಾಸಿಟಿ ಹುಟ್ಟಿಸಿ, ಫೆ.07ಕ್ಕೆ ಥಿಯೇಟರ್ ಗೆ ಕಾಲಿಡುತ್ತಿರೋ ಈ ಜಂಟಲ್ ಮನ್, ಡೈನಾಮಿಕ್ ಪ್ರಿನ್ಸ್ ಪ್ರಜ್ಜುಗೆ ಧಮಾಕ ಎಂಟ್ರಿ ಕೊಡುತ್ತಾ ಅನ್ನೋದರೊಂದಿಗೆ ನಿಶ್ವಿಕಾ ನಾಯ್ಡು ಜೊತೆ ಡೈನಾಮಿಕ್ ಪ್ರಿನ್ಸ್ ರೊಮ್ಯಾನ್ಸ್ ಹೇಗಿರತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

  • ಫೆ.7ಕ್ಕೆ ನಿಮ್ಮೆದುರಿಗೆ ‘ಜಂಟಲ್‍ಮನ್’ ದರ್ಶನ!

    ಫೆ.7ಕ್ಕೆ ನಿಮ್ಮೆದುರಿಗೆ ‘ಜಂಟಲ್‍ಮನ್’ ದರ್ಶನ!

    ವಿಕೆಂಡ್ ಹತ್ತಿರವಾಗ್ತಿದಂತೆ ಗಾಂಧಿನಗರದಲ್ಲಿ ಏನಿಲ್ಲವಾದರೂ ವಾರಕ್ಕೆ 5-6 ಚಿತ್ರಗಳು ಥಿಯೇಟರ್ ನಲ್ಲಿ ಸಿನಿಪ್ರಿಯರಿಗಾಗಿನೇ ಕಾಯ್ತಿರ್ತಾವೆ. ಇದೆಲ್ಲವನ್ನ ಅರಿತ ನಿರ್ದೇಶಕರು ಭಿನ್ನ-ವಿಭಿನ್ನ ಕಥಾಹಂದರ ಹೊತ್ತ ಚಿತ್ರಗಳನ್ನ ಕೊಟ್ಟು ಪ್ರೇಕ್ಷಕರ ಮನಸಿಗೆ ಹಾಯ್ ನೀಡಿ, ವೀಕೆಂಡ್ ನ ಮಸ್ತಿ ಮಾಡೋಕೆ ಸಜ್ಜಾಗ್ತಿರ್ತಾರೆ.

    ಈಗಾಗಲೇ ಸಿನೆಮಾರಂಗದಲ್ಲಿ ನಮ್ಮಲ್ಲೇ ಸುತ್ತುವರೆಯೂ ಆಗು-ಹೋಗುಗಳನ್ನೇ ಕಥೆಯಾಗಿಸಿ ಸಿನೆಮಾ ಮಾಡಿದ್ದಿದೆ. ಅಂತೆಯೇ ಈ ಬಾರಿ ಹಲವರಲ್ಲಿ ಒಬ್ಬರಿಗೆ ಬರೋ ರೇರ್ ಖಾಯಿಲೆಯಂತಿರೋ ‘ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್’ ಕುರಿತು ನಿರ್ದೇಶಕ ಜಡೇಶ್ ಕುಮಾರ್ ಹಂಪಿ ‘ಜಂಟಲ್ ಮನ್’ ಸಿನ್ಮಾ ಮೂಲಕ ಹೇಳ ಹೊರಟಿದ್ದಾರೆ. ಟ್ರೈಲರ್, ಸೂಪರ್ ಸಾಂಗ್ಸ್, ಮೂಲಕ ಸಿನ್ಮಾ ನೋಡ್ಲೇಬೇಕು ಅಂತಿದ್ದ ಚಿತ್ರಪ್ರಿಯರಿಗೆ ಇದೇ ತಿಂಗಳ 07 ಕ್ಕೆ ತೆರೆಗೆ ಬರ್ತಿರೋದಾಗಿ ಗುಡ್ ನ್ಯೂಸ್ ಸಹ ತಂಡ ಕೊಟ್ಟಿದೆ.

