Tag: General Meeting

  • ಸಾಮಾನ್ಯ ಸಭೆಗಳಿಗೆ ಗೈರು – 6 ಮಂದಿ ಗ್ರಾಮಪಂಚಾಯತಿ ಸದಸ್ಯರು ಅನರ್ಹ

    ಸಾಮಾನ್ಯ ಸಭೆಗಳಿಗೆ ಗೈರು – 6 ಮಂದಿ ಗ್ರಾಮಪಂಚಾಯತಿ ಸದಸ್ಯರು ಅನರ್ಹ

    ಚಿಕ್ಕಬಳ್ಳಾಪುರ: ನಿರಂತರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಿಗೆ ಗೈರು ಹಾಜರಾದ ಹಿನ್ನಲೆ 6 ಜನ ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹಗೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾತನೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

    ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾರವರು ಈ ಆದೇಶ ಹೊರಡಿಸಿದ್ದಾರೆ. ಅಂದಹಾಗೆ ಸಾತನೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ಎ ಕೆ ಜಿಲಾನಿ, ಕೆ. ಬಚ್ಚಪ್ಪ, ಸೌಭಾಗ್ಯ, ಶ್ವೇತಾ ಎಂ ಹಾಗೂ ಮಾಜಿ ಪಂಚಾಯಿತಿ ಉಪಾಧ್ಯಕ್ಷೆ ಟಿ ಪ್ರಮೀಳಾ, ಹಾಗೂ ಹಾಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯ ಭಾರತಿ ಅನರ್ಹಗೊಂಡಿದ್ದಾರೆ.

    ಲಂಚ ಪಡೆದು ಲೋಕಾಯುಕ್ತ ಹಾಗೂ ಎಸಿಬಿಯಿಂದ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಎಂಬಾತನನ್ನ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳಲು ಈ ಆರು ಜನ ಅನರ್ಹಗೊಂಡ ಸದಸ್ಯರು ಮುಂದಾಗಿದ್ದರು ಎನ್ನಲಾಗಿದೆ. ಹೀಗಾಗಿ ತಮಗೆ ಸಹಾಯವಾಗುತ್ತಿದ್ದ ಬಿಲ್ ಕಲೆಕ್ಟರ್ ಮಂಜುನಾಥ್ ನನ್ನು ಕಳೆದ 2018 ರ ಸಾಮಾನ್ಯ ಸಭೆಯಲ್ಲಿ ಮರಳಿ ಪಂಚಾಯಿತಿಗೆ ಸೇರಿಸಿಕೊಳ್ಳುವಂತೆ ನಡವಳಿಕೆಯನ್ನು ಸಿದ್ಧಪಡಿಸಿದ್ದರು.

    ಲಂಚ ಪಡೆದು ಎಸಿಬಿ ಹಾಗೂ ಲೋಕಾಯುಕ್ತರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಮಂಜುನಾಥ್‍ನನ್ನ ತೆಗೆದುಕೊಳ್ಳಲು ನಡವಳಿಕೆ ಸಿದ್ಧಪಡಿಸಿದ್ದ 6 ಜನರ ಸದಸ್ಯರನ್ನ ಅನರ್ಹಗೊಳಿಸುವಂತೆ ಪಿಡಿಓ ರಮೇಶ್ ಶಿಫಾರಸ್ಸು ಮಾಡಿದ್ದರು. ಆದರೆ ಈ ಘಟನೆಯಾದ ನಂತರ ನಡೆದ ನಿರಂತರ ನಾಲ್ಕು ಸಭೆಗಳಿಗೆ ಈ 6 ಜನ ಪಂಚಾಯಿತಿ ಸದಸ್ಯರು ಗೈರಾಗಿದ್ದರು. ಈ ಬಗ್ಗೆಯೂ ಸರ್ಕಾರಕ್ಕೆ ಪಿಡಿಓ ಶಿಫಾರಸ್ಸು ಮಾಡಿದ್ದು, ಇದೀಗ ವಿಧಾನಸಭೆಯಲ್ಲಿ ಎಂಎಲ್‍ಎಗಳು ಅನರ್ಹವಾಗುವಂತೆ ಸದ್ಯ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸದಸ್ಯ ಸ್ಥಾನದಿಂದ ವಜಾಗೊಂಡು ಅನರ್ಹಗೊಂಡಿದ್ದಾರೆ.