    ಇನ್ನು ಈ ಸ್ಲೀಪಿಂಗ್ ಬ್ಯೂಟಿ ಸಿಂಡ್ರೂಮ್ ಪ್ರಕಾರ ದಿನದ 18 ಗಂಟೆ ನಿದ್ರೆಯಲ್ಲೇ ಕಳೆದು, ಉಳಿದ 6 ಗಂಟೆ ಆ್ಯಕ್ಟೀವ್ ಆಗಿರೋ ನಾಯಕನ ಪಾತ್ರಕ್ಕೆ ಪ್ರಜ್ವಲ್ ದೇವರಾಜ್ ನಾಯಕ. ಇವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸಾಥ್ ಕೊಟ್ಟಿದ್ದಾರೆ.ಬೇಬಿ ಆರಾಧ್ಯ ಪಾತ್ರವೂ ಇಂಪಾರ್ಟೇಂಟ್ ಅನ್ನಿಸಿದ್ರೆ, ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ಇನ್ನು ಭಿನ್ನ ವೆನಿಸೋ ಈ ಕಥೆಗೆ ಸಾಥ್ ನೀಡಿ ಬಂಡವಾಳ ಹಾಕೋ ಮೂಲಕ ‘ಜಂಟಲ್‍ಮನ್’ ಗೆ ಬೆನ್ನೆಲುಬಾಗಿ ನಿಂತಿದ್ದು ನಿರ್ಮಾಪಕರಾಗಿ ಗುರುದೇಶ್ ಪಾಂಡೆ.

    ಇನ್ನು ಇಷ್ಟೆಲ್ಲ ಕ್ಯೂರಿಯಾಸಿಟಿ ಹುಟ್ಟಿಸಿರೋ ಈ ‘ಜಂಟಲ್ ಮನ್’ ದಿನದ 24 ಗಂಟೆಗಳಲ್ಲಿ 18 ಗಂಟೆ ನಿದ್ದೆಯಲ್ಲೇ ಕಳೆದು ಬರೀ 6 ಗಂಟೆ ಆ್ಯಕ್ಟೀವ್ ಆಗಿರ್ತಾನೆ. ಅಂದಮೇಲೆ ಟ್ರೈಲರ್ ನಲ್ಲಿ ಕಾಣೋ ಅವನು ವೈಲಂಟಾಗಿದ್ದೇಕೆ ಅನ್ನೋದಕ್ಕೆ ಉತ್ತರ ಇದೇ 07 ಅಂದ್ರೆ ಇದೇ ಶುಕ್ರವಾರ ಕ್ಕೇನೇ ಸಿಗಲಿದೆ. ಸೋ ಜಂಟಲ್‍ಮನ್‍ನ ನಿದ್ರಾ ಪುರಾಣ ಹಾಗೂ ಈ ಈ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ನ ಕುರಿತು ನೀವ್ ನೋಡಬೇಕೆಂದರೆ ಈ ತಿಂಗಳ ಕೊನೆಯ ಸಿನಿಶುಕ್ರವಾರದ ತನಕ ಕಾಯಲೇಬೇಕು.

  • ಥಿಯೇಟರ್‌ನಲ್ಲಿ ರಾರಾಜಿಸಲು ಸಜ್ಜಾದ ‘ಜಂಟಲ್‍ಮನ್’

    ಥಿಯೇಟರ್‌ನಲ್ಲಿ ರಾರಾಜಿಸಲು ಸಜ್ಜಾದ ‘ಜಂಟಲ್‍ಮನ್’

    ದಿನಬೆಳಗಾದರೆ ಸಾಕು ಚಿತ್ರರಂಗದಲ್ಲಿ ಏನಾದರೊಂದಿಷ್ಟು. ಜ್ಯೂಸಿ ಸುದ್ದಿಗಳು ಕಿವಿಗೆ ಬೀಳ್ತಾನೇ ಇರ್ತಾವೆ. ಅದ್ರಲ್ಲೂ ಗಾಂಧಿನಗರ ದಲ್ಲೊಂತೂ ಹೊಸ ಚಿತ್ರಗಳ ಸೆಟ್ಟೇರುವಿಕೆ,ರೆಡಿಯಾದ ಚಿತ್ರಗಳ ಬಿಡುಗಡೆಯ ಸದ್ದು ಜೋರಾಗಿನೇ ಇರತ್ತೆ.ಈ ಭಾರಿ ಥಿಯೇಟರ್ ಗೆ ಕಾಲಿಡೋಕೆ ರೆಡಿಯಾಗ್ತ ಸದ್ದು ಮಾಡ್ತಿರೋ ಸಿನ್ಮಾಗಳ ಪೈಕಿ, ‘ಜಂಟಲ್‍ಮನ್’ ಸಹ ಒಬ್ಬನು.

    ಯಾರೀ ಜಂಟಲ್ ಮನ್ ಅಂತ ಥಿಂಕ್ ಮಾಡೋ ಅವಶ್ಯಕತೆ ಇಲ್ಲ.ಯಾಕಂದ್ರೆ ಈಗಾಗಲೇ ಗಾಂಧಿನಗರದಲ್ಲಿ ಡೈನಮಿಕ್ ಫ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದಾಗಿದೆ.

    ಜಡೇಶ್ ಕುಮಾರ್ ಹಂಪಿ ಆ್ಯಕ್ಷನ್ ಕಟ್ ನ ಈ ವಿಭಿನ್ನ ಕಥಾಹಂದರದ ಚಿತ್ರಕ್ಕೆ ಗುರುದೇಶ್ ಪಾಂಡೆ ನಿರ್ಮಾಪಕರಾಗಿದ್ದಾರೆ.ಇನ್ನು ಚಿತ್ರದಲ್ಲಿ ಪ್ರಜ್ವಲ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ತೆರೆಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಬೇಬಿ ಆರಾಧ್ಯಳ ಮುಗ್ಧತೆ ಚಿತ್ರದುದ್ದಕ್ಕೂ ಮೋಡಿಮಾಡೋಕೆ ರೆಡಿ ಇದೆ. ಸಂಚಾರಿ ವಿಜಯ್ ಅವರ ಸ್ಪೆಷಲ್ ಅಪಿಯರೆನ್ಸ್ ಚಿತ್ರದಲ್ಲಿದೆ.

    ಈಗಾಗಲೇ ಟ್ರೈಲರ್, ಟೀಸರ್, ಪೋಸ್ಟರ್ ಅಂತ ಸದ್ದು ಮಾಡಿರೋ ಈ ಜಂಟಲ್‍ಮನ್, ಸ್ವಲ್ಪ ಜೋರಾಗಿನೇ ಸದ್ದು ಮಾಡ್ತ ಥಿಯೇಟರ್ ಗೆ ಬರೋಕೇನೋ ರೆಡಿಯಾಗಿದ್ದಾನೆ. ಇನ್ನು ಇದೇ 7 ಕ್ಕೆ ತೆರೆಮೇಲೆ ರಾರಾಜಿಸಲಿರೋ ಜಂಟಲ್‍ಮನ್‍ನ ಗುಣಗಾನ ಮಾಡಿ, ವೆಲ್ಕಮ್ ಮಾಡಿಕೊಳ್ಳೊದೊಂದೇ ಬಾಕಿ.

  • ಜಂಟಲ್ ಮ್ಯಾನ್’ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

    ಜಂಟಲ್ ಮ್ಯಾನ್’ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ ಜಂಟಲ್ ಮ್ಯಾನ್ ಸಾಕಷ್ಟು ಸದ್ದು ಮಾಡುತ್ತಿದೆ. ಜನವರಿ 31ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾಗೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಿಂದ ರಿಮೇಕ್ ಆಫರ್ ಗಳು ಬರುವುದಕ್ಕೆ ಶುರು ಮಾಡಿವೆ. ರಿಲೀಸ್ ಗೂ ಮುನ್ನವೇ ‘ಜಂಟಲ್ ಮ್ಯಾನ್’ ಕ್ರಿಯೇಟ್ ಮಾಡಿಕೊಂಡಿರುವ ಡಿಮ್ಯಾಂಡ್ ನಿಂದ ಚಿತ್ರತಂಡ ಸಖತ್ ಖುಷಿಯಲ್ಲಿದೆ.

    ಕಳೆದ ವಾರ ಬಿಡುಗಡೆಯಾದ ಟ್ರೈಲರ್ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದ ವಿಶಿಷ್ಟ ಕಥಾಹಂದರವನ್ನು ಗಮನಿಸಿದ ಬೇರೆ ಭಾಷೆಯವರು ‘ಜಂಟಲ್ ಮ್ಯಾನ್’ ಸಿನಿಮಾ ನಿರ್ಮಾಪಕ ಗುರುದೇಶ ಪಾಂಡೆ ಅವರನ್ನು ಸಂಪರ್ಕಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ‘ಜಂಟಲ್ ಮ್ಯಾನ್’ ಬೇರೆ ಭಾಷೆಗಳಲ್ಲೂ ಬರುವ ನಿರೀಕ್ಷೆ ಇದೆ.