    ಭ್ರಷ್ಟ ಮಂಜುನಾಥ್‍ಗೆ ಸಹಾಯ ಮಾಡಲು ಹೋಗಿ ತಮ್ಮ ಸದಸ್ಯತ್ವ ಸ್ಥಾನವನ್ನೇ ಈ ಸದಸ್ಯರು ಕಳೆದುಕೊಂಡಿದ್ದಾರೆ. ಸತತವಾಗಿ ಎರಡು ವರ್ಷಗಳ ಕಾಲ ಸಾಮಾನ್ಯ ಸಭೆಗಳಿಗೆ ಹಾಜರಾಗದೇ ಇದ್ದ ಕಾರಣ ಇದೇ ಸದಸ್ಯರಿಂದ ಅಭಿವೃದ್ಧಿ ಕೆಲಸಗಳಿಗೆ ಅನುಮೋದನೆ ದೊರಕುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಕೆಲಸಗಳು ಆಗದೆ ಪರದಾಡುವಂತಾಗಿತ್ತು. ಸದ್ಯ ನಿರಂತರ ಗೈರು ಹಿನ್ನಲೆ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ 1993 ರ 48 (4) ರ ಪ್ರಕಾರ ಉಪಾಧ್ಯಕ್ಷೆಯನ್ನ ಹಾಗೂ 1993 ಪ್ರಕರಣ 43 ಎ ಪ್ರಕಾರ ಸದಸ್ಯರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪಂಚಾಯಿತಿ ಸದಸ್ಯರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಬೆಳಗಾವಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯ ಸದಸ್ಯರು ಪುಂಡಾಟ ನಡೆಸಿದ್ದು, ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಒತ್ತಾಯ ಮಾಡಿದ್ದಾರೆ.

    ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಜಿ.ಪಂ ಸದಸ್ಯ ಜಯರಾಮ್ ದೇಸಾಯಿ ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಪಟ್ಟು ಹಿಡಿದರು. ಅಲ್ಲದೇ ಅಧಿಕಾರಿಗಳು ನಮ್ಮ ಮಾತು ಕೇಳದೇ ಭಾಷಾವಾದ ಮಾಡುತ್ತಿದ್ದಾರೆ. ನಮಗೆ ಕನ್ನಡದಲ್ಲಿ ಕೊಟ್ಟ ದಾಖಲೆಗಳು ತಿಳಿಯುತ್ತಿಲ್ಲ. ಅದ್ದರಿಂದ ಕೂಡಲೇ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲು ಒತ್ತಾಯ ಮಾಡಿದರು. ಆದರೆ ಅವರ ಇದನ್ನು ನಿರಾಕರಿಸಿದ ಅಧ್ಯಕ್ಷರು ಮರಾಠಿಯಲ್ಲಿ ದಾಖಲೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಏಕವಚನ ಪ್ರಯೋಗ:
    ಈ ವೇಳೆ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೆ ಏಕವಚನದಲ್ಲಿ ಮಾತನಾಡಿ ಬಾಯಿಮುಚ್ಚಿ ಎಂದು ಮರಾಠಿ ಸದಸ್ಯೆ ಸರಸ್ವತಿ ಪಾಟೀಲ್ ಉದ್ಧಟತನ ಮೆರೆದರು. ತಮ್ಮ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಗ್ರಾಮಕ್ಕೆ ಚಿರತೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ ಸರಸ್ವತಿ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಅವರಿಗೆ ಏಕವಚನದಲ್ಲಿ ಮಾತನಾಡಿ ಸರಸ್ವತಿ ಉದ್ಧಟನ ಮೆರೆದರು.