     

    ತೆಲುಗಿನ ಸಾಯ್ ಕುಮಾರ್ ಅವರು ಗುರುದೇಶ ಪಾಂಡೆ ಬಳಿ ಈ ಬಗ್ಗೆ ಮಾತುಕತೆ ನಡೆಸಿದ್ದು, ತೆಲುಗಿನಲ್ಲಿ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದಾರೆ. ಇನ್ನು ತಮಿಳು ನಟ ಸಿಂಬು ಅವರ ಮ್ಯಾನೇಜರ್ ಕೂಡ ರಿಮೇಕ್ ಹಕ್ಕು ಬಗ್ಗೆ ವಿಚಾರಿಸಿದ್ದಾರೆ. ಮಲಯಾಳಂನ ತಿರಸೂರು ಸುನೀಲ್ ಅವರು ಕೂಡ ಚಿತ್ರದ ಬಗ್ಗೆ ವಿಚಾರಿಸಿದ್ದಾರೆ. ಟ್ರೈಲರ್ ಔಟ್ ಆದ ಮೂರೇ ದಿನದಲ್ಲಿ ಈ ಬೆಳವಣಿಗೆ ನಡೆದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡ್ತಾ ಇದ್ರೆ ‘ಜಂಟಲ್ ಮ್ಯಾನ್’ ಚಿತ್ರದ ಬಗ್ಗೆ ಕನ್ನಡ ಪ್ರೇಕ್ಷಕರು ಕಾತುರರಾಗಿದ್ದಾರೆ.

    ಚಿತ್ರದ ಕಥೆ ಎಲ್ಲರಿಗೂ ಇಷ್ಟವಾಗಿದ್ದು, ಹಕ್ಕುಗಳ ಬಗ್ಗೆ ಮಾತುಕಥೆ ನಡೆಸಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಕೂತು ಮಾತನಾಡಿ ನಂತರ ತೀರ್ಮಾನ ತೆಗೆದುಕೊಳ್ಳುವುದಾಗಿ ಚಿತ್ರ ನಿರ್ಮಾಪಕ ಗುರುದೇಶಪಾಂಡೆ ಹೇಳಿದ್ದಾರೆ.

    ರಿಲೀಸ್ ಗೆ ರೆಡಿಯಾಗಿರುವ ‘ಜಂಟಲ್ ಮ್ಯಾನ್’ ಚಿತ್ರವನ್ನು ಜಿ. ಸಿನಿಮಾಸ್ ಬ್ಯಾನರ್ ನಲ್ಲಿ ಗುರುದೇಶ ಪಾಂಡೆ ನಿರ್ಮಾಣ ಮಾಡಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಸೇರಿದಂತೆ ಬಹುತೇಕರು ನಟಿಸಿದ್ದಾರೆ.

  • ಜಂಟಲ್ ಮ್ಯಾನ್ ಲುಕ್ ನಲ್ಲಿ ಮಿಂಚಿಯೇ ಬಿಟ್ರು ಡೈನಾಮಿಕ್ ಪ್ರಿನ್ಸ್! ಹೇಗಿದೆ ಗೊತ್ತಾ ಚಿತ್ರದ ಟ್ರೇಲರ್?

    ಜಂಟಲ್ ಮ್ಯಾನ್ ಲುಕ್ ನಲ್ಲಿ ಮಿಂಚಿಯೇ ಬಿಟ್ರು ಡೈನಾಮಿಕ್ ಪ್ರಿನ್ಸ್! ಹೇಗಿದೆ ಗೊತ್ತಾ ಚಿತ್ರದ ಟ್ರೇಲರ್?

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಬ್ಯೂಟಿಫುಲ್ ನಿಶ್ವಿಕಾ ನಾಯ್ಡು ನಟನೆಯ ಜಂಟಲ್ ಮೆನ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

    ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರೋ ಟ್ರೇಲರ್ ನೋಡುಗರನ್ನ ಸೀಟಿನ ತುದಿಗೆ ಕುರಿಸುತ್ತದೆ. ದಿನದ 18 ಗಂಟೆ ನಿದ್ದೆ ಮಾಡೋ ಹೀರೋ. ಉಳಿದ ಆರು ಗಂಟೆಯಲ್ಲಿ ಏನೆಲ್ಲಾ ಮಾಡ್ತಾನೆ. ಜೀವನದೊಟ್ಟಿಗೆ ಹೋರಾಟ, ಆತನ ಕನಸು ನನಸು ಮಾಡಿಕೊಳ್ಳೋದು ಹೀಗೆ ಎಲ್ಲವನನ್ನ ಟ್ರೇಲರ್ ನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ.

    ಕುಟುಂಬಕ್ಕಾಗಿ, ಪ್ರೀತಿಗಾಗಿ, ಅನ್ಯಾಯದ ವಿರುದ್ಧ ಹೋರಾಡೋ ನಾಯಕನಾಗಿ ಡೈನಾಮಿಕ್ ಪ್ರಿನ್ಸ್ ಮಿಂಚಿದ್ದಾರೆ. ಇನ್ನು, ನಿಶ್ವಿಕಾ ನಾಯ್ಡು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದು, ನೋಡುಗರನ್ನ ಅಟ್ರ್ಯಾಕ್ ಮಾಡ್ತಾರೆ. ಇವೆಲ್ಲದರ ಜೊತೆಗೆ ಸಂಚಾರಿ ವಿಜಯ್ ಖಡಕ್ ಪೊಲೀಸ್ ಆಫೀಸರ್ ಲುಕ್‍ನಲ್ಲಿ ಮಿಂಚಿದ್ದಾರೆ.

    ಅಂದಹಾಗೇ ಜಂಟಲ್ ಮೆನ್ ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ಆ್ಯಕ್ಷನ್ ಕಟ್ ಹೇಳಿದ್ದು, ಗುರುದೇಶ ಪಾಂಡೇ ನಿರ್ಮಾಣ ಮಾಡಿದ್ದಾರೆ.

  • ‘ಜಂಟಲ್ ಮ್ಯಾನ್’ ಪ್ರಚಾರ ಭರಾಟೆ ಬಲು ಜೋರು!

    ‘ಜಂಟಲ್ ಮ್ಯಾನ್’ ಪ್ರಚಾರ ಭರಾಟೆ ಬಲು ಜೋರು!

    – ಪ್ರಚಾರತಂತ್ರಕ್ಕೆ ಪ್ರೇಕ್ಷಕ ಫಿದಾ

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸ್ಲೀಪಿಂಗ್ ಸಿಂಡ್ರೋಮ್ ನಿಂದ ಬಳಲುತ್ತಿದ್ದಾರಂತೆ. ಎಷ್ಟೇ ಮೆಡಿಸಿನ್ ತಗೊಂಡ್ರು, ಯಾವ ಡಾಕ್ಟರ್ ಬಳಿ ಹೋದರೂ ಕಡಿಮೆ ಆಗ್ತಿಲ್ಲವಂತೆ. ಅರೇ. ಶಾಕ್ ಆದ್ರಾ.!! ಇದು ಪ್ರಜ್ವಲ್ ಹೊಸ ಅವತಾರ ಕಣ್ರೀ!.

    ಹೌದು. ಪ್ರಜ್ವಲ್ ಜಂಟಲ್ ಮ್ಯಾನ್ ಆಗಿ ತೆರೆ ಮೇಲೆ ಬರ್ತಿದ್ದಾರೆ. ಚಿತ್ರದ ಟೈಟಲ್ ‘ಜಂಟಲ್ ಮ್ಯಾನ್’ ಆದರೂ ಪ್ರಜ್ವಲ್ ಫುಲ್ ಸ್ಲೀಪಿ ಮ್ಯಾನ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದಿನದಲ್ಲಿ ಬರೋಬ್ಬರಿ ಹದಿನೆಂಟು ಗಂಟೆ ನಿದ್ದೆ ಮಾಡೋ ಕುಂಭಕರ್ಣನ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರೋ ಈ ಚಿತ್ರ ಈಗ ವಿನೂತನ ಪ್ರಚಾರದ ಮೂಲಕ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಜಂಟಲ್ ಮ್ಯಾನ್ ತರಹೇವಾರಿ ಮೀಮ್ಸ್, ಟ್ರೋಲ್ ಹಾವಳಿ ಹೆಚ್ಚಾಗಿದ್ದು ಸಖತ್ ವೈರಲ್ ಆಗಿವೆ. ಪಾಲಿಟಿಕ್ಸ್ ನಿಂದ ಟೂತ್ ಪೇಸ್ಟ್ ಜಾಹೀರಾತಿನಲ್ಲೂ ಜಂಟಲ್ ಮ್ಯಾನ್ ಅವತಾರ ತಾಳಿರೋ ಪ್ರಜ್ವಲ್ ಟ್ರೋಲ್, ಮೀಮ್ಸ್ ಗಳು ಕಚಗುಳಿ ಇಡುತ್ತಿವೆ. ಇದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

    ಜಿ ಸಿನಿಮಾಸ್ ಬ್ಯಾನರ್, ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅತಿ ವಿರಳವಾಗಿ ಕಾಣಿಸಿಕೊಳ್ಳೋ ಸ್ಲೀಪಿಂಗ್ ಸಿಂಡ್ರೋಮ್ ಕಾಯಿಲೆ ಇರುವ ವ್ಯಕ್ತಿ ಜೀವನವನ್ನು ಕಮರ್ಶಿಯಲ್ ಎಳೆ ಮೂಲಕ ತೆರೆ ಮೇಲೆ ತರಲು ನಿರ್ದೇಶಕ ಜಡೇಶ್ ಕುಮಾರ್ ಹೊರಟಿದ್ದಾರೆ.