    ಈ ಮಾತಿಗೆ ಆಕ್ರೋಶಗೊಂಡ ಕನ್ನಡ ಸದಸ್ಯರು ಸಭೆ ನಡುವೆಯೇ ಸರಸ್ವತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಉಪಾಧ್ಯಕ್ಷರನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಈ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಮಂಡ್ಯ: ಜನಸಾಮಾನ್ಯರ ಕಷ್ಟ ಬಗೆಹರಿಸಬೇಕಾದ ಚುನಾಯಿತ ಸದಸ್ಯರೇ ತಮಗಾಗುತ್ತಿರುವ ಕಷ್ಟ ಹೇಳಿಕೊಂಡು ಬಿಕ್ಕಳಿಸಿ ಅತ್ತ ಘಟನೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಮ್ಮ ಎಂಬವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎದುರು ಕಣ್ಣೀರು ಹಾಕಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಏನಿದು ಘಟನೆ: ನಾಗಮಂಗಲ ತಾಲ್ಲೂಕಿನ, ಶಿಕಾರಿಪುರ ಗ್ರಾಮದ ಹಾಸ್ಟೆಲ್ ವಾರ್ಡನ್‍ಗಳಾದ ಲೋಕೇಶ್ ಮತ್ತು ಪಾರ್ವತಿ ಎಂಬವರು ರೌಡಿಗಳ ಮೂಲಕ ನನಗೆ ಧಮ್ಕಿ ಹಾಕಿಸಿದ್ದಾರೆ ಎಂದು ಸುನಂದಮ್ಮ ಆರೋಪಿಸಿದ್ದಾರೆ. ಅನಗತ್ಯವಾಗಿ ತಮ್ಮಗೆ ಕಿರುಕುಳ ನೀಡುತ್ತಿರುವ ಕುರಿತು ಎರಡು ವರ್ಷದಿಂದ ದೂರು ಸಲ್ಲಿಸುತ್ತಿದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಂದಮ್ಮ ಆರೋಪಿಸಿದ್ದಾರೆ.

    ಸಭೆಯಲ್ಲಿ ಈ ಕುರಿತು ಎಲ್ಲರ ಎದುರು ವಿಷಯ ಪ್ರಸ್ತಾಪಿಸಿದ ಸುನಂದಮ್ಮ ಅವರು ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಸುನಂದಮ್ಮ ಪರ ಧ್ವನಿಗೂಡಿಸಿದ್ದು, ಕೊನೆಗೆ ಎಲ್ಲ ಸದಸ್ಯರು ಸೇರಿ ಅವರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ದಾವಣಗೆರೆ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ರೇಣುಕಾಚಾರ್ಯ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡರಾಗಿದ್ದು, ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಏರು ಧ್ವನಿಯಲ್ಲೇ ಉತ್ತರ ನೀಡಿದ್ದಾರೆ.

    ಇಂದು ನಗರದಲ್ಲಿ ನಡೆಸಿದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ರೇಣುಕಾಚಾರ್ಯ, ಜಿಲ್ಲಾ ಸಿಇಓ ಸಿ.ಅಶ್ವತಿ ಅವರು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಯಾವ ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಜಿಲ್ಲಾ ಪಂಚಾಯತ್ ನ ಯಾವುದೇ ಕೆಲಸ ಆಗಲಿ ಸಿಇಓ ಅನುಮತಿ ಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಫೈಲನ್ನು ನಿಗಧಿತ ಸಮಯದಲ್ಲಿ ಕಳುಹಿಸುವುದಿಲ್ಲ. ನಿಮ್ಮ ದರ್ಬಾರ್ ಏನು ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಶಾಸಕರ ಮಾತಿಗೆ ಸಭೆಯಲ್ಲೇ ತಿರುಗೇಟು ಕೊಟ್ಟ ಸಿಇಓ ಅಧಿಕಾರಿ ಅಶ್ವತಿ ಅವರು, ನಾನು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿದ್ದೇನೆ. ಯಾರಿಗೂ ಅಗೌರವ ತೋರುತ್ತಿಲ್ಲ. ನಾನು ಆ ರೀತಿ ನಡೆದುಕೊಂಡಿಲ್ಲ. ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಏರುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದ್ದಾರೆ.

    ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಅಧಿಕಾರಿಗಳ ವಿರುದ್ಧ ನಾನು ವಾಗ್ದಾಳಿ ನಡೆಸಿಲ್ಲ. ಆದರೆ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದ್ದು ಎಲ್ಲಾ ಚುನಾಯಿತ ಸದಸ್ಯರು ಈ ಕುರಿತು ದೂರು ನೀಡಿದ್ದಾರೆ. ಅದ್ದರಿಂದ ಅವರಿಗೆ ಈ ಕುರಿತು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಶಾಸಕರು ಸೇರಿದಂತೆ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.