    2020 ಜನವರಿ ಮೂರನೇ ವಾರದಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಡೈನಾಮಿಕ್ ಪ್ರಿನ್ಸ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರೋ ಚಿತ್ರತಂಡ ವಿನೂತನ ಪ್ರಚಾರದಿಂದ ಸಿನಿ ಪ್ರೇಕ್ಷಕನ ಮನ ಗೆದ್ದಿದೆ. ತೆರೆ ಮೇಲೆ ಜಂಟಲ್ ಮ್ಯಾನ್ ಯಾವ ರೀತಿ ಮೆಚ್ಚುಗೆ ಪಡೆದುಕೊಳ್ಳುತ್ತಾನೆ ಅನ್ನೋದನ್ನ ಕಾದು ನೋಡಬೇಕು.

  • ಜಂಟಲ್ ಮನ್: ವಸಿಷ್ಠ ಕಂಠಸಿರಿಯಲ್ಲೊಂದು ವಿಶಿಷ್ಟ ಹಾಡು!

    ಜಂಟಲ್ ಮನ್: ವಸಿಷ್ಠ ಕಂಠಸಿರಿಯಲ್ಲೊಂದು ವಿಶಿಷ್ಟ ಹಾಡು!

    ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಜಂಟಲ್ ಮನ್ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಇದೀಗ ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಹಾಡಿನ ಮೂಲಕವೇ ನಾಯಕ ಪ್ರಜ್ವಲ್ ದೇವರಾಜ್ ಅವರ ಒಂದಷ್ಟು ಗೆಟಪ್ಪುಗಳನ್ನೂ ಅನಾವರಣಗೊಳಿಸಿದೆ. ಪ್ರತಿಯೊಬ್ಬರಿಗೂ ಆಪ್ತವಾಗುವಂಥಾ ಆವೇಗದ ಸಾಲುಗಳನ್ನೊಳಗೊಂಡ ಈ ಹಾಡು ನಟ ವಸಿಷ್ಠ ಸಿಂಹ ಅವರ ಕಂಠಸಿರಿಯಲ್ಲಿ ರಗಡ್ ಶೈಲಿಯಲ್ಲಿ ಮೂಡಿ ಬಂದಿದೆ.

    ‘ನಡುಗುತಿದೆ ಎದೆಗೂಡು ಸುಡುಗಾಡು ಬರಿ ಮೌನ. ತೆವಳುತಿದೆ ವಾತ್ಸಲ್ಯ ಬರಿ ಮೋಸ ದ್ವೇಷ ಇದೇ ಜಮಾನ’ ಅಂತ ಶುರವುವಾಗೋ ಈ ಹಾಡನ್ನು ಧನಂಜಯ್ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಅದಕ್ಕೆ ವಿಶಿಷ್ಟ ಅನ್ನಿಸುವಂಥಾ ಶೈಲಿಯಲ್ಲಿಯೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರತಿ ಸಾಲುಗಳಲ್ಲಿಯೂ ಬಹುತೇಕರಿಗೆ ಆಪ್ತವಾಗುವಂಥಾ ಸಾಲುಗಳೊಂದಿಗೆ, ವಸಿಷ್ಠ ಸಿಂಹ ಅವರ ಬೇಸ್ ವಾಯ್ಸ್ ನೊಂದಿಗೆ ಮೂಡಿ ಬಂದಿರೋ ಈ ಹಾಡಿನಲ್ಲಿಯೇ ಕಥೆಯ ಝಲಕ್ಕುಗಳಿವೆ. ಅದು ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಚಿತ್ರವೆಂಬುದನ್ನೂ ಋಜುವಾತುಗೊಳಿಸುವಂತಿವೆ.

    ಈ ಲಿರಿಕಲ್ ವಿಡಿಯೋ ಸಾಂಗ್‍ನಲ್ಲಿಯೇ ಅದು ಮೂಡಿ ಬಂದಿರೋ ರೀತಿ ಮತ್ತು ಮೇಕಿಂಗ್ ಮಜಲುಗಳನ್ನೂ ತೆರೆದಿಡಲಾಗಿದೆ. ವಿಜಯಲಕ್ಷ್ಮಿ ಮುರುಗೇಶ್ ನಾಯ್ಡು ಅವರ ಆಶೀರ್ವಾದದೊಂದಿಗೆ, ಬಿ.ಟಿ ಮಂಜುನಾಥ್ ಅರ್ಪಿಸುವ ಈ ಚಿತ್ರವನ್ನು ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಗುರು ದೇಶಪಾಂಡೆ ನಿರ್ದೇಶನದ ಯಾವುದೇ ಸಿನಿಮಾಗಳನ್ನು ನೋಡಿದರೂ ಅದರಲ್ಲಿ ಹಾಡುಗಳಿಗೆ ಕಥೆಯಷ್ಟೇ ಮಹತ್ವ ಕೊಟ್ಟು ರೂಪಿಸಿದ್ದಾರೆ. ಅವರು ನಿರ್ಮಾಣ ಮಾಡಿರುವ ಜಂಟಲ್ ಮನ್ ಕೂಡಾ ಅದಕ್ಕೆ ತಕ್ಕುದಾಗಿಯೇ ರೂಪುಗೊಳ್ಳುತ್ತಿದೆ.

    ಅಜನೀಶ್ ಲೋಕನಾಥ್ ಗುರು ದೇಶಪಾಂಡೆಯವರ ಇಂಗಿತದಂತೆಯೇ ಈ ಸಿನಿಮಾದ ಎಲ್ಲ ಹಾಡುಗಳಿಗೂ ಭಿನ್ನವಾದ ಸಂಗೀತದ ಪಟ್ಟುಗಳನ್ನು ಹಾಕಿದ್ದಾರಂತೆ. ಅಂದಹಾಗೆ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಈ ವರೆಗೆ ನಟಿಸಿರದಂಥ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅದು ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯ ಬೇಸಿನ ಗುಣಲಕ್ಷಣಗಳನ್ನು ಹೊಂದಿರುವ ಪಾತ್ರ. ಇದರ ಸುತ್ತಾ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಜಂಟಲ್ ಮನ್‍ನನ್ನು ರೂಪಿಸಲಾಗಿದೆ. ಇದರಲ್ಲಿ ಕ್ರೈಂ ಅಂಶಗಳೂ ಸೇರಿಕೊಂಡಿವೆಯಾ ಎಂಬ ಕುತೂಹಲ ಮೂಡಿಸುವಲ್ಲಿಯೂ ಇದೀಗ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋ ಯಶ ಕಂಡಿದೆ. ಈ ಚಿತ್ರ ಮುಂದಿನ ವರ್ಷದ ಆರಂಭದ ತಿಂಗಳುಗಳಲ್ಲಿಯೇ ಬಿಡುಗಡೆಯಾಗಲಿದೆ.

  • ಲಿರಿಕಲ್ ಹಾಡು ಕೇಳಿಸ್ತಾನಂತೆ ಜಂಟಲ್ ಮನ್!

    ಲಿರಿಕಲ್ ಹಾಡು ಕೇಳಿಸ್ತಾನಂತೆ ಜಂಟಲ್ ಮನ್!

    ಕನ್ನಡ ಚಿತ್ರರಂಗದ ಯಶಸ್ವೀ ನಿರ್ದೇಶಕರ ಸಾಲಿನಲ್ಲಿ ಬಹು ಹಿಂದಿನಿಂದಲೇ ಸ್ಥಾನ ಗಿಟ್ಟಿಸಿಕೊಂಡಿರುವವರು ಗುರು ದೇಶಪಾಂಡೆ. ರಾಜಾಹುಲಿಯಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟು ಆ ಯಶಸ್ಸಿನ ಹಂಗಾಮವನ್ನು ಇದುವರೆಗೂ ಅನೂಚಾನವಾಗಿ ಮುಂದುವರೆಸಿಕೊಂಡು ಬರುತ್ತಿರುವವರು ಗುರು ದೇಶಪಾಂಡೆ. ಅವರು ಇತ್ತೀಚಿನದಿನಗಳಲ್ಲಿ ಜಿ ಸಿನಿಮಾಸ್ ಎಂಬ ಬ್ಯಾನರ್ ಹುಟ್ಟುಹಾಕಿ ಅದರಡಿಯಲ್ಲಿ ಸಿನಿಮಾನಿರ್ಮಾಣಕ್ಕಿಳಿದಿರೋದು ಗೊತ್ತೇ ಇದೆ. ಈ ಬ್ಯಾನರಿನಲ್ಲಿಯೇ ಅವರು ನಿರ್ಮಾಣ ಮಾಡಿರುವ ಜಂಟಲ್ ಮನ್ ಚಿತ್ರವೀಗ ನಾನಾ ದಿಕ್ಕಿನಲ್ಲಿ ಚರ್ಚೆಗೀಡಾಗುತ್ತಿದೆ.

    ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣದ ಹಂತದಲ್ಲಿಯೇ ಜಂಟಲ್ ಮನ್ ಜೋರಾಗಿಯೇ ಸುದ್ದಿ ಮಾಡಿದೆ. ಇದೀಗ ಈ ಸಿನಿಮಾದ ಲಿರಿಕಲ್ ಸಾಂಗ್ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ಈ ಲಿರಿಕಲ್ ಸಾಂಗನ್ನು ಅನಾವರಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಆ ಕ್ಷಣಗಳೀಗ ಹತ್ತಿರಾಗುತ್ತಿವೆ. ಹಲವಾರು ವರ್ಷಗಳಿಂದ ಗುರು ದೇಶಪಾಂಡೆಯವರ ಗರಡಿಯಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಜಡೇಶ್ ಕುಮಾರ್ ಹಂಪಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಗುರು ದೇಶಪಾಂಡೆ, ಜಡೇಶ್ ಕುಮಾರ್ ಗೆ ಅವಕಾಶ ಕಲ್ಪಿಸಲು ಕಾರಣವಾಗಿರೋದು ಅವರು ಸಿದ್ಧಪಡಿಸಿಕೊಂಡಿದ್ದ ಅಪರೂಪದ ಕಥೆ. ಕನ್ನಡದ ಮಟ್ಟಿಗೆ ತೀರಾ ವಿಶೇಷವಾದ ಕಥೆ ಈ ಸಿನಿಮಾದಲ್ಲಿದೆ. ಈಗಾಗಲೇ ಥರ ಥರದ ಪಾತ್ರಗಳಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಅಂತೂ ಪ್ರೇಕ್ಷಕರೆಲ್ಲ ಅಚ್ಚರಿಗೊಳ್ಳುವಂಥಾ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರಂತೆ. ಪ್ರಜ್ವಲ್ ದೇವರಾಜ್ ಇಡೀ ಜಗತ್ತಿನಲ್ಲಿ ಕೆಲವೇ ಕೆಲವರನ್ನು ಬಾಧಿಸುವಂಥಾ ವಿಚಿತ್ರ ಕಾಯಿಲೆ ಪೀಡಿತ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಅದು ದಿನದ ಬಹುಣಾಗವನ್ನು ನಿದ್ರೆಯಲ್ಲಿಯೇ ಕಳೆದು ಉಳಿದ ಕೆಲವೇ ಕೆಲ ಗಂಟೆಗಳಲ್ಲಿ ಓರ್ವ ಯುವಕ ಏನೆಲ್ಲ ಮಾಡುತ್ತಾನೆ, ಅಲ್ಲೆದುರಾಗೋಸವಾಲುಗಳನ್ನು ಹೇಗೆಲ್ಲ ಎದುರಿಸುತ್ತಾನೆಂಬ ರೋಚಕ ಕಥೆ ಈ ಸಿನಿಮಾದಲ್ಲಿದೆ. ಈ ಹಿಂದೆ ಮೈಸೂರಿನಲ್ಲಿ ಡಂಪಿಂಗ್ ಯಾರ್ಡಿನ ಕಸದ ರಾಶಿಯಲ್ಲಿ ಮಲಗಿ ಚಿತ್ರೀಕರಣದಲ್ಲಿ ಭಾಗಿಯಾಗುವ ಮೂಲಕ ಪ್ರಜ್ವಲ್ ಸುದ್ದಿ ಮಾಡಿದ್ದರು. ಮುಂದಿನ ವರ್ಷಾರಂಭದಲ್ಲಿ ತೆರೆಗಾಣಲು ಸಜ್ಜಾಗಿರೋ ಜಂಟಲ್ ಮನ್ ಈಗ ಲಿರಿಕಲ್ ವಿಡಿಯೋ ಮೂಲಕ ಪ್ರೇಕ್ಷಕರನ್ನುಮುಖಾಮುಖಿಯಾಗಲು ತಯಾರಾಗಿದ್ದಾನೆ.